Saturday, 21st September 2024

ಸುಡುಗಾಡು ರಾಜಕೀಯವನ್ನು ಬಿಟ್ಟು, ಮುಖ್ಯಮಂತ್ರಿ ಬೊಮ್ಮಾಯಿ ಜತೆ ಬೇರೆ ವಿಷಯ ಮಾತಾಡಿದಾಗ…

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಒಂದು ಅಭಿಮಾನದ ಸಂಗತಿಯೇನೆಂದರೆ, ಅವರ ಜತೆ ಯಾವ ವಿಷಯದ ಕುರಿತಾದರೂ ಚರ್ಚಿಸಬಹುದು. ಅವರು ಅದಕ್ಕೆ ನಮಗೆ ಗೊತ್ತಿಲ್ಲದ ಒಂದಷ್ಟು ವಿಚಾರಗಳನ್ನು ಸೇರಿಸಿ, ಪುಟ್ಟ ಅಚ್ಚರಿ ಮೂಡಿಸುತ್ತಾರೆ. ಕೆಲವು ರಾಜಕಾರಣಿಗಳ ಜತೆ ಹತ್ತು ನಿಮಿಷ ಸಹ ಕುಳಿತು ಗಹನವಾದ ವಿಷಯದ ಬಗ್ಗೆ ಚರ್ಚಿಸಲು ಸಾಧ್ಯವಾಗುವುದಿಲ್ಲ.

ಅದರಲ್ಲೂ ಸಾಹಿತ್ಯ, ಸಂಗೀತ, ಸಂಸ್ಕೃತಿ, ಕಲೆ, ರಂಗಭೂಮಿ, ಸಿನಿಮಾ, ಶಿಲ್ಪಕಲೆ, ಜಾನಪದ, ಇತಿಹಾಸ, ಪುಸ್ತಕಗಳ ಬಗ್ಗೆ ಚರ್ಚಿಸುವುದು ಸಾಧ್ಯವೇ ಇಲ್ಲ. ನಮ್ಮ ಮಧ್ಯೆ ಅಂಥ ಆಸಕ್ತಿ ಇರುವ ರಾಜಕಾರಣಿಗಳು ಬೆರಳೆಣಿಕೆಯಷ್ಟು. ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಮತ್ತು ಎಸ್.ಎಂ ಕೃಷ್ಣ ಜತೆ ಒಂದಷ್ಟು ಗಹನ ಚರ್ಚೆ ಮಾಡಬಹುದಿತ್ತು. ನಂತರ ಬಂದ ಸಿಎಂಗಳ ಜತೆ, ಲೋಕಾಭಿರಾಮ ಮಾತುಕತೆ ಮಾತ್ರ ಸಾಧ್ಯವಾಗಿತ್ತು. ಆದರೆ ಬೊಮ್ಮಾಯಿ ಜತೆ ಹಾಗಲ್ಲ, ಈ ಎಲ್ಲ ವಿಷಯಗಳ ಬಗ್ಗೆ ಆಸಕ್ತಿದಾಯಕ ಚರ್ಚೆ ಮಾಡಬಹುದು.

ನಾವು ಏನೇ ಹೇಳಿದರೂ ಅವರು ಅಷ್ಟೇ ಆಸಕ್ತಿಯಿಂದ ಆ ಚರ್ಚೆಗೆ ತಮ್ಮ ಯೋಗದಾನ ನೀಡುತ್ತಾರೆ. ಹೀಗಾಗಿ ಮಾತುಕತೆ ಮತ್ತಷ್ಟು ಕಾವು ಪಡೆಯುವುದು ಸಾಧ್ಯವಾಗುತ್ತದೆ. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಐದಾರು ಸಲ ಭೇಟಿ ಮಾಡಿದ್ದೆ. ದೈನಂದಿನ ರಾಜಕೀಯ ವಿದ್ಯಮಾನಗಳನ್ನು ಬಿಟ್ಟರೆ, ಒಂದು ಸಲವೂ ಅವರೊಂದಿಗೆ ಗಂಭೀರ ಚರ್ಚೆ ಮಾಡಲು ಸಾಧ್ಯವಾಗಿರಲಿಲ್ಲ.

