M J Akbar Column: ಅಮೆರಿಕದಲ್ಲಿ ನಡೆದ ಹೈಪ್ರೊಫೈಲ್ ಅರಚಾಟದ ಸುತ್ತ...
ಅಮೆರಿಕದಿಂದ ಉಚಿತವಾಗಿ ಉಪಕಾರ ಮಾಡಿಸಿಕೊಳ್ಳುವವರನ್ನು ನೋಡಿ ಡೊನಾಲ್ಡ್ ಟ್ರಂಪ್ ಬೇಸತ್ತಿದ್ದಾರೆ. ಆದರೆ ಉಕ್ರೇನ್‌ನಲ್ಲಿರುವ ಅಪರೂಪದ ಖನಿಜ ಗಳ ಮೇಲೆ ಅವರು ಕಣ್ಣು ಹಾಕಿರುವುದು ಬೇರೆಯದೇ ರೀತಿಯ ಭದ್ರತಾ ಗ್ಯಾರಂಟಿ ಯನ್ನು ಕೇಳುತ್ತಿರುವಂತಿದೆ. ಜೆಲೆನ್ ಸ್ಕಿಗೆ ಬೇರೆ ದಾರಿಯಿಲ್ಲ. ಶಾಂತಿ ಸ್ಥಾಪನೆಗೆ ಇನ್ನೂ ಸಾಕಷ್ಟು ಸಮಯ ಹಿಡಿಯುತ್ತದೆ.

ಹಿರಿಯ ಪತ್ರಕರ್ತ, ಅಂಕಣಕಾರ ಎಂ.ಜೆ.ಅಕ್ಬರ್

ಅಕ್ಬರ್ ನಾಮಾ
ಎಂ.ಜೆ.ಅಕ್ಬರ್
ಆತ ಆಡಿದ ಮಾತು ತುಟಿಯಲ್ಲಿತ್ತು. ಅದನ್ನು ಅಲ್ಲಿದ್ದ ಮನಸ್ಸುಗಳು ಚಕ್ಕನೆ ಓದಿದ್ದವು. ಶಾಂತಿ ಮಾತುಕತೆಯ ನೆಪದಲ್ಲಿ ಅಮೆರಿಕದ ಶ್ವೇತಭವನದಲ್ಲಿ ಸಂಘರ್ಷ ನಡೆದ ಕೆಲ ತಾಸುಗಳ ಬಳಿಕ ಉಕ್ರೇನ್‌ನ ಅಧ್ಯಕ್ಷ ವೋಲೋದಿಮಿರ್ ಜೆಲೆನ್‌ಸ್ಕಿ ತಮಗೆ ತಾವೇ ಎಂಬಂತೆ ಗೊಣಗಿಕೊಂಡಿದ್ದು ಏನೆಂಬುದನ್ನು ಒಬ್ಬ ‘ಲಿಪ್ ರೀಡರ್’ ಇಡೀ ಜಗತ್ತಿಗೆ ಸಾರಿ ಹೇಳಿದ್ದ. ಫೆಬ್ರವರಿ 28ರ ಶುಕ್ರವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಜೆ.ಡಿ.ವೇನ್ಸ್ ಜತೆ ಜೆಲೆನ್‌ಸ್ಕಿ ಸಭೆ ನಡೆಸಿದ ವೇಳೆ ‘ಸುಕ್ಯಾ ಬ್ಲ್ಯಾತ್’ ಎಂದು ಗೊಣಗಿದ್ದರು. ರಷ್ಯನ್ ಭಾಷೆಯಲ್ಲಿ ಎದುರಾಳಿಗೆ ಅವಮಾನ ಮಾಡಲು ಬಳಸುವ ಪದವಿದು. ನನಗೆ ಸಿಐಎ ಅಥವಾ ಎಫ್ ಎಸ್‌ಬಿ (ರಷ್ಯಾದ ಕೆಜಿಬಿಯ ಈಗಿನ ಹೊಸ ರೂಪ) ಮೂಲಗಳು ಇದನ್ನು ತಿಳಿಸಿವೆ ಎಂದೇ ನಾದರೂ ಹೇಳಿದ್ದರೆ ಇದು ಇನ್ನೂ ನಾಟಕೀಯ ವಾಗುತ್ತಿತ್ತು. ಆದರೆ ಇದು ಕಳೆದ ಭಾನುವಾರದ ‘ಲಂಡನ್ ಟೈಮ್ಸ್’ ಪತ್ರಿಕೆಯಲ್ಲಿ ಎಲ್ಲ ರಿಗೂ ಮುಕ್ತವಾಗಿ ಸಿಗುತ್ತಿರುವ ವರದಿ. ಇತ್ತೀಚೆಗೆ ತುಂಬಾ ಮಾಡರ್ನ್ ಆಗಿರುವ ಆ ಪತ್ರಿಕೆ ಈ ರಷ್ಯನ್ ಪದದ ಅರ್ಥವೇನೆಂದು ಖುಲ್ಲಂಖುಲ್ಲಾ ಬರೆದಿತ್ತು.
ಇದನ್ನೂ ಓದಿ: M J Akbar Column: ಕಮ್ಯುನಿಸಂನ ಸೋಲು ಮತ್ತು ಸಿದ್ದಾಂತಗಳ ಇತಿಮಿತಿ
ಸುಕ್ಯಾ ಅಂದರೆ ಬೀದಿ ವೇಶ್ಯೆ, ಬ್ಲ್ಯಾತ್ ಅಂದರೆ ಇಂಗ್ಲಿಷ್‌ನಲ್ಲಿ ‘ಎಫ್’ನಿಂದ ಆರಂಭಿಸಿ ಮೂರು ಸ್ಟಾರ್ ಹಾಕುವ ಅಶ್ಲೀಲ ಪದ. ಇಷ್ಟಕ್ಕೂ ಜೆಲೆನ್‌ಸ್ಕಿ ಗೊಣಗಿದ ಪದಗಳ ಅರ್ಥ ತಿಳಿದುಕೊಳ್ಳಲು ಟ್ರಂಪ್ ಮತ್ತು ವೇನ್ಸ್‌ಗೆ ಯಾವ ಲಿಪ್ ರೀಡರ್‌ನ ಸಹಾಯವೂ ಬೇಕಿರ ಲಿಲ್ಲ. ಜೆಲೆನ್‌ಸ್ಕಿಯ ನಡತೆ, ಆತ ತೋರುತ್ತಿದ್ದ ಅಗೌರವ ಹಾಗೂ ಕೋಪದಿಂದ ಚಡ ಪಡಿಸುತ್ತಿದ್ದ ರೀತಿಯಿಂದಲೇ ಅವರು ಆಡಿದ್ದು ಕೊಳಕು ಪದವೆಂಬುದು ಅವರಿಗೆ ಅರ್ಥವಾಗಿತ್ತು.
