Saturday, 21st September 2024

ಸಂಸ್ಕೃತಿ ಮೇಲಿನ ಅವಿರತ ಹಲ್ಲೆ

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ಇಂದಿನ ಬದಲು ನಿನ್ನೆಯೇ ಆಯುಧ ಪೂಜೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಮೊನ್ನೆ ಅನ್ನಿಸಿದ್ದು ನಿಜ. ಸೋಮವಾರ ಪೂಜೆ, ಮಂಗಳವಾರದ ಸಂಚಿಕೆ ಇಲ್ಲ, ನನಗೆ ಅಂಕಣ ಬರೆಯುವ ಬಾಬತ್ತಿಲ್ಲ. ಹೀಗೆ ಕೆಲವೊಮ್ಮೆ ಅನಿಸುತ್ತದೆ. ಅದಕ್ಕೆ ಒಂದು ಕಾರಣ ಪಾಲುಮಾರಿಕೆಯಲ್ಲ, ಓದುಗರು ಓದದಿದ್ದರೆ ಎಂಬ ಅನಮಾನ. ಬರೆದದ್ದು ವ್ಯರ್ಥವಾಯಿತು ಎಂಬ ಚಿಂತೆಯಲ್ಲ.

ಅಂಕಣ ಬರೆಯುವುದು ವಾರಕ್ಕೊಮ್ಮೆ ಮಾತ್ರವಾದ್ದರಿಂದ ಆ ಅವಕಾಶವ ಸದ್ವಿನಿಯೋಗವಾಗಬೇಕೆಂಬ ಎಚ್ಚರ ಸದಾ ಇರುತ್ತದೆ. ಲೇಖನ ಚೆನ್ನಾಗಿ ತ್ತೆಂದು ಯಾರಾದರೂ ಹೇಳಿದಾಗ ಸಮಾಧಾನವಾಗುವುದು ಹೊಗಳಿದ್ದಕ್ಕಲ್ಲ, ಓದಲ್ಪಟ್ಟಿತಲ್ಲ ಎಂದು, ಪ್ರತಿಕ್ರಿಯಿಸಿದರಲ್ಲ ಎಂದು. ಪ್ರತಿಕ್ರಿಯಿಸಿದ ವರಷ್ಟೇ ಓದಿದರು ಅಂತಲ್ಲ. ಬರೆಯಲು ಹಿಂಜರಿತವಾಗುವುದು ಎಷ್ಟಂತ ಅದೇ ವಿಷಯಗಳ ಬಗ್ಗೆ ಬರೆಯುವುದು ಅನ್ನೋ ಕಾರಣಕ್ಕೆ. ಕೆಲವು ವಿಷಯ ಗಳ ಕುರಿತು ಬರೆಯುವಾಗ/ಬರೆದಾಗ ಬರೆದಷ್ಟೂ ಮನಸ್ಸು ಹಗುರವಾಗುವುದಿಲ್ಲ, ಮ್ಲಾನವಾಗುತ್ತೆ. ಆ ಖಿನ್ನತೆ ಯನ್ನು ಓದುಗರಿಗೆ ವಿತರಿಸು ತ್ತಿದ್ದೀನೇನೋ ಎಂಬ ಆತಂಕ. ಬರೆಯದಿದ್ದರೆ, ಮೌನತಳೆದದ್ದರಿಂದ ಕಾಡುವ ಪ್ರeಯ ತಿವಿತ. ಸರಳೋಪಾಯವಿಲ್ಲ. No easy way out!

ಒಂದೇ ವಿಷಯದ ಬಗ್ಗೆ ಬರೆಯುತ್ತೇನೆಂದಾಗಬಾರದು. ನನಗೆ ಬ್ರ್ಯಾಂಡ್ ಆಗಲು ಇಷ್ಟವಿಲ್ಲ. ಆದರೆ ಇದು ಮುಖ್ಯವಾದ ವಿಷಯ. ಓದುಗರನ್ನು ತಲುಪಬೇಕಾದ ತವಕ. ಪರಿವರ್ತನೆ ಯಾಗುತ್ತದೆಂಬ ಭರವಸೆ ಕ್ಷೀಣ. ಆದರೂ ವಿಷಯದತ್ತ ಗಮನ ಚೆಲ್ಲಬೇಕಲ್ಲ!

