Saturday, 21st September 2024

ಹಾಜಬ್ಬ ಮತ್ತು ನಾವು : ನಮ್ಮ ಮುಂದೆ ಏಳುವ ಪ್ರಶ್ನೆಗಳ ಕಾವು

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಇತ್ತೀಚೆಗೆ ನನಗೆ ಬಂದ ಒಂದು ವಾಟ್ಸಪ್ ಸಂದೇಶದಲ್ಲಿದ್ದ ಸಂಗತಿಯನ್ನು ನಿಮಗೆ ತಿಳಿಸಲೇಬೇಕು. ಈ ಸಂದೇಶವನ್ನು ಬರೆದವರು ಜಗತ್ತಿನಲ್ಲಿ ಪ್ರತಿಷ್ಠಿತ ನಾಲ್ಕು ಸೆಮಿ ಕಂಡರ್ಕ್ಟ ಕಂಪನಿಗಳ ಮಾಲೀಕ ಚೇತನ್ ಎಂಬುವವರು. ಇವರು ಮೂಲತಃ ಚೆನ್ನೈಐಐಟಿಯಲ್ಲಿ ಓದಿ, ನಂತರ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯ ವೊಂದರಲ್ಲಿ ವ್ಯಾಸಂಗ ಮಾಡಿದವರು.

ಅವರು ತಮ್ಮ ಸಂದೇಶದಲ್ಲಿ ಹೀಗೆ ಬರೆಯುತ್ತಾರೆ.. ಆತ್ಮೀಯರೇ, ನಾನು ಹರೇಕಳ ಹಾಜಬ್ಬ ಬಗ್ಗೆ ಕೇಳಿದ ನಂತರ ವಿಚಿತ್ರವಾದ ಮನಸ್ಥಿತಿಯಲ್ಲಿ ಇದ್ದೇನೆ. ನನ್ನ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದು ನನಗೆ ಗೊತ್ತಾಗು ತ್ತಿಲ್ಲ. ಈಗ ಸಮಯ ಬೆಳಗಿನ ಐದೂವರೆ ಗಂಟೆ. ನನ್ನ ಕಣ್ಣಲ್ಲಿ ನಿದ್ದೆ ಸುಳಿಯುತ್ತಿಲ್ಲ. ಈ ಸಂದರ್ಭದಲ್ಲಿ ನನಗೆ ಯಾರ ಜತೆಗಾದರೂ ಮಾತನಾಡಬೇಕು ಎಂದೆನಿಸುತ್ತಿದೆ. ಆದರೆ ಈ ಸಮಯದಲ್ಲಿ ಮಾತನಾಡುವುದು ಸರಿ ಯಲ್ಲ ಎನ್ನುವಕಾರಣಕ್ಕೆ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಷಯಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಹಾಗಾದರೆ ಯಾರು ಈ ಹರೇಕಳ ಹಾಜಬ್ಬ? ಇವರು ಮೂಲತಃ ಮಂಗಳೂರಿನಲ್ಲಿರುವ ಒಬ್ಬ ಹಣ್ಣು ಮಾರುವ ವ್ಯಾಪಾರಿ. ಅವರಿಗೆ 65 ವರ್ಷ ವಯಸ್ಸು.. ಅವರು ಪ್ರತಿ ದಿವಸ 75 ರಿಂದ 150 ರೂಪಾಯಿ ಗಳಿಸುತ್ತಾರೆ. ಪತ್ನಿ ಸೇರಿದಂತೆ ಐವರು ಸದಸ್ಯರ ಕುಟುಂಬವನ್ನು ಪೋಷಿಸುತ್ತಾರೆ. ತಾವು ಉಳಿತಾಯ ಮಾಡಿದ ಹಣದಿಂದ ತಮ್ಮ ಗ್ರಾಮದಲ್ಲಿ ಸ್ಥಳೀಯರ ನೆರವನ್ನು ಪಡೆದು, ಶಾಲೆಯನ್ನು ನಿರ್ಮಿಸಿದ್ದಾರೆ. ಇವರಿಗೆ ಭಾರತ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿದೆ. ಅದನ್ನು ಮೊನ್ನೆ ರಾಷ್ಟ್ರಪತಿ ಪ್ರದಾನ ಮಾಡಿದರು.