ಒಮ್ಮೆಯಂತೂ ಅವರೊಂದಿಗೆ ಮಾತಾಡುವಾಗ, ಒಂದೆರಡು ಸಲ ಆಕಳಿಸಿದರು. ಅದನ್ನಾದರೂ ಸಹಿಸಿಕೊಳ್ಳ ಬಹುದು. ಅದಾಗಿ ಹತ್ತು ನಿಮಿಷಗಳ ಬಳಿಕ ತೂಕಡಿಸಲಾರಂಭಿಸಿದ್ದರು. ಅದು ಚರ್ಚಿಸುತ್ತಿರವ ವಿಷಯದ ಬಗ್ಗೆ ಅವರ ಅನಾಸಕ್ತಿಯೋ, ಬಂದ ಅತಿಥಿಗಳ ಬಾಯಿ ಮುಚ್ಚಿಸುವ ತಂತ್ರವೋ, ಜನರನ್ನು ಬೇಗ ಸಾಗ ಹಾಕುವ ಉಪಾಯವೋ ತಿಳಿಯಲಿಲ್ಲ. ಒಂದು ಸಲ ಹಾಗಾಗಿದ್ದರೆ, ನನಗೊಬ್ಬನಿಗೇ ಆ ಅನುಭವ ಆಗಿದ್ದರೆ ಪರವಾಗಿರಲಿಲ್ಲ. ಇದೇ ಅನುಭವವನ್ನು ನನಗೆ ಅನೇಕರು ಹೇಳಿದ್ದಾರೆ. ರಾಜಕೀಯದ ಹೊರತಾಗಿ ಬೇರೆ ವಿಷಯಗಳನ್ನು ತೆಗೆದರೆ, ಹಲವು ರಾಜಕಾರಣಿಗಳ ವಿಷಯದ ಕೊರತೆ ಬಹಿರಂಗವಾಗುತ್ತದೆ. ಅಂಥವರ ಜತೆ ಯಾವ ಗಹನ ವಿಷಯವನ್ನೂ ಚರ್ಚಿಸಲು ಸಾಧ್ಯವಾಗುವುದಿಲ್ಲ. ಕರ್ನಾಟಕದಲ್ಲಿ ಹೆಚ್ಚಿನವರು ಈ ವರ್ಗಕ್ಕೆ ಸೇರಿದವರೇ ಇದ್ದಾರೆ.

‘ನಾನು ಕಳೆದ ಹತ್ತು ವರ್ಷಗಳಲ್ಲಿ ಓದಿದ, ನನ್ನ ಮೇಲೆ ಪ್ರಭಾವ ಬೀರಿದ ಪುಸ್ತಕ’ ವಿಷಯದ ಬಗ್ಗೆ ಮಾತಾಡಲು ಹೇಳಿ. ಬಹಳ ಜನರ ಬಂಡವಾಳ  ಬಯಲಾ ಗುತ್ತದೆ. ರಾಜಕಾರಣಿಗಳಾದವರು ತಮಗೆ ಕಲೆ, ಸಂಸ್ಕೃತಿ, ಇತಿಹಾಸವನ್ನು ತಿಳಿಯುವ, ಆಸಕ್ತಿ ಬೆಳೆಸಿ ಕೊಳ್ಳುವ ಅಗತ್ಯವಿಲ್ಲ ಎಂದೇ ಭಾವಿಸಿದಂತಿದೆ. ಆ ರೀತಿಯ ಆಸಕ್ತಿಯಿದ್ದವರು ಸಹ ರಾಜಕಾರಣಕ್ಕೆ ಬಂದ ನಂತರ ಅದನ್ನು ಬಿಟ್ಟುಬಿಟ್ಟಿದ್ದಾರೆ. ದುಬೈ ಎಂಬ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುವ ಅದ್ಭುತ ಮಾಯಾನಗರಿಯನ್ನು ಕಟ್ಟಿದ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೋಮ್ ಅಂತರಂಗದಲ್ಲಿ ಒಬ್ಬ ಕವಿ. ಅವರು ಅಧಿಕಾರದಲ್ಲಿರುವಾಗಲೇ ಒಂದು ಕವನ ಸಂಕಲನವನ್ನು ಹೊರ ತಂದಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಬಗ್ಗೆ ಅರಿವಿರುವ ನಾಯಕ ಮಾತ್ರ ಆರೋಗ್ಯವಂತ ಸಮಾಜ, ದೇಶವನ್ನು ಕಟ್ಟಬಲ್ಲ. ಅಷ್ಟಕ್ಕೂ ನಗರವೆಂದರೆ ಬರೀ ಸೇತುವೆ, ಅಗಲವಾದ ರಸ್ತೆ, ರೇಸ್ ಕೋರ್ಸ, ಮಾಲ, ಕ್ಲಬ್ ಗಳಲ್ಲ.

