Ravi Hunj Column: ʼನಂದಿʼ ಎಂಬ ಗಣನನ್ನು ʼನಂದಿನಿʼ ಯಾಗಿಸಿ ಕ್ಷೀರಸಾಗರ ಹರಿಸಿದ ಕಥೆ....
ಪ್ರಾಧ್ಯಾಪಕ-ಸಾಹಿತಿ-ಸಂಶೋಧಕ-ಚಿಂತಕ-ಸಾಕ್ಷಿಪ್ರಜ್ಞೆಗಳ ಅಭೂತಪೂರ್ವ ಗಾಂಪ ವೈಚಾರಿಕ ಭ್ರಷ್ಟತೆಗೆ ವಚನಗಳು, ಶರಣ ಸಂಶೋಧನೆಗಳು, ಶೂನ್ಯ ಸಂಪಾದನೆಗಳು ‘ಪುನರಪಿ ಜನನಂ ಪುನರಪಿ ಮರಣಂ’ ಎನ್ನುವಂತೆ ಅನೇಕಾನೇಕ ರೀತಿಯಾಗಿ ಸಂಪಾದಿತಗೊಂಡು, ಮರು ಮುದ್ರಣಗೊಂಡು, ತಿರುವುಮುರು ವಾಗಿ ಮುರುವುತಿರುವಾಗಿ ಶೀರ್ಷಿಕೆ ಬದಲಿಸಿಕೊಂಡು, ಬಸವಣ್ಣನನ್ನು ಕುದುರೆಯ ಮೇಲೆ, ಸಿಂಹಾ ಸನದ ಮೇಲೆ, ಮಣೆಯ ಮೇಲೆ ಕುಳ್ಳಿರಿಸಿ ತಿರು ತಿರು ಮುದ್ರಣಗೊಂಡು ಲಾಂಛನಗೊಂಡು ಲಂಘಿಸಿ ಕಾಂಚಾಣ ರೂಪ ತಾಳಿzವೆ. ಇವರೆಲ್ಲರೂ ಡಾಕ್ಟೋರೇಟ್, ಪೋ ಡಾಕ್ಟೋರೇಟ್ ಪದವಿಗಳನ್ನು ಪಡೆದು ವಿವಿಯ ಆಯಕಟ್ಟಿನ ಸ್ಥಾನಮಾನ ಗಳನ್ನು ಹೊಂದಿದ್ದಾರೆ. ಅಲ್ಲಿಗೆ ವಿವಿಗಳು ಹೇಗೆ ಪರವಶಗೊಂಡಿವೆ ಎಂಬುದು ನಿಮ್ಮ ಆಲೋಚನೆಗೆ ಬಿಟ್ಟ ವಿಷಯ.


ಬಸವ ಮಂಟಪ
ರವಿ ಹಂಜ್
ಬಸವಣ್ಣ ಬಹುಪಾಲು ಜನರಿಗೆ ಒಂದು ಉದ್ದಿಮೆ, ಮಾರಾಟದ ಸರಕು. ಈತನ ಹೆಸರು ಹೇಳಿ ಕೊಂಡು ಹೊಟ್ಟೆ ಹೊರೆಯುವುದು ಬಿಡಿ, ಬಿರಿದು ಉಬ್ಬರಿಸಿ ಅಪಾನವಾಯು ದೇಶವನ್ನೇ
ಆಕ್ರಮಿಸಿಕೊಳ್ಳುವಷ್ಟು ಲಾಭ ತಂದುಕೊಡುವ ನಂದಿನಿ, ಬಸವಣ್ಣ! ತಮ್ಮ ತಮ್ಮ ದುರಾಸೆ, ದುರ್ಗುಣ, ದುರ್ನಡತೆಗೆ ಶುಭ್ರ ಶ್ವೇತ ವಸ್ತ್ರ, ಶ್ವೇತ ಭಸ್ಮ ಧರಿಸಿ,ಅಪ್ಪಟ ಕಪ್ಪನೆಯ ಲಿಂಗವನ್ನು ಕೊರಳಿಗೆ ನೇತು ಹಾಕಿಕೊಂಡು ‘ಬಸವ ಬಸವ’ ಎನ್ನುತ್ತಾ ಒಂದೆರಡು ವಚನ ಪಠಿಸಿದರೆ ಅಷ್ಟೇ ಸಾಕು. ಈ ಲಾಂಛನದ ವಾಚನಕ್ಕೆ ಕಾಂಚಾಣವೋ ಕಾಂಚಾಣ, ಝಣ ಝಣ ಕಾಂಚಾಣ!
