Sunday, 22nd September 2024

ಅಷ್ಟಕ್ಕೂ ಈ ಬಾರಿ ಮೇಲ್ಮನೆಗೆ ಮಾನದಂಡ ಏನು ?

VIdhana Parishad

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ಮೇಲ್ಮನೆಗೆ ಚಿಂತಕರು, ತಜ್ಞರು, ಪ್ರಜ್ಞಾವಂತರನ್ನು ಇಲ್ಲಿಗೆ ಕಳುಹಿಸಬೇಕು. ಆದರೆ ವಿಧಾನಸಭೆ ಚುನಾವಣೆಯ ರೀತಿಯಲ್ಲಿ ಇಲ್ಲಿ ಬಣ ರಾಜಕೀಯ, ‘ಆರ್ಥಿಕ’ ಶಕ್ತಿ ಪ್ರಯೋಗ, ಗದ್ದಲ ಮಾಡಿಕೊಂಡು ಟಿಕೆಟ್ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಬಾರದು.

ಅದೊಂದು ಕಾಲವಿತ್ತು, ವಿಧಾನಪರಿಷತ್‌ನಲ್ಲಿ ಚರ್ಚೆ ಆರಂಭವಾಯಿತು ಎಂದರೆ, ವಿಧಾನಸಭೆಯ ಶಾಸಕರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತು ಕೇಳುತ್ತಿದ್ದ ಕಾಲವಿತ್ತು. ಕಡಿದಾಳ್ ಮಂಜಪ್ಪ, ನಾಗೇಗೌಡ, ವಿ.ಎಸ್. ಆಚಾರ್ಯ, ಡಿ.ಬಿ ಚಂದ್ರೇಗೌಡ, ಅಬ್ದುಲ್ ನಾಜೀರ್ ಸಾಬ್, ಚಂದ್ರಶೇಖರ್, ವೈಎಸ್‌ವಿ ದತ್ತಾ,
ಎಂ.ಸಿ. ನಾಣಯ್ಯ, ಡಿ.ಎಚ್ ಶಂಕರಮೂರ್ತಿ ಹೀಗೆ ವಿಧಾನಪರಿಷತ್ ಸದಸ್ಯರಾಗಿ ಆಗಿ ಹೋಗಿರುವವರ ಪಟ್ಟಿ ಕೊಡುತ್ತಾ ಹೋದರೆ, ಹನುಮ ಬಾಲವಾಗುತ್ತದೆ. ಹೆಸರಿಗೆ ತಕ್ಕಂತೆ ಮೇಲ್ಮನೆಗೆ ಹಿರಿತನವನ್ನು ಕೊಟ್ಟ, ನಿಜವಾದ ಅರ್ಥದಲ್ಲಿ ಚಿಂತಕರ ಚಾವಡಿಯನ್ನಾಗಿ ಮಾಡಿದ ಕೀರ್ತಿ ಕರ್ನಾಟಕ ವಿಧಾನಪರಿಷತ್‌ಗೆ ಸಲ್ಲುತ್ತದೆ.

