Saturday, 21st September 2024

’ಸ್ವಾಮಿದೇವನೆ ಲೋಕಪಾಲನೆ…’ ಬರೆದನೀ ಕವಿತಿಲಕನೇ

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

‘ಅಯ್ಯಾಶಾಸ್ತ್ರೀ ಸೋಸಲೆ’ ಎಂದರೆ ಹೆಚ್ಚಿನವರಿಗೆ ತತ್‌ಕ್ಷಣಕ್ಕೆ ಗೊತ್ತಾಗಲಿಕ್ಕಿಲ್ಲ. ಹಲವರು ಅವರ ಹೆಸರನ್ನೂ ಕೇಳಿರಲಿಕ್ಕಿಲ್ಲ. ಆದರೆ ‘ಸ್ವಾಮಿದೇವನೆ ಲೋಕ ಪಾಲನೆ ತೇನಮೋಸ್ತು ನಮೋಸ್ತುತೇ…’ ಪ್ರಾರ್ಥನೆ ಗೀತೆಯನ್ನು ನೆನಪಿಸಿದರೆ ಬಹುತೇಕ ಎಲ್ಲರೂ ನೇರವಾಗಿ ಬಾಲ್ಯದ ಶಾಲಾದಿನಗಳ ನೆನಪಿನ ಓಣಿಗೆ ಇಳಿಯುತ್ತಾರೆ. ಆ ನಿತ್ಯನೂತನ ಪ್ರಾರ್ಥನೆಯ ಚುಂಬಕಶಕ್ತಿಯೇ ಅದು.

ಬರೆದ ಕವಿಯ ಹೆಸರು ಅಯ್ಯಾಶಾಸ್ತ್ರೀ. 1854ರಲ್ಲಿ ಹುಟ್ಟಿ 1934ರಲ್ಲಿ ಅಸ್ತಂಗತರಾದ ಒಬ್ಬ ಧೀಮಂತ ಕವಿಸೂರ್ಯ. ಆ ಪ್ರಾರ್ಥನೆಯೂ ನಮ್ಮೆಲ್ಲರ ಬಾಳಿಗೆ ಬೆಳಕು ನೀಡುವ ಸೂರ್ಯನದೇ ಸ್ತುತಿ. ಜಗಜ್ಜ್ಯೋತಿ ಯಾದ ಸೂರ್ಯನಿಗೆ ನಾವೆಲ್ಲರೂ ಏಕಪ್ರಕಾರವಾಗಿ ಕೃತಜ್ಞರಾಗಿರುತ್ತೇವೆಂಬ ವಿಶ್ವಮಾನವ ಮನೋಭಾವ ಆ ಪ್ರಾರ್ಥನೆಯಲ್ಲಿದೆ. ಅಂತೆಯೇ ಮನಸ್ಸಿಗೆ ಧೈರ್ಯ ತುಂಬಿ ಮುನ್ನಡೆಸುವ ಅದ್ಭುತ ಶಕ್ತಿಯೂ. ಶಾಲೆಗಳಲ್ಲಿ ಬೆಳಗಿನ ಹೊತ್ತು ಪ್ರಾರ್ಥನೆಯ ಬಳಿಕವೇ ಪಾಠ ಪ್ರವಚನ ಆರಂಭ ಎಂಬ ಕ್ರಮ ಆದಿಕಾಲದಿಂದಲೂ ಬಂದಿರುವುದು ಅದೇ ಕಾರಣಕ್ಕೆ.

ವಿಪರ್ಯಾಸವೆಂದರೆ ಈಗ ಢೋಂಗಿ ಜಾತ್ಯತೀತರು ಪ್ರಾರ್ಥನೆಯ ನಿಜವಾದ ಮಹತ್ತ್ವವನ್ನರಿಯದೆ, ಅದಕ್ಕೆ ಧರ್ಮ-ಜಾತಿ-ಮತಗಳ ಲೇಪಹಚ್ಚಿರುವುದರಿಂದ ಶಾಲೆಗಳಲ್ಲೀಗ ಪ್ರಾರ್ಥನೆಯೇ ಇಲ್ಲವಾಗಿದೆ. ಇಲ್ಲೊಂದು ಸಂಬಂಧಿತ ಚಿಕ್ಕ ಮಾಹಿತಿಯನ್ನೂ ಉಲ್ಲೇಖಿಸಬೇಕು. ಏನೆಂದರೆ, ಶಾಲೆಗಳಲ್ಲಿ ಹಾಡುತ್ತಿದ್ದದ್ದು ಮತ್ತು ಹೆಚ್ಚಿನವರಿಗೆ ಈಗಲೂ ನೆನಪಿರುವುದು ‘ಸ್ವಾಮಿದೇವನೆ ಲೋಕಪಾಲನೆ…’ ಗೀತೆಯ ಹ್ರಸ್ವ ರೂಪ. ಬಿ.ಆರ್.ಪಂತುಲು ನಿರ್ದೇಶನದ ‘ಸ್ಕೂಲ್ ಮಾಸ್ಟರ್’  ಚಿತ್ರದಲ್ಲಿ ಅಳವಡಿಸಿಕೊಂಡ, ಕಣಗಾಲ್ ಪ್ರಭಾಕರ ಶಾಸ್ತ್ರಿಯವರು ಅಷ್ಟಿಷ್ಟು ಪರಿಷ್ಕರಿಸಿದ, ಎರಡು ಚರಣಗಳಷ್ಟೇ ಇರುವ ಆವೃತ್ತಿ. ಆದರೆ ಮೂಲದಲ್ಲಿ ಅಯ್ಯಾ ಶಾಸ್ತ್ರಿಯವರು ಬರೆದಗೀತೆಯಲ್ಲಿ ಒಟ್ಟು ಎಂಟು ಚರಣಗಳು.

