Saturday, 21st September 2024

ರಾಜ್ಯೋತ್ಸವ ಮಾಸವೆಂಬುದು ಪಕ್ಷಮಾಸವಲ್ಲ

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ನವೆಂಬರ್-೧, ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ, ಸಂಘ-ಸಂಸ್ಥೆಗಳಿಗೆ ಒಂದಾದರೂ ಒಂದು ಕಾರ್ಯಕ್ರಮ ಮಾಡಲೇಬೇಕೆಂಬ ಉತ್ಸಾಹ, ಹನ್ನೊಂದು ತಿಂಗಳು ಇಂಗ್ಲೀಷ್, ಹಿಂದಿ ಮಾತನಾಡಿ ಕನ್ನಡವನ್ನೇ ಮರೆತಿರುವ ಸಾಫ್ಟವೇರ್ ಕಂಪನಿಗಳ ಉದ್ಯೋಗಿಗಳಿಗೆ ನಾಲಿಗೆ ತೊದಲುವ, ತಡಬಡ ಯಿಸುವ ಕಷ್ಟದ ತಿಂಗಳು. ಭುವನೇಶ್ವರಿ ಫೋಟೊ, ಕನ್ನಡ ಧ್ವಜ ಮಾರಾಟಗಾರರಿಗೆ ತಿಂಗಳ ಒಳಗೇ ಉತ್ಪಾದಿಸಿದ ಈ ಮಾಲನ್ನು ಮಾರಿ, ತೂರಿ ಕೈ ತೊಳೆದುಕೊಳ್ಳುವ ತವಕ, ಇನ್ನು ಕವಿ, ಕಲಾವಿದರಿಗೆ ತಮ್ಮನ್ನು ಯಾವ ಸಂಸ್ಥೆಗಳು ಕರೆಸಿ ಗೌರವಿಸುತ್ತವೋ ಎಂಬ ಕುತೂಹಲ, ಕಾತುರ, ನಿರೀಕ್ಷೆ.

ಇನ್ನು ದಶಕಗಟ್ಟಲೇ ಸೇವೆ ಸಲ್ಲಿಸಿ, ಸವೆದು ಹೋದ ಹಿರಿಯ ಕಲಾವಿದರು ತಮಗೆ ಈ ವರ್ಷವಾದರೂ ರಾಜ್ಯ ಸರಕಾರ ಪ್ರಶಸ್ತಿ ಕೊಟ್ಟೀತೇ? ಎಂಬ ದೂರದ ಆಸೆ. ಪೆಂಡಾಲು, ಶಾಮಿಯಾನ, ಶಾಲು, ಪೇಟ, ಗಂಧದ ಹಾರ, ಮುತ್ತಿನಹಾರ, ಏಲಕ್ಕಿ ಹಾರ, ಬೊಕ್ಕೆಗಳ ವ್ಯಾಪಾರಿಗಳಿಗೆ ತಿಂಗಳಿಂದಲೂ ತಾವು ಮಾಡಿದ ಇವು ಗಳನ್ನು ಮಾರಾಟ ಮಾಡುವ ಉಮೇದು, ನಿರೀಕ್ಷೆ. ಹೀಗೆ ನವೆಂಬರ್ ಎಂದರೆ ಕನ್ನಡಕ್ಕೆ ಬೆಲೆ ಕಟ್ಟುವ, ಬೆಲೆ ಪಡೆಯುವ, ಬೆಲೆ ಕೊಡುವ ತಿಂಗಳೇ ಸರಿ.

