Saturday, 21st September 2024

ಎಚ್‌ಡಿಕೆ ಬಾಯಿ ಬಂದ್ ಮಾಡುವ ಬೀಗ ಎಲ್ಲಿದೆ ?

ಬೇಟೆ

ಜಯವೀರ ವಿಕ್ರಮ ಸಂಪತ್ ಗೌಡ, ಅಂಕಣಕಾರರು

ನನಗೆ ಕುಮಾರಸ್ವಾಮಿ ಅವರ ಬಗ್ಗೆ ಇದ್ದ ಅಭಿಪ್ರಾಯವೇ ಬೇರೆಯಾಗಿತ್ತು. ಅವರ ಬಹುದೊಡ್ಡ ಅಸವೆಂದರೆ ಭಂಡತನ. ಅವರು ತಮ್ಮ ರಾಜಕೀಯ ಎದುರಾಳಿ ಊಹಿಸದ್ದಕ್ಕಿಂತ ಕೆಳಮಟ್ಟಕ್ಕೆ ಹೋಗಿ, ಅಲ್ಲಿ ಆಟ ಆಡುತ್ತಾರೆ. ಅವರು ಹೋಗುವ ಮಟ್ಟಕ್ಕೆ ಯಾರಿಗೂ ಹೋಗಲಾಗುವುದಿಲ್ಲ. ಅದನ್ನು ತಮ್ಮ ಟ್ರಂಪ್ ಕಾರ್ಡ್ ಎನ್ನುವಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆ. ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಽಕಾರದಿಂದ ಇಳಿದಂದಿನಿಂದ ಬಳಸುತ್ತಲೇ ಬಂದಿದ್ದಾರೆ.

ಈ ರಾಜ್ಯದ ಮುಖ್ಯಮಂತ್ರಿಯಾದವರು ಆ ಮಟ್ಟಕ್ಕೆ ಇಳಿಯಲಿಕ್ಕಿಲ್ಲ ಎಂದು ನೀವು ಅಂದುಕೊಳ್ಳುತ್ತೀರಿ. ಆದರೆ ನೀವು ಅಂದುಕೊಂಡಿದ್ದಕ್ಕಿಂತ ಇನ್ನೂ ಕೆಳಕ್ಕೆ ಇಳಿದು ಅವರು ತಮ್ಮ ದಾಳ ಬೀಸುತ್ತಾರೆ. ಆಗ ನೀವು ನಿರುತ್ತರ ರಾಗಬೇಕಾಗುತ್ತದೆ ಅಥವಾ ಕೈಚೆಲ್ಲಬೇಕಾಗುತ್ತದೆ. ಇದನ್ನು ಅವರು ಅಂದಿನಿಂದಲೂ ಮಾಡುತ್ತಲೇ ಬಂದಿದ್ದಾರೆ. ಏನೂ ಸಿಗದಿದ್ದರೆ, ವೈಯಕ್ತಿಕ ವಿಷಯವನ್ನಾದರೂ ಹೇಳಿ ಲಗಾಡಿ ತೆಗೆಯುತ್ತಾರೆ. ಏನೂ ಸಿಗದಿದ್ದರೆ, ಅವರು ಮುಖ್ಯಮಂತ್ರಿಯಾಗಿ ಅಽಕಾರದಲ್ಲಿ ಇದ್ದಾಗ, ಅವರ ಸಹಾಯ ಬಯಸಿ ಸಂಪರ್ಕಿಸಿದ್ದನ್ನೇ, ದೊಡ್ಡ ವಿಷಯವಾಗಿ ಮಾಡಿ ಬಾಯಿ ಮುಚ್ಚಿಸುತ್ತಾರೆ.

