Saturday, 21st September 2024

ನಮ್ಮೊಳಗಿದ್ದೂ ನಮ್ಮವರಾಗದವರ ಕಥೆ – 1

ಶಿಶಿರ ಕಾಲ

ಶಿಶಿರ‍್ ಹೆಗಡೆ, ಚಿಕಾಗೋ

shishirh@gmail.com

ಒಬಾಮ ಭಾರತಕ್ಕೆ ಬಂದಾಗ ಅವರು ನಮ್ಮದೇ ವಂಶಸ್ಥ ಎಂದು ಒಂದಿಷ್ಟು ಸಿದ್ಧಿಯರು ಅವರಿಗೆ ಜೇನು ತುಪ್ಪದ ಬಾಟಲಿ ಕೊಡಲು ಮುಂದಾಗಿದ್ದರಂತೆ. ಒಂದೊಮ್ಮೆ ಒಬಾಮ ಅದನ್ನು ತೆಗೆದುಕೊಂಡಿದ್ದಲ್ಲಿ ಅವರ ಹೆಸರಿನ ಜತೆಗೂ ‘ಸಿದ್ದಿ’ ಸೇರಿಕೊಂಡುಬಿಡುತ್ತಿತ್ತು!

ತಿಣಿಟಗ ಮಿಣಿಟಗ ಟಿಶ್ಯಾ – ಕೆಲವೊಂದು ಹಾಡುಗಳು ಮತ್ತು ಅದರಲ್ಲಿ ಬರುವ ಕೆಲ ಶಬ್ದಪುಂಜಗಳು ಒಂದು ರೀತಿಯ ಬಬ್ಬಲ್ ಗಮ್ಮಿನಂತೆ ಅಂಟಿಕೊಂಡು ಬಿಡುತ್ತವೆ. ಕೆಲವಷ್ಟು ದಿನ – ಕಾಲ ನಾವು ಗುನುಗುವಾಗಲೆಲ್ಲ ನಮ್ಮನ್ನು ಅನಾಮತ್ತಾಗಿ ಅವು ಅವರಿಸಿಕೊಂಡಿಡುತ್ತವೆ. ಆ ಶಬ್ದ ಪುಂಜದ ಅರ್ಥ ಏನು? ಅದೊಂದು ಮ್ಯಾಟರ್ರೇ ಅಲ್ಲ. ಸಲಗ ಚಿತ್ರದ ಈ ಹಾಡು ಕೂಡ ಹಾಗೆಯೇ. ಉತ್ತರ ಕನ್ನಡದ ಸಿದ್ಧಿಯರ ಪರಿಚಯ ಯಪುರದ ಸುತ್ತಲಿನ ಜಾಗದವರಿಗೆ ಬಿಟ್ಟರೆ ಉಳಿದವರಿಗೆ ಅಷ್ಟಾಗಿ ಇಲ್ಲ. ‘ಭೂತಯ್ಯನ ಮಗ ಅಯ್ಯು’ ಚಿತ್ರದಲ್ಲಿ ಸಿದ್ದಿ ಬೈರ ಬಂದು ಹೋಗಿದ್ದಾನೆ.

ಬಿಜಿಎಲ್ ಸ್ವಾಮಿಯವರ ಪುಸ್ತಕದಲ್ಲಿ ಆಫ್ರಿಕಾದ ಮೂಲವಿರುವ ಒಂದು ಬೃಹತ್ ಮರವನ್ನು ಉತ್ತರ ಕನ್ನಡಲ್ಲಿ ಕಂಡಾಗ ಅದು ಬಹುಶಃ ಇಲ್ಲಿಗೆ ದದ್ದು ಇದೇ ಸಿದ್ದಿಯರಿರಬಹುದು ಎನ್ನುವ ಪ್ರಸ್ತಾಪವಿದೆ. ನಂತರದಲ್ಲಿ ಶಾಂತಾರಾಮ್ ಸಿದ್ದಿ ಎಂಎಲ್ಸಿಯಾದಾಗ, ಈಗ ಈ ತಿಣಿಟಗ ಮಿಣಿಟಗ ಟಿಶ್ಯಾ ಹಾಡಿನಿಂದ – ಹೀಗೆ ಅ ಕೆಲವು ಬಾರಿ ಸಿದ್ದಿಯರ ಪ್ರಸ್ತಾಪ ವಾಗಿ ಅವರ ಅಸ್ತಿತ್ವ ಹೊರಜಗತ್ತಿಗೆ ತಿಳಿದದ್ದು ಬಿಟ್ಟರೆ ಇವರದು ಉಳಿದ ಸಾಮಾನ್ಯರಿಗೆ ಹೊರತಾದ ಒಂದು ಸಮಾ ನಾಂತರ ಬದುಕು.

