Saturday, 21st September 2024

ಪೆಂಡೊರಾಳ ಪೆಟ್ಟಿಗೆ ಮತ್ತು ಶೆಲ್‌ ಕಂಪೆನಿಗಳು

ಶಿಶಿರ ಕಾಲ

ಶಿಶಿರ್‌ ಹೆಗಡೆ, ಚಿಕಾಗೊ

shishirh@gmail.com
ರ್ಪೊರೇಟ್ ಜಗತ್ತಿನಲ್ಲಿ ಮಾತನಾಡುವಾಗ ಆಗಾಗ Oh that is pandora box ಎನ್ನುವ ವಾಕ್ಯವನ್ನು ಬಳಸುತ್ತಿರುತ್ತೇವೆ. ಸಾಮಾನ್ಯವಾಗಿ ಒಂದು ಚಿಕ್ಕ ವಿಚಾರ ನೂರೆಂಟು ಸಮಸ್ಯೆ ಅಥವಾ ಚರ್ಚೆಗಳನ್ನು ತೆರೆದಿಡುವಂಥದ್ದನ್ನು ಗುರುತಿಸಿ ಹೇಳುವಾಗ ಆ ಶಬ್ದದ ಬಳಕೆಯಾಗುತ್ತದೆ.

ಗ್ರೀಕ್ ನ ಪುರಾಣದಲ್ಲಿ ಒಂದು ಕಥೆ ಬರುತ್ತದೆ. ಪ್ರಾಮಥೀ ಯಸ್ ಅಗ್ನಿಯನ್ನು ದೇವರ ರಾಜ (ಇಂದ್ರನಿಗೆ ಹೋಲಿಸಬಹುದು) ಝೀಯಸ್ ನಿಂದ ಕದ್ದು ಮನುಷ್ಯನಿಗೆ ಕೊಟ್ಟು ಬಿಡುತ್ತಾನೆ. ಗ್ರೀಕ್ ಪುರಾಣದಲ್ಲಿ ಪ್ರಾಮಥೀಯಸ್ ಒಬ್ಬ ಮಾಜಿ ದೇವರು(ಟೈಟನ್). ಈ ಘಟನೆಯಿಂದ ಸಿಟ್ಟಿಗೆದ್ದ ದೇವರರಾಜ ಒಂದು ಪೆಟ್ಟಿಗೆಯ ಗಿಫ್ಟ್ ಅನ್ನು ಪ್ರಾಮಥೀ ಯಸ್ ನ ತಮ್ಮನಾದ ಎಪಿಮಾಥಿಯಸ್ ನಿಗೆ ಕೊಡುತ್ತಾನೆ. ಎಪಿಮಾಥಿಯಸ್ ನ ಹೆಂಡತಿ ಪೆಂಡೊರಾ. ಆಕೆ ಕುತೂಹಲಕ್ಕೆ ಈ ಪೆಟ್ಟಿಗೆಯನ್ನು ತೆರೆಯುತ್ತಾಳೆ. ಅದರಲ್ಲಿ ರೋಗ, ಸಾವು, ದುಃಖ ಈ ರೀತಿಯ ಮನುಷ್ಯನಿಗೆ ಕೆಟ್ಟದ್ದೆನ್ನುವುದೆಲ್ಲ ಅಡಗಿರುತ್ತದೆ, ಅದರಿಂದ ಜಗತ್ತಿಗೆ – ಹೊರಬರುತ್ತದೆ.

ಇದು ಅಗ್ನಿಯನ್ನು ಕದ್ದು ಕೊಟ್ಟ ಪ್ರಾಮಥೀಯಸ್ ಮತ್ತು ಅದನ್ನು ಸ್ವೀಕರಿಸಿದ ಮನುಷ್ಯನಿಗೆ ದೇವರು ಕೊಟ್ಟ ಶಿಕ್ಷೆ ಎಂದು. ಇದು ಪೆಂಡೊರಾಳ ಪೆಟ್ಟಿಗೆಯ, ಗ್ರೀಕ್ ಪುರಾಣದ ಕಥೆ. ಎರಡು ವಾರದ ಹಿಂದೆ ಇಡೀ ಜಗತ್ತಿ ನಲ್ಲೆಲ್ಲ ಸುದ್ದಿಯಾದದ್ದು ಪೆಂಡೊರಾ ಪೇಪರ್ಸ್. ಇದು ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಗುಪ್ತ ಹಣ, ಶೆಲ್ ಕಂಪನಿಗಳು ಮತ್ತು (ಅ)ವ್ಯವಹಾರಕ್ಕೆ ಸಂಬಂಧಿಸಿದ, ಸೋರಿಕೆ ಎನ್ನುವುದಕ್ಕಿಂತ ಬಹಿರಂಗವಾದ ಮಾಹಿತಿ. ದುಡ್ಡೇ ಇಲ್ಲದವರದ್ದು ಒಂದು ಸಮಸ್ಯೆಯಾದರೆ ಅತಿಯೆನಿಸುವಷ್ಟು ದುಡ್ಡಿರುವವರದ್ದು ಇನ್ನೊಂದು ರೀತಿಯ ಸಮಸ್ಯೆ. ದುಡ್ಡನ್ನು ಬಡ್ಡಿಗೆ ಬ್ಯಾಂಕಿ ನಲ್ಲಿಟ್ಟರೆ ಅದರ ವೃದ್ಧಿ ಅಷ್ಟಾಗುವುದಿಲ್ಲ.

ಇನ್ನು ಅದನ್ನೆಲ್ಲ ಒಂದೇ ದೇಶದ ಷೇರು ಮಾರುಕಟ್ಟೆಯಲ್ಲಿ ಇಟ್ಟರೆ ಷೇರುಮಾರುಕಟ್ಟೆಯಂತೆ ಆಸ್ತಿಯೂ ಮೇಲೆ ಕೆಳಗಾಗುತ್ತಿರುತ್ತದೆ. ಅಷ್ಟೂ ಹಣ ವನ್ನು ಒಂದಿಷ್ಟು ಕಂಪನಿಗಳಲ್ಲಿ ತೊಡಗಿಸಿದರೆ ಕೂಡ ಅದೇ ಕಥೆ. ನೋಟುಗಳ ರಾಶಿಯನ್ನು ಮನೆಯಲ್ಲಿ ಎಷ್ಟೆಂದು ಇಟ್ಟುಕೊಳ್ಳಬಹುದು? ನೋಟು ಮರಿ ಹಾಕುವುದಿಲ್ಲ. ಇನ್ನು ಅದನ್ನು ಎಲ್ಲೆಂದರಲ್ಲಿ ತೊಡಗಿಸುವಂತೆ ಕೂಡ ಇಲ್ಲ. ದುಬಾರಿ ವಸ್ತುಗಳನ್ನು ಕೂಡ ಎಷ್ಟೆಂದು ಖರೀದಿಸ ಬಹುದು? ಅದಕ್ಕೂ ಒಂದು ಲಿಮಿಟ್ ಇದೆ.