ಇದೀಗ ವಿಧಾನಪರಿಷತ್‌ನ ೨೫ ಸ್ಥಾನಗಳಿಗೆ ಚುನಾವಣೆ ಎದುರಾಗಿದೆ. ಮೇಲ್ಮನೆ ಎನ್ನುವ ಕಾರಣಕ್ಕೆ, ಚಿಂತಕರು, ತಜ್ಞರು, ಪ್ರಜ್ಞಾವಂತರನ್ನು ಇಲ್ಲಿಗೆ ಕಳುಹಿಸಬೇಕಿರುವುದರಿಂದ, ವಿಧಾನಸಭೆ ಚುನಾವಣೆಯ ರೀತಿಯಲ್ಲಿ ಇಲ್ಲಿ ಬಣ ರಾಜಕೀಯ, ‘ಆರ್ಥಿಕ’ ಶಕ್ತಿ ಪ್ರಯೋಗ, ಗದ್ದಲ ಮಾಡಿಕೊಂಡು ಟಿಕೆಟ್ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಬಾರದು. ಆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರಜ್ಞರನ್ನು ಪಕ್ಷದಿಂದ ಆಯ್ಕೆ ಮಾಡಬೇಕು (ಹಾಗೇ ನೋಡಿದರೆ, ವಿಧಾನಪರಿಷತ್‌ನಲ್ಲಿ ಪಕ್ಷ ರಾಜಕೀಯಕ್ಕಿಂತ ವಿಷಯಾಧಾರಿತ ಚರ್ಚೆಗಳು ನಡೆಯ ಬೇಕು ಎನ್ನುವುದು ಬೇರೆ ಮಾತು.) ಆದರೆ ಈಗ ಆಗುತ್ತಿರುವುದು ಏನು? ಸ್ಥಳೀಯ ಸಂಸ್ಥೆಗಳ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಆಯ್ಕೆ ಪ್ರಕ್ರಿಯೆ, ಯಾವ ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆ ಗಿಂತಲೂ ಕಡಿಮೆಯಿಲ್ಲ.

ಈ ಹಿಂದೆ ಪರಿಷತ್ ಎಂದರೆ ಅದಕ್ಕೊಂದು ಗಂಭೀರತೆ ಇರುತ್ತಿತ್ತು. ಅಲ್ಲಿ ನಡೆಯುತ್ತಿದ್ದ ಚರ್ಚೆಗಳಿಗೂ ಅಷ್ಟೇ ಮಹತ್ವ ಇರುತ್ತಿತ್ತು. ಪ್ರತಿಪಕ್ಷದ ಸದಸ್ಯರು ಮಾತನಾಡುತ್ತಿದ್ದರೆ, ಸ್ವತಃ ಸಚಿವರುಗಳು ಆಲಿಸುವುದು ಮಾತ್ರ ವಲ್ಲದೇ ನೋಟ್ ಮಾಡಿಕೊಳ್ಳುತ್ತಿದ್ದ ಉದಾಹರಣೆಗಳು ಇತಿಹಾಸದಲ್ಲಿದೆ. ಆದರೆ ಈಗ ಆಗುತ್ತಿರುವುದು ಏನು? ತಮಗೆ ಬೇಕಾದವರಿಗೆ ಟಿಕೆಟ್ ನೀಡುವ, ಹಣ ಬಲ, ಪ್ರಭಾವ ಬಳಸಿಕೊಂಡು ರಾಜಕೀಯವಾಗಿ ಕಣ್ಣು ಬಿಡುತ್ತಿರುವವರು ‘ಮೇಲ್ಮನೆಯ ಸದಸ್ಯ’ ಎನ್ನುವ ಸ್ಥಾನ ಪಡೆಯುತ್ತಿದ್ದಾರೆ.

ಅದರಲ್ಲಿಯೂ ನಾಮ ನಿರ್ದೇಶನ, ವಿಧಾನಸಭೆಯಿಂದ ಆಯ್ಕೆಯಾಗುವ ಸ್ಥಾನಗಳಿಗೂ ಇದೀಗ ‘ಸಂಪನ್ಮೂಲ’ದ ಮಾತುಗಳು ಕೇಳಿಬರುತ್ತಿರುವುದು ದುರಂತದ ವಿಷಯ. ಈ ರೀತಿ ಆಯ್ಕೆಯಾಗುವ ಸದಸ್ಯರು, ಅಲ್ಲಿಗೆ ಬಂದು ನಾಡಿನ ವಿಷಯದ ಬಗ್ಗೆ ಚರ್ಚಿಸುವ ಬದಲು, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಅಲ್ಲಿಂದ ಮುಂದಿನ ರಾಜಕೀಯ ಏಳಿಗೆಗೆ ಏನು ಮಾಡಬೇಕು ಎನ್ನುವ ಬಗ್ಗೆಯಷ್ಟೇ ಯೋಚಿಸುತ್ತಾರೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಮೇಲ್ಮನೆಯಲ್ಲಿ ನಿಂತು, ರಾಜಕಾರಣಿಗಳಿಗೆ ಮಾದರಿಯಾಗಿದ್ದ ರಾಜಕಾರಣಿಗಳು ಮಾಡಿದ ಅವಾಂತರಗಳನ್ನು ಕಳೆದ ಕೆಲ ವರ್ಷದಲ್ಲಿ ನೋಡಿದ್ದೇವೆ.

