Sunday, 22nd September 2024

ತುಳಿಯಲೆಂದೇ ದಲಿತ ನಾಯಕನೆಂದದ್ದು

Dr B R Ambedkar

ತನ್ನಿಮಿತ್ತ

ವಿನಯ್ ಖಾನ್

vinaykhan078@gmail.com

ಅಂಬೇಡ್ಕರರಿಗೆ ಎಲ್ಲರನ್ನು ಸಮಾನವಾಗಿ ಕಾಣುವ ಭಾವನೆಯಿತ್ತು. ಅವರಿಗೆ ಯಾರ ಮೇಲೂ ಆಕ್ರೋಶವಿರಲಿಲ್ಲ. ಅವರಿಗಿದ್ದುದ್ದು ಕಾಳಜಿ; ಅನ್ಯಾಯದ ವಿರುದ್ಧ ಹೋರಾಟ. ಆ ಆಶಯದಂತೆ ದೇಶ ಬದಲಾಗುತ್ತಿದೆ. ಜಾತಿಗಿಂತ ಮನುಷ್ಯ, ವ್ಯಕ್ತಿತ್ವ ಮೇಲಾಗಿದೆ.

ಅಂಬೇಡ್ಕರ್ ಅವರನ್ನು ಪೂಜ್ಯ ಭಾವನೆಯಲ್ಲಿ ಕಾಣುವ ದೇಶ ನಮ್ಮದು. ಒಬ್ಬ ಸರ್ವಾಂಗೀಣ ಅಭಿವೃದ್ಧಿ ಚಿಂತಕ, ಆರ್ಥಿಕ ತಜ್ಞನನ್ನು ಕೇವಲ ದಲಿತ ನಾಯಕ, ಹಿಂದುಳಿದವರಿಗೆ ಸೀಮಿತ ವಾಗಿಸಿದ್ದರ ಹಿಂದೆ ಬಹುದೊಡ್ಡ ಹುನ್ನಾರವಿದೆ. ಭಾರತ ಅಂದ್ರೆ ಬಿಡಿ, ಎಲ್ಲದರಲ್ಲೂ ಜಾತಿ ಹುಡುಕಿ, ಯಾರನ್ನೋ ನಾಯಕನನ್ನಾಗಿ ಮಾಡಿ ಗುಂಪನ್ನೋ, ಪಾರ್ಟಿಯನ್ನೋ ಕಟ್ಟಬಲ್ಲ ಸೋ ಕಾಲ್ಡ್ ನಾಯಕರುಗಳು ತಮ್ಮ ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳುವಲ್ಲಿ ನಿಪುಣರು.

