Sunday, 22nd September 2024

ಮನೆಗೆ ಬರ್ತಾರೆ ಅಂದ್ರೆ ತಿನ್ನೋಕೇ ಅಂತ ಅರ್ಥನಾ ?

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmai.com

ಮಾತಿಗೆ ಯಾವ ಉಪೇಕ್ಷೆಯೂ ಇಲ್ಲದಾಗ ನಾವು ಹದತಪ್ಪಿ ಮಾತನಾಡಿ ಬಿಡುತ್ತೇವೆ. ಅದರಲ್ಲೂ ನಾನೇನೇ ಮಾತ ನಾಡಿದರೂ ಸುತ್ತಮುತ್ತಲಿದ್ದವರು ನಗುವವರು ಜತೆಗೆ ಇದ್ದಾಗಲೂ ನಾವು ಮಾತಿನ ಹದ ತಪ್ಪುತ್ತೇವೆ.

ಪೇಜಾವರರ ಬಗ್ಗೆ ಅವರಾಡಿದ ಮಾತು ಬಾಯಿ ಜಾರಿ ಬಂದಿದ್ದಲ್ಲ. ಮಂತ್ರಿಗಳ ಗ್ರಾಮವಾಸ್ತವ್ಯದ ಬಗ್ಗೆ ಮಾತನಾಡುವ
ಸಂದರ್ಭದಲ್ಲಿ ಪೇಜಾವರರ ಬಗ್ಗೆ ಅವರಾಡಿದ ಸಂದರ್ಭವನ್ನು ಸೂಕ್ಷ್ಮವಾಗಿಸಿಕೊಳ್ಳಬೇಕು. ದಲಿತರ ಕೇರಿಗೆ ಪೇಜಾವರ ಶ್ರೀಗಳ ಭೇಟಿ ನಾನೊಮ್ಮೆ ಪತ್ರಿಕೆಯಲ್ಲಿ ಓದಿದ್ದೇ ಅಂತ ಮಾತು ಆರಂಭಿಸುವ ಅವರು ತಕ್ಷಣ ಒಂದು ಗ್ರಹಿಕೆಗೆ ಒಳಪಡುತ್ತಾರೆ. ಅದೇ ಗ್ರಹಿಕೆಯಿಂದ ಅಥವಾ ಗ್ರಹಿಕೆಯಲ್ಲಿ ಅವರು ಪೇಜಾವರರು ದಲಿತರ ಕೇರಿಗೆ ಬರಬಹುದು ಅಷ್ಟು ಬಿಟ್ಟರೆ ಅಲ್ಲಿ ಅವರು ದಲಿತರು ಕೊಡುವ ಯಾವ ಮಾಂಸಾಹಾರವನ್ನೂ ತಿನ್ನುವು ದಕ್ಕೆ ಸಾಧ್ಯವಿಲ್ಲ ಎಂಬ ವಿಚಿತ್ರ ತರ್ಕದ ಮಾತುಗಳನ್ನಾಡುತ್ತಾರೆ.

