Sunday, 22nd September 2024

ಇದು ನಮ್ಮವರಲ್ಲದ ನಮ್ಮವರ ಕಥೆ – 3

ಶಿಶಿರ ಕಾಲ

ಶಿಶಿರ‍್ ಹೆಗಡೆ, ಚಿಕಾಗೋ

shishirh@gmail.com

ಹಿಂದಿನ ವಾರ ಭಾರತೀಯ ಕೂಲಿಗಳ ಸ್ಥಿತಿಯ ಬಗ್ಗೆ ವಿವರಿಸಿದ್ದೆ. ಅದೆಷ್ಟು ಅಮಾನವೀಯ ಎನ್ನುವುದನ್ನೆಲ್ಲ ವಿವರಿಸಿ ಬರೆದಿದ್ದೆ. ಬ್ರಿಟಿಷ್ ಕಾನೂನಿನನ್ವಯ ಈ ಪ್ಲಾಂಟೇಷನ್ ಓನರ್‌ಗಳು ನಡೆಸುತ್ತಿದ್ದುದು ಅಪರಾಧ. ಅದು ಬ್ರಿಟಿಷ್ ರಾಣಿ ಭಾರತವನ್ನು ಆಳುತ್ತಿದ್ದ ಸಮಯ. ಇದರರ್ಥ ಪ್ರತಿ ಭಾರತೀಯನೂ ಬ್ರಿಟಿಷ್
ಸಾಮ್ರಾಜ್ಯದ ಅಧಿಕೃತ ನಾಗರೀಕ. ಹಾಗಾಗಿ ಬ್ರಿಟಿಷರಿಗೆ ಲಾಗುವಾಗುತ್ತಿದ್ದ ಕಾನೂನು ಮತ್ತು ರಕ್ಷಣೆ ಎಲ್ಲವೂ ಭಾರತೀಯನಿಗೂ, ಭಾರತೀಯ ಕೂಲಿಗೂ ಲಾಗುವಾಗುತ್ತಿತ್ತು.

ಆದರೆ ಅ ದ್ವೀಪದಲ್ಲಿ, ಬ್ರಿಟಿಷ್ ಮೂಲಸ್ಥಾನದಿಂದ ಸಾವಿರಾರು ಮೈಲಿ ದೂರ ನಡೆಯುತ್ತಿದ್ದ ದೌರ್ಜನ್ಯ ಇದು. ಅಲ್ಲಿರುವ, ಅಕ್ಷರ ಬಾರದ, ಇಂಗ್ಲಿಷ್ ಮೊದಲೇ ಬಾರದ ಬಡಕಲು ದೇಹದ ಭಾರತೀಯ ಕೂಲಿ ನ್ಯಾಯಕ್ಕಾಗಿ ಇಂಗ್ಲೆಂಡಿನ ನ್ಯಾಯಾಲಯದ ಬಾಗಿಲು ತಟ್ಟುವುದಾದರೂ ಹೇಗೆ? ಅಲ್ಲದೆ ಅವರೆಲ್ಲ ಏನಿದೆ ಎಂದೇ ತಿಳಿಯದ ಕರಾರು ಪಾತ್ರಕ್ಕೆ ಸಹಿ ಹಾಕಿಯೇ ಹಡಗು ಹತ್ತಿದ್ದು. ಆ ಒಡಂಬಡಿಕೆಯ ಪ್ರಕಾರ ಯಾವುದೇ ಕಾರಣಕ್ಕೆ ಪ್ಲಾಂಟೇಷನ್ನಿನ ಮ್ಯಾನೇಜರ್ ಅನುಮತಿ ಯಿಲ್ಲದೆ ಹೊರ ಹೋಗುವಂತೆ ಇಲ್ಲ. ಅಲ್ಲಿಂದ ಇಂಗ್ಲೆಂಡಿಗೆ ಬಿಡಿ – ಪಕ್ಕದ ಪ್ಲಾಂಟೇಷನ್ನಿನಲ್ಲಿ ಸಂಬಂಧಿ, ಮಗ ಇದ್ದರೂ ಅವರನ್ನು ನೋಡಲು ಹೋಗುವಂತೆ ಕೂಡ ಇಲ್ಲ. ಹೀಗಿರುವ ಸ್ಥಿತಿ. ಅದೆಲ್ಲ ಮೀರಿ ಹಾಗೊಮ್ಮೆ ಮಾಯಾ ರೀತಿಯಲ್ಲಿ ಇಂಗ್ಲೆಂಡಿನ ನ್ಯಾಯಾಲಯಕ್ಕೆ, ನ್ಯಾಯ ಪಡೆಯಲು ಹೋದರೂ ಅಲ್ಲಿ ಆರೋಪಕ್ಕೆ ಸಾಕ್ಷಿ ಬೇಕು.

