Sunday, 22nd September 2024

ರೂಪಕವೆಂಬ ಹೊದಿಕೆಯಡಿ ರೇಪ್ !

ರಾವ್ ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ವಿಷಜಂತುಗಳಿಗೆ ಸ್ವಾತಂತ್ರ್ಯ ಹೋರಾಟಗಾರನ ಜಾತಿ ಮುಖ್ಯವಾಗುತ್ತದೆ, ಅವನ ಪರಾಕ್ರಮ-ತ್ಯಾಗಗಳಲ್ಲ. ಭಾರತವನ್ನು ಅವ್ಯಾಹತವಾಗಿ ಕೊಳ್ಳೆ ಹೊಡೆಯಲು ಬ್ರಿಟಿಷರು ರೂಪಿಸಿದ ಅನೇಕ ಷಡ್ಯಂತರಗಳಲ್ಲಿ ಜಾತೀ ಬೀಜದ ಬಿತ್ತನೆ ಪ್ರಮುಖವಾದದ್ದು.

ಮನುಷ್ಯನನ್ನು ಮೃಗವನ್ನಾಗಿಸುವ ಪ್ರಕ್ರಿಯೆಗೆ ಬಲಾತ್ಕಾರಕ್ಕಿಂತ ಬೇರೊಂದು ಉದಾಹರಣೆ ಸಿಗದು. ವಿವಿಧ ಸಂದರ್ಭಗಳಲ್ಲಿ ಮನುಷ್ಯನೆ ದುರಿಸುವ ಅನೇಕ ಅಸಹಾಯಕತೆಯ ಕ್ಷಣಗಳು ಸಂತ್ರಸ್ತೆಯ ಅನುಭವದಂತೆ ಇರುತ್ತದೆ. ದೈತ್ಯ (ಅನೈತಿಕ) ಬಲದ ಉಗಮ ಶಾರೀರಿಕವಷ್ಟೇ ಆಗಿರುವುದಿಲ್ಲ. ಎಲ್ಲದಕ್ಕೂ ಮೊದಲು ಪತನವಾಗುವುದು ಬಲಾತ್ಕಾರಿಯ ವಿವೇಕ. ವಿವೇಕವನ್ನು ಕಳಚುವುದರಿಂದ ದೊರಕುವ ದುಷ್ಟ ಶಕ್ತಿ ಅವನ ಕಾಮಾವೇಶಕ್ಕೆ ಇಂಬು ಕೊಡುತ್ತದೆ.

ಪ್ರಜಾಪ್ರಭುತ್ವದ ಛದ್ಮವೇಷ ತೊಟ್ಟ ವ್ಯವಸ್ಥೆಯಲ್ಲಿ ರೂಪಕದ ರೂಪ ಪಡೆದ ಸರ್ವೇ ಸಾಧಾರಣವಾಗಿ ಬಿಟ್ಟಿರುವ ರೇಪ್‌ಗಳ ಹಿಂದೆ ಮತದ ದೈತ್ಯತೆ ಕೆಲಸ ಮಾಡುತ್ತದೆ, ಜಾತಿಯ ಪ್ರಾಬಲ್ಯ ಇದ್ದೇ ಇರುತ್ತದೆ, ದುರುದ್ದೇಶಪೂರಿತ ಸಾಂಕ ಅಟ್ಟಹಾಸ ಸೂತ್ರ ಹಿಡಿದಿರುತ್ತದೆ. ಸಡಿಲಗೊಳಿಸಿಲಿಕ್ಕಾಗಿಯೇ ಇರುವ ಕಾನೂನು, ಗಾಳಿಗೆ ತೂರಲಿಕ್ಕೇ ವಿರಚಿತವಾದ ನಿಯಮಗಳು, ತಿರುಚಲಿಕ್ಕಾಗಿಯೇ ಇರುವ ನಿಯಮಾವಳಿ, ವಿಕೃತಗೊಳಿಸಲಿಕ್ಕಾಗಿಯೇ ನಿರ್ಮಿಸ ಲಾದ ಪ್ರಜಾಸತ್ತೆಯ ಅಂಗಗಳು. ಪಶುತ್ವವನ್ನು ಮೆರೆಯುವ ಬಲಾಢ್ಯರಲ್ಲಿ ಅಸ್ಮಿತೆಯ ಭಿಕ್ಷೆ ಬೇಡುವ ಸಂತ್ರಸ್ತರ ಆಕ್ರಂದನ ಅರಣ್ಯರೋದನವೆನಿಸುವಷ್ಟು ಕಾಡು ಉಳಿದುಕೊಂಡಿವೆ.