ಕಳೆದ ಅರ್ಧ ಶತಮಾನದ ಅವಧಿಯಲ್ಲಿ ನಮ್ಮ ರಾಜಧಾನಿಯಲ್ಲಿ, ನಾವೆ ಹೆಮ್ಮೆಪಡುವಂಥ ಒಂದು ಗ್ರಂಥಾಲಯ, ಆರ್ಟ್ ಗ್ಯಾಲರಿ, ಒಂದು ಮ್ಯೂಸಿಯಂನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಅದಕ್ಕಿಂತ ಬೇಸರದ ಸಂಗತಿಯೆಂದರೆ, ಅಂಥವುಗಳೆ ನಮ್ಮ ನಗರಜೀವನಕ್ಕೆ, ಸಮಾಜ ಜೀವನಕ್ಕೆ ಅತ್ಯವಶ್ಯಕ ಎಂದು ಅಧಿ ಕಾರಕ್ಕೆ ಬಂದ ಯಾರಿಗೂ ಅನಿಸಿಲ್ಲ. ಇಂಥವರ ಜತೆ ಏನು ಚರ್ಚೆ? ಕೆಲವು ಸಲ ರಾಜಕಾರಣಿಗಳ ಜತೆ ಕುಳಿತಾಗ, ಬೇಕೆಂದೇ ತೂಕಡಿಸಬೇಕೆಂದು ಅನಿಸಿದ್ದಿದೆ. ನಾನ್ಸೆನ್ ಮಾತಾಡುವುದಕ್ಕಿಂತ ಅದೇ ವಾಸಿ ಎಂದೂ ಅನಿಸಿದೆ.

ಇತ್ತೀಚೆಗೆ ನಾನು ಬೊಮ್ಮಾಯಿಯವರನ್ನು ಭೇಟಿ ಮಾಡಿದ್ದೆ. ಅವರ ಟೇಬಲ್ ಮೇಲೆ ಇನ್ನೂರಕ್ಕೂ ಹೆಚ್ಚು ಪುಸ್ತಕಗಳಿದ್ದವು. ಎರಡು ದಿನಗಳಲ್ಲಿ ಅವರನ್ನು ಭೇಟಿ ಮಾಡಲು ಬಂದವರು ನೀಡಿದ ಪುಸ್ತಕ ಎಂದು ಅವರ ಸಹಾಯಕರು ಹೇಳಿದರು. ಮೊದಲ ಬಾರಿಗೆ, ಮುಖ್ಯಮಂತ್ರಿಯೊಬ್ಬರ ಟೇಬಲ್ ಮೇಲೆ ಅಷ್ಟೊಂದು ಹೊಸ ಪುಸ್ತಕಗಳನ್ನು ನೋಡಿದ್ದು ಅದೇ ಮೊದಲು. ‘ನನಗೆ ಹೂಗುಚ್ಚ-ಹಾರ ಬೇಡ. ಅಷ್ಟಕ್ಕೂ ಏನಾದರೂ ನೀಡಬೇಕು ಎಂದೆನಿಸಿದರೆ ಪುಸ್ತಕಗಳನ್ನು ಕೊಡಿ’ ಎಂದು ಹೇಳಿದವರಲ್ಲಿ ಬೊಮ್ಮಾಯಿಯವರೇ ಮೊದಲಿಗರಿರಬಹುದು.

ಇದನ್ನೇ ಅವರು ಸರಕಾರದ ಆದೇಶವನ್ನಾಗಿಯೂ ಮಾಡಿದರು. ಅವರು ಸಹ ಗಣ್ಯರನ್ನು ಎದುರುಗೊಳ್ಳುವಾಗ, ಹಾರ-ಹೂಗೊಂಚಲನ್ನು ನೀಡುವ ಬದಲು ಪುಸ್ತಕವನ್ನೇ ನೀಡುತ್ತಾರೆ. ಯಾವ ಗಣ್ಯರೂ ಹಾರ-ಹೂಗೊಂಚಲು ತೆಗೆದುಕೊಂಡು ಹೋಗುವುದಿಲ್ಲ. ಅಲ್ಲೇ ಬಿಸಾಡಿ ಹೋಗುತ್ತಾರೆ. ಆದರೆ ಪುಸ್ತಕ ಎತ್ತಿಕೊಂಡು ಹೋಗುತ್ತಾರೆ. ಇದು ನಮ್ಮ ನೆಲದ ಸಂಸ್ಕೃತಿಯನ್ನು ತೋರಿಸುತ್ತದೆ. ಬೊಮ್ಮಾಯಿ ನಿವಾಸದಲ್ಲಿ ಅವರ ಆಗಮನದ ಬಳಿಕ, ಅವರ ಟೇಬಲ್ ಮೇಲಿದ್ದ ಪುಸ್ತಕ ಗಳನ್ನು ನೋಡಿ, ಅದರ ಕುರಿತೇ ಮುಂದಿನ ಕಾಲು ಗಂಟೆ ನಮ್ಮಿಬ್ಬರ ಮಧ್ಯೆ ಮಾತುಕತೆ ನಡೆಯಿತು. ಅವರು ಆ ಪುಸ್ತಕ, ಲೇಖಕರ ಬಗ್ಗೆ ಅನೇಕ ವಿಷಯಗಳನ್ನು ಹೇಳಿದರು. ರಾಮಕೃಷ್ಣ ಹೆಗಡೆ, ಪಟೇಲರ ನಂತರ ಮುಖ್ಯಮಂತ್ರಿಯೊಬ್ಬರ ಜತೆ ಪುಸ್ತಕಗಳ ಬಗ್ಗೆ ಮಾತಾಡಿದ ಅನುಭವವೇ ಆಗದಿದ್ದ ನನಗೆ ಇದು ವಿಶೇಷವೆನಿಸಿತು.