ಯಾವುದೇ ತರಗತಿಯಲ್ಲಿ, ಸ್ಥೂಲವಾಗಿ ಈ ಬಗೆಯ ವಿದ್ಯಾರ್ಥಿಗಳಿರುತ್ತಾರೆ: ನಾಲ್ಕೆ ದು ಪ್ರತಿಭಾವಂತರು, ಹದಿನೈದಿಪ್ಪತ್ತು ಪ್ರತಿಭಾವಂತರಲ್ಲದ ಬುದ್ಧಿವಂತರು, ಒಂದಿಪ್ಪತ್ತೈದು ಸಾಧಾರಣ ಬುದ್ಧಿಮತ್ತೆಯುಳ್ಳವರು, ಒಂದಷ್ಟು ನಿರಾಸಕ್ತರು ಮತ್ತು ಅರಿವಿಲ್ಲದರು. ಸೂಕ್ಷ್ಮ ಶಿಕ್ಷಕನ ಕಣ್ಣುಗಳು ಹೊಳೆಯುವ ಕಣ್ಣುಗಳನ್ನರಸು ತ್ತಿರುತ್ತವೆ. ಹೆಚ್ಚು ವಿದ್ಯಾರ್ಥಿಗಳನ್ನು ತಲುಪುವ ಉದ್ದೇಶವಿದ್ದಾಗ್ಯೂ, ಅವನ ಗಮನ ಚುರುಕಾದ ವಿದ್ಯಾರ್ಥಿಗಳತ್ತ ಕೇಂದ್ರೀಕೃತವಾಗಿರುತ್ತದೆ. ಯಾವುದೇ ಶಿಕ್ಷಕ/ಶಿಕ್ಷಕಿಯ ಪಾಠ ಎಲ್ಲ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಸಮನಾಗಿ ಮುಟ್ಟುವುದಿಲ್ಲ. ಅದಕ್ಕೆ ಕಾರಣಗಳು ಹಲವು. ಮುಖ್ಯವಾಗಿ ವಿದ್ಯಾರ್ಥಿಗಳ ಬುದ್ಧಿಮತ್ತೆ, ಆಸಕ್ತಿ, ಗ್ರಹಿಕಾ ಸಾಮರ್ಥ್ಯ, ಮತ್ತು ಏಕಾಗ್ರತೆ.

ಹೇಳಿದ ಪಾಠ ಸಾರ್ಥಕವಾಗಬೇಕಾದರೆ ಬೋಧನೆಯ ಗುಣಮಟ್ಟವೂ ಅಷ್ಟೇ ಮುಖ್ಯ. ನನ್ನ ಸ್ವಂತ ಅನುಭವದಲ್ಲಿ, ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ ಹೆಚ್ಚುತ್ತಿದೆ. ಅರಿವಿನ ಅಭಾವವಿದ್ದರೆ ಅಡ್ಡಿಯಿಲ್ಲ, ಅದನ್ನು ನೀಗಿಸಬಹುದು. ಆದರೆ ಆಸಕ್ತಿಯೇ ಇಲ್ಲದಿದ್ದರೆ ಅದನ್ನು ಸೃಷ್ಟಿಸುವುದು ದೊಡ್ಡ ಸವಾಲು. ಎಷ್ಟೋ ವೇಳೆ, ಅಸಾಧ್ಯ. ಬೋಧಕರ ಗುಣಮಟ್ಟವೂ ಕುಸಿದಿದೆ. ಅದಕ್ಕೆ ಎರಡು ಉದಾಹರಣೆ. ಮೊನ್ನೆ ತಾನೇ ಜಮೈಕಾದ ಶಿಕ್ಷಕಿಯೊಬ್ಬಳು ಶಿಕ್ಷಕ- ವಿದ್ಯಾರ್ಥಿಗಳ Zoom ಸಮಾವೇಶ ನಡೆಯುವಾಗ ಕ್ಯಾಮರಾ ಚಾಲನೆಯಲ್ಲಿರುವುದನ್ನು ತಿಳಿಯದೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಮುಜುಗರ ಉಂಟುಮಾಡಿದ್ದು ವರದಿಯಾಗಿದೆ.