ಬಸವಣ್ಣನನ್ನು ಮೊದಲಿಗೆ ಕಾಂಚಾಣವಾಗಿಸಿದ್ದು ಎಂಬತ್ತರ ದಶಕದ ಸಮಾಜವಾದಿ ಪ್ರೇರಿತ ವಿಶ್ವವಿದ್ಯಾಲಯದ ಸಂಶೋಧಕ ಪ್ರಾಧ್ಯಾಪಕರು. ಕಾರ್ಲ್‌ಮಾರ್ಕ್ಸ್ ನ ’ಧರ್ಮ ಒಂದು ಅಫೀಮು’ ಎಂಬ ಒಂದು ವಾಕ್ಯವನ್ನಷ್ಟೇ ಹಿಡಿದು ಉಳಿದ ಪ್ರಾಸಂಗಿಕ ವಾಕ್ಯಗಳನ್ನು ಬಿಟ್ಟು ಹೇಗೆ ಮಾರ್ಕ್ಸ್ ನನ್ನು ಸಂಪೂರ್ಣ ತಲೆಬುಡವಾಗಿಸಿದರೋ ಹಾಗೆಯೇ ಬುದ್ಧ, ಬಸವ, ಪಂಪ, ಅಂಬೇಡ್ಕರ್, ಗಾಂಧಿ ಎಲ್ಲರನ್ನೂ ತಮ್ಮ ಸಮಾಜವಾದಿ ವಿಶ್ವಮಾನವ ಪ್ರಜ್ಞೆಗೆ ಅಳವಡಿಸಿ ತಲೆಕೆಳಗಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲಿಗೆ ಕಾರ್ಲ್ ಮಾರ್ಕ್ಸ್ ಹೇಳಿದ್ದು: Religion is the opium of the masses, its the hope of the hopeless world, its the distress of the distressed, its the spirit of the spiritless situation; if you think of replacing it you will have to replace it with the same hope which religion offers them.
ಅಂದರೆ, “ಧರ್ಮ ಎಂಬುದು ಸಾಮಾನ್ಯರ ಅಫೀಮು. ಅದು ಭರವಸೆಯೇ ಇಲ್ಲದವರ ಭರವಸೆ ಯಾಗಿ, ಬೇಗುದಿಗರ ಬೇಗುದಿಯಾಗಿ, ಆತ್ಮಚೈತನ್ಯವಿಲ್ಲದವರ ಆತ್ಮವಾಗಿದೆ; ಅದನ್ನು ನೀವು ಬದಲಿಸ ಬೇಕೆಂದು ಆಲೋಚಿಸುವುದಾದರೆ ನಿಮ್ಮ ಪರ್ಯಾಯವು ಸಹ ಜನರಿಗೆ ಧರ್ಮ ನೀಡಿರುವ ಭರವಸೆಯನ್ನೇ ನೀಡಬೇಕಾಗುತ್ತದೆ" ಎಂದಾಗುತ್ತದೆ.
ಮಾರ್ಕ್ಸ್ನ ಕಾಲಘಟ್ಟದಲ್ಲಿ ಕುಲೀನ ವರ್ಗವು ಲೋಲುಪ್ತತೆಗಾಗಿ ಅಫೀಮನ್ನು ಬಳಸುತ್ತಿತ್ತು. ಆದರೆ ಸಾಮಾನ್ಯವರ್ಗಕ್ಕೆ ಅದು ದುಬಾರಿಯಾದ ಕಾರಣದಿಂದ ಧರ್ಮ ಅದೇ ಲೋಲುಪ್ತ ಸುಖದ ಭರವಸೆಯಾಗಿದೆ ಎಂಬರ್ಥದಲ್ಲಿ ಮಾರ್ಕ್ಸ್ ಹೇಳಿರುವುದು. ಅದನ್ನು ಬದಲಾಯಿಸಬೇಕೆಂದರೆ ಅಂಥದೇ ಪ್ರಭಾವಶಾಲಿ ಪರ್ಯಾಯದಿಂದ ಮಾತ್ರ ಸಾಧ್ಯ ಎಂದಿದ್ದಾನೆ.