ಅರಣ್ಯರೋದನ ಪ್ರತಿಬಿಂಬಿಸುವ ಒಂದು ಮಾಧ್ಯಮ ಕ್ಲಬ್‌ಹೌಸ್. ಅಜೆಂಡಾಭರಿತ ಮುಖ್ಯವಾಹಿನಿ ಮಾಧ್ಯಮವೂ ಕಪಿಮುಷ್ಟಿಯಲ್ಲಿರುವುದು ಸರ್ವವೇದ್ಯ. ಅಂತಹ ವಿಷಮ ಸನ್ನಿವೇಶದಲ್ಲಿ ಕ್ಲಬ್‌ಹೌಸ್ ಒಂದಷ್ಟು ಪ್ರeವಂತರಿಗೆ ದನಿಯಾಗಿದೆಯಾದರೂ ಅದಿನ್ನೂ ಪ್ರಬಲಶಕ್ತಿಯಾಗಿ ಹೊರ ಹೊಮ್ಮಿಲ್ಲ. ತಾಂತ್ರಿಕ ಕಾರಣಗಳೂ, ಅದರ ಶೈಶವಾವಸ್ಥೆಯೂ ಅದನ್ನಿನ್ನೂ ಸಾರ್ವತ್ರಿಕಗೊಳಿಸಿಲ್ಲ. (ಟೆಕ್ನಿಕಲ್ ರಂಗದಲ್ಲಿಯೇ ಇದ್ದು, ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ದೊಡ್ಡ ಹುದ್ದೆಯಲ್ಲಿರುವ ಪರಿಚಿತರೊಬ್ಬರಿಗೆ ಕ್ಲಬ್‌ಹೌಸ್ ಬಗ್ಗೆ ಮೊನ್ನೆ ಮೊನ್ನೆಯವರೆಗೂ ತಿಳಿದಿರ ಲಿಲ್ಲ!) ಅಂತಹ ಬಲಯುತವಲ್ಲದ ವೇದಿಕೆಯಲ್ಲಿ ಇತ್ತೀಚೆಗೆ ಬ್ರಾಹ್ಮಣರ ಕುರಿತ ಇಂಗ್ಲಿಷ್ ಸಂವಾದವೊಂದು ನಡೆದಿತ್ತು.

ವಿದ್ವತ್ಪೂರ್ಣವಾಗಿ ತಮ್ಮ ವಿಚಾರವನ್ನು ಮುಂದಿಟ್ಟವರಲ್ಲಿ ತಾವು ಬ್ರಾಹ್ಮಣರಲ್ಲ ಎಂದು ಮಂಡನೆಗೆ ಮುಂಚೆಯೇ ಡಿಸ್‌ಕ್ಲೇಮರ್ ಮೂಲಕ ಅರುಹಿದ ಭಾಷಣ ಗಾರ್ತಿಯೊಬ್ಬರಿದ್ದರು. ಯೆಹೂದ್ಯರ ನರಮೇಧಕ್ಕೆ ಮುಂಚೆ ಅವರನ್ನು ನಗಣ್ಯಗೊಳಿಸುವ ನಿಟ್ಟಿನಲ್ಲಿ ಹೇಗೆ ವ್ಯವಸ್ಥಿತವಾಗಿ ಅವಮಾನಗೊಳಿಸುತ್ತಲೇ ಹೋಗ ಲಾಯಿತು ಎಂಬ ಐತಿಹಾಸಿಕ ದುರಂತವನ್ನು ಉಖಿಸಿದರು. ಭಾರತದಲ್ಲಿಂದು ಬ್ರಾಹ್ಮಣರನ್ನು ಜರೆಯಲಾಗುತ್ತಿರುವ ಪ್ರವೃತ್ತಿಯ ಹಿಂದೆ ಅಂಥ ಹುನ್ನಾರವಿದೆ ಎಂಬ ಆತಂಕ ವ್ಯಕ್ತಪಡಿಸಿದರು.