ಕಳೆದ ಮೂರು ವರ್ಷಗಳಿಂದ ಬೇಷರತ್ತಾಗಿ ಪುಕ್ಕಟೆ ಉಡುಗೊರೆಯಂತೆ ಅಮೆರಿಕದಿಂದ ಪ್ರತಿ ವಾರವೂ ಒಂದೊಂದು ಬಿಲಿಯನ್ ಡಾಲರ್‌ನಷ್ಟು ಸಹಾಯ ಪಡೆಯುತ್ತಾ ಬಂದಿ ರುವ ವ್ಯಕ್ತಿಯ ಬಾಯಿಯಲ್ಲಿ ಈ ಮಾತು ಬಂದಿದ್ದನ್ನು ಅವರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಭಿಕ್ಷೆ ಬೇಡುವವರಿಗೆ ಆಯ್ಕೆಯ ಸ್ವಾತಂತ್ರ್ಯ ಇರುವುದಿಲ್ಲ ಎಂಬುದನ್ನು ಹೃದಯಾಂತ ರಾಳದಿಂದ ನಂಬುವ ವ್ಯಕ್ತಿ ಟ್ರಂಪ್. ಹೀಗಾಗಿ ಈ ಮಾತು ಕೇಳುತ್ತಿದ್ದಂತೆ ದುಡುಕ್ಕನೆ ಎದ್ದು ನಿಂತು ಕೂಗಾಡಿಬಿಟ್ಟರು.
ಅಲ್ಲಿ ಸುರಿದ ಲಾವಾ ಈಗ ಯುರೋಪ್‌ವರೆಗೂ ಹರಿದಿದೆ. ಅದನ್ನು ನಿಲ್ಲಿಸದಿದ್ದರೆ ನ್ಯಾಟೋ ಕೂಡ ಛಿದ್ರವಾಗಬಹುದು. ನಾಜೂಕಾಗಿ ನಡೆದುಕೊಳ್ಳುವುದಕ್ಕೆಂದು ದೇವರಿಂದ ಸೃಷ್ಟಿಯಾದ ವ್ಯಕ್ತಿ ಟ್ರಂಪ್ ಅಲ್ಲವೇ ಅಲ್ಲ. ಅವರು ಏನು ಯೋಚಿಸುತ್ತಾರೋ ಅದನ್ನೇ ಹೇಳುತ್ತಾರೆ. ಮತ್ತು ಅವರು ಏನನ್ನು ನೋಡುತ್ತಾರೋ ಅದನ್ನೇ ಯೋಚಿಸುತ್ತಾರೆ.
ಜೆಲೆನ್‌ಸ್ಕಿ ಗೊಣಗಿದ ಪದಗಳು ವಾಷಿಂಗ್ಟನ್ ತುಂಬಾ ವ್ಯಾಪಿಸಿಕೊಂಡಿರುವುದನ್ನು ನೋಡಿದರೆ ರುಶ್ಮೋರ್ ಪರ್ವತದಲ್ಲಿ ಭುಗಿಲೆದ್ದ ಈ ಜ್ವಾಲಾಮುಖಿಗೆ ಡೆಮಾಕ್ರಟಿಕ್ ಸಂಸದರು ಟ್ರಂಪ್‌ರನ್ನು ಪ್ರಚೋದಿಸುವಂತೆ ಜೆಲೆನ್‌ಸ್ಕಿಗೆ ಹಚ್ಚಿಕೊಟ್ಟಿದ್ದೇ ಕಾರಣ ವೆಂಬುದು ತಿಳಿಯುತ್ತದೆ. ಅದೊಂದು ಕೆಟ್ಟ ಸಲಹೆ.
ಬಹುಶಃ ಟ್ರಂಪ್ ಹೀಗೆ ಉರಿದುಬಿದ್ದರೆ ತಮ್ಮನ್ನು ತಾವೇ ನಾಶಪಡಿಸಿಕೊಳ್ಳುತ್ತಾರೆ ಎಂದು ಡೆಮಾಕ್ರಟಿಗರು ಭಾವಿಸಿದ್ದರು. ಆದರೆ ಅದರ ಬದಲಿಗೆ, ಅಮೆರಿಕದ ನೆರವನ್ನು ಯಾರೂ ಬೇಕಾಬಿಟ್ಟಿಯಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಗುಡುಗುವ ಮೂಲಕ ಅಮೆರಿಕದ ಔದಾರ್ಯದ ಬುಡಕ್ಕೇ ಟ್ರಂಪ್ ಬೆಂಕಿಯಿಟ್ಟಿದ್ದಾರೆ.
ಕಳೆದ ಮೂರು ವರ್ಷಗಳ ಕಾಲ ಡೆಮಾಕ್ರಟಿಕ್ ಅಧ್ಯಕ್ಷ ಜೋ ಬೈಡೆನ್ ಅಮೆರಿಕದ ತಳ ವಿಲ್ಲದ ಬೊಕ್ಕಸದಿಂದ ಡಾಲರ್‌ಗಳು ಕೀವ್‌ಗೆ ಹೆದ್ದಾರಿಯಲ್ಲಿ ಹರಿದುಹೋಗುತ್ತವೆ ಎಂದು ಜೆಲೆನ್‌ಸ್ಕಿಗೆ ಭ್ರಮೆ ಹುಟ್ಟಿಸಿದ್ದರು. ಆದರೆ ಒನ್‌ವೇ ಓಣಿಯಲ್ಲಿ ಯಾವುದೂ ಬಹಳ ದೂರ ನಡೆಯುವುದಿಲ್ಲ.
ಇಷ್ಟೆಲ್ಲ ನಾಟಕೀಯ ಬೆಳವಣಿಗೆಗಳು ನಡೆಯುವುದಕ್ಕಿಂತ ಮೊದಲಿನ 40 ನಿಮಿಷಗಳ ಕಾಲ ಎಲ್ಲಾ ಮಾತುಕತೆ ಬಹಳ ಸೌಹಾರ್ದಯುತವಾಗಿತ್ತು. ಅಧಿಕಾರಿಗಳು ಇನ್ನೆಲ್ಲೋ ಕುಳಿತು ಉಕ್ರೇನ್‌ನ ಖನಿಜಗಳನ್ನು ಬಳಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಭೂರಿ ಭೋಜನ ತಮಗಾಗಿ ಕಾಯುತ್ತಿದೆ ಎಂದು ಮಂಡಿಗೆ ತಿನ್ನುತ್ತಿದ್ದರು.
ಟ್ರಂಪ್ ತನ್ನ ಅತಿಥಿಗಳಿಗೆ ಹ್ಯಾಂಬರ್ಗರ್ ನೀಡುವುದಿಲ್ಲ. ಆದರೆ ಏಕಾಏಕಿ ನಡೆದ ಬೆಳ ವಣಿಗೆಯಲ್ಲಿ ಜೆಲೆನ್‌ಸ್ಕಿ ಹದ್ದುಮೀರಿ ಕೈ ಎತ್ತಿ ಜೋರು ಧ್ವನಿಯಲ್ಲಿ ಮಾತನಾಡ ತೊಡಗಿ ದರು. ಆಗ ಮಧ್ಯ ಪ್ರವೇಶಿಸಿದ ಉಪಾಧ್ಯಕ್ಷ ವೇನ್ಸ್, ಅಮೆರಿಕಕ್ಕೆ ಸದಾ ಆಭಾರಿ ಯಾಗಿರ ಬೇಕಿದ್ದ ನೀವು ನಮ್ಮ ಅಧ್ಯಕ್ಷರಿಗೆ ಅವಮಾನ ಮಾಡುತ್ತಿದ್ದೀರಿ ಎಂದು ಅಬ್ಬರಿಸಿ ಬಿಟ್ಟರು. ಅಲ್ಲಿಗೆ ಊಟ ರದ್ದಾಯಿತು, ಗ್ರೇವಿ ತಣ್ಣಗಾಯಿತು.