ಆದರೆ ಇದರ ವಿಸ್ತೃತ ಅರ್ಥವನ್ನು ಗ್ರಹಿಸದೇ ಅಥವಾ ಗ್ರಹಿಸಿಯೂ ಉದ್ದೇಶಪೂರ್ವಕವಾಗಿ ಪ್ರಾಧ್ಯಾಪಕ-ಸಾಹಿತಿ-ಚಿಂತಕ-ಸಂಶೋಧಕ ವರ್ಗವು ತಮ್ಮ ಸಿದ್ಧಾಂತವನ್ನು ಹೇರಲು ಈ ವಾಕ್ಯ ವನ್ನು ಸೋಸಿ ಸೋಸಿ ಶೋಷಿಸಿದೆ. ಇದೇ ರೀತಿ, ಪಂಪನ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ವಾಕ್ಯಪ್ರಯೋಗ ಸಹ. ಪಂಪನು ತನ್ನ ಆದಿಪುರಾಣದಲ್ಲಿ ಭರತನ ಆಸ್ಥಾನವನ್ನು ವರ್ಣಿ ಸುವ ಅಧ್ಯಾಯದಲ್ಲಿ “ವಿದ್ಯೆ ಕಲಿತು ಮತ್ತು ಅದನ್ನು ಕಲಿಸುವ ನಿಷ್ಕಾಮ ಕರ್ಮಿಗರಾದ ಕಾರಣಕ್ಕೆ ನಿಮ್ಮನ್ನು ದ್ವಿಜರು ಎನ್ನುತ್ತಾರೆ. ಅದನ್ನು ನೀವು ತಪ್ಪಿದಲ್ಲಿ ನೀವು ಉಳಿದ ಎಲ್ಲರಂಥ ಸಾಮಾನ್ಯ ಮನುಷ್ಯರಾಗುತ್ತೀರಿ.
ಹಾಗಾಗದೆ ನಿಮ್ಮ ಧರ್ಮ-ಕರ್ಮವನ್ನು ಪಾಲಿಸಿ" ಎಂಬರ್ಥದಲ್ಲಿ ಪಂಪನು ಈ ಮಾತನ್ನು ದ್ವಿಜರಿಗೆ ಹೇಳಿದ್ದಾನೆ. ಆದರೆ ಈ ವಾಕ್ಯವನ್ನು ಈ ಪ್ರಾಧ್ಯಾಪಕ-ಸಾಹಿತಿ-ಚಿಂತಕ-ಸಂಶೋಧಕ ವರ್ಗ ಸಮಾಜದಲ್ಲಿರುವ ಜಾತಿ ತಾರತಮ್ಯ ಕಂಡು ಮಮ್ಮಲ ಮರುಗಿ ಪಂಪನು ಈ ಉದ್ಘೋಷವನ್ನು ಮಾಡಿದ್ದಾನೆ.
ಜಾತಿ ಪದ್ಧತಿ ಎಂಬ ಅನಿಷ್ಟ ಪದ್ಧತಿ ಅನಾದಿ ಕಾಲದಿಂದಲೂ ಇತ್ತು, ಇದೆ ಎಂದು ತಮ್ಮ ಸಿದ್ಧಾಂತ ವನ್ನು ಪಂಪಿಸಲು ಪಂಪನನ್ನು ಸೋಸಿ ಸೋಸಿ ಶೋಷಿಸಿದೆ. ವಿಪರ್ಯಾಸವೆಂದರೆ ಕನ್ನಡ ಸಾಹಿತ್ಯ ಪರಿಷತ್ತಿನ ಉದ್ಘೋಷವೂ ಇದೇ ಆಗಿದೆ! ಅದೇ ಯಾದಿಯಲ್ಲಿ ಬಸವಣ್ಣನ, “ವೇದಕ್ಕೆ ಒರೆಯ ಹಚ್ಚುವೆ, ಶಾಸಕ್ಕೆ ನಿಗಳನಿಕ್ಕುವೆ...." ವಚನದ ಬಳಕೆಯಿಂದ ಹಿಡಿದು ಸಕಲ ಶರಣ ಚಳವಳಿಯನ್ನೇ ತಲೆಕೆಳಗು ಮಾಡಿದ್ದಾರೆ. ತಮಗೆ ತೋಚಿದಂತೆ ಗೀಚಿ ಗೀಚಿ ಬಸವಾದಿ ಶರಣರನ್ನು ಅಪಸವ್ಯ ಗೊಳಿಸಿದ್ದಾರೆ.