ಪ್ಲಾಂಟೇಷನ್ನಿನ ಯಜಮಾನನ್ನು ಮೀರಿ ನಡೆವುದು, ಪ್ರತಿಭಟಿಸುವುದು ಇವೆಲ್ಲ ಅಪರಾಧ. ಹಾಗಾಗಿ ಇಂಥ ಖೆಡ್ಡಾಕ್ಕೆ ಈ ಎಲ್ಲ ಭಾರತೀಯ ಕೂಲಿಗಳನ್ನು ದೂಡಿಬಿಡಲಾಗಿತ್ತು. ದಿನ ಕಳೆದಂತೆ ಕಪ್ಪು ವರ್ಣೀಯರ ಸ್ಥಿತಿಗಿಂತ ಭೀಕರವಾಗತೊಡಗಿತು ಭಾರತೀಯ ಕೂಲಿಗಳ ಸ್ಥಿತಿ. ಶೇ.62 ಮಕ್ಕಳು ತಿಂಗಳೊಳಗೆ ಸಾಯು ತ್ತಿದ್ದರೆ ಇನ್ನೊಂದು ಶೇ.12 ಮಕ್ಕಳು ಹತ್ತು ವರ್ಷದೊಳಗೆ ಹೊಟ್ಟೆನೋವಿನಿಂದ ಸಾಯುತ್ತಿದ್ದರು. ಕೂಲಿ ತಂದೆ ತಾಯಿಗಳು ವೈದ್ಯ ಸೌಲಭ್ಯವಿಲ್ಲದ ಕಾರಣ ಪ್ಲಾಂಟೇಷನ್ನಿನ ಸುತ್ತಮುತ್ತಲಿರುತ್ತಿದ್ದ ಸಿಕ್ಕಪಕ್ಕ ಗಿಡಗಳ ಎಲೆಯ ರಸ, ಬೇರು ತಿವಿದು ಕುಡಿಸಿ ವೈದ್ಯಕೀಯ ಪ್ರಯೋಗ ಮಾಡುವ ಹತಾಶೆಯ ಸ್ಥಿತಿ- ಅದರಿಂದ ಮಕ್ಕಳಲ್ಲಿ ಇನ್ನಷ್ಟು ಅನಾರೋಗ್ಯ, ಸಾವು ಸಂಭವಿಸಿತು.

ಬ್ರಿಟಿಷರು ಮಾತ್ರ ಪ್ಲಾಂಟೇಷನ್ನಿನ ಕೂಲಿಗಳು ಕಡೆಯಿಮೆಯಾಗುತ್ತಿದ್ದಂತೆ ಇನ್ನಷ್ಟು ಜನರನ್ನು ಭಾರತದಿಂದ ತಂದು ತುಂಬಿದರು. ಜೀವ ಉಳಿಸುವುದಕ್ಕಿಂತ ಈ ರೀತಿ ಕೂಲಿಗಳನ್ನುಇಂಪೋರ್ಟ್ ಮಾಡಿಕೊಳ್ಳುವುದೇ ಅವರಿಗೆ ಕಡಿಮೆ ಖರ್ಚಿನದ್ದಾಗಿತ್ತು. ಇದು ಒಂದೆರಡು ವರ್ಷ ನಡೆದ ಕಥೆಯಲ್ಲ. ಬರೋಬ್ಬರಿ 150 ವರ್ಷ ಈ ರೀತಿ ಭಾರತೀಯ ಕೂಲಿಯರ ಆಮದು – ಭಾರತದಿಂದ ರಫ್ತು ಅವ್ಯಾಹತವಾಗಿ ನಡೆಯಿತು. ಅದೆಷ್ಟು ಸಾವು ಸಂಭವಿಸಿತು- ಎಷ್ಟೇ ಹುಡುಕಿದರೂ ಲೆಕ್ಕಕ್ಕೆ ಸಿಗುವು ದಿಲ್ಲ. ಲೆಕ್ಕ ಇಟ್ಟಿದ್ದರೆ ತಾನೇ ಸಿಗೋಕೆ. ಅದೆಷ್ಟೋ ಲೆಕ್ಕವಿಟ್ಟ ಕಾಗದ ಪತ್ರಗಳು ಇಂದು ಕಳೆದುಹೋಗಿವೆ ಎನ್ನಲಾಗುತ್ತದೆ. ಸತ್ತವರ ಲೆಕ್ಕ ಅದು ಬ್ರಿಟಿಷರಿಗೆ ಅವಮಾನವುಂಟು ಮಾಡುವ ದಾಖಲೆ. ಹಾಗಾಗಿ ಅದನ್ನೆಲ್ಲ ಅಸಲಿಗೆ ಸುಟ್ಟು ಹಾಕಲಾಗಿದೆ.