ಒಂದೊಂದೂ ಅತಿ ಸುಂದರ, ಅರ್ಥಗರ್ಭಿತ. ನನ್ನಲ್ಲಿರುವ ‘ಕನ್ನಡ ಕಾವ್ಯಗಳ ಗೆಜ್ಜೆನಾದ’ ಎಂಬ ಅಮೂಲ್ಯಗ್ರಂಥದಲ್ಲಿ ಆ ಪೂರ್ಣ ಆವೃತ್ತಿ ಇದೆ, ಹೀಗೆ: ಸ್ವಾಮಿ ದೇವನೆಲೋಕಪಾಲನೆ ತೇ ನಮೋಸ್ತು ನಮೋಸ್ತುತೇ ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ| ನೇಮಿಸೆಮ್ಮೊಳು ಧರ್ಮಕಾರ್ಯವತೇ ನಮೋಸ್ತು  ನಮೋಸ್ತುತೇ ಕ್ಷೇಮದಿಂದಲಿ ಪಾಲಿಸೆಮ್ಮನು ತೇ ನಮೋಸ್ತು ನಮೋಸ್ತುತೇ||1||

ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ| ಕಾವರಿಲ್ಲವು ನಿನ್ನ ಬಿಟ್ಟರೆ ಸೂರ್ಯನೇ ಜಗದೀಶನೇ ಜೀವಕೋಟಿಯು ನಿನ್ನ ಈ ಬೆಳಕಿಂದ ಜೀವಿಪುದಲ್ಲವೆ||2||
ರಾತ್ರೆ ನಿದ್ದೆಯ ಗೈವ ಕಾಲದಿ ನೀನೆ ನಮ್ಮನು ಕಾದೆಯೈ ಮಿತ್ರನೆಂಬುವ ನಾಮಧೇಯವು ಸತ್ಯವಾಯಿತು ನಿನ್ನೊಳು|
ಸ್ತೋತ್ರ ಮಾಡುವ ಹಾಗೆ ನಿನ್ನನ್ನು ಹಕ್ಕಿಗಳ್ ದನಿಗೈವವೈ ಚಿತ್ರಭಾನುವೆ ನೋಡಿ ನಿನ್ನನದೆಲ್ಲಿ ಪೋದುದೊಕತ್ತಲೆ||3||
ಉತ್ತಮೋತ್ತಮ ನಿನ್ನ ಪಾದದ ಭಕ್ತಿಯೇ ಸ್ಥಿರವಲ್ಲವೇ ವಿತ್ತವೆಂಬುದು ಗಾಳಿಯಲ್ಲಿಹ ದೀಪದಂದದಿ ಚಂಚಲ|
ಮತ್ತರಾಗುತ ಬಿಟ್ಟು ನಿನ್ನನುಕೆಟ್ಟಯೋಚನೆ ಗೈಯದಾ ಚಿತ್ತವಂ ನಮಗಿತ್ತು ರಕ್ಷಿಸು ಪದ್ಮನಾಭ ಸುರೇಶನೇ||5||
ಆಡುವಾಗಲು ನಾವು ಭೋಜನ ಮಾಡುವಾಗಲು ಸರ್ವದಾ
ನೋಡಿ ನೀ ದಯದಿಂದ ನಮ್ಮನು ಪಾಲಿಸೈ ಭಗವಂತನೇ|
ಬೇಡಿಕೊಂಬೆವು ನಮ್ಮ ದೇಹಕೆಸೌಖ್ಯವಂಬಲ ಪುಷ್ಟಿಯಂ
ನೀಡು ನಿನ್ನಯ ಪಾದಭಕ್ತಿಯನೆಂದಿಗೂ ಬಿಡಲಾರೆವು ||5||
ನಿನ್ನ ದರ್ಶನಗೈವ ನೇತ್ರದ ಜನ್ಮ ಸಾರ್ಥಕವಲ್ಲವೇ
ನಿನ್ನ ಪೂಜಿಪಹಸ್ತವೇ ಬಲು ದೊಡ್ಡದಲ್ಲವೆ ದೇವನೇ|
ನಿನ್ನ ನಾಮವ ಪೇಳ್ವ ನಾಲಗೆ ಧನ್ಯವಲ್ಲವೆ ಸರ್ವದಾ
ನಿನ್ನ ಜಾನಿಪ ಚಿತ್ತವೃತ್ತಿಯೆ ಯೋಗ್ಯವಲ್ಲವೆ ಲೋಕದಿ ||6||
ನೀನೆತಾಯಿಯು ನೀನೆತಂದೆಯು ನೀನೆ
ನಮ್ಮೊಡನಾಡಿಯೂ
ನೀನೆಬಂಧುವು ನೀನೆ ಭಾಗ್ಯವು ನೀನೆವಿದ್ಯೆಯುಬುದ್ಧಿಯೂ|
ನೀನು ಪಾಲಿಸದಿದ್ದರೆಮ್ಮನು ಬೇರೆ ಪಾಲಿಪರಿಲ್ಲಲೈ
ದೀನಪಾಲನೆ ನಿನ್ನಧೀನದೊಳಿರ್ಪ ನಮ್ಮನು ಪಾಲಿಸೈ ||7||
ಶ್ರೀ ಮುಕುಂದನೆ ಗಾಳಿಯಲ್ಲಿಯು ನೀರಿನಲ್ಲಿಯು ನೀನಿಹೇ
ಭೂಮಿಯಲ್ಲಿಯು ಅಗ್ನಿಯಲ್ಲಿಯು ಬಾನಿನಲ್ಲಿಯು
ನೀನಿಹೆ|
ರಾಮನೂ ನರಸಿಂಹನೂ ಪರಮಾತ್ಮ ಕೃಷ್ಣನು ನೀನೆಯೇ
ನೀ ಮಹಾತ್ಮನು ನಮ್ಮ ತಪ್ಪುಗಳೆಲ್ಲ ಮನ್ನಿಸಿ ಪಾಲಿಸೈ ||8||
ಆರೇಳುವರ್ಷಗಳ ಹಿಂದೆ ನಾನೊಮ್ಮೆ ಇದನ್ನು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದೆ.