ಇದು ಹಾಜಬ್ಬ ಸಂಕ್ಷಿಪ್ತ ಬಯೋಡಾಟಾ. ಅವರ ಪರಿಚಯವನ್ನು ಓದಿದರೆ ಯಾರಲ್ಲೂ ಯಾವ ಭಾವವೂ ಮೂಡುವುದಿಲ್ಲ. ಕಾರಣ ಅವರಿಗೆ ಯಾವುದೇ ಫ್ಯಾನ್ಸಿ ಡಿಗ್ರಿಗಳಿಲ್ಲ, ಅವರು ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲ ಯಗಳಲ್ಲಿ ಓದಿದವರಲ್ಲ. ಅವರೇನು ವೆಂಚರ್ ಕ್ಯಾಪಿಟಲಿಸ್ಟ್ ಅಲ್ಲ. ಅವರು ಎಂದೂ ಬ್ಯಾಂಕುಗಳಿಂದ ಹಣ ಎತ್ತಿದವರಲ್ಲ. ಹಾಗಾದರೆ, ಅಷ್ಟಕ್ಕೂ ಅವರ ಸಾಧನೆ ಯೇನು? ಅವರುನನ್ನ ನಿದ್ದೆಗೆಡಿಸಿದ್ದಾದರೂ ಏಕೆ? ಹಾಜಬ್ಬ ಅವರಿಗೆ ಹೋಲಿಸಿದರೆ, ನಾನು ಅದೆಷ್ಟೋ ಭಾಗ್ಯಶಾಲಿ. ಈ ಜಗತ್ತಿನಲ್ಲಿ ಹಣ, ಫಾರಿನ್ ಡಿಗ್ರಿ ಏನೆಲ್ಲ ಮಾಡಬಹುದೋ, ಅವೆಲ್ಲವೂ ನನಗಿದೆ.

ನಾನು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಓದಿದ್ದೇನೆ, ಬ್ಲ್ಯೂ ಚಿಪ್ ಕಂಪೆನಿಗಳಲ್ಲಿ ಕೆಲಸ ಮಾಡಿದ್ದೇನೆ, ನನಗೆ ಶ್ರೀಮಂತರ ಸಹವಾಸವಿದೆ, ಸದಾ ವಿಮಾನದಲ್ಲಿ ಬಿಜಿನೆಸ್ ಕ್ಲಾಸಿನಲ್ಲಿ ಪ್ರಯಾಣ ಮಾಡುತ್ತೇನೆ, ನಾನು ಯಾವ ಬ್ಯಾಂಕ್ ಮ್ಯಾನೇಜರ್‌ಗೆ ಅರ್ಜಿ ಕೊಟ್ಟರೂ ನನಗೆ ನೂರಾರು ಕೋಟಿ ರುಪಾಯಿ ಸಾಲ ಮಂಜೂ ರಾಗುತ್ತದೆ. ನನ್ನ ಬಯೋಡಾಟಾ ಓದಿದರೆ ಎಂಥವರಾದರೂ ಹೆಮ್ಮೆ ಪಡುತ್ತಾರೆ. ಆದರೆ ನಾನು ನನ್ನ ಬಯೋಡಾಟವನ್ನು ಹಾಜಬ್ಬನಿಗೆ ಹೋಲಿಸಿದರೆ, ನನ್ನಲ್ಲಿ ಒಂದು ಕೀಳರಿಮೆ ಮೂಡುತ್ತದೆ. ದಿನಕ್ಕೆ ನೂರರಿಂದ ನೂರೈವತ್ತು ರುಪಾಯಿ ಗಳಿಸುವ ಆತನ ಜೀವನದ ಧ್ಯೇಯ ನನ್ನ ಬದುಕಿಗಿಂತ ಉನ್ನತವಾದುದು. ಅದೂ ಆತ ಐದು ಜನರಿರುವಸಂಸಾರವನ್ನು ಸಾಗಿಸಿ, ಅದರಲ್ಲಿ ಉಳಿಸಿದ ಹಣದಲ್ಲಿ ಶಾಲೆ ತೆರೆದಿದ್ದಾನೆ.