ಈ ನೂರೈವತ್ತು ವರ್ಷದಲ್ಲಿ ಭಾರತೀಯ ಕೂಲಿಗಳನ್ನು ಬ್ರಿಟಿಷರು ಜಗತ್ತಿನ ಮೂಲೆ ಮೂಲೆಗೆ ಮೋಸದಿಂದ ಒಯ್ದಿದ್ದಾರೆ. ದಕ್ಷಿಣ ಅಮೆರಿಕದ ಗಯಾನ, ಟ್ರಿನಿ ಡಾಡ್ ಅಂಡ್ ಟೊಬಾಗೊ, ಉಗಾಂಡಾ, ದಕ್ಷಿಣ ಆಫ್ರಿಕಾ, ಮಾರಿಷಸ್, ಶೀಲಂಕಾ, ಮಲೇಷ್ಯಾ ಹೀಗೆ ಬ್ರಿಟಿಷ್ ಸಾಮ್ರಾಜ್ಯ ಎಲ್ಲಿತ್ತೋ ಅಲ್ಲ ಭಾರತೀಯ ಕೂಲಿ ಗಳನ್ನು ಒಯ್ಯಲಾಯಿತು. ಅವರು ಕ್ರಮೇಣ ಕೇವಲ ಕಬ್ಬಿನ ಪ್ಲಾಂಟೆಷನ್ನಿಗಷ್ಟೇ ಸೀಮಿತವಾಗಿ ಉಳಿಯಲಿಲ್ಲ. ಬ್ರಿಟಿಷರ ಕಣ್ಣು ಭಾರತವನ್ನು ಬರಿದು ಮಾಡಿದ ನಂತರ ಬಿದ್ದದ್ದು ಆಫ್ರಿಕಾ ಖಂಡಕ್ಕೆ. ಅಲ್ಲಿನ ಲೂಟಿಗೆ ರೈಲ್ವೆ ವ್ಯವಸ್ಥೆಯ ಅವಶ್ಯಕತೆಯಿತ್ತು, ಗಣಿಗಾರಿಗೆ ಕೆಲಸದವರು ಬೇಕಿದ್ದರು. ಇಪ್ಪತ್ತನೇ ಶತಮಾನದ ಆದಿಯಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಮಿಗಿಲು ಸಂಖ್ಯೆಯಲ್ಲಿ ಭಾರತೀಯ ಕೂಲಿಗಳು ಆಫ್ರಿಕಾದಲ್ಲಿಯೇ ಜೀತಕ್ಕಿದ್ದರು ಎನ್ನುವುದಕ್ಕೆ ದಾಖಲೆ ಸಿಗುತ್ತದೆ. ದಾಖಲೆಯೇ ಅಷ್ಟಿದ್ದರೆ ಅಲ್ಲಿದ್ದ ವರು ಅದಕ್ಕಿಂತ ನಾಲ್ಕು ಪಟ್ಟು ಜಾಸ್ತಿ, ಮಾರ್ಗ ಮಧ್ಯೆ ಶಿವನ ಪಾದ ಸೇರಿದವರು ಇನ್ನೆಷ್ಟು ಪಟ್ಟೋ- ಗೊತ್ತಿಲ್ಲ.

ಅದು ಊಹಾತೀತ. ಆಫ್ರಿಕಾದಲ್ಲೂ ಭಾರತೀಯ ಕೂಲಿಗಳ ಸ್ಥಿತಿ ಬೇರೆಯದಾಗಿರಲಿಲ್ಲ. ಆದರೆ ಅದೆಲ್ಲದರ ನಡುವೆ ಒಂದು ಬೆಳವಣಿಗೆ ಮಾತ್ರ ಬದಲಾವಣೆಗೆ ನಾಂದಿಯಾಗುವಂಥದ್ದು. 1893. ಭಾರತೀಯ ವಕೀಲನೊಬ್ಬ ದಕ್ಷಿಣ ಆಫ್ರಿಕಾ ತಲುಪಿ ಅಲ್ಲಿ ತನ್ನ ವಕೀಲಿ ಕಚೇರಿ ತೆರೆದ. ಆ ವಕೀಲನೇ ನೀವು ಅಂದಾಜಿಸಿ ದಂತೆ ಮೋಹನದಾಸ್ ಕರಮಚಂದ್ ಗಾಂಧಿ. ಗಾಂಧಿ ಫಸ್ಟ್ ಕ್ಲಾಸ್ ಟಿಕೆಟ್ ಪಡೆದು ಪ್ರೆಟೋರಿಯಗೆ ಪ್ರಯಾಣಿಸಲು ರೈಲು ಹತ್ತಿದಾಗ ಅಲ್ಲಿದ್ದ ಬಿಳಿಯ ಬ್ರಿಟಿಷ
ನೊಬ್ಬ ಪ್ರತಿಭಟಿಸಿ, ಆತ ಭಾರತೀಯ ಎಂಬ ಒಂದೇ ಕಾರಣಕ್ಕೆ ರೈಲಿನಿಂದ ಕೆಳಗಿಳಿಸಿದ ಘಟನೆಯ ಬಗ್ಗೆ ನಿಮಗೆ ತಿಳಿದೇ ಇರುತ್ತದೆ.