ನಾನು ಬರೆದ ಪುಸ್ತಕವೊಂದನ್ನು ಕೊಟ್ಟಾಗ, ಬೊಮ್ಮಾಯಿ ಆಸಕ್ತಿಯಿಂದ ಮುಖಪುಟ, ಬೆನ್ನುಡಿಯನ್ನು ಓದಿ, ಕೆಲವು ಪುಟಗಳನ್ನೂ ತಿರುವಿ ಹಾಕಿದರು. ರಾಜಕಾರಣಿಗಳಿಗೆ ಪುಸ್ತಕ ಕೊಟ್ಟಾಗ, ಅವರು ಹೂಗುಚ್ಚ ನೀಡಿದಾಗ ಅದನ್ನು ಪಕ್ಕಕ್ಕಿಡುವಂತೆ, ಪುಸ್ತಕವನ್ನು ಸಹ ತೆರೆಯದೇ ನಿರಾಸಕ್ತಿಯಿಂದ, ನಿರ್ಭಾವುಕರಾಗಿ ಪಕ್ಕಕ್ಕೆ ಎಸೆಯು ವುದನ್ನು ನೋಡಿದ್ದೇನೆ. ಆದರೆ ಬೊಮ್ಮಾಯಿ ಆ ಪುಸ್ತಕದ ಕೆಲಪುಟಗಳ ಮೇಲೆ ಕಣ್ಣು ಹಾಯಿಸಿ, ‘ಇದನ್ನು ಸಂಪೂರ್ಣ ಓದಿ ನನ್ನ ಅಭಿಪ್ರಾಯ ತಿಳಿಸುತ್ತೇನೆ’ ಅಂದರು. ಮುಖ್ಯಮಂತ್ರಿಗಳಾದವರು ಇಷ್ಟಾದರೂ ಸಂವೇದನಾಶೀಲರಾಗಿರಬೇಕು. ಪುಸ್ತಕಗಳನ್ನು ಎಡಗೈಯಲ್ಲಿ ಮುಟ್ಟದವರೆ ಅಧಿಕಾರ ನಡೆಸಿ ಹೋಗಿದ್ದನ್ನು ನೆನಪಿಸಿಕೊಂಡಾಗ ಇಂಥ ನಡೆಗಳು ಭಿನ್ನವಾಗಿ ಕಾಣಿಸಿಕೊಳ್ಳುತ್ತವೆ.

ಸಾಮಾನ್ಯವಾಗಿ ಪತ್ರಕರ್ತರು ಅಥವಾ ಸಂಪಾದಕರು, ಮುಖ್ಯಮಂತ್ರಿಗಳನ್ನು ಭೇಟಿಯಾದಾಗ, ಅವರಿಗೇನೂ ಗೊತ್ತಿಲ್ಲ ಎನ್ನುವಂತೆ ಅವರಿಗೆ ಸಲಹೆ, ಉಪದೇಶಗಳನ್ನು ಕೊಟ್ಟು ಬರುತ್ತಾರೆ. ಅವರೂ ಆ ಮಾತುಗಳನ್ನೆ ಕೇಳಿದ್ದೇವೆಂದು ನಟಿಸು ತ್ತಾರೆ. ಆದರೆ ಅಂದು, ಫಾರ್ ಎ ಚೇಂಜ್, ಬೊಮ್ಮಾಯಿ ಅವರು, ಪತ್ರಿಕೆಯನ್ನು ಹೇಗೆ ತರಬೇಕು, ‘ವಿಶ್ವವಾಣಿ’ಯಲ್ಲಿ ಏನೆಲ್ಲ ಬದಲಾವಣೆ ಮಾಡಬಹುದು, ಈಗಿನ ಓದುಗರ ನಿರೀಕ್ಷೆಗಳೇನು, ಪತ್ರಿಕೆಯಲ್ಲಿ ಯಾವ ಅಕ್ಷರ (ಫ್ರಂಟ್) ಬಳಸಬೇಕು… ಎಂಬ ಬಗ್ಗೆ ಸುಮಾರು ಇಪ್ಪತ್ತು ನಿಮಿಷ ಬೌದ್ಧಿಕ್ ಕೊಟ್ಟರು.