ಅಮೆರಿಕದ ಮಾಜಿ ರಕ್ಷಣಾ ಸಚಿವ ಡೊನಾಲ್ಡ್ ರಮ್ಸ್ ಫೆಲ್ಡ್ ಐತಿಹಾಸಿಕ ಇರಾಕ್ ಯುದ್ಧದ ಸಮಯದಲ್ಲಿ ಬಹಳ ಪ್ರಸಿದ್ಧವಾದ ಹೇಳಿಕೆಯೊಂದನ್ನು ನೀಡಿದ್ದರು. “ಈ ಸುದೀರ್ಘ ಸಂಘರ್ಷದಲ್ಲಿ ಸಾಕಷ್ಟು ಗೊತ್ತಿರುವ ಸಂಗತಿಗಳು, ಗೊತ್ತಿದ್ದರೂ ಗೊತ್ತಿಲ್ಲದ ಸಂಗತಿಗಳು ಮತ್ತು ಗೊತ್ತಿಲ್ಲದ ಸಂಗತಿಗಳಿವೆ" ಎಂದು ಅವರು ಹೇಳಿದ್ದರು. ಆದರೆ ಜೆಲೆನ್‌ಸ್ಕಿಗೆ ಈ ‘ಗೊತ್ತಿರುವ’ ಸಂಗತಿಗಳ ಬಗ್ಗೆ ತಿಳಿಸುವುದನ್ನು ಯಾರೋ ಮರೆತಿದ್ದಾರೆ.
ಅಮೆರಿಕದ ಹಣ, ಶಸಾಸ ಮತ್ತು ಉಕ್ರೇನ್‌ನ ಸೇನೆಗೆ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸುವ ಎಲಾನ್ ಮಸ್ಕ್‌ರ ಸ್ಟಾರ್‌ಲಿಂಕ್ ಉಪಗ್ರಹಗಳ ನೆರವಿಲ್ಲದೆ ರಷ್ಯಾ ವಿರುದ್ಧ ಜೆಲೆನ್‌ಸ್ಕಿ ಯುದ್ಧ ಮುಂದುವರಿಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಜೆಲೆನ್‌ಸ್ಕಿಗೆ ಗನ್‌ಗಳು ಬೇಕು. ಆದರೆ ಯುರೋಪ್‌ನಲ್ಲಿರುವ ಅವರ ಸ್ನೇಹಿತರು ಪುಗಸಟ್ಟೆ ಟ್ವೀಟ್‌ಗಳನ್ನು ಕಳುಹಿಸುತ್ತಾರೆ.
ಜೆಲೆನ್‌ಸ್ಕಿಗೆ ಸೈನಿಕರು ಬೇಕು. ಆದರೆ ಯುರೋಪಿನವರು ಬೆಚ್ಚನೆಯ ಅಪ್ಪುಗೆ ಕಳುಹಿಸು ತ್ತಾರೆ. ಉಕ್ರೇನನ್ನು ಯುದ್ಧಭೂಮಿಯಲ್ಲಿ ಉಳಿಸುವ ಶಕ್ತಿಯಿರುವುದು ಅಮೆರಿಕಕ್ಕೆ. ಯುರೋಪಿನ ರಾಜಕಾರಣಿಗಳು ಮತ್ತು ಬ್ರಿಟಿಷ್ ಪತ್ರಿಕೆಗಳಿಗೆ ದೈವಿಕ ಶಕ್ತಿಯೇನಾದರೂ ಇದ್ದಿದ್ದರೆ ಶ್ವೇತಭವನದ ಸಂಘರ್ಷದ ಮರುದಿನ ಬೆಳಗ್ಗೆ ಜೆಲೆನ್‌ಸ್ಕಿಗೆ ವಿಕ್ಟೋರಿಯಾ ಕ್ರಾಸ್ ಮತ್ತು ಸಂಜೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುತ್ತಿತ್ತು. ಆದರೆ ದಿನಪತ್ರಿಕೆಗಳಿಗೆ ತಮ್ಮ ಪ್ರಸಾರ ವನ್ನು ಹೊರತುಪಡಿಸಿ ಕಳೆದುಕೊಳ್ಳುವುದಕ್ಕೆ ಇನ್ನೇನೂ ಇಲ್ಲ.
ಯುರೋಪಿನ ರಾಜಕಾರಣಿಗಳಿಗೆ ತಮ್ಮ ಧ್ವನಿಯನ್ನು ಹೊರತುಪಡಿಸಿ ಕಳೆದು ಕೊಳ್ಳುವು ದಕ್ಕೆ ಮತ್ತೇನೂ ಇಲ್ಲ. ಬಹುಶಃ ಯುರೋಪಿನ ಮೊಸಳೆ ಕಣ್ಣೀರಿನಿಂದ ಜೆಲೆನ್‌ಸ್ಕಿಯ ಭುಜಗಳು ಇಷ್ಟೊತ್ತಿಗೆ ಒದ್ದೆಯಾಗಿರುತ್ತವೆ. ಈಗಷ್ಟೇ ವಿದೇಶಾಂಗ ನೀತಿಯ ಪುಟಗಳನ್ನು ತಿರುವಿಹಾಕಲು ಆರಂಭಿಸಿರುವ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್, ಕೆಲಸಕ್ಕೆ ಬಾರದ ರಾಜತಾಂತ್ರಿಕತೆಯ ಹೊಸ ಪ್ರತಿಪಾದಕನಾಗಿ ಹೊರಹೊಮ್ಮಿದ್ದಾರೆ.
ಅಂಥ ‘ಎಲ್ ಬೋರ್ಡ್’ ಸ್ಟಾರ್ಮರ್ ಕೂಡ ಅಮೆರಿಕದ ನೆರವಿಲ್ಲದೆ ಯುರೋಪಿನ ಸೇನಾಪಡೆಗಳನ್ನು ಉಕ್ರೇನ್‌ಗೆ ಕಳುಹಿಸುವುದು ಪ್ರಮಾದವಾಗುತ್ತದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಉಕ್ರೇನ್‌ಗೆ ಅಮೆರಿಕದ ಭದ್ರತೆ ಲಭಿಸಿದರೆ ಯುರೋಪಿನ ಸೇನೆ ಯಾತಕ್ಕೆ ಬೇಕು? ವಾರಾಂತ್ಯದಲ್ಲಿ ಲಂಡನ್ನಿನ ಲ್ಯಾನ್ಸೆಸ್ಟರ್ ಹೌಸ್‌ನಲ್ಲಿ ಸ್ಟಾರ್ಮರ್ ಏರ್ಪಡಿಸಿದ್ದ ಸಮಾವೇಶದಲ್ಲಿ ಕೈಗಳ ಕೊರತೆಯಿತ್ತು.