‘ಬಿಟ್ಟು ಬಂದ ಬಾಲ್ಯದ ಬಾಗಿಲನ್ನೊಮ್ಮೆ ತೆರೆದ ಅನುಭವವಾಯ್ತು. ನನ್ನ ಶಾಲೆಯ ಕೋಣೆಕೋಣೆಗಳನ್ನೆಲ್ಲ ತಿರುಗಿ ಪ್ರಾರ್ಥನೆ ಮಾಡೋಜಾಗಕ್ಕೆ ಬಂದಾಗ ಬೆಲ್ ಠಣ್ ಎಂದು ಹೊಡೆದಂತಾಯಿತು. ಪ್ರಾರ್ಥನೆ ಪ್ರಾರಂಭವಾಯಿತು.

ಅದೂ ಕಣ್ಮುಚ್ಚಿ ಕೈಮುಗಿದು ಹೇಳುವ ನಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಿದ್ದಾನೆ ಅನ್ನೋ ನಿಷ್ಕಲ್ಮಷ ಭಾವನೆ. ಮನಸಿಗೆ ಇಂತಹ ಮೆಲುಕುಗಳಿಂದಲ್ಲದೆ ಬೇರೆಲ್ಲಿಂದ ಸಿಗುತ್ತದೆ ಸಂತೃಪ್ತಿ?’ ಅಂತೆಲ್ಲ ಭಾವುಕರಾಗಿ ಕೆಲವರು ಸ್ಪಂದಿಸಿದ್ದರು. ‘ಸೋಸಲೆ ಎಂಬುದು ತಿರುಮಕೂಡಲು ನರಸಿಪುರದಿಂದ 3 ಕಿ.ಮೀ ದೂರದಲ್ಲಿ ಕಾವೇರಿ ನದಿ ತೀರದ ಒಂದು ಪುಟ್ಟಗ್ರಾಮ.

ಇನ್ನೊಂದು ತೀರದಲ್ಲಿ ಗರ್ಗೇಶ್ವರಿ ಎಂಬ ಗ್ರಾಮ. ಇದು ನನ್ನ ತಾಯಿಯವರ ಊರು. ನಾನು ಬಾಲ್ಯದ ಮೂರ್ನಾಲ್ಕು ವರ್ಷಗಳನ್ನು ಕಳೆದ ಊರು. ಆಶ್ಚರ್ಯ ವೆಂದರೆ ಅಯ್ಯಾಶಾಸ್ತ್ರಿಗಳ ಬಗ್ಗೆ ಅಷ್ಟಾಗಿಎಲ್ಲೂಬರೆದಿಲ್ಲದಿರುವುದು. ನನ್ನ ತಾಯಿಯವರಿಗೇ ಅವರ ಬಗ್ಗೆ ಏನೂಗೊತ್ತಿಲ್ಲ!’ ಎಂದು ಮೈಸೂರಿನಿಂದ ನರಸಿಂಹ ರಾಘವನ್ ಎಂಬುವರು ಬರೆದಿದ್ದರೆ, ‘ಈ ಪ್ರಾರ್ಥನೆಯನ್ನು ಬರೆದ ಅಯ್ಯಾಶಾಸ್ತ್ರಿಗಳು ನನ್ನ ಪತ್ನಿ ಪೂರ್ಣಿಮಾಳ ಮುತ್ತಜ್ಜ’ ಎಂದು ಇನ್ನೊಬ್ಬ ಓದುಗ ಮಿತ್ರ ಸತ್ಯನಾರಾಯಣ ರಾವ್ ಬರೆದಿದ್ದರು.

ಮತ್ತೊಂದು ಆತ್ಮೀಯ ಮಾಹಿತಿ ಕ್ಯಾಲಿಫೋರ್ನಿಯಾದಿಂದ ಸಂಧ್ಯಾರವೀಂದ್ರನಾಥ್ ಬರೆದಿದ್ದರು: ‘ಇದು ನನ್ನ ನೆಚ್ಚಿನ ಪ್ರಾರ್ಥನೆ. ನಾವಿಲ್ಲಿ ನಡೆಸುವ ಕನ್ನಡಕಲಿ ತರಗತಿಗಳಲ್ಲೂ ಮಕ್ಕಳಿಂದ ಹಾಡಿಸುತ್ತೇವೆ. ಇದನ್ನು ಬರೆದ ಅಯ್ಯಾಶಾಸ್ತ್ರಿಯವರು ನಮ್ಮ ಸಂಬಂಧಿಕರು. ನನ್ನ ಅಮ್ಮನ ಅವಳಿಸೋದರಿ ಮೀನಾಚಿಕ್ಕಮ್ಮನ ಗಂಡ ಲಕ್ಷ್ಮೀನಾರಾಯಣ ಅವರು ಅಯ್ಯಾಶಾಸ್ತ್ರಿಯವರ ಮೊಮ್ಮಗ. ಮೀನಾ ಚಿಕ್ಕಮ್ಮ ಈ ಪದ್ಯವನ್ನು ಅಯ್ಯಾಶಾಸ್ತ್ರಿಯವರ ಮುತ್ತು ಪೋಣಿಸಿದಂಥ ಕೈಬರಹದ ಪ್ರತಿಯಲ್ಲೇ ಓದಿರುವ ಪುಣ್ಯಗಳಿಸಿದವರು.’ ಆವತ್ತಿನಿಂದಲೂ ನನಗೆ ಅಯ್ಯಾಶಾಸ್ತ್ರಿಯವರ ಬಗ್ಗೆಹೆಚ್ಚಿನ ವಿವರ ತಿಳಿದುಕೊಳ್ಳಬೇಕೆಂಬ ಕುತೂಹಲವೊಂದಿತ್ತು.
ವಿಕಿಪಿಡಿಯಾದಲ್ಲಾಗಲೀ ಇನ್ನಿತರ ವೆಬ್ ಪುಟಗಳಲ್ಲಾಗಲೀ ಅಷ್ಟಿಷ್ಟು ಮಾಹಿತಿ ಇದೆ ನಿಜ.