ಅದೆಲ್ಲದಕ್ಕಿಂತ ಈ ಹಣವನ್ನು ಹೂಡಿಕೆ ಮಾಡಿದಲ್ಲಿ ಬರುವ ಕಮಾಯಿಗೆ ಸಿಕ್ಕಾಪಟ್ಟೆ ತೆರಿಗೆ ಕಟ್ಟಬೇಕು. ಇನ್ನು ಹಣ ಕಾನೂನುಬಾಹಿರವಾಗಿ ಸಂಪಾದಿ ಸಿದ್ದಾದರೆ ಅದನ್ನು ಸಂಭಾಳಿಸುವುದೇ ಒಂದು ಚಾಲೆಂಜ್. ಒಟ್ಟಾರೆ ಅತಿಯೆನಿಸುವಷ್ಟು ಹಣವಾಗಿಹೋದರೆ ಅದೇ ಒಂದು ತಲೆಬಿಸಿ – ಬಿಸಿ ತುಪ್ಪ. ಪೆಂಡೊರಾ ಪೇಪರ್ಸ್ ನಲ್ಲಿ ಹೊರಬಂದದ್ದು – ತೆರೆದುಕೊಂಡದ್ದು ಬರೋಬ್ಬರಿ ಒಂದು ಕೋಟಿ ಇಪ್ಪತ್ತು ಲಕ್ಷ ದಾಖಲೆಗಳು. ಇವೆಲ್ಲ ಜಗತ್ತಿನ ಸುಮಾರು ನೂರು ದೇಶಗಳ ೩೫ (ಹಾಲಿ/ಮಾಜಿ) ರಾಷ್ಟ್ರೀಯ ನಾಯಕರ, ನಾನ್ನೂರಕ್ಕೂ ಹೆಚ್ಚು – ಸರಕಾರದಲ್ಲಿ ಉನ್ನತ ಹುದ್ದೆ ನಿರ್ವಹಿಸಿದವರಿಗೆ ಸಂಬಂಧಿಸಿದ ಸುಮಾರು ೨೯,೦೦೦ ಶೆಲ್ ಕಂಪನಿಗಳ, ಸುಮಾರು ೩೨ ಟ್ರಿಲಿಯನ್ ಡಾಲರ್ (೨,೪೦೮,೮೪೯,೬೦೦, ೦೦೦,೦೦೦ ರುಪಾಯಿ) ವ್ಯವಹಾರದ ಮಾಹಿತಿ. ಇದರಲ್ಲಿ ಬಂದ ಹೆಸರುಗಳೆಲ್ಲ ಜಗತ್ತಿನ ಅಥವಾ ಆಯಾ ದೇಶದಲ್ಲಿ ಹೆಸರು ಮಾಡಿದ, ಅಧಿಕಾರದಲ್ಲಿ ಮೆರೆದ ಗಟಾನುಗಟಿ
ಗಳದ್ದು.

ಮಾಜಿ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್, ಚಿಲಿ ದೇಶದ ಅಧ್ಯಕ್ಷ ಸೆಬಾಸ್ಟಿಯನ್ ಪಿನ್ಯಾರಾ, ಕೀನ್ಯಾದ ಅಧ್ಯಕ್ಷ ಉಹುರು ಕೆನ್ಯಾಟಾ, ಉಕ್ರೇನಿನ ಜ್ಹೆಲೆನ್ಸ್ಕಿ, ರಷ್ಯಾದ ಪುಟಿನ್, ಕತಾರಿನ ತಮೀಮ್ ಬಿನ್ ತಾನಿ, ಜೋರ್ಡಾನಿನ – ಹೀಗೆ ಆಯಾ ದೇಶದ ಮುಖ್ಯಸ್ಥರಿಂದ ಹಿಡಿದು ಸೊಂಟ ಕುಣಿಸುವ ಶಕೀರಾ ವರೆಗೆ. ಭಾರತದ ಸಚಿನ್ ತೆಂಡೂಲ್ಕರ್, ಅನಿಲ್ಅಂಬಾನಿ, ನೀರವ್ ಮೋದಿ, ಪಾಕಿಸ್ತಾನದ ಜನರಲ್‌ಗಳು, ರಷ್ಯಾದ ರಾಜಕಾರಣಿಗಳು ಹೀಗೆ ಪಟ್ಟಿಮಾಡುತ್ತಾ ಹೋದರೆ ಹೆಸರಿನಿಂದಲೇ ಈ ಲೇಖನದ ಜಾಗ ತುಂಬಿ ಹೋಗುತ್ತದೆ. ಆದರೂ ಇನ್ನಷ್ಟು ಹೆಸರುಗಳು ಮಿಕ್ಕಿರುತ್ತವೆ. ಈ ಎಲ್ಲ ಮಾಹಿತಿ ಹೊರ ಬರು ತ್ತಿದ್ದಂತೆ ಈ ನೂರೂ ದೇಶದ ಎಲ್ಲ ಸರಕಾರಗಳೂ ತಾವು ಇದೆಲ್ಲವನ್ನು ತನಿಖೆ ಮಾಡುತ್ತೇವೆ ಎಂದು ಬ್ಯಾಂಡೇಜ್ ಹೇಳಿಕೆ ಕೊಟ್ಟಿವೆ.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಅಮೆರಿಕದ ಕೆಲವೇ ಹೆಸರುಗಳು ಈ ಹೊರಬಂದ ಕಡತಗಳಲ್ಲಿ ಕಾಣಿಸಿಕೊಂಡಿವೆ. ಇನ್ನೊಂದೆಂದರೆ ಇದರಲ್ಲಿ ಹೆಸರು ಬಂತೆಂದಾಕ್ಷಣ ಅವರೆಲ್ಲ ಖದೀಮರು, ತೆರಿಗೆ ವಂಚಿಸಿದವರು ಎನ್ನುವಂತಿಲ್ಲ. ಕಾನೂನಿನ ಭಾಷೆಯಲ್ಲಿ ಅವರೆಲ್ಲ ಸಾಬೀತಾಗುವ ವರೆಗೂ
ನಿರ್ದೋಷಿಗಳು, ಅಮಾಯಕರು, ಪಾಪದವರು ಇತ್ಯಾದಿ. ಅಲ್ಲದೆ ಈ ಮಾಹಿತಿ ಹೊರಹಾಕುವಲ್ಲಿ ಕೆಲಸ ಮಾಡಿದ್ದು ನೂರಾರು ದೇಶದ ಪ್ರೈವೇಟ್ ತನಿಖಾ ಕಂಪನಿಗಳು ಮತ್ತು ಮಾಧ್ಯಮದವರು. ಇಲ್ಲಿ ಹಲವಾರು ಮಾಧ್ಯಮದವರ ಹೆಸರುಗಳೂ ಇವೆ. ಇದು ಮಾಧ್ಯಮದವರೇ ಸೇರಿ ಹೊರ ಹಾಕಿದ ಮಾಹಿತಿಗಳಾದದ್ದರಿಂದ ಇದು ಪರಿಪೂರ್ಣ ಮಾಹಿತಿ ಎಂದು ಹೇಳುವಂತೆ ಕೂಡ ಇಲ್ಲ.