ವ್ಯಾಪಕವಾಗುತ್ತಿರುವ ಬ್ರಾಹ್ಮಣ ಸಮುದಾಯದ ದೈನಂದಿನ ನಿಂದನೆಯ ಗಮ್ಯ ಬ್ರಾಹ್ಮಣರ ಸಂಹಾರದ ಕೊನೆಗೊಳ್ಳಬೇಕಿಲ್ಲ. ಅವರ ಹಿತಾಸಕ್ತಿಯ ಬಲಿದಾನ ವಾದರೆ ಸಾಕಲ್ಲವೇ? ಕ್ಲಬ್‌ಹೌಸ್‌ನಲ್ಲಿ ಮಹಿಳೆ ಮಂಡಿಸಿದ ವಿಚಾರ ನನ್ನನ್ನು ದಿಗ್ಭ್ರಮೆಗೊಳಿಸಲಿಲ್ಲ. ತಣ್ಣಗೇ ಇದ್ದೀನಿ. ಆದರೆ, ಮುಂದೊಂದು ದಿನ ಪ್ರೊಫೆಸರ್ ಸ್ಥಾನವನ್ನು ಅಲಂಕರಿಸಿದ, ನನಗೆ ಒಂದೆರಡು ಭೇಟಿಯ ಪರಿಚಯವಿದ್ದ ಒಬ್ಬ ವ್ಯಕ್ತಿ, ತಾನು ಒಬ್ಬ ಬ್ರಾಹ್ಮಣ ಹುಡುಗಿಯನ್ನು ಹಠ- ಸಂಭೋಗಿಸಿದ್ದೇನೆಂದು ನನ್ನ ಬಳಿ ಹೇಳಿಕೊಂಡಿದ್ದು ಮತ್ತೊಮ್ಮೆ ಮನಸ್ಸನ್ನಾವರಿಸಿತು. ಹಿಮಾಲಯದ ಉತ್ತುಂಗಕ್ಕೇರಿ ಪತಾಕೆಯನ್ನು ನೆಟ್ಟ ತೇನ್ಸಿಂಗ್ ವಿಜಯೋತ್ಸಾಹ ಆತನಲ್ಲಿದ್ದಿರಬಹುದು, ತಿಳಿದಿಲ್ಲ. ಆದರೆ ಘನಕಾರ್ಯವನ್ನು ನೆರವೇರಿಸಿದ್ದೇನೆಂಬ ಸ್ವಶ್ಲಾಘನೆಯ ದನಿ ಅವನಲ್ಲಿತ್ತು. ನಾನು ಅಕ್ರಮವಾಗಿ ಸಂಪಾದಿಸಿಲ್ಲ ವೆನ್ನುವುದನ್ನು ಬಿಟ್ಟರೆ ಬೇರಾವ ಬ್ರಾಹ್ಮಣ ಆಚಾರವಿಚಾರಗಳನ್ನೂ ನಾನು ಮೈಗೂಡಿಸಿಗೊಂಡಿಲ್ಲ.