ವಿಧಾನಪರಿಷತ್ ಸಭಾಪತಿಗಳ ಬದಲಾವಣೆ ಸಮಯದಲ್ಲಿ, ಪ್ರತಾಪ್ ಚಂದ್ರ ಶೆಟ್ಟಿ ಅವರ ಅನುಪಸ್ಥಿತಿಯಲ್ಲಿದ್ದ ಧರ್ಮೇಗೌಡ ಅವರನ್ನು ಎಳೆದಾಡಿದ್ದು, ಸಭಾಪತಿಯ ಕುರ್ಚಿಯನ್ನು ಮ್ಯಾಜಿಕಲ್ ಚೇರ್ ರೀತಿ ಬಳಸಿಕೊಂಡದ್ದು ನೋಡಿದ್ದೇವೆ. ಈ ರೀತಿಯ ಕರಾಳ ದಿನ ವಿಧಾನಸಭೆಯಲ್ಲಿಯೂ ಇರಲಿಲ್ಲ ಎನ್ನುವುದ ನ್ನು ಯೋಚಿಸಬೇಕು. ಅಲ್ಲಿದ್ದ ಹಲವು ಸದಸ್ಯರು, ಮೇಲ್ಮನೆಯ ಕನಿಷ್ಠ ಸೌಜನ್ಯವನ್ನು ಹೊಂದಿದ್ದರೂ ಅಂದು ಆ ಘಟನೆ ನಡೆಯುತ್ತಿರಲಿಲ್ಲ. ಇನ್ನು ಅದಾದ ಬಳಿಕ ರಾಜ್ಯಸಭೆಯಲ್ಲಿ ಕೃಷಿ ಕಾಯಿದೆ ವಿರೋಧಿಸಿ, ಪ್ರತಿಪಕ್ಷ ಸದಸ್ಯರು ನಡೆದುಕೊಂಡ ರೀತಿಯೂ ಕರ್ನಾಟಕ ಪರಿಷತ್ ಸದಸ್ಯರಿಗಿಂತ ಭಿನ್ನವಾಗಿರಲಿಲ್ಲ. ಚಿಂತಕರ ಚಾವಡಿ ಎನ್ನುವ ಈ ಪವಿತ್ರ ಸ್ಥಳದಲ್ಲಿ ಪುಡಿ ರೌಡಿಗಳು ನಾಚಿಸುವಂತೆ ವರ್ತಿಸಿದ ಕೆಲ ಸದಸ್ಯರ ವರ್ತನೆ ಮೇಲ್ಮನೆಯ ಗೌರವವನ್ನು ಕುಗ್ಗಿಸಿತು. ಅಲ್ಲಿಯೇ ಮೇಲ್ಮನೆಗೆ ಇರಬೇಕಾದ ಹಿರಿಮೆ ಕಡಿಮೆಯಾಯಿತು.