ನನ್ನ ಬಳಿಯಿರುವ ಇನ್ನೊಂದು ಅತ್ಯಮೂಲ್ಯ ಪುಸ್ತಕ ‘ಕರ್ನಾಟಕ ನುಡಿ ನಿಪುಣರು’ ಇದರಲ್ಲೂ, ಚುಕ್ಕಿ ಚಿತ್ರಕಲಾವಿದ ನಾ.ರೇವನ್ ಅವರಿಂದ ಅಯ್ಯಾ ಶಾಸ್ತ್ರಿ ಗಳದೊಂದು ಚಂದದ ಚುಕ್ಕಿಚಿತ್ರ ಮತ್ತೊಂದಿಷ್ಟು ಸಂಕ್ಷಿಪ್ತ ಮಾಹಿತಿ ಲಭ್ಯವಿದೆ. ಅದೆಲ್ಲವೂ ಬಹುಮಟ್ಟಿಗೆ ಎಕಡೆಮಿಕ್ ಮಾಹಿತಿ. ‘ಅಯ್ಯಾಶಾಸ್ತ್ರಿಗಳ ಪ್ರಾರಂಭಿಕ ಶಿಕ್ಷಣ ಮನೆಯಲ್ಲಿಯೇ ನೆರವೇರಿತು. ನಂತರ ಮೈಸೂರಿಗೆ ಹೋಗಿ ಪೆರಿಯಸ್ವಾಮಿ ತಿರುಮಲಾಚಾರ್ಯರಲ್ಲಿ ವ್ಯಾಕರಣ, ತರ್ಕ, ಅಲಂಕಾರಾದಿ ಶಾಸ್ತ್ರಾಧ್ಯಯನ ನಡೆಸಿದರು. ಚಿತ್ರಕಲೆ ಮತ್ತು ಸಂಗೀತದಲ್ಲೂ ವಿಶೇಷ ಪರಿಣತಿ ಇತ್ತು.

ಮೈಸೂರು ಮಹಾರಾಜರುಗಳಾದ ಚಾಮರಾಜ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಆಸ್ಥಾನ ವಿದ್ವಾಂಸರಾಗಿದ್ದ ಉದ್ದಾಮ ಪಂಡಿತ ಅವರು. ಕನ್ನಡ-ಸಂಸ್ಕೃತ ಉಭಯಭಾಷಾ ವಿಶಾರದ. ನಾಲ್ವಡಿ ಕೃಷ್ಣರಾಜಒಡೆಯರಿಗೂ, ಮಹಾರಾಣಿ ಪ್ರತಾಪಕುಮಾರಿ ದೇವಿಯವರಿಗೂ ಸಂಸ್ಕೃತವನ್ನು ಬೋಧಿಸುವ ‘ರಾಜಗುರು’ ಆಗಿದ್ದರು. ಭಾಷೋಜ್ಜೀವಿನೀ ಸಂಸ್ಥೆಯಲ್ಲಿ ಕನ್ನಡ ಪಂಡಿತರ ಹುದ್ದೆ ನಿರ್ವಹಿಸಿದರು. ಜಗನ್ಮೋಹನ ಮುದ್ರಾಕ್ಷರ ಶಾಲೆಯಲ್ಲಿ
ಸಂಸ್ಕೃತ-ಕನ್ನಡ ಗ್ರಂಥಗಳ ಪರಿಶೋಧಕ ಪಂಡಿತರಾಗಿಯೂ ಕೆಲಸ ಮಾಡಿದರು.

ಕರ್ನಾಟಕ ವಿಕ್ರಮೋರ್ವಶೀಯ, ಕರ್ನಾಟಕ ರಾಮಾಯಣ, ಕರ್ನಾಟಕ ನಳಚರಿತ್ರೆ, ಪ್ರತಾಪಸಿಂಹ ಚರಿತ್ರೆ ಮುಂತಾದ ನಾಟಕಗಳನ್ನೂ, ಶೇಷರಾಮಾಯಣಂ,
ಉತ್ತರರಾಮಾಯಣದ ರಾಮಾಶ್ವಮೇಧ, ದಮಯಂತಿ ಚರಿತ್ರೆ ಮುಂತಾದ ಷಟ್ಪದಿ ಕಾವ್ಯಗಳನ್ನೂ, ರಾಜಭಕ್ತಿ ಲಹರಿ, ಯಕ್ಷಪ್ರಶ್ನೆ, ಮಹಿಶೂರ ಮಹಾರಾಜ ಚರಿತಂ ಮುಂತಾದ ಚಂಪೂ ಕಾವ್ಯಗಳನ್ನೂ ಬರೆದರು. ಚಾಮರಾಜೇಂದ್ರ ಪಟ್ಟಾಭಿಷೇಕಂ, ಕೃಷ್ಣಾಂಬಪರಿಣಯಂ ಸಂಸ್ಕೃತ ಚಂಪೂಕಾವ್ಯಗಳು ಮತ್ತು ಕೆಲವು ಸ್ತೋತ್ರಗಳೂ ಅಯ್ಯಾ ಶಾಸ್ತ್ರಿಯವರ ಲೇಖನಿಯಿಂದ ಹರಿದು ಬಂದಿವೆ. 1913ರಲ್ಲಿ ವಿದ್ಯಾಭಿವೃದ್ಧಿ ಸಮಿತಿ ಸದಸ್ಯರಾಗಿ, ಮೈಸೂರು ವಿಶ್ವವಿದ್ಯಾಲಯದ ಪಠ್ಯ ಪುಸ್ತಕ ಸಮಿತಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆಸಲ್ಲಿಸಿದರು.