ನಾನು ಅತೀವ ಕುತೂಹಲದಿಂದ, ಮೈಯೆಲ್ಲ ಕಿವಿಯಾಗಿ ಕೇಳಿಸಿಕೊಂಡೆ. ಅವರು ನೀಡಿದ ಸಲಹೆಗಳಲ್ಲಿ ಯಾವವೂ ತೆಗೆದು ಹಾಕುವಂತಿರಲಿಲ್ಲ. ಎಲ್ಲವೂ ಅನುಷ್ಠಾನಯೋಗ್ಯವಾಗಿದ್ದವು. ಒಬ್ಬ ಗಂಭೀರ ಓದುಗ ಮತ್ತು ಪತ್ರಿಕೋದ್ಯಮಿಯ ಮಿಶ್ರರೂಪ ತಾಳಿ ಅವರು ಮಾತಾಡಿದರೇನೋ ಎಂದು ಅನಿಸಿತು. ಸುದ್ದಿಮನೆಯ ಮಜಕೂರುಗಳ ಬಗ್ಗೆ ಇಷ್ಟೆ ಸಂಗತಿಗಳನ್ನು ತಿಳಿದುಕೊಂಡಿದ್ದಾರಲ್ಲ ಎಂದು ನನಗೆ ಪುಟ್ಟ ಅಚ್ಚರಿಯೂ, ಅವರ ಬಗ್ಗೆ ಅಭಿಮಮಾನವೂ ಆಯಿತು.
ಬಹಳ ಕಾಲದ ನಂತರ ಮುಖ್ಯಮಂತ್ರಿ ಜತೆ ಸುಡುಗಾಡು ರಾಜಕೀಯ ಬಿಟ್ಟು, ಬೇರೆ ಆಸಕ್ತಿದಾಯಕ, ಗಂಭೀರ ವಿಷಯಗಳ ಬಗ್ಗೆ ಮಾತಾಡಿದ ಸಂತಸ ನನ್ನದಾಗಿತ್ತು!

ಒಬ್ಬ ಅಪರೂಪದ ಡಿಪ್ಲೊಮ್ಯಾಟ್

ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ, ನಾನು ಕನಿಷ್ಠ ಹತ್ತು ದೇಶಗಳಿಗೆ, ಬೇರೆ ಬೇರೆ ಸಂದರ್ಭಗಳಲ್ಲಿ, ಅವರ ಜತೆ ವಿದೇಶ ಪ್ರವಾಸ ಮಾಡಿರ ಬಹುದು. ಆಗ ವಿದೇಶಾಂಗ ವ್ಯವಹಾರಗಳ ಅಧಿಕೃತ ವಕ್ತಾರರಾದ ಸಯ್ಯದ್ ಅಕ್ಬರುದ್ದೀನ್ ಸಹ ಜತೆಗಿರುತ್ತಿದ್ದರು. ಪ್ರಧಾನಿಯವರ  ಪತ್ರಿಕಾಗೋಷ್ಠಿಗಿಂತ ಮೊದಲು ಅಕ್ಬರುದ್ದೀನ್ ಮಾತಾಡುತ್ತಿದ್ದರು. ಅಲ್ಲದೇ ಪ್ರತಿದಿನ ಪತ್ರಕರ್ತರನ್ನುದ್ದೇಶಿಸಿ, media brief ಮಾಡುತ್ತಿದ್ದರು. ಮೊದಲ ಭೇಟಿಯ ನನಗೆ ಅಕ್ಬರು ದ್ದೀನ್ ಆಪ್ತರಾದರು.

