Sunday, 22nd September 2024

ಮನದಲ್ಲಿ ಹಸಿರಾಗುಳಿವ ತರ್ಸರ‍್ ಮರ್ಸರ‍್

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehendale100@gmail.com

ಪ್ರಕೃತಿಯ ಅಪರೂಪದ ಸೃಷ್ಟಿ ಸೌಂದರ್ಯದ ಅನುಭೂತಿಗೆ ಈಡಾಗುವ ದಾರಿಯಲ್ಲಿ ಸಣ್ಣಪುಟ್ಟ ಸಾಹಸಗಳು ಅನಿವಾರ್ಯ. ಇದೇ ಕಾರಣಕ್ಕೆ ತರ್ಸರ್ ಮರ್ಸರ್ ಪ್ರವಾಸ, ವರ್ಷದ ನಂತರವೂ ನಿನ್ನೆಯಷ್ಟೇ ಹೋಗಿದ್ದೆನ್ನಿಸುವಷ್ಟು ಹಸಿರಾಗಿಸಿರುತ್ತದೆ.

ಜೀವನದಲ್ಲಿ ಒಮ್ಮೆಯಾದರೂ ಅನುಭವಿಸ ಬೇಕೆನ್ನುವ ಮೈಲುಗಟ್ಟಲೆ ದೂರದವರೆಗೂ ಮಂಜಿನ ಹುಡಿಯ ಹಿಮ ಅಲ್ಲಿ ಸುರಿಯುತ್ತಿರುತ್ತದೆ. ನಡೆದಷ್ಟೂ ದೂರದಲ್ಲಿ ದೇವತೆಗಳ ಸ್ನಾನಕ್ಕೆ ಒಂದೆರಡಲ್ಲ ಸಾಲುಸಾಲು ಸರೋವರಗಳು ತಿಳಿಯಾಗಿ ಸಾಲು ಸಾಲಾಗಿ ಕಾದಿವೆ. ಅಲ್ಲಿ ಅಗಾಧ ಎತ್ತರದ ಪರ್ವತದ ಏರು ದಾರಿಯಿದೆ, ವ್ಯಾಲಿ ಆಫ್ ಫ್ಲವರ್‌ಗೆ ಸೆಡ್ಡು ಹೊಡೆಯುವ ಹೂ ಕಣಿವೆಗಳಿವೆ. ಸಾಹಸ ಚಾರಣ ಇಷ್ಟ ಪಡುವವನು ಅದನ್ನು ತಲುಪದೇ ಉಳಿದರೆ ಬಹುಶಃ ಪ್ರವಾಸಿಯೊಬ್ಬನ ಜೀವಮಾನದ ನಷ್ಟವೂ ಹೌದು.

ಪರ್ವತದ ಪಕ್ಕದಲ್ಲೇ ಮತ್ತೊಂದು ಶಿಖರ ಅಥವಾ ಒಂದಾದ ಮೇಲೊಂದು ಪಾಸ್ ಗಳು ಜಮ್ಮುವಿನಿಂದ ಸುತ್ತಿ ಬಳಸಿ ಲಡಾಕ್ ಹಾಯ್ದು ಲಾಹುಲ್ ಸ್ಪಿತಿ ವ್ಯಾಲಿಯ ಕೊನೆ ಊರಾದ ಸಂಗ್‌ಷೇರಾ ವರೆಗೂ ಎಟುಕುತ್ತಲೇ ಇರುವುದು ಸಾಮಾನ್ಯ. ಆದರೆ ಒಂದಾದ ಮೇಲೊಂದರಂತೆ ಸರೋವರ ಗಳು ಕೈಗೆಟಕುವುದು ಉಹೂಂ.. ಅದು ಕೇವಲ ಕಾಶ್ಮೀರದ ಒಂದು ಹಂತದ ಎತ್ತರದಲ್ಲಿ ಮಾತ್ರ ಸಾಲಾಗಿ ಏಳೆಂಟು ಸರೋವರಗಳ ಒಂದು ವ್ಯಾಪ್ತಿಯೇ ದಕ್ಕುತ್ತದೆ. ಹೆಚ್ಚಿನ ಚಾರಣಿಗ ರಿಗೆ ಇದು ‘ಲೇಕ್ ಟ್ರ್ಯಾಕ್’ ಎಂದೇ ಪರಿಚಿತ ಕೂಡ. ಅನಾಮತ್ತು ಏಳೆಂಟು ದಿನಗಳ ದಿನವಹಿ 15 ಕಿ.ಮೀ. ದೂರದ ಕಡಿದಾದ ರಸ್ತೆಗಳ, ಆಮ್ಲಜನಕ ಕಡಿಮೆಯಾಗುತ್ತಲೇ ಸಾಗುವ ಎತ್ತರದಲ್ಲಿ ಈ ಕೊಳಗಳ ಕಣಿವೆಯಲ್ಲಿ ಜೋಡಿ ಕೊಳಗಳ ಅಪರೂಪದ ಸ್ಥಳವಿದೆ.