ಮುಂದಿನ ಸಾಲಿನಲ್ಲೇ ಬಾಲ್ಟಿಕ್ ದೇಶಗಳ ನಾಯಕರ ಗೈರು ಎದ್ದು ಕಾಣುತ್ತಿತ್ತು. ಬೋಗಸ್ ಬೆಂಬಲದಿಂದ ತಮಗೇ ನಷ್ಟವೆಂಬುದು ಅವರಿಗೆ ಗೊತ್ತಿತ್ತು. ಒಣ ಸಿದ್ಧಾಂತಗಳ ಮಾತನಾ ಡುತ್ತಾ ತಮ್ಮ ಸೇನೆಯನ್ನು ಯುದ್ಧಭೂಮಿಯಿಂದ ದೂರ ಇರಿಸಿಕೊಳ್ಳುವುದರಲ್ಲಿ ಅವರು ನಿಸ್ಸೀಮರು. ಇಟಲಿ ಮತ್ತು ಫ್ರಾನ್ಸ್ ಮಾತ್ರ ಸ್ಟಾರ್ಮರ್ ಜತೆ ಇದ್ದವು.
ಸ್ಟಾರ್ಮರ್ ಮತ್ತು ಫ್ರಾನ್ಸ್‌ನ ಮ್ಯಾಕ್ರನ್‌ಗೆ ಮೂರು ವರ್ಷಗಳ ಹಿಂದೆ ಉಕ್ರೇನ್‌ಗೆ ಸೇನೆ ಕಳುಹಿಸುವುದಕ್ಕೆ ಯಾರು ತಡೆದಿದ್ದರು? ರಷ್ಯಾದ ಶಕ್ತಿ ಕ್ಷೀಣಿಸುತ್ತಿದ್ದಾಗ ಮತ್ತು ತಮ್ಮ ಮಧ್ಯಪ್ರವೇಶದಿಂದ ಏನಾದರೂ ಪ್ರಯೋಜನವಾಗುತ್ತದೆ ಎಂಬ ಸ್ಥಿತಿಯಿದ್ದಾಗ ಅವರು ಉಕ್ರೇನ್‌ನ ನೆರವಿಗೆ ಸೈನಿಕರನ್ನು ಕಳುಹಿಸಬಹುದಿತ್ತು.
ಯುದ್ಧ ಆರಂಭಿಸಿದ ಕೆಲವೇ ದಿನಗಳಲ್ಲಿ ರಷ್ಯಾಕ್ಕೆ ಕ್ಷಿಪ್ರಜಯ ದುರ್ಲಭವಾದಾಗ ಪುಟಿನ್ ದುರ್ಬಲರಾಗಿದ್ದರು. ಆಗ ರಣರಂಗಕ್ಕೆ ಪ್ರವೇಶಿಸುವುದನ್ನು ಬಿಟ್ಟು ಲಂಡನ್ ಮತ್ತು ಪ್ಯಾರಿಸ್ ನ ನಾಯಕರು ಶಾಲೆಯ ಮಕ್ಕಳಂತೆ ಮೈದಾನದ ಹೊರಗೆ ನಿಂತು ಜೈಕಾರ ಕೂಗುತ್ತಿದ್ದರು. ನೀವು ಸತ್ತರೆ ನಾವು ಟೋಪಿಯನ್ನು ಮೇಲಕ್ಕೆಸೆಯುತ್ತೇವೆ ಎಂಬಂತೆ ಅವರ ನಡೆಯಿತ್ತು.
ಅದು ಹೋಗಲಿ, 2014ರ ಫೆಬ್ರವರಿ 27ರಂದು ಕ್ರಿಮಿಯಾವನ್ನು ರಷ್ಯಾ ವಶಪಡಿಸಿಕೊಂಡು ಮಾರ್ಚ್ 16ರಂದು ಅದು ರಷ್ಯಾದ ಭಾಗ ಎಂದು ಘೋಷಿಸಿಕೊಂಡಾಗಲೇ ಉಕ್ರೇನ್‌ಗೆ ತಮ್ಮ ಸೇನೆಯನ್ನು ಕಳುಹಿಸಲು ಯುರೋಪ್ ಮತ್ತು ಅಮೆರಿಕಕ್ಕೆ ಏನು ಧಾಡಿಯಾಗಿತ್ತು? ಡೌನಿಂಗ್ ಸ್ಟ್ರೀಟ್‌ನಲ್ಲಿ ಡೇವಿಡ್ ಕ್ಯಾಮರೂನ್ ಇದ್ದರು. ಶ್ವೇತಭವನದಲ್ಲಿ ಬರಾಕ್ ಒಬಾಮಾ ಎಂದಿನಂತೆ ಮುಖದ ತುಂಬಾ ನಗು ಹೊತ್ತು ಓಡಾಡುತ್ತಿದ್ದರು. ಅವರು ಏನೂ ಮಾಡಲಿಲ್ಲ. ಈಗ ಊರೆಲ್ಲಾ ಮಾತನಾಡುವ ವೀಕ್ಷಕ ವಿವರಣೆಕಾರರು ಏಕೆ 2014ರ ಮೌನದ ಬಗ್ಗೆ ಸೊಲ್ಲೇ ಎತ್ತುವುದಿಲ್ಲ? 2014ರಲ್ಲಿ ಒಬಾಮಾ ಬದಲಿಗೆ ಟ್ರಂಪ್ ಅಧ್ಯಕ್ಷ ರಾಗಿದ್ದಿದ್ದರೆ ಈ ಕಮೆಂಟೇಟರ್‌ಗಳು ಹೀಗೇ ಕ್ಷಮಿಸುತ್ತಿದ್ದರೆ? ಉಕ್ರೇನ್‌ನ ಸಾರ್ವ ಭೌಮತೆಯ ಬಗ್ಗೆ ಮಾತನಾಡುವುದು ಬಿಸಿ ಗಾಳಿಯಿದ್ದಂತೆ ಎಂಬುದು ವ್ಲಾದಿಮಿರ್ ಪುಟಿನ್‌ಗೆ ಅನುಭವದಿಂದಲೇ ಗೊತ್ತಿರುವ ವಿಚಾರ.
ಅದನ್ನು ಒಬಾಮಾ ಕೈಬಿಟ್ಟಿದ್ದರು. 2014ರಲ್ಲಿ ಉಕ್ರೇನ್ ಅರೆ-ಸಾರ್ವಭೌಮ ದೇಶವಾಗಿ ದ್ದಿದ್ದರೆ 2025ರಲ್ಲಿ ಏಕೆ ಅದು ಪೂರ್ಣ ಸಾರ್ವಭೌಮ ರಾಷ್ಟ್ರವಾಗಬೇಕು? 2022ರಂತೆ 2014ನ್ನೂ ಉಲ್ಟಾಪಲ್ಟಾ ಮಾಡುವ ಅಗತ್ಯವಿದೆ ಅಂತಾದರೆ ರಷ್ಯಾ ವಿರುದ್ಧ ಯುದ್ಧಕ್ಕೆ ನ್ಯಾಟೋ ಸಿದ್ಧವಿದೆಯೇ? ಮೂರು ವರ್ಷಗಳ ಹಿಂದೆ ಉಕ್ರೇನ್ ನ ಯುರೋಪಿಯನ್ ಸ್ನೇಹಿತರಿಗೆ ಷಂಡತನ ಆವರಿಸಿತ್ತು!