ಇದನ್ನು ಕೆಲವು ಸರಕಾರ ಗಳೇ ಮುತುವರ್ಜಿ ನಡೆಸಿ ಮಾಡಿಸಿವೆ ಎನ್ನುವ ವಿಚಾರವನ್ನು ಕೂಡ ತಳ್ಳಿ ಹಾಕುವಂತಿಲ್ಲ. ಮಾಹಿತಿಯ ಒಂದಂಶದ ವಿವರ ನೋಡಿದಾಗ – ಅವರದ್ದು ಹೆಸರು ಬಂದಿದೆ ಆದರೆ ಇವರದ್ದು ಬಂದಿಲ್ಲ ಎಂದು ಅನಿಸಿಯೇ ಅನಿಸುತ್ತದೆ. ತನಿಖೆಯ ಸಮಯದಲ್ಲಿ ಈ ತನಿಖೆಯ ವಿವರಗಳು ಈ ಖದೀಮರ ಕೈ ಸೇರಿ ಅವರಲ್ಲಿ ಹಲವರು ಯಶಸ್ವಿಯಾಗಿ ಲಾಬಿ ಮಾಡಿ ತಮ್ಮ ಹೆಸರನ್ನು ಈ ಪಟ್ಟಿಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಕೂಡ ಖಂಡಿತ ಇದೆ.

ಹಾಗಂತ ಇಂಥದ್ದೊಂದು ವ್ಯವಹಾರ – ಅವ್ಯವಹಾರದ ಮಾಹಿತಿ ಈ ರೀತಿ ಬಹಿರಂಗವಾದದ್ದು ಮೊದಲೇನಲ್ಲ. ಇದು ಹೊಸತೇನಲ್ಲವಲ್ಲ. ೨೦೧೦ ರಲ್ಲಿ ವಿಕಿಲೀಕ್ಸ್, ೨೦೧೪ ರಲ್ಲಿ ಲಕ್ಸಾಂಬರ್ಗ್ ಟ್ಯಾಕ್ಸ್ ಪೇಪರ್ಸ್, ನಂತರ ೨೦೧೫ ರಲ್ಲಿ HSBC ಪೇಪರ್ಸ್, ೨೦೧೭ರಲ್ಲಿ ಪ್ಯಾರಡೈಸ್ ಪೇಪರ್ಸ್ ಹೀಗೆ ಹಲವು ಬಾರಿ ಇಂಥದ್ದೇ ರೀತಿಯ ಮಾಹಿತಿ ಹೊರ ಬಿದ್ದಿದೆ. ಪ್ರತೀ ಸರತಿ ದೊಡ್ಡ ದೊಡ್ಡ ಕುಳಗಳ ಹೆಸರು ದಾಖಲೆಯ ಸಮೇತ ಹೊರ ಬಂದಿದೆ. ಆಗೆಲ್ಲ ಪ್ರತೀ ಸರಕಾರಗಳೂ ಮುಜುಗರಕ್ಕೆ ಒಳಗಾದಂತೆ ವ್ಯವಹರಿಸಿವೆ – ಪ್ರತಿಕ್ರಿಯಿಸಿವೆ.

ಆಮೇಲೆ ನಿಧಾನಕ್ಕೆ ತನಿಖೆ ನಡೆಯುತ್ತಿದೆ ಎನ್ನುವ ಸುದ್ದಿ ಕೆಲ ಸಮಯವಿದ್ದು, ನಂತರದಲ್ಲಿ ಎಲ್ಲ ಮರೆತು ಹೋಗುವ ಹಂತಕ್ಕೆ ತಲುಪಿದೆ – ಆಮೇಲೆ ಮರೆತೇ ಹೋಗಿ ಅಪ್ರಸ್ತುತವಾಗಿದೆ, ತನಿಖೆಗಳು ಹಳ್ಳ ಹಿಡಿದಿವೆ. ಈಬಾರಿ ಸೋರಿಕೆಯಾದ ಮಾಹಿತಿಯ ಪ್ರಮಾಣ, ಹೊರಬಿದ್ದ ಹೆಸರುಗಳು, ಶೆಲ್ ಕಂಪನಿಯ ಸಂಖ್ಯೆ ಇವೆಲ್ಲ ಹಿಂದೆಲ್ಲದಕ್ಕಿಂತ ಅತಿ ಹೆಚ್ಚು. ಇದೊಂದು ಅಕ್ಷರಶಃ ಪೆಂಡೊರಾಳ ಬಾಕ್ಸ್. ಈ ಬಾರಿ ಈ ಪೆಂಡೊರಾ ಪೇಪರ್ಸ್ ನಿಂದ ಹೊರಬಂದದ್ದು ಹಿಂದಿನಂತೆ ಜಗತ್ತಲ್ಲೆಲ್ಲ ಸಂಚಲನ ಮೂಡಿಸಿದ್ದು ಅದಕ್ಕೆ ತಕ್ಕಂತೆ ಜಾಸ್ತಿ.