ನಮ್ಮದೇ ಕಾಲೇಜುಗಳಲ್ಲಿ ಪರಿಸ್ಥಿತಿ ವಿಭಿನ್ನವೇನಲ್ಲ. ನನ್ನ ಪರಿಚಯದ ಹುಡುಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ತರಗತಿಯನ್ನು ತಪ್ಪಿಸಿಕೊಳ್ಳ ದಿದ್ದರೂ ಉಪನ್ಯಾಸಕನ ದುಷ್ಟತನದಿಂದ ಹಾಜರಾತಿ ಕೊರತೆಯನ್ನು ಅನುಭವಿಸಬೇಕಾಯಿತು. ಆ ಕುರಿತು ಪ್ರಶ್ನಿಸಲಾಗಿ ಆತ ಉತ್ತರಿಸಿದ್ದು: ನೀವು ಬ್ರಾಹ್ಮಣರೆಂದು ಅಟೆಂಡೆ ನೀಡಬೇಕಾ? ಜೀ ತೊಡುತ್ತೀರೆಂದು ನೀಡಬೇಕಾ? ಅಥವಾ, ಇಂಗ್ಲಿಷ್ ಮಾತನಾಡುತ್ತೀರಿ ಎಂದು ಕೊಡಲಾ? ಅದಾವ ಕಾರಣಕ್ಕೂ ಬೇಡ, ನಾನು ಹಾಜರಾಗಿದ್ದೂ ಆಬ್ಸೆಂಟ್ ಮಾರ್ಕ್ ಮಾಡಿದ್ದೀರಿ. ಆ ಕಾರಣಕ್ಕೆ ಅಟೆಂಡೆ ಕೊಡಿ, ಎಂದು
ಹುಡುಗಿ ಉತ್ತರಿಸುತ್ತಾಳೆ.

ಈ ಪ್ರಸಂಗ ನಡೆದು ಕೆಲವು ವರ್ಷಗಳಾದವು. ಆ ಹುಡುಗಿ ಪ್ರತಿಭಾವಂತೆ ಮತ್ತು ದಿಟ್ಟೆ. ಉತ್ತಮ ಶಿಕ್ಷಕರನ್ನೂ ಬೆಚ್ಚಿಸಬಲ್ಲ ಬುದ್ಧಿವಂತೆ. ಈ ಪ್ರಸಂಗಕ್ಕೆ ಸಂಬಂಧಿಸಿದಂತೆ ಆಕೆ ತನ್ನ ಶಿಕ್ಷಕರ ಬಗ್ಗೆ ಕಳೆದ ವಾರ ಹೇಳಿದ್ದು: ನಮ್ಮ ಕಾಲೇಜು ತುಂಬಾ ಲಂಪಟರು ಮತ್ತು ರಾಕ್ಷಸರೇ ತುಂಬಿದ್ದಾರೆ (molesters and monsters). ಅದಕ್ಕೆ ಪರಿಹಾರವಿಲ್ಲ. ವಾಸ್ತವ ಏನೆಂದರೆ, ಅದಕ್ಕಿಂತ ದೊಡ್ಡ ಅನಾಹುತ ಜಾತಿ (ಪಿಡುಗಿನಿಂದ ಸಂಭವಿಸುತ್ತಿದೆ). ಇಂತಹ ಕಸದ ತೊಟ್ಟಿ ಯಾದ ಕಾಲೇಜಿಗೂ ಆಕೆ ಆಬ್ಸೆಂಟ್ ಆಗದೆ ಹಾಜರಾಗುತ್ತಿದ್ದುದು ಪವಾಡವೇ ಸರಿ. ಆದರೆ ಆ ಹುಡುಗಿ ಇಂದು ಶಿಕ್ಷಣರಂಗದಿಂದಲೇ ದೂರ ಉಳಿದಿದ್ದಾಳೆ. ಪ್ರತಿಭಾವಂತರಲ್ಲೂ ಆಸಕ್ತಿ ಮುರುಟಿಹೋಗುವಂತೆ ಮಾಡಬಲ್ಲ ಶೈಕ್ಷಣಿಕ ದಾರಿದ್ರ್ಯ ನಮ್ಮ ಕಾಲೇಜುಗಳಲ್ಲಿ ತಾಂಡವವಾಡುತ್ತಿದೆ.