ಉತ್ತರ ಭಾರತದ ಜ್ಞಾನಸುಂದರಿ ಎಂಬ ವಿದುಷಿಯನ್ನು ಕವಿತಾಸಾಮರ್ಥ್ಯದಿಂದಲೇ ಸೋಲಿಸಿ ಮಹಾರಾಜರ ಮೆಚ್ಚುಗೆಗೆ ಪಾತ್ರರಾಗಿ ಮಹಾವಿದ್ವಾನ್ ಮತ್ತು
ಕವಿತಿಲಕ ಎಂಬ ಬಿರುದುಗಳಿಗೆ ಭಾಜನರಾದರು…’ ಇತ್ಯಾದಿ. ಇದಕ್ಕಿಂತಲೂ ಆಸಕ್ತಿಕರ ವಿವರಗಳು ಅಯ್ಯಾಶಾಸ್ತ್ರಿಯವರಬಗೆಗೆ ನನಗೆ ಸಿಕ್ಕಿದ್ದು ಪ್ರೊ. ಗರ್ಗೇಶ್ವರಿ ವೆಂಕಟಸುಬ್ಬಯ್ಯನವರ ‘ಶಾಸ್ತ್ರ ಕುತೂಹಲ’ ಪುಸ್ತಕದಲ್ಲಿ, ‘ಆಸ್ಥಾನ ಮಹಾವಿದ್ವಾನ್ ಕವಿತಿಲಕ ಅಯ್ಯಾಶಾಸ್ತ್ರಿಗಳ ಪೂರ್ವಜರು ಮತ್ತು ಶಾಸ್ತ್ರಿಗಳ ಸಾಂಸಾರಿಕಜೀವನ’ ಎಂಬ ಅಪರೂಪದ ಲೇಖನದಲ್ಲಿ.

ಗರ್ಗೇಶ್ವರಿ ಮತ್ತು ಸೋಸಲೆ ಇವು ಅಕ್ಕಪಕ್ಕದ ಗ್ರಾಮಗಳಾದ್ದರಿಂದ ಈ ವಿವರಗಳು ಹೆಚ್ಚು ಅಧಿಕೃತ ಮತ್ತು ಆಪ್ತ. ಅದರ ಕೆಲ ಮುಖ್ಯಾಂಶಗಳನ್ನು ನಾನಿಲ್ಲಿ
ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಸೋಸಲೆ ಅಯ್ಯಾ ಶಾಸ್ತ್ರಿಗಳ ಪೂರ್ವಜರು ವಿಜಯನಗರ ರಾಜ್ಯದಲ್ಲಿ ವಂಶಪಾರಂಪರ್ಯವಾಗಿ ಪ್ರಧಾನಿಗಳಾಗಿದ್ದರು.
ಇವರು ಹೊಯ್ಸಳ ಕರ್ನಾಟಕ ಬ್ರಾಹ್ಮಣ ಪಂಗಡದವರು. ತಾಳೀಕೋಟೆ (ರಕ್ಕಸತಂಗಡಿ) ಯುದ್ಧದ ನಂತರ ವಿಜಯನಗರ ಸೂರೆಗೊಂಡ ಮೇಲೆ, ಆಗ ಪ್ರಧಾನಿಗಳೂ ಮಹಾವಿದ್ವಾಂಸರೂ ಆಗಿದ್ದ ತಮ್ಮಣ್ಣ ಶಾಸ್ತ್ರಿಗಳು ಎಲ್ಲವನ್ನೂ ಕಳೆದುಕೊಂಡರು. ತಮ್ಮ ಓಲೆಗರಿ ಪುಸ್ತಕಗಳನ್ನು ಶತ್ರುಸೈನಿಕರು ಉಪಯೋಗಕ್ಕೆ ಬಾರದ ವಸ್ತುಗಳೆಂದು ಬಿಟ್ಟು ಹೋಗಿದ್ದುದನ್ನು ಕಂಡು ಸಂತೋಷ ಪಟ್ಟು ಅವುಗಳನ್ನು ಕೋಣಗಳ ಮೇಲೆ ಹೇರಿಸಿಕೊಂಡು ಸಂಸಾರ ಸಮೇತ ದಕ್ಷಿಣಕ್ಕೆ ವಲಸೆ ಹೊರಟರು. ಈ ಪರಿವಾರವನ್ನು ನೋಡಿದ ಆನೇಕಲ್ಲು ಪಾಳೇಗಾರನು ಶಾಸ್ತ್ರಿಗಳನ್ನು ಮರ್ಯಾದೆಯಿಂದ ಕಂಡುಅಲ್ಲಿಯೇ ಉಳಿಸಿಕೊಂಡನು.

ತಮ್ಮಣ್ಣಶಾಸ್ತ್ರಿಗಳ ಮೊಮ್ಮಗ ವೆಂಕಟರಾಮ ಭಟ್ಟರು ತಿರುಮಕೂಡಲು ನರಸೀಪುರದ ಸೋಸಲೆಗೆ ಬಂದು ನೆಲೆಸಿದರು. ಇವರ ಮೊಮ್ಮಗ ಸೋಸಲೆ ಅಣ್ಣಯ್ಯ ಶಾಸ್ತ್ರಿಗಳು ವೈದಿಕ ಲೌಕಿಕವೃತ್ತಿಗಳೆರಡರಲ್ಲೂ ನಿಷ್ಣಾತರಾಗಿದ್ದರು. ಅಣ್ಣಯ್ಯ ಶಾಸ್ತ್ರಿಗಳ ಮೂರನೆಯ ಮಗ ಸುಪ್ರಸಿದ್ಧ ವಿದ್ವಾಂಸರೂ ಕವಿಗಳೂ ಆದ ಗರಳಪುರೀಶ ಶಾಸ್ತ್ರಿಗಳು ಕ್ರಿ.ಶ ೧೮೨೨ರಲ್ಲಿ ಜನಿಸಿದರು. ಅವರು ಸಂಸ್ಕೃತ ಕಾವ್ಯ, ನಾಟಕ, ಅಲಂಕಾರ, ವ್ಯಾಕರಣ ಶಾಸ್ತ್ರಗಳಲ್ಲಿ ಪಾಂಡಿತ್ಯ ಸಂಪಾದಿಸಿದ ಮೇಲೆ ಸೋಸಲೆ ವ್ಯಾಸರಾಯಮಠದಲ್ಲಿ ದೊಡ್ಡವಿದ್ವಾಂಸರಾಗಿದ್ದ ತಮ್ಮಯ್ಯಾಚಾರ್ಯರಲ್ಲಿ ತರ್ಕಶಾಸ್ತ್ರ ಅಧ್ಯಯನ ಮಾಡಿ ಅದರಲ್ಲೂ ಪಾಂಡಿತ್ಯಗಳಿಸಿದರು. ಒಮ್ಮೆ ಸಾಧಾರಣ ಸಾಹಿತ್ಯ ಜ್ಞಾನದ ಪಂಡಿತನೊಬ್ಬನು ಕವಿತಾಸಾಮರ್ಥ್ಯವಿಲ್ಲದಿದ್ದರೂ ಶ್ಲೋಕ ರಚಿಸಿ ದುಡ್ಡಿನಾಸೆಯಿಂದ ಅದನ್ನು ವ್ಯಾಸರಾಯ ಸ್ವಾಮಿಗಳ ಮುಂದೆ ಓದಿದನು. ಕವಿತೆ ನೀರಸವಾಗಿದ್ದರೂ ಸ್ವಾಮಿಗಳು ಪಂಡಿತನಿಗೆ ಒಳ್ಳೆಯಮರ್ಯಾದೆ ಮಾಡಿ ಕಳುಹಿಸಿಕೊಟ್ಟರು.