ಇದು ತಪ್ಪು. ಯಾಕೆಂದರೆ, ದಲಿತರ ಮನೆಗೆ ತಾನು ಹೋಗುತ್ತಿರುವುದು ತಿನ್ನುವುದಕ್ಕೇ ಅಂತ ಪೇಜಾವರರು ಎಲ್ಲಿಯೂ ಹೇಳಿಲ್ಲ. ಅಷ್ಟಕ್ಕೂ ದಲಿತರು ಮಾಂಸಾಹಾರವನ್ನು ತಿನ್ನುತ್ತಾರೆ ಎಂಬ ವಿಚಾರ ಪೇಜಾವರರಿಗೆ ಗೊತ್ತಿಲ್ಲದೇನಲ್ಲ! ಆದರೂ ಯತಿ ಧರ್ಮದ ಕಟ್ಟುಪಾಡುಗಳನ್ನು ಬದಿಗಿಟ್ಟು ದಲಿತರ ಮನೆಗಳಿಗೆ ಅವರು ಹೋಗುವುದು ಯಾಕೆಂಬ ಸಾಮಾನ್ಯಪ್ರಜ್ಞೆಯೂ ಅವರಿಗೆ ಇಲ್ಲದೆ ಹೋಯಿತೆ ಅಂತ ಭಾವಿಸಬೇಕಾಗುತ್ತದೆ. ಅಥವಾ ತಕ್ಷಣವೇ ನಾವು ಅವರ ಮಾತನ್ನು ಹೀಗೆ ಗ್ರಹಿಸಬೇಕಾಗುತ್ತದೆ: ಅದೇನೆಂದರೆ, ಯಾರೇ ಆಗಲಿ ಮನೆಗೆ ಬರ್ತಾರೆ ಅಂದರೆ ಉಣ್ಣುವುದಕ್ಕೇ ತಿನ್ನುವುದಕ್ಕೇ ಬರ್ತಾರೆ ಎಂದು ಅವರು ಅರ್ಥೈಸಿ ಕೊಂಡಿದ್ದರೆ ಎಂಬುದು! ಇದು ಹಾಸ್ಯಾಸ್ಪದ.

ಹಾಲು ಕೊಡುವುದಕ್ಕೆ ಒಬ್ಬ ಜಾತಿಯವ ಮನೆಗೊಬ್ಬ ಬರ್ತಾನೆ, ದಿನಪತ್ರಿಕೆ ಹಾಕುವುದಕ್ಕೆ ಇನ್ನೊಬ್ಬ ಜಾತಿಯವ ಬರ್ತಾನೆ, ರಿಪೇರಿಯಂತಲೋ, ಮಾರುವುದಕ್ಕೋ, ಪಾರ್ಸೆಲ್‌ಗೋ, ಲೆಟರಿಗೋ ಅಥವಾ ದಾರಿ ತಪ್ಪಿಯೋ ಯಾವ್ಯಾವುದೋ ಜಾತಿಯವರು ಮನಗೆ ಬರುವುದು ಉಂಟು. ಹೀಗೆ ಅನ್ಯಾನ್ಯ ಕಾರಣಗಳನ್ನು ಇಟ್ಟುಕೊಂಡು ಬಂದವರೆಲ್ಲ ಊಟಕ್ಕೇ ಬರ್ತಾರೆ ಅಂತ ಯೋಚಿಸುವುದೇ ಮೂರ್ಖತನ. ಹಾಗೆ ಯಾವ ಕಾರ್ಯಕಾರಣವೂ ಇಲ್ಲದೆ ಪೇಜಾವರರು ದಲಿತರ ಕೇರಿಗೆ ಹೋದದ್ದಲ್ಲ, ಹೋಗಿಲ್ಲ, ಹೋಗುವುದಲ್ಲ!