ಹಾಜಬ್ಬನ ಬಳಿ ಮರ್ಸಿಡಿಸ್, ಪೋಷೆರ್, ಆಡಿಕಾರುಗಳಿಲ್ಲ, ಆತ ಲೂಯಿ ವಿತ್ತಾನ್ ಪ್ರಾಡಕ್ಟ್ ಬಳಸುವುದಿಲ್ಲ, ರಾಲ್ಫ್ ಲಾರೆನ್ ಬ್ರಾಂಡ್ ಬಟ್ಟೆಗಳನ್ನು ಧರಿಸುವು ದಿಲ್ಲ. ಆದರೂ ಆತನನ್ನು ಈ ದೇಶದ ಸರಕಾರ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ. ಆತನ ಧ್ಯೇಯ, ಉದ್ದೇಶ ಅದೆಷ್ಟು ಉದಾತ್ತ ಮತ್ತು ಪವಿತ್ರ ವಾದುದು. ಎಲ್ಲ ದೃಷ್ಟಿಯಿಂದಲೂ ಅವನಿಗಿಂತ ಭಾಗ್ಯಶಾಲಿಯಾದ ನಾನು, ಅವನಿಗಿಂತ ಶ್ರೇಷ್ಠವಾದ ಯಾವ ಕೆಲಸವನ್ನು ಮಾಡುತ್ತಿದ್ದೇನೆ? ನಾನು ಹಾಜಬ್ಬನ ಬಯೋಡಾಟಾ ದೊಂದಿಗೆ ನನ್ನದನ್ನು ಇಟ್ಟು ಹೋಲಿಕೆ ಮಾಡಿದರೆ, ನನಗೆ ನಾಚಿಕೆಯಾಗುತ್ತದೆ.

ನನ್ನ ಬಯೋಡಾಟಾದಲ್ಲಿ ಯಾವ ಆದರ್ಶವಿದೆ? ಏನೂ ಇಲ್ಲ, ಮಣ್ಣಂಗಟ್ಟೆ! ನನ್ನಲ್ಲಿ ಬರೀ ಅಹಂ ತುಂಬಿಕೊಂಡಿದೆ, ನಾನು ನನ್ನ ಸುತ್ತಲಿನ ಜನರನ್ನು ಅವರ ಹಣ,
ಸ್ಟೇಟಸ್ ನೋಡಿ ಅಳೆಯುತ್ತೇನೆ. ಹಾಜಬ್ಬನಿಗೆ ಹೋಲಿಸಿದರೆ, ನನ್ನ ಜೀವನದಲ್ಲಿ ಯಾವ ಆದರ್ಶವೂ ಇಲ್ಲ. ನಾನು ಹಾಜಬ್ಬನಿಗಿಂತ ಲಕ್ಷಾಂತರ ಪಟ್ಟು ಹೆಚ್ಚು ಹಣ ಗಳಿಸುತ್ತೇನೆ. ಆದರೆ ಈಗ ನನಗೆ ಸ್ಪಷ್ಟವಾಗಿದೆ, ಅವನಿಗಿಂತ ಯಾವ ವಿಧದಿಂದಲೂ ನನ್ನ ಬದುಕು ಆದರ್ಶಮಯವಾಗಿಲ್ಲ. ಹಾಜಬ್ಬನಲ್ಲಿರುವ ಕಿಂಚಿತ್ ಶ್ರೇಷ್ಠ, ಉದಾತ್ತ ಭಾವನೆ ನನ್ನಲ್ಲಿ ಇಲ್ಲ. ಇಂದು ಇಡೀ ದೇಶವೇ ಹಾಜಬ್ಬನಿಗೆ ತಲೆಬಾಗುತ್ತದೆ. ಆತ ಪದ್ಮ ಪ್ರಶಸ್ತಿ ಪಡೆದವರ ಸಾಲಿನಲ್ಲಿ ನಿಲ್ಲುತ್ತಾನೆ. ಆತನಿಗೆ
ಭಾರತದ ರಾಷ್ಟ್ರಪತಿಯೂ ತಲೆಬಾಗುತ್ತಾರೆ. ಆದರೆ ನಾನು ಯಾರು? ನನ್ನ ಹೆಸರು ಎಷ್ಟು ಮಂದಿಗೆ ಗೊತ್ತಿದೆ? ನನ್ನಂತೆ ಆಗಬೇಕು ಎಂದು ಎಷ್ಟು ಜನ ಬಯಸು ತ್ತಾರೆ? ಉಹುಂ… ಯಾರೂ ಇಲ್ಲ.

