Saturday, 21st September 2024

ಗೆಲುವಿನ ಮೇಲೆ ಬೊಮ್ಮಾಯಿ, ಬಿಎಸ್’ವೈ ಮೇಲೆ ವರಿಷ್ಠರ ಕಣ್ಣು

ಮೂರ್ತಿ ಪೂಜೆ

ಆ‌ರ್‌.ಟಿ.ವಿಠ್ಠಲಮೂರ್ತಿ

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಳಲ್ಲಿ ಬಿಜೆಪಿಯ ಗೆಲುವು ಒಬ್ಬ ನಾಯಕರಿಗೆ ತುಂಬ ಅನಿವಾರ್ಯವಾಗತೊಡಗಿದೆ. ಈ ನಾಯಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಭಾವಿಸುವುದರಲ್ಲಿ ತಪ್ಪೇನಿಲ್ಲ.

ಆದರೆ, ಉಪಚುನಾವಣೆಗಳ ಗೆಲುವು ಬಸವರಾಜ ಬೊಮ್ಮಾಯಿ ಅವರಿಗಿಂತ, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮುಖ್ಯ ಎಂದರೆ ಕೆಲವರಿಗೆ ತಬ್ಬಿಬ್ಬಾಗ ಬಹುದು. ಆದರೂ ಈ ಮಾತಿನಲ್ಲಿ ಉತ್ಪ್ರೇಕ್ಷೆ ಏನಿಲ್ಲ. ಅಂದ ಹಾಗೆ ಉಪ ಚುನಾವಣೆಗಳಲ್ಲಿ ಪಕ್ಷದ ಗೆಲುವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೇಕೇ ಬೇಕು.ಯಾಕೆಂದರೆ ರಾಜ್ಯದಲ್ಲಿ ಪಕ್ಷಕ್ಕೆ ಆರೆಸ್ಸೆಸ್ ಮತ್ತು ಯಡಿಯೂರಪ್ಪ ಮೂಲಶಕ್ತಿಗಳಾದರೂ ಸೈನ್ಯದ ಮುಂಚೂಣಿಯಲ್ಲಿ ನಿಂತಿರುವವರು ಬಸವರಾಜ ಬೊಮ್ಮಾಯಿ.

ಹೀಗಾಗಿ ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಕ್ಯಾಂಡಿಡೇಟುಗಳನ್ನು ಗೆಲ್ಲಿಸಲು ಅವರು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅಲ್ಲಿ ಗೆಲುವಿಗೆ ಇಷ್ಟು ಸಾಲುವುದಿಲ್ಲ ಎಂಬುದು ಅವರಿಗೂ ಗೊತ್ತಿದೆ. ಬಿಜೆಪಿಯ ವರಿಷ್ಠರಿಗೂ ಗೊತ್ತಿದೆ. ಈ ಕಾರಣಕ್ಕಾಗಿಯೇ ಬೈ ಎಲೆಕ್ಷನ್ ಸ್ಪೆಷಲಿಸ್ಟ್ ಯಡಿಯೂರಪ್ಪ ಅವರ ಮೇಲೆ ವರಿಷ್ಠರ ಕಣ್ಣಿದೆ. ಹೀಗೆ ಯಡಿಯೂರಪ್ಪ ಅವರ ಮೇಲೆ ನೆಟ್ಟಿರುವ ಕಣ್ಣುಗಳಿಗೆ ಒಂದು ಅನುಮಾನದ ಪೊರೆಯೂ ಆವರಿಸಿ ಕೊಂಡಿದೆ. ಅದೆಂದರೆ ಸಿಎಂ ಹುದ್ದೆಯಿಂದ ಇಳಿದ ಯಡಿಯೂರಪ್ಪ ಅದಕ್ಕಾಗಿ ಕುದಿಯುತ್ತಿದ್ದಾರೆ ಎಂಬುದು.