ಎಲ್ಲ ರಂಗಗಳಿಗಿಂತ ಶಿಕ್ಷಣ ರಂಗ ಅತಿ ಮುಖ್ಯ. ಅದರ ಹಣೆಬರಹವೇ ಹೀಗೆ. ಮೇಲೆ ವಿವರಿಸಲಾದ ಶಿಕ್ಷಕರ ಚರ್ಯೆಗಳನ್ನು ನೋಡಿದರೆ ಆನ್‌ಲೈನ್ ಕ್ಲಾಸೇ ಮೇಲೂ ಅನ್ನಿಸುತ್ತದೆ. ಆದರೆ, ವಾಸ್ತವ ಹಾಗಿಲ್ಲ. ಅತ್ತ ಪುಲಿ, ಇತ್ತ ದರಿ ಎಂಬಂಥ ಪರಿಸ್ಥಿತಿ. ಆನ್‌ಲೈನ್ ಪಾಠ ಕಲಿಯಲು ಮಕ್ಕಳಿಗೆ ಮೊಬೈಲ್ ಫೋನ್ ಕೊಡಿಸಬೇಕಾದ ಅನಿವಾರ್ಯ. ಮೊಬೈಲ್ ಫೋನ್ ಪಾಠಕ್ಕಷ್ಟೇ ಬಳಕೆಯಾಗುವುದಿಲ್ಲವಲ್ಲವೇ? ಯೂಟ್ಯೂಬ್ ಮಾತು ಬಿಟ್ಟೇ ಬಿಡಿ. ಫೇಸ್‌ ಬುಕ್‌ನಲ್ಲಿ ಧಾರಾಕಾರವಾಗಿ ಹರಿದುಬರುವ ವಿಡಿಯೊಗಳು ವೃಷಭಾವತಿ ನೀರನ್ನು ಸ್ನಾನಕ್ಕೆ ಯೋಗ್ಯ ಅನ್ನುವಷ್ಟು ಹೊಲಸಾಗಿವೆ.

ತಾಲಿಬಾನೆಂಬ ಒಂದು ಪದವನ್ನು ಬಳಸಿದರೆ ನಿಮ್ಮ ಅಕೌಂಟನ್ನೇ ನಿಷ್ಕ್ರಿಯಗೊಳಿಸುವ ಫೇಸ್ ಬುಕ್ ಅಲ್‌ಗಾರಿಧಂ ಈ ವಿಕೃತ ವಿಡಿಯೊಗಳನ್ನು
ಉತ್ತೇಜಿಸುತ್ತಿದೆ. ಆ ವಿಕೃತಿಗೆ ಮಕ್ಕಳನ್ನೂ ಎಗ್ಗಿಲ್ಲದೆ ಬಳಸಿಕೊಳ್ಳಲಾಗುತ್ತಿದೆ. ಕೆಲವು ಸಾಹಸದ ಚಿತ್ರಗಳು, ಮತ್ತೆ  ಕೆಲವು ಕ್ರೀಡೆಗೆ ಸಂಬಂಧಿಸಿದ್ದು, ಕೆಲವು ಸ್ಟಂಟ್‌ಗಳನ್ನು ತೋರಿಸುವ ವಿಡಿಯೊಗಳನ್ನು ಬಿಟ್ಟರೆ ಉಳಿದೆಲ್ಲವೂ ಕೆಟ್ಟ ಹಾಸ್ಯ, ಅಭಿರುಚಿಹೀನ ಪ್ರೇಮ, ಕುಚೇಷ್ಟೆ, ಕೊಳಚೆಯಲ್ಲಿ ಫೈಟಿಂಗ್ ಮುಂತಾದ ವಿಷಯಗಳಿಂದ ಕೂಡಿರುತ್ತದೆ.