ಹಿಂದೆ ಬರಾಕ್ ಒಬಾಮ ಭಾರತಕ್ಕೆ ಭೆಟ್ಟಿ ಮಾಡಿದಾಗ ಒಬಾಮ ನಮ್ಮದೇ ವಂಶಸ್ಥ – ಅಥವಾ ಅವರು ನಮ್ಮವರೇ ಎನ್ನುವ ವಿಚಾರವನ್ನಿಟ್ಟುಕೊಂಡು ಒಂದಿಷ್ಟು ಸಿದ್ಧಿಯರು ಅವರಿಗೆ ಜೇನು ತುಪ್ಪದ ಬಾಟಲಿಯೊಂದನ್ನು ಕೊಡಬೇಕೆಂದು ಮುಂದಾದದ್ದು ಸುದ್ದಿಯಾದ ನೆನಪು. ಆಮೇಲೆ ಅವರು ಅದನ್ನು ಕೊಟ್ಟರೋ – ಒಬಾಮ ಅದನ್ನು ತೆಗೆದುಕೊಂಡರೋ, ಗೊತ್ತಿಲ್ಲ. ಬಹುಶಃ ಅದು ಸಾಧ್ಯವಾಗಿರಲಿಕ್ಕಿಲ್ಲ – ಏಕೆಂದರೆ ಹಾಗೇನಾದರೂ ಆಗಿದ್ದಲ್ಲಿ ಅದೊಂದು ದೊಡ್ಡ ಸುದ್ದಿ ಯಾಗಿರುತ್ತಿತ್ತು. ಒಬಾಮಾರ ಹೆಸರಿನ ಜತೆ ಸಿದ್ದಿ ಸೇರಿಕೊಂಡು ಬಿಡುತ್ತಿತ್ತು.

ಸಿದ್ಧಿಯರು ಉತ್ತರಕನ್ನಡದಲ್ಲಿ, ಹೈದರಾಬಾದಿನಲ್ಲಿ, ಗುಜರಾತಿನ ಕೆಲವು ಭಾಗದಲ್ಲಿ ನೆಲೆ ನಿಂತು ಅದೆಷ್ಟೋ ಕಾಲವಾಯ್ತು. ಕರ್ನಾಟಕದ ಹಳಿಯಾಳ, ಯಪುರ,
ಅಂಕೋಲಾ, ಮುಂಡಗೋಡ, ಕಾರವಾರ, ಸಿರ್ಸಿ ಮತ್ತು ಕಲಘಟಗಿಯಲ್ಲಿ ಇರುವ ಸಿದ್ಧಿಯರಂತೂ ನಮ್ಮವರೇ. ಅವರು ಮಾತನಾಡುವುದು ಕನ್ನಡ, ಮಿಶ್ರ ಮರಾಠಿ ಮತ್ತು ಕೊಂಕಣಿ. ಸಿದ್ದಿ ಹೆಂಗಸರು ಸೀರೆ ಉಡುತ್ತಾರೆ – ಹಣೆಗೆ ಕುಂಕುಮ ಇಡುತ್ತಾರೆ. ಭಾರತೀಯ ಹಬ್ಬಗಳನ್ನಾಚರಿಸುತ್ತಾರೆ. ಹೀಗೆ ಸಾಂಸ್ಕೃತಿಕ ವಾಗಿ ಕೂಡ ಅವರು ನಮ್ಮೊಳಗೊಬ್ಬರು. ಅದೆಲ್ಲದರ ನಡುವೆ ಅವರ ಮೊದಲು ಭಾರತಕ್ಕೆ ಬಂದಾಗ ಜತೆಗೆ ತಂದ ಮೂಲ ಸಂಸ್ಕೃತಿ ಕ್ರಮೇಣ ಇಲ್ಲಿಯ ಸಂಸ್ಕೃತಿಯ ಜತೆ ಸೇರಿ ಒಂದು ಹೊಸ ತೆರನಾದ ‘ಮಿಸಾಳ್ ಸಂಸ್ಕೃತಿ’ ಅಲ್ಲಿ ಉಳಿದುಕೊಂಡು ಬಂದಿದೆ.