ಇಂತಹ ಕುದಿತ ಇರುವುದರಿಂದಲೇ ಅವರು ಪರ್ಯಾಯ ರಾಜಕಾರಣದ ಕಡೆ ಮುಖ ಮಾಡಿದ್ದಾರೆ. ಮತ್ತು ಹೀಗೆ ಅವರ ಮುಖ ಬೇರೆ ದಿಕ್ಕಿಗೆ ತಿರುಗಿರುವು ದರಿಂದ ರಾಜ್ಯದಲ್ಲಿ ಪಕ್ಷಕ್ಕೆ ಸಮಸ್ಯೆ ಆಗಬಹುದು ಎಂಬುದು ವರಿಷ್ಠರ ಅನುಮಾನ. ಇಂತಹ ಅನುಮಾನ ಇರುವುದರಿಂದಲೇ ಯಡಿಯೂರಪ್ಪ ಅವರನ್ನು ತಡೆಯಲು, ಅವರ ಆಪ್ತರ ಮೇಲೆ ಐಟಿ ದಾಳಿ ನಡೆಸಲಾಯಿತು ಎಂಬ ಮಾತು ಈಗ ರಾಜಕೀಯ ವಲಯಗಳಲ್ಲಿ ಜಗಿಯಲ್ಪಟ್ಟ ತಾಂಬೂಲ. ಹಾಗೆ ನೋಡಿದರೆ ಯಡಿಯೂರಪ್ಪ ಎರಡನೇ ಬಾರಿ ದಿಲ್ಲಿಯ ಪಾಲಿಗೆ ತಾಂಬೂಲ ವಾಗಿದ್ದಾರೆ. ಮೊದಲ ಬಾರಿ ಅವರು ಕಾಂಗ್ರೆಸ್ ನಾಯಕರಿಂದ ಇಂತಹ ಜಗಿಯುವಿಕೆಗೆ ಒಳಗಾಗಿದ್ದರು.

ಇದಾಗಿದ್ದು ೨೦೧೩ರ ವಿಧಾನಸಭಾ ಚುನಾವಣೆಗಳಿಗಿಂತ ಮುಂಚೆ. ಅಷ್ಟೊತ್ತಿಗಾಗಲೇ ಯಡಿಯೂರಪ್ಪ ಆಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವರದಿಗೆ ಬಲಿಯಾ ಗಿದ್ದರು. ಹೀಗೆ ಬಲಿಯಾದರೂ ಒಬ್ಬರ ಹಿಂದೊಬ್ಬರಂತೆ ಇಬ್ಬರನ್ನು ಸಿಎಂ ಹುದ್ದೆಯ ಮೇಲೆ ಕೂರಿಸಿದ್ದರು. ಯಡಿಯೂರಪ್ಪ ಅವರು ಇಳಿದ ನಂತರ ಸಿಎಂ ಹುದ್ದೆ ಗೇರಿದ ಡಿ.ವಿ.ಸದಾನಂದಗೌಡರು ಕೆಲವೇ ಕಾಲದಲ್ಲಿ ತಮ್ಮ ವರಸೆ ಬದಲಿಸಿ ಕ್ಯಾಂಪು ಬದಲಿಸಿದರು. ಸಂಘ ಪರಿವಾರದ ವಿಶ್ವಾಸ ಇದ್ದರೆ ಸಾಕು, ತಾವು ಸೇಫ್ ಎಂದು ಭಾವಿಸಿದರು. ಆದರೆ ಅವರ ಹೆಜ್ಜೆಗಳಿಂದ ಕೆರಳಿದ ಯಡಿಯೂರಪ್ಪ ಒಂದು ಸಲ ಮುಂದೆ ನುಗ್ಗಿ ಹೂಂಕರಿಸಿದ್ದೇ ತಡ, ಅದರ ಅಬ್ಬರ ತಡೆದು ಕೊಳ್ಳಲಾ ಗದೆ ಸದಾನಂದಗೌಡ ಮಕಾಡೆ ಮಲಗಿದರು.

