Saturday, 21st September 2024

ವೃದ್ಧರನ್ನು ಕಂಗೆಡಿಸುವ ಪಾರ್ಕಿನ್ಸನ್ ಕಾಯಿಲೆ

ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್

ಮ ನುಷ್ಯನ ಇಳಿ ವಯಸ್ಸಿನಲ್ಲಿ ಹಲವಾರು ಕಾಯಿಲೆಗಳು ಬರುತ್ತವೆ. ಅದರಲ್ಲಿಯೂ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಬಂದರೆ ಆತನ ಜೀವನ ಸ್ವಲ್ಪ ಕಷ್ಟಕರವಾಗುತ್ತದೆ. ಅಂತಹಾ ಒಂದು ಕಾಯಿಲೆ ಪಾರ್ಕಿನ್ಸನ್ ಕಾಯಿಲೆಯ ಬಗ್ಗೆ ಗಮನ ಹರಿಸೋಣ.

ಮೇಲೆ ತಿಳಿಸಿದಂತೆ ಇದು ಮೆದುಳಿನ ಕಾಯಿಲೆ. ಇದರಲ್ಲಿ ಮನುಷ್ಯನ ಕೈ ಕಾಲುಗಳು ಅದುರುತ್ತವೆ, ಗಟ್ಟಿಯಾಗುತ್ತವೆ. ನಡೆದಾಡು ವುದು ಕಷ್ಟವಾಗುತ್ತದೆ. ಹಾಗೆಯೇ ಓಡಾಡುವಾಗ ನಿಯಂತ್ರಣ ತಪ್ಪುತ್ತದೆ. ಹಾಗೆಯೇ ಒಂದರಿಂದ ಮತ್ತೊಂದು ಕ್ರಿಯೆಗೆ ಸಮನ್ವ ಯಿಸುವುದು ಅಥವಾ ಸಂಘಟನೆ ಮಾಡುವುದು ಕಷ್ಟವಾಗುತ್ತದೆ. ಈ ಕಾಯಿಲೆಯ ರೋಗ ಲಕ್ಷಣಗಳು ನಿಧಾನವಾಗಿ ಆರಂಭ ವಾಗುತ್ತವೆ, ಕ್ರಮೇಣ ರೋಗ ಲಕ್ಷಣಗಳು ಜಾಸ್ತಿಯಾಗುತ್ತಾ ಬರುತ್ತವೆ. ಕಾಯಿಲೆ ಮುಂದುವರಿಯುತ್ತಾ ಬಂದ ಹಾಗೆ ಆತನಿಗೆ ನಡೆಯುವುದು ಮತ್ತು ಮಾತನಾಡುವುದು ಕಷ್ಟವಾಗುತ್ತಾ ಬರುತ್ತದೆ. ಹಾಗೆಯೇ ಆತನಿಗೆ ಮಾನಸಿಕ ತೊಂದರೆ ಕಾಣಿಸಿಕೊಂಡು ಆತನ ವರ್ತನೆಯಲ್ಲಿ ಬದಲಾವಣೆ ಕಂಡುಬರಬಹುದು. ಹಾಗೆಯೇ ನಿದ್ರೆಯ ಕ್ರಮದಲ್ಲಿ ವ್ಯತ್ಯಾಸವಾಗ ಬಹುದು. ಕೆಲವರು ಮನೋವೈಕಲ್ಯಕ್ಕೆ ಒಳಗಾಗುತ್ತಾರೆ.

ಕೆಲವರಲ್ಲಿ ನೆನಪಿನ ಸಮಸ್ಯೆ ಆರಂಭವಾಗುತ್ತದೆ, ಮತ್ತೆ ಕೆಲವರಲ್ಲಿ ವಿಪರೀತ ಸುಸ್ತಾಗಬಹುದು. ಗಂಡಸರಲ್ಲಿ ಮತ್ತು ಮಹಿಳೆ
ಯರಲ್ಲಿ ಇಬ್ಬರಲ್ಲೂ ಈ ಕಾಯಿಲೆ ಕಾಣಿಸಿಕೊಳ್ಳಬಹುದಾದರೂ ಹೆಚ್ಚಿನ ಸಂದರ್ಭದಲ್ಲಿ ಪುರುಷರಲ್ಲಿಯೇ ಹೆಚ್ಚು ಕಂಡು ಬರುತ್ತದೆ. ಸಾಮಾನ್ಯವಾಗಿ ಇದು ವಯಸ್ಸಾದವರಲ್ಲಿ ಕಂಡು ಬರುವ ಕಾಯಿಲೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಕಾಯಿಲೆ 60 ವರ್ಷದ ನಂತರ ಕಾಣಿಸಿಕೊಳ್ಳುವುದಾದರೂ 5 – 10% ಸಂದರ್ಭಗಳಲ್ಲಿ 50 ವರ್ಷದ ಮೊದಲೇ ಕಾಣಿಸಿಕೊಳ್ಳುವ ಸಾಧ್ಯತೆ
ಇದೆ. ಕಡಿಮೆ ವಯಸ್ಸಿನಲ್ಲಿ ಕಂಡು ಬರುವ ಪಾರ್ಕಿನ್ಸನ್ ಕಾಯಿಲೆಗೆ ಸಾಮಾನ್ಯವಾಗಿ ಆತನ ಹಿಂದಿನವರಲ್ಲಿ ಉದಾಹರಣೆ ಗಳಿರುತ್ತವೆ. ಕೆಲವರಲ್ಲಿ ಜೀನ್ ಗಳ ಬದಲಾವಣೆಯಿಂದಲೂ ಕಾಯಿಲೆ ಬಂದಿರುವ ಸಾಧ್ಯತೆಗಳವೆ.