ಆದರೆ ಹಾಜಬ್ಬನ ಆದರ್ಶ ಎಂಥವರಲ್ಲೂ ಒಂದು ಪ್ರೇರಣೆ ಮೂಡುವಂತೆಮಾಡುತ್ತದೆ. ಹಾಜಬ್ಬ ಮೂಡಿಸಿದ ಈ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರಗಳನ್ನು
ಕಂಡುಕೊಳ್ಳಬೇಕು.’ ಇದು ಕೇವಲ ಒಬ್ಬ ಚೇತನ್ ಅವರಲ್ಲಿ ಎಬ್ಬಿಸಿದ ಪ್ರಶ್ನೆಗಳಲ್ಲ. ನಾವೆಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆಗಳೂ ಹೌದು. ಹಾಜಬ್ಬನ ಜತೆ ನಮ್ಮ ಬಯೋಡಾಟಾವನ್ನೂ ಇಟ್ಟು ನೋಡೋಣ. ಈ ಪ್ರಶ್ನೆಗಳೆಲ್ಲ ನಮ್ಮಲ್ಲೂ ಚಿಂತನೆಯ ಕಾವನ್ನು ಹೆಚ್ಚಿಸುತ್ತದೆ. ಹಾಜಬ್ಬನಿಂದನಾವು ಕಲಿಯಬೇಕಾದುದು ಬಹಳ ಷ್ಟಿದೆ, ಅಲ್ಲವೇ?
***

ಜಗತ್ತು ಆಗ – ಈಗ ನಾನು ಕಳೆದ ಎರಡು ವರ್ಷಗಳಿಂದ ಅತಿ ಹೆಚ್ಚು ಓಡಾಡಿದ ಜಾಗವೆಂದರೆ ನನ್ನ ಮನೆಯೇ. ಈ ಅವಧಿಯಲ್ಲಿ ಮನೆಯಲ್ಲಿ ಎಂದೂ ಹೋಗದ ಜಾಗಗಳಿಗೆ ಹೋಗಿಬಂದಿದ್ದೇನೆ! ಅದಕ್ಕಿಂತ ಮುಂಚೆ ನಾನು ಸತತವಾಗಿ ಒಂದು ವಾರ ನೆಟ್ಟಗೆ ನನ್ನ ಮನೆಯಲ್ಲಿ ಮಲಗಿದ್ದಿಲ್ಲ. ಎಷ್ಟು ಸಲ ಒಂದು ವಾರದ
ಅವಧಿಯಲ್ಲಿ ಒಂದೆರಡು ದೇಶಗಳನ್ನು ಸುತ್ತಿ ಬಂದಿದ್ದು ಉಂಟು.