ಆದರೆ ಹಿಂದಿನಂತೆ ಈ ಬಾರಿ ಕೂಡ ಇದೆಲ್ಲ ಮರೆತು ಹೋಗುವಲ್ಲಿಯವರೆಗೆ ಗೌಜಿ ಗಲಾಟೆ ಅಷ್ಟೆ. ಹಾಗಾ ಗದಿರಲಿ ಎಂದು ನಾವೆಲ್ಲಾ ಅಂದುಕೊಂಡರೂ ಇದೆಲ್ಲ ಅಂತ್ಯ ಕಾಣುವುದೇ ಹೀಗೆಯೇ – ಮತ್ತು ಅದಕ್ಕೆ ಕಾರಣ ಕೂಡ ಇದೆ. ಮೋದಿ ಸರಕಾರ ಅಧಿಕಾರಕ್ಕೆ ಬರುವ ಮುಂಚೆ ಹೇಳಿಕೊಂಡದ್ದು ಕೇಳಿಲ್ಲವೇ? ಭಾರತೀಯರ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನೆಲ್ಲ ವಾಪಸ್ ತಂದುಬಿಡುತ್ತೇವೆ ಎಂದದ್ದು. ಅದನ್ನು ಕೇಳಿ ಏನೇನೋ ಕನಸು ಕಂಡವರಲ್ಲಿ ನಾನು ಕೂಡ ಒಬ್ಬವನು. ಆಮೇಲೇನಾಯ್ತು ಎನ್ನುವುದು ಗೊತ್ತೇ ಇದೆ. ಅಷ್ಟಕ್ಕೂ ಸ್ವಿಸ್ ಬ್ಯಾಂಕ್ ಎನ್ನುವುದು ಇಲ್ಲೊಂದು ಹೆಸರು ಅಷ್ಟೆ. ಕೆಯ್ಮನ್ ದ್ವೀಪ, ಇಂಗ್ಲೆಂಡ್, ನೆದರ್ ಲ್ಯಾಂಡ್, ಲ್ಯೂಕ್ಸೆಂಬರ್ಗ್, ಹಾಂಕೊಂಗ್, ಚೀನಾ, ಬ್ರಿಟಿಷ್ ವರ್ಜಿನ್ ದ್ವೀಪಗಳು, ಐಲೆಂಡ್, ಸಿಂಗಾಪುರ್, ಬರ್ಮು
ಡಾ, ಸೈಪ್ರಸ್, ಅಮೆರಿಕದ ಕೆಲವು ರಾಜ್ಯಗಳು, ರಷ್ಯಾ – ಹೀಗೆ ಜಗತ್ತಿನ ಮೂಲೆ ಮೂಲೆಯಲ್ಲಿ ಇಂತಹ ಅದೆಷ್ಟೋ ಟ್ಯಾಕ್ಸ್ ಕಳ್ಳರ ಸ್ವರ್ಗಗಳಿವೆ.

ಇದೇ ಒಂದು ದೊಡ್ಡ ದಂಧೆ ಮಾಡಿಕೊಂಡು ಜೀವನ ಮಾಡುತ್ತಿರುವ ಅದೆಷ್ಟೋ ದೇಶಗಳಿವೆ. ಇಂತಹ ಒಂದು ದೇಶದಿಂದ ಇನ್ನೊಂದು ದೇಶಕ್ಕೆ
ಒಂದರಿಂದ ಇನ್ನೊಂದು ಶೆಲ್ ಕಂಪನಿಗೆ ಗೌಪ್ಯವಾಗಿ ಹಣ ವರ್ಗಾಯಿಸಿ ಆಯಾ ಸರಕಾರದ ಕೈಗೆ ಸಿಗದಂತೆ ಮಾಡುವ ವ್ಯವಸ್ಥಿತ ಜಾಲ ಅದೆಷ್ಟೋ ದಶಕಗಳಿಂದ ಇದೆ. ಹಾಗಾಗಿ ಇದೆಲ್ಲವನ್ನು ಭೇದಿಸುವುದು ಅಸಾಧ್ಯದ ಮಾತು. ಯಾವುದೇ ಸರಕಾರ – ವ್ಯವಸ್ಥೆ ಅದೆಷ್ಟೇ ಜಪ್ಪಯ್ಯ ಎಂದರೂ
ಭೇದಿಸಲಾಗದ ಬಹುಚಕ್ರವ್ಯೂಹ ಇದು. ಈ ರೀತಿಯ ಕಾಳ ವ್ಯವಹಾರಗಳ, ತೆರಿಗೆ ವಂಚಕರ ಹೆಸರುಗಳು, ವಂಚನೆಯ ದಂಧೆಯ ಮಾಹಿತಿ ಹೊರಬಂದಾ
ಗಲೆಲ್ಲ ಸಾಮಾನ್ಯವಾಗಿ ಶೆಲ್ ಕಂಪನಿಗಳ ಬಗ್ಗೆ ಪ್ರಸ್ತಾಪವಾಗುತ್ತದೆ.

