Saturday, 21st September 2024

ಜಗತ್ತಿನ ಅತ್ಯಂತ ಜನಪ್ರಿಯ ಪಾನೀಯ – ಚಹಾ !

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

nasomeshwara@gmail.com

ವಿಶ್ವದ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಚಹಾ ಮತ್ತು ಕಾಫಿ ಮುಖ್ಯವಾದವು. ಪೌರ್ವಾತ್ಯ ಗೋಳದ ಜನರೆಲ್ಲ ಪ್ರಧಾನ ವಾಗಿ ಚಹಾ ಪ್ರಿಯರಾಗಿದ್ದರೆ, ಪಾಶ್ಚಾತ್ಯ ಗೋಳದ ಜನರೆಲ್ಲ ಪ್ರಧಾನವಾಗಿ ಕಾಫಿ ಪ್ರಿಯರಾಗಿದ್ದಾರೆ. ನಮ್ಮ ದೇಶದ ಉತ್ತರ ಭಾಗ ದಲ್ಲಿ ಚಹಾ, ದಕ್ಷಿಣದಲ್ಲಿ ಕಾಫಿ ಜನಪ್ರಿಯ.

ಇಡೀ ದೇಶವನ್ನು ಪರಿಗಣಿಸಿದರೆ 44% ಭಾರತೀಯರು ಪ್ರಧಾನವಾಗಿ ಚಹಾ ಪ್ರಿಯರಾದರೆ, 14% ಕಾಫಿ ಪ್ರಿಯರು ಹಾಗೂ 38% ಜನರು ಎರಡನ್ನೂ ಇಷ್ಟ ಪಟ್ಟುಕುಡಿಯುತ್ತಾರೆ. ಚಹಾ ಮತ್ತು ಕಾಫಿಗಳೆರಡು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಇವೆರಡೂ ಇಲ್ಲದ ಜೀವನವನ್ನು ಊಸಿಕೊಳ್ಳುವುದೂ ಕಷ್ಟವಾಗುತ್ತದೆ. ಚಹಾದ ತವರೂರು ಚೀನಾ ಎಂದು ಸಾಮಾನ್ಯ ಅಭಿಪ್ರಾಯ.

ಆದರೆ ಇತ್ತೀಚಿನ ಅಧ್ಯಯನಗಳ ಅನ್ವಯ 29 ಡಿಗ್ರೀ ಅಕ್ಷಾಂಶ ಹಾಗೂ 98 ಡಿಗ್ರೀ ರೇಖಾಂಶ ದ ನಡುವಿನ ಪ್ರದೇಶದಲ್ಲಿ, ಅಂದರೆ ಇಂದಿನ ಆಗ್ನೇಯ ಚೀನಾ, ಟಿಬೆಟ್, ಉತ್ತರ ಬರ್ಮ ಹಾಗೂ ಈಶಾನ್ಯ ಭಾರತದ ನಡುನ ಪ್ರದೇಶದಲ್ಲಿ ಚಹಾದ ಗಿಡವು ಹುಟ್ಟಿರ ಬೇಕು ಎನ್ನಲಾ ಗಿದೆ. ಕ್ರಿ.ಪೂ.3200 ವರ್ಷಗಳ ಹಿಂದೆಯೇ ಚಹಾ ಗಿಡ ಇದ್ದುದರ ಬಗ್ಗೆ ದಾಖಲೆ ಯಿದೆ ಎನ್ನುವರಾದರೂ, ಈ ಬಗ್ಗೆ ಸರ್ವಮಾನ್ಯ ವಾದ ದಂತಕಥೆಯು ಕ್ರಿ.ಪೂ.2737ರಷ್ಟು ಹಿಂದಕ್ಕೆ ಹೋಗುತ್ತದೆ. ಚೀನಾ ಸಾಮ್ರಾಜ್ಯದ ಸಾಮ್ರಾಟನ ಹೆಸರು ಶೆನ್ ನುಂಗ್.

