Saturday, 21st September 2024

’ಏಕಾದ್ಸಿ ಉಪ್ವಾಸ’ ದ ವಿಜ್ಞಾನಿಯ ಅನುಭವಕಥನವಿದು

ತಿಳಿರು ತೋರಣ

ಶ್ರೀವತ್ಸಜೋಶಿ

srivathsajoshi@yahoo.com

ರತನ್ ಟಾಟಾ ಭೇಟಿ, ಗುಂಡು ನಿರೋಧಕ ಜ್ಯಾಕೆಟ್ ಮತ್ತು ಹೆಲ್ಮೆಟ್ ನಿರ್ಮಾಣ, ಆಲ್ಜೀರಿಯಾದಲ್ಲಿ ಭಯೋತ್ಪಾದಕ ದಾಳಿ, ಅಂತಾರಾಷ್ಟ್ರೀಯ ರಕ್ಷಣಾ ಪ್ರಾತ್ಯಕ್ಷಿಕೆಯಲ್ಲಿ ಮೈಕೇಲ್ ಕಲಾಷ್ನಿಕೋವ್ ಭೇಟಿ, ಬೆಂಗಳೂರಿನಲ್ಲಿ ಜಾಗತಿಕ ಬಾಹ್ಯಾಕಾಶ ಸಮ್ಮೇಳನ ಆಯೋಜನೆ ಹೊಣೆ, ಹೆಬ್ಬಾಳ ಕೆರೆ ಜೀರ್ಣೋದ್ಧಾರ,
ಬಾಲ್ಯದ ನೆನಪುಗಳು, ಎಂಜಿನಿಯರಿಂಗ್ ಕಲಿಕೆ ವೇಳೆ ತಂದೆಯಿಂದ ಬೈಸಿಕೊಂಡದ್ದು, ‘ಕೊರವಂಜಿ’ಗೆ ಕವನ ಕಳಿಸಿದ್ದು, ಎರಡು ರು. ಸಂಭಾವನೆ ಬಂದದ್ದು , ಏಕಾದ್ಸಿ ಉಪ್ವಾಸ ‘ಹಾಡು ಹುಟ್ಟಿದ ಸಮಯ’… ಇಷ್ಟೆಲ್ಲ ಮೋಜಿನ ಹೂರಣ ಇರುವುದರಿಂದಲೇ 140 ಪುಟಗಳ ಈ ಪುಸ್ತಕ ಕವರ್ -ಟು-ಕವರ್ ಜಬರ್ದಸ್ತ್ ಎಂಟರ್ ಟೇನಿಂಗ್

ಅ ಅಲ್ಲದೆ ಆ ಅಕ್ಷರದಿಂದ ಲೇಖನ ಆರಂಭಿಸುವುದಾಗಿದ್ದರೆ ಆ ಪದ್ಯದ ಸಾಲನ್ನೇ ಮೊದಲಿಗೆ ಎತ್ತಿಕೊಳ್ಳುತ್ತಿದ್ದೆ. ಆಫ್ ಕೋರ್ಸ್ ಈಗಲೂ ಮಾಡುತ್ತಿದ್ದೇನೆ, ಬರೀ ಒಂದು ಸಾಲನ್ನಷ್ಟೇ ಅಲ್ಲ ಇಡೀ ಪದ್ಯವನ್ನೇ: ‘ಆಚೆಮನೆ ಸುಬ್ಬಮ್ಮಂಗೆ ಇವತ್ತು ಏಕಾದ್ಸಿ ಉಪ್ವಾಸ| ಎಲ್ಲೋ ಸ್ವಲ್ಪ ತಿಂತಾರಷ್ಟೆ ಉಪ್ಪಿಟ್ಟು ಅವ್ಲಕ್ಕಿ ಪಾಯ್ಸ|| ಮೂರೋ ನಾಲ್ಕೋ ಬಾಳೆಹಣ್ಣು ಸ್ವಲ್ಪ ಚಕ್ಲಿ ಕೋಡ್‌ಬಳೆ| ಗಂಟೆಗೆರಡು ಸೀಬೇಹಣ್ಣು ಆಗಾಗ ಒಂದೊಂದ್ ಕಿತ್ತಳೆ|| ಮಧ್ಯಾಹ್ನ್ವೆಲ್ಲ ರವೇಉಂಡೆ ಹುರ್ಳೀ ಕಾಳಿನ ಉಸ್ಲಿ| ಒಂದೊಂದ್ಸಲ ಬಿಸೀ ಸಂಡಿಗೆ ಒಂದೋ ಎರಡೋ ಇಡ್ಲಿ|| ರಾತ್ರಿ ಪಾಪ ಉಪ್ಪಿಟ್ಟೇನೇ ಒಂದ್ಲೋಟದ ತುಂಬ ಹಾಲು| ಪಕ್ಕದಮನೆ ರಾಮೇಗೌಡರ ಸೀಮೇಹಸು ಹಾಲು||’

ಕಳೆದ ವಾರ ಅಂಕಣದಲ್ಲಿದ್ದ ‘ಸ್ವಾಮಿದೇವನೆ ಲೋಕಪಾಲನೆ’ ಪ್ರಾರ್ಥನೆಯಂತೆಯೇ ಈ ಪದ್ಯ ಕೂಡ. ಕನ್ನಡಿಗರೆಲ್ಲರ ನಾಲಗೆಯಲ್ಲಿ ನಲಿದಾಡಿದೆ, ಮನದಾಳ ದಲ್ಲಿ ಮನೆಮಾಡಿದೆ, ಮತ್ತು ಅದರ ಹಾಗೆಯೇ- ಸಿಕ್ಕಾಪಟ್ಟೆ ಪ್ರಸಿದ್ಧ ಆದರೆ ಬರೆದವರಾರೆಂದು ಅನೇಕರಿಗೆ ಗೊತ್ತಿಲ್ಲ! ಹೆಸರು ಗೊತ್ತಿರಬಹುದಾದರೂ ಆ ವ್ಯಕ್ತಿಯ ಬಗ್ಗೆ, ಅವರ ಹಿರಿಮೆ-ಗರಿಮೆಗಳ ಬಗ್ಗೆ ಖಂಡಿತ ಗೊತ್ತಿಲ್ಲ. ಹಾಗೆ ನೋಡಿದರೆ ಆ ಪದ್ಯದ ಲೋಕಖ್ಯಾತಿಯು ಅವರ ಪರಿಚಯಕ್ಕೊಂದು ಕೀಲಿಕೈಅಷ್ಟೇ ಹೊರತು ಒಳಗಿನ ವ್ಯಕ್ತಿತ್ವವೆಂಬ ತಿಜೋರಿ ತೆರೆದರೆ- ಅಬ್ಬಾ! ಅನಿಸುವ, ಗೌರವಾಭಿಮಾನ ಮೂಡಿಸುವ ವ್ಯಕ್ತಿತ್ವ.