ಇದೆಲ್ಲ ವ್ಯವಹಾರಗಳು ಹೇಗೆ ನಡೆಯುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕಾದರೆ ಈ ಶೆಲ್ ಕಂಪನಿಗಳೆಂದರೆ ಏನು, ಹೇಗೆ, ಎತ್ತ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಆಗ ಮಾತ್ರ ಈ ಸಾಧ್ಯತೆಗಳ ಅಂದಾಜು ಮತ್ತು ಇದನ್ನು ಬೇಧಿಸುವ ಅಸಾಧ್ಯತೆಯ ಬಗ್ಗೆ ಒಂಚೂರು
ಅಂದಾಜು ಹತ್ತುತ್ತದೆ. ಅದೆಲ್ಲದಕ್ಕಿಂತ ಮೊದಲು ಒಂದನ್ನು ಇಲ್ಲಿಯೇ ಸ್ಪಷ್ಟಪಡಿಸಿಬಿಡುತ್ತೇನೆ. ಶೆಲ್ ಕಂಪನಿಗಳೆಂದರೆ ಅವೆಲ್ಲವೂ ಕಂತ್ರಿ ಕಂಪನಿಗಳು ಮತ್ತು ಮೋಸಕ್ಕಾಗಿಯೇ ಬಳಕೆಯಾಗುವವು ಎನ್ನುವಂತಿಲ್ಲ. ಅಲ್ಲದೇ ಶೆಲ್ ಕಂಪನಿಯನ್ನು ಸ್ಥಾಪಿಸಿದವರೆಲ್ಲ ಅದನ್ನು ಮೋಸಕ್ಕಾಗಿಯೇ, ತೆರಿಗೆ ವಂಚನೆಗೇ ತೆರೆದದ್ದು ಎನ್ನುವಂತೆ ಕೂಡ ಇಲ್ಲ.

ಆದರೆ ತೆರಿಗೆ ವಂಚಿಸುವುದಕ್ಕೆ, ಕಪ್ಪು ಅಥವಾ ಬಿಳಿ ಹಣವನ್ನು ಬಚ್ಚಿಡುವುದಕ್ಕೆ, ಅನ್ಯ ದೇಶಗಳಲ್ಲಿ ಹಣವನ್ನು ತೆರಿಗೆಯ ಹಿಡಿತಕ್ಕೆ ಸಿಗದಂತೆ ತೊಡಗಿಸುವುದಕ್ಕೆ ಶೆಲ್ ಕಂಪನಿಗಳು ಅನಿವಾರ್ಯ ಎನ್ನುವುದು ಸಾರ್ವತ್ರಿಕ ಸತ್ಯ. ಶೆಲ್ ಕಂಪನಿಗಳು ಎನ್ನುವ ವಿಚಾರ ಹೊಸ ಆವಿಷ್ಕಾರವೇನಲ್ಲ. ಹಾಗಿರುವಾಗ ಇಷ್ಟೆಲ್ಲಾ ಕಳ್ಳ ವ್ಯವಹಾರಕ್ಕೆ ಕಾರಣವಾಗುವಾಗ ಇದನ್ನು ತಡೆಯುವ ಕ್ರಮವೇಕೆ ಆಗುವುದಿಲ್ಲ? ಈ ಪ್ರಶ್ನೆಗಿಂತ ಮೊದಲು ಶೆಲ್ ಕಂಪನಿಯೆಂದರೆ ಏನು ಎನ್ನುವುದನ್ನು ಅರಿಯುವುದು ಮುಖ್ಯ. ಶೆಲ್ ಕಂಪನಿ ಎಂದರೆ ಎಲ್ಲ ಕಂಪನಿಗಳಂತೆ ಆದರೆ ಹೊರ ದೇಶದಲ್ಲಿ – ಅದರಲ್ಲೂ ತೀರಾ ಗೌಪ್ಯತೆಯ ಕಾನೂನುಗಳಿರುವ ದೇಶದಲ್ಲಿ ನಮೂದಾದ ಕಂಪನಿ ಅಥವಾ ಕಾರ್ಪೊರೇಷನ್.

ಅಸಲಿಗೆ ನಮ್ಮ ಕಲ್ಪನೆಯಂತೆ ಕಂಪನಿ ಎಂದಾಕ್ಷಣ ಅಲ್ಲಿ ಒಂದು ಆಫೀಸ್, ಬಾಸ್, ಮ್ಯಾನೇಜರ್ ಗಳು, ಸಂಬಳಕ್ಕೆ ಕೆಲಸ ಮಾಡುವವರು ಇರಬೇಕಲ್ಲ? ಆದರೆ ಈ ಶೆಲ್ ಕಂಪನಿಗಳಲ್ಲಿ ಅದ್ಯಾವುದೂ, ಇವರ್ಯಾರೂ ಇರುವುದಿಲ್ಲ. ಈ ಶೆಲ್ ಕಂಪನಿಗಳು ಕೇವಲ ಪೇಪರಿನಲ್ಲಷ್ಟೆ ಇರುವಂಥದ್ದು. ಅದೆ ಲ್ಲಿಯೋ ತೆರಿಗೆ ಸ್ವರ್ಗದಲ್ಲಿ ಅಥವಾ ತೆರಿಗೆಯೇ ಇಲ್ಲದ ದೇಶದಲ್ಲಿ – ರಾಜ್ಯದಲ್ಲಿ ಈ ಕಂಪನಿ ನ್ಯಾಯುತವಾಗಿಯೇ ನಮೂದಾಗಿರುತ್ತದೆ. ಈ ಕಂಪನಿ ಗಳನ್ನು ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕಂಪನಿ ಎಂದೇ ಮರ್ಯಾದೆಯಿಂದ ಕರೆಯಲಾಗುತ್ತದೆ. ಕಚೇರಿ ಅಥವಾ ಕೆಲಸದವರೇ ಇಲ್ಲದ ಈ
ಕಂಪನಿಗಳನ್ನು ಮೇಲ್ ಬಾಕ್ಸ್ ಕಂಪನಿ ಎಂದು ಕರೆಯುವುದೂ ಉಂಟು.