ರಂಜಾನ್ ದರ್ಗಾ, ಎಸ್.ಜಿ.ಸಿದ್ಧರಾಮಯ್ಯ, ಎಂ.ಎಂ. ಕಲ್ಬುರ್ಗಿ ಮತ್ತು ಅವರ ಸಂಶೋಧಕ ಶಿಷ್ಯಪಡೆಯ ತಪ್ಪುಗಳನ್ನು ಈ ಹಿಂದೆ ಗಮನಿಸಿದ್ದೀರಿ ತಾನೆ! ಅದೇ ರೀತಿ ಈ ಗುಂಪಿನ ಧಾರ್ಷ್ಟ್ಯದ ತಪ್ಪಿನ ಉದಾಹರಣೆಗೆ ಗಿರೀಶ್ ಕಾರ್ನಾಡರ ‘ತಲೆದಂಡ’ ನಾಟಕದ ಬಿಜ್ಜಳ ಪಾತ್ರದ, “ನನ್ನ ಈ ಅರವತ್ತೆರಡು ವರ್ಷದ ಆಯಸ್ಸಿನ್ಯಾಗ ಜಾತಿಯ ಹಂಗಿಲ್ಲದಧಿ ನನ್ನನ್ನ ಕಣ್ಣಾಗ ಕಣ್ಣಿಟ್ಟು ನೋಡಿ ದವ ಅಂದರ ಬಸವಣ್ಣ. ಅವ-ಅವನ ಶರಣರು. ತಾಯಾಣೆ ಹೇಳತೀನಿ ಅವರು ಮಾತಾಡಿ ದರ ನಾನೂ ಒಬ್ಬ ಮನುಷ್ಯಾ ಅನಸತೈತಿ. ಜಾತಿ ಪದ್ಧತಿ ಯನ್ನ ಈ ನಾಡಿನಿಂದ ಸವರಿ ಬಿಡತೀನಿ ಅನ್ನತಾನ.
ವರ್ಣಾಶ್ರಮ ಧರ್ಮ ಬೇರುಸಹಿತ ಕಿತ್ತು ಹಾಕತೀನಿ ಅನ್ನತಾನ. ಎಂಥ ಕನಸದು! ಎಂಥ ಎದಿಗಾರಿಕಿ! ಅಧಿಟಧಿ ಅಲ್ಲ. ತನ್ನ ಸುತ್ತಮುತ್ತ ಎಂಥೆಂಥಾ ಮಂದೀನ ಕೂಡಿ ಹಾಕ್ಯಾನಂದೀ? ಅಲ್ಲಮ..... ಅವಮಾತಾಡೂದು ಕೇಳಿಲ್ಲ ನೀ! ಕನ್ನಡ ಅಲ್ಲ. ಅಮೃತದ ಸೆಲ್ಫಿ. ಚನ್ನಯ್ಯ, ಜೇಡರ ದಾಸಿಮಯ್ಯ, ಅಕ್ಕ ಮಹಾದೇವಿ. ಒಬ್ಬರಧಿ ಇಬ್ಬರಧಿ? ಎಲ್ಲ ಒತ್ತಟ್ಟಿಗೆ ಕೂಡತಾರ, ಹಾಕ್ಯಾಡತಾರ, ಹಾಡತಾರ. ಇನ್ಯಾರ ಕೈಲಿ ಇದು ಸಾಧ್ಯ ಇತ್ತು? ಮತ್ತಿದನ್ನೆ ಎಲ್ಲಿ ಮಾಡ್ಯಾನಂದಿ? ಬಿಜ್ಜಳನ ಕಲ್ಯಾಣದಾಗ. ಕಾಶ್ಮೀರದ ಅರಸ ಇಲ್ಲಿ ಬಂದರ ನನ್ನ ಓಲಗಕ್ಕೆ ಬರೋದಿಲ್ಲ.
ನೆಟ್ಟಗ ಬಸವಣ್ಣನ ಮಹಾಮನಿಗೆ ಹೋಕ್ಕಾನು. ಸಣ್ಣ ಮಾತಾತಧಿ?" ಎಂಬ ಮಾತುಗಳನ್ನು ಗಮನಿಸಿ. ಇಲ್ಲಿ ಕಾರ್ನಾಡರು ಬಸವಣ್ಣನಿಗಿಂತ ಒಂದು ಶತಮಾನ ಹಿಂದಿನವರಾದ ದಾಸಿಮಯ್ಯ, ಚನ್ನಯ್ಯನವರನ್ನು ಬಸವ ಸಮಕಾಲೀನರಾಗಿಸಿ ಕೂಡಿಸಿ, ಹಾಕ್ಯಾಡಿಸಿ, ಹಾಡಿಸುತ್ತಾರೆ. ಇದು ಕಾಲ್ಪ ನಿಕ ಕೃತಿಯಾದರೂ ‘ಶೂನ್ಯ ಸಂಪಾದನೆ’ ಎಂಬ ಗ್ರಂಥದ ಕತೆಯಲ್ಲಿನ ಹಿನ್ನೆಲೆಯಲ್ಲಿ ರಚಿತ ಗೊಂಡಿದೆ.