ಆ ವ್ಯಕ್ತಿಯೇ ಚಿನ್ಯ ರಾಮಚಂದ್ರರಾವ್ ಸತ್ಯ. ಹ್ರಸ್ವವಾಗಿ ‘ಸಿ.ಆರ್. ಸತ್ಯ’. ಚಿನ್ಯ ಅಂದರೆ ಮಂಡ್ಯದ ಒಂದು ಹಳ್ಳಿ. ರಾಮಚಂದ್ರರಾವ್ ತಂದೆಯ ಹೆಸರು. ಇನ್ನೊಂದು ರೀತಿಯಲ್ಲಿ ಸಿ.ಆರ್.ಸತ್ಯ ಅವರ ಪರಿಚಯ ತಿಳಿಸುವುದಾದರೆ ಅವರು ಶ್ರೇಷ್ಠ ಸಾಹಿತಿ ಎ.ಆರ್.ಕೃಷ್ಣಶಾಸ್ತ್ರಿ ಯವರ ಮೊಮ್ಮಗ. ಮಜಾ ಏನೆಂದರೆ ಎರಡು ವರ್ಷಗಳ ಹಿಂದೊಮ್ಮೆ ಕೃಷ್ಣಶಾಸ್ತ್ರಿಯವರ ಬಗ್ಗೆ ಲೇಖನ ಬರೆದಿದ್ದಾಗ ಅವರ ಪರಿಚಯಕ್ಕೂ ‘ಏಕಾದ್ಸಿ ಉಪ್ವಾಸ’ ಪದ್ಯವನ್ನೇ ಬಳಸಿದ್ದೆ; ಅದನ್ನು ಹೆಣೆದ ಸಿ.ಆರ್.ಸತ್ಯ ಅವರ ತಾತನೇ ಎ.ಆರ್.ಕೃಷ್ಣಶಾಸ್ತ್ರಿಗಳು ಎಂದು ಬರೆದಿದ್ದೆ. ಅದಕ್ಕೇ ಹೇಳಿದ್ದು, ಆ ಪದ್ಯ ಒಂದು ಕೀಲಿಕೈ ಇದ್ದಂತೆ ಎಂದು. ಸ್ವತಃ ಸಿ.ಆರ್.ಸತ್ಯ ಅವರೂ ತಮ್ಮನ್ನು ತಾವು ಪರಿಚಯಿಸಿಕೊಳ್ಳುವಾಗ ಏಕಾದ್ಸಿ ಉಪ್ವಾಸವನ್ನೇ ಪ್ರಸ್ತಾವಿಸುತ್ತಾರೆ.

೨೦೧೧ರ ಜುಲೈಯಲ್ಲಿ ಬೆಂಗಳೂರಿನಲ್ಲಿ ಅಮೆರಿ ಕನ್ನಡಿಗರ ಉತ್ಸವಕ್ಕೆ ಬಂದಿದ್ದ ಅವರನ್ನು ನಾನು ಮುಖತಃ ಭೇಟಿಯಾಗಿದ್ದೆ. ಆಗಲೂ ಅವರು ಏಕಾದ್ಸಿ ಉಪ್ವಾಸದ ಮೂಲಕವೇ ತಮ್ಮನ್ನು ಪರಿಚಯಿಸಿಕೊಂಡಿದ್ದರು. ಬಹುಶಃ ಅದರಿಂದಲೇ ಇರಬಹುದು, ಸಿ.ಆರ್.ಸತ್ಯ ನನಗಿಂತ ತುಂಬ ಹಿರಿಯರಾದರೂ ಒಂಥರದ ಸಲುಗೆ ನನಗೆ ಅವರೊಡನೆ. ಭೇಟಿಯಾದದ್ದು ಮಾತಾಡಿದ್ದು ಒಮ್ಮೆ ಮಾತ್ರವಾದರೂ ಇಮೇಲ್‌ನಲ್ಲಿ ವಾಟ್ಸಪ್‌ನಲ್ಲಿ ಆಗೊಮ್ಮೆ ಈಗೊಮ್ಮೆ ನಮ್ಮಿಬ್ಬರ ‘ಉ.ಕು. ಸಾಂಪ್ರತ ಲಘು ವಿಚಾರವಿನಿಮಯ’ ನಡೆಯುತ್ತಿರುತ್ತದೆ. ಬೆಂಗಳೂರಲ್ಲಿ ಭೇಟಿಯಾಗಿದ್ದ ವರ್ಷವೇ ಆಮೇಲೆ ನನಗವರು ‘ಏಕಾದ್ಸಿ ಉಪ್ವಾಸ’ ಹಾಸ್ಯ ಲೇಖನಗಳ ಸಂಕಲನ ಪುಸ್ತಕದ ಪ್ರತಿಯನ್ನು ಪ್ರೀತಿಯಿಂದ ಕಳುಹಿಸಿದರು.