ಅದು ಕಮಲಾಹ್ಯಾರಿಸ್ ಯುಎಸ್‌ನ ಉಪಾಧ್ಯಕ್ಷೆಯಾದ ಮೇಲೆ ತಮಿಳುನಾಡಿನಲ್ಲಿ ಸಂಭ್ರಮಾಚರಣೆ ಮಾಡಿದಂತೆಯೇ! ಅಂಬೇಡ್ಕರ್, ಬಸವಣ್ಣ, ಕನಕದಾಸ… ಜಾಗತಿಕ ವ್ಯಕ್ತಿತ್ವಗಳಾಗಬಲ್ಲ ಇನ್ನೂ ಹಲವರನ್ನು ಹೀಗೆಯೇ ಯಾವುದೋ ಜಾತಿ, ಸಮುದಾಯಕ್ಕೆ ಸೀಮಿತವಾಗಿಸಿಬಿಟ್ಟಿದ್ದೇವೆ. ಜಾತಿಗೆ ಅವರನ್ನು ಎಳೆತಂದು, ಆ ಜಾತಿಗೆ ಒಂದು ರಾಜಕೀಯ ಪಕ್ಷ ಸೇರಿಸಿ, ಆ ಪಕ್ಷಕ್ಕೆ ಒಬ್ಬ ಚಪರಾಸಿ ನಾಯಕನ ಆರೋಪಿಸಿ, ಒಬ್ಬ ಸ್ವಾಮೀಜಿ ಹುಟ್ಟಿಸಿ… ಮುಂದಿನದೆಲ್ಲ ನೀವಂದು ಕೊಂಡಂತೆಯೇ. ಇಂಥವರೆಲ್ಲರೂ ಸೇರಿ ದೇಶದ ಜನರ ಭಾವನೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಬದಲಿಸಿ ಜನರ ಕಣ್ಣಿಗೆ ಮಣ್ಣೆರುಚುವು ದನ್ನು ನೋಡುತ್ತಲೇ ಇದ್ದೇವೆ. ಅಂಬೇಡ್ಕರ್ ರಂಥ ಮಹಾನ್ ವ್ಯಕ್ತಿತ್ವವನ್ನೂ ‘ದಲಿತ’ ಎಂಬ ಜಾತಿ(ನಿಜವಾಗಿ ಅದು ಸಮುದಾಯವಾಗ ಬೇಕಿತ್ತು; ಏಕೆಂದರೆ ಎಲ್ಲ ಜಾತಿಯಲ್ಲೂ ದಲಿತರಿದ್ದಾರೆ)ಗೆ ಮೀಸಲಾಗಿಸಿಕೊಂಡ ಯಾವೊಬ್ಬನೂ ಅವರ ನಿಜವಾದ ತತ್ವ ಸಿದ್ಧಾಂತಕ್ಕೆ ಬೆಲೆಕೊಡಲಿಲ್ಲ. ಕೊನೇ ಪಕ್ಷ ಅವರ ಬರೆದದ್ದರಲ್ಲಿ ಒಂದಕ್ಷರವನ್ನೂ ಓದಿಲ್ಲ. ಅವರದೇನಿದ್ದರೂ ಅಂಬೇಡ್ಕರ್ ಹೆಸರು ಹೇಳಿ ಕೊಂಡು ಬ್ಲಾಕ್‌ಮೇಲ್ ಮಾಡುವುದಷ್ಟೇ. ಅಂಬೇಡ್ಕರ್ ಇವರ ಪಾಲಿಗೆ ಹೊಟ್ಟೆ ಹೊರೆದುಕೊಳ್ಳವ ಮಾರ್ಗ!

ಬಾಬಾಸಾಹೇಬರಂಥ ಮಹಾನ್ ವ್ಯಕ್ತಿತ್ವವನ್ನು ಕೇವಲ ಜಾತಿ, ಪಂಗಡಕ್ಕಿಟ್ಟು ಅವಮಾನಿಸುವುದು ನಿಜಕ್ಕೂ ಹೇಯ ಸಂಗತಿ. ಸ್ವತಃ ಅನುಭವಿಸಿದ ನೋವುಗಳ ಹಿನ್ನೆಲೆಯಲ್ಲಿ ದಲಿತಪರ ಹೋರಾಟ ಮಾಡಿದ್ದಕ್ಕೆ ಅವರನ್ನು ಕೇವಲ ದಲಿತ ನಾಯಕರನ್ನಾಗಿ ನೋಡುವ ಮಂದಿ ಎಷ್ಟರ ಮಟ್ಟಿಗೆ ಸಂವಿಧಾನದ ಆಶಯಗಳ ಬಗ್ಗೆ ತಿಳಿದು ಕೊಂಡಿದ್ದಾರೆ? ನಿಜಕ್ಕೂ ಯೋಚನೆ ಮಾಡಬೇಕಾದ ಸಂಗತಿ. ಎಷ್ಟೋ ಕೆಲಸಕ್ಕೆ ಬಾರದ ಪ್ರತಿಭಟನೆಗಳು, ಕಾರ‍್ಯಕ್ರಮಗಳ ವೇದಿಕೆಯಲ್ಲಿ ಅಂಬೇಡ್ಕರ್ ಅಥವಾ ಗಾಂಧೀಜಿಯ ಫೋಟೋ ಇದ್ದೇ ಇರುತ್ತೆ. ಅವರ ನುಡಿ ಮುತ್ತು ಇರುತ್ತೆ. ಆದರೆ ಅದರ ಅರ್ಥ ಕೇಳಿ. ಮೊನ್ನೆ ಹಂಸಲೇಖ ಪ್ರಕರಣ ವನ್ನೇ ತೆಗೆದುಕೊಳ್ಳಿ. ಹಿಂದೆಮುಂದಿಲ್ಲದೇ ಮಾತಾಡಿದ ವರಲ್ಲಿ ಪ್ರತಿಯೊಬ್ಬರೂ ಉದುರಿಸಿದ್ದೂ ‘ಅಂಬೇಡ್ಕರರ ಸಂವಿಧಾನದ ಆಶಯಗಳಲ್ಲಿ ಒಂದಾದ ಫ್ರೀಡಂ ಆಫ್ ಸ್ಪೀಚ್‌ಗೆ ಈ ದೇಶದಲ್ಲಿ ಧಕ್ಕೆ ಬರುತ್ತಿದೆ’ ಎಂದೇ!. ಅವರ ಸಂವಿಧಾನದ ಮೂಲ ಆಶಯಗಳೇನಿದ್ದವು? ಅವನ್ನು ಜಾರಿಗೊಳಿಸಲು ಬಿಡದೇ ಬದಲಿಸಿದ್ದು ಯಾರು? ಇಂದು ಈ ಪಾಟಿ ಜನ ಅವರ ಹೆಸರಲ್ಲಿ ರಾಜಕೀಯ ಮಾಡಲು ಅವಕಾಶ ಕೊಟ್ಟವರಾರು ಎಂಬ್ಯಾವುದರ ಬಗ್ಗೆಯೂ ಅರಿವಿಲ್ಲ.