ಅದೇ ತರ್ಸರ್ ಮರ್ಸರ್.. ಲಿದ್ಧರ್ ವ್ಯಾಟ್ ಎಂಬ ಹಳ್ಳಿಯ ನೆತ್ತಿ ಮೇಲಿರುವ ಅವಳಿ ಸರೋವರ ಗಳು. ಈ ಲಿದ್ದರ್ ವ್ಯಾಟ್ ಕೇವಲ ಅಲ್ಲಿರುವ ಮತ್ತು ನಮ್ಮಂಥ ಅಲೆಮಾರಿಗಳಿಗೆ ಬೇಸ್ ಪ್ಯಾಂಪ್ ಮಾಡಿಕೊಳ್ಳಲು ನೆಲೆ ಒದಗಿಸುವವರಿಂದ ಬದುಕು ಕಟ್ಟಿಕೊಳ್ಳುವರಿಗಾಗೇ ಇರುವ ಊರು ಇರಬೇಕು. ಕಾರಣ ಆ ಎತ್ತರ ಚಳಿ, ಯಾವುದೇ ಮೂಲಭೂತ ಸೌಲಭ್ಯವೇ ಸರಿಯಾಗಿ ತಲುಪದ ಅದರಲ್ಲೂ ಈಗ ಅತೀವ ಹಿಂಸಾ ಪೀಡಿತ ಪ್ರದೇಶವಾಗಿ ಮತ್ತೆ ಕಾಶ್ಮೀರ ಹೆಸರು ಮಾಡುತ್ತಿರುವ ಹಿನ್ನೆಲೆಯಲ್ಲಿ ಯಾವ ಲೆಕ್ಕದಲ್ಲೂ ಮುಖ್ಯವಾಹಿನಿಯಲ್ಲಿ ದಾಖಲಾಗದ ಅನಾಮಧೇಯ ಊರದು. ಬಂದು ನೆಲೆ ನಿಂತು ಕಾಲಾಡಿಸಿ ಹೋಗುವವರಿಗೆ ಆ ಒಂದು ದಿನದ ಮಟ್ಟಿಗೆ ಆಹಾ.. ಓಹೋ ಎನ್ನಿಸುವ ಅದ್ಭುತ ಊರೆಂಬ ಉದ್ಘಾರ ಹೊರಡಿಸುತ್ತಾದರೂ ಆ ದೂರದ, ಎತ್ತರದ ಊರಿನಲ್ಲಿ ಬಾಳುವುದು ಸಾಹಸವೇ ಸರಿ.