ಪಾರ್ಕಿನ್ಸನ್ ಕಾಯಿಲೆ ಬರಲು ಏನು ಕಾರಣ? ಮೆದುಳಿನಲ್ಲಿರುವ ನಿರ್ದಿಷ್ಟ ನರಕೋಶಗಳು ಅದರಲ್ಲಿಯೂ ವ್ಯಕ್ತಿಯ ಚಲನೆ ಯನ್ನು ನಿಯಂತ್ರಿಸುವ ನರಕೋಶಗಳು ತೊಂದರೆಗೆ ಒಳಗಾದಾಗ ಅಥವಾ ಸತ್ತಾಗ ಈ ಕಾಯಿಲೆ ಬರುತ್ತದೆ. ಈ ನರಕೋಶಗಳು ಸಾಮಾನ್ಯವಾಗಿ ಡೋಪಮೀನ್ ಎಂಬ ಮೆದುಳಿನ ರಾಸಾಯನಿಕವನ್ನು ಉತ್ಪಾದನೆ ಮಾಡುತ್ತವೆ. ನರಕೋಶಗಳು  ಶಿಥಿಲ ಗೊಳ್ಳುತ್ತಾ ಬಂದ ಹಾಗೆ ಅಥವಾ ನಾಶವಾದ ನಂತರ ಸಹಜವಾಗಿ ಡೋಪಮೀನ್ ರಾಸಾಯನಿಕದ ಉತ್ಪಾದನೆ  ಕುಂಠಿತಗೊಳ್ಳು ತ್ತದೆ. ಪರಿಣಾಮ ಎಂದರೆ ವ್ಯಕ್ತಿಯ ಚಲನೆಯ ಸಮಸ್ಯೆಗಳು ಆರಂಭವಾಗುತ್ತವೆ. ಡೋಪಮೀನ್ ಉತ್ಪಾದಿಸುವ ನರಕೋಶಗಳು ಈ ಕಾಯಿಲೆಯಲ್ಲಿ ಯಾವ ಕಾರಣದಿಂದ ಶಿಥಿಲಗೊಳ್ಳುತ್ತವೆ ಅಥವಾ ಸಾಯುತ್ತವೆ ಎಂಬ ಬಗ್ಗೆ ವಿಜ್ಞಾನಿಗಳಿಗೂ ಸ್ಪಷ್ಟವಾಗಿ
ಗೊತ್ತಿಲ್ಲ.

ಪಾರ್ಕಿನ್ಸನ್ ಕಾಯಿಲೆಗೆ ಒಳಗಾದವರಲ್ಲಿ ನಾರ್ ಎಪಿನೆಫ್ರೀನ್ ಹುಟ್ಟು ಹಾಕುವ ನರಗಳ ಅಂಚುಗಳು ಸಹಿತ ನಷ್ಟವಾಗುತ್ತವೆ. ಈ ನಾರ್ ಎಪಿನೆಫ್ರೀನ್ ರಾಸಾಯನಿಕವು ಸಿಂಪಥಿಟೆಕ್ ನರವ್ಯೂಹದ ರಾಸಾಯನಿಕ ಮೆಸೆಂಜರ್. ಈ ಸಿಂಪಥಿಟೆಕ್ ನರವ್ಯೂಹವು
ದೇಹದ ಹಲವು ಅನಿಯಂತ್ರಿತ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಉದಾಹರಣೆಗೆ ಹೃದಯದ ಬಡಿತದ ಗತಿ ಮತ್ತು ರಕ್ತದೊತ್ತಡ. ಹಾಗಾಗಿ ಪಾರ್ಕಿನ್ಸನ್ ಕಾಯಿಲೆಯಲ್ಲಿ ಸುಸ್ತಾಗುವುದು, ರಕ್ತದೊತ್ತಡ ಏರುಪೇರಾಗುವುದು, ಜೀರ್ಣಾಂಗ ವ್ಯೂಹದಲ್ಲಿ ಆಹಾರ ಚಲನೆ ನಿಧಾನವಾಗುವುದು, ಹಾಗೆಯೇ ವ್ಯಕ್ತಿ ಮಲಗಿದ ಅಥವಾ ಕುಳಿತ ಭಂಗಿಯಿಂದ ಎದ್ದು ನಿಂತುಕೊಂಡಾಗ ರಕ್ತದೊತ್ತಡವು ತೀವ್ರವಾಗಿ ಕಡಿಮೆಯಾಗಿ ಬಿಡುತ್ತದೆ.