ನಿಮಗೆ ಅಗತ್ಯವಿದ್ದಾಗ ‘ರಿಪ್ಲೀಸ್ ಬಿಲೀವ್ ಇಟ್ ಆರ್ ನಾಟ್!’ ಎಲ್ಲಿರುತ್ತದೆ? 1918ರ ಡಿಸೆಂಬರ್‌ನಲ್ಲಿ ‘ನ್ಯೂಯಾರ್ಕ್ ಗ್ಲೋಬ್’ನಲ್ಲಿ ಜೀವ ತಳೆದ ಬಳಿಕ ಈ ಪ್ರಸಿದ್ಧ ಒಕ್ಕೂಟವು ಬಹಳ ಬೇಗ ಜನಪ್ರಿಯ ದಿನಪತ್ರಿಕೆಗಳಿಗೆ ಚಟದಂತೆ ಒಂದು ಕಾಯಂ ವಿಭಾಗವಾಗಿತ್ತು. ಈಗ ಅಸ್ತವ್ಯಸ್ತತೆಯೇ ಹೊಸ ನಾರ್ಮಲ್ ಎಂಬಂತಾಗಿರುವಾಗ ಇದು ತನ್ನ ಗ್ಲಾಮರ್ ಕಳೆದುಕೊಂಡಿದೆ.
2025ರ ಫೆಬ್ರವರಿ 23ರಂದು ‘ಸಂಡೇ ಟೈಮ್ಸ್’ನಲ್ಲಿ ಪ್ರಕಟವಾದ ವರದಿಯೊಂದಿಗೆ ಇದರ ಪುನರುತ್ಥಾನಕ್ಕೆ ಮುಹೂರ್ತ ಕೂಡಿಬಂದಿದೆ. 2014ರಲ್ಲಿ ಈಗಿನ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಹಾಗೂ ಆಗಿನ ಜರ್ಮನಿಯ ರಕ್ಷಣಾ ಸಚಿವೆ ಉರ್ಸುಲಾ ವಾನ್ ಡೆರ್ ಲೆಯೆನ್ ಜರ್ಮನಿಯ ಸೇನೆಯನ್ನು ನ್ಯಾಟೋ ತಾಲೀಮಿಗೆ ಕಳುಹಿಸಿದ್ದರು. ಆಗ ಅವರ ಸೈನಿಕರ ಕೈಲಿ ಬಂದೂಕಿನ ಬದಲು ಕಪ್ಪು ಬಣ್ಣ ಬಳಿದ ಪೊರಕೆಗಳಿದ್ದವು.
ಟಿವಿ ನೋಡುವವರಿಗೆ ಅದ್ಭುತ ರಾಜಕೀಯ ಅಣಕದ ಬಿಬಿಸಿ ಕಾರ್ಯಕ್ರಮ ‘ಯಸ್ ಮಿನಿಸ್ಟರ್ ಅಂಡ್ ಯಸ್ ಪ್ರೈಮ್ ಮಿನಿಸ್ಟರ್’ ಗೊತ್ತಿರುತ್ತದೆ. 45 ವರ್ಷಗಳ ಬಳಿಕವೂ ನಗೆಯುಕ್ಕಿಸುವ ಆ ಕಾರ್ಯಕ್ರಮವನ್ನು ಈಗ ಮತ್ತೆ ನೋಡಬೇಕು ಎಂದು ಯಾರಿಗಾದರೂ ಅನ್ನಿಸಿದರೆ ನೋಡಬಹುದು. ಶಕ್ತಿ ಕಳೆದುಕೊಂಡ ದೇಶದ ಕತೆಯನ್ನು ಆ ಕಾರ್ಯಕ್ರಮ ದಷ್ಟು ಪರಿಣಾಮಕಾರಿಯಾಗಿ ಯಾವ ಇತಿಹಾಸಕಾರನೂ ಹೇಳಿರಲಿಕ್ಕಿಲ್ಲ.
ಬೇಕಿದ್ದರೆ ‘ಯಸ್ ಪ್ರೈಮ್ ಮಿನಿಸ್ಟರ್’ ಸೀಸನ್ 2, ಎಪಿಸೋಡ್ 1 ನೋಡಿ. ಅದರ ಥೀಮ್ ಈಗಲೂ ದಿನಪತ್ರಿಕೆಗಳ ಮುಖಪುಟದಲ್ಲಿ ಪ್ರತ್ಯಕ್ಷವಾಗುತ್ತಿರುತ್ತದೆ. ರಕ್ಷಣಾ ವೆಚ್ಚ ಅಥವಾ ರಕ್ಷಣೆಗೆ ಮಾಡದೆ ಇರುವ ವೆಚ್ಚದ ಬಗ್ಗೆ ಪತ್ರಿಕೆಗಳಲ್ಲಿ ದಿನ ಬೆಳಗಾದರೆ ಬೇಕಾದಷ್ಟು ಓದುತ್ತಿದ್ದೇವೆ. 1980ರಲ್ಲಿ ಬ್ರಿಟನ್ನಿನಲ್ಲಿ 4 ಲಕ್ಷ ಸೈನಿಕರಿದ್ದರು.
ಅವರಲ್ಲಿ 20 ಸಾವಿರ ಸೈನಿಕರು ನಾರ್ತ್ ಇಂಗ್ಲೆಂಡ್‌ನಲ್ಲಿ ನಿಯೋಜಿತರಾಗಿದ್ದರು. ಇಂದು ಬ್ರಿಟಿಷ್ ಸೇನೆಯಲ್ಲಿ 74,296 ಸೈನಿಕರಿದ್ದಾರೆ. ಅವರಲ್ಲಿ 4244 ಮಂದಿ ಗೂರ್ಖಾಗಳು. ಈ ಸಂಖ್ಯೆ ಕಳೆದ ಎರಡು ಶತಮಾನಗಳಲ್ಲೇ ಅತ್ಯಂತ ಕನಿಷ್ಠ. ಬ್ರಿಟನ್ನಿನ ವಸಾಹತುಗಳಲ್ಲೇ ರಾಜಮನೆತನಕ್ಕೆ ನಿಷ್ಠೆ ಹೊಂದಿದ್ದ ಸ್ವಂತ ಸೇನಾಪಡೆಗಳಿದ್ದವು. ಈಗ ಎಷ್ಟು ಸೈನಿಕರ ಅಗತ್ಯವಿದೆ ಎಂಬುದನ್ನು ಲೆಕ್ಕಾಚಾರ ಮಾಡಿದರೆ ಹಿಂದೆ ಬಲಿಷ್ಠ ಬ್ರಿಟಿಷ್ ಸೇನೆಯಲ್ಲಿದ್ದ ಸೈನಿಕರಿಗಿಂತ ಹೆಚ್ಚು ಮಂದಿಯನ್ನು ರಷ್ಯಾ ವಿರುದ್ಧದ ಉಕ್ರೇನ್ ಯುದ್ಧಕ್ಕೆ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ನೀಡಬೇಕಾಗುತ್ತದೆ.