ಏಕೆಂದರೆ ಅದೆಲ್ಲೋ ಒಂದು ಪೋಸ್ ಆಫೀಸಿನಲ್ಲಿ ಇರುವ ಪೋಸ್ಟ್ ಬಾಕ್ಸ್ ಸಂಖ್ಯೆಯ ಡಬ್ಬಿಯೇ ಈ ಕಂಪನಿಯ ಇರುವು – ಅಡ್ರೆಸ್ ಆಗಿರುವುದು. ಆ ನೆಲದ ಗೌಪ್ಯತೆಯ ಕಾನೂನೇ ಈ ಕಂಪನಿಗಳ ಜೀವಾಳ. ಇಂತಹ ದೇಶದಲ್ಲಿ – ಜಾಗದಲ್ಲಿ ಸ್ಥಾಪನೆಯಾದ ಕಂಪನಿಗಳ ಒಡೆಯ, ಷೇರುದಾರರು ಹೀಗೆ ಎಲ್ಲರ ಹೆಸರೂ ಅಲ್ಲಿನ ಕಾನೂನು ಅನುವುಮಾಡಿಕೊಡುವ ಗೌಪ್ಯತೆ ಕಾಪಾಡುತ್ತಿರುತ್ತದೆ. ಆ ಕಂಪನಿಯ ಹೆಸರಲ್ಲಿ ಬ್ಯಾಂಕ್ ಅಕೌಂಟ್, ಷೇರ್
ಖರೀದಿಸಲು ಬಳಕೆಯಾಗುವ ಬ್ರೋಕರೇಜ್ ಅಕೌಂಟ್ ಇರುತ್ತದೆ ಮತ್ತು ಕಂಪನಿಯ ಹೆಸರಲ್ಲಿ ಒಂದಿಷ್ಟು ಆಸ್ತಿ ಅಥವಾ ಕಮಾಯಿ ಆ ಕಂಪನಿಯ ಪೇಪರಿನಲ್ಲಿ, ವಹಿವಾಟು ಗಳು, ಹಣ ಕೈಬದಲಾಗುವುದು ನಡೆಯುತ್ತಿರುತ್ತದೆ.

ಈ ಶೆಲ್ ಕಂಪನಿಯ ಮೂಲಕ ಸೈಟು, ಮನೆ, ಬಿಲ್ಡಿಂಗ್‌ಗಳು, ಬೇರೆ ಕಂಪನಿಗಳನ್ನು ಖರೀದಿಸಬಹುದು. ನಿಮ್ಮದೇ ಕಂಪನಿಯನ್ನು ನಿಮ್ಮದೇ ಶೆಲ್ ಕಂಪನಿಗೆ – ನಿಮಗೇ ಮಾರಾಟ ಮಾಡಿಕೊಳ್ಳಬಹುದು. ಈ ಶೆಲ್ ಕಂಪನಿಯ ಮೂಲಕ ರಾಯಲ್ಟಿ ಹಣವನ್ನು ನಿಮ್ಮದೇ ಆವಿಷ್ಕಾರದ ಮೇಲೆ ಅಲ್ಲಿ ಪಡೆಯಬಹುದು. ಉದಾಹರಣೆಗೆ ಭಾರತೀಯನೊಬ್ಬ ಒಂದು ದೊಡ್ಡ ಆವಿಷ್ಕಾರ ಮಾಡಿದ ಎಂದಿಟ್ಟುಕೊಳ್ಳಿ. ಆತ ಆ ಆವಿಷ್ಕಾರದ ಪೇಟೆಂಟ್ ಅನ್ನು ತನ್ನದೇ ವಿದೇಶದಲ್ಲಿರುವ ಶೆಲ್ ಕಂಪನಿಗೆ ನೂರು ರುಪಾಯಿಗೆ ಮಾರಾಟ ಮಾಡಬಹುದು. ಹಾಗೆ ಮಾಡಿ, ಆಮೇಲೆ ಆ ಪೇಟೆಂಟ್ ಅನ್ನು ಆ ಕಂಪನಿಯ ಒಡೆತನವೆನ್ನುವಂತೆ ಎಲ್ಲ ದಾಖಲೆ ಗಳನ್ನು ಅನ್ಯ ದೇಶದಲ್ಲಿ ಸೃಷ್ಟಿಸಿ ಅದರಿಂದ ಬೇರೆ ದೇಶದಲ್ಲಿ ಬರುವ ರಾಯಲ್ಟಿ ಕಮಾಯಿಯನ್ನು ಆ ಕಂಪನಿಯ
ಆದಾಯ ಎನ್ನುವಂತೆ ತೋರಿಸುವುದು.

ಇದರಿಂದ ಭಾರತದಲ್ಲಿ ಆ ಆದಾಯಕ್ಕೆ ತೆರಿಗೆ ಕಟ್ಟಬೇಕೆಂದಿಲ್ಲ. ಮತ್ತು ಆ ನೆಲದಲ್ಲಿನ ಕಾನೂನಿಂದಾಗಿ ಆ ಕಂಪನಿಯ ಒಡೆತನದ ಮಾಹಿತಿ ಗೌಪ್ಯ ವಾಗಿರುತ್ತದೆ. ಮುಂದೊಮ್ಮೆ ಈ ಕಂಪನಿ ಬೆಳೆದು ಆತನದೇ ಭಾರತದಲ್ಲಿರುವ ಒಂದು ಲಾಟ್ ಪೂಟ್ ಕಂಪನಿಯನ್ನು ಅದೆಷ್ಟೋ ಕೋಟಿ ಕೊಟ್ಟು ಖರೀದಿಸಬಹುದು. ಅಲ್ಲಿಗೆ ಒಂದು ವೃತ್ತ – ನ್ಯಾಯಯುತವಾಗಿಯೇ ಮುಗಿದು ಅದೆಲ್ಲ ಹಣಕ್ಕೆ ತೆರಿಗೆಯೇ ಇಲ್ಲದೆ ಆತನ ಹೆಸರಿಗೆ ಸಂದಾಯ ಮಾಡಿಕೊಳ್ಳಬಹುದು. ಈ ಶೆಲ್ ಕಂಪನಿಯಲ್ಲಿ ಒಡೆಯ, ನೌಕರ, ಷೇರುದಾರ ಎಲ್ಲವೂ ಒಬ್ಬನೇ ವ್ಯಕ್ತಿಯಾಗಿರಬಹುದು ಅಥವಾ ಪತಿ ಪತ್ನಿ ನಡುವೆ ಈ ಶೆಲ್ ಕಂಪನಿಯ ಮೂಲಕ ವ್ಯವಹಾರ ನಡೆಸಿ ಯಾರೋ ಯಾರಿಂದಲೋ ಏನನ್ನೋ ಖರೀದಿಸಿದಂತೆ ಹೊರಜಗತ್ತಿಗೆ ತೋರಿಸಬಹುದು.