ಈ ಕಾಯಿಲೆ ಬಂದ ವ್ಯಕ್ತಿಗಳ ಮೆದುಳಿನ ಜೀವಕೋಶಗಳಲ್ಲಿ ಲೆವಿ ಬಾಡಿಗಳು ಎಂಬ ಆಲ್ಫಾ ಸೈನುಕ್ಲೀನ್ ಪ್ರೋಟೀನ್‌ನ ಅಸಹಜ ಗುಂಪುಗಳು ಕಂಡುಬರುತ್ತವೆ. ವಿಜ್ಞಾನಿಗಳು ಈ ಲೆವಿ ಬಾಡಿಗಳ ಬಗ್ಗೆ ಮತ್ತು ಈ ಕಾಯಿಲೆ ಹಿಂದಿನ ತಲೆಮಾರಿನ ವ್ಯಕ್ತಿಗಳಲ್ಲಿ ರುವುದರ ಬಗ್ಗೆ ಸಂಬಂಧವಿದೆಯಾ ಎಂಬುದರ ಬಗ್ಗೆ ತಿಳಿದುಕೊಳ್ಳಲು ಯತ್ನಿಸುತ್ತಿದ್ದಾರೆ. ಕಾಯಿಲೆ ಬಂದ ಕೆಲವು ವ್ಯಕ್ತಿಗಳ ಹಿಂದಿನ ತಲೆಮಾರಿನವರಲ್ಲಿ ಈ ಕಾಯಿಲೆ ಕಂಡು ಬಂದಿದ್ದರೂ ಎಲ್ಲ ಕಾಯಿಲೆ ಬಂದವರಲ್ಲಿನ ಹಿಂದಿನ ತಲೆಮಾರಿನವರಲ್ಲಿ ಈ
ಕಾಯಿಲೆ ಇದ್ದಿರಲೇ ಬೇಕು ಎಂಬ ನಿಯಮವೇನೂ ಇಲ್ಲ.

ಹೆಚ್ಚಿನ ಸಂಶೋಧಕರು ಈ ಕಾಯಿಲೆ ವ್ಯಕ್ತಿಯ ಜೆನೆಟಿಕ್ ಅಂಶಗಳಿಂದ ಹಾಗೂ ಆತನ ಸುತ್ತಲಿನ ವಾತಾವರಣದ ಪ್ರಭಾವದಿಂದ ಈ ಕಾಯಿಲೆ ಬರಬಹುದೆಂದು ತಿಳಿಯುತ್ತಾರೆ. ವಾತಾವರಣದ ಪ್ರಭಾವ ಎಂದರೆ ಯಾವುದಾದರೂ ವಿಷ ವಸ್ತುಗಳಿಗೆ ಒಳಗಾಗಿರ ಬಹುದು ಎಂದು ಅವರ ಅಭಿಮತ.

ಪಾರ್ಕಿನ್ಸನ್ ಕಾಯಿಲೆಯ ಮುಖ್ಯ 4 ಲಕ್ಷಣಗಳು: 1. ಕೈಗಳು, ಕಾಲುಗಳು, ದವಡೆ ಮತ್ತು ತಲೆಯ
ಭಾಗದಲ್ಲಿ ನಡುಕದ ಲಕ್ಷಣಗಳು.

2. ಕೈಕಾಲುಗಳು ಮತ್ತು ಸೊಂಟ ಜಡತ್ವ ಹೊಂದುವುದು.

3.ವ್ಯಕ್ತಿಯ ದೇಹದ ಚಲನೆ ನಿಧಾನಗೊಳ್ಳುವುದು.