ಆದರೂ ಅವರು ಸಮಾಜದಲ್ಲಿ ಪ್ರತ್ಯೇಕ ಮತ್ತು ಒಂದಿಷ್ಟು ಅಂತರ ಅಲ್ಲಿ ಇದೆ. ಇದು ಅದ್ಯಾವತ್ತೋ ಒಂದು ಕಾಲದಲ್ಲಿ ಯಾವುದೋ ಒಂದು ಕಾರಣಕ್ಕೆ ಆಫ್ರಿಕಾ ದಿಂದ ಕರ್ನಾಟಕಕ್ಕೆ ಬಂದು ನಂತರ ನಮ್ಮವರೇ ಆಗಿಹೋದ, ಆದರೂ ಒಂದಿಷ್ಟು ರೀತಿಯಲ್ಲಿ ಸಮಾಜದಲ್ಲಿ ಅನ್ಯರು ಎಂದೆನಿಸಿಕೊಂಡು ಬದುಕುತ್ತಿರುವ ಸಿದ್ದಿಯರ ಕಥೆ. ಅವರ ಹೆಸರಿಗೆ ಕೊನೆಯಲ್ಲಿ ಸಿದ್ದಿ ಎಂದು ಸೇರಿಸುವುದು ಸಾಮಾನ್ಯ ಅಭ್ಯಾಸ. ಹೆಸರು ಜಾನ್ ಕೋಸ್ಟಾ ಎಂದಿದ್ದರೆ ಆತನ ಹೆಸರು ಜಾನ್ ಕೋಸ್ತಾ ಸಿದ್ದಿ. ರಾಮ ಎಂದಿದ್ದರೆ ರಾಮ ಸಿದ್ದಿ – ಹೀಗೆ.

ಜಗತ್ತಿನ ಇನ್ನೊಂದು ಭಾಗದಲ್ಲಿ ಇಂಥದ್ದೇ ಒಂದು ಕಥೆ ಇದೆ. ಅಲ್ಲಿ ಜಾನ್‌ನಿಗೆ ಹಿಂದೆ ಕೂಲಿ ಜಾನ್ ಎಂದು ಸೇರಿಸ ಲಾಗುತ್ತದೆ. ರಾಮನ ಹೆಸರಿನ ಹಿಂದೆ ಕೂಲಿ ರಾಮ. ಹದಿನೆಂಟನೇ ಶತಮಾನದಲ್ಲಿ ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರ ಇಂಗ್ಲೆಂಡ್. ಆಗ ಇಂಗ್ಲೆಂಡಿನ ಹಿಡಿತದಲ್ಲಿ ಉತ್ತರ ಅಮೆರಿಕವಿತ್ತು, ಆಫ್ರಿಕಾದ ದೇಶ ಗಳಿದ್ದವು, ಪೂರ್ವಕ್ಕೆ ಭಾರತ, ಇನ್ನಷ್ಟು ಪೂರ್ವಕ್ಕೆ ಆಸ್ಟ್ರೇಲಿಯಾ. ಸೂರ್ಯ ಮುಳುಗದ ನಾಡು – ನೆನಪಿರಬಹುದು. ಹೊಸ ನೆಲಗಳು, ಹೊಸ ವಸಾಹತುಗಳು ಮತ್ತು ಆ ವಸಾಹತುಗಳಲ್ಲಿ ಹೊಸ ಹೊಸ ಕೃಷಿ. ಹೀಗೆ ಎಗ್ಗಿಲ್ಲದೆ ಬೆಳೆದಲ್ಲ ಕೃಷಿ ಉತ್ಪಾ ದನೆಗೆ ಇಂಗ್ಲಿಷರಿಗೆ ಕೆಲಸದವರ, ಕೂಲಿಗಳ ಅವಶ್ಯಕತೆಯಿತ್ತು.