ಇದೆಲ್ಲ ತೀರಾ ಜಟಿಲವೆನ್ನಿಸಿದರೂ ಇದೆಲ್ಲವನ್ನು ಮಾಡುವುದು ಅಷ್ಟೆಲ್ಲ ಕಷ್ಟದ ವಿಚಾರವಲ್ಲ. ಏಕೆಂದರೆ ಮೊದಲನೆಯದು ಇದನ್ನೇ ದಂಧೆ ಮಾಡಿ ಕೊಂಡ ದೇಶ, ವ್ಯವಸ್ಥೆ ಮೊದಲು ಹೇಳಿದ ಹಲವು ಕಡೆಯಿದೆ. ಎರಡನೆಯದು ಇಂತಹ ಜಾಗಗಳಲ್ಲಿ ಶೆಲ್ ಕಂಪನಿಯನ್ನು ಸ್ಥಾಪಿಸುವುದು, ಒಡೆತನ ಪಡೆಯುವುದು ಮತ್ತು ಮಾಹಿತಿಯನ್ನು ಗೌಪ್ಯವಾಗಿಡುವುದು ತೀರಾ ಸುಲಭ.

ಎಷ್ಟು ಸುಲಭ ಎನ್ನುವುದಕ್ಕೆ ಒಂದು ಚಿಕ್ಕ ವಿವರಣೆ. ಸೈಪ್ರಸ್ ಅಥವಾ ಕೆಯ್ಮನ್ ದ್ವೀಪದಲ್ಲಿ ಒಂದು ಈ ರೀತಿಯ ಕಂಪನಿಯನ್ನು ಯಾರು ಬೇಕಾದರೂ, ನಾವು ನೀವು ಕೂಡ, ಎಲ್ಲಿ  ಬೇಕಾದರೂ ಕೂತು ತೆರೆಯಬಹುದು. ಇದಕ್ಕೆ ಒಂದು ಪಾಸ್ ಪೋರ್ಟ್‌ನ ಚಿತ್ರಪ್ರತಿ, ಒಂದು ಅಡ್ರೆಸ್ ಪ್ರೂಫ್ ಮತ್ತು
ಕೇವಲ ಇಪ್ಪತ್ತು ಸಾವಿರ ರು. ಇದ್ದರಾಯಿತು. ಇದನ್ನು ಭಾರತ ದಲ್ಲೇ ಕೂತು ಇಂಟರ್ನೆಟ್ ಬಳಸಿ – ತೀರಾ ಸಾಮಾನ್ಯ ಗೂಗಲ್ ಸರ್ಚ್ ಮಾಡಿ, ಹುಡುಕಿ, ಸಂಪರ್ಕಿಸಿ ಒಂದೆರಡು ತಾಸಿನಲ್ಲಿ ತೆರೆಯಬಹುದು. ಉತ್ಪ್ರೇಕ್ಷೆಗಲ್ಲ – ನಿಜವಾಗಿಯೂ ಅಷ್ಟು ಸುಲಭ.

ಈ ರೀತಿ ಅನ್ಯದೇಶದಲ್ಲಿ ಒಂದು ಕಂಪನಿ ಯನ್ನು ತೆರೆಯುವುದು ಎಲ್ಲ ರೀತಿಯಲ್ಲೂ ಕಾನೂನಾತ್ಪಕ. ಹಾಗೆ ತೆರೆದ ಕಂಪನಿಗೆ ನಿಮ್ಮ ಕಂಪನಿಯನ್ನು ಮಾರಾಟ ಮಾಡ ಬಹುದು. ಅಲ್ಲಿಂದ ಮುಂದೆ ನಿಮ್ಮದೇ ಕಂಪನಿಯ ಆದಾಯಕ್ಕೆ ತೆರಿಗೆ ಕಟ್ಟಬೇಕಿಲ್ಲ – ಏಕೆಂದರೆ ಆ ಕಂಪನಿಯ ಒಡೆತನ ನಿಮ್ಮದೇ ಹೆಸರಿನಲ್ಲಿ ಗುಪ್ತವಾಗಿ ಇರುವುದು ಇನ್ನೊಂದು ದೇಶದಲ್ಲಿ. ಆ ನೆಲದಲ್ಲಿ ಅನ್ಯದೇಶದ ಆದಾಯಕ್ಕೆ ತೆರಿಗೆಯಿರುವುದಿಲ್ಲ ಅಥವಾ ಬಹಳ ಕಡಿಮೆಯಿರು ತ್ತದೆ.