ಹಾಗಿದ್ದೂ ಆ ಕ್ಷುದ್ರಜೀವಿ ನನ್ನ ಬಳಿಯೇಕೆ ತನ್ನ ಪುರುಷರಾಹಿತ್ಯ ಅವನತಿಯನ್ನು ಪ್ರಕಟಗೊಳಿಸಿದ, ಗೊತ್ತಿಲ್ಲ. ನನಗೆ ಘಾಸಿಮಾಡುವ ಉದ್ದೇಶವಿರಬಹುದು. ಹೌದು, ಅವನು ಹೇಳಿದ್ದು ನನಗೆ ಘಾಸಿ ಮಾಡಿದೆ. ಅವನು ದಲಿತ ಹುಡುಗಿಯ ಮೇಲೆ ಆಕ್ರಮಣ ಮಾಡಿದ್ದರೂ ಅದು ಅಷ್ಟೇ ಅಕ್ಷಮ್ಯ. (ಆದರೆ, ದಲಿತ ಹುಡುಗಿಯ ಮೇಲೆಸಗಿದ ಅತ್ಯಾಚಾರದಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗುವ ಸಾಧ್ಯತೆಯಾದರೂ ಇದೆ, ಆದರೆ ಸ್ವಘೋಷಿತ ಅಪರಾಧಿಯೊಬ್ಬನಿಗೆ ಹೀನಾಯ ಅಪರಾಧವೆಸಗಿದ ಹತ್ತಾರು ವರ್ಷಗಳ ನಂತರವೂ ಶಿಕ್ಷೆಯಿರಲಿ, ಅತ್ಯಾಚಾರ ಪ್ರಕರಣವೇ ದಾಖಲಾಗಿಲ್ಲದಿರುವುದು ರಕ್ತಕುದಿಸುವ ದುರಂತ).

ಅತ್ಯಾಚಾರಕ್ಕಿರುವ ಹಲವು ಕಾರಣಗಳಲ್ಲಿ ನಮ್ಮಲ್ಲಿ ವ್ಯಾಪಕವಾಗಿರುವ ಊಳಿಗಮಾನ್ಯ ಪದ್ಧತಿಯೂ ಕಾರಣವೆಂಬುದು ಬಹಳ ಹಿಂದೆಯೇ ಮನದಟ್ಟಾಯಿತು. ಊಳಿಗಮಾನ್ಯ ಮನಸ್ಥಿತಿಯುಳ್ಳವರು ನಮ್ಮ ವಿಶ್ವವಿದ್ಯಾಲಯಗಳಲ್ಲೂ ಬೇರುಬಿಟ್ಟಿದ್ದು ಅದರ ಅಭಿವ್ಯಕ್ತಿಗೆ ಹೆಣ್ಣುಗಳನ್ನು ಬಳಸಿಕೊಳ್ಳುವ ವಿಚಾರ ನನಗೆ ಅರಿವಾ ದದ್ದು ತಡವಾಗಿ. ಅದಕ್ಕೆ ಜಾತಿಯೂ ಬೆರಕೆಯಾಗಿ ಶೈಕ್ಷಣಿಕ ಸಂಸ್ಥೆಗಳು ಶೈಕ್ಷಣಿಕ ಸಂಸ್ಥೆಗಳಾಗಿ ಉಳಿದಿಲ್ಲ.

