Saturday, 21st September 2024

ಸುಳ್ಳು, ರೈತರು ಅನ್ನದಾತರೇ ಅಲ್ಲ !?

ಅಭಿಪ್ರಾಯ

ಪೃಥೆ ಮುನ್ನಿ

ಟಿಶ್ಯೂಗಳಾಗಿ ರೂಪು ಗೊಂಡು, ಅಂಗಗಳಾಗಿ ಬೆಳೆದು ಈ ಪ್ರಕೃತಿಗೆ ಬಂದ ಮನುಷ್ಯ ಇದೀಗ ಅದೇ ಬಿಂದು ರೂಪದ ಅಣುವನ್ನು ಜೀವ ವಿರೋಧಿ ಕ್ರಮಗಳಿಂದ ನಾಶಗೊಳಿಸಲು ಹೊರಟಿದ್ದಾನೆ. ಅಣುಗಳೆಲ್ಲ ನಾಶವಾದ ಮೇಲೆ ಮನುಷ್ಯ ಉಳಿಯಲು ಸಾಧ್ಯವೇ?

ಅದೇನು ಕನಸೋ, ಭ್ರಮೆಯೋ! ಅಂತೂ ಸೋ ಕಾಲ್ಡ್ ವಿಜ್ಞಾನದ ಎಲ್ಲ ಕನಸುಗಳನ್ನೂ ಸಾಕಾರ ಮಾಡಿ ಬಿಡುತ್ತೇವೆಂದೊ ಹೊರಟು ಬಿಟ್ಟಿದೆ ವಿಜ್ಞಾನಿಗಳ ಸಮುದಾಯ. ಬಿಗ್‌ ಬ್ಯಾಂಗ್‌ನ ದೊಂಬರಾಟ ನಡೆಸಿ ಈ ಭೂಮಿಯನ್ನು ಮರು ಸೃಷ್ಟಿಸಿ ಬಿಡುತ್ತೇವೆಂಬ ಅಬ್ಬರದ ಕುಣಿತ ನಡೆಯಲಾರಂಭಿಸಿ ಸಾಕಷ್ಟು ಕಾಲವೇ ಆಯಿತು.

ಒಂದೊಮ್ಮೆ ವಿಜ್ಞಾನಿಗಳ ಈ ಕನಸು ನನಸಾಗಿಬಿಟ್ಟರೆ ಇನ್ನೊಂದು ಭೂಮಂಡಲದ ಸೃಷ್ಟಿಗೆ ಬ್ರಹ್ಮನೇ ಬೇಕಿಲ್ಲ. ಇಂಥ ಹೊಸ ಭೂಮಿಯ ಸೃಷ್ಟಿಯಲ್ಲಿ ಬೇಸಾಯಗಾರನ ಪಾತ್ರವೇನೋ? ಗೊತ್ತಿಲ್ಲ, ಹೊಸ ಭೂಮಿಯಲ್ಲಿ ಆತ ಅಕ್ಕಿಯನ್ನೇ ಬೆಳೆಯು ತ್ತಾನೋ, ಅಥವಾ ಆಹಾರದ ಮಾತ್ರೆಗಳನ್ನು ಬೆಳೆಯಬೇಕೋ? ಕಾಲವೇ ನಿರ್ಧರಿಸಬೇಕು. ಏಕೆಂದರೆ ಇರುವ ಒಂದೇ ಭೂಮಿ ಯಲ್ಲಿ ಇರುವ ಎಲ್ಲ ಬ್ಯಾಕ್ಟೀರಿಯಾ ಗಳನ್ನು ಕೊಲ್ಲುತ್ತಿರುವಾಗ ಹೊಸ ಭೂಮಿಯಲ್ಲಿ ಅಂಥ ಬ್ಯಾಕ್ಟೀರಿಯಾ ಹುಟ್ಟಲೇ ಅವಕಾಶ ಕೊಡುವುದಿಲ್ಲ. ಹಾಗಿದ್ದ ಮೇಲೆ ಭತ್ತವನ್ನಂತೂ ಬೆಳೆಯಲು ಸಾಧ್ಯವೇ ಇಲ್ಲ. ಬ್ಯಾಕ್ಟೀರಿಯಾಗಳಿಲ್ಲದೇ ಬೆಳೆಗಳು ಹುಟ್ಟಲು, ಬೆಳೆಯಲು, ತೆನೆ ಬಿಡಲು ಸಾಧ್ಯವೇ ಇಲ್ಲ ಎಂದು ನಂಬಿತ್ತು ಪುರಾತನ ಸುಜ್ಞಾನ. ಬೆಳೆಗಳ ಮಾತು ಬಿಡಿ, ಅವುಗಳಿಲ್ಲದ ಮನುಷ್ಯನೇ ಇಲ್ಲ.