ಕಾಶ್ಮಿರ ಕಣಿವೆಯ ತುತ್ತ ತುದಿಯಲ್ಲಿ ಇವತ್ತಿಗೂ ಅನಾಮಧೇಯವಾಗಿ ಕೇವಲ ಚಾರಣಿಗರ ಮತ್ತು ಆಸಕ್ತಿಯಿಂದ ಹುಡುಕಿ ಹೋಗುವವರಿಗೆ ಮಾತ್ರ ಲಭ್ಯವಾ ಗುತ್ತಲಿ ರುವ ಇದು ಸದ್ಯಕ್ಕೆ ಕಾಶ್ಮೀರ ಕಣಿವೆಯ ಹಾಟ್ ಟ್ರ್ಯಾಕ್. ಸಾಮಾನ್ಯವಾಗಿ ಶ್ರೀನಗರದಿಂದ ಪೆಹಲ್‌ಗಾಂವ್ ಮಾರ್ಗ ವಾಗಿ ಈ ಸ್ಥಳವನ್ನು ಹುಡುಕಿ ಹೋಗುವವರು ಜಾಸ್ತಿ. ಆದರೆ ನನ್ನ ಆಯ್ಕೆ ಮತ್ತು ಸೂಚನೆಯೆಂದರೆ ಶ್ರೀನಗರದಿಂದ ಭಿಜ್ಬೇರ್ ಮಾರ್ಗವಾಗಿ ತಲುಪಲು ಸಲಹೆ ಕೊಡುತ್ತೇನೆ. ಕಾರಣ ಈ ನೈಜ ಒಳಮಾರ್ಗದಲ್ಲಿ ಕ್ರಮಿಸುವಾಗ ಸಿಕ್ಕುವ ಕಾಶ್ಮೀರದ ‘ಇನ್ನರ್ ಕಾಶ್ಮೀರ್’ ಮತ್ತು ಸ್ವಚ್ಛ ಭಾರತದ ಅತ್ಯಂತ ಹಸಿರು ಪರಿಸರ, ಮತ್ತು ಇದ್ದಕ್ಕಿದ್ದಂತೆ ಎದುರಾಗುವ ಹಲವು ಸಣ್ಣಪುಟ್ಟ ಶುದ್ಧ ಸರೋವರ ಜಾಲತಾಣ ಇನ್ನೊಂದೆಡೆಯಲ್ಲಿ ಬಹುಶಃ ಸಿಗಲಿಕ್ಕಿಲ್ಲ ಎನ್ನುವುದು ನನ್ನ ಹಲವು ಚಾರಣದ ಅನುಭವದ ಮಾತು. ಜತೆಗೆ ಕೊಂಚ ಏರುಮುಖದ ನಡಿಗೆಯಾದರೂ ಅದ್ಭುತ ಎನ್ನುವ ಅನುಭವ ನಿಮ್ಮದಾಗಲಿದೆ. ಕಾರಣ ಈಗೆಲ್ಲ ಸೆಲಿ ಜಮಾನ.

ಭಿಜ್ಬೇನರ್ ಮುಂದಿನ ಪುಟಾಣಿ ಊರು ‘ಲಿದ್ಧರ್ ವಾಟ್’ ಮೂಲಕ ಸುಮಾರು ಆರು ತಾಸುಗಳನ್ನು ಕ್ರಮಿಸಿದರೆ ಉಸಿರೆ ಳೆದುಕೊಳ್ಳುವ ಮೊದಲನೆಯ ಹಂತ ಪೂರೈಸಿದಂತಾ ಗುತ್ತದೆ. ಈ ಲಿದ್ದರ್‌ವಾಟ್ ಒಂದು ಚೆಂದದ ಹಳ್ಳಿ. ‘ಅರು’ ಇದಕ್ಕೆ ಹತ್ತಿರವಿರುವ ಇದ್ದುದರ ಎಲ್ಲ ಸೌಕರ್ಯ ಇರುವ ಚಿಕ್ಕ ಪಟ್ಟಣ. ಒಂಥರಾ ಬೇಸ್ ಕ್ಯಾಂಪ್ ಇದ್ದಂತೆ. ಈ ಅರುವಿನಿಂದ ಹೊರಟು ಇಲ್ಲಿಗೆ ತಲುಪುವವರೆಗೂ ಈ ಲಿದ್ದರ್ ನದಿಯ ಎಡದಂಡೆಯ ಮೇಲೆ ನಮ್ಮ ಪಯಣ ಸಾಗುತ್ತಿರುತ್ತದೆ. ಮರುದಿನ ಲಿದ್ದರ್ ವಾಟ್‌ನಿಂದ ‘ಶೇಕ್ವಾ’ ಗೆ ಹಳ್ಳಿಗೆ ಸುಮಾರು ಹನ್ನೆರಡು ಸಾವಿರ ಅಡಿ ಎತ್ತರಕ್ಕೆ ಏರು ಮುಖದ ಚಲನೆ.