ನಿಕೃಷ್ಟವೂ ನೀರಸವೂ ಆದ ಕವಿತೆಗೆ ಹೀಗೆ ಬಹುಮಾನ ಮಾಡಿದ್ದನ್ನು ನೋಡಿದ ಮಿಕ್ಕ ವಿದ್ವಾಂಸರೆಲ್ಲ ಸುಮ್ಮನಿದ್ದಾರಲ್ಲ ಎಂದು ಇಪ್ಪತ್ತು ವರ್ಷದ ಬಿಸಿರಕ್ತದ
ತರುಣನಾಗಿದ್ದ ಗರಳಪುರಿಶಾಸ್ತ್ರಿಗಳಿಗೆ ವ್ಯಥೆಯಾಯಿತು. ಹಿರಿಯರೆದುರಿಗೆ ಇದನ್ನು ತೋರಿಸಲೂ ಆಗದೆ, ಸುಮ್ಮನಿರಲೂ ಆಗದೆ ಒಂದು ಶ್ಲೋಕವನ್ನು ರಚಿಸಿ ಸ್ವಾಮಿಗಳು ನಿತ್ಯವೂ ನದಿ ತೀರದಲ್ಲಿ ಜಪಕ್ಕೆ ಕೂರುತ್ತಿದ್ದ ಮಂಟಪದ ಗೋಡೆಯ ಮೇಲೆ ಬರೆದರು. ‘ಭಗವತಿ ಕವಿತಾ ದೇವಿಯೇ, ಈ ಕುಕವಿಗಳಿಂದಾಗಿ ನಿನಗೆ ಎಂಥ ದುರ್ದೆಶೆಯಾಗಿದೆ!’ ಎಂಬುದು ಶ್ಲೋಕದ ತಾತ್ಪರ್ಯ.

ಸ್ವಾಮಿಗಳು ಇದನ್ನು ನೋಡಿ ವಿಚಾರಿಸಿ ಶ್ಲೋಕರಚಿಸಿದವರಾರೆಂದು ತಿಳಿದ ಮೇಲೆ ಸಂತೋಷಪಟ್ಟು ಶಾಸ್ತ್ರಿಗಳನ್ನು ಶ್ಲಾಘಿಸಿ ಹರಸಿದರು. ಕಾಲಾನಂತರ ಗರಳಪುರಿ ಶಾಸ್ತ್ರಿಗಳು ಮೈಸೂರು ಪಟ್ಟಣವನ್ನು ಸೇರಿ ವಿದ್ಯಾರ್ಥಿಗಳಿಗೆ ಸಂಸ್ಕೃತಕಲಿಸ ತೊಡಗಿದರು. ಅವರ ವಿದ್ಯಾದಾನ ಮತ್ತು ಕವಿತಾ ಶಕ್ತಿಗಳು ಕ್ರಮೇಣ ಮಹಾರಾಜರಿಗೆ ತಿಳಿದು ಬಂದು ಅವರು ಶಾಸ್ತ್ರಿಗಳನ್ನು ಆಸ್ಥಾನ ವಿದ್ವನ್ಮಂಡಲದಲ್ಲಿ ಒಬ್ಬರನ್ನಾಗಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರು ಚಾಮರಾಜ ಒಡೆಯರನ್ನು ದತ್ತು ಪುತ್ರರಾಗಿ ಸ್ವೀಕರಿಸಿದ ಮೇಲೆ ರಾಜಪುತ್ರರಿಗೆ ಸಂಸ್ಕೃತ ಪಾಠ ಹೇಳಲು ಗರಳಪುರಿಶಾಸ್ತ್ರಿಗಳನ್ನು ನೇಮಿಸಿದರು.

ಗರಳಪುರಿ ಶಾಸ್ತ್ರಿಗಳ ಎರಡನೆಯ ಮಗ ವೆಂಕಟಸುಬ್ಬಶಾಸ್ತ್ರಿಗಳು. ಮನೆಯಲ್ಲಿ ಮಗುವನ್ನು ‘ಅಯ್ಯಾ’ ಎಂದು ಕರೆಯುತ್ತಿದ್ದುದರಿಂದ ಇವರಿಗೆ ಅಯ್ಯಾಶಾಸ್ತ್ರಿ ಗಳೆಂದೇ ಹೆಸರಾಯಿತು. ಇವರು ತಮ್ಮ ತಂದೆಯ ಶಿಷ್ಯರಾದ ಪೆರಿಯಸ್ವಾಮಿ ತಿರುಮಲಾಚಾರ್ಯರಲ್ಲಿ ಸಂಸ್ಕೃತ ವ್ಯಾಸಂಗ ಮಾಡಿ ತಮ್ಮ ತಂದೆಯಿಂದಲೇ ಪ್ರೌಢಶಿಕ್ಷಣ ಪಡೆದರು. ತಂದೆಯ ಮತ್ತೊಬ್ಬ ಶಿಷ್ಯರಾದ ಬಸವಪ್ಪ ಶಾಸ್ತ್ರಿಗಳಲ್ಲಿ ಕನ್ನಡ ಸಾಹಿತ್ಯಾಭ್ಯಾಸ ಮಾಡಿದರು. ಅಷ್ಟರಲ್ಲಿ ಗರಳಪುರಿಶಾಸ್ತ್ರಿಗಳು
ಮಗನಿಗೆ ಪ್ರಸಿದ್ಧ ವ್ಯಾಕರಣ ವಿದ್ವಾಂಸರಾದ ಆಸ್ಥಾನ ವಿದ್ವಾನ್ ಮತ್ತು ಆಸ್ಥಾನ ಧರ್ಮಾಧಿಕಾರಿ ಚಾಮರಾಜನಗರದ ಶ್ರೀಕಂಠಶಾಸ್ತ್ರಿಗಳ ಮಗಳು ಲಕ್ಷ್ಮೀ ದೇವಮ್ಮನವರನ್ನು ತಂದು ಕೊಂಡು ಮದುವೆಮಾಡಿದರು.