ಆಗೆಲ್ಲ ಆಫ್ರಿಕಾದ ನೆಲದಿಂದ ಅಲ್ಲಿನ ಕಪ್ಪು ವರ್ಣೀಯರನ್ನು ಪ್ರಾಣಿಗಳಂತೆ ಮೂರುಕಾಸಿಗೆ ಖರೀದಿಸಿ, ಅವರನ್ನು ಸಾಗಿಸಿ, ನಂತರ ವಸಾಹತುಗಳಲ್ಲಿನ ಪ್ಲಾಂಟೇಷನ್ ಯಜಮಾನರಿಗೆ ಮಾರಾಟ ಮಾಡಲಾಗುತ್ತಿತ್ತು. ಹೀಗೆ ಈ ಸ್ಲೇವ್ ಪದ್ಧತಿಯಲ್ಲಿ ಕಪ್ಪು ವರ್ಣೀಯರೆಂದರೆ ಸರಕು. ಅವರನ್ನು ವಿವರಿಸುವ ಅಂದಿನ ಬ್ರಿಟಿಷರು – ಅವರು ಮಂಗನಂತೆ. ಸಂಸ್ಕಾರ ವಿಹೀನರು. ಊಟ, ನಿದ್ರೆ ಮತ್ತು ಮೈಥುನ – ಇದೆ ಜೀವನ ಎಂದೆಲ್ಲ ಬರೆದುಕೊಂಡಿದ್ದಾರೆ. ಒಟ್ಟಾರೆ ಅಂದು ಬ್ರಿಟಿಷರು ಈ ಕಪ್ಪು ವರ್ಣೀಯರನ್ನು ಮನುಷ್ಯರಂತೆ ಪರಿಗಣಿಸಿದ್ದೇ ಇಲ್ಲ. ಮಂಗನಿಂದ ಮಾನವರಾಗುವ ಮಧ್ಯದವರೆಂದರೆ ಈ ಕಪ್ಪು ವರ್ಣೀಯರು ಎನ್ನುವುದು ಅವರ ಗಟ್ಟಿ ಅಮಾನವೀಯ ನಿಲುವಾಗಿತ್ತು.