ಆಗ್ನೇಯ ಚೀನಾದಲ್ಲಿರುವ ಭೂಭಾಗದ ಹೆಸರು ಯುನಾನ್. ಒಂದು ದಿನ ಶೆನ್‌ನುಂಗ್ ಒಂದು ಮರದ ಕೆಳಗೆ ಕುಳಿತಿದ್ದಾಗ, ಸೇವಕರು ಬಿಸಿ ನೀರನ್ನುತಂದಿಟ್ಟರು. ಆಗ ಗಾಳಿಯು ಬೀಸಿ, ಮರದ ಎಲೆಗಳು ಬಿಸಿನೀರಿನ ಬಸಿಯಲ್ಲಿ ಬಿದ್ದಿತಂತೆ. ತಕ್ಷಣವೇ ಆ ಬಿಸಿನೀರಿನ ಬಣ್ಣವು ಬದಲಾಯಿಸಿ, ಒಂದು ರೀತಿಯ ಪರಿಮಳವು ಹೊರಡಿಸಿತಂತೆ. ಸಾಮ್ರಾಟನು ಗಿಡ-ಮೂಲಿಕೆಗಳ ತಜ್ಞ ನಾಗಿದ್ದ. ಈ ಬಣ್ಣದ ನೀರನ್ನು ಕುಡಿದ. ರುಚಿಯು ಸ್ವಲ್ಪಕಹಿಯಾಗಿತ್ತು. ಸ್ವಲ್ಪ ಹೊತ್ತಿನಲ್ಲಿ ಅವನಲ್ಲಿ ನವ ಚೇತನವು ಮೂಡಿತು. ಕ್ಯಾಮೀಲಿಯ ಸೈನೆನ್ಸಿಸ್ ಎನ್ನುವ ಗಿಡದ ಎಲೆಗಳು ಬಿಸಿನೀರಿನಲ್ಲಿ ಬಿದ್ದಿದ್ದವು. ಆ ಪಾನೀಯವನ್ನು ‘ಚಾ’ಎಂದು ಕರೆದ. ಹೀಗೆ ಆಕಸ್ಮಿಕವಾಗಿ ಚಹಾದ ಆಷ್ಕಾರವಾಯಿತು ಎನ್ನುವುದು ಕಥೆಯ ಸಾರಾಂಶ.

ಈ ದಂತಕಥೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅಸಾಧ್ಯ. ಕ್ರಿ.ಪೂ.1500- ಕ್ರಿ.ಪೂ.1046ರ ನಡುವೆ ಚೀನಾವನ್ನು ಶ್ಯಾಂಗ್ ವಂಶವು ಆಳಿತು. ಈ ಅವಧಿಯಲ್ಲಿ ಚಹಾವು ಒಂದು ‘ಆರೋಗ್ಯಕರ ಪೇಯ’ವಾಗಿ ಯುನಾನ್ ಪ್ರಾಂತದಲ್ಲಿ ಬಳಕೆ ಯಲ್ಲಿತ್ತು ಎನ್ನುತ್ತದೆ ‘ದಿ ಸ್ಟೋರಿ ಆಫ್ ಟೀ’ಎನ್ನುವ ಪುಸ್ತಕ. ಕ್ರಿ.ಪೂ.206-ಕ್ರಿ.ಶ.220ರ ನಡುವೆ ಆಳಿದ ಹಾನ್ ವಂಶಸ್ಥರ ಸಮಾಧಿಗಳಲ್ಲಿ ಚಹಾದ ಎಲೆಗಳು ದೊರೆತಿವೆ. ಕ್ರಿ.ಶ.618-ಕ್ರಿ.ಶ.906ರವರೆಗೆ ಚೀನಾವನ್ನು ಆಳಿದ ಟ್ಯಾಂಗ್ ವಂಶವು ಚಹಾವನ್ನು ರಾಷ್ಟ್ರೀಯ ಪಾನವನ್ನಾಗಿ ಜನಪ್ರಿಯಗೊಳಿಸಿತು.