ಬಾಬಾಸಾಹೇಬರು ಸಾಕಷ್ಟು ಬಾರಿ ಹೇಳಿದ್ದರು, ದಲಿತ, ಅಲ್ಪಸಂಖ್ಯಾತ ಪದಗಳಿಂದ ಯಾರನ್ನು ನೋಯಿಸುವ, ಯಾವ ಪಂಗಡವನ್ನು ಕೀಳಾಗಿಸುವ ಹಕ್ಕು ಇಲ್ಲ ಎಂದು. ಗೋಹತ್ಯೆ ವಿರೋಧಕ್ಕೆ ಈಗ ಕೋಮು-ಧರ್ಮದ ಬಣ್ಣ ಹಚ್ಚಲಾಗುತ್ತಿದೆ. ವಿಶೇಷವೆಂದರೆ ಯಾರಿವತ್ತು ಅಂಬೇಡ್ಕರ್ ಅನುಯಾಯಿಗಳೆಂದು ಹೇಳಿ ಕೊಂಡು ಗೋಮಾಂಸ ಭಕ್ಷಣೆ ಸಮಾನತೆ ಎಂದು ಪ್ರತಿಪಾದಿಸುತ್ತಿದ್ದಾರೋ, ಅವರಿಗೆ ಗೊತ್ತಿರಲಿ ಗೋಹತ್ಯೆಯನ್ನು ಪ್ರಭಲವಾಗಿ ಮೊದಲು ವಿರೋಧಿ
ಸಿದ್ದು ಅಂಬೇಡ್ಕರ್ ಅವರೇ. ಅದೇ ವಿಧಿಯನ್ನು ಕೇಂದ್ರ ಸರಕಾರ ಜಾರಿ ಮಾಡಲು ಹೊರಟಾಗ ತಥಾಕಥಿತ ದಲಿತ ಪರರು ಆಗಲೂ ವಿರೋಧಿಸಿದ್ದರು, ಈಗಲೂ ಆ ಸಂತಾನವೇ ಮುಂದುವರಿದಿರುವುದು. ಮೊನ್ನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ದಲಿತ ಉಪಾಧ್ಯಕ್ಷೆ ಖುರ್ಚಿ ಮೇಲೆ ಕೂತಿ ದ್ದಳು ಎಂದು, ಗೋಮೂತ್ರ ಹಾಕಿ ಶುದ್ಧಿಗೊಳಿಸಿದ ವ್ಯಕ್ತಿ ಪ್ರತಿ ನಿಧಿಸುವ ಪಕ್ಷದ ನಾಯಕರೇ ಅಂಬೇಡ್ಕರರ ಗೋಹತ್ಯಾ ನಿಷೇಧದ ಪ್ರತಿಪಾದನೆಯನ್ನು ಮೂಲೆಗುಂಪು ಮಾಡಿದ್ದು.