ಆದರೆ ಕೋವಿಡ್ ಅಲೆಯಿಂದ ಈ ಜಗತ್ತು ತನ್ನ ಚಲನಶೀಲತೆಯನ್ನು ಕಳೆದುಕೊಂಡಿತು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಾನು ಐದಾರು ಸಲ ವಿಮಾನ
ಪ್ರಯಾಣ ಮಾಡಿರಬಹುದು, ಅದೂ ನಮ್ಮ ದೇಶದೊಳಗೆ. ಆದರೆ ಈ ಅವಧಿಯಲ್ಲಿ ನನ್ನ ಬಹುತೇಕ ಚಲನೆ ನನ್ನ ಮನೆಯಲ್ಲಿರುವ ರೀಡಿಂಗ್ ರೂಮ್ ಈಗಷ್ಟೇ ಸೀಮಿತವಾಗಿತ್ತು. ನಾನು ಒಂದು ರೀತಿಯಲ್ಲಿ ಗೂಟಕ್ಕೆ ಕಟ್ಟಿ ಹಾಕಿದ ಎತ್ತಿನಂತೆ ಆಗಿದ್ದೆ. ಇದು ನನ್ನದೊಬ್ಬನ ಕತೆಯಲ್ಲ.

ನಾನು ಒಂದು ತಿಂಗಳು ಎಲ್ಲಿಗೂ ಹೋಗದಿದ್ದರೆ, ನನ್ನ ಹೆಂಡತಿ, ಇದೇನ್ರಿ ಆಶ್ಚರ್ಯ ! ಇನ್ನು ಮನೆಯಲ್ಲಿ ಇದ್ದೀರಾ? ಯಾವ ದೇಶವು ನಿಮ್ಮನ್ನು ಕರೆಯುತ್ತಿಲ್ಲ, ಅದೇನು ಯಾವ ದೇಶಕ್ಕೋ ಬೇಡದವರಾಗಿಬಿಟ್ಟಿರಾ?’ ಎಂದು ಕೇಳುತ್ತಿದ್ದಳು. ಕೋವಿಡ್‌ನಿಂದಾಗಿ ಮನೆ ಬಿಟ್ಟು ಕದಲದಂತೆ ಆದಾಗ ಪ್ರಾಯಶಃ ಆಕೆ ಬಹಳ ಸಂತಸ ಪಟ್ಟಿರಬಹುದು. ಕಾರಣ ನಾನು ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ ಹೋಗದ ಖಂಡಗಳು ಇರಲಿಲ್ಲ, ತಿರುಗದ ದೇಶವಿರಲಿಲ್ಲ. ಯಾರೂ
ಹೋಗಲು ಬಯಸದ ಮಲಾವಿ, ತಾಂಜಾನಿಯಾ, ಕೀನ್ಯಾ, ರವಾಂಡ, ಬುರುಂಡಿಯಂಥ ದೇಶಗಳಿಂದ ಹಿಡಿದು, ಎಲ್ಲರೂ ಹೋಗಲು ಬಯಸುವ ಐಸ್ ಲ್ಯಾಂಡ್ ಮತ್ತು ಸ್ವಿಜರ್‌ಲೆಂಡ್ ದೇಶಗಳಿಗೆ ಹೋಗಿ ಬಂದಿದ್ದೇನೆ.

ಸಾಮಾನ್ಯವಾಗಿ ಯಾರೂ ಹೋಗದ ಜಾರ್ಜಿಯಾ, ಬ್ರೆಜಿಲ್, ಅರ್ಮೇನಿಯಾ, ಅಜರ್ ಬೈಜಾನ್, ಉಜಬೆಕಿಸ್ತಾನ್, ತಜಕಿಸ್ತಾನ್, ಉಕ್ರೈನ್, ಫಿನ್‌ಲ್ಯಾಂಡ್, ಎಸ್ತೋನಿಯದಂಥ ದೇಶಗಳ ನೀರನ್ನು ಕುಡಿದು ಬಂದಿದ್ದೇನೆ. ಬಾಜಾ ಕ್ಯಾಲಿಫೋರ್ನಿಯಾ ಸುರ್ ಪ್ರದೇಶದಲ್ಲಿರುವ ಜಗತ್ತಿನ ಅತ್ಯಂತ ರಮಣೀಯ ಭೂಭಾಗ ವಾದ ಲಾ ಕಾಬೋಸ್ ಮತ್ತು ಅತಿ ಸುಂದರದ್ವೀಪವಾದ ಹಾಗೂ ವಿಶ್ವದ ‘ಡ್ಯಾನ್ಸ್ ಫ್ಲೋರ್’ ಎಂದು ಕರೆಯಿಸಿಕೊಳ್ಳುವ ಬಾರ್ಸಿಲೊನಾದಿಂದ ಒಂದೂವರೆ ಗಂಟೆ ವಿಮಾನಪ್ರಯಾಣದಷ್ಟು ದೂರದಲ್ಲಿರುವ ಇಬಿಜಾಕ್ಕೂ ಕಾಲೂರಿ ಬಂದಿದ್ದೇನೆ.