ಇನ್ನು ಈ ಬಾರಿ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಕೆಲ ಹಾಲಿ ಸದಸ್ಯರಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಇಷ್ಟವಿಲ್ಲ. ಅದಕ್ಕೆ ಕಾರಣ, ಒಂದು ಮುಂದಿನ 2023ರ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವುದು ಇಲ್ಲವೇ, ಈ ಚುನಾವಣೆಯಲ್ಲಿ ಸ್ಪರ್ಧಿಸಿ ‘ಖರ್ಚು’ ಮಾಡಿಕೊಳ್ಳುವ ಬದಲು, ನಿವೃತ್ತಿ ಜೀವನ ಅನುಭವಿಸುವುದಕ್ಕೆ. ಆದ್ದರಿಂದ ಈ ಬಾರಿ ಮೂರು ಪಕ್ಷದಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ಇದ್ದರು, ಆಯ್ಕೆಯಲ್ಲಿ ಮಾತ್ರ ಭಾರಿ ಸಮಸ್ಯೆ ಎದುರಾ ಯಿತು. ಟಿಕೆಟ್‌ಗಾಗಿ ಪೈಪೋಟಿ ನಡೆಸಿದ ಬಹುತೇಕರು, ‘ಮೇಲ್ಮನೆಗೆ ಇರಬೇಕಾದ ವರ್ಚಸ್ಸನ್ನು ಹೊಂದಿರಲಿಲ್ಲ’ ಎನ್ನುವುದೇ ಇದಕ್ಕೆ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ. ಆದ್ದರಿಂದ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವುದಕ್ಕೆ ಹೆಚ್ಚು ಸಮಯ ತಗೆದುಕೊಂಡರು.

ಇನ್ನು ಬಿಜೆಪಿಯಿಂದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಸ್ಥಾನ ನೀಡಿರುವುದಕ್ಕೆ ಯಾವುದೇ ಆಕ್ಷೇಪಗಳಿಲ್ಲ. ಮೇಲ್ಮನೆ ಸದಸ್ಯ ಎನಿಸಿಕೊಳ್ಳಲು ಇರಬೇಕಾದ ಎಲ್ಲ ಅರ್ಹತೆಗಳು ಅವರಿಗಿತ್ತು. ಆದರೆ ಉಪಸಭಾಪತಿಯಾಗಿರುವ ಪ್ರಾಣೇಶ್ ಅವರನ್ನು ಈ ಸ್ಥಾನದಲ್ಲಿಯೇ ಮುಂದುವರಿಸಬೇಕು ಎನ್ನುವ ಕಾರಣಕ್ಕೆ, ಪುನ ರಾಯ್ಕೆ ಮಾಡಬೇಕಾಯಿತು. ಇನ್ನು ಕೊಡಗಿನಿಂದ ಮಂಥರ್ ಗೌಡ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿರುವುದು ಅವರ ತಂದೆ ಎ.ಮಂಜು ಅವರನ್ನು ವಾಪಸು ಕಾಂಗ್ರೆಸ್ ಕರೆತರಬೇಕು ಎನ್ನುವ ಕಾರಣವಲ್ಲದೇ ಮತ್ತೇನು ಅಲ್ಲ. ಹೀಗೆ ಈ ಬಾರಿ ಬಹುತೇಕ ಅಭ್ಯರ್ಥಿಗಳಿಗೆ, ಮೇಲ್ಮನೆಗೆ ಸೆಟ್ ಆಗುವುದಕ್ಕಿಂತ ಹೆಚ್ಚಾಗಿ, ಇತರ ಹಿತಾಸಕ್ತಿಯ ಕಾರಣಕ್ಕೆ ಟಿಕೆಟ್ ನೀಡಲಾಗಿದೆ.