ಸಾಮಾನ್ಯವಾಗಿ ವಿದೇಶಾಂಗ ವ್ಯವಹಾರಗಳ ವಕ್ತಾರರು ಇಂಗ್ಲಿಷ್ ಪತ್ರಕರ್ತರಿಗೆ ಅಗ್ರತಾಂಬೂಲ ನೀಡುತ್ತಾರೆ. ಆದರೆ ಅಕ್ಬರುದ್ದೀನ್ ಹಾಗಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಅಕ್ಬರುದ್ದೀನ್ ಮೀಡಿಯಾ ಬ್ರೀಫಿಂಗ್ ಇದ್ದರೆ ಯಾರೂ ತಪ್ಪಿಸಿ ಕೊಳ್ಳುತ್ತಿರಲಿಲ್ಲ. ಪತ್ರಕರ್ತರಿಗೆ ಏನು ಬೇಕು ಎಂಬುದು ಅವರಿಗೆ
ಸ್ಟಷ್ಟವಾಗಿ ಗೊತ್ತಿತ್ತು. ಡಿಪ್ಲೋಮಸಿ ಅವರಿಗೆ ಚೆನ್ನಾಗಿ ಕರಗತವಾಗಿತ್ತು. ಯಾವುದೇ ಕ್ಲಿಷ್ಟ, ಜಟಿಲ ಅಥವಾ ವಿವಾದಾತ್ಮಕ ವಿಷಯಗಳಿರಲಿ, ಅವರು ಮುಳ್ಳಿನ ಮೇಲೆ ಬಿದ್ದ ಸೆರಗನ್ನು ನಾಜೂಕಾಗಿ ತೆಗೆಯುವಂತೆ, ಬಹಳ ಚೆಂದವಾಗಿ ನಿಭಾಯಿಸುತ್ತಿದ್ದರು. ಅವರು ಎಲ್ಲವನ್ನೂ ಹೇಳಿzರೆ ಎಂದು ಆ ಕ್ಷಣದಲ್ಲಿ ಅನಿಸುತ್ತಿತ್ತು. ಆದರೆ ಬರೆಯಲು ಕುಳಿತಾಗ, ಏನೂ ದಕ್ಕುತ್ತಿರಲಿಲ್ಲ. ಆ ರೀತಿ ಮಾತಾಡುತ್ತಿದ್ದರು. ಅವರ ಮಾತುಗಳನ್ನು ಕೇಳುವುದೇ ಕರ್ಣಾನಂದವಾಗಿತ್ತು.

ಅವರು ಬಳಸುತ್ತಿದ್ದ ಪದ, ಭಾಷೆ, ವಾಕ್ಯ ರಚನೆಯಿಂದ ಅವರೊಬ್ಬ ಅಸಾಧಾರಣ ಡಿಪ್ಲೊಮ್ಯಾಟ್ ಎಂದು ಹೇಳಬಹುದಿತ್ತು. ಅಕ್ಬರುದ್ದೀನ್ ಮಾತಾಡಿದ ನಂತರ ಪತ್ರಕರ್ತರಿಗೆ ಕೇಳಲು ಏನೂ ಇರುತ್ತಿರಲಿಲ್ಲ. ಅಷ್ಟು ಸೊಗಸಾಗಿ ಅವರು ಪರಿಸ್ಥಿತಿ ನಿಭಾಯಿಸುತ್ತಿದ್ದರು. ಹಾಗಂತ ಅವರು ಏನೋ ಮುಚ್ಚಿಡುತ್ತಿದ್ದಾರೆ ಎಂದೆ ನಿಸುತ್ತಿರಲಿಲ್ಲ. ಒಬ್ಬ ರಾಯಭಾರಿ ಹೇಗಿರಬೇಕು ಎಂಬುದನ್ನು ಅವರು ಹತ್ತು-ಹಲವು ಸಂದರ್ಭ ಗಳಲ್ಲಿ ತೋರಿಸಿಕೊಟ್ಟಿದ್ದಾರೆ.

ವಿದೇಶಾಂಗ ವ್ಯವಹಾರಗಳ ಖಾತೆ ಅಽಕೃತ ವಕ್ತಾರರಾಗುವುದು ಸಣ್ಣ ಕೆಲಸವಲ್ಲ. ಅವರು ಏನೇ ಹೇಳಿದರೂ, ಅದು ಸುದ್ದಿಯೇ. ಭಾರತದ ಪತ್ರಕರ್ತರಿಗೆ ಅವರು ವಿದೇಶಾಂಗ ಖಾತೆ ಸಚಿವರ ಮುಖವಾಣಿ. ಅವರ ಮಾತು ಕೇಂದ್ರದ ಅಭಿಪ್ರಾಯ ಅಥವಾ ನಿಲುವು. ಅಂತಾರಾಷ್ಟ್ರೀಯ ಪತ್ರಕರ್ತರಿಗೆ ಅವರ ಮಾತು ಭಾರತದ ಅಭಿಪ್ರಾಯ ಅಥವಾ ನಿಲುವು. ಹೀಗಾಗಿ ಅವರ ಮಾತಿಗೆ ಎಲ್ಲಿಲ್ಲದ ಮಹತ್ವ. ವಕ್ತಾರರು ಸ್ವಲ್ಪ ಎಡವಟ್ಟು ಮಾಡಿದರೂ ಅದು ಅಂತಾರಾಷ್ಟ್ರೀಯ ಸುದ್ದಿ ಯಾಗುತ್ತದೆ. ಹೀಗಾಗಿ ಯಾವ ಕಾರಣಕ್ಕೂ ವಿದೇಶಾಂಗ ವ್ಯವಹಾರಗಳ ಅಽಕೃತ ವಕ್ತಾರರು ತಪ್ಪು ಮಾಡಲೇ ಕೂಡದು. ಅಪ್ಪಿತಪ್ಪಿಯೂ, ಬಾಯಿತಪ್ಪಿಯೂ (slip of tongue) ಒಂದು ಪದ ನುಡಿಯುವಂತಿಲ್ಲ.