ಆದರೂ ಕೀಟ ಮುಕ್ತ, ರೋಗ ಮುಕ್ತ ಕೃಷಿಯ ಪರಿಕಲ್ಪನೆಯಲ್ಲಿ ರಾಸಾಯನಿಕ ಕೃಷಿಯನ್ನು ಪ್ರೇರೇಪಿಸುತ್ತಿದೆ ವಿಜ್ಞಾನ. ಬುದ್ಧಿ ಇರುವ ಮನುಷ್ಯ ತನ್ನ ಸುಜ್ಞಾನ ಬಳಸುತ್ತಿದ್ದ ಕಾಲದಲ್ಲಿ ಮಳೆ ಬಿಸಿಲಲ್ಲಿ ತನ್ನ ಅನ್ನದ ಗಳಿಕೆಗಾಗಿ ಕೃಷಿಯ ಹೆಸರಲ್ಲಿ ದುಡಿ ಯುತ್ತಿದ್ದ. ಆದರೀಗ ‘ವಿಜ್ಞಾನದ ನಾಲೆಡ್ಜ್’ ಹೆಸರಿನಲ್ಲಿ ಅನ್ನಕ್ಕಾಗಿ ದುಡಿಯುವ ಬದಲು ಕೃಷಿ ಉತ್ಪಾದನೆಯ ಕಾರ್ಖಾನೆಗಳಲ್ಲಿ ಕಾರ್ಮಿಕನಾಗುತ್ತಿದ್ದಾನೆ. ಹೀಗಾಗಿ ಇಂಥ ರೈತರು ಯಾರೂ ಅನ್ನದಾತರಾಗಿ ಉಳಿದಿಲ್ಲ!

ವಿಜ್ಞಾನಿಗಳ ಈ ಎಲ್ಲ ಕನಸುಗಳೂ ಮರೀಚಿಕೆಗಳೇ. ಏಕೆಂದರೆ ಪ್ರಯೋಗಾಲಯದಲ್ಲಿ ಬೋಧಕರು ಬಾಯಿಪಾಠ ಮಾಡಿಸಿದ ನಾಲೆಡ್ಜ್ ಮೇಲಷ್ಟೇ ಅವರು ಕೆಲಸ ಮಾಡುವವರು. ಅವರಿಗೆ ನಾಲೆಡ್ಜ್ ಇರಬಹುದು. ಆದರೆ ಜ್ಞಾನ ಇಲ್ಲ. ಜ್ಞಾನ ಜೀವನದ ಅನುಭವದಿಂದ ಬರುವಂಥದ್ದು. ಅದು ಸಿಲೆಬಸ್‌ನಿಂದ ಬರುವಂಥದ್ದಲ್ಲ. ಸಿಲೆಬಸ್ ರೂಪಿತಗೊಳ್ಳುವುದು ಬೋಧಕರ ಮಿತಿ ಗಳಲ್ಲೇ. ಹೀಗಾಗಿಯೇ ವಿಜ್ಞಾನಿಗಳು ಸಸ್ಯ ತಳಿಗಳೂ ಸೇರಿದಂತೆ ಜೀವಿರಾಶಿಗಳನ್ನು ರೂಪಾಂತರಗೊಳಿಸಿ ಹೊಸ ಹೊಸ ಸೃಷ್ಟಿ ಮಾಡುತ್ತಿದ್ದೇವೆ ಎನ್ನುತ್ತಿದ್ದರೂ ಅವೆಲ್ಲವೂ ಮಾನವ ಬುದ್ಧಿಮತ್ತೆಯ ಮಿತಿಯನ್ನು ಮೀರಲಾರವು.