8 ನೆಯ ಶತಮಾನದ ಕೊನೆಯಲ್ಲಿ ‘ಲು ಯು’ ಎನ್ನುವವ ‘ಚಾ ಚಿಂಗ್’ ಅಥವಾ ‘ದಿ ಕ್ಲಾಸಿಕ್ ಆ- ಟೀ’ಎನ್ನುವ ಒಂದು ಚಹಾ ಪುಸ್ತಕವನ್ನೇ ಬರೆದ. ಇದು ಚೀನಾದಲ್ಲಿ ಚಹಾವು ಎಷ್ಟರ ಮಟ್ಟಿಗೆ ಜನಪ್ರಿಯವಾಗಿತ್ತು ಎನ್ನುವುದನ್ನು ಸೂಚಿಸುತ್ತದೆ. ಈ ಪುಸ್ತಕದ ಪ್ರಕಟಣೆಯ ನಂತರ ಚೀನಾದೇಶದ ಬೌದ್ಧ ಭಿಕ್ಷು ಗಳು ಚಹಾವನ್ನು ಜಪಾನಿಗೆ ಪರಿಚಯ ಮಾಡಿದರು. ಜಪಾನಿ ನಲ್ಲಿ ಚಹಾ ಪಾನವು ಅಪಾರ ಜನಪ್ರಿಯವಾಯಿತು. ಮನೆಗೆ ಬಂದ ಅತಿಥಿಗಳಿಗೆ ಚಹಾಪಾನವನ್ನು ಮಾಡಿಸುವ ವಿಧಿಗಳು ಜಪಾನೀ
ಸಂಸ್ಕೃತಿಯಲ್ಲಿ ಬೆಳೆದು ಬಂದವು. ಈ ವಿಧಿ– ವಿಧಾನಗಳು ಪ್ರಧಾನವಾಗಿ ಚಾ-ಚಿಂಗ್ ಪುಸ್ತಕವನ್ನು ಅವಲಂಭಿಸಿದ್ದವು.

ಭಾರತದಲ್ಲಿ ಚಹಾ ಒಂದು ಪಾನೀಯವಾಗಿ 16ನೆಯ ಶತಮಾನದಿಂದಲೇ ಬಳಕೆಯಲ್ಲಿತ್ತು ಎನ್ನುವ ಕೆಲವು ವಾದವಿದೆ. ಭಾರತ ದಲ್ಲಿ ಚಹಾ ಕೃಷಿಯನ್ನು ಬ್ರಿಟೀಷರು ಮೊದಲು ಈಶಾನ್ಯ ಭಾರತದ ಅಸ್ಸಾಂನಲ್ಲಿ, ನಂತರ ದಕ್ಷಿಣ ಭಾರತದ ಊಟಿ, ಕೊಡೈಕೆ ನಾಲ್ ಬೆಟ್ಟಗಳಲ್ಲಿ ಆರಂಭಿಸಿದರು. ಇಂದು ವಿಶ್ವದ ಚಹಾವನ್ನು ಬೆಳೆಯುವ ನಾಲ್ಕು ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಚಹಾದಲ್ಲಿ ಎರಡು ನಮೂನೆಗಳು ಮುಖ್ಯವಾದವು. ಚೀನೀ ಚಹಾ (ಕ್ಯಾಮೀಲಿಯ ಸೈನೆನ್ಸಿಸ್ ಸೈನೆನ್ಸಿಸ್) ಮತ್ತು ಅಸ್ಸಾಮ್ ಚಹಾ (ಕ್ಯಾಮೀಲಿಯ ಸೈನೆನ್ಸಿಸ್ ಅಸ್ಸಾಮಿಕ). ಮಾರುಕಟ್ಟೆಯಲ್ಲಿ ವೈಟ್ ಟೀ, ಯೆಲ್ಲೋ ಟೀ, ಗ್ರೀನ್ ಟೀ, ಊಲಾಂಗ್ ಟೀ, ಡಾರ್ಕ್ ಟೀ, ಬ್ಲಾಕ್ ಟೀ ಮುಂತಾದ ನಮೂನೆಗಳೆಲ್ಲವನ್ನು ಈ ಎರಡು ಮೂಲ ಚಹಾದ ಎಲೆಗಳಿಂದಲೇ ತಯಾರಿಸುವರು.