ಮನರಂಜನೆ ಮತ್ತು ಸುದ್ದಿಗಳೆರಡನ್ನೂ ಬಳಕೆದಾರನ ಕೈಯಲ್ಲಿ ಒಟ್ಟೊಟ್ಟಿಗಿಡುತ್ತದೆ ಮೊಬೈಲ್ ಫೋನು. ನಿರಂತರ ದೊರಕುವ ದೃಶ್ಯಾವಳಿಗಳು ಅಂಗೈಯಲ್ಲಿರುವಾಗ ಆನ್ ಲೈನ್ ಲೇಖನವನ್ನು ಓದುವರಾರು? ಮುಂಚೆಯೇ ಅಂಕಣಕ್ಕಾಗಿ ಬರೆಯುವ ಲೇಖನಗಳು ನೀಳವಾಗಿರುತ್ತವೆ. ಸಂಪಾದ ಕೀಯ ಪುಟ ಓದುಗರಿಂದ ಅತೀ ಕಡಿಮೆ ಓದಿಸಿಕೊಳ್ಳುವ ಪುಟ. ಜೆಟ್ ಯುಗದಲ್ಲಿ, ಯಾವುದೇ ಲೇಖನದ ಉದ್ದ 300 ಪದಗಳಷ್ಟಿದ್ದರೆ ಅದನ್ನು ಓದುವ ರಾರೋ! ಆ ಕಾರಣಕ್ಕೂ, ಲೇಖನವನ್ನು ಓದಲು ಯೋಗ್ಯವಾಗಿಸಬೇಕು.

ಎಷ್ಟೇ ಇಷ್ಟವಿಲ್ಲದಿದ್ದರೂ, ಗಂಭೀರ ಲೇಖನದಲ್ಲೂ ಒಂದಷ್ಟು ಹಾಸ್ಯವನ್ನು ಸೇರಿಸಿ ಬರೆಯುವುದು ಆ ಕಾರಣಕ್ಕೆ. ಹೀಗೆ ಹೇಳುವಾಗ, ಜನ ಬೇಡ್ತಾರೆ, ಅದಕ್ಕೇ ಒಂದಷ್ಟು ಸೆಕ್ಸು, ಮೂರ್ನಾಕು -ಟು ಅಂತ ಸಮಜಾಯಿಷಿ ಕೊಡೋ ನಿರ್ದೇಶಕ/ನಿರ್ಮಾಪಕನ ವಾದದ ಥರ ಇದಿದೆ ಅಂತಾ ನನಗೇ ಅನ್ಸುತ್ತೆ. ಆದರೆ, ಲೇಖನವನ್ನು ಓದಿಸಿಕೊಂಡು ಹೋಗುವಂತೆ ಬರೆಯುವುದರ ಹಿಂದಿನ ಉದ್ದೇಶ ಸಿನಿಮಾದವರಂತೆ ಹಣ ಮಾಡುವುದಲ್ಲ, ಜನಪ್ರಿಯತೆ
ಗಳಿಸುವುದಕ್ಕೂ ಅಲ್ಲ. ಮುಖ್ಯವಾದ ವಿಷಯವನ್ನು, ಇನ್ಯಾರಿಗಲ್ಲದಿದ್ದರೂ, ಗಂಭೀರ ಓದುಗರಿಗೆ ಮುಟ್ಟಿಸುವಂತೆ ಬರೆಯುವ ಹೊಣೆ ಅದು.

ಬರೆಯುವುದನ್ನು ಪದಮಿತಿಗನುಗುಣವಾಗಿ ಬರೆಯಬೇಕು. ನಿನ್ನೆ ವಿಶ್ವವಾಣಿಯಲ್ಲಿ ಪ್ರಕಟವಾದ ಸಿನು ಜೋಸೆಫರ ಸಂದರ್ಶನ ಸುದೀರ್ಘವಾಯಿತು. ಆದರೂ ಅಷ್ಟೂ ಪ್ರಶ್ನೋತ್ತರಗಳನ್ನೂ ಸ್ಥಳಾಭಾವದಿಂದ ನಾನೇ ಬರೆಯದೇ ಬಿಟ್ಟೆ. ಆ ಕಾರಣಕ್ಕೇ ನಾನು ಅದನ್ನು ಈ ಅಂಕಣಕ್ಕಾಗಿ ಬರೆಯಲಿಲ್ಲ.
ಋತು ವಿದ್ಯೆ ಕುರಿತಾಗಿ ಆಳವಾದ ಅಧ್ಯಯನ ಮಾಡಿರುವ ಸಿನು ಜೋಸೆಫ್ ಭಾರತೀಯ ಪರಂಪರೆಯ ಪರಮ ಅಭಿಮಾನಿ. ಯೂರೋಪಿನ ಕಿರಿಸ್ತಾನರಿಗೆ ರಕ್ತಗತವಾಗಿರುವ ವಸಾಹುತುಶಾಹಿ ಧೋರಣೆಯಿಂದ ಭಾರತವೂ ಸೇರಿದಂತೆ ವಿವಿಧ ಏಷ್ಯಾ ಖಂಡದ ದೇಶಗಳಲ್ಲಿ ಸಾಂಸ್ಕೃತಿಕ ಪಲ್ಲಟವಾಗಿರುವುದರ ಅರಿವು ಅವರಿಗಿದೆ. ಕೌಮಾರ್ಯಕ್ಕೆ ಹೆಣ್ಣುಮಕ್ಕಳು ಕಾಲಿಡುವುದನ್ನು ಸಂಭ್ರಮಿಸುತ್ತಿದ್ದ ಉತ್ತರ ಮತ್ತು ಮಧ್ಯ ಭಾರತದ ಮಂದಿ ಮುಘಲರ ದುರಾ ಕ್ರಮಣದಿಂದ ಆ ಆಚರಣೆಯನ್ನೇ ಕೈಬಿಟ್ಟದ್ದನ್ನು ಸಿನು ದಾಖಲಿಸಿದ್ದಾರೆ.