4. ವ್ಯಕ್ತಿ ನಡೆದಾಗುವಾಗ ಸಮತೋಲನ ತಪ್ಪುತ್ತದೆ, ಪರಿಣಾಮವಾಗಿ ವ್ಯಕ್ತಿ ಎಡವಿ ಬೀಳುತ್ತಾನೆ.

ಇನ್ನಿತರ ಲಕ್ಷಣಗಳೆಂದರೆ – ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ ಮತ್ತು ಹಲವು ಮಾನಸಿಕ ಲಕ್ಷಣಗಳನ್ನು ತೋರಿಸ ಬಹುದು. ಆಹಾರವನ್ನು ಜಗಿಯಲು ಅಥವಾ ನುಂಗಲು ಕಷ್ಟವಾಗುತ್ತದೆ. ವ್ಯಕ್ತಿಯು ಮಾತನಾಡುವಾಗ ಸ್ಪಷ್ಟತೆ ಕಡಿಮೆ ಯಾಗುತ್ತಾ ಬರುತ್ತದೆ. ಮೂತ್ರದ ಸಮಸ್ಯೆ ಬರಬಹುದು. ಹಾಗೆಯೇ ಮಲಬಧ್ದತೆ ಕಾಣಿಸಿಕೊಳ್ಳಬಹುದು. ಚರ್ಮದಲ್ಲಿ ಹಲವು ರೀತಿಯ ತೊಂದರೆಗಳು ಕಾಣಿಸಿಕ್ಳೊಬಹುದು, ನಿದ್ರೆಯಲ್ಲಿ ತೀವ್ರ ರೀತಿಯ ವ್ಯತ್ಯಾಸವಾಗಬಹುದು. ಈ ಕಾಯಿಲೆಯ ಗುಣಲಕ್ಷಣ ಗಳು ಹಾಗೂ ಕಾಯಿಲೆಯ ಮುಂದುವರಿಕೆ ಅಥವಾ ಪ್ರಗತಿ ಬೇರೆ ಬೇರೆಯವರಲ್ಲಿ ಬೇರೆ ಬೇರೆ ರೀತಿಯಲ್ಲಿರುತ್ತದೆ. ಈ ಕಾಯಿಲೆಯ ಗುಣಲಕ್ಷಣಗಳನ್ನು ಆರಂಭದಲ್ಲಿ ಬಹಳಷ್ಟು ಜನರು ವಯಸ್ಸಿನ ಸಾಮಾನ್ಯ ಪ್ರಭಾವವಿರಬಹುದೆಂದು ನಿರ್ಲಕ್ಷ್ಯ ಮಾಡುತ್ತಾರೆ.

ಹೆಚ್ಚಿನ ಸಂದರ್ಭಗಳಲ್ಲಿ ಆರಂಭದಲ್ಲಿ ಈ ಕಾಯಿಲೆಯನ್ನು ಗುರುತಿಸಲು ನಿರ್ದಿಷ್ಟ ಪರೀಕ್ಷೆಗಳು ಇಲ್ಲದ್ದರಿಂದ ಕಾಯಿಲೆ ಯನ್ನು ನಿಖರವಾಗಿ ಪತ್ತೆ ಹಚ್ಚುವುದು ಕಷ್ಟ. ಪಾರ್ಕಿನ್ಸನ್ ಕಾಯಿಲೆಯ ಆರಂಭಿಕ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿರುತ್ತವೆ, ನಿಧಾನವಾಗಿ ಕಾಯಿಲೆ ಆವರಿಸುತ್ತದೆ. ಉದಾಹರಣೆಗೆ ಅಂತಹ ವ್ಯಕ್ತಿಗೆ ಕೈ ಅಥವಾ ಕಾಲುಗಳಲ್ಲಿ ಕಡಿಮೆ ಪ್ರಮಾಣದ ನಡುಕ ಅಥವಾ ಕಂಪನ ಇರಬಹುದು. ಮತ್ತೆ ಕೆಲವರಿಗೆ ಕುರ್ಚಿಯಲ್ಲಿ ಕುಳಿತವರು ಅಲ್ಲಿಂದ ಏಳಲು ಕಷ್ಟವಾಗಬಹುದು. ಅಂತಹವರು ಮಾತನಾಡುವಾಗ ಅವರ ಧ್ವನಿ ಮೊದಲಿಗಿಂತ ಕೃಷವಾಗಿರಬಹುದು.