ಹೀಗೆ ಸ್ಥಳೀಯ ಸರಕಾರಕ್ಕೆ -ಮಾತೃದೇಶಕ್ಕೆ ಖುಲ್ಲಂ ಖುಲ್ಲಾ ಪಂಗನಾಮ. ಇನ್ನು ಎಲ್ಲ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಕೂಡ ಈ ರೀತಿಯ ಶೆಲ್ ಕಂಪನಿಗಳನ್ನು ಹೊಂದಿರುವುದು ಸಾಮಾನ್ಯ. ಉದಾಹರಣೆಗೆ ಆಪಲ್ ಅಥವಾ ಅಂಥದ್ದೊಂದು ಬಹು ರಾಷ್ಟ್ರಗಳಲ್ಲಿ ತನ್ನ ಪ್ರಾಡಕ್ಟ್ ಅನ್ನು ಮಾರುವ ಕಂಪನಿ ಈ ರೀತಿ ಶೆಲ್ ಕಂಪನಿಯನ್ನು ಸ್ಥಾಪಿಸಿ ಅದರ ಮೂಲಕ ಅನ್ಯದೇಶದ ವ್ಯವಹಾರವನ್ನು ನಡೆಸುತ್ತದೆ. ಇದರಿಂದ ಈ ರೀತಿ ತೆರಿಗೆಯಿಲ್ಲದ ದೇಶದಲ್ಲಿ ಕಂಪನಿ ನಮೂದಾಗಿರುವುದರಿಂದ ದೇಶದ ಹೊರಗೇ ಎಲ್ಲ ಹಣ ವ್ಯವಹಾರವನ್ನು ನಡೆಸುವುದರಿಂದ ತನ್ನ ದೇಶದಲ್ಲಿ ಆದಾಯಕ್ಕೆ ತೆರ ಬೇಕಾದ ತೆರಿಗೆಯನ್ನು ಕಟ್ಟಬೇಕಾಗುವುದಿಲ್ಲ. ಹಾಗೆ ಶೇಖರಣೆಯಾದ ಹಣದಿಂದ ಕಂಪನಿಯ ಅಂಗಡಿಗಳನ್ನು ಮತ್ತೊಂದು ದೇಶದಲ್ಲಿ ತೆರೆದಾಗ ಎಲ್ಲ ವ್ಯವಹಾರ ತೆರಿಗೆಯೇ ಇಲ್ಲದೆ ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ಇಂತಹ ನಾಲ್ಕಾರು ದೇಶಗಳಲ್ಲಿ ಶೆಲ್ ಕಂಪನಿಗಳನ್ನು ಸ್ಥಾಪಿಸಿ ಒಂದರ ಒಡೆತನ ಇನ್ನೊಂದು ಕಂಪನಿ ಹೊಂದುವಂತೆ ಮಾಡಿಬಿಟ್ಟರೆ – ಆ ಮೂಲಕ ನಾಲ್ಕಾರು ಪದರ ಸ್ಥಾಪಿಸಿಬಿಟ್ಟರೆ ಇದನ್ನು ಯಾವುದೇ ಸರಕಾರ ಆ ವ್ಯಕ್ತಿಯ ಜೀವಮಾನ ಬಿಡಿ ನೂರಿನ್ನೂರು ವರ್ಷ ಕಳೆದರೂ ಕಾನೂನು ಬಳಸಿ ಭೇದಿಸುವುದು ಅಸಾಧ್ಯ. ಈ ಎಲ್ಲ ಕಾರಣಕ್ಕೆ ಕಾಳಧನವನ್ನು ದೇಶಕ್ಕೆ ಮರಳಿ ತರುವುದು ಮತ್ತು ಇಂಥವರನ್ನು ಶಿಕ್ಷಿಸುವುದು ಎಲ್ಲ ಮಾಹಿತಿ
ಯಿದ್ದರೂ (ಈ ರೀತಿ ಬಹಿರಂಗವಾಗಿ) ಕಾನೂನಿನಡಿಯಲ್ಲಿ ಸಾಧ್ಯವಾಗುವುದಿಲ್ಲ. ಪೆಂಡೊರಾ ಪೇಪರ್ಸ್ ನಂತಹ ಅದೆಷ್ಟೇ ಮಾಹಿತಿ ಬಹಿರಂಗ ವಾದರೂ ಇದೆಲ್ಲವನ್ನು ಭೇದಿಸುವುದು ಅಸಾಧ್ಯದ ಮಾತಾಗಿಯೇ ಉಳಿದುಬಿಡುತ್ತದೆ.

ಮೋದಿ ಬಿಡಿ – ಬ್ರಹ್ಮನೇ ಬಂದರೂ ಇದೊಂದು ಅಭೇಧ್ಯ ವ್ಯವಸ್ಥಿತ ವ್ಯವಹಾರ. ಹಾಗಾಗಿಯೇ ಸಚಿನ್ ತೆಂಡೂಲ್ಕರ್ ಇರಬಹುದು, ದಿವಾಳಿಯೆಂದು ಘೋಷಿಸಿಕೊಂ ಡ ಅನಿಲ್ ಅಂಬಾನಿ ಅಥವಾ ವಿಜಯ್ ಮಲ್ಯ ಇರಬಹುದು – ಇಂಥದ್ದೊಂದು ಕಳ್ಳ ವ್ಯವಹಾರ ಮಾಡಿದ್ದೇ ಆದಲ್ಲಿ ಅವರನ್ನು ನ್ಯಾಯವ್ಯವಸ್ಥೆಯಲ್ಲಿ ತಂದು ಶಿಕ್ಷಿಸುವುದು ಅಸಾಧ್ಯವಾಗುತ್ತದೆ. ಇದೆಲ್ಲ ನಿಮಗೆ ತಿಳಿದಿದ್ದರೆ ಮಾತ್ರ ಈ ರೀತಿ ಕಪ್ಪು ಹಣ ತಂದುಬಿಡುತ್ತೇನೆ ಎನ್ನು ವವರು ಎಷ್ಟೇ ಸಾಚಾ ಆಗಿದ್ದರೂ ಏಕೆ ಸಾಧಿಸಲಾಗುವುದಿಲ್ಲ ಎನ್ನುವುದು ತಿಳಿ ಯುತ್ತದೆ. ಈ ಕಳ್ಳರೆಲ್ಲರೂ not guilty unless proven otherwise  ಆಗಿಯೇ ಒಂದು ದಿನ ನಿಷ್ಕ ಳಂಕವಾಗಿ ಸತ್ತು ಹೋಗುತ್ತಾರೆ. ಸತ್ತ ನಂತರ ಇನ್ನೊಂದು ಪದರದ ಗೌಪ್ಯತೆ ಅಲ್ಲಿ ನಿರ್ಮಾಣವಾಗಿ ಅದನ್ನು ಭೇದಿಸು ವುದು ಇನ್ನಷ್ಟು ಜಟಿಲವಾಗಿ ಹೋಗುತ್ತದೆ. ಹೀಗಾಗುವಾಗ ಕೆಲವೊಮ್ಮೆ ಯಾರದ್ದೋ ದುಡಿಮೆ, ಕಳ್ಳ ಹಣ ಅವರು ಸತ್ತ ನಂತರ ಇನ್ಯಾವುದೋ ದೇಶದ ಸರಕಾರದ ಸ್ವತ್ತಾಗುವುದೂ ಉಂಟು.

ಇದೆಲ್ಲ ಗ್ರೀಕ್ ದೇವರು ಪೆಂಡೊರಾಳಿಗೆ ಕೊಟ್ಟ ಪೆಟ್ಟಿಗೆಯಂತೆ. ಒಂದಿಷ್ಟು ಕುತೂಹಲ, ಆಗಾಗ ಒಂದಿಷ್ಟು ಸಂಚಲನ. ಅದು ಬಿಟ್ಟು – ಮಾಹಿತಿ ಹೊರಬಂತು – ಆತ ಸಧ್ಯದಲ್ಲೇ ಜೈಲಿಗೆ ಹೋಗುತ್ತಾನೆ, ಶಿಕ್ಷೆಯಾಗುತ್ತದೆ, ನ್ಯಾಯಕ್ಕೆ ಗೆಲುವು ಎಂಬಿತ್ಯಾದಿಯೆಲ್ಲ ಕೇವಲ ಭ್ರಮೆ. ತಿಳಿದಿರಲಿ.