ಆದರೆ ಈ ನವೆಂಬರ್‌ನ ಮೂವತ್ತು ದಿನಗಳು ಮಾತ್ರವೇ ಕನ್ನಡದ ಸೇವೆ. ಕನ್ನಡ ಕಾರ್ಯಕ್ರಮಗಳನ್ನು ಮಾಡಲೇಬೇಕೆಂದು, ಆಮೇಲೆ ಉಳಿದ ಹನ್ನೊಂದು ತಿಂಗಳು ನಮಗೆ ಕನ್ನಡ, ಕನ್ನಡಾಂಬೆ ಸಂಬಂಧವೇ ಇಲ್ಲ ಎಂದು ತಿಳಿದು ಆ ರೀತಿ ವರ್ತಿಸುವವರು, ಈ ನವೆಂಬರ್ ತಿಂಗಳನ್ನು ಪಕ್ಷಮಾಸ, ಪಿತೃಪಕ್ಷವೆಂದು
ಪರಿಗಣಿಸಿದಂತೆ ಕಾಣುತ್ತಿದೆ. ಖಂಡಿತಕ್ಕೂ ಹೀಗಾಗಬಾರದು. ನಿಸಾರ್ ಅಹ್ಮದ್‌ರ ನಿತ್ಯೋತ್ಸವ ತಾಯೇ ನಿತ್ಯೋತ್ಸವ ಆಗಬೇಕು. ಹಾಗೆ ಆಗಲು ನಮ್ಮ ಕನ್ನಡಿಗರೇ ಬಿಡುತ್ತಿಲ್ಲ. ಕನ್ನಡವನ್ನು ಇನ್ನೂ ತೆಲುಗು, ತಮಿಳರಂತೆ ತಮ್ಮ ಭಾಷೆಯನ್ನೇ ನಮ್ಮವರು ಉಸಿರಾಗಿಸಿಕೊಂಡಿಲ್ಲ.

ನನ್ನದೂ ಬರೋಬ್ಬರಿ ಮೂವತ್ತು ವರ್ಷದ ಕನ್ನಡ ಸೇವೆ ಎನ್ನುವುದಕ್ಕಿಂತ ಕನ್ನಡದ ಉದ್ಯೋಗವೇ ಆಗಿ ಹೋಯಿತು. ಕನ್ನಡದಲ್ಲಿನ ಈ ಹಾಸ್ಯ ಸಂಜೆಗಳು ನನಗೆ ಕೋಟಿ ಕೋಟಿ ಕನ್ನಡಿಗರ ಪ್ರೀತಿ, ಅಭಿಮಾನ ಕೊಟ್ಟಿತು. ಸಿನಿಮಾ ನಟರಷ್ಟೇ ಜನಪ್ರಿಯತೆ ತಂದುಕೊಟ್ಟಿತು. ಕರ್ನಾಟಕದ ಮೂಲೆ ಮೂಲೆಗಳ ಜನರು ನನಗಾಗಿ ಕಾಯ್ದು, ನನ್ನ ಮಾತು ಕೇಳಿ ನಕ್ಕು, ನನ್ನ ತಲೆ ಕಾಯ್ದರು. 1987ರಿಂದ ಕಾಯುತ್ತಿದ್ದ, ಕನಸು ಕಾಣುತ್ತಿದ್ದ ರಾಜ್ಯೋತ್ಸವ ಪ್ರಶಸ್ತಿ ಬರೊಬ್ಬರಿ 34
ವರ್ಷಕ್ಕೆ, 2021ಕ್ಕೆ ಮೊನ್ನೆ ಸಿಕ್ಕಿತು. ಮನುಷ್ಯರಾಗಿ ಹುಟ್ಟಿದ ಮೇಲೆ ಹೇಗಿದ್ದರೂ ಕಷ್ಟ. ವೈರಾಗ್ಯವೇ ಸುಖ ಎನಿಸಿತು.