‘ನನಗೆ ಗೊತ್ತಿಲ್ಲವಾ ಇವರು ಯಾರು ಅಂತ? ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಮನೆ ಬಳಿ ಬಂದಿದ್ದರು’ ಎಂದು ಹೇಳುತ್ತಾರೆ. ಅವರ ಬಳಿ ಅಷ್ಟಿಷ್ಟು ಉಪಕಾರ ಪಡೆದವರು ಜೀವನಪೂರ್ತಿ ಅವರಿಗೆ ಋಣಿಯಾಗಿರ ಬೇಕು, ಇಲ್ಲದಿದ್ದರೆ ತಾವು ಉಪಕಾರ ಮಾಡಿದ್ದನ್ನೇ ಅಸವಾಗಿ ಬಳಸಿ ಲಾಭ ಮಾಡಿಕೊಳ್ಳುತ್ತಾರೆ. ಯಾವ ರಾಜಕಾರಣಿಗಳೂ ಬಳಸಿಕೊಳ್ಳದನ್ನು ಕುಮಾರಸ್ವಾಮಿ ಗುರಾಣಿಯಾಗಿ ಬಳಸಿಕೊಳ್ಳುತ್ತಾರೆ. ಅದರಲ್ಲಿ ಅವರು ನಿಷ್ಣಾತರು. ಬಿಜೆಪಿಯ ಶೋಭಾ ಕರಂದ್ಲಾಜೆ ಬಗ್ಗೆ ಅವರು ಇತ್ತೀಚೆಗೆ ಹಾಗೆ ಹೇಳಿದರು. ‘ಈಗ ಈಯಮ್ಮ ಮಾತಾಡ್ತಾರಲ್ಲ, ರೇವಣ್ಣನ ಮನೆಯಲ್ಲಿ ನನ್ನ ಭೇಟಿ ಮಾಡಲು ಬಯಸಿದ್ದು ಯಾಕೆ ಎಂದು ಹೇಳಲಿ. ನಾನೇನು ಇವರ ಮನೆಗೆ ಹೋಗಿದ್ದೆನಾ? ಇವರೇ ನನ್ನ ಮನೆ ಬಾಗಿಲಿಗೆ ಬಂದಿದ್ದು’ ಎಂದು ಹೇಳಿದ್ದನ್ನು ನೆನಪು ಮಾಡಿಕೊಳ್ಳಿ.

ಯಡಿಯೂರಪ್ಪನವರಿಗೂ ಇದೇ ಮಾತನ್ನು ಅವರು ಎಷ್ಟು ಸಲ ಹೇಳಿಲ್ಲ? ‘ಯಡಿಯೂರಪ್ಪನವರಿಂದ ನಾನು ಮುಖ್ಯಮಂತ್ರಿ ಆದೆ’ ಎಂಬ ಉಪಕಾರ ಸ್ಮರಣೆಯ ಮಾತು ಒಂದು ಸಲವೂ ಅವರ ಬಾಯಿಂದ ಬರಲೇ ಇಲ್ಲ. ಪ್ರಸಂಗ ಬಂದರೆ, ‘ಇದೇ ಯಡಿಯೂರಪ್ಪ ಇದ್ದಾರಲ್ಲ, ರಾಮಚಂದ್ರೇಗೌಡ ಮತ್ತು ಶೋಭಾ ಕರಂದ್ಲಾಜೆ ಜತೆ ನನ್ನ ಮನೆ ಬಾಗಿಲಿಗೆ ಬಂದು, ನನ್ನನ್ನು ಮಂತ್ರಿ ಮಾಡಿ ಸಾಕು ಎಂದು ಬೇಡಲಿಲ್ಲವಾ?’ ಎಂದು ಹಂಗಿಸುತ್ತಾರೆ. ಇದೇ ರೀತಿ ಎಸ್ ಎಂ ಕೃಷ್ಣ ಅವರನ್ನೂ ಅನೇಕ ಸಲ ಹಂಗಿಸಿದ್ದರು. ೨೦೦೪ ರಲ್ಲಿ ಕೃಷ್ಣ ನೇತೃತ್ವದ ಕಾಂಗ್ರೆಸ್ಸಿಗೆ ಬಹುಮತ ಬರದಿದ್ದಾಗ, ‘ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ನಮ್ಮ ಮನೆಗೆ ಬಂದಿ ದ್ದಾರಲ್ಲ ಆ ದೊಡ್ಡ ನಾಯಕರು’ ಎಂದು ಅನೇಕ ಸಲ ಹೇಳಿದ್ದನ್ನು ಕೇಳಿದ್ದೇವೆ.