ಬೀಗರು ಶ್ರೀಕಂಠಶಾಸ್ತ್ರಿಗಳೂ ಅವರ ತಮ್ಮ ಇನ್ನೊಬ್ಬ ಆಸ್ಥಾನ ವಿದ್ವಾನ್ ಚಾಮರಾಜನಗರ ರಾಮಶಾಸ್ತ್ರಿಗಳೂ ಆಗಾಗ ಗರಳಪುರಿ ಶಾಸ್ತ್ರಿಗಳ ಮನೆಗೆ
ಬರುತ್ತಿದ್ದರು. ಅವರೊಳಗೆ ನಡೆಯುತ್ತಿದ್ದ ಸಾಹಿತ್ಯಿಕ ಚರ್ಚೆಗಳು, ಸ್ಪರ್ಧೆಗಳು ಅಯ್ಯಾಶಾಸ್ತ್ರಿಗಳ ಮೇಲೆ ಪ್ರಭಾವ ಬೀರಿದವು. ಗರಳಪುರಿ ಶಾಸ್ತ್ರಿಗಳ ನಿಧನಾ ನಂತರ ಅಯ್ಯಾಶಾಸ್ತ್ರಿಗಳು ಮೈಸೂರರಮನೆಯಲ್ಲಿ ರಾಜಗುರು ಆದರು. ರಾಜಮನೆತನದವರು ಅವರಲ್ಲಿ ಆದರಾಭಿಮಾನಗಳನ್ನಿಟ್ಟಿದ್ದರು. ತುಂಬಾ ಗೌರವ ತೋರಿಸುತ್ತಿದ್ದರು. ಆದರೆ ಶಾಸ್ತ್ರಿಗಳು ಎಂದೂ ಇದರ ದುರುಪಯೋಗ ಮಾಡಿಕೊಂಡವರಲ್ಲ. ಸಾಧ್ಯವಾದಷ್ಟೂ ಅರಮನೆಯ ಉಪಕಾರಭಾರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದರು.

ಒಂದೆರಡು ಪ್ರಸಂಗಗಳನ್ನು ಹೇಳುವುದಾದರೆ- ಅಯ್ಯಾಶಾಸ್ತ್ರಿಗಳ ಕೊನೆಯ ಮಗಳು ವಿವಾಹವಾದ ಸ್ವಲ್ಪ ಕಾಲಕ್ಕೆ ಪತಿಯನ್ನು ಕಳೆದುಕೊಂಡು ತಂದೆಯ
ಮನೆಯಲ್ಲಿದ್ದರು. ಮಹಾರಾಣಿಯವರು ತಮ್ಮ ಗುರುಗಳನ್ನು ನೋಡಲು ಆಗಾಗ ಅವರ ಮನೆಗೇ ಬರುತ್ತಿದ್ದುದರಿಂದ ಶಾಸ್ತ್ರಿಗಳ ಮಗಳೊಡನೆ ವಿಶ್ವಾಸ ಬೆಳೆಸಿಕೊಂಡಿದ್ದರು. ಒಮ್ಮೆ ಶಾಸ್ತ್ರಿಗಳು ಅರಮನೆಗೆ ಹೋಗಿದ್ದಾಗ ರಾಣಿಯವರು ‘ಶಾಸ್ತ್ರಿಗಳೇ ನಿಮ್ಮ ಮಗಳು ಅರಮನೆಯಲ್ಲಿ ಸಂಗೀತ ಕಲಿಯಲಿ. ಅವಳಿಗೆ ಬೇಸರ ಕಳೆಯುತ್ತದೆ’ ಎಂದುಹೇಳಿದರು. ಶಾಸ್ತ್ರಿಗಳಿಗೆ ತಮ್ಮ ಮಗಳು ಸಂಗೀತ ಕಲಿಯುವುದು ಆಕ್ಷೇಪಣೀಯವಲ್ಲವಾಗಿದ್ದರೂ, ಅರಮನೆಯ ಹಂಗಿಗೆ ಒಳಗಾಗಲು ಇಷ್ಟವಿರಲಿಲ್ಲ. ಅದಕ್ಕಾಗಿ ‘ತನಗೆ ಸಂಗೀತಕಲಿಯಲು ಇಚ್ಛೆಯಿಲ್ಲ’ವೆಂದು ಮಗಳಿಂದ ಹೇಳಿಸಿದ ಪುಣ್ಯಾತ್ಮ ಅವರು!

ಬದಲಿಗೆ, ಬೇರೊಬ್ಬ ಸಂಗೀತ ವಿದ್ವಾಂಸರನ್ನು ಗೊತ್ತುಪಡಿಸಿ ಮನೆಪಾಠ ಏರ್ಪಡಿಸಿದರು. ಮತ್ತೊಮ್ಮೆ ಕೃಷ್ಣರಾಯ ಒಡೆಯರು ಅಯ್ಯಾಶಾಸ್ತ್ರಿಗಳಲ್ಲಿ ‘ನಿಮಗೆ ನಾನು ಏನಾದರೂ ಸಹಾಯ ಮಾಡಬಯಸುತ್ತೇನೆ. ನಿಮ್ಮ ಅಪೇಕ್ಷೆಯೇನು?’ ಎಂದು ಕೇಳಿದ್ದರು. ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಓದಿದ್ದ ಮಗನಿಗೆ ಉತ್ತಮವಾದ ಉದ್ಯೋಗ ಅರಮನೆಯಿಂದ ದೊರಕಬಹುದಿತ್ತು. ಆದರೆ ಶಾಸ್ತ್ರಿಗಳು ಅದನ್ನು ಕೇಳಲಿಲ್ಲ. ತಮ್ಮ ತಂದೆಯ ಅಪ್ರಕಟಿತ ಕೃತಿಯೊಂದನ್ನು ಅಚ್ಚು ಮಾಡಿಸಬೇಕೆಂದಷ್ಟೇ ಕೇಳಿಕೊಂಡರು.