ಕಾಲಾನಂತರ ಞದಲ್ಲಿ ಸುಬ್ಬಮ್ಮನ ಏಕಾದ್ಸಿ ಉಪ್ವಾಸ ಪದ್ಯಕ್ಕೆ ನಾನೊಂದು ಅಣಕವಾಡನ್ನೂ ಬರೆದೆ. ‘ಸೂಸನ್ನಳ ಫೇಸ್‌ಬುಕ್ ಉಪವಾಸ’ ಎಂದು ಫೇಸ್‌ಬುಕ್ ಗೋಡೆ ಮೇಲೆ ಪ್ರಕಟಿಸಿದೆ. ‘ಈಚೇ ಮನೆಯ ಸೂಸನ್ನಳಿಗೆ ಫೇಸ್‌ಬುಕ್ಕಿನಾ ಉಪವಾಸ| ಎಲ್ಲೋ ಸ್ವಲ್ಪ ಕ್ಲಿಕ್‌ತಾಳಷ್ಟೇ ಅವರಿವರ್ ಹಾಕಿದ ಸ್ಟೇಟಸ…’ ಎಂದು ಪಲ್ಲವಿ, ಮತ್ತು ನಾಲ್ಕು ಚರಣಗಳು. ಸೋಶಿಯಲ್ ಮೀಡಿಯಾದಿಂದ ದೂರವಿರುತ್ತೇನೆಂದು ಶಪಥ ಮಾಡಿ ಹಾಗೆ ನಡೆದುಕೊಳ್ಳಲಾಗದವಳ ಚಡಪಡಿಕೆಯ ಅಣಕ: ‘ಬೆಳಗ್ಗೆಯೊಮ್ಮೆ ಲಾಗಿನ್ ಆದ್ರೆ ಹೊಡೆಯುವಳ್ನಾಲ್ಕು ಲೈಕು| ಒಂದೆರಡ್ ಪೋಸ್ಟಿಗೆ ಕಾಮೆಂಟು ಜಡಿದು ಕೀಬೋರ್ಡಲ್ಲೇ ಸ್ಟ್ರೈಕು|| ಮಧ್ಯಾಹ್ನವಾದರೆ ಊಟದ ಜತೆಗೆ ಫೋಟೊಗಳನು ಶೇರು| ಬೇಕೋಬೇಡ್ವೋ ಇದ್ದವ್ರನ್ನೆಲ್ಲಾ ಟ್ಯಾಗಿಸದಿದ್ರೇ ಬೋರು|| ಸಂಜೀಮುಂದ ಹರಟುವ ಮನಸಿಗೆ ಮತ್ತದೇ ಫೇಸ್ಬುಕ್ ನೆನಪು| ಗೋಡೆಗೆ ಒರಗಿ ಬಾಯ್ಬಿಟ್ಳೆಂದರೆ ಲೊಲ್ ಲೊಲ್ ಸ್ಮೈಲೀ ಒನಪು|| ಸ್ಮಾರ್ಟ್‌ಫೋನಲ್ಲೂ ಟ್ಯಾಬ್ಲೆಟ್ಟಲ್ಲೂ ಫೇಸ್ಬುಕ್ ನೋಡೋ ಹುಚ್ಚು| ಡಿಜಿಟಲ್ ಯುಗದ ಸೂಸನ್ ಕಥೆಯು ಸುಬ್ಬಮ್ಮನ್ಗಿಂತ್ಲೂ ಹೆಚ್ಚು||’ ಈ ಅಣಕವಾಡನ್ನು ನಾನು ಸಿ.ಆರ್.ಸತ್ಯ ಅವರಿಗೆ ಇಮೇಲ್‌ನಲ್ಲಿ ಕಳುಹಿಸಿದ್ದೆ.

ಅದಕ್ಕವರು ಭಲೇ ಹಾಸ್ಯದ ಉತ್ತರ ಬರೆದರು:Dear Mr.Joshi, In appreciation of your giving birth to the legend Susan (although in infringement of my possessive rights over Subbamma), I am herewith waiving off any legal actions on you! I will consider that my Subbamma of Bengaluru has now a sose(!) Susan in Washington! May your Susan live long in the hearts of all Kannadigaru. – Sathya’

ಕೆಲದಿನಗಳ ಹಿಂದೆ ಸತ್ಯ ಅವರು ನನಗೊಂದು ಇಮೇಲ್ ಕಳುಹಿಸಿದ್ದರು. ‘ನನ್ನ ಜೀವನಾನುಭವಗಳನ್ನು ಸಂಕಲಿಸಿ ಒಂದು ಪುಸ್ತಕ ಪ್ರಕಟಿಸಿದ್ದೇನೆ. ನನ್ನ ಮಗ ಅಮೆರಿಕಕ್ಕೆ ಹಿಂತಿರುಗುತ್ತಿದ್ದಾನೆ, ಅವನ ಸಂಗಡ ನಿಮಗೊಂದು ಪ್ರತಿ ಕಳುಹಿಸುತ್ತೇನೆ. ಪುಸ್ತಕವು ಚಕ್ಲಿ ಕೋಡುಬಳೆ ನಿಪ್ಪಟ್ಟು ಶಂಕರಪೋಳೆ ಪೊಟ್ಟಣ ಗಳೊಂದಿಗೆ ಸೂಟ್‌ಕೇಸ್‌ನಲ್ಲಿ ಹೋಗುತ್ತಿರುವುದರಿಂದ ಅಷ್ಟಿಷ್ಟು ಪರಿಮಳವೂ ಬಂದೀತು!’ ಎಂದು ಬರೆದಿದ್ದರು.

