Saturday, 21st September 2024

ಬಹುಬೇಗ ಕೇಳುತ್ತಿದೆ, ಸಿಎಂ ತಲೆದಂಡದ ಮಾತು

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಮುಂದಿನ ದಿನಗಳಲ್ಲಿ ಒಳ ಒಪ್ಪಂದ ಮಾಡಿಕೊಳ್ಳುವುದೇನೇ ಇರಲಿ, ಆದರೆ ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡರಿಂದ ಸಮಾನ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಅವರಿಗೆ ಕಂಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿರುವ ಬಿಟ್ ಕಾಯಿನ್ ಹಗರಣದಲ್ಲಿ ಬಸವರಾಜ ಬೊಮ್ಮಾಯಿ ಅವರ ಪಾತ್ರವಿದೆಯೋ? ಇಲ್ಲವೋ? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಆದರೆ ಅದಕ್ಕೂ ಮುನ್ನ ಅವರ ಪದಚ್ಯುತಿಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲ? ಅದು ಬಹುಮುಖ್ಯ, ಬಿಟ್ ಕಾಯಿನ್ ಹಗರಣದ ಕಾವು ಏರುತ್ತಿದ್ದಂತೆಯೇ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಸವರಾಜ ಬೊಮ್ಮಾಯಿವರು ಸಿಎಂ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದರು.

ಅದರ ಬೆನ್ನಿಗೇ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು, ಈ ವರ್ಷಾಂತ್ಯದಲ್ಲಿ ಬಸವರಾಜ ಬೊಮ್ಮಾಯಿ ಪದಚ್ಯುತಿ ನಿಶ್ಚಿತ. ಹೊಸ ವರ್ಷಕ್ಕೆ ಈ ರಾಜ್ಯ ಹೊಸ ಮುಖ್ಯಮಂತ್ರಿಯನ್ನು ಕಾಣುವುದೂ ನಿಶ್ಚಿತ ಎಂದರು. ಒಂದು ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾದವರ ಪದಚ್ಯುತಿಯ ಮಾತು ಕೇಳುವುದು ಅಸಹಜ ವೇನೂ ಅಲ್ಲ, ಆದರೆ ಅಧಿಕಾರಕ್ಕೆ ಬಂದು ನೂರು ದಿನಗಳನ್ನು ಪೂರೈಸಿರುವ ಬೆನ್ನ ಬಸವರಾಜ ಬೊಮ್ಮಾಯಿ ಅವರ ಪದಚ್ಯುತಿಯ ಮಾತುಗಳು ಕೇಳಿ ಬರುತ್ತಿರುವುದು ಸರಳ ಅಲ್ಲ. ಏಕೆಂದರೆ ಯಡಿಯೂರಪ್ಪ ಅವರ ಪದಚ್ಯುತಿಯ ಬೆನ್ನಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಪಡೆದ ಬಸವರಾಜ ಬೊಮ್ಮಾಯಿ ಅವರಿಗೆ ಎಲ್ಲ ಹಂತಗಳಲ್ಲಿ ಭದ್ರತೆ ಇದೆ ಎಂದೇ ಭಾವಿಸಲಾಗಿತ್ತು.

ಮೊದಲನೆಯದಾಗಿ ಬಿಜೆಪಿ ವರಿಷ್ಠರನ್ನೇ ತೆಗೆದುಕೊಳ್ಳಿ. 2024ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಬಲ ಕಡಿಮೆಯಾದರೂ ಕರ್ನಾಟಕದಂತಹ ರಾಜ್ಯದಲ್ಲಿ ಆ ಕೊರತೆಯನ್ನು ನೀಗಿಸಿಕೊಳ್ಳುವಷ್ಟು ಸಂಸತ್ ಸ್ಥಾನಗಳನ್ನು ಗೆಲ್ಲುವ ಬಯಕೆ ಅವರಿಗಿದೆ. ಇಂತಹ ಮನಃ ಸ್ಥಿತಿಯ ಕಾಲಘಟ್ಟದಲ್ಲಿ ಯಡಿಯೂರಪ್ಪ ಅವರನ್ನು ಕೆಳಗಿಳಿಸುವುದು ದುಬಾರಿಯಾಗಬಹುದು ಎಂಬ ಲೆಕ್ಕಾಚಾರ ಅವರಿಗಿತ್ತು. ಆದರೂ ಈ ಕೆಲಸಕ್ಕೆ ಕೈ ಹಾಕಿದ ವರಿಷ್ಠರಿಗೆ ಇದ್ದ ತುರ್ತು ಆದ್ಯತೆಯೆಂದರೆ, ಮುಖ್ಯಮಂತ್ರಿಯಾಗಿ ಬಂದು ಕುಳಿತ ಬಸವರಾಜ ಬೊಮ್ಮಾಯಿ ಅವರನ್ನು ರಕ್ಷಿಸುವುದು.