ದೊಡ್ಡವಳಾದ ಸುದ್ದಿಯನ್ನು ಕಾಮ ಪಿಶಾಚಿ ಮುಘಲರಿಂದ ಗೋಪ್ಯವಾಗಿಡುವ ಕಾರಣ ಸಂಸ್ಕೃತಿಯ ಒಂದು ಮುಖ್ಯ ಅಂಗವೇ ಕಣ್ಮರೆಯಾಯಿತು.
ಇದು ಸಂಸ್ಕೃತಿಯನ್ನು ಉಳಿಸುವ ಒಂದೇ ಪ್ರಶ್ನೆ ಅಲ್ಲ. ಋತು ವಿದ್ಯೆಯ ಉದ್ದೇಶವೇ ಹೆಣ್ಣಿನ ಸಂಪೂರ್ಣ ಆರೋಗ್ಯವನ್ನು ಜೋಪಾನ ಮಾಡುವು ದಾಗಿದ್ದು ಅದನ್ನು ಹಾಳುಗೆಡವುತ್ತಿರುವ ಸಾಂಸ್ಕೃತಿಕ ಆಕ್ರಮಣವನ್ನು ಸಿನು ಮನದಟ್ಟು ಮಾಡುವಂತೆ ವಿವರಿಸುತ್ತಾರೆ. ದೇಶದ ಅರ್ಧದಷ್ಟು ಜನ ಸಂಖ್ಯೆ ಇರುವ ಹೆಣ್ಣುಗಳ ಆರೋಗ್ಯಕ್ಕಾಗಿ ರೂಪಿಸಲಾದ ಪದ್ಧತಿಯೊಂದನ್ನು ವೈಚಾರಿಕವಾಗಿ ದಿವಾಳಿ ಎದ್ದವರು ಬ್ರಾಹ್ಮನಿಕಲ್ ಪೇಟ್ರಿಯಾರ್ಕಿ ಎಂಬ ಸುಡುಗಾಡು ಶಬ್ದದಿಂದ ಕರೆದು ನಗಣ್ಯಲಾಗಿಸಲೆತ್ನಿಸುತ್ತಾರೆ.