ಇದರ ಲಾಭ ಪಡೆದವರು ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್. ಹೀಗೆ ತಮ್ಮ ನಂತರ ಇಬ್ಬರನ್ನು ಸಿಎಂ ಹುದ್ದೆಗೆ ತಂದು ಕೂರಿಸಿದ ಯಡಿಯೂರಪ್ಪ ಅವರ ಶಕ್ತಿ, ಅವತ್ತು ದಿಲ್ಲಿ ಗದ್ದುಗೆಯ ಮೇಲೆ ಕುಳಿತ ಕಾಂಗ್ರೆಸ್ ನಾಯಕರ ಕಣ್ಣು ಕುಕ್ಕಿತು. ಅಽಕಾರ ಕಳೆದುಕೊಂಡರೂ ರಾಜ್ಯ ಬಿಜೆಪಿಯ ಮೇಲೆ ಈ ಮಟ್ಟದ ಹಿಡಿತ ಹೊಂದಿರುವ ಯಡಿಯೂರಪ್ಪನವರು ಅಲ್ಲಿಂದ ಹೊರಬಂದರೆ ಕೈ ಪಾಳೆಯಕ್ಕೆ ಅನುಕೂಲ ಎಂದು ಭಾವಿಸಿದರು. ಇದರ ಪರಿಣಾಮವಾಗಿ ರೈಡುಗಳು
ಶುರುವಾದವು. ಕಾನೂನಿನ ಕುಣಿಕೆ ಬಲವಾಗತೊಡಗಿತು. ಸಹಜವಾಗಿಯೇ ತಮ್ಮ ಮೇಲೆ ಕವಿದ ಈ ಕರಿಮೋಡಗಳಿಂದ ಯಡಿಯೂರಪ್ಪ ಸುಸ್ತಾದರು. ಅವರು
ಸುಸ್ತಾದ ನಂತರ ಏರ್ಪಾಟಾಗಿದ್ದೇ ಸಂಧಾನಸಭೆ.

ದೆಹಲಿಯ ನೋಯ್ಡಾದ ಸ್ಥಳವೊಂದರಲ್ಲಿ ನಡೆದ ಈ ಸಂಧಾನಸಭೆಯಲ್ಲಿ ಕಾಂಗ್ರೆಸ್ ನಾಯಕಿ ಶ್ರೀಮತಿ ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ
ಅಹ್ಮದ್ ಪಟೇಲ್ ಭಾಗವಹಿಸಿದ್ದರು. ಅಂದ ಹಾಗೆ ಈ ಸಂಧಾನಸಭೆಯಲ್ಲಿ ಯಡಿಯೂರಪ್ಪ ಅವರ ಪರವಾಗಿ ಭಾಗವಹಿಸಿದವರು ಅವತ್ತು ಕರ್ನಾಟಕದಲ್ಲಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ. ಅಂತಿಮವಾಗಿ ಈ ಸಂಧಾನಸಭೆ ಯಶಸ್ವಿಯಾಯಿತು. ಮತ್ತದರ ಫಲಶೃತಿಯಾಗಿ ಯಡಿಯೂರಪ್ಪ ಅವರು ಬಿಜೆಪಿ
ತೊರೆದು ಹೊರಬಂದರು.

ಮುಂದೇನಾಯಿತು ಎಂಬುದು ಈಗ ಇತಿಹಾಸ. ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ, ಪ್ರಾದೇಶಿಕ ಪಕ್ಷ ಜೆಡಿಎಸ್‌ಗಿಂತ ಕಡಿಮೆ ಪ್ರಮಾಣದ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿತ್ತು. ಅದರ ಈ ಹೀನಾಯ ಸೋಲಿಗೆ ಮತ್ತು ಕಾಂಗ್ರೆಸ್ ಪಕ್ಷದ ಅದ್ದೂರಿ ಗೆಲುವಿಗೆ ನಿಸ್ಸಂಶಯವಾಗಿ ಯಡಿಯೂರಪ್ಪ ಅವರೇ ಕಾರಣರಾಗಿದ್ದರು. ಇವತ್ತು ದಿಲ್ಲಿ ಗದ್ದುಗೆಯ ಮೇಲೆ ಕುಳಿತಿರುವ ಪ್ರಧಾನಿ ನರೇಂದ್ರಮೋದಿ ಮತ್ತವರ ಆಪ್ತ ಅಮಿತ್ ಷಾ ಅವರಿಗೆ ಈ
ಇತಿಹಾಸ ಗೊತ್ತು. ಇದೇ ಕಾರಣಕ್ಕಾಗಿ ಅವತ್ತು ಪಕ್ಷದಲ್ಲಿ ತಮ್ಮ ದರ್ಬಾರು ಶುರುವಾದ ಮೇಲೆ ಯಡಿಯೂರಪ್ಪ ಅವರು ಮರಳಿ ಪಕ್ಷಕ್ಕೆ ಬರುವಂತೆ ಈ ಜೋಡಿ
ನೋಡಿಕೊಂಡಿತ್ತು.