ತನ್ನೊಳಗಿನ ಫ್ಲ್ಯಾಷ್‌ಮ್ಯಾನ್‌ನನ್ನು ಕಂಡುಕೊಂಡಿರುವ ಸ್ಟಾರ್ಮರ್ ಇದೀಗ ಬ್ರಿಟನ್ನಿನ ರಕ್ಷಣಾ ವೆಚ್ಚವನ್ನು ಶೇ.2.3ರಿಂದ ಶೇ.2.5ಕ್ಕೆ ಹೆಚ್ಚಿಸಿದ್ದಾರೆ. ಇದು ದೇಶದ ಜಿಡಿಪಿಯ ಐದನೇ ಒಂದು ಭಾಗವಾಗುತ್ತದೆ. ಈ ನಿರ್ಧಾರಕ್ಕೆ ಕೃತಕವಾಗಿ ದೊರಕಿಸಿಕೊಂಡ ಮೆಚ್ಚುಗೆಯ ಚಪ್ಪಾಳೆಯನ್ನು ಕೇಳಿಸಿಕೊಂಡರೆ ಈ ಅಂಕಿಸಂಖ್ಯೆಗಳನ್ನು ನೀವು ನಂಬುವುದಿಲ್ಲ. ನಿಜ ಏನೆಂದರೆ ಸ್ಟಾರ್ಮರ್ ಅಸಹಾಯಕ. ಮಿಲಿಟರಿ ಕಸರತ್ತನ್ನು ಆರಂಭಿಸಿದ್ದು ಅವರಲ್ಲ. ಅಥವಾ ಯಾವುದೋ ಯುದ್ಧಕ್ಕೆ ತಮ್ಮ ದೇಶದ ಸೈನಿಕರನ್ನು ಕಳುಹಿಸುವುದಕ್ಕಾಗಿ ಬ್ರಿಟಿಷ್ ನಾಗರಿಕರಿಗೆ ಹೆಚ್ಚಿನ ತೆರಿಗೆ ಹಾಕುವುದಕ್ಕೂ ಅವರು ಸಿದ್ಧರಿಲ್ಲ. ಏಕೆಂದರೆ ಅವರ ಕುರ್ಚಿಯೂ ಉಳಿಯಬೇಕು ನೋಡಿ.
ಕಳೆದ ಏಳು ದಶಕದಿಂದ ಅಮೆರಿಕದ ಆರ್ಥಿಕತೆಯನ್ನು ಯುರೋಪಿಯನ್ ದೇಶಗಳು ತಮ್ಮ ಭದ್ರತೆಗಾಗಿ ಚೆನ್ನಾಗಿ ಬೋಳಿಸುತ್ತಿವೆ. ಅಷ್ಟಾಗಿಯೂ ಎತ್ತರದ ಉಪ್ಪರಿಗೆಯಲ್ಲಿ ನಿಂತು ಉಪದೇಶ ಮಾಡುತ್ತವೆ. ಅದೃಷ್ಟವಶಾತ್ ಜರ್ಮನಿ ಉಪದೇಶ ಮಾಡುವುದಿಲ್ಲ. ಆದರೆ ಇದರಿಂದ ವಾಸ್ತವಾಂಶ ಬದಲಾಗುವುದಿಲ್ಲ. ಜರ್ಮನ್ನರು ಈಗ ಆರಂಭಿಸಿದರೂ ಅವರಲ್ಲಿರುವ ಪೊರಕೆಗಳನ್ನು ಗನ್‌ಗಳಾಗಿ ಪರಿವರ್ತಿಸಲು ಕನಿಷ್ಠ 10 ವರ್ಷ ಬೇಕು.
ಅಮೆರಿಕನ್ನರಿಗೆ ಇದು ಗೊತ್ತಿದೆ. ಅಮೆರಿಕನ್ನರನ್ನು ಎಲ್ಲಾ ದೇಶಗಳೂ ಬೇಕಾಬಿಟ್ಟಿಯಾಗಿ ಸುಲಿಗೆ ಮಾಡುತ್ತಿವೆ ಎಂದು ಟ್ರಂಪ್ ಗುಡುಗುತ್ತಾರೆ. ನ್ಯಾಟೋದ ಶೇ.70ರಷ್ಟು ಖರ್ಚನ್ನು ಅಮೆರಿಕ ನೋಡಿಕೊಳ್ಳುತ್ತದೆ. ಹೀಗೆ ಪುಕ್ಕಟೆಯಾಗಿ ಕೊಡುವುದು ಟ್ರಂಪ್‌ರನ್ನು ಸುಸ್ತಾ ಗಿಸಿದೆ. ಯುರೋಪಿಯನ್ ದೇಶಗಳು ತಮ್ಮ ಭದ್ರತೆಗಾಗಿ ಜಿಡಿಪಿಯ ಶೇ.5ರಷ್ಟು ಹಣವನ್ನಾದರೂ ಖರ್ಚು ಮಾಡಬೇಕು ಎಂದು ಅವರು ಹಲವು ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ.
ಆದರೆ ಯುರೋಪ್ ಕಿವಿ ಕೇಳದಂತೆ ನಟಿಸುತ್ತಿದೆ. ಯುರೋಪ್ ಏನಾದರೂ ಶೇ.5ರಷ್ಟು ಹಣವನ್ನು ಖರ್ಚು ಮಾಡಿಯೇಬಿಟ್ಟಿದ್ದರೆ ರಷ್ಯಾ ಕೀವ್ ಬದಲು ಮಾಸ್ಕೋದಲ್ಲೇ ತೆಪ್ಪಗಿರು ತ್ತಿತ್ತು. ಹಾಗೆ ನೋಡಿದರೆ ಮ್ಯಾಕ್ರನ್ ಮತ್ತು ಸ್ಟಾರ್ಮರ್ ವಿಷಯದಲ್ಲಿ ಟ್ರಂಪ್ ಸಾಕಷ್ಟು ಉದಾರಿಯಾಗಿಯೇ ನಡೆದುಕೊಂಡಿದ್ದಾರೆ. ಆದರೂ ಅವರಿಬ್ಬರು ಶ್ವೇತಭವನದಲ್ಲಿ ಬದಲಾದ ವ್ಯವಸ್ಥೆಯ ಬಿಸಿ ಅನುಭವಿಸಿದ್ದಾರೆ. ‘ದಿ ಟೆಲಿಗ್ರಾಫ್’ನ ಮ್ಯಾಡೆಲಿನ್ ಗ್ರಾಂಟ್ ಇದನ್ನು ಬಹಳ ಕಠೋರವಾಗಿ ಬರೆದಿದ್ದಾರೆ.