ಆಸೆಗಳೇ ದುಃಖಕ್ಕೆ ಮೂಲ ಎನಿಸಿತು. ಆದರೂ ಕೈಗೆ ಪ್ರಶಸ್ತಿ ಬಂದಾಗಿತ್ತು. ಅಲ್ಲಿಂದ ಶುರುವಾಯಿತು ನೋಡಿ, ಅಭಿನಂದಿಸುವವರ ಮೆಸೆಜ್‌ಗಳು, ಫೋನ್‌ ಗಳಂತೂ ಒಂದು ಸೆಕೆಂಡಿಗೆ ಒಂದರಂತೆ ರಿಂಗಣಿಸಲಾರಂಭಿಸಿದವು. ಒಬ್ಬರಿಗೆ ಮಾತನಾಡಿ ಮುಗಿಸುವಷ್ಟರಲ್ಲಿ ಹತ್ತು ಮಿಸ್ಡ್ ಕಾಲ್‌ಗಳು. ನಾನೇ ಹೇಳಿ ಕೊಡಿಸಿದೆ ಎನ್ನುವ ಫೋನ್ ಗಳಂತೂ ಅನೇಕವಿದ್ದವು. ಟಿ.ವಿಗಳಲ್ಲಿ, ಪತ್ರಿಕೆಗಳಲ್ಲಿ ಬಂದ ಮೇಲೆ ಕೂಡಾ ಕೆಲವು ಗಣ್ಯರೆನಿಸಿಕೊಂಡ ಮಹಾನುಭಾವರು ನನ್ನ ಡಿಟೇಲ್ಸ್, ಬಯೋಡೆಟಾ ನನಗೆ ಕಳಿಸಿ ಅರ್ಜೆಂಟ್ ಎಂದು ಕಾಲ್, ಮೆಸೆಜ್ ಮಾಡಿದರು.

ಸರ್, ನನಗೆ ಅವಾರ್ಡ್ ಕೊಟ್ಟಿದ್ದಾರೆ, ಟಿ.ವಿ ಹಾಕಿ ನೋಡಿ, ಹೇಳುತ್ತಿದ್ದರೆ ಎಂದರೆ ‘ಓಹ್. ಹಾಗಾ, ಫೋನ್ ಮಾಡಿ ಹೇಳಿದ್ದೆ, ಅಷ್ಟಕ್ಕೆ ಕೆಲಸ ಆಗಿದೆ ಹಾಗಾದರೆ, ಓಕೆ ಓಕೆ ಬಯೋ ಡೆಟಾನೂ ಕಳಿಸಿರಿ, ನ್ಯೂಸ್ ಮಾಡಲು ಬೇಕು’ ಎಂದ ಮಹಾನುಭಾವರೂ ಇದ್ದಾರೆ. ಇಂಥವರೆಲ್ಲ ಹಾಸ್ಯಕ್ಕೆ ವಸ್ತುವಾಗತ್ತಾರಾಗಲಿ, ವ್ಯಕ್ತಿತ್ವಕ್ಕೆ ಉದಾ ಹರಣೆಯಾಗುವುದಿಲ್ಲ ಎನಿಸಿ ನಗು ಬರುತ್ತಿತ್ತು. ಅಂತೂ ಕಡೆಗೂ ಪ್ರಶಸ್ತಿ ಬಂತು. ಯುದ್ಧ ಗೆದ್ದ ಮೇಲಿನ ಆಯಾಸ, ಮುಂದಿನ ಗುರಿ ಇಲ್ಲದ ಶೂನ್ಯ ಆವರಿಸಿತು.

ಸಾಕು ಎಲ್ಲವನ್ನೂ ಬಿಟ್ಟುಬಿಡೋಣವೆಂದರೆ, ಮೂವತ್ತು ವರ್ಷಗಳ ಹೋರಾಟದ ನೆನಪು, ಪ್ರತಿ ಪ್ರಶಸ್ತಿಗಳ ಹಿಂದೆಯೂ ಒಂದು ಹೋರಾಟವಿರುತ್ತದೆ. ಡಿಗ್ರಿ ಮುಗಿದು, ನೌಕರಿ ಹುಡುಕಬೇಕಾದ ಹೊತ್ತಿನಲ್ಲಿ ಕನ್ನಡ, ಸಾಹಿತ್ಯ ಸೇವೆ ಎಂದು ಗೆಳೆಯರ ಗುಂಪು ಕಟ್ಟಿ ಏನೇನೋ ಕಾರ್ಯಕ್ರಮ ಮಾಡಿ, ಜೀವನಾನುಭವ ಪಡೆದು, ಕಂಡವರನ್ನು ಹಣ ಕೇಳಿ, ಮನೆಯವರಿಂದ ಬೈಗಳು ಕೇಳಿದ್ದು, ಕುಹಕಿಗಳ ವ್ಯಂಗ್ಯಕ್ಕೆ ಮನ ನೊಂದಿದ್ದು, ಎಲ್ಲವೂ ಮೂವತ್ತು ವರ್ಷಗಳ ಈ ಅವಽಯಲ್ಲಿ ನಡೆದಿದ್ದು ನೆನಪಾಯಿತು.