ಈಗ ಮತ್ತೆ ಇತಿಹಾಸ ಪುನರಾವರ್ತನೆಯಾಗಿದೆ. ವ್ಯತ್ಯಾಸ ಎಂದರೆ ಕಾಂಗ್ರೆಸ್ ಹೈಕಮಾಂಡ್ ಜಾಗದಲ್ಲಿ ಈಗ ಬಿಜೆಪಿ ಹೈಕಮಾಂಡ್ ಇದೆ. ಹೀಗಾಗಿ ಅವತ್ತು
ಯಡಿಯೂರಪ್ಪ ಅವರ ಶಕ್ತಿಯನ್ನರಿತಿದ್ದ ಕಾಂಗ್ರೆಸ್ ಹೈಕಮಾಂಡ್ ಬಿಜೆಪಿ ಕೋಟೆಯಿಂದ ಯಡಿಯೂರಪ್ಪ ಅವರನ್ನು ಹೊರಗೋಡಿಸಿದ್ದರೆ, ಈಗ ಬಿಜೆಪಿ ಹೈಕಮಾಂಡ್ ಅವರನ್ನು ಕೋಟೆ ಒಳಗಿಟ್ಟುಕೊಳ್ಳಲು ಬಯಸುತ್ತಿದೆ. ಆದರೆ ಕೋಟೆಯೊಳಗಿಟ್ಟುಕೊಳ್ಳುವುದರಲ್ಲಿ ಅದು ಯಶಸ್ವಿಯಾಗಬಹುದೇನೋ ಸರಿ. ಆದರೆ ಯಡಿಯೂರಪ್ಪ ಎಂಬ ಕುದುರೆ ತನ್ನ ಮೇಲೆ ಪಕ್ಷವನ್ನು ಹೊರಬೇಕಲ್ಲ? ಹೀಗಾಗಿಯೇ ಅದೂ ಯಡಿಯೂರಪ್ಪ ಅವರ ಮೇಲೆ ಕಣ್ಗಾವಲು ಇಟ್ಟಿದೆ.

ಮತ್ತದರ ಬಗ್ಗೆ ಯಡಿಯೂರಪ್ಪ ಅವರಿಗೂ ಗೊತ್ತಿದೆ. ಹೀಗಾಗಿಯೇ ಉಪಚುನಾವಣೆಗಳು ಘೋಷಣೆಯಾದ ಕಾಲದಲ್ಲಿ ಹೆಚ್ಚು ಉತ್ಸಾಹ ತೋರದ ಯಡಿಯೂರಪ್ಪ ಈಗ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಜತೆಗೂಡಿ ಪ್ರಚಾರ ಕಾರ್ಯಕ್ಕಿಳಿದಿದ್ದಾರೆ. ಈಗ ತಂದೆ-ಮಕ್ಕಳು ಗುಟುರು ಹಾಕುತ್ತಿರುವುದನ್ನು ನೋಡಿದರೆ, ಬಿಜೆಪಿ ಯನ್ನು ಹೊಗಳುತ್ತಿರುವ ರೀತಿ ನೋಡಿದರೆ ಅವರು ತಮ್ಮ ಯೋಚನೆಯಿಂದ ಹಿಂದೆ ಸರಿದಿದ್ದಾರೆ ಅನ್ನುವ ಭಾವನೆ ಮೂಡುತ್ತದೆ. ಇದು ಎಷ್ಡರ ಮಟ್ಟಿಗೆ ವರ್ಕ್ ಔಟ್ ಆಗುತ್ತದೋ ಗೊತ್ತಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಭರವಸೆಯಂತೂ ಚಿಗುರಿದೆ. ಈ ಭರವಸೆ ಈಡೇರಿದರೆ ಮುಂದಿನ ಚುನಾವಣೆಗೆ ನನ್ನದೇ ಸಾರಥ್ಯ ಎಂಬ ಅವರ ಮಾತಿಗೆ ಶಕ್ತಿ ದೊರೆಯುತ್ತದೆ.

ಅದವರಿಗೆ ಸಿಗಲಿ ಎಂದೇ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ಮೇಲೆ ಕಣ್ಣು ನೆಟ್ಟು ಕುಳಿತಿದೆ