ಕನಿಷ್ಠ ಪಾತ್ರವರ್ಗದ ಕಾಲಮಾನವನ್ನಾದರೂ ಗಮನಿಸಬೇಕಲ್ಲವೇ? ಇರಲಿ, ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಡಲಾಗಿದೆ ಎಂಬುದು ಗಮನಾರ್ಹ. ಅಲ್ಲಿಗೆ ನಮ್ಮ ಪರಿಷತ್ತು, ಅಕಾಡೆಮಿಗಳು ಹೇಗೆ ಪರವಶಗೊಂಡಿವೆ ಎಂಬುದು ನಿಮ್ಮ ಆಲೋಚನೆಗೆ ಬಿಟ್ಟ ವಿಷಯ. ಹೀಗೆ ಪ್ರಾಧ್ಯಾಪಕ-ಸಾಹಿತಿ-ಸಂಶೋಧಕ-ಚಿಂತಕ-ಸಾಕ್ಷಿಪ್ರಜ್ಞೆಗಳ ಅಭೂತಪೂರ್ವ ಗಾಂಪ ವೈಚಾರಿಕ
ಭ್ರಷ್ಟತೆಗೆ ವಚನಗಳು, ಶರಣ ಸಂಶೋಧನೆಗಳು, ಶೂನ್ಯ ಸಂಪಾದನೆಗಳು ‘ಪುನರಪಿ ಜನನಂ ಪುನರಪಿ ಮರಣಂ’ ಎನ್ನುವಂತೆ ಅನೇಕಾನೇಕರೀತಿಯಾಗಿ ಸಂಪಾದಿತಗೊಂಡು, ಮರುಮುದ್ರಣ ಗೊಂಡು, ತಿರುವುಮುರುವಾಗಿ ಮುರುವುತಿರುವಾಗಿ ಶೀರ್ಷಿಕೆ ಬದಲಿಸಿಕೊಂಡು, ಬಸವಣ್ಣನನ್ನು ಕುದುರೆಯ ಮೇಲೆ, ಸಿಂಹಾಸನದ ಮೇಲೆ, ಮಣೆಯ ಮೇಲೆ ಕುಳ್ಳಿರಿಸಿ ತಿರುತಿರು ಮುದ್ರಣಗೊಂಡು ಲಾಂಛನಗೊಂಡು ಲಂಘಿಸಿ ಕಾಂಚಾಣ ರೂಪ ತಾಳಿದ್ದಾವೆ.
ಇವರೆಲ್ಲರೂ ಡಾಕ್ಟೋರೇಟ್, ಪೋ ಡಾಕ್ಟೋರೇಟ್ ಪದವಿಗಳನ್ನು ಪಡೆದು ವಿಶ್ವವಿದ್ಯಾಲಯದ ಆಯಕಟ್ಟಿನ ಸ್ಥಾನಮಾನಗಳನ್ನು ಹೊಂದಿದ್ದಾರೆ. ಅಲ್ಲಿಗೆ ವಿಶ್ವವಿದ್ಯಾಲಯಗಳು ಹೇಗೆ ಪರವಶ ಗೊಂಡಿವೆ ಎಂಬುದು ನಿಮ್ಮ ಆಲೋಚನೆಗೆ ಬಿಟ್ಟ ವಿಷಯ. ಇದನ್ನು ಸಾಂಸ್ಥೀಕರಣಗೊಳಿಸಿ ಸ್ಥಾವರವಾಗಿಸಿದ್ದು, ವೀರಶೈವವನ್ನೇ ಪಠಿಸುತ್ತಿದ್ದ ಸ್ವಘೋಷಿತ ಜಗದ್ಗುರು ಲಿಂಗಾನಂದ ಮತ್ತು ಸ್ವಘೋಷಿತ ಮಾತೆ ಮಹಾದೇವಿ! ಈರ್ವರೂ ಯಾವಾಗ ತಮ್ಮ ಲಿಂಗಾಂಗ ಸಾಮರಸ್ಯದ ಗುಟ್ಟು ಬಟಾಬಯಲಾಯಿತೋ ಆಗ ತಮ್ಮನ್ನು ಸಂರಕ್ಷಿಸಿಕೊಳ್ಳಲು ಬಸವಣ್ಣನನ್ನು ಬಳಸಿದ್ದನ್ನು ಇಡೀ ಜಗತ್ತೇ ಬಲ್ಲದು. ಹೀಗೆ ತಮ್ಮ ಬಯಲಾದ ಬೆತ್ತಲಿಗೆ ರಕ್ಷಾಕವಚವಾಗಿ ಬಸವನನ್ನು ಬಳಸಿದಾಗ ಇವರಿಗೆ ಬಸವಣ್ಣನ ಹೆಸರಿನ ನಾಮಬಲದ ಇತರೆ ಅಗೋಚರವಾಗಿದ್ದ ಫಲಗಳು ತಮ್ಮಷ್ಟಕ್ಕೆ ತಾವೇ ಅಪ್ರತಿಮ ಲಿಂಗದಂತೆ ಗೋಚರಿಸಿದವು.