ದಾರಿತಪ್ಪಿ ಹೋದವರಲ್ಲ, ದಾರಿಯನ್ನು ಹುಡುಕಿಕೊಂಡು ದಾರಿಮಾಡಿಕೊಂಡು ಹೋದವರು. ಎಲ್ಲರಿಗೂ ಅವರವರದೇ ಕಾರಣವಿದ್ದಂತೆ ಇವರದ್ದೂ ಕಾರಣವಿತ್ತೆಂಬ ಸಾಮಾನ್ಯ ಅರಿವು ಅವರಿಗಿಲ್ಲದೆ ಹೋಯಿತೆ? ಅಷ್ಟಕ್ಕೂ ಹೋಗುವವರಾದರೂ ಎಂಥವರು? ನಮ್ಮ ನಿಮ್ಮಂತೆ ಸಾಮಾನ್ಯ ಜನರೇ? ಹಿರಿಯ ಯತಿಗಳು! ಅಂಥವರ ಬಗ್ಗೆ ಮಾತಾಡುವಾಗ ಮೈಯೆಲ್ಲ ಎಚ್ಚರ ವಾಗಿರಬೇಕು ಎಂಬ ಸಣ್ಣಬುದ್ಧಿಯೂ ಅವರಿಗಿಲ್ಲದೆ ಹೋದದ್ದು ಅತ್ಯಾಶ್ಚರ್ಯ! ಅವರು ಹಾಗೆ ಯೋಚಿಸಿಲ್ಲ ಎಂದಾದರೆ,
ದಲಿತರ ಕೇರಿಗೆ ಹೋಗುವ ಶ್ರೀಗಳು ಮಾಂಸಾಹಾರವನ್ನು ತಿನ್ನಲಾರರು ಅಥವಾ ತಿನ್ನಲು ಸಾಧ್ಯವಿಲ್ಲ ಎಂದು ತರ್ಕಿಸುವುದು ಅಸಭ್ಯ ಲಕ್ಷಣವಾಗುತ್ತದೆ. ಸಂಸ್ಕಾರ ಮತ್ತು ಸಂಸ್ಕೃತಿ ಬಡತನ ಎಂದು ಗ್ರಹಿಸಲ್ಪಡುತ್ತದೆ.

ಅಷ್ಟಕ್ಕೂ ಪೇಜಾವರ ಶ್ರೀಗಳ ವಿಚಾರವೇ ಆಗಲಿ ಅಲ್ಲ ಬೇರೆ ಯಾವುದೇ ಮಠಾಧಿಪತಿಯ ವಿಚಾರವೇ ಆಗಲಿ ವೈಯಕ್ತಿಕವಾದ ವಿಷಯಗಳಲ್ಲಿ ಸಾರ್ವಜನಿಕವಾಗಿ ಮಾತನಾಡುವುದು ಅಥವಾ ಸುಖಾಸುಮ್ಮನೆ ಮೂರನೆಯ ವ್ಯಕ್ತಿಯೊಬ್ಬರ ಬದುಕಿನ ಬಗ್ಗೆ ಒಂದು ರೀತಿಯಲ್ಲಿ ಅಣಕಿಸಿದಂತೆ ಮಾತನಾಡುವುದು ಹಂಸಲೇಖರಿಗಲ್ಲ, ಯಾರಿಗೂ ಶೋಭೆಯಲ್ಲ. ರಾಜಕಾರಣಿಗಳ ಬಗ್ಗೆ
ಮಾತನಾಡುವುದಾದರೆ ಅದಕ್ಕೆ ಬೇರೆಯದೇ ಭಾಷೆಯಿದೆ.

ಅದನ್ನು ಎಲ್ಲಿ ಎಷ್ಟೆಷ್ಟೋ ಸಾಧ್ಯವೋ ಅಲ್ಲಲ್ಲಿ ಪರಸ್ಪರ ರಾಜಕಾರಣಿಗಳು ಅಥವಾ ಅವರ ಬಗ್ಗೆ ಇನ್ನಿತರರು ಅಂಥ ಭಾಷೆ ಯನ್ನು ಬಳಸುತ್ತಲೇ ಇರುತ್ತಾರೆ. ಪತ್ರಿಕೆಯ ತುಂಬಾ ಅಂಥವೇ ಇರುತ್ತವೆ. ಅನಾಗರಿಕತೆ ಅಸಭ್ಯ ಎಂಬುದು ಅಂಥವರಿಗೆಲ್ಲ ಮಾಮೂಲಿ ವಿಚಾರವಾಗಿರುತ್ತದೆ. ಯಾರೋ ದಾರಿಹೋಕನೊಬ್ಬ ಮಾತಾಡಿದರೆ ನಾಯಿ ಬೊಗಳುತ್ತದೆ ಎಂದು ಸುಮ್ಮನಾಗ ಬಹುದು, ಬಿಟ್ಟುಬಿಡಬಹುದು. ಆದರೆ ಮಾತಾಡಿದವರು ದೊಡ್ದವರೇ! ಜನಮಾನ್ಯರೂ ಜನಪ್ರಿಯರೂ ಎಂಬುದು ಸತ್ಯ!