ಈ ಎಲ್ಲ ಚಹಾ ನಮೂನೆಗಳಿಗೆ ಕಾರಣ, ಚಹಾದ ಎಲೆಗಳನ್ನು ಸಂಸ್ಕರಿಸುವ ವಿವಿಧ ವಿಧಾನಗಳು. ಹಾಗಾಗಿ ಚಹಾದ ಎಲೆಗಳ
ಸಂಸ್ಕರಣ ವಿಧಾನಗಳನ್ನು ಅನುಸರಿಸಿ, ಅವುಗಳ ರಾಸಾಯನಿಕ ಸಂಯೋಜನೆಯು ವಿಭಿನ್ನವಾಗುತ್ತದೆ. ರುಚಿಯೂ ವ್ಯತ್ಯಾಸ ವಾಗುತ್ತದೆ. ಮೂಲತಃ ಚಹಾದಲ್ಲಿ ಪ್ರಧಾನವಾಗಿ ಪಾಲಿಫೀನಾಲು ಗಳಿರುತ್ತವೆ. ನಂತರ ಆಲ್ಕಲಾಯ್ಡ್ ಗಳಾದ ಕೆಫೀನ್, ಥಿಯೋ ಫಿಲ್ಲಿನ್, ಥಿಯೋಬ್ರೋಮಿನ್ ಇರುತ್ತವೆ.

ಶರ್ಕರ ಗಳು, ಅಮೈನೋ ಆಮ್ಲಗಳು, ವಿಟಮಿಮನ್‌ಗಳು ಹಾಗೂ ಲೋಹಗಳಿರುತ್ತವೆ. ಚಹಾದಲ್ಲಿ ಸುಮಾರು 30000 ಪಾಲಿ ಫೀನಾಲುಗಳಿವೆ. ಚಹಾದ ಕಹಿ ರುಚಿಗೆ ಈ ಪಾಲಿಫೀನಾಲುಗಳೇ ಕಾರಣ. ಇವು ಮೂಲತಃ ಚಹಾ ಗಿಡದ ಸಂರಕ್ಷಕ ರಾಸಾಯನಿಕ ಗಳು. ಪ್ರಾಣಿ, ಪಶು, ಪಕ್ಷಿಗಳು ಗಿಡವನ್ನು ತಿಂದು ಹಾನಿ ಮಾಡದಂತೆ ರಕ್ಷಿಸುತ್ತವೆ. ಜಪಾನೀಯರು ದೀರ್ಘಾಯು ಗಳು. ಅವರ ದೀರ್ಘಾಯಸ್ಸಿಗೆ ನಿತ್ಯ ಚಹಾ ಪಾನವೂ ಒಂದು ಕಾರಣ ಎನ್ನಲಾಗಿದೆ.