ಕೆಲವು ಇತಿಹಾಸದ ವಿಮರ್ಶೆಗಳಲ್ಲಿ ಗಾಂಧಿಗೆ ಆದ ಈ ಅವಮಾನವೇ ಅವರು ಬ್ರಿಟಿಷರ ವಿರುದ್ಧ ಬಂಡೇಳಲು ಕಾರಣ ಎಂಬಂತೆ ಬರೆಯಲಾಗಿದೆ. ಇನ್ನು ಕೆಲ
ಕಡೆ ವರ್ಣಬೇಧ ನೀತಿ, ಗಾಂಧಿ ಜಾಗೃತವಾಗಲು ಕಾರಣ ಎಂಬಂತೆಲ್ಲ ವಿವರಿಸುವಾಗ ಅವರು ಮಿಡಿದದ್ದು ಅಲ್ಲಿನ ಕರಿಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯ ಎಂದು ಒಂದೆರಡು ವಾಕ್ಯದಲ್ಲಿ ವಿವರಿಸುವುದಿದೆ. ಆದರೆ ಅದಾಗಲೇ ದಕ್ಷಿಣ ಆಫ್ರಿಕಾದಲ್ಲಿ ಲೆಕ್ಕಕ್ಕೆ ಮೀರಿ ಭಾರತೀಯ ಕೂಲಿಗಳಿದ್ದರು. ಅವರ ಸ್ಥಿತಿ ಗಾಂಽಜಿಗೆ ಮೊದಲು ಬಾಧಿಸಿದ್ದು ಎನ್ನುವ ಸವಿವರ ಹೆಚ್ಚಿನ ಕಡೆ ಕೊಡಲಾಗುವುದಿಲ್ಲ. ಅಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ಗಾಂಧಿ ಮನಸ್ಸು ಕಲಕಿದ್ದು ಭಾರತೀಯ ಕೂಲಿಗಳ
ಸ್ಥಿತಿಯನ್ನು ಕಂಡು.

ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಕಾನೂನನ್ನು ಪ್ರಾಕ್ಟೀಸ್ ಮಾಡುತ್ತಿರುವಾಗ, ಅಲ್ಲಿಗೆ ಬಂದ ವರ್ಷದ ನಂತರ ಒಂದು ದಿನ ಬ್ರಿಟಿಷ್ ಪ್ಲಾಂಟೇಷನ್ ಓನರ್‌ನಿಂದ ಥಳಿಸ
ಲ್ಪಟ್ಟ, ಮುಂದಿನ ಎರಡು ಹಲ್ಲು ಕಳೆದುಕೊಂಡು ರಕ್ತ ಸುರಿಸುತ್ತ ಒಬ್ಬ ಭಾರತೀಯ ಕೂಲಿ ಅವರ ಆಫೀಸಿಗೆ ಬರುತ್ತಾನೆ. ತನ್ನ ಮೇಲೆ ಆದ ದೌರ್ಜನ್ಯವನ್ನು, ಮತ್ತು ಇನ್ನಿತರ ಭಾರತೀಯ ಕೂಲಿಗಳ ಮೇಲಾಗುತ್ತಿರುವ ಅನಾಚಾರ ವಿವರಿಸುತ್ತಾನೆ. ಈ ಘಟನೆ ಗಾಂಧಿಯನ್ನು ಗಾಂಧೀಜಿಯ ನ್ನಾಗಿಸಿದ್ದು. ಗಾಂಧಿ ಕಲಿತವರು, ಮೇಲಿಂದ ವಕೀಲರು, ಕಾನೂನು ತಿಳಿದವರು. ನಿಧಾನವಾಗಿ ಗಾಂಽಜಿ ಕೂಲಿಗಳ ಮೇಲಾಗುತ್ತಿದ್ದ ದೌರ್ಜನ್ಯವನ್ನು ಸಾರ್ವಜನಿಕ ಸಭೆ ಮಾಡಿ ಬಹಿರಂಗ ವಾಗಿ
ಪ್ರತಿಭಟಿಸಲು ಶುರುಮಾಡುತ್ತಾರೆ. ಆಗ ಹೀಗೆ ಮೋಸದಿಂದ ಭಾರತದಿಂದ ತರಲ್ಪಟ್ಟ ಬೇರೆ ಬೇರೆ ಭಾಷೆ, ಜಾತಿ, ಧರ್ಮದ ಕೂಲಿಗಳನ್ನು ತಕ್ಷಣಕ್ಕೆ ಒಗ್ಗೂಡಿಸುವ ಅವಶ್ಯಕತೆ ಅಲ್ಲಿ ಅವರಿಗೆ ಕಾಣಿಸಿತು. ಆ ಕಾರಣಕ್ಕೆಂದೇ ಮೊದಲ ಆಫ್ರಿಕನ್ ಭಾರತೀಯ ಪತ್ರಿಕೆ ‘ಇಂಡಿಯನ್ ಒಪಿನಿಯನ್’ ಇಂಗ್ಲಿಷ್ ಮತ್ತು ಗುಜರಾತಿ ಭಾಷೆ ಯಲ್ಲಿ ಗಾಂಧೀಜಿಯಿಂದ ಅಲ್ಲಿ ಶುರುವಾಯಿತು.