ಒಂದು ವಾರದ ಅವಧಿಯಲ್ಲಿ ಆಫ್ರಿಕಾ, ಯುರೋಪ್ ಮತ್ತು ಅಮೆರಿಕ ಖಂಡಗಳಲ್ಲಿ ಪ್ರವಾಸ ಮಾಡಿದ್ದುಂಟು. ಅನೇಕ ಸ್ನೇಹಿತರು ‘ಭಟ್ಟರು ಇಸ್ರೇಲಿನಲ್ಲಿ ಮನೆ ಮಾಡಿzರೆ’ ಎಂದು ತಮಾಷೆಗೆ ಆಡಿಕೊಳ್ಳುವಷ್ಟು ಸಲ ಅಲ್ಲಿಗೆ ಹೋಗಿದ್ದೇನೆ. ನನಗೆ ಇಸ್ರೇಲ್ ದೇಶಯಾವಾಗ ಬೇಕಾದರೂ ಹೋಗಬಹುದಾದ ವೀಸಾ ನೀಡಿದೆ. ಸಿಂಗಾಪುರ, ದುಬೈ, ಮಲೇಷ್ಯಾ, ಅಬುಧಾಬಿ ಮುಂತಾದ ದೇಶಗಳಿಗಂತೂ ಒಂದು ಡಜನ್‌ಗಿಂತ ಹೆಚ್ಚು ಸಲ ಹೋಗಿ ಬಂದಿರಬಹುದು. ವಿದೇಶ ಪ್ರಯಾಣ ಅಥವಾ ಪ್ರವಾಸವನ್ನೇ ನನ್ನ ಬದುಕಿನ ಭಾಗವಾಗಿಸಿಕೊಂಡ ನನಗೆ ಕಳೆದ ಎರಡು ವರ್ಷಗಳಿಂದ ನನ್ನ ಬದುಕು ನಿಂತ ನೀರಾಗಿತ್ತು. ಇದು ನನ್ನ ಕತೆಯೊಂದೇ ಅಲ್ಲ.

ಇದು ನನ್ನ ಕತೆಯೊಂದೇ ಅಲ್ಲ. ಕೋವಿಡ್ ನಿಂದಾಗಿ ಇಡೀ ಜಗತ್ತಿಗೆ ಗ್ರಹಣ ಕವಿದಿತ್ತು. ಇದೀಗ ಆ ಗ್ರಹಣದಿಂದ ಸಂಪೂರ್ಣ ಮುಕಿ ಸಿಗುವ ಲಕ್ಷಣಗಳು ಸ್ಪಷ್ಟವಾಗಿ
ಗೋಚರಿಸಲಾರಂಭಿಸಿವೆ. ನಾನು ಈ ಮಾತನ್ನು ಜೋರ್ಡನ್ ರಾಜಧಾನಿ ಅಮ್ಮಾನ್‌ಗೆ ಹೋಗುವಾಗ, ದುಬೈ ವಿಮಾನ ನಿಲ್ದಾಣದಲ್ಲಿ ಕುಳಿತು ಬರೆಯುತ್ತಿದ್ದೇನೆ. ಕೋವಿಡ್‌ಗಿಂತ ಮುನ್ನ ದುಬೈ ವಿಮಾನ ನಿಲ್ದಾಣದಲ್ಲಿ ಕಾಲಿಡಲು ಆಗುತ್ತಿರಲಿಲ್ಲ. ಆ ರೀತಿ ಗಿಜಿಗುಡುತ್ತಿತ್ತು. ಒಂದು ದಿನಕ್ಕೆ ಕನಿಷ್ಠ ಹತ್ತು ಲಕ್ಷ ಪ್ರಯಾಣಿಕರು ಬಂದು – ಹೋಗುತ್ತಿದ್ದರು. ದುಬೈ ಆಗಸದಲ್ಲಿ ಯಾವ ಹೊತ್ತಿನಲ್ಲೂ ಹತ್ತಾರು ವಿಮಾನಗಳು ಇಳಿಯುವುದನ್ನು ಮತ್ತು ಹಾರುವುದನ್ನು ನೋಡಬಹುದಿತ್ತು.