ಟ್ರಂಪ್ -ಸ್ಟಾರ್ಮರ್ ಭೇಟಿಯ ಬಗ್ಗೆ ಬರೆಯುತ್ತಾ ಅವರು, “ಅಗ್ಗಿಷ್ಟಿಕೆಯ ಪಕ್ಕ ನಡೆದ ಮಾತುಕತೆ. ಅಲ್ಲಿ ಅಗ್ಗಿಷ್ಟಿಕೆ ಉರಿಯುತ್ತಿರಲಿಲ್ಲ ಮತ್ತು ನಿಜವಾಗಿಯೂ ಮಾತುಕತೆ ಕೂಡ ನಡೆಯುತ್ತಿರಲಿಲ್ಲ. ಶಾಲೆಯಲ್ಲಿ ರ‍್ಯಾಗಿಂಗ್‌ಗೆ ಒಳಗಾದ ಹುಡುಗನಂತೆ ಪ್ರಧಾನಿ ಸ್ಟಾರ್ಮರ್ ಅಸಹಾಯಕರಾಗಿದ್ದರು. ಏಕಪಾತ್ರಾಭಿನಯದ ರೀತಿಯಲ್ಲಿ ಟ್ರಂಪ್ ಒಂದೇ ಸಮನೆ ಬಡಬಡಿಸುತ್ತಿದ್ದರು.
ಮಧ್ಯೆ ಮಧ್ಯೆ ಕೀರಲು ಸ್ವರದಲ್ಲಿ ಸ್ಟಾರ್ಮರ್ ಮಾತನಾಡಲು ಯತ್ನಿಸಿದರೂ ಅದು ನಿರರ್ಥಕವಾಗಿತ್ತು. ಟ್ರಂಪ್ ಮಾತ್ರ ತನಗೆ ಯಾರು ಇಷ್ಟ ಎಂಬ ಬಗ್ಗೆ ನಿರರ್ಗಳವಾಗಿ ಭಾಷಣ ಬಿಗಿಯುತ್ತಲೇ ಇದ್ದರು: ವ್ಲಾದಿಮಿರ್ ಪುಟಿನ್, ಕಿಂಗ್ ಚಾರ್ಲ್ಸ್ ಮತ್ತು ಸ್ಟಾರ್ಮರ್ ಪತ್ನಿ ವಿಕ್ಟೋರಿಯಾ..." ಅಮೆರಿಕ ಎತ್ತಿರುವ ವಿಶ್ವಾಸಾರ್ಹತೆಯ ಪ್ರಶ್ನೆಯಿಂದ ಯುರೋಪ್‌ಗೆ ನಿಜಕ್ಕೂ ಅಚ್ಚರಿಯಾಗಬೇಕು.
ಬಹುಶಃ ಅವರು ಅಮೆರಿಕನ್ನರು ಬರೆದ ಇತಿಹಾಸ ಓದುವುದನ್ನು ನಿಲ್ಲಿಸಿದ್ದಾರೆ. ವುಡ್ರೋ ವಿಲ್ಸನ್ ಆಗಲಿ ಅಥವಾ -ಂಕ್ಲಿನ್ ರೂಸ್‌ವೆಲ್ಟ್ ಆಗಲಿ ತಮ್ಮನ್ನು ತಾವು ಪ್ರತ್ಯೇಕತಾ ವಾದಿಯೆಂದು ತಿಳಿದಿರಲಿಲ್ಲ. ಆದರೆ ಇಬ್ಬರೂ ಅಮೆರಿಕಕ್ಕೆ ಬಿಸಿ ತಟ್ಟುವವರೆಗೆ ಯುರೋಪ್‌ನ ‘ವಿಶ್ವ ಯುದ್ಧ’ದಲ್ಲಿ ಪ್ರವೇಶಿಸುವುದರಿಂದ ದೂರವೇ ಉಳಿದಿದ್ದರು. ಕೊನೆಗೆ ರೂಸ್‌ವೆಲ್ಟ್ ನೆರವು ನೀಡಿದರು, ಆದರೆ ಪರ್ಲ್ ಹಾರ್ಬರ್ ಮೇಲೆ ದಾಳಿ ನಡೆಸಿ ಜಪಾನ್ ಎಡವಟ್ಟು ಮಾಡುವವರೆಗೆ ಹಿಟ್ಲರನ ವಿನಾಶಕಾರಿ ಫ್ಯಾಸಿಸಂ ವಿರುದ್ಧ ನೇರವಾಗಿ ಯುದ್ಧಕ್ಕೆ ಇಳಿಯಲಿಲ್ಲ. ಪರ್ಲ್ ಹಾರ್ಬರನ್ನು ಜಪಾನ್ ಗೆದ್ದಿತು, ಆದರೆ ಯುದ್ಧದಲ್ಲಿ ಸೋತಿತು.
1956ರಲ್ಲಿ ಮಿತ್ರದೇಶಗಳನ್ನು ಯುದ್ಧದಲ್ಲಿ ಮುನ್ನಡೆಸುತ್ತಿದ್ದ ಡ್ವೈಟ್ ಡಿ.ಐಸೆನ್ ಹೋವರ್ ಬ್ರಿಟನ್ ಮತ್ತು ಫ್ರಾನ್ಸ್‌ಗೆ ಅವುಗಳ ಮಿತಿಯೇನು ಎಂಬುದನ್ನು ಸರಿಯಾಗಿ ಅರ್ಥ ಮಾಡಿಸಿದರು. ಈಜಿಪ್ಟ್‌ನಿಂದ ಸೂಯೆಜ್ ಕಾಲುವೆಯನ್ನು ವಶಪಡಿಸಿಕೊಳ್ಳಲು ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಇಸ್ರೇಲ್ ಜತೆ ಸೇರಿ ಪ್ರಯತ್ನಿಸಿದ್ದವು.
ಆಗ ಐಸೆನ್‌ಹೋವರ್ ಅಮೆರಿಕದ ಬೆಂಬಲವನ್ನು ನಿಲ್ಲಿಸಿಬಿಟ್ಟರು. ಜಗತ್ತಿನ ನಾನಾ ದೇಶ ಗಳನ್ನು ವಸಾಹತುಗಳ ರೀತಿಯಲ್ಲಿ ಆಳುತ್ತಾ ತಾವೇ ಬಲಿಷ್ಠರು ಎಂದುಕೊಂಡಿದ್ದ ಬ್ರಿಟನ್ ಮತ್ತು ಫ್ರಾನ್ಸ್ ಕಂಗಾಲಾಗಿ ನೆಲಕಚ್ಚಿದವು. ಈಗ ಟ್ರಂಪ್ ಮತ್ತೆ ಸೂಯೆಜ್ ಪ್ರಕರಣವನ್ನು ಈ ದೇಶಗಳಿಗೆ ನೆನಪಿಸಿದ್ದಾರಾ? ಮಾತು ಕೇಳಿ, ಇಲ್ಲವೇ ನಿಮ್ಮ ಕರ್ಮ ನೀವು ಅನುಭವಿಸಿ!