ಇದಕ್ಕಾಗಿ ಆರೇಳು ಕಿ.ಮೀ. ಅಂತರ ಕೂಡ ನಾಲ್ಕಾರು ತಾಸು ಶ್ರಮ ಬೇಡುತ್ತದೆ. ಮಧ್ಯದಲ್ಲಿ ಯಾವುದೇ ಸೌಕರ್ಯವೂ ಇಲ್ಲ. ಅಲ್ಲಲ್ಲಿ ಚಹ ಮತ್ತು ರೋಟಿದಾಲ್ ಅನ್ನು ಪೂರೈಸುವ ಚಿಕ್ಕ ಗುಡಿಸಲುಗಳಿವೆ. ಇಂಥ ತಂಗುದಾಣಗಳನ್ನು ಅವು ಗಳನ್ನು ‘ಗುಜ್ಜರ್ ಹಟ್’ ಎಂದು ಕರೆಯುತ್ತಾರೆ. ಇಲ್ಲಿ ಚಹ, ಬಿಸ್ಕೆಟು, ಮ್ಯಾಗಿ ಲಭ್ಯ. ಈ ಗುಜ್ಜರ್ ಹಟ್‌ಗಳು ಒಂದು ರೀತಿ ಯಲ್ಲಿ ಓಯಸಿಸ್ ಇದ್ದ ಹಾಗೆ. ಕಂಡೊಡನೆ ಒಮ್ಮೆ ಆಯಾಸ ಪರಿಹಾರ ಒದಗಿಸಿ ಮತ್ತೆ ಚೈತನ್ಯ ತುಂಬುವ ಶಕ್ತಿ ಕೇಂದ್ರಗಳೇ ಸರಿ ಆ ಎತ್ತರದಲ್ಲಿ. ಹನ್ನೆರಡರಿಂದ ಮತ್ತೆ ಎರಡು ಸಾವಿರದ ಅಡಿ ಮೇಲಕ್ಕೇರುವ ಎತ್ತರದ ದಾರಿಯ ನಂತರ ಅನಿರೀಕ್ಷಿತ ವಾಗಿ ಸಮತಟ್ಟಿನ ಅಗಾಧ ಅಗಲದ ಅಂಗಳಕ್ಕೆ ಕಾಲಿಡುತ್ತೇವೆಲ್ಲ ಅದೊಂದು ರೀತಿ ಸ್ವರ್ಗಾರೋಹಣ ಪ್ರವೇಶದಂತೆ ಅನಿಸಿಬಿಡುತ್ತದೆ.

ಬದಲಾಗುವ ಹವಾಮಾನ ಮತ್ತು ಪರಿಸರ ಬಣ್ಣಗಳ ಅಂದದಲ್ಲಿ ಅದರ ವಿನ್ಯಾಸವೇ ಬೇರೆ. ಶೇಕ್ವಾದಿಂದ ಚಾರಣ ದಾರಿ ಕ್ರಮಿಸಿ ಕಣಿವೆಯ ಸಂದಿನಿಂದ ಹೊರಕ್ಕೆ ಬಂದರೆ, ಮರುಕ್ಷಣ ಅದ್ಭುತ ತರ್ಸರ್ ಕಣ್ಣೆದುರಿಗೆ ಇರುತ್ತದೆ. ಯಾವ ಜಾಗದಲ್ಲಿ ನಿಂತರೂ ಚಿತ್ರ ತೆಗೆಯಲು ಸೆಲ್ಫಿಗೆ ಕೊರತೆಯಿಲ್ಲ. ಆದರೆ ಅದಕ್ಕಾಗೇ ಚಿಕ್ಕ ಅಂತರ ಕೂಡ ಅಗಾಧ ಸಮಯ ಬೇಡುತ್ತದೆ. ಹದಿನಾಲ್ಕು ಚಿಲ್ರೆ ಸಾವಿರ ಅಡಿ ಎತ್ತರದಲ್ಲಿ ಸರ್ವವೂ ಹಿಮಗಟ್ಟುತ್ತಿರುವಾಗ ಈ ಸರೋವರ ಮಾತ್ರ ನೀರಾಗಿ ನೀಲಿ ಅಗಸ ಪ್ರತಿಫಲಿಸುತ್ತ ನಿಂತಿರುತ್ತದೆ. ಅದ್ಭುತ ಮತ್ತು ಪ್ರಕೃತಿಯ ಒಂದು ಸುಂದರ ಕಲ್ಪನೆಗೆ ಸಾಕ್ಷಿಯಾಗಲು ಇಲ್ಲಿ ಮಾತ್ರ ಸಾಧ್ಯ.

