Saturday, 23rd November 2024

Ravi Hunj column: ಇಲ್ಲ, ಇದು ಹೀಗೆಯೇ…

ಮರು ಸ್ಪಂದನ

ರವಿ ಹಂಜ್‌

ನನ್ನ ‘ಬಸವ ಮಂಟಪ’ ಅಂಕಣದ (ವಿಶ್ವವಾಣಿ ಸೆ.೧೧) ಕುರಿತು ಎಂ.ಎಸ್.ಜಾಮದಾರ್ ಅವರು ಬರೆದ ‘ಪ್ರತಿ ಸ್ಪಂದನ ಪತ್ರ’ಕ್ಕೆ (ಸೆ.೧೩) ನನ್ನ ಸ್ಪಂದನೆಯ ಸ್ಪಷ್ಟನೆಯಿದು. ಜೈನ ಪುರಾಣವನ್ನು ಆಧರಿಸಿ ಬಿ.ಎಲ್. ರೈಸ್ ಅವರು ಬಸವಣ್ಣ ಒಬ್ಬ ಆರಾಧ್ಯ ಎಂದು ಹೇಳಿದ್ದಾರೆ. ಆದರೆ ಇದೇ ಸತ್ಯ ಎಂದು ನಾನು ಒಪ್ಪದೆ, ಅದನ್ನು ಇತಿಹಾಸ ತಜ್ಞರು ಮಾನ್ಯ ಆಕರ ಎಂದು ಪರಿಗಣಿಸುವ ಒಂದಲ್ಲ ಎರಡು ಶಿಲಾಶಾಸನಗಳಲ್ಲಿರುವುದಕ್ಕೆ ತಾಳೆ ಹಾಕಿ ಪರಿಶೀಲಿಸಿ ಅದನ್ನು ಒಪ್ಪಬೇಕು ಎಂದಿದ್ದೇನೆ.

ಬಸವಣ್ಣನು ಒಬ್ಬ ಕಮ್ಮೆ ಬ್ರಾಹ್ಮಣನಾಗಿದ್ದ ಎಂದಿದ್ದಾರೆ ಜಾಮದಾರರು; ಆದರೆ ಅದಕ್ಕೆ ಐತಿಹಾಸಿಕ ಮಾನ್ಯ
ವಾಗುವ ಯಾವುದೇ ಶಿಲಾಶಾಸನದ ಪುರಾವೆಯನ್ನು ಕೊಟ್ಟಿಲ್ಲ. ಅವರ ಅಭಿಪ್ರಾಯವು ಪುರಾಣಗಳನ್ನು
ಆಧರಿಸಿರ ಬಹುದು; ಆದರೆ ಪುರಾಣಗಳಿಗೆ ತಾಳೆಯಾಗುವ ತಕ್ಕ ಐತಿಹಾಸಿಕ ಆಧಾರಗಳು ಇದ್ದರೆ ಅವು ಒಪ್ಪಿತವೇ ಹೊರತು, ಕೇವಲ ಪುರಾಣಗಳನ್ನು ಆಧರಿಸಲಾಗದು.

ಇದನ್ನೂ ಓದಿ: Ravi Hanj Column: ಶರಣರನ್ನು ಜಾತಿಗೆ ಅಂಟಿಸುವುದು ವಿಪರ್ಯಾಸವೇ ಸರಿ !

ಅದನ್ನು ಒಪ್ಪುವುದಾದರೆ, ಬಸವಣ್ಣನು ಆಕಾಶದಿಂದ ನೇರ ಧರೆಗಿಳಿದ ‘ಶಾಪಗ್ರಸ್ತ ಗಣ’ ಎಂಬುದನ್ನೂ ಮಾನ್ಯ ಮಾಡಬೇಕಾಗುತ್ತದೆ! ಹಾಗಾಗಿ ಈ ಅಭಿಪ್ರಾಯವನ್ನು ಜಾಮದಾರರೂ ಒಪ್ಪಲಾರರು ಎಂದುಕೊಂಡಿದ್ದೇನೆ.
ಆರ್.ಜಿ.ಭಂಡಾರ್ಕರ್ ಆ ಒಂದು ಜಾತಿಯವರಾಗಿದ್ದರು, ಹಾಗಾಗಿ ಅವರು ಜೈನ ಪುರಾಣವನ್ನು ಜನಪ್ರಿಯ ಗೊಳಿಸಿದರು ಎಂಬುದು ಇಲ್ಲಿ ಅನವಶ್ಯಕ.