ಹಾಗೆಯೇ ಅವರ ಬರವಣಿಗೆ ನಿಧಾನವಾಗಬಹುದು ಮತ್ತು ಅಕ್ಷರಗಳು ಸ್ಪಷ್ಟವಿಲ್ಲದಿರಬಹುದು. ಕಾಯಿಲೆ ಬಂದ ವ್ಯಕ್ತಿಯಲ್ಲಿನ  ಬದಲಾವಣೆಗಳನ್ನು ಸ್ನೇಹಿತರು ಅಥವಾ ಕುಟುಂಬದ ಸದಸ್ಯರು ಮೊದಲಿಗೆ ಗಮನಿಸುತ್ತಾರೆ. ಹಾಗೆಯೇ ಅಂತಹ ವ್ಯಕ್ತಿಯ ಮುಖದಲ್ಲಿ ಭಾವನೆಗಳು ಇಲ್ಲದಿರುವುದನ್ನು ಗಮನಿಸಬಹುದು. ಹಾಗೆಯೇ ಆತನ ಕೈ ಮತ್ತು ಕಾಲುಗಳ ಚಲನೆಯಲ್ಲಿ
ವ್ಯತ್ಯಾಸವನ್ನು ಗಮನಿಸಬಹುದು. ಕೆಲವೊಮ್ಮೆ ಇಂತಹ ವ್ಯಕ್ತಿ ನಡೆಯುವಾಗ ವಿಶಿಷ್ಟ ರೀತಿಯ ‘ಪಾರ್ಕಿನ್ ಸೋನಿಯನ್ ನಡಿಗೆ ’ ಯನ್ನು ಅನುಸರಿಸಬಹುದು. ಅಂದರೆ ಅಂತಹ ವ್ಯಕ್ತಿ ನಡೆಯುವಾಗ ಮುಂದೆ ಬಾಗುತ್ತಾನೆ, ಚಿಕ್ಕ ಚಿಕ್ಕ ಹೆಜ್ಜೆ ಹಾಕಿ ಗಡಿಬಿಡಿ
ಯಲ್ಲಿ ನಡೆಯುವಂತೆ ನಡೆಯುತ್ತಾನೆ. ಹಾಗೆಯೇ ನಡೆಯುವಾಗ ಆತನ ಕೈಯ ಚಲನೆ ಇರುವುದೇ ಇಲ್ಲ. ಕೆಲವರಲ್ಲಿ ಆರಂಭದ ಚಲನೆ ಅಥವಾ ನಂತರದ ನಡೆದಾಡುವಿಕೆ ತೀವ್ರ ರೀತಿಯಲ್ಲಿ ತ್ರಾಸದಾಯಕವಾಗಿರುತ್ತದೆ.

ಕಾಯಿಲೆಯ ಲಕ್ಷಣಗಳು ದೇಹದ ಒಂದು ಭಾಗದಲ್ಲಿ ಆರಂಭವಾಗುತ್ತದೆ. ಅಂದರೆ ಒಂದು ಭಾಗದ ಕೈ ಅಥವಾ ಕಾಲು ಕಾಯಿಲೆ ಯ ಲಕ್ಷಣ ತೋರಿಸುತ್ತದೆ. ಕಾಯಿಲೆ ಮುಂದುವರಿದ ಹಾಗೆ ಮತ್ತೊಂದು ಭಾಗದಲ್ಲಿಯೂ ಕಾಣಿಸಿಕೊಳ್ಳುತ್ತದೆ. ಹಾಗಿ ದ್ದರೂ, ದೇಹದ ಒಂದು ಭಾಗದಲ್ಲಿ ಕಾಯಿಲೆಯ ಲಕ್ಷಣಗಳು ಜಾಸ್ತಿ ಇರುತ್ತದೆ. ಕೆಲವರಲ್ಲಿ ಕಂಪನ ಅಥವಾ ನಡುಕ ಕಾಣಿಸಿಕೊಳ್ಳುವ ಮೊದಲೇ ನಿದ್ರೆಯ ತೊಂದರೆಗಳು, ಮಲಬದ್ಧತೆ, ವಾಸನೆ ಗುರುತಿಸುವುದು ಕಷ್ಟವಾಗುವುದು ಹಾಗೂ ಕಾಲು ಅನಿಯಮಿತವಾಗಿ ಆಚೀಚೆ ಆಗುತ್ತಿರುವುದು – ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಕಾಯಿಲೆ ಪತ್ತೆ ಹಚ್ಚುವಿಕೆ
ಹಲವು ಬೇರೆ ಕಾಯಿಲೆಗಳು ಸಹಿತ ಈ ಕಾಯಿಲೆಯ ಲಕ್ಷಣಗಳನ್ನೇ ಹೊಂದಿರಬಹುದು. ಅಂತಹ ಸಂದರ್ಭಗಳಲ್ಲಿ ಕಾಯಿಲೆ ಯನ್ನು ತಪ್ಪಾಗಿ ಅರ್ಥೈಸಲೂ ಬಹುದು. ಅಂತಹ ವೇಳೆಯಲ್ಲಿ ಕೆಲವು ವೈದ್ಯಕೀಯ ಪರೀಕ್ಷೆಗಳು ಮತ್ತು ಔಷಧಕ್ಕೆ ಪ್ರತಿಕ್ರಿಯೆ ಯು ಕಾಯಿಲೆಯನ್ನು ಪತ್ತೆ ಹಚ್ಚಲು ನೆರವಾಗಬಹುದು. ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ಬೇರೆಯೇ ಆಗಿರುವುದರಿಂದ ಈ ಕಾಯಿಲೆಯನ್ನು ನಿಖರವಾಗಿ ಆದಷ್ಟು ಬೇಗ ಕಂಡು ಹಿಡಿಯುವುದು ಅಷ್ಟೇ ಮುಖ್ಯ. ರಕ್ತ ಅಥವಾ ಪ್ರಯೋಗಾಲಯದ ನಿರ್ದಿಷ್ಟ ಪರೀಕ್ಷೆಗಳು ಈ ಕಾಯಿಲೆಯನ್ನು ಪತ್ತೆ ಹಚ್ಚಲು ಸದ್ಯಕ್ಕಿಲ್ಲ.

