#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Kiran Upadhyay Column: ನಿಜಾರ್ಥದಲ್ಲಿ ಮಹಿಳಾ ಸಬಲೀಕರಣ ಎಂದರೆ ಇದು !

‘ಶ್ರೀ ಮಹಿಳಾ ಗೃಹ ಉದ್ಯೋಗ’ ಸಂಸ್ಥೆಯು ಇಂದು ಸಾವಿರಾರು ಜನರಿಗೆ ಉದ್ಯೋಗ ನೀಡಿದೆ. ಉದ್ಯೋಗ ಎನ್ನುವ ಪದ ಬಳಕೆಯೂ ತಪ್ಪು. ಏಕೆಂದರೆ ಸಂಸ್ಥೆ ತನ್ನೊಂದಿಗೆ ಕೆಲಸ ಮಾಡುವ ಪ್ರತಿಯೊಬ್ಬರನ್ನೂ ಭಾಗೀದಾರರು ಎಂದೇ ಹೇಳುತ್ತದೆ. ಲಾಭಾಂಶವನ್ನು ಎಲ್ಲರಲ್ಲೂ ಹಂಚುತ್ತದೆ. ಅಲ್ಲಿ ಕೆಲಸಮಾಡುವ ಪ್ರತಿಯೊಬ್ಬ ಮಹಿಳೆಯನ್ನೂ ‘ಸಹೋದರಿ’ ಎಂದು ಪರಿಗಣಿಸಲಾಗುತ್ತದೆ. ಒಬ್ಬ ಮಹಿಳೆಗೆ ಇದಕ್ಕಿಂತ ಇನ್ನೇನು ಬೇಕು?

ನಿಜಾರ್ಥದಲ್ಲಿ ಮಹಿಳಾ ಸಬಲೀಕರಣ ಎಂದರೆ ಇದು !

ಅಂಕಣಕಾರ ಕಿರಣ್‌ ಉಪಾಧ್ಯಾಯ

ವಿದೇಶವಾಸಿ

ಹಪ್ಪಳ ಇಷ್ಟಪಡದವರು ಯಾರಾದರೂ ಇದ್ದರೆ ಕೈ ಎತ್ತಿ! ಕಾರ್ಯದ ಮನೆಯಲ್ಲಿ ಅನ್ನ-ಸಾರು ಸುರಿಯುವಾಗಲಾದರೂ ಸರಿ, ಮಳೆ ಸುರಿಯುವಾಗ ಮನೆಯ ಕುಳಿತು ಚಹಾ, ಕಾಫಿ ಹೀರುವಾಗ ಲಾದರೂ ಸರಿ, ಹಪ್ಪಳ ಎಲ್ಲದಕ್ಕೂ ಸೈ. ಕೆಲವರಿಗೆ ಮೃಷ್ಟಾನ್ನ ಭೋಜನವೇ ಇದ್ದರೂ, ಹಪ್ಪಳ ಇಲ್ಲದಿದ್ದರೆ ಊಟ ಅಪೂರ್ಣ. ಇನ್ನು ಕೆಲವರಿಗೆ ಹಪ್ಪಳವೊಂದಿದ್ದರೆ ಅನ್ನ ಮಜ್ಜಿಗೆಯೂ ಸಂಪೂರ್ಣ. ಎಲೆಯಲ್ಲಿ ಊಟ ಬಡಿಸುವಾಗ ಹಪ್ಪಳಕ್ಕಿಂತ ಮೊದಲು ಉಪ್ಪಿನಕಾಯಿ ಬಿದ್ದರೂ, ಹೇಳುವಾಗ ‘ಹಪ್ಪಳ ಉಪ್ಪಿನಕಾಯಿ’ ಎಂದೇ ಹೇಳುವುದು. ಊಟದ ತಟ್ಟೆಯನ್ನು ದೇವತೆಗಳ ಸಮಾಗಮ ಎಂದು ಪರಿಗಣಿಸಿದರೆ, ಅದರಲ್ಲಿ ಹಪ್ಪಳ ಕುಲ ದೇವತೆ.

ಊಟ ಆರಂಭವಾಗುವುದಕ್ಕೆ ಮೊದಲು ಏನಾದರೂ ಬಾಯಿ ಆಡಿಸಬೇಕೆಂದರೆ ಮೊದಲು ಕೈ ಹೋಗುವುದು ಹಪ್ಪಳದ ಕಡೆಗೆ.