ಇದರ ಪರಿಣಾಮವೇ ಅವರ ಬಸವಧರ್ಮ ಪೀಠ ಎಂಬ ಸಂಸ್ಥೆಯ ಒಟ್ಟು ಆಸ್ತಿ 1200 ಕೋಟಿ ರುಪಾಯಿಗೂ ಅಧಿಕ ಇಳುವರಿ ನೀಡಿದೆ. ಅಷ್ಟೇ ಅಲ್ಲದೆ ಆಸ್ತಿಗಾಗಿ ಇವರ ಪೀಠದ ಇಬ್ಬರು ಸರ್ವಸಂಗಪರಿತ್ಯಾಗಿ ಸ್ತ್ರೀ-ಪುರುಷರ ನಡುವೆ ಯುದ್ಧವೇ ನಡೆಯುತ್ತಿದೆ. ಇಲ್ಲಿ ನಡುವೆ ಸುಳಿವಾತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ, ಕಾಂಚಾಣ ಮಾತ್ರ!
“ನಮ್ಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾಂಬಿಕೆ ಅವರಿಗೆ ಶಿಕ್ಷಣ ಇಲ್ಲ. ಆಡಳಿತದ eನ ಕೂಡ ಇಲ್ಲ. ಅದಕ್ಕಾಗಿ ಬೇರೊಬ್ಬರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಟ್ರಸ್ಟ್ ನಿಂದ ನಮ್ಮನ್ನು ಹೊರ ಗಿಟ್ಟು ಶರಣಮೇಳ, ಕಲ್ಯಾಣಪರ್ವ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಕೆಲವರು ಆಸ್ತಿ ಲೂಟಿ ಮಾಡೋಕೆ ಬಂದಿದ್ದಾರೆ. ಬಸವಧರ್ಮ ಪೀಠದ್ದು ಸುಮಾರು 1 ಸಾವಿರ ಕೋಟಿ ರುಪಾಯಿ ಆಸ್ತಿ ಯಿದ್ದು, ಈ ಕುಮ್ಮಕ್ಕಿನ ಹಿಂದೆ ಕೆಲ ಮಠಾಧೀಶರು, ರಾಜಕಾರಣಿಗಳು ಇದ್ದಾರೆ.
ಮಾತಾಜಿ ಇದ್ದಾಗ ರಾಷ್ಟ್ರೀಯ ಬಸವದಳ ಸಂಘಟನೆ ಒಡೆಯಬೇಕು ಎಂದು ಹೇಳಿದವರೆಲ್ಲ ಇದನ್ನೆಲ್ಲ ಮಾಡುತ್ತಿದ್ದಾರೆ. ನನಗೆ ಐದು ಭಾಷೆಗಳಲ್ಲಿ ಅನುಭವ ಇದ್ದು, ಕಳೆದ 35 ವರ್ಷಗಳಿಂದ ಬಸವಧರ್ಮ ಪೀಠ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ಈಗ ಬಸವಧರ್ಮ ಪೀಠಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಹೊರಗೆ ಹಾಕಿದ್ದಾರೆ. ಈ ಬಗ್ಗೆ ನಾನು ನ್ಯಾಯಾಲಯದ ಮುಂದೆ ಹೋಗಿದ್ದೇನೆ" ಎಂದು ಅಲ್ಲಿನ ವಿರಕ್ತ ವಿರಾಗಿ ಡಾ.ಚನ್ನಬಸವಾನಂದ ಸ್ವಾಮೀಜಿ ಹಿಂದೆ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಯಾಗಿ ವಿರಕ್ತ ವಿರಾಗಿಣಿ ಗಂಗಾಮಾತೆ, “ಚನ್ನಬಸವ ಸ್ವಾಮೀಜಿ ಕೂಡಲಸಂಗಮ ಬಸವಧರ್ಮ ಪೀಠದ ವಿರುದ್ಧ ಮಾಡಿರುವ ಆರೋಪಕ್ಕೆ ಸ್ಪಷ್ಟನೆ ನೀಡಿದ್ದು, ಬಸವಣ್ಣನವರ ವಚನದಲ್ಲಿ ‘ವಚನಾನಂದ’ ನಾಮಪದ ಬಳಕೆ ಬಗ್ಗೆ ವಿವಾದ ಮಾಡುತ್ತಿರುವ ಜತೆಗೆ ಈಗಿರುವ ಗಂಗಾಮಾತೆ ವಿರುದ್ಧ ಅಪಪ್ರಚಾರ ಮಾಡಿzರೆ. ಗಂಗಾಮಾತೆಗೆ ಹಿಂದಿ ಬರಲ್ಲ, ಸರಿಯಾಗಿ ವಿವೇಚನ ಮಾಡಲ್ಲ ಎಂಬ ಮಾತು ಸೇರಿದಂತೆ ಆಸ್ತಿ ಕಬಳಿಸುವ ಆರೋಪ ಮಾಡಿದ್ದರಿಂದ ಪೀಠದಿಂದ ತೆಗೆದುಹಾಕಲಾಗಿದೆ" ಎಂದಿದ್ದರು.