ವ್ಯಕ್ತಿಯ ಕಾಯಿಲೆಯ ಲಕ್ಷಣಗಳು ಹಾಗೂ ನರವ್ಯೂಹದ ಪರೀಕ್ಷೆ ಕಾಯಿಲೆ ಕಂಡು ಹಿಡಿಯುವಲ್ಲಿ ಸಹಾಯ ಮಾಡುತ್ತವೆ. ಚಿಕಿತ್ಸೆ ಆರಂಭಿಸಿದ ನಂತರ ಕಾಯಿಲೆ ಕಡಿಮೆಯಾಗುವುದು ಈ ಕಾಯಿಲೆಯೇ ಹೌದೆಂದು ತಿಳಿಸುತ್ತದೆ.

ಚಿಕಿತ್ಸೆ :1) ಮೆದುಳಿನಲ್ಲಿ ಡೋಪಮೀನ್ ಮಟ್ಟವನ್ನು ಹೆಚ್ಚಿಸುವ ಔಷಧಗಳು.

2) ದೇಹದಲ್ಲಿರುವ ಇತರ ಮೆದುಳಿನ ರಾಸಾಯನಿಕಗಳ ಮೇಲೆ ಪರಿಣಾಮ ಬೀರುವ ಔಷಧಗಳು.
3) ಕಾಯಿಲೆಯ ಮುಖ್ಯ ಲಕ್ಷಣಗಳನ್ನು ನಿಯಂತ್ರಿಸುವ ಔಷಧಗಳು ( ನಾನ್ ಮೋಟಾರ್ ಚಲನೆಗಳನ್ನು ನಿಯಂತ್ರಿಸುವ). ಈ ಕಾಯಿಲೆಯ ಮುಖ್ಯ ಔಷಧ ಎಂದರೆ ಲಿವಡೋಪಾ ಅಥವಾ ಎಲ್ ಡೋಪಾ. ನರಜೀವ ಕೋಶಗಳು ಈ ಲಿವಡೋಪಾ  ಉಪಯೋಗಿಸಿಕೊಂಡು ಡೋಪಮೀನ್ ರಾಸಾಯನಿಕವನ್ನು ತಯಾರಿಸುತ್ತವೆ.