ಅರ್ಥಾತ್, ಅವರ ಕೈಗೆ ಬಲ ತುಂಬುವುದು ವರಿಷ್ಟರ ಬಯಕೆಯಾಗಿತ್ತು. ಇದೇ ಕಾರಣಕ್ಕಾಗಿ ಸರಕಾರ ರಚನೆಯ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ
ಅವರಿಗೆ ಪರ್ಯಾಯ ಶಕ್ತಿ ಕೇಂದ್ರಗಳನ್ನು ಸೃಷ್ಟಿಸಲು ಅವರು ಬಯಸಲಿಲ್ಲ. ಯಡಿಯೂರಪ್ಪ ಅವರ ಕಾಲದಲ್ಲಿ ಹಲವು ಉಪಮುಖ್ಯಮಂತ್ರಿಗಳಿದ್ದರೆ, ಬಸವರಾಜ
ಬೊಮ್ಮಾಯಿ ಅವರಿಗೆ ಪರ್ಯಾಯ ನಾಯಕರು ಇರಬಾರದು ಎಂಬ ಕಾರಣಕ್ಕಾಗಿ ಒಬ್ಬರಿಗೂ ಡಿಸಿಎಂ ಹುದ್ದೆಯನ್ನು ಕೊಟ್ಟಿರಲಿಲ್ಲ. ಈ ಮಧ್ಯೆ ಅಽಕಾರದಿಂದ
ಕೆಳಗಿಳಿದ ಯಡಿಯೂರಪ್ಪ ಅವರು ಕಾಂಗ್ರೆಸ್ ಜತೆ ಸ್ನೇಹ ಸಂಬಂಧ ಕುದುರಿಸುವ ಲಕ್ಷಣಗಳು ಕಂಡ ಕೂಡಲೇ ಅವರ ಆಪ್ತರ ಮೇಲೆ ಐಟಿ ದಾಳಿ ನಡೆದಿದ್ದಕ್ಕೂ ಇದೇ ಕಾರಣ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಯಾವ ಕಾರಣಕ್ಕೂ ಪಕ್ಷ ತೊರೆಯಬಾರದು. ಒಂದು ವೇಳೆ ತೊರೆದರೆ ದೊಡ್ಡ ಮಟ್ಟದ ಹಾನಿ ನಿಶ್ಚಿತ ಎಂಬುದು ಮೋದಿ-ಅಮಿತ್ ಶಾ ಲೆಕ್ಕಾಚಾರವಾಗಿತ್ತು.

ಹೀಗೆ ಯಡಿಯೂರಪ್ಪ ಹೊರಗೆ ಹೋಗುವುದನ್ನು ನೋಡುತ್ತಾ ಕುಳಿತರೆ, ಬೊಮ್ಮಾಯಿ ಅವರು ದೊಡ್ಡ ಶಕ್ತಿಯಾಗಿ ಮೇಲೆದ್ದು ನಿಲ್ಲುತ್ತಾರೆ ಎಂದು ಕನಸಿನಲ್ಲೂ ಭಾವಿಸುವಂತಿಲ್ಲ ಎಂಬುದು ಅವರಿಗೆ ಗೊತ್ತು. ಯಡಿಯೂರಪ್ಪ ಪತನದ ನಂತರ ಬಿಜೆಪಿಯಲ್ಲಿ ಭುಗಿಲೆದ್ದಿರುವ ಲಿಂಗಾಯತ ಒಳಪಂಗಡಗಳ ಅಸಮಾಧಾನವನ್ನು ಸ್ವಯಂ ಶಕ್ತಿಯಿಂದ ತಡೆಯಲು ಬೊಮ್ಮಾಯಿ ಅವರಿಗೆ ಸಾಧ್ಯವಿಲ್ಲ ಎಂಬುದೂ ವರಿಷ್ಠರಿಗೆ ಚೆನ್ನಾಗಿ ಗೊತ್ತು. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಅವರಿಗೆ ಖೆಡ್ಡಾ
ತೋಡಿದ ವರಿಷ್ಠರು, ಎಂತಹ ಪರಿಸ್ಥಿತಿಯಲ್ಲೂ ಅವರು ಪಕ್ಷ ತೊರೆಯದಂತೆ ನೋಡಿಕೊಳ್ಳಲು ಬಯಸಿದ್ದಾರೆ.