ಪ್ರಕೃತಿಯ ಜ್ಞಾನದಿಂದ ಆದ ಸೃಷ್ಟಿಯನ್ನು ಅರಿಯಲು ಇಂದಿಗೂ ಆಗದಿರುವುದು ಇದೇ ಮಿತಿಗಳಿಂದಲೇ. ನಿಸರ್ಗದ ದೃಷ್ಟಿ ಯಲ್ಲಿ ನಾವು ಹೇಳಿಕೊಳ್ಳಿತ್ತಿರುವ ವಿಜ್ಞಾನದ ನಾಲೆಡ್ಜ್‌ನಿಂದ ಬರುವ ಫಲಿತಾಂಶಗಳೆಲ್ಲ ವ್ಯರ್ಥವೇ. ಹೀಗಾಗಿಯೇ ಬಿಗ್ ಬ್ಯಾಂಗ್ ಎನ್ನುವುದು ಅಂದಿಗೂ, ಇಂದಿಗೂ, ಎಂದೆಂದಿಗೂ ಪ್ರಹಸನವೇ. ಶತಮಾನದ ಆರಂಭ ದಿಂದಲೇ ಈ ಬಗ್ಗೆ ಮಾತನಾಡುತ್ತಲೇ ಬರುತ್ತಿರುವ ವಿಜ್ಞಾನಿಗಳ ಸಮುದಾಯ ಸಾಧಿಸಿದ್ದು ಕೇವಲ ಫಂಡ್ ಹಾಗೂ ಗ್ರಾಂಟ್ ಗಳ ಮೊತ್ತದಲ್ಲಿ ಮಾತ್ರ.

ಹೌದು, ಸಾಪೇಕ್ಷ ಪ್ರಪಂಚದಲ್ಲಿ ವಿಜ್ಞಾನದ ಜೀವಿಗಳು ಸೃಷ್ಟಿಸುತ್ತಿದ್ದೇವೆಂದು ಹೇಳು ತ್ತಿರುವುದೆಲ್ಲ ಪೊಳ್ಳು ವಿವೇಕದ ಭ್ರಮೆಯ ಲೋಕದಲ್ಲಿ ಮಾತ್ರವೇ. ನೈಜ ಪ್ರಾಕೃತಿಕ ಜ್ಞಾನದ ಸೃಷ್ಟಿಯಲ್ಲಿ ಯಾವುದೂ ಯಾವುದಕ್ಕೂ ಮಾರಕವಲ್ಲ. ಎಲ್ಲವೂ ಒಂದ ಕ್ಕೊಂದು ಪೂರಕವೇ. ಪ್ರಕೃತಿಯನ್ನು ತಾನು ನಿಯಂತ್ರಿಸಬನೆಂಬ ಭ್ರಮೆಯಲ್ಲಿ ಅದರ ಬಹುಮುಖ್ಯ ಆಧಾರವನ್ನೇ ನೆಲಸಮ ಮಾಡುತ್ತಿದ್ದಾನೆ ಮನುಷ್ಯ. ಕೃಷಿ ಯಲ್ಲಿನ ಕೀಟ ನಾಶವೂ ಇಂಥದ್ದೇ ಅಜ್ಞಾನ. ಕೀಟಗಳ ಪಂಚಾಂಗ ನಾಶವಾದ ಮೇಲೆ ಕೃಷಿಯ ಮಹಲು ನಿಲ್ಲಲು ಹೇಗೆ ಸಾಧ್ಯ? ಇಂತಹ ವಿಜ್ಞಾನಿಗಳ ಪೊಳ್ಳು ನಾಲೆಡ್ಜ್ ನಂಬಿ ಅವರು ಹಾಕಿದ ಕುಣಿಕೆಗೆ ತಲೆ ಒಡ್ಡುತ್ತಿರುವ ನಮ್ಮ ರೈತರದು ಎಂತಹ ದುರಂತ!? ಒಂದು ಕಥೆ ಹೇಳುತ್ತೇನೆ ಕೇಳಿ. ಈ ಭೂಮಿ ಹುಟ್ಟಿದಾಗ ಇದ್ದುದು ಕೇವಲ ಸೂಕ್ಷ್ಮಾಣು ಜೀವಿಗಳು ಮಾತ್ರವೇ.