ಅಪ್ಪನ ಅಂಜಿಕೆಗೆ ಆತನ ಎದುರು ಭಾಷಣ ಮಾಡಲಾಗದೇ, ಆತ ಸಭೆಯಿಂದ ಎದ್ದು ಹೋದ ಮೇಲೆ ಮೈಕಿಗೆ ಬಂದು ನಿಲ್ಲುತ್ತಿದ್ದ ಆ ಮೂವತ್ತು ವರ್ಷಗಳ
ಹಿಂದಿನ ದಿನ ನೆನೆಸಿಕೊಳ್ಳುತ್ತಾ, ರಾಜ್ಯದ ಮುಖ್ಯಮಂತ್ರಿಯ ಎದುರಿಗೆ ಹದಿನೈದು ನಿಮಿಷ ಮಾತನಾಡಿದೆ. ತಂದೆಗೆ ಹೆದರಿದರೆ, ತಂದೆಯ ಎದುರು ಧ್ವನಿ ಎತ್ತದಿದ್ದರೆ, ಮುಖ್ಯಮಂತ್ರಿಗಳ ಮುಂದೆ ಮಾತನಾಡುವ ಧೈರ್ಯ, ಅವಕಾಶ, ಆಶೀರ್ವಾದ ಮೂರನ್ನೂ ಆ ದೇವರು ಕರುಣಿಸುತ್ತಾನೆಂಬುದು ಮನವರಿಕೆಯಾಗಿ ಹೋಯಿತು.

ಇದುವರೆಗೆ ನನ್ನ ಜೀವನದಲ್ಲಿ ದೈವ ಕೃಪೆಯೇ ಬಹುಮುಖ್ಯ ಪಾತ್ರವಹಿಸಿದೆ. ಈ ಪ್ರಶಸ್ತಿಯೂ ದೈವ ಕೃಪೆಯೇ. 66 ಜನ ಜೊತೆ ಕುಳಿತಿದ್ದೆ, 60 ರ ಮುದುಕ ನಾಗಿದ್ದರೂ ನಾನೇ ಅಲ್ಲಿಯ ಕಿರಿಯ. ನಾನು ಇದುವರೆಗೆ ನೋಡಿದಂತೆ ರಾಜ್ಯೋತ್ಸವದ ಈ ಸರಕಾರಿ ಸಭೆ 65 ವರ್ಷಗಳ ಕಾಲ ಗಂಭೀರವಾಗಿದ್ದು, ಶ್ರೀ
ಮದ್ಗಾಂಭೀರ್ಯದಿಂದಲೇ ಶುರುವಾಗಿ, ಮುಂದುವರೆದು, ಮುಗಿಯುತ್ತಲೂ ಇತ್ತು. ಆದರೆ ಈ ಸಲದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರ ಹಸನ್ಮುಖ, ಹಾಸ್ಯ ಪ್ರವೃತ್ತಿ, ನನ್ನನ್ನು ಹುರಿದುಂಬಿಸಿದ ಪರಿಗೆ, ನನಗೆ ಅವರು ನೀಡಿದ ಸಮಯದಲ್ಲಿಯೇ ಅದನ್ನು ರಾಜ್ಯೋತ್ಸವ
ಸಭೆಯಿಂದ ಹಾಸ್ಯೋತ್ಸವ ಸಭೆಗೆ ಟ್ರಾನ್ಸ್ಫರ್ ಸೀನ್‌ರಿ ಆಗುವಲ್ಲಿ ನನ್ನ ಮಾತುಗಳಿಂದ ಜನರ ನಗೆ ಅಲೆಗಳಿಂದ ತುಂಬಿ ಹೋಯಿತು.