ನಂತರ ಕ್ಷಮೆ ಯಾಚಿಸಿದರೂ, ಅದು ಸುದ್ದಿಯೇ. ಹೀಗಾಗಿ ವಿದೇಶಾಂಗ ಖಾತೆ ವಕ್ತಾರರ ಪಾತ್ರ, ಹೊಣೆ ಅತ್ಯಂತ ಸೂಕ್ಷ್ಮ ಮತ್ತು ಮಹತ್ವದ್ದು. ಡಾ.ಸಿಂಗ್ ನಂತರ ಪ್ರಧಾನಿಯಾದ ಮೋದಿಯವರು ಅಕ್ಬರುದ್ದೀನ್ ಅವರನ್ನು ಆ ಸ್ಥಾನದಲ್ಲಿ ಮುಂದುವರಿಸಲಿಕ್ಕಿಲ್ಲ ಎಂದೇ ಅನೇಕರು ಅಂದುಕೊಂಡಿದ್ದರು. ಆದರೆ ಅಕ್ಬರುದ್ದೀನ್ ವಿಷಯದಲ್ಲಿ ಅದು ಸುಳ್ಳಾಯಿತು. ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವರಾದ ಬಳಿಕ, ಅಕ್ಬರುದ್ದೀನ್ ಅದೇ ಸ್ಥಾನದಲ್ಲಿ ಮುಂದುವರಿದರು.
ಸಚಿವೆ ಮತ್ತು ವಕ್ತಾರರ ನಡುವೆ ಉತ್ತಮ ಕಾರ್ಯಸಂಬಂಧವಿತ್ತು. ಇತ್ತೀಚೆಗೆ ಅಕ್ಬರುದ್ದೀನ್ ಒಂದು ಪುಸ್ತಕ ಬರೆದಿದ್ದಾರೆ. ಅದರ ಶೀರ್ಷಿಕೆ -India Vs UK : The Story of an Unprecedented Diplomatic Win. ಅದರ ಬೆನ್ನುಡಿಯಲ್ಲಿ ಅಕ್ಬರುದ್ದೀನ್ ಹೀಗೆ ಬರೆಯುತ್ತಾರೆ – ಬ್ರಿಟನ್‌ನ ಅಂದಿನ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಬೋರಿಸ್ ಜಾನ್ಸನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ನೇರವಾಗಿ ಮಾತಾಡಿದರೆ ಏನಾಗಬಹುದು ಎಂಬ ನನ್ನ ಆ ಕ್ಷಣದ ಉದ್ವೇಗವನ್ನು ಶಮನಗೊಳಿಸಲು, ಸುಷ್ಮಾ ಅವರಿಗೆ ಫೋನ್ ಮಾಡಲು ನಿರ್ಧರಿಸಿದೆ.

ಆಗಲೇ ಮಧ್ಯ ರಾತ್ರಿ ದಾಟಿತ್ತು. ಈಗ ಫೋನ್ ಮಾಡುವುದು ಎಷ್ಟು ಸರಿ ಎಂದು ಅನಿಸಿದರೂ, ಅವರ ಜತೆಗೆ ಕೆಲಸ ಮಾಡಿದ ಅನುಭವವಿದ್ದುದರಿಂದ, ಅರ್ಥ ಮಾಡಿಕೊಳ್ಳುತ್ತಾರೆ ಎನಿಸಿತು. ‘ಮೇಡಂ, ದಯವಿಟ್ಟು ಫೋನನ್ನು ಎತ್ತಿಕೊಳ್ಳಬೇಡಿ’ ಎಂದೇ ನಾನು ಮಾತಿಗಾರಂಭಿಸಿದೆ. ಮೆಲ್ಲಗೆ ನಕ್ಕ ಅವರು, ‘ನೀವು ಎಷ್ಟೇ ಹೊತ್ತಿಗೆ ಫೋನ್ ಮಾಡಿದರೂ, ನಾನು ನಿಮ್ಮ ಮಾತುಗಳನ್ನು ಕೇಳಿಸಿಕೊಂಡಿದ್ದೇನಲ್ಲ’ ಎಂದು ಉತ್ತರಿಸಿದರು. ಇದು ಅಕ್ಬರುದ್ದೀನ್ ತಮ್ಮ ಸಚಿವರ ಜತೆಗೆ ಎಂಥ ಕಾರ್ಯ ಸಂಬಂಧ (working relationship) ಹೊಂದಿದ್ದರು ಎಂಬುದಕ್ಕೆ ನಿದರ್ಶನ.