ಹೀನಸುಳಿಯ ಒಬ್ಬ ವ್ಯಕ್ತಿ – ಇದು ಕೇವಲ ಒಬ್ಬ ಚಾರಿತ್ರ್ಯಹೀನನ ಮಾತಲ್ಲ – ನಮ್ಮೆಲ್ಲರ ದುಡಿಮೆಯ ಹಣದಿಂದ ನಡೆಸಲ್ಪಡುವ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಮಟ್ಟಕ್ಕೆ ಮೇಲೇರಿದ್ದು, ಜಾತ್ಯತೀತವಾಗಿ, ಎಲ್ಲರ ಪ್ರeಯನ್ನು ಬಡಿದೆಬ್ಬಿಸಬೇಕು. ಆತನಲ್ಲಡಗಿರುವ ದುಷ್ಟಶಕ್ತಿಯ ಪ್ರಯೋಗ ಮತ್ತಾರ ಮೇಲೂ ಆಗಿಲ್ಲವೆಂಬ ಖಾತರಿ ನನಗಂತೂ ಇಲ್ಲ. ಮೇಲ್ವರ್ಗದ ಹೆಣ್ಣುಮಕ್ಕಳನ್ನು ಭೋಗಿಸಿ ತನ್ನ ಕಾಮುತೆಯನ್ನು ಲಿಖಿತವಾಗಿ ದಾಖಲಿಸುತ್ತಿದ್ದ ಒಬ್ಬ ಪಶುರೂಪೀಆಧುನಿಕ(!) ಕನ್ನಡ ಲೇಖಕನ ವಿಕೃತಿಯ ಕುರಿತು ಅವನದ್ದೇ ಬಳಗದ ವಕ್ತಾರರೊಬ್ಬರಿಂದ ಕೇಳಿ ತಿಳಿದಿದ್ದೇನೆ. ತತ್ಕಾರಣ, ಅಂದು ಆ ವ್ಯಕ್ತಿ ತನ್ನ ಲಂಪಟಹಿರಿಮೆಯ ಬಗ್ಗೆ ಹೇಳಿದ್ದು
ಬಡಾಯಿಗಾಗಿ ಎಂದು ನನಗನ್ನಿಸುವುದಿಲ್ಲ.

ಜಾತಿ ವೈಷಮ್ಯ ಇಷ್ಟು ಆಳವೂ, ವ್ಯಾಪಕವೂ ಆಗಿರುವ ಸನ್ನಿವೇಶದಲ್ಲಿ ದಿವಂಗತ ಶ್ರೀ ವಿಶ್ವೇಶ ತೀರ್ಥ ಸ್ವಾಮಿಗಳನ್ನು ಮಾತಿನಿಂದ ಅವಮಾನಗೊಳಿಸಲು ಯತ್ನಿಸಿದ್ದು ಆಶ್ಚರ್ಯವೇನಲ್ಲ. ಆಚಾರಗೆಡುವುದೇ ವಿಚಾರಸ್ವಾತಂತ್ರ್ಯ ಎಂದು ನಾನೂ ನಂಬಿದ್ದ ದಿನಗಳಲ್ಲಿ ಸ್ವಾಮಿಗಳನ್ನು ಪಾದಪೂಜೆಗಾಗಿ ಮನೆಗೆ ಕರೆಸ ಲಾಗಿತ್ತು. ಅಂತಹ ಸಂತರ ಹಿರಿಮೆ-ಸಾಧನೆಗಳನ್ನು ತಿಳಿಯದೆ ಅವರು ಬಂದಾಗ ನಾನು ಮನೆಯಲ್ಲಿರಲಿಲ್ಲ. ಪೇಜಾವರ ಶ್ರೀಗಳ ವಿರುದ್ಧ ದುಷ್ಟ ಎಡಪಂಥೀಯರು ಅಂದಿನಿಂದಲೂ ನಡೆಸಿಕೊಂಡು ಬಂದ ಪ್ರೊಪಗ್ಯಾನ್‌ಡಗೆ ನಾನೂ ಬಲಿಯಾಗಿದ್ದೆ. ಪುಣ್ಯಕ್ಕೆ, ಅವರ ಅಂತ್ಯಕ್ಕೆ ಮುನ್ನ ಅವರನ್ನು ಭೇಟಿ ಮಾಡುವ ಸುವರ್ಣಾವ ಕಾಶವನ್ನು ನಾನೇ ಕಲ್ಪಿಸಿಕೊಂಡು ಅವರ ಪಾದಗಳಿಗೆ ಎರಗಿದ್ದೆ. ಅವರನ್ನು ನಿಂದಿಸಿದವರಾರೂ ಅವರ ಪಾದಧೂಳಿಗೂ ಸಮರಲ್ಲ ಎಂಬುದು ಖಚಿತವಾಗಿತ್ತು.