ಕೆಲವರು ಇದೊಂದು ವಿನೂತನ ಪ್ರಯೋಗವೆಂದು ಹಿಗ್ಗಿದರೆ, ಕೆಲವರು ಸಭಾ ಗಾಂಭೀರ್ಯ ಹೋಯಿತೆಂದು ಮರುಗಿದರು. ಸರಕಾರಿ ಸಭೆಗಳೆಲ್ಲ ಸಂತಾಪ  ಸಭೆಗಳಂತೆಯೇ ಆಗಿ ಹೋಗುವುದರಿಂದ ನಗು ನಿಷಿದ್ಧ ಎಂಬ ಅಲಿಖಿತ ಕಾನೂನು ಜಾರಿಯಾಗಿತ್ತು. ಆದರೆ ಹಾಸ್ಯಗಾರನಾಗಿ ಪ್ರಶಸ್ತಿ ತೆಗೆದುಕೊಂಡು ಮಾತ ನಾಡದೇ ಬರುವುದು, ಮಾತನಾಡಿದರೂ ನಗು ಮೂಡಿಸದೇ ಬರುವುದು ನನ್ನಿಂದಾಗದ ಕೆಲಸ. ನಕ್ಕುವರು ನಗಲಿ, ನಗದವರು ಮುಖ ಕಿವುಚಲಿ ಎಂದು
ತೀರ್ಮಾನಿಸಿಯೇ ನನ್ನ ಪಾಲಿನ ಕರ್ತವ್ಯ ಮಾಡಿದೆ. ಮುಖ್ಯಮಂತ್ರಿ ಬೊಮ್ಮಾಯಿಯವರ ನಗು, ಸಚಿವ ಸುನೀಲ್‌ಕುಮಾರರು, ಸಂಸದ ತೇಜಸ್ವಿ ಸೂರ್ಯ
ಮುಂತಾದವರ ಉತ್ತೇಜಕ ನಗು, ಚಪ್ಪಾಳೆಗಳು ಜನರನ್ನೂ ಹುರುಪುಗೊಳಿಸಿದವು.

ಶೇಕಡಾ ತೊಂಭತ್ತು ಪರ್ಸೆಂಟ್ ಕೇಳುಗರು, ನೋಡುಗರು ನನ್ನನ್ನು ಬೆಂಬಲಿಸಿದರೆ, ಒಂದು ಹತ್ತು ಪರ್ಸೆಂಟ್ ಜನ ವಿರೋಧಿಸಿದ್ದಾರೆ. ಎಲ್ಲರೂ ಒಪ್ಪಿದರೆ ಹೇಗೆ? ವಿರೋಧಿಸುವವರು ಇಲ್ಲವೆನ್ನಬಾರದೆಂದು ಕೆಲವರು ಕ್ರೋಧವನ್ನೂ ಕಾರಿಕೊಂಡಿದ್ದಾರೆ. ಇರಲಿ, ಒಟ್ಟಿನಲ್ಲಿ ಸುಖಾಂತ್ಯವಾಗಿದೆ. ಪುನೀತ್ ರಾಜಕುಮಾರರ ನಿಧನದ ದುಃಖದ ಛಾಯೆ ಇನ್ನೂ ಇರುವಾಗಲೇ ನೀವು ನಗಿಸಬಾರದಿತ್ತೆಂದು ಕೆಲವರ ಅಭಿಪ್ರಾಯ. ಇದನ್ನು ನಾನೂ ಒಪ್ಪುತ್ತೇನಾದರೂ, ನನ್ನಿಂದ ಕೆಲವು ನಗೆ
ಮಾತುಗಳನ್ನು ನಿರೀಕ್ಷಿಸಿದ್ದ ಜನರನ್ನೂ ನಾನು ತಪ್ಪಿಸಿಕೊಳ್ಳಲಾರದಾದೆ, ಪುನೀತ್ ರಾಜಕುಮಾರರನನ್ನು ನಾನು ಮುಖತಃ ಎಂದೂ ಭೇಟಿಯಾಗಿರದಿದ್ದರೂ, ಅವರು ಟಿ.ವಿಯಲ್ಲಿ ನಡೆಸಿಕೊಡುತ್ತಿದ್ದ ಮೂರು ಕಾರ್ಯಕ್ರಮಗಳಲ್ಲಿ ನನ್ನ ಹೆಸರನ್ನು ಗೌರವಪೂರ್ವಕವಾಗಿ ಪ್ರಸ್ತಾಪಿಸಿದ್ದರು.