ಇಂಗ್ಲಿಷರಿಗೆ ತಲುಪಲು ಇಂಗ್ಲಿಷಿನಲ್ಲಿ ಮತ್ತು ಭಾರತೀಯರನ್ನು ಅದರಲ್ಲೂ ಗುಜರಾತಿ ಕೂಲಿಗಳನ್ನು ತಲುಪಲು ಗುಜರಾತಿಯಲ್ಲಿ ಪತ್ರಿಕೆ ಪ್ರಕಟಗೊಳ್ಳಲು ಶುರು ವಾಯಿತು. ಈ ಪತ್ರಿಕೆ ಭಾರತೀಯ ಕೂಲಿಗಳ ಜೀವನ ಸ್ಥಿತಿ, ಅವರ ಊಟ ಮೊದಲಾದ ಚಿಕ್ಕ ಚಿಕ್ಕ ವಿಚಾರಗಳಿಂದ ಹಿಡಿದು ಬ್ರಿಟಿಷರ ನಿರಂಕುಶ ದೌರ್ಜನ್ಯ ದವರೆಗಿನ ಎಲ್ಲ ವಿಚಾರಕ್ಕೆ ಒಂದು ಸ್ವರವಾಯಿತು. ಕ್ರಮೇಣ ಬ್ರಿಟಿಷ್ ಜಗತ್ತಿನಲ್ಲ ವಿಷಯ ಪಸರಿಸಲು ಶುರುವಾಯಿತು. ಅಲ್ಲಿನವರೆಗಿದ್ದ ಕೂಲಿಗಳ ಅರಣ್ಯ ರೋಧನಕ್ಕೊಂದು ಧ್ವನಿವರ್ಧಕ ಸಿಕ್ಕಂತಾಯಿತು. ಅದು ಇಂದಿನಂತೆ ಇಂಟರ್ನೆಟ್ ಯುಗವಲ್ಲ. ಅಲ್ಲಿವರೆಗೆ ಇದೆಲ್ಲದರ ಬಗ್ಗೆ ಗೊತ್ತೇ ಇಲ್ಲದ ಬ್ರಿಟಿಷ್ ಭಾರತಕ್ಕೆ ಮತ್ತು ನಂತರದಲ್ಲಿ ಇಂಗ್ಲೆಂಡಿನವರೆಗೆ ಸುದ್ದಿ ಹರಡಿತು. ಅಲ್ಲದೆ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಚದುರಿ ಹೋಗಿದ್ದ, ದಬ್ಬಾಳಿಕೆಯಿಂದ ನಲುಗಿಹೋಗಿದ್ದ ಎಲ್ಲ ಭಾರತೀಯರನ್ನೂ ತಲುಪಲು ಶುರುವಾಯಿತು.