ನಾಲ್ಕಕ್ಷರ ಕಲಿತ ಯಾವನೇ ಪೇಜಾವರರನ್ನು ಹೀಗಳೆಯಬಹುದೆಂಬ ನಂಬಿಕೆ ಎಡಪಂಥೀಯರಲ್ಲಿ ಬೆಳೆಯಿತು. ನಾಲ್ಕಕ್ಷರ ಬರೆಯಲು ಬಾರದವರೂ ಅವರನ್ನು ಟೀಕಿಸಬಹುದೆಂಬುದನ್ನು ಲಂಕೇಶ್ ಪುತ್ರಿ ಸಾಬೀತು ಮಾಡಿದರು. ಬ್ರಾಹ್ಮಣರನ್ನು ಬೈದು ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿಕೊಳ್ಳುವುದು ಹಳೆಯ ಫಾರ್ಮುಲಾ ಎಂಬುದರ ಅರಿವು ಗೌರಿ ಲಂಕೇಶ್‌ಗೆ ಕೊನೆಯವರೆವಿಗೂ ಬರಲೇ ಇಲ್ಲ. ಆ ಫಾರ್ಮುಲಾ ಬಿಟ್ಟು ಬೇರೊಂದನ್ನು ನೀಡಲು ಆಕೆಗೆ ಸಾಮರ್ಥ್ಯವಿರಲಿಲ್ಲ. ಆಕೆ ಕಾರುತ್ತಿದ್ದ ವಿಷಕಾರಿ ಫೇಸ್‌ಬುಕ್ ಪೋಸ್ಟ್‌ಗಳಿಗೆ ಸಿಗುತ್ತಿದ್ದ ಲೈಕ್‌ಗಳು ಎರಡಂಕೆಯನ್ನೂ ಮೀರುತ್ತಿದ್ದುದು ಅಪರೂಪ.

ಪೇಜಾವರರಿರಲಿ, ಭೈರಪ್ಪನವರಿರಲಿ, ನಾರಾಯಣ ಮೂರ್ತಿಯಿರಲಿ – ಅವರೆಲ್ಲರನ್ನೂ ಜಾತಿಯ ಪ್ರತಿನಿಧಿಗಳನ್ನಾಗಿ ನೋಡುತ್ತಿದ್ದ ಗೌರಿಯ ದುಃಖ ಎಲ್ಲಿಯವರೆ ಗೆಂದರೆ ಒಮ್ಮೆ ಬಿಲ್ ಗೇಟ್ಸ್‌ನ ಐಶ್ವರ್ಯದ ಮುಂದೆ ನಾರಾಯಣ ಮೂರ್ತಿ ಕಡುಬಡವರಾಗಿ ಕಾಣುತ್ತಾರೆ ಎಂದು ಬರೆದಿದ್ದರು. ಮೂರ್ತಿ ಅದೆಂದು ಆಕೆಯ ಮುಂದೆ ತಮ್ಮ ಐಶ್ವರ್ಯದ ಪ್ರದರ್ಶನ ಮಾಡಲು ಮುಂದಾಗಿದ್ದರೋ ಕಾಣೆ.

ನಾನು ಇಂತಹ ಅಯೋಗ್ಯ ಪತ್ರಿಕೆಗಳನ್ನು ಓದಲು ನಿಲ್ಲಿಸಿ ದಶಕವೇ ಆಯ್ತು. ಅಪರೂಪಕ್ಕೆ ಓದಿದ ಒಂದೇ ಒಂದು ಆರೋಗ್ಯವಂತ ಲೇಖನ ರವೀಂದ್ರ ರೇಶ್ಮೆ ಎಂಬ ಲಂಕೇಶ್ ಪರಿವಾರದ ಲೇಖಕರಿಂದ ಬರೆಯಲ್ಪಟ್ಟಿತ್ತು. ನಾರಾಯಣ ಮೂರ್ತಿಯವರನ್ನು ಕುರಿತಾದ ಆ ಲೇಖನದಲ್ಲಿ, ಬ್ರಾಹ್ಮಣರ ಮನೋಸ್ಥೈರ್ಯವನ್ನು ಮೆಚ್ಚಿ ಬರೆದಿದ್ದರು. ಲೇಖನ ನನಗೆ ಇಷ್ಟವಾಗಿದ್ದು ಬ್ರಾಹ್ಮಣರನ್ನು ಹೊಗಳಿದ್ದಕ್ಕಲ್ಲ, ವಸ್ತುನಿಷ್ಠವಾಗಿ ಬರೆದಿದ್ದಕ್ಕೆ.