ಸಾತ್ವಿಕ ಸಂಸ್ಕಾರದ ಮನಸ್ಸೊಂದು ಹೀಗೆಲ್ಲ ತಕ್ಷಣಕ್ಕೆ ಅಂದುಬಿಡುವಷ್ಟು ಸಲೀಸಾಗಿ ಮಾತನಾಡಲಾರದು. ಆಯಿತು, ಆಡಿದ್ದು ತಪ್ಪೇ ಎಂದು ಒಪ್ಪಿಕೊಂಡರೂ ಆಡಿದ್ದು ಹಾಗೇ ಇರುತ್ತದೆ. ಅದು ಮರೆತು ಹೋಗಲಾರದು. ಅದರಲ್ಲೂ ಅವರು, ಅವರ ಥರದವರು ಆಡಿದ ಇಂಥ ಮಾತುಗಳು ಬೇಡವೆಂದರೂ ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತದೆ. ಅಷ್ಟಕ್ಕೂ ವೇದಿಕೆಯಲ್ಲಿ ಆ ವಿಚಾರ ಮಾತನಾಡುವ ಅನಿವಾರ್ಯತೆ ಅವರಿಗೆ ಏನಿತ್ತೋ? ಸಂಬಂಧವೇ ಇಲ್ಲದ್ದನ್ನು ಎಳೆದು ತಂದು ಮಾತನಾಡುವ ಉಸಾಬರಿ ಅಥವಾ ಅಧಿಕ ಪ್ರಸಂಗತನವೇಕೆ ಬೇಕಿತ್ತೋ? ಹೀಗೆ ಆಡಿದರೆ ತಪ್ಪಾಗಲಿಕ್ಕಿಲ್ಲವೇ ಎಂದು ಅವರು ಆಲೋಚಿಸಲಿಲ್ಲವೆ?
ಅದರಲ್ಲೂ ಮಜಾ ಏನೆಂದರೆ, ಪತ್ರಿಕೆಯಲ್ಲಿ ಓದಿದಾಗ ಅವರಿಗೆ ಅನಿಸಿದ್ದು ಹಾಗೆ ಅಂತ ಅವರೇ ಹೇಳಿಕೊಂಡು ಇಂಥ ಆಲೋಚನೆಗಳು ನನ್ನಲ್ಲಿ ಹುಟ್ಟಿಕೊಳ್ಳುತ್ತವೆ ಅಂತ ಹೇಳಿಕೊಂಡದ್ದು! ಯಾರೋ ದಾರಿಹೋಕನೊಬ್ಬ ಅಥವಾ ತಲೆ ಹಿಡುಕ ನೊಬ್ಬ ಅಲ್ಲವಲ್ಲ ಅವರು!

ಅಂಥ ಸಂದರ್ಭ-ಸನ್ನಿವೇಶಗಳೇ ಹಾಗೇ! ತುಂಬಾ ಅಪಾಯ. ನನ್ನ ಮಾತಿಗೆ ಯಾವ ಉಪೇಕ್ಷೆಯೂ ಇಲ್ಲದಾಗ ಅಥವಾ ವಿರೋಧಿ ಸುವವರು ಇಲ್ಲದಾಗ ಆ ಸನ್ನಿವೇಶದಲ್ಲಿ ನಾವು ಹದತಪ್ಪಿ ಮಾತನಾಡಿ ಬಿಡುತ್ತೇವೆ. ಅದರಲ್ಲೂ ನಾನೇನೇ ಮಾತನಾಡಿ ದರೂ ಸುತ್ತಮುತ್ತಲಿದ್ದವರು ನಗುವವರು, ಅಥವಾ ನನ್ನ ಮನಸ್ಥಿತಿಯನ್ನು ಒಪ್ಪುವವರು ಅಥವಾ ಅಂಥವರು ನನ್ನ ಜತೆಗೆ ಇzಗಲೂ ನಾವು ಮಾತಿನ ಹದ ತಪ್ಪುತ್ತೇವೆ. ಒಬ್ಬ ತೀರಾ ಸಾಮಾನ್ಯ ಅಖಂಡ ಭ್ರಷ್ಟ ರಾಜಕಾರಣಿಯೊಬ್ಬ ಮಾತನಾಡಿದರೆ ಮುಖಾಭಿವ್ಯಕ್ತಿ ಹೇಗಿರುತ್ತದೋ ಅಂಥ ಮುಖಾಭಿವ್ಯಕ್ತಿ ಅವರ ಮುಖದಲ್ಲಿತ್ತು.