೨೦೧೮ ರಲ್ಲಿ ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಬರದಿದ್ದಾಗ, ಕಾಂಗ್ರೆಸ್ಸಿನವರು ಜೆಡಿಎಸ್ ಗೆ ಬೆಂಬಲ ನೀಡಲು ಮುಂದಾದಾಗ, ಕುಮಾರಸ್ವಾಮಿ ಅವರನ್ನೇ ಮುಖ್ಯಮಂತ್ರಿ ಮಾಡಿದಾಗಲೂ, ಅವರು ಹಾಗೇ ಹೇಳಿದರು. ‘ನಾನೇನು ಇವರ ಮನೆ ಬಾಗಿಲಿಗೆ ಹೋಗಿದ್ದೆನಾ? ಕಾಂಗ್ರೆಸ್ಸಿನವರೇ ನಮ್ಮ ಮನೆಗೆ ಬಂದು, ಬೆಂಬಲ ಕೊಡ್ತೇವೆ ಅಂತ ಹೇಳಿದ್ದು. ನಾವು ಅವರ ಮನೆ ಬಾಗಿಲಿಗೆ ಹೋಗಿದ್ದೇವಾ?’ ಎಂದು ಈಗಲೂ ಛೇಡಿಸುತ್ತಿರುತ್ತಾರೆ. ಬೇರೆಯವರ ಅಸಹಾಯಕತೆ ಯನ್ನು ರಾಜಕೀಯ ಅಸವಾಗಿ ಬಳಸಿಕೊಳ್ಳುವುದನ್ನೇ ಅವರು ರಾಜಕೀಯ ಪರಿಣತಿ ಅಥವಾ ಸಿದ್ಧಾಂತ ಎಂದು ಭಾವಿಸಿದಂತಿದೆ. ಒಂದು ವೇಳೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ, ಯಾವ ಪಕ್ಷಕ್ಕೂ ಬಹುಮತ ಸಿಗದಿದ್ದಾಗ, ಮರ್ಯಾದೆ ಬಿಟ್ಟು, ಪರಿಸ್ಥಿತಿಯ ಅನಿವಾರ್ಯದಿಂದ, ತಮ್ಮ ಬೆಂಬಲ ಯಾಚಿಸಲು ಕಾಂಗ್ರೆಸ್ ಅಥವಾ ಬಿಜೆಪಿ ನಾಯಕರು ತಮ್ಮ ಮನೆಯ ಬಾಗಿಲಿಗೆ ಬರುತ್ತಾರೆ ಎಂಬುದು ಕುಮಾರಸ್ವಾಮಿಗೆ ಗೊತ್ತು. ಅದಕ್ಕಾಗಿ ಇಷ್ಟೆಲ್ಲಾ ಪೊಗರು.