ಚಹಾ ಪಾನದಿಂದ ದೊರೆಯುವ ಲಾಭಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಚಹಾಕ್ಕೆ ಆರೋಪಿಸಿರುವ ಗುಣಗಳು ಅಸಂಖ್ಯ. ಆದರೆ ಅವುಗಳಲ್ಲಿ ಸಾಕಷ್ಟು ಗುಣಗಳಿಗೆ ಆಧುನಿಕ ವಿಜ್ಞಾನದ ಪುರಾವೆಯನ್ನು ಹುಡುಕುವುದು ಕಷ್ಟ. ಚಹಾವನ್ನು ಕುಡಿದ ಕೂಡಲೇ ಒಂದು ರೀತಿಯ ಉಲ್ಲಾಸ, ನವಚೈತನ್ಯ ಮೂಡಲು ಕಾರಣ ಅದರಲ್ಲಿರುವ ಕೆಫೀನ್. ಚಹಾದಲ್ಲಿ ಕಾಫಿ ಗಿಂತಲೂ ಕಡಿಮೆ ಕೆಫೀನ್ ಇದ್ದರೂ ಸಹ, ಅದು ನಮ್ಮ ಮನಸ್ಸು ಮತ್ತು ದೇಹದ ಮೇಲೆ ಉತ್ತೇಜಕರ ಪರಿಣಾಮವನ್ನು ಬೀರು ವಷ್ಟು ಇರುತ್ತದೆ.

ಚಹಾವನ್ನು ಸೇಸಿದ ಮೇಲೆ ಕೆಮ್ಮು ಕಡಿಮೆಯಾಗಿ ಉಸಿರಾಟವು ಸರಾಗವಾಗಲು ಕಾರಣ ಚಹಾದಲ್ಲಿರುವ ಥಿಯೋಫಿಲ್ಲಿನ್. ಈಗ ಥಿಯೋಫಿಲ್ಲಿನ್ ಗುಳಿಗೆಗಳು ಮಾರುಕಟ್ಟೆಯಲ್ಲಿ ಲಭ್ಯದ್ದು, ಅಸ್ತಮ ಚಿಕಿತ್ಸೆಯಲ್ಲಿ ಬಳಕೆಯಲ್ಲಿರುವ ಹಲವು ಔಷಧಗಳಲ್ಲಿ ಒಂದಾಗಿದೆ. ಚಹಾವು ಕ್ಯಾನ್ಸರನ್ನು ತಡೆಗಟ್ಟಬಲ್ಲುದು, ಆಲ್ಜೈಮರ್ ಕಾಯಿಲೆಯನ್ನು, ಹೃದ್ರೋಗಗಳನ್ನು ನಿಯಂತ್ರಿಸಬಲ್ಲುದು
ಹಾಗೂ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವನ್ನು ನಿಯಂತ್ರಿಸಬಲ್ಲುದು ಎನ್ನಲಾಗಿದೆ. ಇದಕ್ಕೆ ಕಾರಣ -ವನಾಯ್ಡ್ ಎನ್ನುವ ವರ್ಗದ ಪಾಲಿಫೀನಾಲ್. ಈ -ವನಾಯ್ಡುಗಳಲ್ಲಿ ಇಸಿಜಿಸಿ (ಎಪಿಗ್ಯಾಲಕ್ಟೋಚಿನ್  -3-ಗ್ಯಾಲೇಟ್) ಎನ್ನುವ -ವನಾಯ್ಡ್ ಮುಖ್ಯ ವಾದದ್ದು.

ನಮ್ಮ ದೇಹದಲ್ಲಿ ಅಸಂಖ್ಯ ರಾಸಾಯನಿಕ ಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಇಂತಹ ಕ್ರಿಯೆಗಳಲ್ಲಿ ಅಪಾಯಕಾರಿ ಯಾದ ‘ನೇಸಂಟ್ ಆಕ್ಸಿಜನ್’ ಉತ್ಪಾದನೆಯಾಗುತ್ತದೆ. ಈ ನೇಸಂಟ್ ಆಕ್ಸಿಜನ್ ಅತ್ಯಂತ ಪಟುಕಾರಿ. ಉತ್ಪಾದನೆಯಾದ ತತ್‌ ಕ್ಷಣವೇ ಜೀವಕೋಶಕ್ಕೆ ಇಲ್ಲವೇ ಊತಕವನ್ನು ಸುಡಬಲ್ಲುದು. ಹೀಗೆ ನೇಸಂಟ್ ಆಕ್ಸಿಜನ್ ಹಾನಿಯು ನಿರಂತರವಾಗಿ ವರ್ಷಾನು ಗಟ್ಟಲೇ ಮುಂದುವರೆದರೆ, ಅದು ಮಾರಕ ಕಾಯಿಲೆಗಳು ಬೆಳೆಯಲು ಕಾರಣವಾಗಬಹುದು. ಇಸಿಜಿಸಿ ಇಂತಹ ನೇಸಂಟ್ ಆಕ್ಸಿಜನ್ ಪರಮಾಣುಗಳನ್ನು, ಅವು ಉತ್ಪಾದನೆಯಾದ ತಕ್ಷಣವೇ ಅವನ್ನು ತಟಸ್ಥಗೊಳಿಸಿ, ಅವುಗಳಿಂದಾಗುವ ಹಾನಿಯನ್ನು ತಪ್ಪಿಸುತ್ತದೆ.

