Saturday, 21st September 2024

ಬಿಜೆಪಿ ಗೆದ್ದರೆ ಜೆಡಿಎಸ್ ಫುಲ್ ಖುಷ್

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಜೆಡಿಎಸ್ ಸಂಭ್ರಮಿಸಲಿದೆ. ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳ ಫಲಿತಾಂಶ ಹೊರಬರಲು ಕ್ಷಣಗಣನೆ ಆರಂಭವಾದ ಕಾಲಘಟ್ಟದಲ್ಲಿ ಜೆಡಿಎಸ್ ಹೊಂದಿರುವ ಮನ:ಸ್ಥಿತಿ ಇದು.

ವಸ್ತುಸ್ಥಿತಿ ಎಂದರೆ ಉಪಚುನಾವಣೆಯ ಕಣದಲ್ಲಿ ತನ್ನ ಗೆಲುವಿನ ಮೇಲೆ ಗಮನ ಕೇಂದ್ರೀಕರಿಸುವುದಕ್ಕಿಂತ ಹೆಚ್ಚಾಗಿ ಬಿಜೆಪಿ ಗೆಲ್ಲಲಿ ಎಂದು ಆ ಪಕ್ಷದ ನಾಯಕರು ಹಪಹಪಿಸಿದ್ದೇ ಹೆಚ್ಚು. ಅರ್ಥಾತ್, ಉಪಚುನಾವಣೆಯ ಕಣದಲ್ಲಿ ಕಾಂಗ್ರೆಸ್ ಸೋತರೆ ತನ್ನ ಭವಿಷ್ಯ ಉಜ್ವಲವಾಗುತ್ತದೆ ಎಂಬುದು ಜೆಡಿಎಸ್ ಲೆಕ್ಕಾಚಾರ.
ಯಡಿಯೂರಪ್ಪ ಕೆಳಗಿಳಿದ ನಂತರ 2023 ರಲ್ಲಿ ಸ್ವಯಂ ಬಲದ ಮೇಲೆ ಅಽಕಾರಕ್ಕೆ ಬರುವ ಬಿಜೆಪಿಯ ಕನಸು ಬಣ್ಣ ಕಳೆದುಕೊಂಡಿದೆ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದ ಇಮೇಜ್‌ಗೆ ಧಕ್ಕೆಯಾಗದಂತೆ ಕಾಮನ್ ಮ್ಯಾನ್ ಇಮೇಜ್ ಅನ್ನು ಬೆಳೆಸಿಕೊಂಡಿದ್ದಾರಾದರೂ, ಜಾತಿ ಲೆಕ್ಕಾಚಾರ ಕಮಲ ಪಾಳೆಯದ ಕೈ ಹಿಡಿಯುವ ಸಾಧ್ಯತೆ ಕಡಿಮೆ.

ಈ ಮಧ್ಯೆ ಯಡಿಯೂರಪ್ಪ. ಅವರು ಕಾಂಗ್ರೆಸ್ ಜತೆ ಕೈಗೂಡಿಸಲು ಶುರು ಮಾಡಿಕೊಂಡಿದ್ದ ತಯಾರಿಗೆ ಬಿಜೆಪಿ ಹೈಕಮಾಂಡ್ ಅಡ್ಡಗಾಲು ಹಾಕಿರುವುದೇನೋ ನಿಜ. ಆದರೆ ಇದರಿಂದ ಬಿಜೆಪಿಯ ವೋಟ್ ಬ್ಯಾಂಕ್ ಸುಭದ್ರ ವಾಗಿರುತ್ತದೆ ಎಂಬುದಂತೂ ಸುಳ್ಳು. ಯಾಕೆಂದರೆ ಪ್ರಬಲ ಲಿಂಗಾಯತ ಸಮುದಾಯಕ್ಕೆ  ಸಂದೇಶ ಹೋಗಬೇಕಾಗಿದೆಯೋ ಅದು ಹೋಗಿದೆ. ಯಡಿಯೂರಪ್ಪ ಅವರನ್ನು ಬಿಜೆಪಿ ವರಿಷ್ಠರು ಹೀನಾಯವಾಗಿ ನಡೆಸಿ ಕೊಂಡರು. ಅಧಿಕಾರದಿಂದ ಕೆಳಗಿಳಿಸಿದರು ಎಂಬ ಮೆಸೇಜು ರವಾನೆಯಾಗಿ ನೂರು ದಿನಗಳಾಗುತ್ತಾ ಬಂದಿವೆ.