ಆದರೆ ಮೊನ್ನೆ ಕುಮಾರಸ್ವಾಮಿ ಅವರ ಒಂದು ಕಾಲದ ಜಿಗ್ರಿ ದೋಸ್ತ್ ಮತ್ತು ಹಾಲಿ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಮಾತಾಡಿದರಲ್ಲ, ಅದನ್ನು ಕೇಳಿದ ಬಳಿಕ, ಕುಮಾರಸ್ವಾಮಿ ಬಗ್ಗೆ ಇದ್ದ ಅಭಿಪ್ರಾಯವೇ ಬದಲಾಗಿ ಹೋಯಿತು. ಆ ಕ್ಷಣ ಅವರೊಬ್ಬ (ಕುಮಾರಸ್ವಾಮಿ) ಖಾಲಿಡಬ್ಬ ಅಂತ ಅನಿಸಿಬಿಟ್ಟಿತು. ಕಾರಣ ಕುಮಾರಸ್ವಾಮಿ ಅವರಿಗಿಂತ ಕೆಲ ಮಟ್ಟಕ್ಕೆ ಹೋಗಿ ಜಮೀರ್ ಬ್ಯಾಟ್ ಮಾಡಿಬಿಟ್ಟರು. ಇಲ್ಲಿ ತನಕ ಆ ರೀತಿಯ ಶಾಟ್‌ನ್ನು ಯಾರೂ ಬಾರಿಸಿರಲಿಲ್ಲ. ‘ಕುಮಾರಸ್ವಾಮಿಯವರನ್ನು ಇಷ್ಟು ವರ್ಷ ಸಾಕಿದ್ದೇ ನಾನು. ನನ್ನ ಕೆಣಕಲು ಬಂದರೆ ಅವರ ಕಥೆಯನ್ನೆಲ್ಲಾ ಬಿಚ್ಚಿಡುತ್ತೇನೆ’ ಎಂದು ಜಮೀರ್ ಹೇಳಿಬಿಟ್ಟರು!

ಇದೇನು ಸಾಮಾನ್ಯ ಹೇಳಿಕೆಯಾ?! ಬೇರೆಯವರು ಈ ಮಾತನ್ನು ಹೇಳಿದ್ದರೆ ಕುಮಾರಸ್ವಾಮಿ ಸುಮ್ಮನೆ ಬಿಡುತ್ತಿರಲಿಲ್ಲ. ಅವರ ಜನ್ಮ ಜಾಲಾಡುತ್ತಿದ್ದರು. ‘ನನ್ನ ಬಳಿ ಅವರ ಜಾತಕವೇ ಇದೆ. ಅವರ ಅವ್ಯವಹಾರಗಳ ಕಡತಗಳಿವೆ, ದಾಖಲೆಗಳಿವೆ. ಸಂದರ್ಭ ಬಂದಾಗ ಬಹಿರಂಗ ಪಡಿಸುತ್ತೇನೆ’ ಎಂದು ಹೇಳಿ ಬಾಯಿ ಮುಚ್ಚಿಸುತ್ತಿದ್ದರು. ಆದರೆ ಅದೇ ಡೈಲಾಗನ್ನು ಜಮೀರ್ ಖಾನ್ ಬಗ್ಗೆಯೂ ಹೇಳಬಹುದಿತ್ತು. ಆದರೆ ‘ಆನೆ ನಡೆದುಕೊಂಡು ಹೋಗುವಾಗ ನಾಯಿಗಳು ಬೊಗಳು ತ್ತವೆ. ಆ ನಾಯಿಗಳಿಗೆಲ್ಲಾ ನಾನು ಉತ್ತರಿಸಬೇಕಾ?’ ಎಂದು ‘ಕುಂಯೋ.. ಮುರ್ರ‍ೋ’ ಎನ್ನುವ ನಾಯಿಯಂತೆ ಬಾಲ ಮುದುರಿ ಹೊರಟುಬಿಟ್ಟರು. ಅಲ್ಲಿಗೆ ಅವರ ಬಂಡವಾಳ ಏನು ಎಂಬುದು ಗೊತ್ತಾಗಿ ಹೋಗಿತ್ತು.