ಯಾವಾಗಲೂ ಬುದ್ಧಿಜೀವಿ, ಸಮಾಜವಾದಿಗಳನ್ನು ಕೊಡುಗೆಯಾಗಿ ಕೊಡುವ ಸಂಸ್ಥೆ ಎಂದು ಬಿಂಬಿಸಿಕೊಳ್ಳುವ ಜೆಎನ್‌ಯುನ ‘ಅಮೂಲ್ಯ ಕೊಡುಗೆ’ ಕನ್ಹಯ್ಯ ಕುಮಾರ್ ಹಾಗೂ ತುಕ್ಡೆ ಗ್ಯಾಂಗ್. ‘ಭಾರತ್ ತೇರೆ ತುಕ್ಡೆ ತುಕ್ಡೆ ಹೊಂಗೆ, ಜಿನ್ನಾ ವಾಲಿ ಆಜಾದ್ ಚಾಹಿಯೇ’ ಅಂತ ಘೋಷಣೆ ಹಾಕಿದ ಅಪರಾಧದಲ್ಲಿ ಜೈಲಿಗೆ ಹೋದವನ ಕಾಂಗ್ರೆಸ್ ಸೇರ್ಪಡೆ ಯನ್ನು ಎಷ್ಟು ದಲಿತ ಪರ ಸಂಘಟನೆಗಳು ವಿರೋಧಿಸಿದವು? ಆದರೆ ನೆನಪಿರಲಿ, ಅಂಬೇಡ್ಕರ್‌ಅವರಿಗೆ ಭಾರತದಲ್ಲಿದ್ದಂತಹ ಎಲ್ಲ ದಲಿತರನ್ನೂ ಒಗ್ಗೂಡಿಸಿ ಪ್ರತ್ಯೇಕ ರಾಷ್ಟ್ರಮಾಡುವ ಶಕ್ತಿ ಯಿತ್ತು. ಹಾಗೇ ಬ್ರಿಟೀಷರು ಸಹ ಭಾರತವನ್ನು ದಲಿತರಿ ಗೊಸ್ಕರ ಒಡೆಯುವುದಕ್ಕೂ ಸಹ
ಸಿದ್ಧರಾಗಿದ್ದರು. ಹಾಗೇನಾ ದರೂ ಅಂಬೇಡ್ಕರ್ ಅವರು ಮತ್ತೊಮ್ಮೆ ದೇಶ ವಿಭಜನೆ ಮಾಡಿದ್ದರೆ?! ಅವರು ಹಾಗೂ ಅವರ ನಂತರ ಕುಟುಂಬ ವರ್ಗದವರು ಇಂದಿಗೂ ಆದೇಶದ ಪ್ರಧಾನಿ ಹುದ್ದೆಯಲ್ಲಿರುತ್ತಿ ರಲಿಲ್ಲವೇ? ಆದರೆ ಅಂಬೇಡ್ಕರ್ ಇಂಥ ಪ್ರಸ್ತಾಪದ ಬಗ್ಗೆ ಹೇಳಿದ ಮಾತು  “I dont want to break my nation once again’  ಅಂತ!.