ಇದು ದಲಿತ ಮತ್ತು ಇತರೆ ಹಿಂದುಳಿದ ಜಾತಿಗಳ ಯುವಜನಾಂಗದಲ್ಲೂ ಸ್ಪೂರ್ತಿ ತುಂಬಿದ್ದರೆ ಒಳ್ಳೆಯದು. ಮೂರು ತಿಂಗಳ ಕೆಳಗೆ ಕ್ಲಬ್‌ಹೌಸ್‌ನ ಮತ್ತೊಂದು ಚರ್ಚೆ ದಲಿತರಲ್ಲಿ ಉದ್ಯಮಶೀಲತೆ ಕುರಿತಾದದ್ದು. ಅದರಲ್ಲಿ, ಬ್ರಾಹ್ಮಣ ಸಮುದಾಯದ ಒಬ್ಬರೂ ಪಾಲ್ಗೊಂಡು ಉತ್ತಮ ಸಲಹೆಗಳನ್ನು ನೀಡಿದರು. ಖುಷಿ ಯಾಯಿತು. ಅತ್ಯಂತ ಸರಳವಾದ ಸತ್ಯವನ್ನು ಎಲ್ಲ ಸಮುದಾಯದವರಿಗೂ ಮತ್ತೊಮ್ಮೆ ತಿಳಿಪಡಿಸಲು ಸೂಕ್ತ ಸಂದರ್ಭವನ್ನು ಗಂಗರಾಜು (ಹಂಸಲೇಖ)
ಒದಗಿಸಿಕೊಟ್ಟಿದ್ದಾರೆ. ಯಾವ ದುಷ್ಟ ಶಕ್ತಿಯಾಗಲಿ, ದುಷ್ಟ ಶಕ್ತಿಗಳಾಗಲಿ ಬ್ರಾಹ್ಮಣರದ್ದಷ್ಟೇ ಅಲ್ಲ, ಯಾವುದೇ ಸಮುದಾಯದ ಔನ್ನತ್ಯವನ್ನೂ, ಬೆಳವಣಿಗೆಯನ್ನೂ ತಡೆಯಲಾಗುವುದಿಲ್ಲ. ಕುತಂತ್ರಗಳನ್ನು ಬಳಸಿ, ದುರಾಕ್ರಮಣದಿಂದ ಗಳಿಸಿದ ಶಕ್ತಿಯುತ ಸ್ಥಾನದ ಪ್ರಭಾವದಿಂದ ಸತ್ಕಾರ್ಯಗಳಿಗೆ ಒಂದಷ್ಟು ತಡೆಯೊಡ್ಡ ಬಹುದು. ತಡೆಗೋಡೆಯನ್ನು ತೆರೆಯಲು ಒಂದಷ್ಟು ಪೀಕಿಸಿ ಹಣವನ್ನೂ ಶೇಖರಿಸಬಹುದು.