ನಾರ್ತ್ ಕೆರೊಲಿ ನಾದಿಯಿಂದ ಶ್ರೀಹರ್ಷ ಸತ್ಯ ಅವರು ಪುಸ್ತಕವನ್ನು ನನಗೆ ಅಂಚೆಯಲ್ಲಿ ಕಳುಹಿಸಿದರು. ಮೊನ್ನೆ ಬುಧವಾರ ಅದು ಕೈಸೇರಿತು. ‘ನಿಮ್ಮ ಹೊಸ ಪುಸ್ತಕ ತಲುಪಿದೆ. ಮೂಸಿ ನೋಡಿದೆ. ಚಕ್ಲಿ ಕೋಡುಬಳೆಗಳ ಪರಿಮಳ ಬರುತ್ತಿಲ್ಲ. ಬದಲಿಗೆ ಪ್ರಿಂಟಿಂಗ್ ಇಂಕ್‌ನ ಹಿತಕರ ಘಾಟು ಚೆನ್ನಾಗಿಯೇ ಇದೆ. ಪುಸ್ತಕ ಓದುತ್ತೇನೆ. ಜೀವನಾನುಭವಗಳನ್ನು ಓದುವುದೆಂದರೆ ಸಹಬಳಿಗೂ ತುಂಬ ಇಷ್ಟವಾದ್ದರಿಂದ ಅವಳಿಗೂ ಓದಲಿಕ್ಕೆ ಹೇಳುತ್ತೇನೆ’ ಎಂದು ಸತ್ಯ ಅವರಿಗೆ ಬರೆದು ತಿಳಿಸಿದೆ.

ಓದಿನಲ್ಲಿ ನಾನು ಕಡುಬಡವ, ಪುಸ್ತಕಗಳ ಓದಿಗೆ ಬೇಕಾದ ಎಟೆನ್ಷನ್ ಸ್ಪಾನ್ ನನಗಿಲ್ಲ ಎನ್ನುತ್ತಿರುತ್ತೇನಾದರೂ, ಅದೇನು ಆವೇಶ ಬಂತೋ ನಿನ್ನೆ ಪಟ್ಟಾಗಿ ಕುಳಿತು ಈ ಪುಸ್ತಕ ಓದಿ ಮುಗಿಸಿದೆ! ಸತ್ಯ ಅವರ ಬಗ್ಗೆ ತುಂಬ ಹೆಮ್ಮೆಯೆನಿಸಿತು. ಇಷ್ಟೊಂದು ಸಮೃದ್ಧ ಜೀವನಾನುಭವಗಳಿರುವ ವ್ಯಕ್ತಿ ಅದೆಷ್ಟು ಸರಳತೆ ಯಿಂದಿದ್ದಾರೆ, ಯಾವೊಂದು ಹಮ್ಮುಬಿಮ್ಮುಗಳಿಲ್ಲದೆ ಎಂತಹ ವಿನಮ್ರ ಭಾವದಿಂದ ನಸುನಗುವಿನ ಧಾಟಿ ಯಲ್ಲೇ ಅನುಭವಗಳನ್ನೆಲ್ಲ ಅಕ್ಷರಕ್ಕಿಳಿಸಿದ್ದಾರೆ ಎಂದು ಹೃದಯ ತುಂಬಿಬಂತು. ನಾನೇನೂ ಭಾರೀ ಆತ್ಮಚರಿತ್ರೆಗಳನ್ನೆಲ್ಲ ಓದಿದವನಲ್ಲ, ಆದರೆ ಈ ಪುಸ್ತಕ ಉತ್ಕೃಷ್ಟವಾಗಿದೆ, ಕನ್ನಡಿಗರೆಲ್ಲರೂ ಇದನ್ನು ಓದಬೇಕು, ಅದರಲ್ಲೂ ಮುಖ್ಯವಾಗಿ ಯುವಪೀಳಿಗೆಯವರೂ ಮಕ್ಕಳೂ ಅವಶ್ಯವಾಗಿ ಓದಬೇಕು, ಶಾಲಾಕಾಲೇಜುಗಳ ಗ್ರಂಥಾಲಯಗಳಲ್ಲಿ ಈ ಪುಸ್ತಕ ಸೇರಿಕೊಳ್ಳಬೇಕು.

ಪುಸ್ತಕದ ಹಿಂಬದಿ ರಕ್ಷಾಕವಚದ ಒಕ್ಕಣೆ ಹೀಗಿದೆ ನೋಡಿ. ಸತ್ಯ ಅವರ ಕಿರುಪರಿಚಯ ಮತ್ತು ಸಾಧನೆಗಳದೊಂದು ಝಲಕ್: ‘ಸಿ.ಆರ್.ಸತ್ಯ ವೃತ್ತಿಪರವಾಗಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪರಿಣತರು. ೫೦ ವರ್ಷಗಳಿಗೂ ಮೇಲ್ಪಟ್ಟು ಈ ಕ್ಷೇತ್ರದಲ್ಲಿ ಇಸ್ರೋ ಮತ್ತು ಟಾಟಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ
ಮತ್ತು ಇಂಗ್ಲಿಷ್‌ನಲ್ಲಿ ಅವರು ಬರೆದಿರುವ ತಾಂತ್ರಿಕ ಮತ್ತು ವೈಜ್ಞಾನಿಕ ಲೇಖನಗಳು, ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿ, ರಕ್ಷಣಾ ಇಲಾಖೆಯ ಪ್ರಕಟಣೆಗಳಲ್ಲಿ, ವಿಜ್ಞಾನ ಲೋಕ, ಉತ್ಥಾನ ಮುಂತಾದ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.

ಅವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಅವರ ಪ್ರಖ್ಯಾತ ಕುಹಕ-ಕವನ ‘ಆಚೇಮನೆ ಸುಬ್ಬಮ್ಮನಿಗೆ ಏಕಾದಶೀ ಉಪವಾಸ’ 1959ರಲ್ಲಿ ‘ಕೊರವಂಜಿ’ ಮಾಸಿಕದಲ್ಲಿ ಪ್ರಕಟವಾಯಿತು. ಆಮೇಲೆ ಅಪರಂಜಿಯಲ್ಲೂ ಅನೇಕ ಹಾಸ್ಯ ಲೇಖನಗಳನ್ನು ಬರೆದಿದ್ದಾರೆ. ತಿರವನಂತಪುರದ
ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕಲ್ಲುಗಳ ಮೇಲೆ ಮಾಡಿದ ಸಂಶೋಧನೆಯ ಬಗ್ಗೆ ಕನ್ನಡದಲ್ಲಿ ಬರೆದ ‘ಅಳಿವಿಲ್ಲದ ಸ್ಥಾವರ’ ಪುಸ್ತಕಕ್ಕೆ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ ಹಾಗೂ ಇಂಗ್ಲಿಷ್ ಅನುವಾದ ‘ಸೆಂಟಿನಲ್ಸ್ ಆಫ್ ಗ್ಲೋರಿ’ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳು ದೊರೆ
ತಿವೆ. ಬಹುಮುಖ ಆಸಕ್ತಿಯುಳ್ಳ ಸತ್ಯ ಅವರು ಪರಿಸರ ರಕ್ಷಣೆ, ಸಾಹಿತ್ಯ, ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ವಿಜ್ಞಾನ ಪರಿಚಯ, ಶಬ್ದ ಚಿತ್ರಗಳ ನಿರೂಪಣೆ ಮುಂತಾದ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ದೇಶದ ಹಿರಿಯ ವಿeನಿಗಳು ಮತ್ತು ನಾಯಕರೊಡನೆ ಒಡನಾಟ, ಅನೇಕ ದೇಶಗಳಲ್ಲಿನ ಪ್ರವಾಸ, ಮತ್ತು ತಮ್ಮದೇ ಹವ್ಯಾಸಗಳಿಂದ ಮೂಡಿಬಂದ ಕೆಲವು ಕುತೂಹಲಕರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಪುಸ್ತಕಕ್ಕೆ ‘ತ್ರಿಮುಖಿ’ ಹೆಸರೇಕೆ ಎನ್ನುವುದನ್ನು ಪ್ರಸ್ತಾವನೆಯಲ್ಲಿ ಸತ್ಯ ತಿಳಿಸಿದ್ದಾರೆ: ‘ಈ ಪುಸ್ತಕದಲ್ಲಿರುವ ಮೂರು ಭಾಗಗಳು ನಾನು ಮೂರು ಆಯಾಮಗಳಲ್ಲಿ ಪಡೆದ ಕೆಲ ಅನುಭವಗಳ ಸಂಕಲನ. ಮೊದಲನೆಯದು: ಕನ್ನಡ ದವ ಗಿ ಹುಟ್ಟಿ ಬೆಳೆದು ಮುಂಬಯಿ ಮೂಲಕ ತಿರುವನಂತ ಪುರಕ್ಕೆ ವೃತ್ತಿಪರವಾಗಿ ಹೋಗಿ ಅಲ್ಲಿ ನಡೆದ ರೋಚಕ ವಿಷಯಗಳು.

ಎರಡನೇದು ವಿದೇಶಯಾತ್ರೆ ವೇಳೆಯ ಕೆಲ ಸಂಗತಿಗಳು. ಮೂರನೇದು ಬೆಂಗಳೂರಿಗೆ ಮರಳಿದ ಮೇಲೆ ಪಡೆದ ಅನುಭವಗಳು. ದಯವಿಟ್ಟು ಇದನ್ನು ನನ್ನ ಆತ್ಮಚರಿತ್ರೆ ಎಂದು ಮಾತ್ರ ಪರಿಗಣಿಸಬೇಡಿ! ಆತ್ಮಚರಿತ್ರೆ ಬರೆಯಲು ನಾನು ಸಾಧಕನೂ ಅಲ್ಲ ಸಾಹಿತಿಯೂ ಅಲ್ಲ. ಎಲ್ಲರಂತೆ ನನ್ನ ಜೀವನದಲ್ಲಿ ಅನೇಕ
ಅನುಭವಗಳಾಗಿವೆ. ಅವುಗಳನ್ನೇ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.’ ಬೆಂಗಳೂರಲ್ಲಿ ಎಂಜಿನಿಯರಿಂಗ್ ಓದಿನ ಬಳಿಕ ಮುಂಬಯಿಯಲ್ಲಿ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್‌ನಲ್ಲಿ ಒಂದು ವರ್ಷದ ತರಬೇತಿ ಸಮಯದಿಂದ ಶುರುವಾಗುತ್ತದೆ ಸತ್ಯ ಅವರ ಅನುಭವಕಥನ. ತರಬೇತಿಯ ಸಮಾರೋಪಕ್ಕೆ ಡಾ. ಹೊಮಿ ಭಾಭಾ ಅವರೇ ಬಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದು, ನಂತರ ಉದ್ಯೋಗಕ್ಕಾಗಿ ಅಣುವಿeನಿ ಡಾ.ರಾಜಾ ರಾಮಣ್ಣ ಸಂದರ್ಶನ ನಡೆಸಿದ್ದು, ತಿರುವನಂತ ಪುರಂನ ‘ತುಂಬಾ’ ರಾಕೆಟ್ ಉಡಾವಣಾ ಕೇಂದ್ರಕ್ಕೆ ಪೋಸ್ಟಿಂಗ್ ಕೇಳಿದ್ದು, ಇನ್ನೊಬ್ಬ ಸಹೋದ್ಯೋಗಿ ಯೊಡನೆ ತಿರುವನಂತಪುರಕ್ಕೆ ಬಂದಿಳಿದದ್ದು, ಕುಸುಬಲಕ್ಕಿ ಮತ್ತು ತೆಂಗಿನೆಣ್ಣೆ ರಹಿತ ಅಡುಗೆಯ ಊಟ ಕ್ಕಾಗಿ ಪರದಾಡಿದ್ದು, ರೈಲ್ವೇ ಕ್ಯಾಂಟೀನ್‌ನಲ್ಲಿ ಭೋಜನ ವ್ಯವಸ್ಥೆ ಮಾಡಿಕೊಂಡದ್ದು… ಡೈರಿಯ ಪುಟಗಳಿಂದಲೋ ಎಂಬಂತೆ ಸತ್ಯ ಬಹಳ ಚೆನ್ನಾಗಿ ನೆನಪಿಸಿಕೊಂಡಿದ್ದಾರೆ.

ತುಂಬಾದಲ್ಲಿ ರಾಕೆಟ್ ಉಡಾವಣ ಕೇಂದ್ರ ದಲ್ಲಿ ಅಬ್ದುಲ್ ಕಲಾಂ ಭೇಟಿಯಾದ ಕ್ಷಣವನ್ನಂತೂ ಆರ್ದ್ರತೆ ಯಿಂದ ಬಣ್ಣಿಸಿದ್ದಾರೆ. ‘ಆ ಹಸ್ತಲಾಘವದಿಂದ ಮೂಡಿ ಬಂದ ಬಾಂಧವ್ಯ ಅವರು ದೈವಾಧೀನರಾಗುವವರೆಗೂ ಗಟ್ಟಿಯಾಗೇ ಉಳಿಯಿತು. ಅವರ ಕೆಳಗೆ ಒಬ್ಬ ರಾಕೆಟ್ ಎಂಜಿನಿಯರ್ ಆಗಿ ಅನಂತರ ನಾನಾ ಜವಾಬ್ದಾರಿಗಳನ್ನು ಹೊತ್ತ ನನ್ನನ್ನು ಅವರು ಕೊನೆವರೆಗೂ ಸ್ನೇಹಿತನಾಗಿಯೇ ಕಂಡರು’ ಎಂದು ಸ್ಮರಿಸಿದ್ದಾರೆ. ಮತ್ತೊಬ್ಬ ಮಹಾನ್ ವಿಜ್ಞಾನಿ ಡಾ.ವಿಕ್ರಂ
ಸಾರಾಭಾಯಿ ತುಂಬಾಗೆ ಭೇಟಿ ನೀಡಿದ, ರಾಕೆಟ್ ಮಾದರಿ ಯಂತ್ರವನ್ನು ಸತ್ಯರಿಂದಲೇ ನಿರ್ಮಿಸಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಂದ ಸ್ವಿಚ್ ಆನ್ ಮಾಡಿಸಿದ ವಿವರಗಳೂ ಇವೆ.

ಸಿ.ಆರ್.ಸತ್ಯ ಅವರು ಸೈಕಲ್ ಮೇಲೆ ರಾಕೆಟ್‌ನ ಚೂಪು ಮೂತಿ (ನೋಸ್‌ಕೋನ್) ಇಟ್ಟುಕೊಂಡು ನಡೆದುಕೊಂಡು ಹೋಗುತ್ತಿರುವ ಒಂದು ಅತಿಪ್ರಖ್ಯಾತ ಕಪ್ಪುಬಿಳುಪು ಫೋಟೊ ಇದೆ. ಹಿಂದೊಮ್ಮೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಸತ್ಯ ಅವರ ಸಂದರ್ಶನ ಪ್ರಕಟವಾದಾಗ ಮುಖಪುಟದಲ್ಲೇ ಆ ಫೋಟೊ ಪ್ರಕಟ ವಾಗಿತ್ತು. ಅದರ ಬಗೆಗೆ ಈ ಪುಸ್ತಕದಲ್ಲಿ ಸ್ವಾರಸ್ಯಕರ ವಿವರ ಗಳಿವೆ: ‘ಇಸವಿ 1966. ತುಂಬಾದಲ್ಲಿ ಅಂದು ಸೆಂಟಾರ್ ಎಂಬ ಎರಡು ಹಂತದ ರಾಕೆಟನ್ನು ಸಂಜೆ ೬ ಗಂಟೆಗೆ ಸರಿಯಾಗಿ ಅನೇಕ ಗಣ್ಯ ವ್ಯಕ್ತಿಗಳ ಸಮ್ಮುಖ ಉಡಾವಣೆ ಮಾಡಬೇಕಿತ್ತು. ರಾಕೆಟ್‌ನ ನೋಸ್ ಕೋನ್ ಸಿದ್ಧಪಡಿಸುವ ಕಾರ‍್ಯವನ್ನು ಕಲಾಂ ನನಗೆ ಒಪ್ಪಿಸಿ ಅದರಲ್ಲಿ ರಾಸಾಯನಿಕ ವಸ್ತು ಇದ್ದುದರಿಂದ ಎರಡು ಕಿ.ಮೀ ದೂರದಲ್ಲಿದ್ದ ಯಾರೂ ವಾಸವಿಲ್ಲದ ಹಳೆಯ ಬೆಸ್ತರ ಮನೆಯಲ್ಲಿ ಕೆಲಸ ಮಾಡಲು ಹೇಳಿದ್ದರು. ಮಧ್ಯಾಹ್ನ ೨ ಗಂಟೆಯೊಳಗೆ ಅದು ಸಿದ್ಧವಾಗಿರಲಿ. ಅಲ್ಲಿಗೆ ಒಂದು ಜೀಪ್ ಕಳಿಸುತ್ತೇನೆ.