ಅಂಬೇಡ್ಕರ್ ಅವರಿಗೆ ರಾಷ್ಟ್ರೀಯತೆಯ ಮೇಲೆ ಪ್ರಖರ ನಿಲುವಿತ್ತು. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ನೆಹರು ಸಿದ್ಧರಾದಾಗ ಅದನ್ನ ವಿರೋಧಿಸಿದ್ದರು. ಸ್ವತಃ ದಾಲಿತ್ಯದ ಸಂತ್ರಸ್ತರಾದರೂ ಎಂದಿಗೂ ಮುಸ್ಲೀಮ್ ಧರ್ಮಕ್ಕಾಗಲಿ, ಕ್ರಿಶ್ಚಿಯಾನಿಟಿಗಾಗಲೀ ಮಣೆಹಾಕಿದವರಲ್ಲ ಬಾಬಾಸಾಹೇಬರು. ಜೈಭೀಮ್ ಜೈ ಮೀಮ್, ಈ ಘೋಷಣೆಯನ್ನು ಎಲ್ಲರೂ ಕೇಳಿರುತ್ತೀರಿ. ಇದು ಹೈದರಾಬಾದಿನ ಸ್ವಘೋಷಿತ ನಿಜಾ ಮನ ತರಹ ಆಡುವ ಒವೈಸಿ ಹಾಗೂ ಅವನ ಪಕ್ಷದ ಕಾರ‍್ಯ ಕರ್ತರ ಬೊಂಬಡಾ ಅಷ್ಟೆ. ಅವರುಗಳೆಲ್ಲ ಮಾಡುವ ದೇಶ ದ್ರೋಹ, ಸಮಾಜವಿರೋಧಿ ಕೆಲಸಕ್ಕೆ ಅಂಬೇಡ್ಕರ್ ಹಾಗೂ ಸಂವಿಧಾನವನ್ನು ತಳಕು ಹಾಕಿ ಕೊಳ್ಳುತ್ತಾರಷ್ಟೇ. ಆದರೆ, ಅದೇ ಒವೈಸಿ ೧೫ ನಿಮಿಷ ಸಮಯ ಕೊಟ್ಟರೆ ಇಡೀ ದೇಶದ ಹಿಂದೂಗಳಿಗೆ ತಕ್ಕ ಪಾಠ ಕಲಿಸುತ್ತೇನೆ ಅಂದನ್ನಲ್ಲ. ಅದಕ್ಕೆ ಸಂವಿಧಾನದ ಯಾವ ಆರ್ಟಿಕಲ್‌ನಲ್ಲಿ ಅವಕಾಶ ವಿತ್ತು? ದೊಂಭಿಮಾಡಿ ಹಿಂದೂಗಳನ್ನು ಕೊಂದುಬಿಡಿ ಎಂದು ಯಾವ ಸಂವಿಧಾನ ಹೇಳಿದೆ? ಈ ನಲಪಾಡ್ ನಾವು ತಲೆ ಕಡಿಯುವುದಕ್ಕೂ ಸಿದ್ಧ ಎಂದಾಗ ಎಷ್ಟು ಮಂದಿ ಪ್ರಶ್ನೆಮಾಡಿ ದರು? ತಲೆ ಕಡಿಯುವುದು, ಜೀವ ತಗೆಯುವುದು ಧರ್ಮ ದಿಂದ ಧರ್ಮಕ್ಕೆ ಬದಲಾ ಗುತ್ತಾ? ಇತ್ತೀಚೆಗೆ ನಡೆಯುವ ಯಾವುದೇ ದಲಿತ ಹೋರಾಟ ಗಳಲ್ಲಿ ಅಂಬೇಡ್ಕರ್ ಅವರ ನಿಲುವುಗಳು ಕಾಣಿಸ್ತಾ ಇಲ್ಲ.

ಬದಲಾಗಿ ಈ ಹೋರಾಟಗಳೆಲ್ಲ ಆರ್‌ಎಸ್‌ಎಸ್, ಬ್ರಾಹ್ಮಣ, ಹಿಂದೂಗಳ ವಿರುದ್ಧ. ಮೇಲ್ಜಾತಿಯವರನ್ನು ಮನುವಾದಿಗಳೆನ್ನುವವರಿಗೆ ಮನುಸ್ಮೃತಿ ಬಗ್ಗೆ ಎಷ್ಟು ಗೊತ್ತು? ಸ್ಮೃತಿ ಎಂದರೇ ಆ ಕಾಲದ ಸಂವಿಧಾನ. ಹೀಗಾಗಿ ಸ್ವತಃ ಅಂಬೇಡ್ಕರ್ ಸಂವಿಧಾನದ ವಿಚಾರದಲ್ಲಿ ಮನುಸ್ಮೃತಿ ಯನ್ನು ಉಲ್ಲೇಖಿಸಿದ ಎಷ್ಟೋ ಉದಾಹರಣೆಗಳಿವೆ. ಅದನ್ನು ಆಧರಿಸಿಯೇ ಬಾಬಾ ಸಾಹೇಬರು ಮೀಸಲಾತಿಯನ್ನು ೧೦ ವರ್ಷಕ್ಕೆ ಸೀಮಿತಗೊಳಿಸಿದ್ದರು. ಆದರೆ ಮೀಸಲು ಇಂದಿಗೂ
ಚಾಲ್ತಿಯಲ್ಲಿದೆ. ಸದೃಢನಾದ ಯಾವ ದಲಿತ ನಾಯಕನೂ ಸ್ವಯಂ ಪ್ರೇರಿತನಾಗಿ ಸೌಲಭ್ಯ ಬಿಟ್ಟುಕೊಟ್ಟಿಲ್ಲ.