ಇದಕ್ಕೆ ವಿರಕ್ತ ವಿರಾಗಿಯು ತೊಡೆ ತಟ್ಟಿ ವಿರಾಗಿಣಿಯನ್ನು ಅಖಾಡಕ್ಕೆ ಆಹ್ವಾನಿಸಿ, “ಸಾವಿರಾರು ಕೋಟಿ ಆಸ್ತಿ ಇರುವ ಮಠದಲ್ಲಿ, ಕಬಳಿಕೆ ಮಾಡುವ ಹುನ್ನಾರದಿಂದಾಗಿ ಪೀಠದಿಂದ ಹೂರಗೆ ಹಾಕಿzರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷನಾಗಿ ಎರಡು ದಿನಗಳ ಕಾಲ ಕೂಡಲಸಂಗಮ ಹೂವಿನಹಳ್ಳಿ ಗ್ರಾಮದ ಹತ್ತು ಏಕರೆ ಜಮೀನಿನಲ್ಲಿ ಸ್ವಾಭಿಮಾನಿ ಶರಣ ಮೇಳ ನಡೆಸಲು ನಿರ್ಧಾರ ಮಾಡಲಾಗಿದೆ" ಎಂದು ಹೇಳಿಕೆ ನೀಡಿದ್ದರು. ಇದು ನಿಮಗೆ ಯಾವುದೋ ರಾಜಕಾರಣಿಗಳ ನಡುವಿನ ತೊಡೆ ತಟ್ಟುವಿಕೆಯಂತೆ ಕಂಡರೆ ಅದಕ್ಕೆ ಬಸವಣ್ಣನೇ ಹೊಣೆ!
ನಾನು ಒಮ್ಮೆ ದೆಹಲಿಯಲ್ಲಿ ಪ್ರವಾಸದಲ್ಲಿದ್ದಾಗ ಒಂದು ಅಪಾರ್ಟ್ಮೆಂಟ್ ಸಮುಚ್ಚಯದ ಮನೆ ಯೊಂದರ ಮೇಲೆ ‘ಬಸವ ಕಂಪ್ಯೂಟರ್ ಸೆಂಟರ್’ ಎಂಬ ಬೋರ್ಡ್ ಕಣ್ಣಿಗೆ ಬಿತ್ತು. ‘ಅರೆ, ಇದೇನು ಇಲ್ಲಿ ಬಸವ’ ಎಂದು ಜೆ.ಬಿ. ಪಾಟೀಲರ ಥಾಯ್ಲೆಂಡ್ ಬಸವನನ್ನು ಊಹಿಸಿಕೊಂಡು ಒಳಹೊಕ್ಕಾಗ ಅಲ್ಲಿದ್ದ ಅನಾಥ ಯುವಕ ಯುವತಿಯರ ಹಾವಭಾವಗಳು ಲಿಂಗಾಂಗ ಸಾಮರಸ್ಯವನ್ನು (ಥಾಯ್ಲೆಂಡ್ ಸಹ ನಾಚುವಷ್ಟು) ಎದ್ದು ತೋರುತ್ತಿದ್ದವು.
ಇವರ ಹಾವಭಾವದಿಂದ ಕಸಿವಿಸಿಗೊಂಡು ಅಲ್ಲಿದ್ದ ಬಸವಣ್ಣನ ಫೋಟೋಕ್ಕೆ ಶರಣು ಶರಣಾರ್ಥಿ ಎಂದು ತಕ್ಷಣಕ್ಕೆ ಹೊರಬಂದು ನಂತರ ಆ ಮನೆಯ ಬಗ್ಗೆ ವಿಚಾರಿಸಿದಾಗ ಅದು ಮಾತೆ ಮಹಾ ದೇವಿ ಅವರ ಒಡೆತನದಲ್ಲಿದೆ ಎಂದು ತಿಳಿಯಿತು. ಇಷ್ಟರ ಮಟ್ಟಿಗೆ ಲಿಂಗಾಂಗ ಸಾಮರಸ್ಯವನ್ನು ದೆಹಲಿಗೆ ತಲುಪಿಸಿ ಬಸವಣ್ಣನನ್ನು ಬಸವ ಧರ್ಮೀಯರು ಸೋಸಿ ಸೋಸಿ ಶೋಷಿಸಿದ್ದಾರೆ.