ಕಪ್ಪು ವರ್ಣೀಯರೆಂದರೆ ಅವರೆಲ್ಲ ಬ್ರಿಟಿಷರಿಗೆ ವಾ-ನರರು. ಅವರು ಪೇಪರಿನಲ್ಲಿ ಸೌಜನ್ಯಕ್ಕೆ ಕೂಡ ಈ ಕಪ್ಪು ವರ್ಣೀಯರನ್ನು ಮನುಷ್ಯರೆಂದು ಸಂಬೋಧಿಸು ತ್ತಿರಲಿಲ್ಲ. ಅದೆಲ್ಲ ನಿಮಗೆ ತಿಳಿದ ಇತಿಹಾಸವೇ ಬಿಡಿ. 1833. ಇಂಗ್ಲೆಂಡ್ ಬಾಹುಳ್ಯ ಅತ್ಯುನ್ನತ ಸ್ಥಿತಿಯಲ್ಲಿದ್ದ ಸಮಯದಲ್ಲಿ, ಅವರ ಆಕ್ರಮಣಕಾರಿ ನಡೆಗಳು ಕೂಡ ಅಷ್ಟೇ ತೀವ್ರಗತಿಯಲ್ಲಿದ್ದವು. ಹೊಸ ನೆಲ, ಹೊಸ ಟೇಷನ್ನುಗಳು, ಕೆಲಸಕ್ಕೆ ಆಫ್ರಿಕಾದ ಗಟ್ಟಿ ಮುಟ್ಟು ಕಪ್ಪುವರ್ಣೀಯರು. ಅವರನ್ನು ಪ್ರಾಣಿಗಳಂತೆ ದುಡಿಸಿ ಕೊಳ್ಳುವುದು, ಅತ್ಯಾಚಾರ, ದೌರ್ಜನ್ಯ ಹೀಗೆ ಎಲ್ಲ ತೆರನಾದ ಅನಾಚಾರ. ಇದೆಲ್ಲ ಇಂಗ್ಲೆಂಡಿನ ಪ್ರಗತಿಪರ ಉದಾರವಾದಿಗಳಿಗೆ ಆಗಿಬರುತ್ತಿರಲಿಲ್ಲ. ಕ್ರಮೇಣ ಈ ಲಿಬೆರಲ್ ಗಳು ಆಗಿನ ಸ್ಲೇವ್ – ಜೀತ ಪದ್ಧತಿಯನ್ನು ನಿಲ್ಲಿಸುವಂತೆ ಇಂಗ್ಲೆಂಡಿನಲ್ಲಿ ಗಲಾಟೆಯೆಬ್ಬಿಸಿದರು. ಈ ಗಲಾಟೆಗಳೂ ಸೇರಿದಂತೆ ಇನ್ನಷ್ಟು ಕಾರಣಕ್ಕೆ ಆಗ ಇಂಥದ್ದೊಂದು ಮನುಷ್ಯನ ಇತಿಹಾಸದ ಅತ್ಯಂತ, ಪರಮ ಕ್ರೌರ್ಯದ ಪದ್ಧತಿಗೆ – ಒಂದಿಷ್ಟು ಅಂಕುಶಗಳು ಬಿದ್ದವು.

ಅಲ್ಲಿಂದ ಮುಂದಿನ ಐದುವರ್ಷಗಳಲ್ಲಿ ಹೀಗೆ ವಸಾಹತುಗಳ ಪ್ಲಾಂಟೇಷನ್ನುಗಳಲ್ಲಿ ಪುಕ್ಸಟ್ಟೆಯಾಗಿ ಜೀತಕ್ಕಿದ್ದ ಕಪ್ಪು ವರ್ಣೀಯ ಜೀತದಾಳುಗಳನ್ನು ಬ್ರಿಟಿಷ್ ಪ್ಲಾಂಟೇಷನ್ ಒಡೆಯರು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಸಕ್ಕರೆಗೆ ಎಲ್ಲಿಲ್ಲದ ಬೆಲೆಯಿದ್ದ ಸಮಯವದು. ಕೆರಿಬ್ಬಿಯನ್ ದ್ವೀಪಗಳಲ್ಲಿ, ಫಿಜಿ, ಗಯಾನಾ, ಟ್ರಿನಿಡಾಡ್ ಅಂಡ್ ಟೊಬ್ಯಾಗೋ, ಜಮೈಕಾ ಮೊದಲಾದ ಜಾಗದಲ್ಲಿ ಯಥೇಚ್ಛ ಕಬ್ಬು ಪ್ಲಾಂಟೇಷನ್ನುಗಳಿದ್ದವು. ಕಪ್ಪು ವರ್ಣೀಯ ಜೀತದಾಳು ಗಳಿಲ್ಲದೆ ಅದನ್ನು ನಡೆಸಲು ಸಾಧ್ಯವೇ ಇರಲಿಲ್ಲ. ಇಂಥದ್ದೊಂದು ಇಡೀ ಇಂಗ್ಲಿಷ್ ಆರ್ಥಿಕತೆ ನಿಂತದ್ದೇ ಈ ಸ್ಲೇವ್ ಪದ್ಧತಿಯಿಂದಾಗಿ – ಈಗ ಅದನ್ನೇ ಕಳೆದುಕೊಳ್ಳುವ
ಸ್ಥಿತಿ. ಜೀತ ಪದ್ಧತಿ ಅಂತ್ಯಗೊಳ್ಳುವುದರಿಂದ ಕಪ್ಪು ವರ್ಣೀಯರ ಈ ಖಾಲಿಯಾಗುವ ಸ್ಥಾನವನ್ನು ಯಾರಾದರೂ ತುಂಬಲೇಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಆಗ ಈ ಪ್ಲಾಂಟೇಷನ್ ಓರ್ನ ಗಳ ಮತ್ತು ಬ್ರಿಟಿಷ್ ಸರಕಾರದ ಕೆಲ ಪ್ರಬಲ ಮಂತ್ರಿಗಳ ಕಣ್ಣು ಬಿದ್ದದ್ದು ಭಾರತೀಯರ ಮೇಲೆ.