ಅದೂ ಎಷ್ಟು ದಿನ, ವರ್ಷ? ಬರೋಬ್ಬರಿ ೨ ಮಿಲಿಯನ್ ವರ್ಷಗಳ ಕಾಲ ಅವು, ಅವಷ್ಟೇ ಈ ಭೂಮಂಡಲವನ್ನು ಆಳಿದ್ದವು. ಅವೂ ಪಕ್ಕಾ ನಮ್ಮಂತೆಯೇ ತಮ್ಮ ಮಿತಿಗಳನ್ನು ಅರಿಯದೇ, ಹುಟ್ಟನ್ನು ಮರೆತು ಹಿಡಿತ ಸಾಧಿಸುತ್ತೇವೆಂದು ಹೊರಟಿದ್ದವು. ತಮ್ಮತಮ್ಮಲ್ಲೇ ಬಡಿದಾಟಕ್ಕಿಳಿದು ನಾಶವಾಗುತ್ತಿದ್ದವು. ಬಹುಶಃ ಸಂಪೂರ್ಣ ನಿರ್ನಾಮವಾಗಿ ಹೋಗುತ್ತಿದ್ದವೇನೋ. ಅವು ಗಳಲ್ಲೊಂದಿಷ್ಟು ಅಣುಗಳಿಗೆ ಪ್ರಾಕೃತಿಕ ಜ್ಞಾನದ, ಬಲದ ಮೇಲೆ ನಂಬಿಕೆ ಅಳಿದಿರಲಿಲ್ಲ. ತಮ್ಮ ತಮ್ಮಲ್ಲೇ ಚರ್ಚಿಸಿ, ಈ ಸೃಷ್ಟಿಯ ಉಳಿವಿಗಾಗಿ ತಮ್ಮೊಳಗಿನ ಒಂದೊಂದು ಡಿ ಎನ್ ಎ ಗಳನ್ನು ದಾನ ಮಾಡಲು ನಿರ್ಧರಿಸಿದವು.

ಅವುಗಳ ತ್ಯಾಗದ ಫಲವಾಗಿ ನಾವು ಮನುಷ್ಯರು ಹುಟ್ಟಿದ್ದು. ಒಂದೊಮ್ಮೆ ಹೀಗೆ ಅವು ಮಾಡದೇ ಎಲ್ಲವೂ ನಾಶವಾಗಿ ಹೋಗಿ ಬಿಟ್ಟಿದ್ದರೆ, ಅಂದೇ ಭೂಮಿಯ ಕೊನೆಯಾಗುತ್ತಿತ್ತು. ಸೃಷ್ಟಿ ಆದದ್ದು ಇಂಥ ಸೂಕ್ಷ್ಮಾಣುವಿನಿಂದಲೇ ಹೊರತೂ ಬಿಗ್ ಬ್ಯಾಂಗ್ ನಿಂದಲ್ಲ ಎಂಬ ಸತ್ಯ ಗೊತ್ತಿದ್ದೂ ಸಂಶೋಧನೆ ಹೆಸರಲ್ಲಿ ‘ಹಗಲಿರುಳೂ ಶ್ರಮಿಸುತ್ತಿರುವ(?)’ ವಿಜ್ಞಾನಿಗಳ ಹಿಂದಿರುವ ಬದ್ಧತೆ ಯಾದರೂ ಏನು? ಬ್ಯಾಕ್ಟೀರಿಯಾ ಗಳಿಲ್ಲದ, ಅಣುಗಳಿಲ್ಲದ, ಕೀಟಗಳಿಲ್ಲದ ಭೂಮಿಯೇ ಇರದು ಎಂದಾದರೆ, ಇನ್ನು ಕೀಟ ಗಳನ್ನು ನಾಶ ಮಾಡಿ, ರಾಸಾಯನಿಕ ಸುರಿದು ಕೃಷಿಯನ್ನು ಉಳಿಸಿಕೊಳ್ಳಲು ಸಾಧ್ಯವೇ? ಹಾಗೆ ನೋಡಿದರೆ, ಪಶ್ಚಿಮದ ದೇಶಗಳ ಪ್ರಕೃತಿಯ ಅಧ್ಯಯನದ ಅಂಗವಾಗಿಯೇ ಈ ಆಧುನಿಕ ‘ವೈಜ್ಞಾನಿಕ ಕೃಷಿ’ಯ ಭ್ರಮೆ ಹುಟ್ಟಿಕೊಂಡದ್ದು. ಅವರು ಪ್ರತಿಪಾದಿಸುವ ಪ್ರಕೃತಿ ವಿಜ್ಞಾನದ ಉದ್ದೇಶವೇ ಇಡೀ ಈ ಸೃಷ್ಟಿಯನ್ನು ತಮ್ಮ ಕಲ್ಪನೆಗೆ ಅನುಗುಣವಾಗಿ ವ್ಯಾಖ್ಯಾನಿಸುವು ದಾಗಿತ್ತು.