೧೯೯೦ ರಲ್ಲಿ ವೀರೇಂದ್ರ ಪಾಟೀಲರನ್ನು ಕಾಂಗ್ರೆಸ್ ಹೈಕಮಾಂಡ್ ಎಷ್ಟು ನಿರ್ದಾಕ್ಷಿಣ್ಯವಾಗಿ ಕೆಳಗಿಳಿಸಿತ್ತೋ? ಅಷ್ಟೇ ಹೀನಾಯವಾಗಿ ಬಿಜೆಪಿ ಹೈಕಮಾಂಡ್ ಈ ಬಾರಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಿತು. ಖುದ್ದು ಯಡಿಯೂರಪ್ಪ ಅವರು ದಿಲ್ಲಿಗೆ ಹೋಗಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬಳಿ: ಮುಂದಿನ  ಚುನಾವಣೆ ಯವರೆಗೆ ಸಿಎಂ ಆಗಿ ಮುಂದುವರಿಯಲು ಅವಕಾಶ ಕೊಡಿ ಎಂದು ಹೇಳಿ ಬಂದಿದ್ದರಾದರೂ ಮೋದಿ, ಷಾ ಜೋಡಿ ಅದಕ್ಕೆ ಸಮ್ಮತಿಸಲಿಲ್ಲ. ಹೀಗಾಗಿ ಯಡಿಯೂರಪ್ಪ ನೊಂದು ಕಣ್ಣೀರು ಹಾಕಿದರು.

1990 ರಲ್ಲಿ ವೀರೇಂದ್ರ ಪಾಟೀಲರು ಕೂಡಾ ಸಿಎಂ ಹುದ್ದೆಗೆ ರಾಜೀನಾಮೆ ಕೊಡುವುದಿಲ್ಲ ಎಂದರಾದರೂ ವರಿಷ್ಠರು ಅದನ್ನು ಒಪ್ಪಲಿಲ್ಲ. ಬದಲಿಗೆ ಎ.ಐ.ಸಿ.ಸಿ ಅಧ್ಯಕ್ಷ ರಾಜೀವ್ ಗಾಂಧಿ ಪಕ್ಷದ ಶಾಸಕಾಂಗ ಸಭೆ ಸೇರಿ ತನ್ನ ಮುಂದಿನ ನಾಯಕನನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂದು ಘೋಷಿಸಿದರು. ಹೀಗೆ ಹೋಲಿಸಿದರೆ ಅವತ್ತು ವೀರೇಂದ್ರ ಪಾಟೀಲರಿಗೆ ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿ ಅವಮಾನಿಸಿತೋ? ಈ ಬಾರಿ ಬಿಜೆಪಿ ಹೈಕಮಾಂಡ್ ಕೂಡಾ ಯಡಿಯೂರಪ್ಪ
ಅವರನ್ನು ಹಾಗೆಯೇ ಅವಮಾನಿಸಿತು ಎಂಬ ಸಂದೇಶ ಲಿಂಗಾಯತ ಮತಬ್ಯಾಂಕಿಗೆ ರವಾನೆಯಾಗಿದೆ.

ಆದರೆ 1990 ರಲ್ಲಿ ರವಾನೆಯಾದ ಸಂದೇಶದ ಫಲಿತಾಂಶ ಸಿಕ್ಕಿದ್ದು 1994 ರ ವಿಧಾನಸಭಾ ಚುನಾವಣೆಯಲ್ಲಿ. ಈ ಬಾರಿ ಯಡಿಯೂರಪ್ಪ ನಿರ್ಗಮನದ ಹಿನ್ನೆಲೆಯಲ್ಲಿ ರವಾನೆಯಾದ ಸಂದೇಶ 2023 ರ ವಿಧಾನಸಭಾ ಚುನಾವಣೆಯಲ್ಲಿ ರಿಸಲ್ಟು ಕೊಡುತ್ತದೆ ಎಂಬುದು ಸದ್ಯದ ಲೆಕ್ಕಾಚಾರ. ಈ ಲೆಕ್ಕಾಚಾರಕ್ಕೆ ಅಡ್ಡೇಟು ಹೊಡೆಯಬೇಕು ಎಂಬುದೇ ಜೆಡಿಎಸ್ ನಾಯಕರಾದ ಹೆಚ್.ಡಿ.ದೇವೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರ ಬಯಕೆ. ಅವರ ಪ್ರಕಾರ, ಯಡಿಯೂರಪ್ಪ ಪತನದ ನಂತರ ಅಸ್ಥಿರಗೊಂಡಿರುವ ಲಿಂಗಾಯತ ಮತಬ್ಯಾಂಕಿನ ಗಣನೀಯ ಪ್ರಮಾಣದ ಷೇರುಗಳು ಕೈ ಪಾಳೆಯದ ಮೂಲ ಬಂಡವಾಳ ವನ್ನು ಹೆಚ್ಚಿಸುವುದು ಗ್ಯಾರಂಟಿ. ಪ್ರಮಾಣದಲ್ಲಿ ಸ್ವಲ್ಪ ಖೋತಾ ಆದರೂ ಲಿಂಗಾಯತ ಮತಬ್ಯಾಂಕಿನ ಅಸ್ಥಿರತೆ ಹೆಚ್ಚು ಲಾಭ ತಂದುಕೊಡುವುದು ಕಾಂಗ್ರೆಸ್ ಪಕ್ಷಕ್ಕೆ ಎಂಬುದು ನಿರ್ವಿವಾದ.