ಇದು ಪ್ರತಿಭಟನೆ ಆಗುವಂತೆ ಭಾರತೀಯ ರನ್ನು ಸಜ್ಜುಮಾಡಲು ಶುರುಮಾಡಿತು. ಅಲ್ಲಿನವರಿಗೆ ಜೈಲು ಎಂದರೆ ಅದೊಂದು ಪಾಪದ, ಪಾಪಿಗಳ, ಅಪರಾಽಗಳ ಸ್ಥಾನ ಎನ್ನುವ ಇದ್ದ ಭಾವನೆ ಅಲ್ಲಿಂದ ಮುಂದೆ ಬದಲಾಗಲು ಆರಂಭವಾಗಿ, ದಬ್ಬಾಳಿಕೆಯನ್ನು ಪ್ರತಿಭಟಿಸಲು ಜೈಲು ಸೇರುವುದು ಒಂದು ಮಹತ್ತರ ಕೆಲಸ ಎನ್ನುವ ಭಾವ ಬೆಳೆಯಲು ಶುರುವಾಯಿತು. ಸತ್ಯಾಗ್ರಹ- ಹೀಗೆ ಅಲ್ಲಿ ಆಫ್ರಿಕಾದಲ್ಲಿ ಹುಟ್ಟಿದ್ದು. ಇದು ಕ್ರಮೇಣ ಬ್ರಿಟಿಷರಿಗೆ ಎಲ್ಲಿಲ್ಲದ ತಲೆನೋವಾಯಿತು.
ಜನವರಿ 1908. ಗಾಂಧೀಜಿಯನ್ನು ಬ್ರಿಟಿಷರು ಜೋಹಾನ್ಸ್ ಬರ್ಗ್ ನ ಜೈಲಿನಲ್ಲಿ ಬಂದಿಸಿಟ್ಟರು. ಅವರ ಜತೆ ಅದೆಷ್ಟೋ, ಭಾರತೀಯರು ಕೂಡ ಸ್ಪಂದಿಸಿ, ಪ್ರತಿಭಟಿಸಿ ಜೈಲು ಸೇರಿದರು. ಇದೇ ಒಂದು ನೋಬಲ್ ಕೆಲಸ ಎನ್ನುವ ವಾತಾವರಣ ನಿರ್ಮಾಣವಾಯಿತು. ಗಾಂಧೀಜಿ ಜತೆ ಕೂಲಿ ಗಳು ಕೂಡ ಜೈಲಿನೊಳಗೆ ಬಂದರು. ತಿಂಗಳೊಳಗೆ ದಕ್ಷಿಣ ಆಫ್ರಿಕಾ ಜೈಲುಗಳೆಲ್ಲ ಭಾರತೀಯರ, ಭಾರತೀಯ ಕೂಲಿ ಗಳಿಂದ ತುಂಬಿ ಹೋಯಿತು. ಆಗಲೇ ಸತ್ಯಾಗ್ರಹಕ್ಕೆ, ಪ್ರತಿ
ಭಟನೆಗೆ ಅಂದು ಮೂವ್‌ಮೆಂಟ್ ಸಿಕ್ಕಿದ್ದು. ಹೀಗೆ ಗಾಂಧೀಜಿ ಸತ್ಯಾಗ್ರಹದ ಪ್ರಯಾಣ ಶುರುವಾದದ್ದು ಇದೇ ಭಾರತೀಯ ಕೂಲಿಗಳ ಸ್ಥಿತಿಯ ಕಾರಣದಿಂದ. ಇಲ್ಲಿ ನಡೆದ ಪ್ರತಿಭಟನೆ ಕೇವಲ ಕಪ್ಪು ವರ್ಣೀಯರ ವಿರುದ್ಧದ ವರ್ಣ ಭೇದದಿಂದಲ್ಲ.

ಅಸಲಿಗೆ ಭಾರತೀಯ ಕೂಲಿಗಳ ಮೇಲಿನ ದೌರ್ಜನ್ಯ- ದಬ್ಬಾಳಿಕೆ ಮತ್ತು ಭೇದದ ಕಾರಣದಿಂದ. ಮುಂದಿನ 5 ವರ್ಷ ಗಾಂಧಿ ಹೊರಬರುತ್ತಿದ್ದರು- ಸತ್ಯಾಗ್ರಹ, ಧರಣಿ ನಡೆಸಿ ಜೈಲಿಗೆ ವಾಪಸಾಗುತ್ತಿದ್ದರು. ಬ್ರಿಟಿಷರಿಗೆ ಇದೊಂದು ದೊಡ್ಡ ರಗಳೆಯಾಯಿತು. ಬಂಧಿಸುವಂತಿಲ್ಲ- ಬಿಡುವಂತಿಲ್ಲ. ಪರಿಸ್ಥಿತಿ ಕೈಮೀರುತ್ತಲೇ ಹೋಯಿತು. ಜೈಲಿನಲ್ಲಿದ್ದೂ ಗಾಂಧಿ ಪೇಪರ್ ಪ್ರಕಟವಾಗುವಂತೆ ಎಲ್ಲ ವ್ಯವಸ್ಥೆ ಮಾಡಿ ಕೊಂಡಿದ್ದರು. ಜೈಲಿನ ಕೂತು- ಜೈಲಿನಲ್ಲಿರುವ ಕಾರಣದಿಂದ ಆಗುತ್ತಿಲ್ಲ, Suffering is the only remedy. Victory is certain. ಎಂದು ಅದು ಹೇಗೋ ಬರೆದು ಅವರ ಪತ್ರಿಕೆಯಲ್ಲಿ ಪ್ರಕಟವಾಯಿತು. ಇದು ಇನ್ನಷ್ಟು ಜನರು ತಿಳಿಯುವಂತೆ, ಸತ್ಯಾಗ್ರಹ ನಡೆಸಿ ಜೈಲು ಸೇರುವಂತಾಯಿತು.