ಅಮೆರಿಕದ ಜತೆಗೆ ಜೆಲೆನ್‌ಸ್ಕಿ ನಡೆಸಿದ ಸಂಘರ್ಷವನ್ನು ಖ್ಯಾತ ಭೂರಾಜಕೀಯ ವಿಶ್ಲೇಷಕ ಸ್ಟೀವ್ ಬ್ಯಾನನ್ ‘ಜಗತ್ತನ್ನು ಬದಲಿಸಿದ ಆ ಹತ್ತು ನಿಮಿಷಗಳು’ ಎಂದು ಬಣ್ಣಿಸಿದ್ದಾರೆ. ಇದೊಂದು ಉತ್ಪ್ರೇಕ್ಷೆಯ ಹೇಳಿಕೆ. ಏಕೆಂದರೆ ಈಗಾಗಲೇ ಕೆಲ ಸಮಯದಿಂದ ಅಮೆರಿಕದ ಅನುಮತಿಯಿಲ್ಲದೆ ಜಗತ್ತು ಬದಲಾಗುತ್ತಾ ಬಂದಿದೆ. ಆದರೆ ಆ ಹತ್ತು ನಿಮಿಷಗಳು ಯುರೋಪನ್ನು ಬದಲಿಸಿರುವುದು ನಿಜ. 2025ರ ಫೆಬ್ರವರಿ 28ರ ಶುಕ್ರವಾರದ ಘಟನೆ ಅನೇಕ ಪುಸ್ತಕಗಳನ್ನು ಹುಟ್ಟುಹಾಕಲಿದೆ.
ಶ್ವೇತಭವನದಿಂದ ಕೂಗಳತೆಯ ದೂರದಲ್ಲಿ ನೆಲೆಸಿರುವ ಪೀಟರ್ ಮ್ಯಾಂಡಲ್ಸನ್ ಮಾರ್ಚ್ 2ರಂದು ಜೆಲೆನ್‌ಸ್ಕಿಗೆ ‘ಖನಿಜಗಳನ್ನು ಕೇಳುತ್ತಿರುವ ಟ್ರಂಪ್‌ಗೆ ಬೇಷರತ್ ಬೆಂಬಲ ಘೋಷಿಸಿ ಕದನವಿರಾಮಕ್ಕೆ ಒಪ್ಪಿಕೊಳ್ಳುವ ಮೂಲಕ ರಷ್ಯನ್ನರನ್ನು ಮಟ್ಟಹಾಕಿ’ ಎಂದು ಸಲಹೆ ನೀಡಿದ್ದರು. ಅಸ್ತಿತ್ವವೇ ಡೋಲಾಯಮಾನವಾಗಿರುವ ಜೆಲೆನ್‌ಸ್ಕಿಗೆ ಈತ ನೀಡಿದ ಸಲಹೆ ಸಾಕಷ್ಟು ಉದಾರವಾಗಿತ್ತು. ಆದರೆ, ಟ್ರಂಪ್‌ರ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಸ್ ಕೊಂಚ ಕಠೋರ ನಿಲುವು ತಾಳಿದ್ದಾರೆ. ಜೆಲೆನ್‌ಸ್ಕಿ ದಾರಿಗೆ ಬಾರದಿದ್ದರೆ ಉಕ್ರೇನ್‌ಗೆ ಹೊಸ ನಾಯಕನ ಅಗತ್ಯವಿದೆ ಎಂದು ಮೈಕ್ ಹೇಳಿದ್ದಾರೆ.
ಉಕ್ರೇನ್‌ನಿಂದ ಟ್ರಂಪ್ ಖನಿಜಗಳನ್ನು ಕೇಳುತ್ತಿರುವುದು ಆ ದೇಶಕ್ಕೆ ಬೆಂಬಲ ನೀಡಲು ಭದ್ರತಾ ಗ್ಯಾರಂಟಿಯನ್ನು ಕೇಳಿದಂತೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಮಿತ್ರರಾಷ್ಟ್ರದ ಮೇಲೆ ದಾಳಿ ನಡೆದಾಗ ನೇರವಾಗಿ ಯುದ್ಧಕ್ಕೆ ಇಳಿಯುವುದರಿಂದ ಅಮೆರಿಕ ದೂರ ಸರಿಯಬಹುದೇ ಹೊರತು, ಅಮೆರಿಕನ್ನರ ಮೇಲೆ ಅಥವಾ ಅಮೆರಿಕದ ಹಿತಾಸಕ್ತಿಯ ಮೇಲೆ ದಾಳಿ ನಡೆದಾಗ ಅಮೆರಿಕದ ಯಾವುದೇ ಅಧ್ಯಕ್ಷ ಸುಮ್ಮನಿರಲು ಸಾಧ್ಯವಿಲ್ಲ.
ಉಕ್ರೇನ್‌ನಲ್ಲಿ ಅಮೆರಿಕದ ಹೂಡಿಕೆದಾರರು ಇರುವುದೇ ಒಂದು ರೀತಿಯಲ್ಲಿ ಭದ್ರತಾ ಗ್ಯಾರಂಟಿಯಿದ್ದಂತೆ. ಟ್ರಂಪ್ ಬೆಂಬಲಿಗರು ಇದನ್ನೆಲ್ಲ ಒಂದು ಅದ್ಭುತ ಚೆಸ್ ಆಟ ಎಂದು ಕರೆಯುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಅವರು ಟ್ರಂಪ್‌ಗೆ ಅಭಿನಂದನೆ ಗಳನ್ನೂ ಹೇಳಬಹುದು. ಆದರೆ ಈಗಲೂ ಚೆಸ್ ಬೋರ್ಡ್‌ನ ಮೇಲೆ ಪಾನ್‌ಗಳು ಸರಿಯಾದ ಆಯಕಟ್ಟಿನ ಜಾಗದಲ್ಲಿಯೇ ಇವೆ ಎಂಬುದನ್ನು ಯಾರೂ ಅಲ್ಲಗಳೆಯಲಾಗದು.
ಮಾತುಕತೆಯ ಮೇಜಿನ ಮೇಲೆ ಮುಂದಿನ ಪಾನ್ ನಡೆಸಲು ಎಷ್ಟು ಬೇಕಾದರೂ ಸಮಯ ಹಿಡಿಯಬಹುದು, ಆದರೆ ಅದಕ್ಕೆ ಅಗತ್ಯವಿರುವುದು ಒಂದೇ ಒಂದು ಹೆಜ್ಜೆಯಷ್ಟೆ. ಕದನ ವಿರಾಮವೇ ಆ ಹೆಜ್ಜೆ. ಶಾಂತಿಯೆಂಬುದು ಬೆಂಕಿಯುಗುಳುವ ಗ್ರೀಕ್ ಪೌರಾಣಿಕ ಪ್ರಾಣಿ ಯಂತೆ. ಅದು ಯಾವತ್ತಾದರೂ ಶಾಂತವಾಗಲು ಸಾಧ್ಯವಿದೆ ಅಂತಾದರೆ ಸಾಕಷ್ಟು ಸಮಯವಂತೂ ಹಿಡಿಯುತ್ತದೆ.
(ಲೇಖಕರು ಹಿರಿಯ ಪತ್ರಕರ್ತರು)