ಹೀಗಾಗಿ ಪರಾಮರ್ಶೆ ಹಾಗೂ ವಿಶ್ಲೇಷಣೆಯ ಹೆಸರಿನಲ್ಲಿ ಏನೇನೋ ಅರ್ಥ ವ್ಯಾಖ್ಯಾನವನ್ನು ಮುಂದಿಡುತ್ತಾ ಬಂದಿದೆ. ಏನು ಮಾಡೋದು ಅವರು, ಪಶ್ಚಿಮದವರ ಗುಣವೇ ಪ್ರಕೃತಿ ಮತ್ತು ಮನುಷ್ಯನನ್ನು ಬೇರೆ ಬೇರೆಯಾಗಿ ನೋಡುವುದು. ಅಂದರೆ ನಾವೆಂದಿಗೂ ಪ್ರಕೃತಿಯ ಭಾಗವಾಗಲೇ ಇಲ್ಲ, ಅವರ ಪ್ರಕಾರ. ನಾವು ಪೂರ್ವ ದೇಶಗಳವರು ಪ್ರಕೃತಿಯೊಳಗೇ ಮನುಷ್ಯ ಒಂದಾಗಿ ಬದುಕು ಕಂಡುಕೊಳ್ಳಬೇಕೆಂಬ ನಂಬಿದ್ದವರು. ಆದರೆ ಇದಕ್ಕೆ ವಿರುದ್ಧವಾಗಿ ತನ್ನ ಸೋ ಕಾಲ್ಡ್ ನಾಲೆಡ್ಜ್ ನಿಂದಾಗಿ ಪ್ರಕೃತಿಯನ್ನು ಎದುರಾಗಿ ನಿಂತು ಗೆಲ್ಲುತ್ತೇನೆ ಎನ್ನುತ್ತದೆ ಅಲ್ಲಿನ ವಿಜ್ಞಾನ.

ಇದರಿಂದಲೇ ಅಲ್ಲಿ ಭಾವ ಜಗತ್ತಿಲ್ಲ. ಜಾಗೃತಿಯಿಲ್ಲ. ಎಲ್ಲವೂ ವಸ್ತುನಿಷ್ಠ. ವ್ಯಕ್ತಿ ನಿಷ್ಠ. ಒಂದೊಮ್ಮೆ ನಾವು ಪ್ರಕೃತಿಯನ್ನು ಅರಿಯಲೇ ಬೇಕೆಂದರೆ ನಾವು ಅದರೊಳಗೆ ಹೋಗಬೇಕೆಏ ವಿನಃ ಅದರಂತೆಯೇ ಮತೊಂದನ್ನು ಸೃಷ್ಟಿಸಿ ಅರಿಯುತ್ತೇನೆಂದರೆ ಖಂಡಿತಾ ಸಾದ್ಯವೇ ಇಲ್ಲ. ಪ್ರಕೃತಿ ನಮ್ಮ ಪ್ರeಗೆ ನಿಲುಕದ ವಾಸ್ತವ ಎಂಬುದು ಗೊತ್ತಿಲ್ಲದೇ ವಸ್ತು ನಿಷ್ಠತೆಯ ಮಾತಾಡುತ್ತಿದ್ದಾರೆ. ಈ ರೀತಿಯ ವಿನಾಶ ಮತ್ತು ಪುನಾರಚನೆಯ ಕ್ರಿಯೆಗಳ ನಡುವೆಯೇ ಪ್ರಕೃತಿ ವಿeನ ಹುಟ್ಟಿದ್ದು. ಇಂಥಾ ವಿಥ್ಯಾ ವಿಜ್ಞಾನ ಮನೋ ವೇಗದಲ್ಲಿ ಸಾಗಿದೆ. ಇಂದರಿಂದ ನಿಸರ್ಗದ ‘ಅರಿವು’ ಸಾಧ್ಯವೇ? ಬಿಗ್‌ಬ್ಯಾಂಗ್‌ನಿಂದ ಸೃಷ್ಟಿಯನ್ನು ಅರಿಯುತ್ತೇನೆ ನ್ನುವುದೂ ಇಂಥದ್ದೇ ಮೂರ್ಖತನ.