1909. ಗಾಂಧೀಜಿ ಈ ಬಾರಿ ಜೈಲಿನಿಂದ ಹೊರಬಿದ್ದವರೇ ಹೊರಟದ್ದು ಇಂಗ್ಲೆಂಡಿಗೆ ಅಲ್ಲಿದ್ದ ಭಾರತೀಯರ ಬೆಂಬಲ ಪಡೆಯಲು. ಅಲ್ಲಿಯೂ ಹಲವು ಮೀಟಿಂಗು ಗಳನ್ನು ಗಾಂಧೀಜಿ ನಡೆಸಿದರು. ಇಂಗ್ಲೆಂಡಿನ ಕೆಲವು ಸಹೃದಯ ಆದರೆ ಸಾಮ್ರಾಜ್ಯದ ದೌರ್ಜನ್ಯದ ಲೆವೆಲ್ಲಿನ ಅಂದಾಜೇ ಇಲ್ಲದ ಮಂತ್ರಿಗಳನ್ನು ಸಂಧಿಸಿ, ಸ್ಥಿತಿ ವಿವರಿಸಿ, ಆಫ್ರಿಕಾಕ್ಕೆ ಬಂದು ಖುದ್ದು ನೋಡಬೇಕೆಂದು ಒತ್ತಾಯಿಸಿದರು.

ನವೆಂಬರ್ 1913. ಗಾಂಧೀಜಿ ದಕ್ಷಿಣ ಆಫ್ರಿಕಾದ ದಂಡೀಯ ಕಲ್ಲಿದ್ದಲು ಗಣಿಯ ಭಾರತೀಯ ಕೂಲಿಗಳನ್ನು ತನ್ನ ಭಾಷಣದಿಂದ ಜಾಗ್ರತಗೊಳಿಸಿ ಅಸಹಕಾರ ಚಳವಳಿಗೆ ಕರೆಕೊಟ್ಟರು. ಅಲ್ಲಿಯೇ ಪಕ್ಕದ ಕಬ್ಬು ಪ್ಲಾಂಟೇಷನ್ನಿನಲ್ಲಿದ್ದ ಇನ್ನೊಂದಿಪ್ಪತ್ತು ಸಾವಿರ ಕೂಲಿಗಳು ಪ್ರತಿಭಟನೆಯನ್ನು ಸೇರಿಕೊಂಡರು. ಹೀಗೆ ಅಸಹ ಕಾರ ಚಳವಳಿ ಅಂದು ಅಲ್ಲಿ ವಿರಾಟ್ ರೂಪ ಪಡೆಯಿತು. ಗಾಂಧಿಯನ್ನು9 ತಿಂಗಳು ಜೈಲಿನಲ್ಲಿಡಲಾಯಿತು. ಗಲಾಟೆ ಹೆಚ್ಚಿತು. ಬಿಸಿ ಇಂಗ್ಲೆಂಡಿಗೆ ಮುಟ್ಟಿತು. ಬ್ರಿಟಿಷ್ ಮಂತ್ರಿಗಳು ಗಲಾಟೆಯೆದ್ದರು. ಈ ಕೂಲಿ ಪದ್ಧತಿಯನ್ನು – ಆಧುನಿಕ ಬ್ರಿಟಿಷ್ ಗುಲಾಮಗಿರಿ ನಿಲ್ಲಿಸಲು ಒತ್ತಡ ನಿರ್ಮಾಣವಾಯಿತು. ವಿದೇಶದಲ್ಲಿನ ಸುದ್ದಿ ಭಾರತಕ್ಕೆ ತಲುಪಿ ಅಲ್ಲಿ ಕೂಡ ಗಲಾಟೆಗಳಾದವು.