ಕುಮಾರಸ್ವಾಮಿ ಬಾಯಿಮುಚ್ಚಿಸುವ ಕೀಲಿಕೈ ಜಮೀರ್ ಅವರ ಬಳಿ ಅನ್ನೋದು ಜಗಜ್ಜಾಹೀರು ಆಗಿ ಹೋಯಿತು. ಅಲ್ಲಿಯ ತನಕ ಕಂಡಕಂಡವರ ಮೇಲೆಲ್ಲಾ ಕೊಬ್ಬಿದ ಗೂಳಿಯಂತೆ, ಮದಗಜದಂತೆ ಎಗರಿ ಹೋಗುತ್ತಿದ್ದ ಕುಮಾರಿಸ್ವಾಮಿ, ಜಮೀರ್ ಮಾತಾಡಲಾರಂಭಿಸಿದಾಗ ಯಾಕೋ ಮಂಕಾಗಿ ಹೋದರು. ಅದರಲ್ಲೂ ‘ಅವರನ್ನು (ಕುಮಾರಸ್ವಾಮಿ) ಸಾಕಿದ್ದೇ ನಾನು’ ಎಂಬ ಜಮೀರ್ ಮಾತನ್ನು ಅರಗಿಸಿಕೊಳ್ಳುವುದು ಕಷ್ಟ. ಜಮೀರ್ ಪತ್ರಿಕಾಗೋಷ್ಠಿಯ ನಂತರ ಕೆಲವು ಪತ್ರಕರ್ತರು ಅವರನ್ನು ಕೇಳಿದರು – ‘ಅಲ್ಲಾ ಸ್ವಾಮಿ, ಕುಮಾರಸ್ವಾಮಿಯವರನ್ನು ಸಾಕಿದ್ದೆ ನಾನು ಎಂದು ಹೇಳಿದ್ದೀರಲ್ಲ.. ಹೇಗೆ? ಅವರಿಗೆ ಗತಿ-ಗೋತ್ರ ಇರಲಿಲ್ಲವಾ?’ ಅದಕ್ಕೆ ಜಮೀರ್ ಹೇಳಿದರು – ‘ಈ ಪ್ರಶ್ನೆಯನ್ನು ನಿಮ್ಮ ಬದಲು ಆ ಕುಮಾರಸ್ವಾಮಿ ಕೇಳಬೇಕಿತ್ತು, ಹೇಳುತ್ತಿದ್ದೆ… ಹೌದು ಅಕ್ಷರಶಃ ಅವರನ್ನು ನಾನು ಸಾಕಿದ್ದೇನೆ.

ಅವರಿಗೆ ಕುಳಿತುಕೊಳ್ಳಲು ಒಂದು ನೆಲೆ ಇರಲಿಲ್ಲ. ನನ್ನ ಆಫೀಸಿನಲ್ಲಿ ಬಂದು ನಾಲ್ಕೈದು ತಾಸು ಕುಳಿತಿರುತ್ತಿದ್ದರು. ನಾನು ಅವರಿಗೆ ಹಣ ಕೊಟ್ಟಿದ್ದೇನೆ, ಮನೆ ಕೊಟ್ಟಿದ್ದೇನೆ. ಅವರ ಮನೆಗೆ ದಿನಸಿ, ತರಕಾರಿ ತೆಗೆಸಿಕೊಟ್ಟಿದ್ದೇನೆ. ಅವರ ಮಗನಿಗೆ ವಾಹನ ತೆಗೆಸಿಕೊಟ್ಟಿದ್ದೇನೆ. ಅವರ ಖರ್ಚಿಗೆಂದು ಪ್ರತಿ ತಿಂಗಳೂ ಹಣ
ಕೊಡುತ್ತಿದ್ದೆ. ಯಾರ್ರ‍ೀ ಕುಮಾರಸ್ವಾಮಿ, ಅವರು ಏನಾಗಿದ್ದರು ಗೊತ್ತಾ? ಬಿಬಿಎಂಪಿ ಯಲ್ಲಿ ಕಸದ ಕಂಟ್ರಾಕ್ಟರ್ ಆಗಿದ್ದರು. ಅವರಿಗೆ ನಾನು ಸರ್ವಸ್ವವನ್ನೂ ಕೊಟ್ಟಿದ್ದೇನೆ. ಈ ಜನ್ಮದಲ್ಲಿ ಅವರಿಗೆ ನನ್ನ ಋಣ ತೀರಿಸಲು ಸಾಧ್ಯವಿಲ್ಲ. ಅಷ್ಟು ಅವರು ನನ್ನಿಂದ ಪಡೆದಿದ್ದಾರೆ. ಹದಿನೇಳು ವರ್ಷ ನನ್ನ -ಟ್‌ನಲ್ಲಿದ್ದರು. ಅದಕ್ಕೆ ಮೆಂಟೆನನ್ಸ್ ಹಣವನ್ನೂ ಕಟ್ಟಲಿಲ್ಲ.