ದೇಹದಲ್ಲಿ ಕುಂದುತ್ತಿರುವ ಡೋಪಮೀನ್ ಅನ್ನು ಸ್ವಲ್ಪವಾದರೂ ನಿಯಂತ್ರಿಸಲು ಇದು ಸಹಾಯಕವಾಗುತ್ತದೆ. ಸಾಮಾನ್ಯವಾಗಿ ಈ ಲಿವಡೋಪಾದ ಜೊತೆಗೆ ಕಾರ್ಬಿಡೋಪಾ ಎಂಬ ಔಷಧವನ್ನೂ ಕೊಡಲಾಗುತ್ತದೆ. ಈ ಕಾರ್ಬಿಡೋಪಾವು ಲಿವಡೋಪಾದ
ಪಾರ್ಶ್ವ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಲಿವಡೋಪಾದ ಪಾರ್ಶ್ವ ಪರಿಣಾಮಗಳೆಂದರೆ – ವಾಂತಿ ಬರುವ ಹಾಗೆ ಆಗುವುದು, ವಾಂತಿ ಬರುವುದು, ರಕ್ತದೊತ್ತಡ ಕಡಿಮೆಯಾಗುವುದು, ಒಂದು ರೀತಿಯ ಚಡಪಡಿಕೆ ಉಂಟಾಗುವು
ದು. ಲಿವಡೋಪಾ ತೆಗೆದುಕೊಳ್ಳುತ್ತಿರುವ ರೋಗಿಗಳು ವೈದ್ಯರ ಸಲಹೆ ಇಲ್ಲದೆ ಒಮ್ಮೆಲೇ ಈ ಔಷಧವನ್ನು ನಿಲ್ಲಿಸಲೇಬಾರದು. ಏಕೆಂದರೆ ಅಂತಹವರಲ್ಲಿ ವಿಪರೀತ ಗಂಭೀರ ಪರಿಣಾಮಗಳು ಕಾಣಿಸಿಕೊಳ್ಳಹುದು. ಅವೆಂದರೆ ಒಮ್ಮೆಲೇ ದೇಹದ ಚಲನೆ ನಿಂತು
ಬಿಡುವುದು, ಉಸಿರಾಟದ ತೀವ್ರ ತೊಂದರೆ ಆಗುವುದು. ಈ ಕಾಯಿಲೆಯಲ್ಲಿ ಉಪಯೋಗಿಸುವ ಇನ್ನಿತರ ಔಷಧಗಳೆಂದರೆ ಮೆದುಳಿನಲ್ಲಿ ಡೋಪ ಮೀನ್ ಪಾತ್ರವನ್ನು ನಿರ್ವಹಿಸಿಬಲ್ಲ ಡೋಪಮೀನ್ ಏಗೋನಿಸ್ಟ್ ಔಷಧಗಳು. ಮೆದುಳಿನಲ್ಲಿ ಡೋಪಮೀನ್ ಅನ್ನು ಛಿದ್ರ ಮಾಡುವ ಎನ್‌ಜೈಮ್ ಅನ್ನು ನಿಧಾನಗೊಳಿಸಲು ಸಹಾಯ ಮಾಡುವ ಮಾವೋ – ಬಿ ಇನ್
ಹಿಬಿಟರ್ಸ್ ಔಷಧಗಳು , ಡೋಪಮೀನ್ ಭಿನ್ನವಾಗಿಸುವ ಔಷಧ ಸಿ ಓಎಂಟಿ ಇನ್ ಹಿಬಿಟರ್‌ಗಳು. ಅಸಹಜ ಚಲನೆಯನ್ನು ನಿಯಂತ್ರಿಸಲು ಹಳೆಯ ಆಂಟಿ ವೈರಲ್ ಔಷಧವಾದ ಅಮಂಟಡೀನ್. ಹಾಗೆಯೇ, ನಡುಕ ಮತ್ತು ಮಾಂಸಖಂಡಗಳ ಗಡಸುತ ನವನ್ನು ಕಡಿಮೆ ಮಾಡಲು ಆಂಟಿಕೊಲಿನರ್ಜಿಕ್ ಔಷಧಗಳು.

ಮೆದುಳನ್ನು ಆಳವಾಗಿ ಸಂವೇದನೆಗೊಳಿಸುವುದು: ಔಷಧ ಚಿಕಿತ್ಸೆೆಗೆ ಸರಿಯಾಗಿ ಸ್ಪಂದಿಸದ ಪಾರ್ಕಿನ್ಸನ್ ರೋಗಿಗಳಲ್ಲಿ ಈ ಚಿಕಿತ್ಸೆಯನ್ನು ಮಾಡಲಾಗುತ್ತದೆ. ಇದೊಂದು ಆಪರೇಷನ್ ರೀತಿಯ ಚಿಕಿತ್ಸೆ. ಇದರಲ್ಲಿ ಮೆದುಳಿನ ಆಪರೇಷನ್ ಮಾಡಿ ಮೆದುಳಿ ನಲ್ಲಿ ಎಲೆಕ್ಟ್ರೋಡ್ ಗಳನ್ನು ಇರಿಸಲಾಗುತ್ತದೆ. ನಂತರ ಎದೆಯ ಭಾಗದಲ್ಲಿ ಇರಿಸಿದ ಎಲೆಕ್ಟ್ರಿಕ್ ಉಪಕರಣಕ್ಕೆ ಜೋಡಿಸ ಲಾಗುತ್ತದೆ. ಈ ಉಪಕರಣ ಮತ್ತು ಎಲೆಕ್ಟ್ರೋಡ್ಗಳು ಮೆದುಳನ್ನು ಸಂವೇದನಗೊಳಿಸಿ ಪಾರ್ಕಿನ್ಸನ್ ಕಾಯಿಲೆಯ ನಡುಕ, ಅದುರುವುದು, ಚಲನೆಯಲ್ಲಿ ನಿಧಾನಗೊಳ್ಳುವುದು ಹಾಗೂ ಮಾಂಸಖಂಡಗಳು ಬಿಗಿ ಹಿಡಿದುಕೊಳ್ಳುವುದು – ಇದನ್ನೆಲ್ಲಾ ತಪ್ಪಿಸಲು ಸಹಾಯ ಮಾಡುತ್ತದೆ.