ಭಾರತದ ವೈಸ್‌ರಾಯ್ ಲಾರ್ಡ್ ಹೋರ್ಡಿಂಗ್ ಕೂಡ ಭಾರತದಲ್ಲಿ ನಡೆದ ಪ್ರತಿಭಟನೆಗೆ ಧ್ವನಿಗೂಡಿಸಿ ಈ ಪದ್ಧತಿ ಕೊನೆಗಾಣ ಬೇಕು ಎಂದು ಬ್ರಿಟಿಷ್ ಮಂತ್ರಿ ಗಳಿಗೆ ಪತ್ರ ಬರೆದ. ಬ್ರಿಟನ್ 1914ರಲ್ಲಿ ಮೊದಲ ಮಹಾಯುದ್ಧಕ್ಕೆ ಹೋಗುವ ಸಮಯ ದಲ್ಲಿ ಈ ಎಲ್ಲ ಗಲಾಟೆ ನಿಲ್ಲಲೇಬೇಕಿತ್ತು – ಹೀಗಾಗಿ ಈ ಕೂಲಿ ಪದ್ಧತಿ ಕೊನೆಗಾಣಿಸುವ ಸ್ಥಿತಿ ಎಲ್ಲ ಕಡೆಯಿಂದ ನಿರ್ಮಾಣ ವಾಯಿತು. ಕೊನೆಯಲ್ಲಿ ಬ್ರಿಟಿಷ್ ರಾಣಿ ಇಂಥದ್ದೊಂದು ಪರಮ ಅಮಾನವೀಯ ಪದ್ಧತಿ ಕೊನೆ ಯಾಗಿಸುವ ಪತ್ರಕ್ಕೆ ಸಹಿ ಹಾಕಿದಳು.

ಹೀಗೆ ಗಾಂಧೀಜಿ ನಂತರದಲ್ಲಿ ಅಲ್ಲಿ ಬಳಸಿದ ಸತ್ಯಾಗ್ರಹ, ಅಸಹಕಾರ ಚಳುವಳಿಯನ್ನು ಭಾರತಕ್ಕೆ ತಂದದ್ದು ಮತ್ತು ಅದನ್ನೇ ದೇಶದ ಸ್ವಾತಂತ್ರ್ಯಕ್ಕೆ ಬಳಸಿದ್ದು ಇವೆಲ್ಲ ಗೊತ್ತಿರುವ ಇತಿಹಾಸ. ಹೀಗೆ ಸುಮಾರು 15 ಲಕ್ಷ ಭಾರತೀಯ ಕೂಲಿಗಳು ಅಂದು ಆಯಾ ದೇಶಗಳಲ್ಲಿ ಸ್ವತಂತ್ರರಾದರೇನೋ ನಿಜ – ಆದರೆ ಅದಾಗಲೇ ಅವರು ಭಾರತೀಯ ಸಂಬಂಧ ವನ್ನು, ಭಾರತೀಯತನವನ್ನು ಹೆಚ್ಚು ಕಡಿಮೆ ಕಳೆದುಕೊಂಡು ಬಿಟ್ಟಿದ್ದರು. ಅವರು ಅತ್ತ ಆ ದೇಶದವರಾಗಲೂ ಇಲ್ಲ – ಇತ್ತ ಭಾರತೀಯರಾಗಿಯೂ ಉಳಿದಿರಲಿಲ್ಲ. ಹಾಗಾದರೆ ಅವರೆಲ್ಲ ಪರದೇಶಿ, ಪರಕೀಯರಾಗಿ ಅಲ್ಲಿಯೇ ಉಳಿದುಬಿಟ್ಟರೆ? ಅಥವಾ ನಂತರದಲ್ಲಿ ಭಾರತಕ್ಕೆ ಮರಳಿ ಬಂದರೆ? ನಂತರದಲ್ಲಿ ಅಲ್ಲಿಯವರಾಗಿಯೇ ಹೋದರೆ ಅಥವಾ ಅಲ್ಲಿಯೇ ಇದ್ದು ಪ್ರತ್ಯೇಕವಾಗಿ ಉಳಿದುಬಿಟ್ಟರೆ? ಈಗಲೂ ಇದ್ದಾರೆಯೇ? ಇದ್ದರೆ, ಹೇಗಿದ್ದಾರೆ? ಅವರ ನಂತರದ ಕಥೆ ಏನು, ಎತ್ತ? ಬರೆಯಲು ಜಾಗ ಉಳಿದಿಲ್ಲ, ಹಾಗಾಗಿ ಇವೆಲ್ಲ ಮುಂದಿನ ವಾರಕ್ಕೆ – ಸರಣಿಯ ಕೊನೆಯ ಲೇಖನಕ್ಕೆ.