ಕಪ್ಪುವರ್ಣೀಯರ ಜೀತದ ಪದ್ಧತಿಯನ್ನು ತೆರವುಗೊಳಿಸಲು ಮುಂದಾದ ಅದೇ ವ್ಯವಸ್ಥೆ ಭಾರತೀಯರನ್ನು ಆ ಸ್ಥಾನಕ್ಕೆ ತುಂಬಿಸಲು ಅನುವು ಮಾಡಿಕೊಟ್ಟಿತ್ತು. ಆಗ ಹುಟ್ಟಿಕೊಂಡದ್ದೇ ಭಾರತೀಯರ ಒಪ್ಪಂದದ ವ್ಯವಸ್ಥೆ. ವ್ಯಕ್ತಿಯ ಒಪ್ಪಿಗೆಯ ಮೇರೆಗೆ – ಜೀತಕ್ಕೊಡ್ಡುವ ವಿನೂತನ ಮೋಸದ ವ್ಯವಸ್ಥೆ. ಹತ್ತೊಂಬತ್ತನೇ ಶತಮಾನದ ಆದಿಯಲ್ಲಿ ಕೋಲತ್ತಾದಿಂದ ಕೆಲಸದಾಳುಗಳನ್ನು ಬ್ರಿಟಿಷರೇ ಮಾಡಿಕೊಂಡ ಕಾನೂನಿನ ಅಡಿಯಲ್ಲಿ ವ್ಯವಸ್ಥಿತಿಯವಾಗಿ ತಮ್ಮ ವಸಾಹತುಗಳಾದ
ದಕ್ಷಿಣ ಆಫ್ರಿಕಾ, ಮಾರಿಷಸ್, ಫಿಜಿ, ಕೆರಬ್ಬಿಯನ್ ದ್ವೀಪಗಳು ಹೀಗೆ ಹತ್ತಾರು ಜಾಗಕ್ಕೆ ಭಾರತೀಯ ಕೂಲಿಗಳನ್ನು ಒಯ್ಯುವ ಎಲ್ಲ ತಯಾರಿ ನಡೆಯಿತು.