ಇಂತಹ ಗುಣಗಳುಳ್ಳ ರಾಸಾಯನಿಕಗಳನ್ನು ‘ಆಂಟಿ-ಆಕ್ಸಿಡೆಂಟ್ಸ್’ ಎನ್ನುವರು. ಗ್ರೀನ್-ಟೀ ಯಲ್ಲಿ -ವನಾಯ್ಡುಗಳು ಅಧಿಕ ವಾಗಿರುತ್ತವೆ. ಚಹಾವನ್ನು ಹೆಚ್ಚು ಹೆಚ್ಚು ಸಂಸ್ಕರಿಸುತ್ತಾ ಹೋದಷ್ಟು -ವನಾಯ್ಡುಗಳ ಪ್ರಮಾಣವು ಕಡಿಮೆಯಾಗುತ್ತಾ ಹೋಗುತ್ತದೆ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಗ್ರೀನ್-ಟೀ ಸೇವನೆಯು ಒಳ್ಳೆಯದು. ಇದರಲ್ಲಿರುವ ಅಧಿಕ ಪ್ರಮಾಣದ ಇಸಿಜಿಸಿ ಇರುತ್ತದೆ. ಇದು ಮೂತ್ರಾಶಯ, ಸ್ತನ, ಶ್ವಾಸಕೋಶ, ಜಠರ, ಪ್ಯಾನ್‌ಕ್ರಿಯಾಸ್ ಮತ್ತು ಕರುಳ ಕ್ಯಾನ್ಸರ್ ಬೆಳವಣಿಗೆ ಯನ್ನು ತಡೆಗಟ್ಟಬಲ್ಲುದು.

ಇದು ಕೊಬ್ಬನ್ನು ಕರಗಿಸಬಲ್ಲುದು. ಕೊಲೆಸ್ಟ್ರಾಲನ್ನುಕಡಿಮೆ ಮಾಡಬಲ್ಲುದು. ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ನಿವಾರಿಸಬಲ್ಲುದು. ಇದರಿಂದ ಹೃದಯಾಘಾತ, ಲಕ್ವ ಮುಂತಾದವು ಸಂಭಸುವ ಸಾಧ್ಯತೆಯು ಕಡಿಮೆಯಾಗಬಹುದು. ಮಿದುಳಿ ನಲ್ಲಿ ಅಕಾಲ ಆಲ್ಜೈಮರ್ ಅಥವಾ ಪಾರ್ಕಿನ್ಸಸ್ ಕಾಯಿಲೆಗಳು ತಲೆದೋರದಂತೆ ರಕ್ಷಿಸಬಲ್ಲುದು. ಊಲಾಂಗ್ ಚಹಾವು ರಕ್ತದಲ್ಲಿರುವ ಹೆಚ್ಚುವರಿ ಕೆಟ್ಟ ಕೊಲೆಸ್ಟ್ರಾಲ್ (ಎಲ್.ಡಿ.ಎಲ್) ಪ್ರಮಾಣವನ್ನು ಕಡಿಮೆ ಮಾಡಬಲ್ಲುದು. ಊಲಾಂಗ್ ಚಹಾವು ಶರೀರದ ತೂಕವನ್ನು ಕಡಿಮೆ ಮಾಡುತ್ತದೆ ಎನ್ನುವ ಒಂದು ವಾದವಿದೆಯಾದರೂ ಅದಕ್ಕೆ ಸೂಕ್ತ ಪುರಾವೆಯು ದೊರೆತಿಲ್ಲ.