ಈ ಮಧ್ಯೆ ಜೆಡಿಎಸ್ ಜತೆಗೂ ಮಾತುಕತೆ ಪೂರ್ಣಗೊಳಿಸಿರುವ ಬಿಜೆಪಿ ವರಿಷ್ಠರು, ಅನಿವಾರ್ಯ ಸಂದರ್ಭದಲ್ಲಿ ಬೊಮ್ಮಾಯಿ ಸರಕಾರದ ಬೆಂಬಲಕ್ಕೆ ನಿಲ್ಲಬೇಕು ಎಂಬ ಒಪ್ಪಂದ ಮಾಡಿಕೊಂಡಿzರೆ. ಇದೇ ಕಾರಣಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಭವಿಷ್ಯದಲ್ಲಿ ಬೊಮ್ಮಾಯಿ ಸರಕಾರಕ್ಕೆ ಆಪತ್ತು ಎದುರಾದರೆ ಅದರ ಜತೆ ನಿಲ್ಲಲು ನಾವು ಸಿದ್ಧ ಎಂದು ಹೇಳಿದ್ದು. ಹೀಗೆ ಎಲ್ಲ ಕಡೆಯಿಂದಲೂ ಬಸವರಾಜ ಬೊಮ್ಮಾಯಿ ಅವರ ಸುತ್ತ ಕೋಟೆ ಕಟ್ಟಿದ ವರಿಷ್ಠರು ಪರಿಸ್ಥಿತಿ ಶಾಂತ ವಾಗಿ ಸಾಗಲಿ ಎಂದು ಬಯಸಿದ್ದರು. ಆದರೆ ಅಂದು ಕೊಂಡಂತೆ ನಡೆಯುತ್ತಿಲ್ಲ ಎಂಬುದೇ ಪದಚ್ಯುತಿ ಮಾತು ಕೇಳಲು ಮುಖ್ಯ ಕಾರಣ. ಅಂದ ಹಾಗೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಹೊಸ ವಿವಾದಗಳನ್ನೇನೂ ಕಟ್ಟಿಕೊಳ್ಳುತ್ತಿಲ್ಲ.

ಆದರೆ ನಾನು ಕಾಮನ್ ಮ್ಯಾನ್ ಎಂಬ ಇಮೇಜ್ ಸೃಷ್ಟಿಸಿಕೊಳ್ಳುವ ಹಪಹಪಿ ಬಿಟ್ಟರೆ ಉಳಿದಂತೆ ಅವರಿಂದ ಬಿಜೆಪಿಗೆ ದೊಡ್ಡ ಮಟ್ಟದ ಅನುಕೂಲವಾಗುವ ಲಕ್ಷಣ ಗಳೂ ಗೋಚರಿಸುತ್ತಿಲ್ಲ. ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷವನ್ನು ಅವರು ಮುನ್ನಡೆಸಿದ ರೀತಿಯನ್ನು ಕಂಡು ಕಮಲ ಪಾಳೆಯವೇ ದಂಗಾಗಿ ಕುಳಿತಿದೆ. ಏಕೆಂದರೆ ಅವರು ರೂಪಿಸಿದ ಕಾರ್ಯತಂತ್ರ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಫಲ ನೀಡಲಿಲ್ಲ. ಸಿಂಧಗಿಯಲ್ಲಿ ಜೆಡಿಎಸ್ ಪಕ್ಷ ಬಲಿದಾನಕ್ಕೆ ತಯಾರಾಗದೇ ಇದ್ದಿದ್ದರೆ ಕಮಲ ಪಾಳೆಯದ ಬಾವುಟ ಪಟಪಟಿಸುವ ಸಾಧ್ಯತೆಗಳೂ ಇರಲಿಲ್ಲ.