ಹಾಗೇ ನೋಡಿದರೆ ಈ ಬಾರಿಯ ವಿಧಾನಪರಿಷತ್ ಚುನಾವಣೆ ಒಂದು ರೀತಿ ಬಿಜೆಪಿ ಕೇಂದ್ರಿತ ಚುನಾವಣೆಯಾಗಿದೆ. ಬಿಜೆಪಿ ದ್ವಿ ಸದಸ್ಯರ ಪೀಠದಲ್ಲಿ ಅಭ್ಯರ್ಥಿ ಯನ್ನು ಹಾಕಿದರೆ, ಕಾಂಗ್ರೆಸ್ ಹಾಕಬಾರದು, ಬಿಜೆಪಿ ಒಬ್ಬರನ್ನು ನಿಲ್ಲಿಸಿದರೆ, ಇನ್ನೊಂದು ಸ್ಥಾನಕ್ಕೆ ಕಾಂಗ್ರೆಸ್ ಸ್ಫರ್ಧಿಸಬೇಕು. ಬಿಜೆಪಿಯಲ್ಲಿ ಟಿಕೆಟ್‌ಗೆ ಪ್ರಯತ್ನಿಸಿ ಅಲ್ಲಿ ಸಿಗದಿದ್ದರೆ ಕಾಂಗ್ರೆಸ್ ಅಥವಾ ಜೆಡಿಎಸ್‌ನಲ್ಲಿ ಟಿಕೆಟ್ ಕೈಯಾಡಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ಇನ್ನು ಕೆಲವರು ಅಭ್ಯರ್ಥಿಗಳು. ಈ ಎಲ್ಲವನ್ನು ನೋಡಿ ದರೆ, ಮೊದಲ ಬಾರಿಗೆ ಕಾಂಗ್ರೆಸ್, ಜೆಡಿಎಸ್‌ನಿಂದ ಯಾರು ನಿಲ್ಲಬೇಕು ಎನ್ನುವುದನ್ನು ಬಿಜೆಪಿ ನಿರ್ಧರಿಸಿದಂತೆ ಭಾಸವಾಗುತ್ತಿದೆ.

ಬಿಜೆಪಿಯದ್ದು ಈ ಕಥೆಯಾದರೆ ಕಾಂಗ್ರೆಸ್‌ನಲ್ಲಿ ವಿಧಾನ ಪರಿಷತ್ ಘೋಷಣೆಯಾದಾಗಿನಿಂದ ‘ಅಭ್ಯರ್ಥಿಯ ಹುಡುಕಾಟ’ವೇ ನಡೆದು ಹೋಗಿದೆ. ಕೊನೆಯ ತನಕ ‘ಭಿನ್ನಮತ’ ಸೋಟದ ಅಂಜಿಕೆಗೆ ಅಂಜಿ, ಕಾಂಗ್ರೆಸ್ ತನ್ನ ಪಟ್ಟಿಯನ್ನೇ ಅಧಿಕೃತವಾಗಿ ಘೋಷಿಸುವ ಕಾರ್ಯಕ್ಕೆ ಮುಂದಾಗಲಿಲ್ಲ. 25 ಸ್ಥಾನಗಳ ಪೈಕಿ ಕನಿಷ್ಠ ಸೀಟುಗಳನ್ನು ಗಮನದಲ್ಲಿರಿಸಿಕೊಂಡು, ಇನ್ನುಳಿದ ಸ್ಥಾನಗಳಿಗೆ ‘ನಾಮ್‌ಕೆವಸ್ತೆ’ ಅಭ್ಯರ್ಥಿ ಯನ್ನು ಹಾಕಿ ಕೈ ತೊಳೆದುಕೊಳ್ಳುವ ನಿರ್ಧಾರಕ್ಕೆ ಬಂದಂತೆ
ಭಾಸವಾಗುತ್ತಿದೆ. ಅಭ್ಯರ್ಥಿ ಹೆಸರು ಅಂತಿಮವಾಗುವ ಕೆಲ ದಿನಗಳ ಮೊದಲು ಸಚಿವ ಎಸ್.ಟಿ ಸೋಮಶೇಖರ್ ಜತೆ ವಿಶೇಷಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ದಿನೇಶ್ ಗೂಳಿಗೌಡ, ಇಂದು ಮಂಡ್ಯ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ. ಬೆಂಗಳೂರು ನಗರದಿಂದ ಸ್ಪರ್ಧಿಸಿರುವ ಚೇತನ್ ಯಾರೆನ್ನುವುದು ಕಾಂಗ್ರೆಸ್‌ನಲ್ಲಿಯೇ ಇರುವ ಹಲವು ನಾಯಕರಿಗೆ ಗೊತ್ತಿಲ್ಲ. ಅಂತವರು ಮೇಲ್ಮನೆಗೆ ಸರ್ಧಾಳುವಾಗಿದ್ದಾರೆ.