‘ಪ್ಲೇನ್‌ಸ್ಲೈವ್’ ಎಂಬ ಆಪ್ (app) ನೋಡಿದರೆ, ದುಬೈ ಮೇಲೆ ರಣಹದ್ದುಗಳಂತೆ, ವಿಮಾನಗಳು ಆಕಾಶದಲ್ಲಿ ಹಾರಾಡುತ್ತಿದ್ದವು. ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ ದುಬೈ ವಿಮಾನ ನಿಲ್ದಾಣ, ನ್ಯೂಯಾರ್ಕ್ ಮತ್ತು ಲಂಡನ್ ಹೀಥ್ರೋವನ್ನು ಮೀರಿಸಿ ಅಗಾಧವಾಗಿ ಬೆಳೆದಿತ್ತು. ಆದರೆ ಕೋವಿಡ್ ಮೊದಲ ಅಲೆಯಲ್ಲಿ, ಅಕ್ಷರಶಃ ಮರುಭೂಮಿಯಾಗಿಬಿಟ್ಟಿತು. ದಿನದ ಇಪ್ಪತ್ನಾಲ್ಕು ಗಂಟೆಯೂ ಪ್ರಯಾಣಿಕರಿಂದ ತುಂಬಿರುತ್ತಿದ್ದ ವಿಮಾನ ನಿಲ್ದಾಣ ಬಿಕೋ ಅನ್ನುವಂತಾಯಿತು. ಬಹುತೇಕ ಎಲ್ಲ ವಿಮಾನಯಾನ ಕಂಪನಿಗಳು ಕಂಡು ಕೇಳರಿಯದ ಹಾನಿಯನ್ನು ಅನುಭವಿಸಿದವು. ಅವೆಲ್ಲ ಮುಂಚಿನ ಸ್ಥಿತಿಗೆ ಮರಳಲು ಇನ್ನೂ ಕೆಲವು ವರ್ಷ ಗಳೇ ಬೇಕಾಗಬಹುದು.

ಎರಡು ವರ್ಷಗಳ ನಂತರ, ಮೊನ್ನೆ ನನ್ನ ವಿದೇಶ ಪ್ರಯಾಣಕ್ಕೆ ಹಿಡಿದ ಗ್ರಹಣವೂ ಬಿಟ್ಟಿತು. ದುಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ, ಒಂದೆಡೆ ಸಂತಸ, ಮತ್ತೊಂದೆಡೆ ಸಣ್ಣ ವಿಷಾದ, ಬೇಸರ. ಸಂತಸ ಯಾಕೆಂದರೆ ಪರಿಸ್ಥಿತಿ ಇಷ್ಟಾದರೂ ಸುಧಾರಿಸಿದೆಯಲ್ಲ ಎಂದು. ಬೇಸರ ಯಾಕೆಂದರೆ, ಇದು ಮೊದಲಿನಂತೆ ಆಗುವುದಾ, ಒಮ್ಮೆ ಆದರೆ ಅದಕ್ಕೆ ಇನ್ನೂ ಎಷ್ಟು ವರ್ಷಹಿಡಿಯಬಹುದು ಎಂದು. ಜನ ಇನ್ನೂ ಮೈಚಳಿ ಬಿಟ್ಟು ಪ್ರವಾಸ ಮಾಡುತ್ತಿಲ್ಲ. ಕೋವಿಡ್ ಭಯ ಇನ್ನೂ
ಆವರಿಸಿದೆ. ಜಗತ್ತಿನ ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿರುವ ಯುರೋಪ್ ದೇಶಗಳಿಗೆ ಹೋಗಲು ಜನ ಬಯಸುತ್ತಿಲ್ಲ.