ಅಯ್ಯಾಶಾಸ್ತ್ರಿಗಳದು ಶಿಸ್ತಿನ ಜೀವನ. ದಿನವೂ ರಾತ್ರಿ ಮಲಗುವಾಗ ತಲೆದಿಂಬಿನ ಹತ್ತಿರ ಒಂದು ಕಾಲುಮಣೆಯ ಮೇಲೆ ಬರವಣಿಗೆ ಸಾಮಗ್ರಿಗಳನ್ನು ಇಟ್ಟುಕೊಂಡು, ರಾತ್ರಿಯಲ್ಲಿ ಎಚ್ಚರವಾದಾಗ ಏನಾದರೂ ವಿಷಯಹೊಳೆದರೆ ಆಗಲೇ ಎದ್ದು ಗುರುತು ಮಾಡಿಕೊಳ್ಳುತ್ತಿದ್ದರು. ವ್ಯವಹಾರದಲ್ಲಿ ಕ್ರಮಬದ್ಧ ರೀತಿ
ಯಲ್ಲಿಯೇ ನಡೆಯುತ್ತಿದ್ದರೂ ಎಂದೂ ಸ್ನೇಹ ಸೌಜನ್ಯಗಳಿಗೆ ಎರವಾಗುತ್ತಿರಲಿಲ್ಲ. ಎಲ್ಲಿಯವರೆಗೆಂದರೆ ಒಮ್ಮೆ ಬಂಧುಗಳೊಬ್ಬರೊಡನೆ ಹಣಕಾಸಿನ ವಿಷಯದಲ್ಲಿ ಭಿನ್ನಾಭಿಪ್ರಾಯ ಬಂದು ನ್ಯಾಯಾಲಯಕ್ಕೆ ಹೋಗಬೇಕಾಯಿತು.

ಪ್ರತಿವಾದಿಯು ದೂರದಲ್ಲಿದ್ದ ಗ್ರಾಮದಿಂದ ವಿಚಾರಣಾ ದಿನಗಳಲ್ಲಿ ಮೈಸೂರಿಗೆ ಬರಬೇಕಾಗುತ್ತಿತ್ತು. ಹಾಗೆಬಂದಾಗ ಅವರು ಶಾಸ್ತ್ರಿಗಳ ಮನೆಯಲ್ಲೇ ತಂಗು ತ್ತಿದ್ದರು! ಸ್ನಾನ ಭೋಜನಾದಿಗಳನ್ನು ತೀರಿಸಿಕೊಂಡು ಇಬ್ಬರೂ ಒಟ್ಟಿಗೆ ನ್ಯಾಯಾಲಯಕ್ಕೆ ಹೋಗುತ್ತಿದ್ದರು. ನ್ಯಾಯಾಧೀಶರು ತೀರ್ಪುಕೊಟ್ಟ ಮೇಲೆ ಮತ್ತೆ
ಉಚ್ಚ ನ್ಯಾಯಾಲಯಕ್ಕೆ ಪುನರ್ವಿಮರ್ಶೆಗಾಗಿ ಹೋಗದೆ ಇಬ್ಬರೂ ತೀರ್ಪಿನಂತೆ ನಡೆದುಕೊಂಡರು. ಹೀಗಿತ್ತು ಅಯ್ಯಾಶಾಸ್ತ್ರಿಗಳ ಪಾರದರ್ಶಕ ನಿಸ್ಪೃಹ ಬದುಕು!
‘ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ’ ಎಂದು ಅವರು ಪ್ರಾರ್ಥನೆಯಲ್ಲೇನೋ ಬರೆದರು; ಆದರೆ ನಿಜವಾಗಿ ಜೀವನದಲ್ಲಿ ಪಾಪಗಳಿರಲಿ, ಚಿಕ್ಕಪುಟ್ಟ ತಪ್ಪುಗಳನ್ನೂ ಮಾಡಿರಲಿಲ್ಲವೇನೋ. ಅಂತಹ ಹಿರಿಯರನ್ನು ನಾವು ನೆನೆಯುತ್ತಿರಬೇಕು.

ಅವರ ಬದುಕನ್ನು ಆದರ್ಶವಾಗಿಟ್ಟುಕೊಳ್ಳಬೇಕು. ‘ಸ್ವಾಮಿದೇವನೆ ಲೋಕಪಾಲನೆ…’ ಹಾಡಿನಿಂದ ನಮ್ಮ ಬಾಲ್ಯವನ್ನಷ್ಟೇ ಅಲ್ಲ, ಅಂತಹ ಪದ್ಯರತ್ನವನ್ನು ನೀಡಿದ ಕವಿತಿಲಕ ಬಿರುದಾಂಕಿತರನ್ನೂ ಕೃತಜ್ಞತೆಯಿಂದ ಸ್ಮರಿಸಬೇಕು. ಇಂದಿನದು ತಿಳಿರುತೋರಣ ಅಂಕಣದ 300ನೆಯ ಬರಹ. ಪ್ರತಿ ಬರಹವೂ ಅ ಅಕ್ಷರದಿಂದಲೇ ಆರಂಭಗೊಂಡದ್ದು ಒಂದು ವಿಶೇಷ. ಓದುಗಮಿತ್ರರ ಪ್ರೀತಿವಿಶ್ವಾಸ ಹೀಗೆಯೇ ಮುಂದುವರಿಯುತ್ತದೆಂದು ಆಶಿಸಿದ್ದೇನೆ. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವ
ಮತ್ತು ದೀಪಾವಳಿ ಸಂಭ್ರಮದ ಹಾರ್ದಿಕ ಶುಭಾಶಯಗಳು.