ಹೀಗಾಗಿ ಉಪಚುನಾವಣೆಯ ಅನುಭವವಾದ ನಂತರ ಬಸವರಾಜ ಬೊಮ್ಮಾಯಿ ಅವರನ್ನು ನೆಚ್ಚಿಕೊಂಡು ಯುದ್ಧ ಗೆಲ್ಲುವ ವಿಶ್ವಾಸ ವರಿಷ್ಠರಿಗಿರಲಿ, ರಾಜ್ಯ ಬಿಜೆಪಿಯ ಬಹುತೇಕ ಶಾಸಕರು ಮತ್ತು ಭವಿಷ್ಯದ ಅಭ್ಯರ್ಥಿಗಳಲ್ಲಿ ಉಳಿದಿಲ್ಲ. ಈಗ ಪರಿಸ್ಥಿತಿ ಹೇಗಿದೆ ಎಂದರೆ ಬಸವರಾಜ ಬೊಮ್ಮಾಯಿ ಅವರ ಸರಕಾರದ ಉಳಿವಿಗೆ ಬೆಂಬಲ ನೀಡುವ ಮಾತು ಬೇರೆ, ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕು ಎಂಬ ಏಕೈಕ ಕಾರಣಕ್ಕಾಗಿ ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ
ಕ್ಷೇತ್ರಗಳಲ್ಲಿ ಆ ಪಕ್ಷ ಮುಸ್ಲಿಮರಿಗೆ ಟಿಕೆಟ್ ನೀಡಿತ್ತು. ಹೀಗೆ ಅದು ಟಿಕೆಟ್ ನೀಡಿದ ಕ್ಷೇತ್ರಗಳ ಪೈಕಿ ಹಾನಗಲ್ನಲ್ಲಿ ಹೇಳಿಕೊಳ್ಳುವಂತಹ ಬಲ ಅದಕ್ಕಿರಲಿಲ್ಲ. ಆದರೆ ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಅದಕ್ಕೆ ನೆಲೆಯಿತ್ತು, ಬೆಲೆಯೂ ಇತ್ತು. ಆದರೆ ಟಕೆಟ್ ಕೊಡುವ ವಿಷಯ ಬಂದಾಗ ಸ್ಥಳೀಯರ ಮಾತುಗಳನ್ನು ನಿರ್ಲಕ್ಷಿಸಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲಾಯಿತು.

ಅದಕ್ಕಿದ್ದ ಒಂದೇ ಕಾರಣವೆಂದರೆ, ಮುಸ್ಲಿಂ ಮತದಾರರನ್ನು ಸೆಳೆದರೆ ಸಹಜವಾಗಿಯೇ ಅದು ಕಾಂಗ್ರೆಸ್‌ಗೆ ಅಡ್ಡೇಟು ಹೊಡೆಯುತ್ತದೆ ಮತ್ತು ಕಾಂಗ್ರೆಸ್
ಸೋತು ಬಿಜೆಪಿ ಗೆಲ್ಲುವಂತೆ ಮಾಡುತ್ತದೆ ಎಂಬುದು. ಆದರೆ ಇಂತಹ ಲೆಕ್ಕಾಚಾರಗಳೊಂದಿಗೆ ಫೀಲ್ಡಿಗಿಳಿದ ಜೆಡಿಎಸ್ ಪಕ್ಷಕ್ಕೆ ಅತ್ತ ಮುಸ್ಲಿಮರೂ ಬೆಂಬಲ ನೀಡಲಿಲ್ಲ. ಇತ್ತ ಮುಸ್ಲಿಮೇತರ ಮತಬ್ಯಾಂಕ್ ಅದರ ತೆಕ್ಕೆಯಲ್ಲಿ ಉಳಿಯಲಿಲ್ಲ. ಪರಿಣಾಮ? ಬಿಜೆಪಿ ಗೆದ್ದರೂ ಸಿಂಧಗಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂಬ ಸಂದೇಶ ರವಾನೆಯಾಯಿತು. ಇದಾದ ನಂತರ ಮಾಜಿ ಸಿಎಂ ಕುಮಾರಸ್ವಾಮಿ ಅವರ ಮನಸ್ಸು ಬದಲಾಗಿದೆ.