ಆದರೆ, ಅದರಿಂದ ದುಷ್ಟರ ಏಳಿಗೆಯಂತೂ ಸಾಧ್ಯವಿಲ್ಲ. ಬ್ರಾಹ್ಮಣರು ನಂಬುವ, ನಂಬುವ ಕಾರಣಕ್ಕೆ ಹೆಚ್ಚಿನ ಬ್ರಾಹ್ಮಣರು ಪಾಲಿಸುವ, ಕರ್ಮ ಸಿದ್ಧಾಂತದಿಂದ ಯಾರನ್ನೂ ಹೆದರಿಸಹೊರಟಿಲ್ಲ. ಬ್ರಾಹ್ಮಣ ಹುಡುಗಿಯನ್ನು ಕೆಡಿಸಿದ್ದೇ ತನ್ನ ಹೆಗ್ಗಳಿಕೆಯೆಂದು ಹೇಳುವಷ್ಟು ಒಬ್ಬ ವ್ಯಕ್ತಿ ಹೃದಯದಲ್ಲಿ ಕಾರ್ಕೋಟಕ ವಿಷವನ್ನು ತುಂಬಿಕೊಂಡಿದ್ದೇನೆಂದರೆ ಅವನ ಮನಃಸ್ಥಿತಿ ಹೇಗಿರಬೇಡ. ಮಲಿನಗೊಂಡ ವ್ಯಕ್ತಿ ಅದೇನನ್ನು ಸಾಧಿಸಬಲ್ಲ? ದ್ವೇಷ-ಅಸೂಯೆಗಳಿಗೆ ಬಾಡಿಗೆಯಿಲ್ಲದೆ
ಮನವನ್ನು ತೆರೆದಿಡುವ ವ್ಯಕ್ತಿ ನಾಶವಾಗಲು ಅವೇ ಸಾಕು. ಋಣಾತ್ಮಕ ಚಿಂತನೆಯನ್ನು ಬಿಡಿ. ಉದ್ಯೋಗಾಕಾಂಕ್ಷಿಗಳಿಗೆ ಕೆಲಸ ನೀಡಲು ಅವರ ಜಾತಿಮತ ನೋಡದ ಇನ್ಫೋಸಿಸ್ ಕಂಪನಿಯ ಕದತಟ್ಟುವುದಷ್ಟೇ ಅಲ್ಲ, ಇನೋಸಿಸ್‌ನಂಥ ಕಂಪನಿಯನ್ನು ನೀವೇ ಸ್ಥಾಪಿಸುವಂಥ ಸಾಮರ್ಥ್ಯ ಬೆಳೆಸಿಕೊಳ್ಳಿ. ನಿರುದ್ಯೋಗಿ ಗಳು ಬ್ರಾಹ್ಮಣ ಸಮುದಾಯದಲ್ಲೂ ಇದ್ದಾರೆ. ಅವರಿಗೂ ನೀವೇ ಉದ್ಯೋಗ ನೀಡಿ. ಇದಾವುದೂ ಯುಟೋಪಿಯಾ ಅಲ್ಲ, ಅಸಾಧ್ಯವೂ ಅಲ್ಲ. ನೀವೇ ಮಾಡಿ ತೋರಿಸಿ.

ಹಂಸಲೇಖರ ಭಾಷಣಕ್ಕೆ ಕರತಾಡನ ಮಾಡುವುದರಿಂದ ಇದನ್ನು ಸಾಧಿಸಲಾಗುವುದಿಲ್ಲ. ನಿಮ್ಮ ದಾರಿಯನ್ನು ಬೆಳಗಲು ದೀವಿಗೆ ಹಿಡಿದ ಸಂತನ ಪ್ರೇಮವನ್ನು ಬೂಟಾಟಿಕೆ ಎಂದು ತಿರಸ್ಕರಿಸುವುದರಿಂದಲೂ ಸಾಧಿಸಲಾಗುವುದಿಲ್ಲ. ಹಂಸಲೇಖ ಮಾಡಿದ್ದಿಷ್ಟೆ. (ನನ್ನನ್ನೂ ಸೇರಿದಂತೆ) ರಾಜ್ಯದ ಅಧಿಕ ಮಂದಿಯ ಸಮಯ ವನ್ನು ತನ್ನ ಅಪದ್ಧ ಮಾತಿಗೆ ಪ್ರತಿಕ್ರಿಯೆ ನೀಡುವ ಮೂಲಕ ಪೋಲು ಮಾಡಿಸಿದ್ದು.