ಕಾಂಗ್ರೆಸ್, ಬಿಜೆಪಿಯ ನಡೆ ಹೀಗಾದರೆ ಜೆಡಿಎಸ್‌ನದ್ದು ಮತ್ತೊಂದು ಹೆಜ್ಜೆ. ಪ್ರಜ್ಞಾವಂತರನ್ನು ಮೇಲ್ಮನೆಗೆ ಸೇರಿಸಬೇಕು ಎನ್ನುವ ಕೂಗಿದ್ದರೂ, ದೇವೇಗೌಡರ ಮತ್ತೊಂದು ಕುಡಿಗೆ ರಾಜಕೀಯವಾಗಿ ಹುಟ್ಟು ನೀಡುವುದಕ್ಕೆ ಈ ಬಾರಿಯ ವಿಧಾನಪರಿಷತ್ ಚುನಾವಣೆಯನ್ನು ಬಳಸಿಕೊಂಡಿದ್ದು ಬಿಟ್ಟರೆ ಇನ್ಯಾವ ಕೆಲಸಕ್ಕೂ ಜೆಡಿಎಸ್ ಕೈಹಾಕಿಲ್ಲ. ರೇವಣ್ಣ ಪುತ್ರ ಸೂರಜ್ ರೇವಣ್ಣ, ಮಂಡ್ಯದಿಂದ ಅಪ್ಪಾಜಿಗೌಡ ಹಾಗೂ ತುಮಕೂರಿನಿಂದ ನಿವೃತ್ತ ಐಎಎಸ್ ಅಧಿಕಾರಿ ಅನಿಲ್‌ಕುಮಾರ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದು, ಬಿಟ್ಟರೆ ಇನ್ಯಾವ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ನಾಮಪತ್ರ ಸಲ್ಲಿಕೆಗೆ ಮಂಗಳವಾರವೇ ಅಂತಿಮ ದಿನಾಂಕವಾಗಿರುವುದರಿಂದ, ಬಾಕಿಯಿರುವ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವುದೂ ಇಲ್ಲ ಎನ್ನುವುದು ಸ್ಪಷ್ಟ.

ಹಿರಿಯ ಛಾಯೆ ಇರಬೇಕಾದ ಪರಿಷತ್ ಅನ್ನು ರಾಜಕೀಯ ಪಕ್ಷಗಳು ಇಷ್ಟು ನಿರ್ಲಕ್ಷ್ಯ ತೋರುವ ಅಥವಾ ಪರಿಷತ್ ಅನ್ನು ನಾಯಕರ ಕುಟುಂಬ ಸದಸ್ಯರ ಅಥವಾ
ಆಪ್ತರ ರಾಜಕೀಯ ಜನ್ಮ ನೀಡಲು ಅಥವಾ ಪುನರ್ ಜನ್ಮ ನೀಡಲು ಬಳಸಿಕೊಳ್ಳುವುದು ಸರಿಯಲ್ಲ. ಚಿಂತಕರ ಚಾವಡಿ ಯಾಗಿದ್ದ ಪರಿಷತ್, ರಾಜಕಾರಣಿಗಳ ಎರಡನೇ ನಿವಾಸವಾಗಿ ಹಲವು ವರ್ಷಗಳ ಕಳೆದಿವೆ. ಆದರೆ ಈ ನಿವಾಸಕ್ಕೆ ಕಳಿಸುವವರಿಗೆ ಕನಿಷ್ಠ ರಾಜ್ಯ, ನಾಡು, ನುಡಿಯ ಬಗ್ಗೆ ಜ್ಞಾನ, ಹಿರಿತನವಿರಲಿ ಎನ್ನುವುದನ್ನು ಜನರು ಬಯಸುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ.