Saturday, 21st September 2024

’ಹೊಸ ಪುಸ್ತಕಗಳು ಹುಟ್ಟುತ್ತಿವೆ, ಹೊಸ ಓದುಗರು ಹುಟ್ಟುತ್ತಿಲ್ಲ’

ಪ್ರಾಣೇಶ ಪ್ರಪಂಚ

ಗಂಗಾವತಿ ಪ್ರಾಣೇಶ

ಈ ಅಂಕಣಗಳನ್ನು ಬರೆಯುವುದೆಲ್ಲ, ಬೈ ಬರ್ತ್, ಬೈ ಪ್ರೊಬೆಷನ್, ಬೈ ಹವ್ಯಾಸ ಬಂದಿದ್ದರೆ ಚೆಂದ ಸ್ನೇಹಿತರೇ, ನಂದು ಇವು ಮೂರೂ ಅಲ್ಲ ಮತ್ತು ಇಲ್ಲ.

ನನ್ನದೇನಿದ್ರೂ ಓನ್ಲಿ ಫೋರ್ಸ್ ಬೈ ವಿಶ್ವೇಶ್ವರ ಭಟ್. ಹೀಗಾಗಿ ಗುರುವಾರ ಹತ್ತಿರವಾಗುತ್ತಿದ್ದಂತೆ, ಯಾವ ಊರಿನ ಸ್ಟೇಜ್ ಮೇಲಿರುತ್ತೆನೋ, ಯಾವ ಚಾನೆಲ್‌ನ ಕ್ಯಾಮೆರಾ ಮುಂದಿರುತ್ತೆನೋ ಅಲ್ಲೇ ನಡುಕ ಶುರುವಾಗುತ್ತದೆ.

ಏನು ಬರೆಯಲಿ? ಯಾವ ವಿಷಯದ ಮೇಲೆ ಬರೆಯಲಿ? ಎಂಬ ವಿಚಾರಕ್ಕೆ ಮೆದುಳೇ ಆಫ್ ಆಗಿ ಮೈಕಿನ ಮುಂದೆ, ನೂರಾರು ಪ್ರೇಕ್ಷಕರ ಮುಂದೆ ಕ್ಷಣಕಾಲ ಗಂಭೀರವಾಗಿ ಬಿಡುತ್ತೇನೆ. ನನ್ನ ಮಾತಿಗೆ ನಗುತ್ತಿರುವ ಪ್ರೇಕ್ಷಕರೂ ನಾನು ಗಂಭೀರವಾದದ್ದನ್ನು ಕಂಡು ಅವರು ಸ್ತಂಭಿಭೂತರಾಗುತ್ತಾರೆ. ಕರೆಸಿದ ಸಂಘಟ ಕರು, ಮುಂದಿರುವ ಟಿ.ವಿ ಕ್ಯಾಮೆರಾಗಳ ಕ್ಯಾಮೆರಾಮನ್‌ಗಳು, ಪ್ಲೀಸ್, ಲಾಸ್ಟ್ ಸೆಂಟೆನ್ಸ್ ರಿಪೀಟ್ ಸರ್ ಎನ್ನುತ್ತಾರೆ. ಆಗ ನಾನು ಇವತ್ತು ಬುಧವಾರ ನಾಳೆಗೆ ನನ್ನ ಕಾಲಂ ಹೋಗಬೇಕು ಎಂದು ನನ್ನ ಮನದ ಸೆಂಟೆನ್ಸ್ ರಿಪೀಟ್ ಮಾಡುತ್ತೇನೆ. ಅದಲ್ಲ ಸಾರ್ ಎಂದು ಅವರು ಗದರಿಸಿದಾಗಲೇ ನನಗೆ ಸ್ಟೇಜ್ ಮೇಲೆ ಇದ್ದೇನೆಂಬ ಎಚ್ಚರ, ಅದಕ್ಕೂ ಪ್ರೇಕ್ಷಕರಲ್ಲಿ ನಗು.

ಈ ಕಾಲಂ ಕೈಯಿಂದ ಬರೆಯುವ ಭಯಕ್ಕೆ, ನನ್ನ ಬಾಯಿಯೇ ಬಂದಾಗುತ್ತಿರುವುದು ನನಗೆ ಎರಡು ಕನಸು ಚಿತ್ರದ ಡಾ|| ರಾಜ್‌ಕುಮಾರರ ಒಂದು ಸನ್ನಿವೇಶ ದಲ್ಲಿ ಅವರು ಕಾಲೇಜಿನಲ್ಲಿ ಪಾಠ ಹೇಳುತ್ತಾ, “ರೋಮಿಯೋ ಜೂಲಿಯಟ್ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು, ರೋಮಿಯೋನ ಉಸಿರೇ ಜೂಲಿಯಟ್, ಜೂಲಿಯಟ್‌ಳ ಉಸಿರೇ ರೋಮಿಯೋ, ಅವರಿಬ್ಬರೂ ಒಬ್ಬರಿಗಾಗಿಯೇ ಒಬ್ಬರು ಹುಟ್ಟಿದ್ದರು. ಕಂಡಂದಿನಿಂದ ಗಂಡ-ಹೆಂಡಿರಾಗಬೇಕೆಂಬ ಕನಸು ಕಾಣುತ್ತಿದ್ದ ಅವರು ಕನಸು ಕನಸಾಗಿಯೇ ಉಳಿದು, ದುರಂತದಲ್ಲಿ ಕೊನೆಗೊಳ್ಳುತ್ತದೆ. ಅವರಿಬ್ಬರ ಪ್ರೀತಿ ಅಗಾಧವಾದದ್ದು. ರೋಮಿಯೋಗಾಗಿಯೇ ಜೂಲಿಯಟ್
ಹುಟ್ಟಿದ್ದು, ಬೆಳೆದಿದ್ದು, ಬದುಕಿದ್ದು. ಮನೆತನಗಳ ಹಗೆತನ ಒಂದಿಲ್ಲದಿದ್ದರೆ….. ಅವರಿಬ್ಬರುಗಂಡ-ಹೆಂಡಿರಾಗಿ ಬಾಳಿ, ಬದುಕಿ ಬೆಳಗುತ್ತಿದ್ದರು.

ರೋಮಿಯೋನ ಉಸಿರೇ ಜೂಲಿ ಯಟ್, ಅವನ ಜೀವವೇ ಜೂಲಿಯಟ್ ಎಂದು ಹೇಳುತ್ತಾ ಮ್ಲಾನರಾಗಿ ಜೂಲಿಯಟ್ ಎಂದು ಹೇಳುವುದನ್ನು ಬಿಟ್ಟು, ಅವನ ಬೆಳಕೆ ಲಲಿತಾ.. ಅವನ ಉಸಿರೇ ಲಲಿತಾ, ಅವನ ಸರ್ವಸ್ವ ಲಲಿತಾ.. ಲಲಿತಾ” ಎಂದು ಕಂಬನಿ ದುಂಬುವ ದೃಶ್ಯವನ್ನು ಯಾವ ಪ್ರೇಮಿಯೂ ಯಾವ ಕಾಲಕ್ಕೂ
ಮರೆಯಲಾರ. ಹಾಗೆಯೇ ನಾನೂ ಕೂಡಾ “ನಾಳೆಯೇ ಬುಧವಾರ, ಸಂಜೆಯೊಳಗೆ ಕಾಲಂ ಹೋಗದಿದ್ದರೆ? ಭಟ್ಟರು ನಿಮ್ಮ ಕಾಲಂ? ಎಂದು ಮೆಸೆಜ್ ಮಾಡುತ್ತಾರೆ. ಅವರಿಗೆ ನಿತ್ಯ ಪತ್ರಿಕೆಯೆ ಉಸಿರು, ನನಗೊ ಈ ಕಾರ್ಯಕ್ರಮಗಳ ಸರಣಿಗೆ ಮರೆವು. ಅವರ ಉಸಿರೇ ನನ್ನ ಮರೆವು, ನನ್ನ ಮರೆವೇ ಅವರ
ಉಸಿರು” ಎಂದೆಲ್ಲ ಬಡಬಡಿಸಿ, ಎರಡು ಕನಸು ಚಿತ್ರದಲ್ಲಿ ರಾಜ್‌ರ ಮುಂದೆ ಕೂತ ವಿದ್ಯಾರ್ಥಿಗಳಿಗೆಲ್ಲ ಹೋ.. ಎಂದು ನಕ್ಕಂತೆ, ನನ್ನ ಮುಂದಿನ ಪ್ರೇಕ್ಷಕರೂ ಗೊಳ್ ಎಂದು ನಗುತ್ತಾರೆ.

ಆದರೆ ನಾನು ರಾಜ್‌ಕುಮಾರರು ನಕ್ಕ ತಮ್ಮ ವಿದ್ಯಾರ್ಥಿಗಳಿಗೆ ಸೈಲೆನ್ಸ್.. ಸೈಲೆನ್ಸ್.. ಶಟ್‌ಅಪ್ ಎಂದು ಗದರಿಸುತ್ತಾರೆ. ಏಕೆಂದರೆ ಅವರು ಅವರ ವಿದ್ಯಾರ್ಥಿ ಗಳು. ಆದರೆ ನನ್ನ ಮುಂದೆ ಇರುವವರು ಪ್ರೇಕ್ಷಕ ಪ್ರಭುಗಳು. ನಾನು ಆ ರೀತಿ ಗದರಿಸುವಂತಿಲ್ಲ. ಯು ಮೇ ಆಲ್ ಗೋ ಎಂದು ಪ್ರೇಕ್ಷಕರನ್ನು ಕಳಿಸುವಂತಿಲ್ಲ.
ನಿಜ, ಬರವಣಿಗೆಯೂ ಪ್ರೇಯಸಿಯಂತೆ, ಪ್ರೀತಿಸಿಕೊಳ್ಳಲು ಬಯಸುತ್ತದೆ, ಅದನ್ನು ತನ್ನ ಉಸಿರು ಎಂದುಕೊಂಡವನನ್ನೇ ಅದು ವರಿಸುತ್ತದೆ. ವಿಶ್ವೇಶ್ವರ ಭಟ್‌ರು,
ಶ್ರೀವತ್ಸ ಜೋಷಿ, ಟಿ. ದೇವಿದಾಸ., ಎಲ್.ಪಿ ಕುಲಕರ್ಣಿ, ಕಿರಣ್ ಉಪಾಧ್ಯಾಯ, ದೇವಿಮಹೇಶ್ವರ ಹಂಪಿ ನಾಯಡು, ವಿ.ಎಂ. ವಿಜಯೇಂದ್ರಾರಾವ್, ಶಿಶಿರ ಹೆಗಡೆ, ಜಯವೀರ್ ವಿಕ್ರಮ್, ಸಂಪತ್‌ಗೌಡ ಇತ್ಯಾದಿ ಎಷ್ಟು ಚೆಂದ ಬರೆಯುವ ಲೇಖಕರು ಇವರೆಲ್ಲ, ಇವರಿಗೆಲ್ಲ ಬರವಣಿಗೆ ಒಲಿದ ಪ್ರೇಯಸಿ ಎನಿಸುತ್ತದೆ. ನನಗೋ ಕಟ್ಟಿಕೊಂಡ ಹೆಂಡತಿಯಂತಾಗಿದೆ.

ಋಣಾನುಬಂಧ ರೂಪೇಣ ಪಶು, ಪತ್ನಿ ಸುತಾಲಯ ಆಗಿದೆ. ಭಟ್ಟರ ನನ್ನ ಋಣಾನುಬಂಧವೇ ಇದಕ್ಕೆ ಕಾರಣ. ಬರವಣಿಗೆ ತಪಸ್ಸು ಆಗಿರುವ ಲೇಖಕರೂ ಇದ್ದಾರೆ. ಕಾರಂತರು, ಬೇಂದ್ರೆ, ಅ.ನ.ಕೃ ನಮ್ಮ ಮಧ್ಯೆ ಇರುವ ಭೈರಪ್ಪನವರು, ಈಗೀಗಂತೂ ಅನೇಕ ಹೊಸ ಲೇಖಕರು ಅದೆಷ್ಟು ಅದ್ಭುತವಾಗಿ ಬರೆಯುತ್ತಿದ್ದಾರೆ. ಅಂದು ಬರೆಯುವವರು ಕೆಲವೇ ಕೆಲವರು ಇದ್ದರು. ಓದುಗರು ಮನೆಮನೆಗಳಲ್ಲೂ ತುಂಬಿದ್ದರು. ಸುಧಾ, ಪ್ರಜಾಮತ, ಕರ್ಮವೀರ, ಮಯೂರ, ಮಲ್ಲಿಗೆ, ಕಸ್ತೂರಿ, ತರಂಗ, ಪತ್ರಿಕೆಗಳು ಬಂದು ಬಾಗಿಲಲ್ಲಿ ಬಿದ್ದ ಕೂಡಲೇ, ಮನೆಯ ಜನರೆಲ್ಲ ಧಾರಾವಾಹಿಗಳನ್ನು ಓದಲು ಮುಗಿ ಬೀಳುತ್ತಿದ್ದರು.

ಈಗೇನಿದೆ? ಪುಸ್ತಕ, ಓದು ಎಂದರೆ ಎಲ್ಲರಿಗೂ ಅಲರ್ಜಿ, ಇದನ್ನು ಓದಿ ಹೇಳಿಬಿಡಿ ಸಾರ್ ಎನ್ನುತ್ತಾರೆ. ಹೊಸ ಪುಸ್ತಕಗಳು, ಹೊಸ ಲೇಖಕರು ನಿತ್ಯ ನೂರು ಜನ
ಹುಟ್ಟುತ್ತಿದ್ದಾರೆ. ಆದರೆ ಹೊಸ ಓದುಗರೇ ಹುಟ್ಟುತ್ತಿಲ್ಲ? ಯಾರಿಗೂ ಓದು ಬೇಡ, “ರಾತ್ರಿ ಟಿ.ವಿ ಯಲ್ಲಿ ತೋರಿಸಿದ್ದರು, ಅದನ್ನೇನು ಓದುವುದು ನೋಡಿಯೇ ಬಿಟ್ಟಿದ್ದೇವೆ” ಎಂದು ನುಡಿಯುತ್ತಾರೆ. ಮೊಬೈಲುಗಳು ಬಂದು ಜೀವನೋತ್ಸಾಹ, ಕುತೂಹಲಗಳು ಸತ್ತೇ ಹೋದವು. ಹೀಗೆ ಓದುವ ಉತ್ಸಾಹ, ಕುತೂಹಲಗಳು ಸತ್ತುಹೋಗಿರುವ ದಿನಗಳಲ್ಲಿ ನನ್ನಲ್ಲಿ ಒಬ್ಬ ಬರಹಗಾರ ಹುಟ್ಟಿರುವುದು, ಗಂಡಹೆಂಡತಿ ಇಬ್ಬರಿಗೇ ತಿನ್ನಲು ಅನ್ನ, ತಲೆ ಮೇಲೊಂದು ಸೂರು ಇಲ್ಲದಾಗ ಅವರಿ ಗೊಂದು ಮಗು ಹುಟ್ಟಿದಂತೆ ನನ್ನ ಬರವಣಿಗೆಯ ಗತಿಯಾಗಿದೆ.

ಪ್ರತಿವಾರ ಹೊಸದಾಗಿ ಏನು ಬರೆಯಲಿ ಎಂದು ಯೋಚಿಸುತ್ತಿರುವಾಗಲೇ ಗುರುವಾರ ಬಂದುಬಿಡುತ್ತದೆ. ಬರೆಯಲು ಏನೂ ಉಳಿದಿಲ್ಲ, ಎಲ್ಲರೂ ಎಲ್ಲದರ ಬಗ್ಗೆ ಬರೆದಿದ್ದಾರೆ, ಅಷ್ಟೇ ಏಕೆ, ಅದ್ಭುತವಾಗಿ ಬರೆದಿದ್ದಾರೆ. ಅದನ್ನು ಓದಿದರೆ, ನಾನೇಕೆ ಬರೆಯುತ್ತೇನೆ? ಎಂದೇ ಅನಿಸುತ್ತಿರುತ್ತದೆ. ಆದರೂ ನೂರಾ ಎಂಭತ್ತರ ಹತ್ತಿರ ಲೇಖನಗಳಾದವು. ಇವೆಲ್ಲ ಭಿಡೆಗೆ ಬಿದ್ದು ಬಸಿರಾಗಿ ಹೊರಬಂದ ಶಿಶುಗಳು. ಆದರೂ ಕೆಲ ಜನರು ಓದಿ ಎತ್ತಿ ಮುದ್ದಾಡಿದ್ದಾರೆ. ನನಗೆ ಕಂಡುಬಂದ ವಿಶೇಷತೆ ಏನೆಂದರೆ, ನನ್ನ ಲೇಖನಗಳಲ್ಲಿ ಬಹುತೇಕ ಓದುಗರು, ನಾನು ಓದಿದ ಪುಸ್ತಕಗಳಲ್ಲಿನ ಅಂಶಗಳ ಬಗ್ಗೆ ಬರೆದ ಲೇಖನಕ್ಕಿಂತಲೂ, ನನ್ನ ಜೀವನದ, ಬಾಲ್ಯದ, ಬಡತನ, ಬಾಲ್ಯದ ಗೆಳೆಯರ ಬಗ್ಗೆ ಬರೆದ ಲೇಖನಗಳನ್ನೇ ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.

ನನ್ನ ನೀರುನಿಕ್ಕಟ್ಟಿ ಚಹಾ, ಜಾತಕ ಜಾಲಾಡಿದಂತೆ ನನ್ನ ಜೀವನ, ಉಳಿಮುಟ್ಟದ ಲಿಂಗಗಳು, ಸಾಹಿತ್ಯ ದ್ವೇಷಿ ತಂದೆಗೆ ಸಾಹಿತ್ಯದಿಂದಲೇ ಮುಕ್ತಿ ಕೊಡಿಸಿದ್ದು.” ಇತ್ಯಾದಿ ಲೇಖನಗಳನ್ನು ಮೆಚ್ಚಿದ್ದಾರೆ. ಹೋದವಾರದ “ಮರೆತೆನೆಂದರೂ ಮರೆಯಲಿ ಹ್ಯಾಂಗ?” ಲೇಖನವನ್ನಂತೂ ಓದಿ ನಾವು ಅತ್ತೇ ಬಿಟ್ಟೆವು, ಹೃದಯ
ತುಂಬಿ ಬಂತು ಇತ್ಯಾದಿ ಇತ್ಯಾದಿ ಅಭಿಪ್ರಾಯಗಳನ್ನು ಬರೆದಿದ್ದಾರೆ. ಎಲ್ಲಕ್ಕಿಂತ ನನ್ನ ದೂರ ದೂರಿನ ನನ್ನ ಬಂಧುಗಳೂ ಮೆಚ್ಚಿರುವುದು ವಿಶೇಷ. ನಿಜವಾಗಿ ಹೇಳಬೇಕೆಂದರೆ ನನಗೆ ಈಗಿನ ವೈಭವಗಳಿಗಿಂತ ಬಾಲ್ಯದ ಬಡತನ, ಯೌವ್ವನದ ಯೋಜನೆ, ಉತ್ಸಾಹಗಳೇ ಬದುಕಿಗೆ ಟಾನಿಕ್‌ಗಳು ಎನಿಸುತ್ತಿದೆ. ಯಾವ ದೊಂದು ಹೊಸ ಅನುಭವವನ್ನೂ ನಾವು ತಪ್ಪಿಸಿಕೊಳ್ಳಬಾರದು.

ಪ್ರತಿ ದಿನವನ್ನೂ ಇಂದೇನಾದರೂ ಘಟಿಸುವುದೇನೋ ಎಂದು ಕಾದು ನೋಡಬೇಕಾಗಲಿ, ಯಾಂತ್ರಿಕ ಜೀವನ ಬಯಸಬಾರದು. ಅದೇ ಜೀವನವಲ್ಲ ಎನಿಸುತ್ತದೆ.
ಬೆಳಿಗ್ಗೆ ವಾಕಿಂಗ್, ಸ್ನಾನ, ತಿಂಡಿ, ಆಫೀಸಿಗೆ ಬಸ್ಸು ಹಿಡಿಯುವುದು, ಆಫೀಸ್‌ನಲ್ಲಿ ಗಂಟೆಗೊಮ್ಮೆ ಕಾಫಿ, ಕಂಪ್ಯೂಟರ್‌ಗೆ ಕಣ್ಣು, ತಲೆ ಚಚ್ಚಿಕೊಳ್ಳುವುದು, ಸಂಜೆ ಒಂದಿಷ್ಟು ತರಕಾರಿ ತೆಗೆದುಕೊಂಡು ಬಸ್ಸೇರಿ ಮನೆಸೇರಿ, ಟಿ.ವಿ ಯಲ್ಲಿ ಭ್ರಷ್ಟ ರಾಜಕಾರಣಿಗಳ ಮನೆ ಮೇಲೆ ರೈಡ್ ಮಾಡಿ ಅಧಿಕಾರಿಗಳು ವಶಪಡಿಸಿಕೊಂಡ ಕಂತೆ ಕಂತೆ ನೋಟುಗಳನ್ನೂ, ಪೇರಿಸಿಟ್ಟ ಬಂಗಾರದ ಗಟ್ಟಿಗಳನ್ನೂ ನೋಡಿ, ಇವೆಲ್ಲ ನನಗೆ ಸಿಕ್ಕಿದ್ದರೆ ನಾನೂ ನಾಳೆಯಿಂದ ಬಸ್ಸು ಹಿಡಿದು ಆಫೀಸಿಗೆ ಹೋಗ ಬೇಕಾಗಿಲ್ಲ ಎಂದು ಕನಸುಕಂಡು, ನಿಟ್ಟುಸಿರು ಹಾಕಿ, ಉಂಡು, ಮಲಗಿ ಬೆಳಿಗ್ಗೆ ಮತ್ತೆ ಬಸ್ಸು ಹಿಡಿಯುವುದು. ಈ ರೀತಿ ಜೀವನವು ಕೋಟಿ ಕೋಟಿ ಜನಗಳ ಪಾಲಿಗೆ ಬಂದ ಪಂಚಾಮೃತವೇ ಆಗಿಹೋಗಿದೆ. ಹೀಗೆ ಯಾಂತ್ರಿಕ ಜೀವನ ನಡೆಸುವವರಿಗೆ ಹಿಂದಿನ ದಿನಗಳೇ ಸೊಗಸಿನ ದಿನಗಳು ಎನಿಸುತ್ತವೆ. ಅವು ಮತ್ತೆ ಬರಲಾ ರವು.

ನನ್ನ ಈ ತರಹದ ಲೇಖನಗಳನ್ನೋದಿ “ಆತ್ಮಚರಿತ್ರೆಯನ್ನೂ ಬರೆದು ಬಿಡಿಸಾರ್” ಎಂದು ದುಂಬಾಲು ಬಿದ್ದವರಲ್ಲಿ ಸಾವಣ್ಣ ಪಬ್ಲಿಷರ‍್ಸ್ ಸ್ನೇಹಿತ ಜಮೀಲರು ಮುಂಚೂಣಿಯಲ್ಲಿದ್ದಾರೆ. ಹಾಗೆಯೇ ಓದುಗ ಮಿತ್ರರಾದ ಸದಾನಂದ ಪೈ ಮುಂತಾದವರೂ ಬಲವಂತಿಸುತ್ತಿರುತ್ತಿದ್ದಾರೆ. ಒಟ್ಟಿನಲ್ಲಿ ಬುದ್ಧಿಗೆ ಬಲಕೊಡುವ ಬರಹಗಳಿಗಿಂತ ಕರುಳಿಗೆ ಕೆಲಸ ಕೊಡುವ, ಎದೆಭಾರವಾಗಿಸಿ, ಕಣ್ಣೀರು ತರಿಸುವಂಥಹ ಜೊತೆಗೆ ಓದುಗರಿಗೆಲ್ಲಾ ತಮಗೂ ಅಂಥಹ ಸಂಬಂಧಿಗಳಿದ್ದರೆಂದು
ನೆನಪಿಸಿಕೊಳ್ಳುವಂಥಹ ಬಾವನಾತ್ಮಕ ಬರಹಗಳಿಗೆ ಬಲವಂತ ಹೆಚ್ಚುತ್ತಿರುವುದು ನನಗೆ ಸಂತಸ ತರುತ್ತಿದೆ. ವ್ಯಾಕರಣ, ದೊಡ್ಡ ದೊಡ್ಡ ಶಬ್ದಗಳು, ಕೆಲವರ ಲೇಖನಗಳನ್ನು ಓದಬೇಕಾದರಂತೂ ಡಿಕ್ಷನರಿಯನ್ನು ಪಕ್ಕದಲ್ಲಿಟ್ಟುಕೊಂಡೇ ಓದಬೇಕು.