ಸರಳತೆ, ಸೌಜನ್ಯತೆಗೆ ಅವರ ತಂದೆಗೆ ಸಮನಾಗಿದ್ದರು. ಅವರ ನಿಧನ ನಿಜಕ್ಕೂ ಕರುನಾಡಿಗೆ ತುಂಬಲಾರದ ನಷ್ಟ. ಜಗದ್ಭಕ್ಷಕನಾದ ಕಾಲನಿಗೆ ನಿಯಮಗಳಿಲ್ಲ. ಪುನೀತ್‌ರ ಸಾವಿನ ವಿಷಯಕ್ಕೆ ಬಂದರೆ ನಾನೂ ಸಹ ದೇವರನ್ನು ಕ್ಷಮಿಸುವುದಿಲ್ಲ. ಕಳೆದ ವರ್ಷವಿಡೀ ಕರೋನಾದ ಕರಾಳ ಛಾಯೆ, ಈ ವರ್ಷದಲ್ಲಿ ಪುನೀತ್ ಸಾವು, ಕನ್ನಡದ ಜನತೆಯನ್ನು ಜರ್ಜರಿತಗೊಳಿಸಿದೆ. ಕಾಲ ಎಲ್ಲವನ್ನೂ ವಾಸಿ ಮಾಡುತ್ತದೆ, ಮರೆಸುತ್ತದೆ ನಿಜ, ಆದರೆ ಕಾಯುವ, ಸಹಿಸುವ ತಾಳ್ಮೆ ನಮಗೆ ಆ ಕಾಲನೇ ಕೊಡಬೇಕು. ದೇಹದಲ್ಲಿ ಜೀವಾತ್ಮ ಇರುವವರೆಗೂ ಅದೆಷ್ಟು, ಎಲ್ಲವೂ ಬೇಕೆಂದು ಬಡಿದಾಡುತ್ತೇವೆ.

ಸದೃಢ, ಸೌಜನ್ಯಶೀಲ, ಸಹೃದಯಿ ಪುನೀತ್ ಸಾವು ಎಲ್ಲರಿಗೂ ಽಗ್ಭ್ರಮೆ ಉಂಟು ಮಾಡಿದೆ. ಬೊಗಸೆಯೊಳಗಿನ ನೀರನ್ನು ಹಾಗೆಯೇ ನೆಲಕ್ಕೆ ಬಿಟ್ಟಂತೆ ಆಗಿದೆ. ಇಲ್ಲವೇ ಆವಿಯಾಗಿ ಮೇಲೆ ಹೋದಂತಾಗಿದೆ. ಹೋದ ವರ್ಷದ ರಾಜ್ಯೋತ್ಸವ, ಗಣೇಶೋತ್ಸವಗಳು ಕಾರ್ಯಕ್ರಮಗಳಿಲ್ಲದೆಯೇ ಉರುಳಿ ಕಲಾವಿದರು ನರಳಿ
ಹೋದರು. ದೀಪಾವಳಿಯೂ ಈ ಸಲ ಪಟಪಟವೆಂಬ ಪಟಾಕಿ ಸದ್ದಿಲ್ಲದೇ ಮುಗಿಯಿತು. ನಮ್ಮ ಕೈಯ್ಯಲ್ಲೇನೂ ಇಲ್ಲ.