ತರ್ಸರ್ ಪ್ರಕೃತಿಯ ವಿಸ್ಮಯವೂ ಹೌದು. ಈ ಎತ್ತರಕ್ಕೇ ಏರಿ ನಿಲ್ಲುವ ವೇಳೆಗಾಗಲೇ ಪ್ರವಾಸಿಯೊಬ್ಬನ ಉಸಿರು ನೆತ್ತಿಗೇರಿರುತ್ತದೆ. ಆದರೆ ಪದೆ ಪದೆ ಕೈ ಕೊಡುವ ಬೆಳಕು ಚಿತ್ರ ತೆಗೆಯುವ ಮುನ್ನ ನಮ್ಮ ತಾಳ್ಮೆ ಪರೀಕ್ಷಿಸಿಬಿಡುತ್ತದೆ. ಇದರ ದಂಡೇಲಿ ಮೊದಲೇ ನಿರ್ಧರಿಸಿ ವ್ಯವಸ್ಥೆ ಮಾಡಿರುವ ಟೆಂಟುಗಳಲ್ಲಿ ಒಂದಿನ ಕಳೆಯಲೇ ಬೇಕು. ಆಗಲೇ ತರ್ಸರ್‌ನ ನೈಜ ಅನುಭೂತಿಗೆ ಪಕ್ಕಾಗಲು ಸಾಧ್ಯ.

ತರ್ಸರ್ ಹಿಂದೆಯೆ ಮರ್ಸರ್ ಇದ್ದು ಅದು ಮತ್ತೆ ಅರ್ಧ ದಿನದ ಏರು ಮುಖದ ದಾರಿ. ಇದು ನಮಗೆ ಅರ್ಧದಿನ ಸ್ಥಳೀಯರಿಗೆ ಒಂದೆರಡು ತಾಸಿನ ಕಾಲ್ನಡಿಗೆ. ಆದರೆ ಅಗಾಧ ಹಸಿರಿನ ಚಳಿಯ ಮಧ್ಯೆ ಒಳಗೊಳಗೇ ಬೆವರುತ್ತಾ ಸಾಗುವಾಗ ಯಾವ ಎತ್ತರವೂ ಎದುರಿಗೆ ನಿಲ್ಲುವುದಿಲ್ಲ. ಇಲ್ಲಿಂದ ಮುಂದಿನ ದಾರಿಯೆಲ್ಲ ಭೂ ಸ್ವರ್ಗ ಎಂದರೂ ತಪ್ಪೇನಿಲ್ಲ. ಅಗಾಧ ಇಳಿಜಾರಿನ ಹಿಮದ ಜಾರು ಹಾದಿ ಹೆಚ್ಚಿನಂಶ ಕೆಲವೊಮ್ಮೆ ಹಗ್ಗದ ಸಹಾಯ ಹಾಗೂ ರ‍್ಯಾಪ್ಪೆಲಿಂಗ್ ಸಹಾಯವನ್ನೂ ಬೇಡುತ್ತದೆ. ಕಾರಣ ಈ ಅಂತರವನ್ನು ರಾಪ್ಪೇಲಿಂಗ್ ಮೂಲಕ ಇಳಿಯುವುದಾದಲ್ಲಿ ತಾಸುಗಟ್ಟಲೇ ನಡಿಗೆಯ ಮೂಲಕ ಕ್ರಮಿಸುವುದನ್ನು ತಪ್ಪಿಸಬಹುದು. ಇದೆಲ್ಲದರ ಸಾಹಸಕಾರಿ ಯಾತ್ರೆ ಮಾಡಿಸುವ ‘ಸುಂದರ್‌ಸರ್’ನಿಂದ ಮರ್ಸರ್‌ದ ದಾರಿ ನಿಸರ್ಗದ ರಹಸ್ಯಗಳಲ್ಲಿ ಒಂದು. ಹಾಗೆ ವಾಪಸು ಹೊರಟು ಮರ್ಸರ್‌ ನಿಂದ ಸುಂದರ್ ಸರ್ ತಲುಪಿ ಒಂದು ಕಷ್ಟಕರ ವಾದ ಅಡ್ಡದಾರಿ ಮೂಲಕ ಕೆಳಕ್ಕಿಳಿಯತೊಡಗಿದರೆ ಒಂದೇ ದಿನದಲ್ಲಿ ‘ಸೋನಾಮಾತಿ’ ತಲುಪುತ್ತೇವೆ. ಆದರೆ ಕಿ.ಮಿ. ಗಟ್ಟಲೇ ಹಿಮದ ಹಾದಿಯನ್ನು ಜರಿದು ಕ್ರಮಿಸುವಾಗ ಆಯ ತಪ್ಪುವ, ಆ ಮೂಲಕ ಕಣಿವೆಯ ಆಳಗಳಿಗೆ ಬಿದ್ದು ಹೋಗುವ ಅಪಾಯವಿದ್ದೇ ಇದೆ. ಹಿಮದ ಅಪಾಯ ಕಾರಿ ಕುಳಿಗಳ ಆಳ ಅಗಲದ ಅರಿವು ಸಾಮಾನ್ಯ ಪ್ರವಾಸಿ ಗಾಗುವುದಿಲ್ಲ.