ಅಂಥ ಲೇಖಕರೂ ಇದ್ದಾರೆ. ಅಂಥವರ ಲೇಖನಗಳನ್ನು ಅವರಂಥಹವರೇ ಓದುತ್ತಾರಾಗಲಿ, ಎಲ್ಲರಂತೆ ಇರುವವರು ಓದುವುದಿಲ್ಲ. ಅಕ್ಷರಗಳ ಬಗ್ಗೆ ಓದುವಾಗ

“ಯಥಾವ್ಯ್ರಾ ಹರೇತ್ ಪೋತಂ ದಂಷ್ಟ್ರಾಭ್ಯಾಂ ನ ತು ಪೀಡಯೇತ್ |”

ಅಂದರೆ ತಾಯಿ ಹುಲಿ, ತನ್ನ ಹುಲಿಮರಿಯನ್ನು ಹಲ್ಲುಗಳಿಂದಲೇ ಹಿಡಿದು ಎತ್ತಿ ಒಯ್ಯುತ್ತದೆ. ಆದರೆ ಆ ಮರಿಗೆ ಏನೂ ಪೀಡೆ, ನೋವು ಉಂಟು ಮಾಡುವುದಿಲ್ಲ. ಹಾಗೆ ಅಕ್ಷರಗಳನ್ನಾಗಲಿ, ನಮ್ಮ ಭಾವನೆಗಳನ್ನಾಗಲಿ ಸ್ಪಷ್ಟವಾಗಿ, ಶುದ್ಧವಾಗಿ ಉಚ್ಚರಿಸಬೇಕು. ಆಗಲೇ ಅಕ್ಷರಗಳಲ್ಲಿ ವರ್ಣಾಭಿಮಾನಿಗಳ, ಭಗವಂತನ ಸನ್ನಿಧಾನ ಹೆಚ್ಚುತ್ತದೆ. ಆಗ ಆ ಅಕ್ಷರಗಳಾಗಲಿ, ಆ ಭಾವನೆಳಾಗಲಿ ಕಾಮಧೇನು ವಿನಂತೆ ಅಭೀಷ್ಟ ಫಲ ನೀಡುತ್ತವೆ.

ಮನುಷ್ಯ ಎಷ್ಟೇ ಶ್ರೀಮಂತನಿರಲಿ, ದೊಡ್ಡ ಸ್ಥಾನದಲ್ಲಿರರಲಿ ಕ್ರೂರಿ, ಕೊಲೆಗಡುಕನಿರಲಿ, ಅವನವೇ ಆದ ಕೆಲವು ಭಾವನೆಗಳಿಗೆ ಅವನೂ ಒಮ್ಮೆ ಅಲ್ಲ ಒಮ್ಮೆ
ಕಣ್ಣೀರಾಗುತ್ತಿರುತ್ತಾನೆ. ಯಾರದೋ ಜೀವನದ ಒಂದು ಘಟನೆ, ಇನ್ನೊಬ್ಬರ ಕಣ್ಣಲ್ಲಿ ನೀರು ತರಿಸಿತೆಂದರೆ ಅವನ ಜೀವನದಲ್ಲೂ ಅಂಥದು ನಡೆದಿರುತ್ತದೆ ಎಂದೇ ಅರ್ಥ. ಬದುಕು ಯಾರಿಗಾಗಿ ಕಾಯುವುದಿಲ್ಲ ಎಂಬುದು ಎಷ್ಟು ನಿಜವೋ, ಯಾರನ್ನೂ ಬಿಡುವುದಿಲ್ಲ ಎಂಬುದು ಅಷ್ಟೇ ನಿಜ. ರಕ್ತದ ಗ್ರೂಪ್‌ಗಳು ಬೇರಿರಬಹುದು, ಆದರೆ ಎಲ್ಲರ ರಕ್ತವೂ ಕೆಂಪೇ. ರಕ್ತವಾಗಲಿ, ಕಣ್ಣೀರಾಗಲಿ ದೇಹದಿಂದ ಹೊರಬಂದಾಗ ನೋವು ಸಹಜ. ಇದನ್ನು ಲೇಖನಗಳು ಮಾಡುತ್ತವೆ ಎಂಬುದು ನಾನು ಇಂತಹ ಲೇಖನಗಳನ್ನು ಬರೆದಾಗ ಕಂಡುಕೊಂಡ ಸತ್ಯ. ಏಕೆಂದರೆ ನಾನು ಅಂತಹ ಲೇಖನಗಳಿಗೆ ಕಣ್ಣೀರಾದವನೇ.