ಬಹುರೂಪೀ ಸಂಸ್ಕೃತಿ ಕುರಿತು ಪೊಳ್ಳುವಾದಗಳ ಸರಮಾಲೆಯನ್ನೇ ಪೋಣಿಸುತ್ತಾರೆ. ಸನಾತನ ಧರ್ಮದ ಹಿರಿಮೆಯನ್ನು ಎತ್ತಿ ಹಿಡಿಯುವ ಪ್ರತೀ ಸಿನು ಜೋಸೆಫ್ ರಂಥ ಅಪರೂಪದ ವ್ಯಕ್ತಿಗೆ ಬರ್ಖಾ ದತ್ ಮತ್ತು ರಾಜದೀಪ್ ಸರ್ದೇಸಾಯ್ ಗಳಂಥ ಹತ್ತಾರು ಹಿಂದೂ-ವಿರೋಧಿ ಹಿಂದೂಗಳೇ ಸಿಗುತ್ತಾರೆ.
ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ಕಿರಿಸ್ತಾನರಾಗಿ ಮತಾಂತರವಾಗಿದ್ದ ತನ್ನ ತಾಯಿಯನ್ನು ಮತ್ತೊಂದಷ್ಟು ಜನರೊಂದಿಗೆ ಹಿಂದೂ ಧರ್ಮಕ್ಕೆ ಹಿಂತಿರುಗಿ ಕರೆದುಕೊಂಡುಬಂದದ್ದಕ್ಕೆ ಪ್ರತಿಕ್ರಿಯೆಯಾಗಿ ಒಬ್ಬ ಹಿರಿಯ ಪತ್ರಕರ್ತರು ಎಲ್ಲಾ ಒಂದು ಕಡೆ ಹೊಟ್ಟೆಪಾಡು ಮಾಡಿಕೊಂಡಿದ್ದರು. ಮತ್ತೆ ಉಪವಾಸಕ್ಕೆ ಕೆಡವುತ್ತಾರೆ ಎಂದು ನುಡಿದಿದ್ದಾರೆ.

ಆಮಿಷ ಒಡ್ಡೋ, ಬೆದರಿಕೆ ನೀಡಿಯೋ ಬಲಾತ್ಕಾರದಿಂದ ಕ್ರಿಶ್ಚಿಯನ್ ಮತಕ್ಕೆ ಸೆಳೆದುಕೊಂಡು ಹೊಟ್ಟೆಗೆ ಕೊಡದೇ ಅವರನ್ನು ಎಲುಬಿನಗೂಡಾಗಿ
ಪರಿವರ್ತಿಸಿದ ಉದಾಹರಣೆಯನ್ನು ನಾನು ನೀಡಬ. ಮತಾಂತರಕ್ಕೆ ಬಳಸಲಾಗುವ ಪ್ರಲೋಭನೆಗಳಿಗೆ ಅವರು ಒದಗಿಸಿಕೊಳ್ಳುವ ಹಣವಾದರೂ ಭಾರತ ವನ್ನೂ ಸೇರಿದಂತೆ ವಿವಿಧ ದೇಶಗಳನ್ನು ಕೊಳ್ಳೆಹೊಡೆದು ತಾನೇ ಸಂಪಾದಿಸಿರುವುದು? ಮತಾಂತರ ನಿಷೇಧದಿಂದಷ್ಟೇ ಈ ದೇಶದ ಬಹು ಸಂಖ್ಯಾತ ಹಿಂದೂಗಳಿಗೆ ನೆಮ್ಮದಿ. ತರಗತಿಯಲ್ಲಿ ವಿವಿಧ ನಮೂನೆಯ ವಿದ್ಯಾರ್ಥಿಗಳಿರುವಂತೆ ನಮ್ಮ ದೇಶದ ಬಹಳಷ್ಟು ಸಾರ್ವಜನಿಕ ಸಂಸ್ಥೆಗಳಲ್ಲಿ ವಿಭಿನ್ನ ರೀತಿಯ ಜನರಿದ್ದಾರೆ. ಅದಕ್ಕೆ ಸಂಸತ್ತೂ ಅಪವಾದವಲ್ಲ.

ಲೋಕಸಭೆಯಲ್ಲಿರುವ ಐನೂರೂ-ಚಿಲ್ಲರೆ ಸದಸ್ಯರಲ್ಲಿ ಎಲ್ಲರೂ ಬಾಯಿಬಿಡುವುದಿಲ್ಲ. ಹಿಂದೂಗಳ ಹಿತರಕ್ಷಣೆಗಾಗಿ ಮಾತನಾಡುವ ಸದಸ್ಯರಿಗೆ ಮತ್ತಷ್ಟು ಬರ. ಆ ಕಾರಣಕ್ಕೆ ಕೂಡ, ಎಷ್ಟು ಜನ ಓದುಗರು ನನ್ನ ಅಂಕಣಕ್ಕೆ ಪ್ರತಿಕ್ರಿಯಿಸುತ್ತಾರೆಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಬರೆಯುವ ಕಾಯಕವನ್ನು ಮುಂದುವರೆಸುತ್ತೇನೆ.