ತಮ್ಮ ಪಕ್ಷ ಅದೇನೇ ಸರ್ಕಸ್ಸು ಮಾಡಿದರೂ ಮುಸ್ಲಿಮರು ಜೆಡಿಎಸ್ ಜತೆ ನಿಲ್ಲುವುದಿಲ್ಲ ಎಂಬುದು ಅನುಮಾನಕ್ಕೆಡೆ ಇಲ್ಲದಂತೆ ಅವರಿಗೆ ಮನದಟ್ಟಾಗಿದೆ. ಹೀಗಾಗಿ ಪಕ್ಷ ಸಂಘಟನೆಗಾಗಿ ಜನತಾ ಸಂಗಮದಂತಹ ಕಾರ್ಯಕ್ರಮ ನಡೆಸುತ್ತಿರುವ ಕುಮಾರಸ್ವಾಮಿ ತಮ್ಮ ರಣತಂತ್ರವನ್ನು ಬದಲಿಸಲು ನಿರ್ಧರಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಸೇ- ಆಗಿರಲಿ ಎಂಬ ಕಾರಣಕ್ಕಾಗಿ ಕಾರ್ಯತಂತ್ರ ರೂಪಿಸಿದರೆ ಭವಿಷ್ಯದಲ್ಲಿ ನಾವೇ ಮೂಲೋತ್ಪಾಟನೆಯಾಗುತ್ತೇವೆ. ಹೀಗಾಗಿ ಮುಂದಿನ ದಿನಗಳಲ್ಲಿ ಒಳ ಒಪ್ಪಂದ ಮಾಡಿಕೊಳ್ಳುವುದೇನೇ ಇರಲಿ, ಆದರೆ ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡರಿಂದ ಸಮಾನ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಅವರಿಗೆ ಕಂಡಿದೆ. ಈ ಮಧ್ಯೆ ರಾಜ್ಯ ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಪರವಾದ ಧ್ವನಿಗಳೇನೂ ಹೆಚ್ಚಾಗುತ್ತಿಲ್ಲ.

ಅವರು ಹೈಕಮಾಂಡ್ ಆಯ್ಕೆ ಎಂಬ ಕಾರಣಕ್ಕಾಗಿ ಬಹುತೇಕ ಹಿರಿಯ ನಾಯಕರು ಮೌನವಾಗಿರಬಹುದು. ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣನನ್ನು ಬಳಸಿ ಕೊಂಡು ಪ್ರಭಾವಿ ರಾಜಕಾರಣಿಗಳು, ಅಽಕಾರಿಗಳು ಮತ್ತು ಕಂಪನಿಗಳು ತಮ್ಮಿಷ್ಟದ ಕೆಲಸ ಮಾಡಿಸಿದ್ದಾರೆ ಎಂಬುದು ಒಂದು ಆರೋಪ. ಸರಕಾರಿ ಟೆಂಡರು ಗಳನ್ನು ಪಡೆಯಲು ಸರ್ವರ್‌ಗಳಿಗೆ ಲಗ್ಗೆ ಹಾಕಿಸಿ, ಕಡಿಮೆ ದರ ನಮೂದಿಸಿದ ಗುತ್ತಿಗೆದಾರರ ವಿವರ ಪಡೆಯುವುದು ಮತ್ತು ಅ ಜಾಗದಲ್ಲಿ ಕಡಿಮೆ ದರ ನಮೂದಿ ಸಿದ ತಮ್ಮ ಟೆಂಡರ್ ಇರುವಂತೆ ನೋಡಿಕೊಳ್ಳುವುದು ಹಲವು ಪ್ರಭಾವಿಗಳಿಗೆ ಆಟವಾಗಿತ್ತು.

ಮತ್ತು ಶ್ರೀ ಕೃಷ್ಣ ಇದಕ್ಕೆ ದಾಳವಾಗಿ ಸಿಕ್ಕಿದ್ದ. ಇದೇ ರೀತಿ ಶ್ರೀಕೃಷ್ಣನನ್ನು ಬಚಾವು ಮಾಡಲು ಹಾಲಿ ಸರಕಾರದ ಕೆಲ ಪ್ರಮುಖ ನಾಯಕರು ನೇರವಾಗಿ ಇಲ್ಲವೇ ತಮ್ಮ ಮಕ್ಕಳ ಮಾತಿಗಾಗಿ ಬೆಂಬಲ ನೀಡಿದರು. ಮತ್ತು ಇದಕ್ಕೆ ಪ್ರತಿಯಾಗಿ ದೊಡ್ಡ ಪ್ರಮಾಣದ ಹಣ ತಮ್ಮ ಖಾತೆಗಳಿಗೆ ಬರುವಂತೆ ನೋಡಿಕೊಂಡರು ಎಂಬುದು ಸದ್ಯದ ಆರೋಪ. ಕುತೂಹಲದ ಸಂಗತಿ ಎಂದರೆ ಬಿಟ್ ಕಾಯಿನ್ ಹಗರಣದ ಕಾವು ಏರುತ್ತಿದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತರಾತುರಿಯಲ್ಲಿ ದೆಹಲಿಗೆ ಹೋಗಿ ಪ್ರಧಾನಿಗಳನ್ನು ಭೇಟಿ ಮಾಡಿದರು ಮತ್ತು ಪ್ರಧಾನಮಂತ್ರಿಗಳ ಭೇಟಿಯ ನಂತರ ತಮ್ಮದೇ ನೆಲೆಯ ಹೇಳಿಕೆ
ನೀಡಿದರು.