ಚಹಾವನ್ನು ತಯಾರಿಸುವ ವಿಧಾನಗಳು ಅಸಂಖ್ಯ. ಮೂಲತಃ, ಚಹಾ ಎಂದರೆ ಕುದಿಯುವ ನೀರಿಗೆ ಚಹಾದ ಪುಡಿಯನ್ನು ಹಾಕಿ, ಸೋಸಿ ಬಿಸಿ ಬಿಸಿಯಾಗಿ ಕುಡಿಯುವ ಪಾನೀಯ. ನಂತರ ಇದಕ್ಕೆ ಸಕ್ಕರೆಯನ್ನು ಹಾಕಿದರು. ಹಾಲನ್ನು ಬೆರೆಸಿದರು. ಭಾರತೀ ಯರು ನಾನಾ ವಿಧದ ಸಂಭಾರ ಪದಾರ್ಥಗಳನ್ನು ಹಾಕಿ ಮಸಾಲ ಚಹಾವನ್ನು ತಯಾರಿಸಿದರು. ಉತ್ತರಭಾರತದಲ್ಲಿ ಮಸಾಲಾ ಚಹಾ ಅತ್ಯಂತ ಜನಪ್ರಿಯವಾಗಿದೆ. ಇನ್ನು ಕೆಲವರು ಚಹಾದ ಜತೆಯಲ್ಲಿ ನಾನಾ ರೀತಿಯ ಗಿಡ ಮೂಲಿಕೆಗಳನ್ನು ಬೆರೆಸಿ ವಿಶೇಷ ಚಹಾಗಳನ್ನು ಸಿದ್ಧಪಡಿಸಿದರು. ಶುಂಠಿ, ಗಿಂಕೋ ಬೈಲೋಬ, ಜಿನ್ಸೆಂಗ್, ದಾಸವಾಳ, ಮಲ್ಲಿಗೆ, ಪುದಿನಾ ಮುಂತಾದ ವನ್ನು ಬೆರೆಸಿ ಮಾಡಿದ ಚಹಾಗಳಿಗೆ ನಾನಾ ರೀತಿಯ ಲಾಭಗಳನ್ನು ಆರೋಪಿಸಿದರು.

ನಿದ್ರೆಯನ್ನು ತರುತ್ತದೆ, ನೆಗಡಿಯನ್ನು ಗುಣಪಡಿಸುತ್ತದೆ, ಮಧುಮೇವನ್ನು ತಡೆಗಟ್ಟುತ್ತದೆ, ರಕ್ತದ ಏರೊತ್ತಡವನ್ನು ನಿಯಂತ್ರಿಸು
ತ್ತದೆ ಎಂದೆಲ್ಲ ಹೇಳುವುದುಂಟು. ಚಹಾದಲ್ಲಿ ಸೆನ್ನಇಲ್ಲವೇ ಲೋಳೇಸರವನ್ನು ಬೆರೆಸಿ ಮಾಡಿದ ಚಹಾವು ಮಲಬದ್ಧತೆಯನ್ನು ನಿವಾರಿಸುತ್ತದೆ ಎನ್ನುವರು. ಆದರೆ ಇಂತಹ ಹೇಳಿಕೆಗಳಿಗೆ ವೈಜ್ಞಾನಿಕ ಪುರಾವೆಯು ದೊರೆಯುವುದಿಲ್ಲ.