ಸಣ್ಣದೊಂದು ಚುಕ್ಕೆಯಿಂದ ಹುಟ್ಟಿದ, ನೂರಾರು, ಸಹಸ್ರಾರು ಕೋಶಗಳಶಾಗಿ ವಿಕಾಸಗೊಂಡ, ಟಿಶ್ಯೂಗಳಾಗಿ ರೂಪುಗೊಂಡು, ಅಂಗಗಳಾಗಿ ಬೆಳೆದು ಈ ಪ್ರಕೃತಿಗೆ ಬಂದ ಮನುಷ್ಯ ಇದೀಗ ಅದೇ ಬಿಂದು ರೂಪದ ಅಣುವನ್ನು ಜೀವವಿರೋಧಿ ಕ್ರಮಗಳಿಂದ ನಾ ಶಗೊಳಿಸಲು ಹೊರಟಿದ್ದಾನೆ. ಅಣುಗಳೆಲ್ಲ ನಾಶವಾದ ಮೇಲೆ ಮನುಷ್ಯ ಉಳಿಯಲು ಸಾಧ್ಯವೇ? ಅಂಥ ಒಂದೇ ಒಂದು ಅಣುವಿನ ಮೇಲೆ ತಾನು ನಿಂತಿದ್ದರೂ ತನ್ನ ಅಂಗೈಯ ಇಡೀ ಬ್ರಹ್ಮಾಂಡವಿದೆ ಎಂಬ ಭ್ರಮೆಯಲ್ಲಿದ್ದಾನೆ.

ಈ ಭ್ರಮೆಗಳಿಂದ ಎಂದಿಗೂ ಮನುಷ್ಯ ಪ್ರಕೃತಿಯನ್ನು ಅರಿಯಲಾರ. ಆದರೂ ನನ್ನಲ್ಲಿ ಒಂದು ಭರವಸೆಯಿದೆ – ಅಂದು 2 ಮಿಲಿಯನ್ ವರ್ಷ ಈ ಬ್ರಹ್ಮಾಂಡವನ್ನು ಆಳಿದ್ದ, ಅಳಿವಿನ ಅಂಚಿನಲ್ಲಿದ್ದ ಸೂಕ್ಷಾಣುಗಳಲ್ಲಿಯಂತೆ ನಮ್ಮಲ್ಲೂ ಒಂದಷ್ಟು ಮಂದಿಗೆ ಇಂದಲ್ಲ ನಾಳೆ ಸತ್ಯದ ದರ್ಶನವಾದೀತು, ಜ್ಞಾನೋದಯವಾದೀತು. ದಿನದಿಂದ ದಿನಕ್ಕೆ ಸ್ಮಶಾನದಂತಾಗುತ್ತಿರುವ ಕೋಟ್ಯಂತರ ಹಳ್ಳಿಗಳ ಯಾವುದೋ ಮನೆಯಲ್ಲೆಲ್ಲೋ ಒಮದು ಸನ್ಣ ಸತ್ಯದ ಕಿಡಿ ಉಳಿದುಕೊಂಡೀತು.

ಅಂಥ ಪುಟ್ಟ ಕಿಡಿಯೇ, ಜ್ಞಾನದ ಜ್ಯೋತಿಯಾಗಿ, ಉರಿವ ಬೃಹತ್ ಜ್ವಾಲೆಯಾಗಿ ತನ್ನ ಬೆಳಕಲ್ಲಿ ಹೊಸ ಸಾಂಸ್ಕೃತಿಕ ಇತಿಹಾಸಕ್ಕೆ ಕಾರಣ ವಾಗಬಹುದು. ನಿಸರ್ಗದೊಂದಿಗೆ ಮಾನವನನ್ನು ಬೆಸೆಯುವ ಸಹಜ ಕೃಷಿಗೆ ನಾಂದಿಯಾಗಬಹುದು.

(ಮಸಾನೊಬು -ಕುವೊಕಾ ಅವರ ‘The Natural Way of Farming & The Theory and Practice of Green Philosophy’ ಯ ಆಯ್ದ ಭಾಗ)