ಅದನ್ನು ನಾನು ಕೊಟ್ಟಿದ್ದೇನೆ. ಆ -ಟ್ ನ್ನು ಮರಳಿ ಪಡೆಯುವ ಹೊತ್ತಿಗೆ ನನಗೆ ಏಳೋ-ಹನ್ನೊಂದೋ ಆಯಿತು. ಇಲ್ಲದಿದ್ದರೆ ಆ -ಟ್‌ನ್ನು ಕಬಳಿಸಲು ಸಕಲ
ರೀತಿಯಲ್ಲಿ ಸ್ಕೆಚ್ ಹಾಕಿದ್ದರು. ಒಬ್ಬ ಮಾಜಿ ಮುಖ್ಯಮಂತ್ರಿ ನಡೆದುಕೊಳ್ಳುವ ರೀತಿಯಾ ಇದು? ಅವರಿಗೆ ಯಾವ ಸ್ಟ್ಯಾಂಡರ್ಡ್ ಇದೆ? ಅವರೊಬ್ಬ ಗಲೀಜು ವ್ಯಕ್ತಿ, ಅಂಥವರ ಸಹವಾಸ ಮಾಡಿದ್ದಕ್ಕೆ ನನಗೆ ಪಶ್ಚಾತ್ತಾಪ ಇದೆ’ ಎಂದುಬಿಟ್ಟರು!

ಜಮೀರ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ‘ರೀ ಕುಮಾರಸ್ವಾಮಿ, ನನ್ನನ್ನು ಕೆಣಕಲು ಬರಬೇಡಿ, ನಿಮ್ಮ ಬಗ್ಗೆ ಹೇಳಲು ಇನ್ನೂ ಅನೇಕ ವಿಷಯಗಳಿವೆ. ಅವನ್ನೆಲ್ಲಾ
ಒಂದೊಂದಾಗಿ ಹೇಳಿದರೆ, ನಿಮಗೆ ತಲೆ ಎತ್ತಿ ತಿರುಗಾಡಲು ಆಗೊಲ್ಲ. ನಿಮ್ಮ ಸಕಲ ಗುಣಗಳನ್ನು ಬಯಲಿಗೆಳೆಯುತ್ತೇನೆ’ ಎಂದರು. ಇಲ್ಲಿ ಒಂದು ಮುಖ್ಯವಾದ ವಿಷಯವೊಂದಿದೆ. ಅದನ್ನು ಗಮನಿಸಬೇಕು. ಅದೇನೆಂದರೆ, ತಮ್ಮ ರಾಜಕೀಯ ವಿರೋಽಗಳಿಗೆ ಕುಮಾರಸ್ವಾಮಿ ಹೇಳುತ್ತಿದ್ದ ಮಾತುಗಳನ್ನೇ ಜಮೀರ್ ತಿರುಗಿ ಕೊಟ್ಟಿರುವುದು. ಕುಮಾರಸ್ವಾಮಿ ಗರಡಿಯಲ್ಲಿ ಪಳಗಿದ ಜಮೀರ್ ಗೆ ತಮ್ಮ ಒಂದು ಕಾಲದ ಸ್ನೇಹಿತನಿಗೆ ಎಲ್ಲಿ ಮುಟ್ಟಿದರೆ ಏನಾಗುತ್ತದೆ ಎಂಬುದು
ಚೆನ್ನಾಗಿ ಗೊತ್ತಿದೆ.