ಜೊತೆಗೆ ಸೂಕ್ತ ಆಹಾರ, ಮಾಂಸಖಂಡಗಳಿಗೆ ಸೂಕ್ತ ವ್ಯಾಯಾಮ – ಇವನ್ನೆಲ್ಲಾ ಮಾಡಿಸಲಾಗುತ್ತದೆ. ಪಾರ್ಕಿನ್ಸನ್ ಕಾಯಿಲೆಯ ಬಗೆಗೆ ಇತ್ತೀಚಿನ ಬೆಳವಣಿಗೆಗಳು: ಈ ಕಾಯಿಲೆಯಲ್ಲಿ ಬೇಗ ಪತ್ತೆ ಹಚ್ಚುವುದು ತುಂಬಾ ಮುಖ್ಯ. ಆ ದಿಸೆಯಲ್ಲಿ ಇತ್ತೀಚಿಗೆ ಜಗತ್ತಿ ನಾದ್ಯಂತ ಹಲವಾರು ಸಂಶೋಧನೆಗಳನ್ನು ಕೈಗೊಳ್ಳಲಾಗಿದೆ. ಅಂತಹಾ ಒಂದು ಮುಖ್ಯ ಸಂಶೋಧನೆಯತ್ತ ಗಮನ ಹರಿಸೋಣ.

ಇತ್ತೀಚೆಗೆ ಅಮೆರಿಕನ್ ಅಕಾಡೆಮಿ ಆಫ್ ನ್ಯೂರಾಲಜಿಯು ಈ ಸಂಶೋನೆಯ ಬಗ್ಗೆೆ ಪ್ರಕಟಿಸಿದೆ. ಇದು ಕಾರ್ಡಿಯೋಸೆಂಟ್ರೋ ಟಿಸಿನೋ ಮತ್ತು ಇ ಓ ಸಿ ನ್ಯೂರೋಸೆಂಟರ್ – ಈ ಸಂಸ್ಥೆಗಳು ಒಟ್ಟಾಗಿ ಕೈಗೊಂಡ ಸಂಶೋಧನೆ. ಇದರಲ್ಲಿ ರಕ್ತದಲ್ಲಿನ ಪ್ಲಾಸ್ಮಾ ಮೈಕ್ರೋವೆಸಿಕಲ್ಸ್ ಗಳನ್ನು ಪರಿಶೀಲಿಸಲಾಗುತ್ತದೆ.

ಇದು ಕಾಯಿಲೆಯನ್ನು ಬೇಗ ಪತ್ತೆ ಹಚ್ಚಲು ತುಂಬಾ ಸಹಕಾರಿ. ಇದರ ಮುಖ್ಯ ಸಂಶೋಧಕರಾದ ಡಾಮೆಡ್ ಅಲೈನ್ ಕೈಲಿನ್ ಈ ಸಂಶೋಧನೆಯಲ್ಲಿ ಮುಖ್ಯವಾಗಿ ನರರೋಗ ತಜ್ಞರು ಹಾಗೂ ಹೃದಯ ತಜ್ಞರು ಒಟ್ಟಾಗಿ ಸೇರಿ ಈ ರಕ್ತ ಪರೀಕ್ಷೆ ಕಂಡು ಹಿಡಿದಿ
ರುವುದು ವಿಶೇಷ ಎಂದು ಅಭಿಪ್ರಾಯ ಪಡುತ್ತಾರೆ. ಈ ಸಂಶೋಧನೆಯು ಡಾ ಜಿಯಾರ್ಜಿಯಾ ಮೆಲ್ಲಿ ಅವರು ಮುಖ್ಯಸ್ಥರಾಗಿ ರುವ ಪಾರ್ಕಿನ್ಸನ್ ಸಂಶೋಧನಾ ತಂಡ ಹಾಗೂ ಟವರ್ನೆಯ ಬಯೋಮೆಡಿಕಲ್ ನ್ಯೂರೋಸೆಂರ್ಟ ನ ಡಾ ಮೆಡ್ ಅಲೆನ್ ಕೈಲಿನ್ ಅವರುಗಳ ಒಟ್ಟಾದ ಸಹಯೋಗದಲ್ಲಿ ಕೈಗೊಂಡದ್ದು.