ತಡ ಮಾಡಿದರೆ ರಾಕೆಟ್ ಉಡಾವಣೆ 6 ಗಂಟೆಗೆ ಅಸಾಧ್ಯ ಎಂದು ಎಚ್ಚರಿಸಿದ್ದರು. ನನ್ನ ಕೆಲಸ ಮುಗಿಸಿ 2 ಗಂಟೆಗೆ ಜೀಪ್ ಬರುವುದನ್ನೇ ಕಾಯುತ್ತಿದ್ದೆ. ಜೀಪ್ ಬರಲಿಲ್ಲ. ಕರೆ ಮಾಡುವುದಕ್ಕೆ ಟೆಲಿಫೋನ್ ಸಂಪರ್ಕವಿರಲಿಲ್ಲ. ನನ್ನಿಂದ ಉಡಾವಣೆ ರದ್ದಾದರೆ ನನ್ನ ಕೆಲಸದ ಗತಿಯೇನು ಎಂಬ ಯೋಚನೆಯಲ್ಲಿದ್ದೆ. ನನಗೆ ಅಲ್ಲಿದ್ದ ಒಂದು ಸೈಕಲ್ ಕಾಣಿಸಿತು. ನನ್ನ ಸಹಾಯಕರ ಜತೆಗೆ ನಾನು ಆ ಸೈಕಲ್‌ನ ಕ್ಯಾರಿಯರ್ ಮೇಲೆ ನೋಸ್ ಕೋನ್ ಇಟ್ಟು ಉಡಾವಣಾ ಸ್ಥಳಕ್ಕೆ ನಡೆದು ಕೊಂಡೇ ಹೊರಟೆ. ಮಧ್ಯಾಹ್ನದ ಉರಿಬಿಸಿಲಿನಲ್ಲಿ ಅರ್ಧ ದಾರಿ ಹೋದಾಗ ದೂರದಲ್ಲಿ ನಮ್ಮ ಕಡೆಗೆ ಒಬ್ಬರು (ವಿದೇಶಿಯ ರಾಗಿ ತೋರುತ್ತಿದ್ದರು) ಸೈಕಲ್ ಮೇಲೆ ಜೋರಾಗಿ ಬರುತ್ತಿದ್ದರು.

ನಮ್ಮ ಬಳಿ ಬಂದೊಡನೇ ಅವರು ತಮ್ಮ ಸೈಕಲನ್ನು ಪಕ್ಕಕ್ಕೆ ಬಿಸಾಡಿ, ಹಾಗೇ ಹೋಗುತ್ತಿರಿ, ನನ್ನ ಕಡೆ ನೋಡಬೇಡಿ ಎನ್ನುತ್ತ ಕ್ಯಾಮೆರಾದಲ್ಲಿ ಫೋಟೊ ತೆಗೆ ಯಲು ಶುರುಮಾಡಿದರು. ಹಾಗೆ ನಡೆಯುತ್ತಲೇ ನಾನು ರಾಕೆಟ್ ಜೋಡಣೆಯ ಸ್ಥಳಕ್ಕೆ ಹೋದೆ. ರಾಕೆಟ್ ಉಡಾವಣೆ ಸಮಯಕ್ಕೆ ಸರಿಯಾಗಿ ಆಯಿತು. ನಂತರ ತಿಳಿದ ವಿಷಯ: ನನಗೆ ಜೀಪ್ ಕಳಿಸುವುದನ್ನು ಎಲ್ಲರೂ ಮರೆತಿದ್ದರು ಮತ್ತು ನಮ್ಮ ಫೋಟೊ ತೆಗೆದವರು ಅಂದಿನ ಜಗತ್ಪ್ರಸಿದ್ಧ ಛಾಯಾಗ್ರಾಹಕರಾಗಿದ್ದ ಫ್ರಾನ್ಸ್ ದೇಶದ ಹೆನ್ರಿ ಕಾರ್ಟಿಯರ್ ಬ್ರೆಸ್ಸೋನ್ ಎಂದು. ದೇಶಾದ್ಯಂತ ಈ ಫೋಟೊ ಪ್ರಸಿದ್ಧಿಯಾಯಿತು.

ಈಗಲೂ ಎಲ್ಲೆಡೆ ಈ ಚಿತ್ರ ಕಾಣುತ್ತಲೇ ಇದೆ!’ ಪುಸ್ತಕದುದ್ದಕ್ಕೂ ಹೀಗೆ ಅನುಭವಗಳ ಬುತ್ತಿ. ಸುಲಲಿತ ಭಾಷೆ. ಅನವಶ್ಯಕ ಶಬ್ದಾಡಂಬರ, ಸಾಹಿತ್ಯಿಕ ಅಲಂಕಾರ ಇಲ್ಲ. ನಮ್ಮ ಆಪ್ತ ಬಂಧುವೊಬ್ಬರು ಎದುರಿಗೆ ಕುಳಿತು ತಮ್ಮ ಅನುಭವಗಳನ್ನೆಲ್ಲ ಹೇಳುತ್ತಿದ್ದಾರೇನೋ ಅಂತೆನಿಸುವ ಸರಳಸುಂದರ ನಿರೂಪಣೆ. ಅನಂತೇಶ್ವರ ದೇವಸ್ಥಾನದ ಕಲ್ಲುಗಳ ಬಗ್ಗೆ ಸಂಶೋಧನೆಗೆ ನೆರವಾದ ಮಹನೀಯರ ಸ್ಮರಣೆ. ತಿರುವನಂತಪುರಂ ಕನ್ನಡಿಗರು ಸೇರಿ ಸ್ಥಾಪಿಸಿದ್ದ ಕರ್ನಾಟಕ ಅಸೋಸಿ ಯೇಷನ್, ಮಲಯಾಳಂ ಕನ್ನಡ ಭಾಷಾಸೌಹಾರ್ದಕ್ಕಾಗಿ ಮಂದಾರಮಲ್ಲಿಗೆ ಪುಸ್ತಕ ಪ್ರಕಟಣೆ.

ಪುರಂದರದಾಸರ ಕೃತಿಗಳನ್ನು ಮಲಯಾಳಂನಲ್ಲಿ ಮತ್ತು ಸ್ವಾತಿತಿರುನಾಳರ ಕೃತಿಗಳನ್ನು ಕನ್ನಡದಲ್ಲಿ ಪ್ರಕಟಿಸಿ ಬಾಂಧವ್ಯದ ಹೊಸ ಜೋಡಣೆ. ಕೇರಳದ ಮಹಿಳೆಯರ ಸಹಜ ಸೌಂದರ್ಯದ ವರ್ಣನೆ. ಒಮ್ಮೆ ರೈಲುಪ್ರಯಾಣದ ವೇಳೆ ಎರ್ನಾಕುಲಂನಿಂದ ಬೆಂಗಳೂರಿಗೆ ರಾತ್ರಿ ಪ್ರಯಾಣದಲ್ಲಿ ಸಂಗೀತ ಶಿಖಾಮಣಿ ಚೆಂಬೈ ವೈದ್ಯನಾಥ ಭಾಗವತರ ಭೇಟಿ, ಕೆಳ-ಬರ್ತ್ ಅನ್ನು ಚೆಂಬೈಗೆ ಬಿಟ್ಟುಕೊಟ್ಟು ಮೇಲಿನ ಬರ್ತ್‌ನಲ್ಲಿ ಸತ್ಯ ಮಲಗಿದರಂತೆ. ಚಂಬೈ ಅವರ ಸಸ್ವರ ಗೊರಕೆಯಿಂದಾಗಿ ರಾತ್ರಿ ನಿದ್ದೆಗೆ ಖೋತಾ!