ಕೋಲ್ಕತಾ, ಬಿಹಾರ, ಉತ್ತರಪ್ರದೇಶ, ಜಾರ್ಕಂಡ್ ಮೊದಲಾದ ಪ್ರದೇಶಗಳಲ್ಲಿ ಬ್ರಿಟಿಷ್ ಏಜೆಂಟ್ (ಭಾರತೀಯರು ಕೂಡ ಈ ರೀತಿಯ ಏಜೆಂಟರು ಗಳಾ ಗಿದ್ದರು)ಗಳು ಹಳ್ಳಿಗಳ ಬೀದಿಗಳಲ್ಲಿ ಓಡಾಡುತ್ತಿದ್ದ ನಿರುದ್ಯೋಗ ಯುವಕರನ್ನು ನಿಲ್ಲಿಸಿ – ಹೆಚ್ಚಿನ ಹಣವನ್ನು ಗಳಿಸುವ ಕೆಲಸ ಕೊಡುವುದಾಗಿ ನಂಬಿಸಿ ಅವರನ್ನು ಪುಸಲಾಯಿಸಿದರು. ಹೀಗೆ ಹಳ್ಳಿ – ಹಳ್ಳಿಗಳಿಂದ ಕರೆತಂದ ಅವರನ್ನೆಲ್ಲ ಲಖನೌದಲ್ಲಿ ಗುಂಪು ಹಾಕಲಾಯಿತು. ಅಲ್ಲಿ ಇದೇ ರೀತಿ ಬೇರೆ ಬೇರೆ ಪ್ರದೇಶದಿಂದ ಬಂದವರನ್ನೆಲ್ಲ ಗುಂಪಾಗಿಸಿ ಆ ದೊಡ್ಡ ಗುಂಪನ್ನು ಫೈಜಾಬಾದ್ ಗೆ – ನಂತರದಲ್ಲಿ ಕೋಲ್ಕತಾಗೆ ಒಯ್ಯಲಾಯಿತು.

ಅಲ್ಲಿ ಇನ್ನೊಂದಿಷ್ಟು ಜಾಗದಿಂದ ಇಂಥದ್ದೇ ಮೋಸಕ್ಕೊಳಗಾಗಿ ಬಂದವರಿದ್ದರು. ಅವರೆಲ್ಲರ ಬಳಿ ಕಾಗದವೊಂದಕ್ಕೆ ಮೊದಲು ಸಹಿ ಹಾಕಿಸಿಕೊಳ್ಳಲಾಯಿತು. ಬ್ರಿಟಿಷರು ಅವರ ಮುಂದಿಟ್ಟು ಹೆಬ್ಬೆಟ್ಟು ಒತ್ತಿಸಿಕೊಂಡ ಪೇಪರಿನಲ್ಲಿ, ತಮ್ಮ ಸಂಪೂರ್ಣ ಸ್ವಾತಂತ್ರ್ಯ ಮತ್ತು ಜೀವನವನ್ನೇ ಬರೆದುಕೊಡುತ್ತಿದ್ದೇವೆ ಎಂದು ಆ ಕ್ಷಣ ದಲ್ಲಿ ಅವರ್ಯಾರಿಗೂ ತಿಳಿದಿರಲಿಲ್ಲ. 1838 – ಕೋಲ್ಕತಾದ ಬಂದರಿನಿಂದ ಈ ರೀತಿ ಮೋಸದಿಂದ ಒಪ್ಪಿಸಿದ ಮೊದಲ ಗುಂಪಿನ ನಾಲ್ಕುನೂರು ಜನರನ್ನು ಹಡಗಿಗೆ ಹತ್ತಿಸಲಾಯಿತು.

ಐದು ವರ್ಷದ ದುಡಿಮೆ – ಆಮೇಲೆ ಶ್ರೀಮಂತರಾಗಿ ತಮ್ಮ ಊರಿಗೆ ಮರಳಬಹುದು ಎಂಬ ಆಸೆ. ಅವರನ್ನು ಬ್ರಿಟಿಷರು ಕರೆಯುತ್ತಿದ್ದುದು ಇಂಡಿಯನ್ ಕೂಲಿ ಗಳೆಂದು. ಅವರೆಲ್ಲರಿಗೆ ಎಲ್ಲಿಗೆ ಹೊಗುತ್ತಿದ್ದೇವೆ – ಪ್ರಯಾಣ ಎಷ್ಟು ದೂರ ಎಂಬ ಅಂದಾಜೇ ಆ ಕ್ಷಣ ಇರಲಿಲ್ಲ. ಅವರನ್ನು ಹೊತ್ತ ಹಡಗು ಹೊರಟದ್ದು ಸೀದಾ ದಕ್ಷಿಣ ಅಮೆರಿಕಕ್ಕೆ – ಬ್ರಿಟಿಷ್ ಗಾಯಾನಾದ ಡೆಮರೇರಾಕ್ಕೆ. ಹೀಗೆ ಮೊದಲ ಹಡಗಿನಲ್ಲಿ ಬರೋಬ್ಬರಿ ಮೂರು ತಿಂಗಳುಗಳ ಸಮುದ್ರಯಾನ. ಊರನ್ನೇ ದಾಟಿ ಹೋಗದ ಅದೆಲ್ಲ ಯುವಕರನ್ನು ಜಗತ್ತಿನ ಇನ್ನೊಂದು ಖಂಡಕ್ಕೆ ಅನಾಮತ್ತು ಒಯ್ಯುವ ವ್ಯವಸ್ಥೆಯಾಯಿತು.