ಅಲ್ಲಿ ಕೋವಿಡ್ ಇನ್ನೂ ಜನಜೀವನವನ್ನು ಕಿತ್ತು ತಿನ್ನಿತ್ತಿದೆ. ಯಾವ ದೇಶವೂ ತಾನು ಕೋವಿಡ್ ವಿರುದ್ಧ ಜಯ ಸಾಧಿಸಿದ್ದೇವೆ ಎಂದು ಹೇಳುವ ಸ್ಥಿತಿಯಲಿ ಇಲ್ಲ.
ಯಾವ ಕ್ಷಣದದರೂ ಈ ಮಹಾಮಾರಿ ತಲೆ ಎತ್ತಬಹುದು. ಒಬ್ಬನಿಗೆ ತಗಲುವ ಸೋಂಕು ನೂರಾರು.. ಸಾವಿರಾರು… ಲಕ್ಷಾಂತರವಾಗಲು ಹೆಚ್ಚು ದಿನ ಬೇಕಿಲ್ಲ.
ಅಲ್ಲಿಯವರೆಗೆ ವಿದೇಶ ಪ್ರವಾಸ ಅನಿವಾರ್ಯ ಸಂದರ್ಭಗಳಲ್ಲಷ್ಟೇ ಕೈಗೊಳ್ಳಬಹುದಾದ ಅಗತ್ಯವಾಗಬಹುದು. ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷೆ ಬಿಗಿಯಾಗಿರುವುದರಿಂದ, ಪ್ರಯಾಣಿಕರಿಗೆ ಸಾಕಷ್ಟು ವ್ಯವಸ್ಥೆ ಮಾಡಿದ್ದರೂ, ಅದು ಕಿರಿಕಿರಿಯೇ. ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರ ಭಯೋತ್ಪಾದಕ ದಾಳಿ ಯಿಂದ ನೆಲಸಮವಾದ ಬಳಿಕ, ಜಗತ್ತಿನೆಡೆ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಬಿಗಿಯಾಗಿ, ಹೊಸ ಹೊಸ ಸುರಕ್ಷತೆ ಕ್ರಮಗಳು ಜಾರಿಯಾದಾಗ ಪ್ರಯಾಣಿಕರಿಗೆ ತೊಂದರೆಯಾದಂತೆ, ಕೋವಿಡ್ ನಿಂದಾಗಿವಿಮಾನ ನಿಲ್ದಾಣಗಳಲ್ಲಿ ಅನಪೇಕ್ಷಿತ ಕ್ರಮಗಳು ಹೆಚ್ಚಾಗಿ ಪ್ರಯಾಣಿಕರಿಗೆ ತಲೆನೋವಾಗಿದೆ.

ಇದು ಕಮ್ಮಿಯಾಗುವವರೆಗೆ ವಿಮಾನ ಪ್ರಯಾಣ ಮೊದಲಿನ ಸ್ಥಿತಿಗೆ ಬರುವುದು ಸಾಧ್ಯವಿಲ್ಲ. ಆದರೆ ಮನುಷ್ಯ ಎಂದೂ ಒಂದೆಡೆ ಕುಳಿತ ಕುಳಿತಿರಲಾರ. ನಿಂತ ನಿಂತಿರಲಾರ. ಜಗತ್ತು ಯಾವತ್ತೂ ಚಲನಶೀಲವಾದದ್ದು. ಬದುಕಿನಲ್ಲಿ ಎಲ್ಲವೂ ಕ್ಷಣಿಕ. ಏನೇ ಆದರೂ ಎಲ್ಲವೂ ಮೊದಲಿನಂತೆ ಆಗಲೇಬೇಕು. ಆ ನಿಟ್ಟಿನತ್ತ ನಾವು ದಾಪುಗಾಲು ಹಾಕುತ್ತಿದ್ದೇವೆ ಎಂದು ಅನಿಸುತ್ತಿದೆ.