ಇದು ಒಂದು ರೀತಿಯಲ್ಲಿ ಗುರುವಿಗೇ ತಿರುಮಂತ್ರದಂತಾಗಿತ್ತು. ಈ ಮಾತನ್ನು ಬೇರೆಯವರು ಹೇಳಿದರೆ, ಕುಮಾರಸ್ವಾಮಿ ಸುಮ್ಮನಾಗುತ್ತಿರಲಿಲ್ಲ. ಮತ್ತೆ
ಮತ್ತೆ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದ್ದರು. ಆದರೆ ಜಮೀರ್ ಮಾತ್ರ ಬರೋಬ್ಬರಿ ಹಿಡಿಯಬೇಕಾದ ಜಾಗದಲ್ಲಿ ಅಮುಕಿದ್ದರು. ಅಷ್ಟಕ್ಕೇ ಸುಮ್ಮನಾಗದ ಜಮೀರ್,
ಕುಮಾರಸ್ವಾಮಿಯವರು ಆರ್‌ಎಸ್‌ಎಸ್ ವಿರುದ್ಧ ಮಾತಾಡುತ್ತಿರುವುದೇಕೆ, ಅವರು ಎಷ್ಟು ಮುಸ್ಲಿಂ ನಾಯಕರ ರಾಜಕೀಯ ಭವಿಷ್ಯ ಹಾಳು ಮಾಡಿದ್ದಾರೆ, ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಬ್ಯಾಂಕ್ವೆಟ್ ಹಾಲ್ ನಲ್ಲಿ ರದ್ದುಪಡಿಸಿದ್ದೇಕೆ, ಹಜ್ ಕಾರ್ಯಕ್ರಮಗಳಿಗೆ ಪದೇ ಪದೆ ತಪ್ಪಿಸಿಕೊಂಡಿದ್ದೇಕೆ, ಈಗ ಮೊಸಳೆ ಕಣ್ಣೀರು
ಸುರಿಸುತ್ತಿರುವುದೇಕೆ, ಉಪಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿರುವುದೇಕೆ… ಹೀಗೆ ಈ ಎಲ್ಲಾ ವಿವರಗಳನ್ನು
ಬಿಚ್ಚಿಟ್ಟುಬಿಟ್ಟರು. ಕುಮಾರಸ್ವಾಮಿ ನಿರುತ್ತರರಾಗಿಬಿಟ್ಟರು.

ಆನೆ ಹಿಂದೆ ನಾಯಿ ಬೊಗಳಿದರೆ ಉತ್ತರಿಸಲು ಆಗುತ್ತಾ ಎಂದು ಹುಳ್ಳು ಹುಳ್ಳಗೆ ಏನೇನೋ ತಡಬಡಾಯಿಸಿದರು. ಅಲ್ಲಿಗೆ ಅವರ ವಾದವೆಲ್ಲಾ ಬಕ್ಕಬೋರ ಲಾಗಿತ್ತು. ಕುಮಾರಸ್ವಾಮಿಯವರ ಬಾಯಿ ಬಂದ್ ಮಾಡುವ ಬೀಗ ಎಲ್ಲಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಾದಂತಾಗಿದೆ. ಸಿದ್ದರಾಮಯ್ಯನವರು ಜಮೀರ್‌ಗೆ ಕಣ್ಸನ್ನೆ ಮಾಡಿದರೆ ಸಾಕು, ಜಮೀರ್ ಶುರು ಹಚ್ಚಿಕೊಳ್ಳುತ್ತಾರೆ. ಸಾಬಿ ಮಾತಾಡಿದರೆ, ತನಗೆ ಅರಗಿಸಿಕೊಳ್ಳುವುದು ಕಷ್ಟ ಎಂಬುದನ್ನು ಕುಮಾರಸ್ವಾಮಿ ಅವರೇ ತೋರಿಸಿಕೊಟ್ಟಂತಾಗಿದೆ. ಈಗಲೂ ಕಾಲ ಮಿಂಚಿಲ್ಲ, ‘ಆನೆ-ನಾಯಿ’ ನಿದರ್ಶನ ಕೊಟ್ಟು ಪಲಾಯನ ಮಾಡುವ ಬದಲು, ಜಮೀರ್ ಕೇಳಿದ ಪ್ರಶ್ನೆಗಳಿಗೆ ಕುಮಾರ ಸ್ವಾಮಿ ಉತ್ತರಿಸಬೇಕು. ನೋಡೋಣ.