ಅಣುಕು ಪರಿಣಾಮಕಾರಿಯಾಗಿಯೇ ಇತ್ತು! ಅರೆ, ಇವರು ಅವರೇನಾ! ಅವರು ಹೀಗೂ ಮಾತಾಡುತ್ತಾರಾ ಎಂಬ ಅಚ್ಚರಿ ಯಾರಿಗೆ ತಾನೆ ಆಗಲಿಲ್ಲ ಹೇಳಿ? ಏನೋ ಆಗಬಾರದ್ದು ಅನ್ನಬಾರದ್ದು ಅಂದು ಈಗವರು ತಪ್ಪು ಅಂತ ಅರಿಕೆ ಮಾಡಿಕೊಂಡಿದ್ದಾರೆ. ಕೆಟ್ಟ ಮೇಲೆ ಬುದ್ಧಿ ಬರುವುದು ಅಲ್ಲ, ಬುದ್ಧಿ ಬಂದಮೇಲೆ ಕೆಡುವುದು ಅಂದರೆ ಇದೇ ಇರಬೇಕು! ವೇದಿಕೆ ಸಿಕ್ಕಿದೆ ಅಂತ ಬಾಯಿಗೆ ಬಂದಂತೆ ಮಾತಾಡುವವರಿಗೆ ಅಥವಾ ಹರಕು ಬಾಯಿಯವರಿಗೆ ಈ ಘಟನೆ ಪಾಠವಾಗಿದ್ದಂತೂ ಸುಳ್ಳಲ್ಲ!

ಇಂಥದ್ದೆಲ್ಲ ಅಷ್ಟಷ್ಟು ದಿನಕ್ಕೆ ಆಗುತ್ತಲೇ ಇರಬೇಕು, ಇಲ್ಲ ಅಂದರೆ ಈ ಜನ ಎಚ್ಚರಗೊಳ್ಳುವುದಿಲ್ಲ, ಸಮಾಜದಲ್ಲಿ ಅಶಾಂತಿ ನೆಲೆಸುವುದಿಲ್ಲ ಎಂಬ ಮಾತಿಗೆ ಜೀವ ಬಂದಂತಾಯಿತು! ಪುಣ್ಯ ಏನೆಂದರೆ, ಪೇಜಾವರರು ದಲಿತರ ಮನೆಗೆ ಹೋಗೋಕಾಗುತ್ತೆ. ಆದ್ರೆ, ಅವರು ಕೊಡೋ ಮಾಂಸ ತಿನ್ನೋಕಾಗುತ್ತಾ ಅಂತ ಅವರು ಕೇಳಿದ್ದು ಒಳ್ಳೆಯದಾಯಿತು! ಈಗ ಅವರಾಡಿದ ಮಾತನ್ನು ವಿರೋಧಿಸುವ ಮತ್ತು ಪರ ವಾದಿಸುವ ವಾದಗಳು, ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ನಡೆಯತೊಡಗಿವೆ. ಇದೆಲ್ಲ ಸಾಮಾನ್ಯವಾದ ವಿಚಾರ.