ಅವರಲ್ಲಿ ಯಾರಿಗೂ ದೇಶ – ತಮ್ಮ ನೆಲ ಬಿಟ್ಟು ಶಾಶ್ವತವಾಗಿ ಹೋಗುವ ಇರಾದೆ ಒಂಚೂರೂ ಇರಲಿಲ್ಲ. ಅಸಲಿಗೆ ಇದೊಂದು ದೊಡ್ಡ ಮೋಸ ಎನ್ನುವ
ಕಿಂಚಿತ್ತೂ ಅಂದಾಜು ಕೂಡ ಈ ಯುವಕರಿಗಿರಲಿಲ್ಲ. ಕಿಕ್ಕಿರಿದು ತುಂಬಿದ್ದ ಹಡಗು. ಹಡಗಿನಲ್ಲಿ ಎಲ್ಲರೂ ಭಾರತೀಯರೇ ಆಗಿದ್ದರೂ ಅವರೆಲ್ಲ ಸಂಬಂಧಿಗಳಲ್ಲ.
ದೇಶದ ಬೇರೆ ಬೇರೆ ರಾಜ್ಯದ, ಊರುಗಳಿಂದ ಬಂದವರು. ಅಲ್ಲಿ ಬೇರೆ ಬೇರೆ ಭಾಷೆ ಮಾತನಾಡುವ, ವಯೋಮಾನದ, ಧರ್ಮ, ಜಾತಿಯವರಿದ್ದರು. ಹಾಗಾಗಿ ಅವರ ನಡುವೆ ಮಾತುಕತೆ ಕೂಡ ಅಷ್ಟಿರಲಿಲ್ಲ. ಬಹುತೇಕರು ಮೂರು ತಿಂಗಳ, ಒಂಭತ್ತು ಸಾವಿರ ಮೈಲಿಯ ಪ್ರಯಾಣದ ಮಧ್ಯದ ಮಾನಸಿಕ ಸ್ತೀಮಿತ ಕಳೆದುಕೊಂಡರು. ಅಲ್ಲಿ ಸೇರಿದ್ದ ಹೆಚ್ಚಿನವರಿಗೆ ಸಮುದ್ರವೆಂದರೆ ಅದರ ಪರಿಕಲ್ಪನೆ ಕೂಡ ಇರಲಿಲ್ಲ.

ಹೀಗೆ ಮೊದಲ ಹಡಗಿನಲ್ಲಿ ಹೊರಟ ನಾಲ್ಕುನೂರು ಜನರಲ್ಲಿ ಸುಮಾರು 140 ಮಂದಿ ಮಾರ್ಗ ಮಧ್ಯದ, ನಡು ಸಮುದ್ರದಲ್ಲಿ ಹಡಗಿನಲ್ಲಿ ಸತ್ತು ಹೋದರು. ಅವರ ಹೆಣವನ್ನು ಬ್ರಿಟಿಷರು ಸಮುದ್ರಕ್ಕೆ ಎಸೆದು ಅಂತ್ಯಸಂಸ್ಕಾರ ಮಾಡಿ – ಮೀನಿಗೆ ಊಟ ಹಾಕಿ ಪುಣ್ಯ ಕಟ್ಟಿಕೊಂಡರು. (ಮುಂದಿನ ವಾರಕ್ಕೆ)