ಈ ಬಿಟ್ ಕಾಯಿನ್ ವ್ಯವಹಾರದ ಬಗ್ಗೆ ನಾನು ಹೇಳಲು ಬಯಸಿದರೆ ಪ್ರಧಾನಮಂತ್ರಿಗಳು ಅದರ ಬಗ್ಗೆ ಉತ್ಸುಕತೆ ತೋರಿಸಲಿಲ್ಲ. ಬದಲಿಗೆ ನಿಮ್ಮ ಪಾಡಿಗೆ ನೀವು ನೆಮ್ಮದಿಯಾಗಿ ಆಡಳಿತ ಮಾಡಿಕೊಂಡು ಹೋಗಿ ಎಂದಿzರೆ ಎಂಬುದು ಬೊಮ್ಮಾಯಿ ಹೇಳಿಕೆಯಾಗಿತ್ತು. ಆದರೆ ದೆಹಲಿ ಭೇಟಿಯ ನಂತರ ಹಲವು ಬೆಳವಣಿಗೆ ಗಳಾಗಿವೆ. ಪ್ರಕರಣದ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು: ಈ ಹಗರಣದ ಬಗ್ಗೆ ಪ್ರಧಾನಮಂತ್ರಿಗಳಿಗೆ ಮುಜುಗರವಾಗಿದ್ದು ಹೇಗೆ ಎಂಬ ಸೂಕ್ಷ್ಮವನ್ನು ಬಿಡಿಸಿ ಹೇಳಿದ್ದಾರೆ.

ಪ್ರಧಾನಮಂತ್ರಿಗಳು ಅಮೆರಿಕ ಪ್ರವಾಸ ಹೋದ ಸಂದರ್ಭದಲ್ಲಿ ಹಗರಣದ ಬಗ್ಗೆ ಮಾಹಿತಿ ದೊರೆತಿದೆ. ದೊಡ್ಡ ಪ್ರಮಾಣದ ಹಣವನ್ನು ಹ್ಯಾಕ್ ಮಾಡಲಾಗಿದೆ ಎಂಬ ಮಾಹಿತಿಯಿಂದ ಪ್ರಧಾನಿಗಳು ಅಸಮಾಧಾನಗೊಂಡಿದ್ದಾರೆ ಎಂಬ ಕುಮಾರಸ್ವಾಮಿ ಅವರ ಮಾತಿನಲ್ಲಿ ಹುರುಳಿದ ಎಂದು ದಿಲ್ಲಿಯ ಹಲ ನಾಯಕರು ಪಿಸುಗುಡುತ್ತಿದ್ದಾರೆ. ಸದ್ಯಕ್ಕೇನೋ ಪರಿಸ್ಥಿತಿಯನ್ನು ತಿಳಿಗೊಳಿಸಲು ಬಿಟ್ ಕಾಯಿನ್ ಹಗರಣದ ಬಗ್ಗೆ ತೇಪೆ ಹಚ್ಚುವ ಮಾತುಗಳು ಸರಕಾರದ ಪ್ರಮುಖ ಸಚಿವರಿಂದ ಕೇಳಿ ಬರುತ್ತಿದೆ.

ಆದರೆ ಇವತ್ತಿನ ಸನ್ನಿವೇಶ ಹೇಗಿದೆ ಎಂದರೆ ಯಾರೇನೇ ಮಾತನಾಡಿದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸುತ್ತ ಆತಂಕದ ಕಾರ್ಮೋಡ
ದಟ್ಟವಾಗುತ್ತಲೇ ಇದೆ. ಈ ಕಾರ್ಮೋಡ ಎಷ್ಟು ಬೇಗ ತಿಳಿಯಾಗುತ್ತದೋ ಅಷ್ಟರ ಮಟ್ಟಿಗೆ ಬಸವರಾಜ ಬೊಮ್ಮಾಯಿ ಅವರಿಗೆ ಒಳ್ಳೆಯದು.ಇಲ್ಲದಿದ್ದರೆ ಅವರ ಖುರ್ಚಿ ಮತ್ತಷ್ಟು ವೇಗವಾಗಿ ಅಲುಗಾಡತೊಡಗುತ್ತದೆ.