ಅಲ್ಲ ಸುಮ್ಮನೆ ಮರದ ಕಾಂಡಕ್ಕೆ ಹುಡಿ ಗಟ್ಟಿದ ಹಿಮದ ಕಾರಣ ಅ ದೊಡ್ಡ ಆಳದ ಅರಿವು ಸಿಕ್ಕದ ಗುಡ್ಡೆಯಾಗಿರುತ್ತವೆ. ಅಕಸ್ಮಾತ ಕಾಲಿಟ್ಟು ಭಾರ ಹೆಚ್ಚಾಗಿ ಅದರ ಒಳಕ್ಕೆ ಬಿದ್ದು ಹೋದರೆ ದೇವರೇ ದಿಕ್ಕು. ಇದಕ್ಕೆಲ್ಲ ಸ್ಥಳೀಯರು ಅಥವಾ ನುರಿತ ನಾಯಕತ್ವದ ಅಗತ್ಯತೆ ಈ ಚಾರಣಕ್ಕೆ ಆಗತ್ಯ. ಅದಾಗ್ಯೂ ಪ್ರಕೃತಿಯ ಅಪರೂಪದ ಸೃಷ್ಟಿ ಸೌಂದರ್ಯ ವನ್ನು ಅನುಭವಿಸಲೇಬೇಕೆನ್ನುವ ಮತ್ತು ಅಂತಹ ಅನುಭೂತಿಗೆ ಈಡಾಗುವ ದಾರಿಯಲ್ಲಿ ಸಣ್ಣಪುಟ್ಟ ಸಾಹಸಗಳು
ಅನಿವಾರ್ಯವೂ ಹೌದು. ಕಾರಣ ತರ್ಸರ್ ಮರ್ಸರ್ ಪ್ರವಾಸದ ಒಂದು ವರ್ಷದ ನಂತರವೂ ಅದರ ನಡಿಗೆಯ ಅನುಭವ ನಿನ್ನೆಯಷ್ಟೇ ಹೋಗಿದ್ದೆನ್ನಿಸುವಷ್ಟು ಹಸಿರಾಗಿಸಿರು ತ್ತದೆ.

ಮರೆವಿನ ಮೂಲೆಗೆ ಸರಿಯದ ಸಾಹಸಿ ತಾಣಗಳ ಬಕೇಟ್ ಲಿಸ್ಟ್ ಮಾಡುವವರು ಮರೆಯದೆ ಈ ತರ್ಸರ್ ಮರ್ಸರ್ ಜತೆಗಿನ ಇನ್ನಿತರ ಐದು ಸರೋವರಗಳ ಸಾಲು ಸಾಲು ಟ್ರೆಕ್ ಮಾಡಿಕೊಂಡು ಬಿಡಿ. ಕಾರಣ ಪದೇ ಪದೇ ಸಹನೆ ಪರೀಕ್ಷಿಸಿಕೊಳ್ಳುವುದಕ್ಕಿಂತ ಒಮ್ಮೆ ಹೋದಾಗಲೇ ಇದೆಲ್ಲ ಉಮೇದಿ ಮುಗಿಸಿಕೊಳ್ಳು ವುದು ಒಳ್ಳೆಯದು.