ಇದನ್ನು ಗಮನದಲ್ಲಿಟ್ಟುಕೊಂಡು ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಮೂಗುದಾರ ಹಾಕಿದರೂ ಪಲ್ಲಟಗೊಂಡ ಲಿಂಗಾಯತ ಮತ ಬ್ಯಾಂಕ್ ಸಾಲಿಡ್ಡಾಗಿ ಬಿಜೆಪಿಯ ಜತೆಗಿರುತ್ತದೆ ಎಂಬುದು ಭ್ರಮೆ. ಅಂದರೆ, ಈ ರೀತಿ ಕಾಂಗ್ರೆಸ್ ಪಕ್ಷದ ಕಡೆ ಲಿಂಗಾಯತ ವರ್ಗದ ಗಮನ ನೆಟ್ಟಿರುವಾಗ, ಅದೇ ಪಾಳೆಯದ ಮತಗಳನ್ನು ಒಡೆಯುವುದು ಜೆಡಿಎಸ್ ಯೋಚನೆ. ಮೊದಲನೆಯದಾಗಿ, ತನ್ನ ತಂತ್ರಗಾರಿಕೆಯಿಂದ ಬಿಜೆಪಿ ಹೈಕಮಾಂಡ್ ಒಂದಷ್ಟು ಪ್ರಮಾಣದಲ್ಲಿ ಲಿಂಗಾಯತರನ್ನು ಉಳಿಸಿಕೊಂಡರೆ, ಮತ್ತೊಂದು ಕಡೆಯಿಂದ ಮುಸ್ಲಿಮರ ಮತಗಳನ್ನು ಕೈ ಪಾಳೆಯದ ತೆಕ್ಕೆಯಿಂದ ತಾನು ಸೆಳೆಯಬೇಕು ಎಂಬುದು ಈ ಲೆಕ್ಕಾಚಾರದ ಭಾಗ.

ಇದೇ ಕಾರಣಕ್ಕಾಗಿ ಮುಸ್ಲಿಮರನ್ನು ಆಕರ್ಷಿಸಲು ಕುಮಾರಸ್ವಾಮಿ ಆರ್.ಎಸ್.ಎಸ್ ವಿರುದ್ಧ ಸರಣಿ ದಾಳಿ ನಡೆಸಿದ್ದು. ಅವರ ಈ ದಾಳಿ ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂಬುದು ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದಿಂದ ತಿಳಿಯಲಿದೆ. ಜೆಡಿಎಸ್‌ನ ಸದ್ಯದ ವಿಶ್ವಾಸದ ಪ್ರಕಾರ, ಹಾನಗಲ್ ಮತ್ತು ಸಿಂದಗಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗಣನೀಯ ಪ್ರಮಾಣದಲ್ಲಿ ಮುಸ್ಲಿಮರ ಮತಗಳನ್ನು ಸೆಳೆಯಲಿದ್ದಾರೆ. ಈ ಉದ್ದೇಶದಿಂದ ಕಣಕ್ಕಿಳಿಸಿದ ಇಬ್ಬರೂ ಅಭ್ಯರ್ಥಿಗಳು ಮುಸ್ಲಿಮರು ಎಂಬುದು ಗಮನಾರ್ಹ.