ಬಸವಣ್ಣನೂ ಸೇರಿದಂತೆ ಬಹುಪಾಲು ಶರಣರು ಜೈನದ್ವೇಷಿಗಳು ಎಂಬುದು ಅವರ ವಚನದಲ್ಲೇ ಕಾಣಸಿಗುತ್ತದೆ. ಆದಕಾರಣ, ಇಂಥ ಜಾತಿಯವರು ಹೀಗೆ ಎನ್ನುವುದು ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ ಎಂಬ ನೆಪದಂತಾಗುತ್ತದೆಯೇ ಹೊರತು ಪ್ರಬಲ ಸಾಕ್ಷಿಯಾಗಿ ಅಲ್ಲ.

ಬಸವಣ್ಣನ ಕಾಲದಲ್ಲಿ ಜಾತಿಯ ಪರಿಗಣನೆಗಳು ಅಸ್ತಿತ್ವದಲ್ಲಿ ರಲಿಲ್ಲ ಎಂದು ನಾನು ಹೇಳಿದ್ದೇನೆ ಎಂದಿದ್ದಾರೆ ಜಾಮದಾರರು. ಅದು ಅವರ ತಪ್ಪುಗ್ರಹಿಕೆ. ಹುಟ್ಟಿನಿಂದ ಜಾತಿ ಇರಲಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಇನ್ನು, ಅವರು ಮಾಡಿರುವ ಋಗ್ವೇದದ ಉಲ್ಲೇಖ ಮತ್ತು ಕೃಷ್ಣನ ಉಕ್ತಿಗಳು ಚಾತುರ್ವಣಗಳ ಕುರಿತಾಗಿವೆಯೇ
ಹೊರತು ಜಾತಿಗಳ ಕುರಿತಲ್ಲ.

ಇನ್ನು ಜಾಮದಾರರು, ‘ಅರ್ಜುನವಾಡ ಶಿಲಾಶಾಸನದ ಮಾಹೇಶ್ವರ ಪದವು ಬ್ರಾಹ್ಮಣ ವಿದ್ವಾಂಸ ಎಂದಾಗುತ್ತದೆ’ ಎಂದಿದ್ದಾರೆ. ಆದರೆ ಬಸವಾದಿ ಶರಣರು ಮಾಹೇಶ್ವರ ಸ್ಥಲ ಎಂಬ ಷಟ್‌ಸ್ಥಲವಲ್ಲದೆ, ಮಾಹೇಶ್ವರರು ಲಿಂಗಾಯತದ ಸಾಧಕರು ಎಂದು ಸಾಕಷ್ಟು ವಚನಗಳಲ್ಲಿ ಬಳಸಿದ್ದಾರೆಯೇ ಹೊರತು ಬ್ರಾಹ್ಮಣ ಎಂಬರ್ಥದಲ್ಲಿ ಎಲ್ಲಿಯೂ ಬಳಸಿಲ್ಲ.

ಮೇಲಾಗಿ ಈ ಶಾಸನವು ಬಸವೋತ್ತರ ಕಾಲದ್ದಾದುದರಿಂದ, ಇಲ್ಲಿನ ಮಾಹೇಶ್ವರ ಪದವು ಜಂಗಮರನ್ನು ಕುರಿತೇ ಆಗಿದೆ ಮತ್ತು ಅದಕ್ಕೆ ಪೂರಕವಾಗಿ ಜಂಗಮ ಪುರುಷ ಪದವೂ ಇದೇ ಶಾಸನದಲ್ಲಿದೆ ಹಾಗೂ ಅದಕ್ಕೆ ಪೂರಕವಾಗಿ ಮುನವಳ್ಳಿ ಶಾಸನದಲ್ಲಿಯೂ ಇದೆ. ಹಾಗಾಗಿ, ಈ ಎಲ್ಲಾ ಸ್ಪಷ್ಟನೆಗಳ ಕಾರಣ, ‘ಇದು ಹೀಗೆಯೇ’ ಎಂದು ನಮ್ರನಾಗಿ
ತಿಳಿಸುತ್ತೇನೆ.

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)