ಯಾಕೆಂದರೆ, ಇಂಥ ಅಸಂಬದ್ಧ ಪ್ರಲಾಪಗಳನ್ನು ಕೊಟ್ಟವರು ಖಂಡತುಂಡಾಗಿ ಸಾರ್ವಜನಿಕ ವಿರೋಧಕ್ಕೆ ಒಳಗಾದಾಗ ಅವರ ಪರ ನಿಂತು ಮಾತನಾಡುವವರು ಇದ್ದೇ ಇರುತ್ತಾರೆ. ಅಚ್ಚರಿಯೇನಿಲ್ಲ. ಹಾಗೆ ದುರ್ಬುದ್ಧಿಯಿಂದ ಅಥವಾ ಬುದ್ಧಿಯಿಲ್ಲದೆ ಪರ ವಹಿಸಿ ಮಾತನಾಡುವುದು ಒಂದು ಬಗೆಯಲ್ಲಿ ದಾರಿತಪ್ಪಿದ ವಿರೋಧವೇ ಆಗಿರುತ್ತದೆ. ಇಂಥ ವಿರೋಧಗಳೇ ಸಮಾಜದಲ್ಲಿ ಶಾಂತಿ ಕೆಡಿಸುವುದು!

ತಮ್ಮ ವಿರೋಧಕ್ಕೆ ಎರವಾಗುವ ಹಳವಂಡಗಳನ್ನು ಹುಡುಕಿಕೊಂಡು ವಿರೋಧದ ವಿರುದ್ಧ ಅಂಥವರು ಮಾತನಾಡುತ್ತಾರೆ, ಈಗಲೂ ಅವರ ಪರ ಮಾತನಾಡಲು ಸುರುವಿಟ್ಟುಕೊಂಡಿದ್ದಾರೆ. ಏನೋನೋ ಸರಕುಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದಾರೆ. ಅಂಧಾಭಿಮಾನವೋ,  ಅವರ ಪರ ನಿಲ್ಲಬೇಕು ಎಂಬ ಹಠವೋ, ತಿಕ್ಕಲುತನವೋ, ಅಥವಾ ವೈದಿಕ ಪ್ರಜ್ಞೆಯ ವಿರೋಧವೋ ಗೊತ್ತಾಗುವುದಿಲ್ಲ. ಅಥವಾ ವಾಸ್ತವದಿಂದ ಪಲಾಯನವಾಗುವುದಕ್ಕೆ ಕಂಡುಕೊಂಡ ನರಿಜಾಣ್ಮೆಯೋ? ಅಥವಾ  ದಾರಿ ತಪ್ಪಿಸು ವುದಕ್ಕೋ? ಎಲ್ಲರಿಗೂ ಅರಿವಾಗಬೇಕಾದ ಸತ್ಯವೇನೆಂದರೆ, ಅವರಾಡಿದ್ದರಲ್ಲಿ ತಪ್ಪೇನಿದೆ ಎಂದು ಅವರ ಪರ ನಿಂತು ವಿತಂಡ ವಾಗಿ ವಾದಿಸುವವರಲ್ಲಿ ವಾದಿಸಲು ಸಾಧ್ಯವೇ ಇಲ್ಲ ಎಂಬುದು ದೊಡ್ಡ ಸತ್ಯ ಎಂಬುದು!

ಕೊನೆಯ ಮಾತು

ತಾನಾಡಿದ ಮಾತುಗಳ ಬಗ್ಗೆ ಅವರು ತಪ್ಪಾಯಿತೆಂದು ಸಾರ್ವಜನಿಕವಾಗಿ ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರೆ. ಆದರೆ, ಅವರ ಪರನಿಂತು ವಾದಿಸುವವರಿಗೆ ಪ್ರಾಯಶ್ಚಿತ್ತದ ಪ್ರಜ್ಞೆ ಹುಟ್ಟಿದಂತಿಲ್ಲ! ಪ್ರಾಯಃ ಹುಟ್ಟಲಾರದೇನೋ!