1985 ನೇ ಬ್ಯಾಚಿನ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿಯಾದ ಅಕ್ಬರುದ್ದೀನ್, 2016ರಿಂದ ನಾಲ್ಕು ವರ್ಷ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿದ್ದರು. ಈ ಅವಧಿಯಲ್ಲಿ ಅಂತಾರಾಷ್ಟ್ರೀಯ ಸ್ತರದಲ್ಲಿ ಅವರು ಭಾರತದ ಹಿತಾಸಕ್ತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ
ಎತ್ತಿಹಿಡಿಯುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ರಾಯಭಾರ ವಲಯದಲ್ಲಿ multilateral diplomacy ಎಂಬ ಪದವನ್ನು ಆಗಾಗ ಬಳಸುವುದು ಕೇಳಿರಬಹುದು. ಅಂದರೆ ಏಕಕಾಲದಲ್ಲಿ ಹಲವು ದೇಶಗಳೊಂದಿಗೆ ಸ್ವದೇಶದ ಹಿತಾಸಕ್ತಿ ಕಾಪಾಡಲು ಬಹುಶ್ರುತ ವೇದಿಕೆಗಳಲ್ಲಿ ಕಾರ‍್ಯನಿರ್ವಹಿಸುವುದು.

ಅಕ್ಬರುದ್ದೀನ್ ಅವರಿಗೆ ಈ ರೀತಿ ಬಹುಪಕ್ಷೀಯ ರಾಯಭಾರತ್ವ ಕರಗತವಾಗಿತ್ತು. ಯಾವುದೇ ಅಂತಾರಾಷ್ಟ್ರೀಯ ಬಿಕ್ಕಟ್ಟಿಗೆ, ಭಾರತದ ಪರ ವಾದವನ್ನು, ಯಾವುದೇ ಅಂತಾರಾಷ್ಟ್ರೀಯ ವೇದಿಕೆಯದರೂ, ಪರಿಣಾಮಕಾರಿಯಾಗಿ ಮಂಡಿಸುವ ‘ರಾಯಭಾರಿ ನಾಯಕತ್ವ’ವನ್ನು ಪ್ರದರ್ಶಿಸ ಬಲ್ಲವರಾಗಿದ್ದರು.
India Vs UK : The Story of an Unprecedented Diplomatic Win ಕೃತಿಯನ್ನು ಓದಿದರೆ, ಅಕ್ಬರುದ್ದೀನ್ ಅವರ ಡಿಪ್ಲೊಮಸಿಯ ಆಳ-ಅಗಲ ಅರ್ಥವಾಗುತ್ತದೆ. ಒಂದು ಅಂತಾಷ್ಟ್ರೀಯ ಬಿಕ್ಕಟ್ಟಿನ ಹಿಂದೆ, ವಿದೇಶಾಂಗ ಸೇವೆಯ ಅಧಿಕಾರಿಗಳು ಏನೆಲ್ಲ ಕಸರತ್ತು ಮಾಡುತ್ತಾರೆ, ಅವರ ಪಾತ್ರ ಎಷ್ಟೆಲ್ಲ ಮಹತ್ವದ್ದು ಎಂಬುದನ್ನು ಅವರು ಈ ಕೃತಿಯಲ್ಲಿ ಹೇಳಿದ್ದಾರೆ. ನಿವೃತ್ತಿ ನಂತರ ತಮ್ಮ ಪತ್ನಿ ಪದ್ಮಾ ಜತೆಗೆ ಹೈದರಾಬಾದಿನಲ್ಲಿ ನೆಲೆಸಿರುವ ಅಕ್ಬರುದ್ದೀನ್, ಅಲ್ಲಿನ ‘ಕೌಟಿಲ್ಯ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ’ಯಲ್ಲಿ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.