ಅಷ್ಟೇ ಮುಖ್ಯವಾಗಿ, ಮುಸ್ಲಿಮರ ಮತ ಸೆಳೆದು ಕಾಂಗ್ರೆಸ್ ಸೋಲುವಂತೆ ಮಾಡಿದರೆ ಮತ್ತು ಬಿಜೆಪಿ ಗೆಲುವು ನಿರಾಯಾಸವಾಗುವಂತೆ ಮಾಡಿದರೆ ನೋ ಡೌಟ್, ಜೆಡಿಎಸ್ ಪಕ್ಷದ ಭವಿಷ್ಯದ ದಾರಿ ಸುಗಮವಾಗಿರಲಿದೆ. ಯಾಕೆಂದರೆ ಈ ತಂತ್ರ ಎಷ್ಟು ಪರಿಣಾಮಕಾರಿ ಎಂಬುದನ್ನು ಅರ್ಥ ಮಾಡಿಕೊಳ್ಳುವ ಬಿಜೆಪಿ ೨೦೨೩
ವಿಧಾನಸಭಾ ಚುನಾವಣೆಯ ಕಾಲದಲ್ಲಿ ತುಂಬ ಉತ್ಸುಕತೆಯಿಂದ ಜೆಡಿಎಸ್ ಜತೆ ಒಳ ಒಪ್ಪಂದ ಮಾಡಿಕೊಳ್ಳುತ್ತದೆ.

ಹಾಗಾಗಲಿ ಎಂಬುದೇ ಜೆಡಿಎಸ್‌ನ ಸದ್ಯದ ನಿರೀಕ್ಷೆ. ಈ ಮಧ್ಯೆ ಅದಕ್ಕಿರುವ ಮತ್ತೊಂದು ನಂಬಿಕೆ ಎಂದರೆ ಭವಿಷ್ಯದ ಸಿಎಂ ಹುದ್ದೆಗಾಗಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.
ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ನಡೆಯುತ್ತಿರುವ ಶೀತಲ ಸಮರ ಕೂಡಾ ಬಿಜೆಪಿ-ಜೆಡಿಎಸ್ ಪಾಲಿಗೆ ಅನುಕೂಲಕರ ಸನ್ನಿವೇಶ ನಿರ್ಮಿಸುತ್ತದೆ ಎಂಬುದು. ಭವಿಷ್ಯದ ಸಿಎಂಗಿರಿಗಾಗಿ ಪೈಪೋಟಿ ನಡೆಸುವುದು ಬೇರೆ. ಆದರೆ ಅದಕ್ಕಾಗಿ ಎಲ್ಲ ಕ್ಷೇತ್ರಗಳಲ್ಲೂ ಪಕ್ಷ ಎರಡು ಹೋಳಾಗು ವಂತೆ ಈ ಇಬ್ಬರು ನಾಯಕರು ನೋಡಿಕೊಂಡಿದ್ದಾರೆ.

ಈ ಬೆಳವಣಿಗೆ ಸಹಜವಾಗಿಯೇ ಕಾಂಗ್ರೆಸ್ ಪಕ್ಷದ ಓಟಕ್ಕೆ ಅಡ್ಡಿಯಾಗಲಿದೆ. ಬಿಜೆಪಿ-ಜೆಡಿಎಸ್ ಪಾಲಿಗೆ ಬಡ್ಡಿಯಾಗಿ ದಕ್ಕಲಿದೆ ಎಂಬುದು ದೇವೇಗೌಡ-ಕುಮಾರ ಸ್ವಾಮಿ ಲೆಕ್ಕಾಚಾರ. ಅರ್ಥಾತ್, ಡಿಕೆಶಿ-ಸಿದ್ದರಾಮಯ್ಯ ನಡುವಣ ಒಡಕು ಈ ಬಾರಿಯ ಉಪಚುನಾವಣೆಯಲ್ಲೇ ಪ್ರತಿಬಿಂಬಿತವಾಗಲಿದೆ. ಮತ್ತದು ಬಿಜೆಪಿಗೆ ನೇರವಾಗಿ, ಜೆಡಿಎಸ್‌ಗೆ ಪರೋಕ್ಷವಾಗಿ ಲಾಭ ತಂದುಕೊಡುತ್ತದೆ ಎಂಬುದೂ ದೇವೇಗೌಡ- ಕುಮಾರಸ್ವಾಮಿ ಲೆಕ್ಕಾಚಾರ. ಇಂತಹ ಎಲ್ಲ ಲೆಕ್ಕಾಚಾರ ಗಳ ನಡುವೆ ನಡೆದ ಉಪಚುನಾವಣೆ ಬಿಜೆಪಿಗೆ ಗೆಲುವನ್ನು, ಕಾಂಗ್ರೆಸ್‌ಗೆ ಸೋಲನ್ನು ಉಣ್ಣಿಸಿದರೆ ಜೆಡಿಎಸ್ ಸಂಭ್ರಮ ಆಚರಿಸಲಿದೆ. ಅಂದ ಹಾಗೆ ಅದರ ಈ ಲೆಕ್ಕಾಚಾರ ಯಶಸ್ವಿಯಾಗುತ್ತದಾ? ಕಾದು ನೋಡಬೇಕು