ಇಂಥವರಿಗಾಗಿಯೇ ಬಸವಣ್ಣ, “ಕುಳ್ಳಿರ್ದು ಲಿಂಗವ ಪೂಜಿಸಿ ಅಲ್ಲದಾಟವನಾಡುವರಯ್ಯಾ; ಬೆಳ್ಳೆ ಎತ್ತಿನ ಮರೆಯಲಿರ್ದು ಹುಗಂಬ ತೊಡುವಂತೆ ಕಳ್ಳ ಹಾದರಿಗರ ಕೈಯಲು ಪೂಜೆಯ ಕೊಳ್ಳ ನಮ್ಮ ಕೂಡಲಸಂಗಮದೇವ" ಎಂದಿದ್ದಾನೆ. ಇನ್ನು ಬೆಂದಗಾಳೂರಿನ ಬಸವಣ್ಣನ ಹೆಸರಿನ ಕಮಿಟಿ ಯೊಂದು ಒಂದು ಕುಟುಂಬದ ಖಾಸಗಿ ಆಸ್ತಿಯೇ ಆಗಿಹೋಗಿದೆ. ಸರಕಾರದಿಂದ ಕಮಿಟಿಗೆ ಮಂಜೂ ರು ಮಾಡಿಸಿಕೊಂಡಿದ್ದ ನೂರು ಎಕರೆ ಜಾಗದಲ್ಲಿ ಆ ಕುಟುಂಬದ ಯಜಮಾನ ಮತ್ತವರ ಪತ್ನಿ ಯವರ ಸಮಾಧಿ ಮಾಡಿ ಸ್ವಕುಟುಂಬದ ಆಸ್ತಿಯಾಗಿಸುವ ಹಕ್ಕೊತ್ತಾಯವನ್ನು ಎಂದೋ ಮಾಡಲಾಗಿದೆ. ಈ ಕುರಿತು ಕೆಲವರು ಕೋರ್ಟಿನಲ್ಲಿ ದಾವೆ ಸಹ ಹೂಡಿದ್ದರು ಎಂಬಲ್ಲಿಗೆ ಬಸವಣ್ಣ ಮತ್ತೊಮ್ಮೆ ಕಾಂಚಾಣದ ಲಾಂಛನವಾಗಿ ಹೊಮ್ಮಿದ್ದಾನೆ. ಈ ಕೌಟುಂಬಿಕ ಟ್ರಸ್ಟಿನ ಒಟ್ಟು ಆಸ್ತಿ ಸಾವಿರಾರು ಕೋಟಿಗೂ ಅಧಿಕ ಎಂಬಲ್ಲಿಗೆ ಬಸವಣ್ಣನನ್ನು ಸೋಸಿ ಸೋಸಿ ಶೋಷಿಸಲಾಗಿದೆ. ಇದೇ ರೀತಿ ಬಸವಕಲ್ಯಾಣದ ‘ಬಸವನರಮನೆ’ ಎಂಬ ಇನ್ನೊಂದು ಸಂಸ್ಥೆಯ ಮೇಲೂ ಆಸ್ತಿ ಕಬಳಿಕೆ, ಹಣ ದುರುಪಯೋಗದ ಮೊಕದ್ದಮೆಗಳು ದಾಖಲಾಗಿದ್ದವು ಎಂಬುದು ಸಹ ಬಸವ ಕಾಂಚಾಣದ ಝಣಝಣದ ಶಬ್ದವಾಗಿಯೇ ಜಂಪಿಸುತ್ತಿದೆ. ಈಗ ಅನುಭವ ಮಂಟಪವನ್ನು ಕಟ್ಟಲು ಒಂಬೈ ನೂರು ಕೋಟಿಯ ನೀಲನಕ್ಷೆ ತಯಾರಾಗಿದೆ ಎಂಬಲ್ಲಿಗೆ ಬಸವಣ್ಣ ಸೋಸಿ ಸೋಸಿ ಶೋಷಣೆಗೆ ಒಳಗಾಗುತ್ತಿದ್ದಾನೆ.
(ಮುಂದುವರಿಯುವುದು)
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)