ಮತ್ತೊಮ್ಮೆ ಶ್ರೀಹರಿಕೋಟಾ ರಾಕೆಟ್ ಉಡಾವಣಾ ಕೇಂದ್ರದ ಬಗ್ಗೆ ಸತ್ಯ ನಿರೂಪಿಸಿದ್ದ ಶಬ್ದಚಿತ್ರಕ್ಕೆ ಚೆನ್ನೈ ವಾನುಲಿ ನಿಲಯಂನವರು ಕುನ್ನಕ್ಕುಡಿ ವೈದ್ಯ ನಾಥನ್‌ರ ಬ್ಯಾಕ್ ಗ್ರೌಂಡ್ ಮ್ಯುಸಿಕ್ ವ್ಯವಸ್ಥೆ ಮಾಡಿದ್ದರಿಂದ ಅವರ ಭೇಟಿ. ಪ್ರವಾಸಿಗನಾಗಿ ಪಡೆದ ಅನುಭವಗಳ, ಕಂಡ ದೃಶ್ಯಗಳ ಬಣ್ಣನೆಯನ್ನೂ ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ. ನವಿರಾದ ಹಾಸ್ಯ ಲೇಪ ಬೇರೆ. ‘ಯುರೋಪ್ ಪ್ರವಾಸದಲ್ಲಿ ದುಡ್ಡು ಉಳಿಸಲು ಮೂರು ತಿಂಗಳು ತಲೆಕ್ಷೌರ ಮಾಡಿಸದೇ ಓಡಾಡಿದ್ದು, ಕೊನೆಗೆ ಮುಜುಗರ ತಡೆಯಲಾರದೆ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಹೊಟೆಲ್ ಮ್ಯಾನೆಜರ್ ಬಳಿಹೋಗಿ ಸೆಲೂನ್ ಬಗ್ಗೆ ವಿಚಾರಿಸಿದ್ದು, ಇತ್ಯಾದಿ ನಾಚದೇ ಬರೆದಿದ್ದಾರೆ. ಅಮೆರಿಕದಲ್ಲಿ ವಿಮಾನಪ್ರಯಾಣ ವೇಳೆ ಸೆಕ್ಯುರಿಟಿ ಯವರು ಚೆಕ್‌ಇನ್ ಬ್ಯಾಗ್‌ಗಳಲ್ಲಿದ್ದ ಮೊಸ್ರನ್ನ ಡಬ್ಬಿಗಳನ್ನು ವಶಪಡಿಸಿಕೊಂಡದ್ದು, ಕೈರೋದಲ್ಲಿ ಏರ್‌ ಪೋರ್ಟ್ ಶೌಚಾಲಯ ಬಳಕೆ ಉಚಿತವಾಗಿದ್ದರೂ ಧಡಿಯನೊಬ್ಬ ಇವರಿಂದ ಒಂದು ಡಾಲರ್ ಪೀಕಿದ್ದು, ವಾಷಿಂಗ್ಟನ್‌ನ ಟ್ಯಾಕ್ಸಿ ಡ್ರೈವರ್‌ಗಳು ಪ್ರಾಮಾಣಿಕತೆ ಮೆರೆದದ್ದು, ಲಾಸ್‌ಏಂಜಲೀಸ್ ಸಿಟಿಟೂರ್ ಬಸ್ಸಿನ ಡ್ರೈವರನು ಇವರ ಪೃಷ್ಠದ ಕುರುವಿಗೆ ಮುಲಾಮು ಕೊಡಿಸಿದ್ದು, ಬ್ರಿಟನ್‌ನಲ್ಲೊಮ್ಮೆ ಹೊಟೆಲ್ ವಾಸ್ತವ್ಯದ ವೇಳೆ
ಭೀಕರ ಚಂಡಮಾರುತ ಎದ್ದದ್ದು, ಇಸ್ರೇಲ್, ಚೈನಾ, ಸ್ವೀಡನ್, ಐರ್ಲ್ಯಾಂಡ್, ಶ್ರೀಲಂಕಾ, ಕಾಂಬೋಡಿಯಾ… ಭೇಟಿಯ ರೋಚಕ ಘಟನೆಗಳ ನೆನಪುಗಳನ್ನು ಸೊಗಸಾಗಿ ಅಕ್ಷರಕ್ಕಿಳಿಸಿದ್ದಾರೆ.

ಮೂರನೆಯ ಭಾಗದಲ್ಲಿ ಹಲವು ರೋಚಕ ಸಂಗತಿಗಳಿವೆ. ಸತ್ಯ ಅವರನ್ನು ಸಂಪರ್ಕಿಸಿ (ಮೊಬೈಲ್: ೯೯೪೫೭೪೪೯೭೨ ಇಮೇಲ್: ooZಠಿeqsZಃqsZeಟಟ.ಟಞ) ಪ್ರತಿಗಳನ್ನು ಪಡೆಯಿರಿ. ಏಕಾದ್ಸಿ ಪ್ವಾಸದಂಥ ತಮಾಷೆ ಪದ್ಯ ಬರೆದವರ ಜೀವನಾನುಭವ ಹೇಗೆ ದ್ವಾದಶಿ ಪಾರಣೆಯಂತೆ ಸಮೃದ್ಧವಾಗಿದೆ ಎಂದು ಗೊತ್ತಾಗುತ್ತದೆ.