ಅಂಬೇಡ್ಕರ್ ಅವರು ಯಾವಾಗಲೂ ಶಿಕ್ಷಣಕ್ಕೆ ಮಹತ್ವ ಕೊಟ್ಟವರು. ಈಗಿರುವ ದಲಿತ ಸಂಘಟನೆಗಳು ಎಷ್ಟು ಜನರ ಶಿಕ್ಷಣಕ್ಕೆ ಸಹಾಯ ಮಾಡುತ್ತಿವೆ? ಅಂಬೇಡ್ಕರ್‌ರಿಗೆ ಸಮಾನ ನಾಗರಿಕ ಸಂಹಿತೆ ಜಾರಿಯ ಆಶಯವಿತ್ತು. ಆದರೆ ಇದನ್ನು ಇತ್ತೀಚೆಗೆ ವಿರೋಧಿಸುತ್ತಿರುವವರು ದಲಿತರೇ. ನಮ್ಮಲ್ಲಿ ಎಲ್ಲ ಸಮಾಜ ದಲ್ಲೂ ತುಳಿತಕ್ಕೀಡಾದವರಿದ್ದಾರೆ. ಅವರನ್ನೆಲ್ಲ ಮೇಲೆತ್ತುವುದ್ಯಾವಾಗ? ಭೀಮ್‌ರಾವ್ ರಾಮ್‌ಜಿ ಅಂಬೇಡ್ಕರ್ ಅವರ ನಿಜವಾದ ಅಡ್ಡ ಹೆಸರು ಅಂಬಾ ವಾಡೇಕರ್, ಅವರಿಗೆ ಅಂಬೇಡ್ಕರ್ ಅಂತ ತಮ್ಮ ಹೆಸರನ್ನೇ ಧಾರೆಯೆರೆದ ಮಹಾದೇವ್ ಅಂಬೇಡ್ಕರ್ ಅವರು ಕಟ್ಟಾ ಬ್ರಾಹ್ಮಣರು.

ಅವರೇಕೆ ಮನುವಾದಿ ಅಂತ ಹೆಸರು ಪಡೆಯಲಿಲ್ಲ? ಅಂಬೇಡ್ಕರ್ ಅವರನ್ನು ಬಾಬಾ ಸಾಹೇಬ್ ಆಗಿ ರೂಪಿಸುವುದರಲ್ಲಿ ಹಲವು ಜನರ ಪರಿಶ್ರಮವಿತ್ತು. ಅವರೆಲ್ಲರೂ ಬೇರೆ ಬೇರೆ ಜಾತಿಯವರೇ. ಮಾನವತಾವಾದಿಗಳೆಂದು ಬಿಂಬಿಸಿಕೊಳ್ಳುವ ಜನ, ತಮ್ಮ ಹೆಸರಿಗೆ ಇಷ್ಟೆಲ್ಲ ಮಸಿ ಬಳಿಯುತ್ತಾರೆಂದು ಒಮ್ಮೆ ಗೊತ್ತಿದ್ದರೆ ಅಂಬೇಡ್ಕರ್ ಇವರನ್ನೆಲ್ಲ ದೇಶ ಬಿಟ್ಟು ಹೋಗುವಂತೆ ಹೇಳುತ್ತಿದ್ದರು. ಇಲ್ಲವೇ ತಾವೇ ದೇಶ ಬಿಡುತ್ತಿದ್ದರು. ಏಕೆಂದರೆ ಬಾಬಾಸಾಹೇಬರು ಕಂಡದ್ದು ಸಮಗ್ರ ಭಾರತದ ಕನಸನ್ನು. ಏಕ ಸಂವಿಧಾನವನ್ನು!

ನೆನಪಿಡಿ, ಇದೇ ಕಾಂಗ್ರೆಸ್‌ನ ಪ್ರಥಮ ಪ್ರಧಾನಿ ನೆಹರು ಅಂಬೇಡ್ಕರ್‌ರ ಕಟ್ಟಾ ವಿರೋಧಿಯಾಗಿದ್ದರು. ಹೀಗಾಗಿಯೇ ಅವರನ್ನು ನೆಹರು ದಲಿತ ನಾಯಕತ್ವಕ್ಕೆ
ಸೀಮಿತಗೊಳಿಸಿದ್ದು.