ಎಷ್ಟೇ ಪದಾರ್ಥಗಳಿದ್ದರೂ, ಪಂಚಭಕ್ಷ ಗಳಿದ್ದರೂ ಹಪ್ಪಳಕ್ಕೊಂದು ರಾಜಮರ್ಯಾದೆ ಇದ್ದದ್ದೇ. ದೊಡ್ಡ ದೊಡ್ದ ಕಾರ್ಯಕ್ರಮಗಳಲ್ಲಿ ಹಪ್ಪಳ ಉಳಿದ ದಾಖಲೆ ಕಡಿಮೆ. ಇದು ಹಪ್ಪಳದ ಮಹಿಮೆ! ಹಪ್ಪಳವನ್ನು ಮೊದಲು ಕಂಡುಹಿಡಿದ ಪುಣ್ಯಾತ್ಮ ಯಾರು ಎಂದರೆ ಉತ್ತರ ಸಿಗಲಿಕ್ಕಿಲ್ಲ.

ಇದನ್ನೂ ಓದಿ: Kiran Upadhyay Column: ಬಹರೇನ್‌ ದೇಶದಲ್ಲಿ ಬೀದಿ ನಾಟಕ

ತಮಿಳುನಾಡಿನ ಅಯ್ಯಪ್ಪನ್ ಎಂಬುವವರು ಸುಮಾರು ನೂರು ವರ್ಷಗಳ ಹಿಂದೆಯೇ ಹಪ್ಪಳ ಮಾಡಿ ಮಾರುವುದನ್ನು ಉದ್ಯಮವನ್ನಾಗಿಸಿಕೊಂಡವರು ಎಂದು ಕೆಲ ವರ್ಷಗಳ ಹಿಂದೆ ಓದಿದ್ದೆ. ಇಂದಿಗೂ ‘ಅಂಬಿಕಾ ಪಪ್ಪಡಮ್’ ಎಂಬ ಹೆಸರಿನಲ್ಲಿ ಇದು ಮಾರುಕಟ್ಟೆಯಲ್ಲಿ ಲಭ್ಯ. ಇದು ಉದ್ಯಮವಾದದ್ದು ನೂರು ವರ್ಷಗಳ ಹಿಂದಾದರೂ, ಹಪ್ಪಳ ಅದಕ್ಕೂ ಸಾಕಷ್ಟು ಮೊದಲೇ ಹುಟ್ಟಿದ್ದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಇದರ ಜನ್ಮಸ್ಥಾನ ದಕ್ಷಿಣ ಏಷ್ಯಾ ಎಂಬುದಂತೂ ನಿಜ. ಅದರಲ್ಲೂ ದಕ್ಷಿಣ ಭಾರತದಲ್ಲಿಯೇ ಹುಟ್ಟಿರಬಹುದೆಂಬ ತರ್ಕವೇ ಹೆಚ್ಚು. ಸಂಸ್ಕೃತದ ಪರ್ಪಟ (ಚಪ್ಪಟೆಯಾದ ಬಿ) ಎಂಬ ಪದದಿಂದ ಹಪ್ಪಳ ಎಂಬ ಪದ ಜನಿಸಿತು ಎಂಬ ಮಾತಿದೆಯಾದರೂ ಇದರ ಜನಕ ಯಾರೆಂಬುದರ ಕುರಿತು ಎಲ್ಲಿಯೂ ಉಲ್ಲೇಖವಾಗಿಲ್ಲ.

ಭೀಮಸೇನ, ನಳ ಮಹಾರಾಜರ ಪಾಕದಲ್ಲಿಯೂ ಹಪ್ಪಳದ ಕುರಿತು ಮಾಹಿತಿ ಇಲ್ಲ ಎಂದರೆ, ಇದು ಪುರುಷರ ಅನ್ವೇಷಣೆಯಂತೂ ಅಲ್ಲ. ಇಂತಿರ್ಪ ಹಪ್ಪಳಕ್ಕೆ ಅಪ್ಪ ಇಲ್ಲದಿರಬಹುದು, ಆದರೆ ಅಮ್ಮ ಖಂಡಿತ ಇದ್ದಾಳೆ. ಅಂದಿನಿಂದ ಇಂದಿನವರೆಗೂ, ಹಪ್ಪಳ ಮಾತೆಯ ಇಲಾಖೆಯೇ ಎನ್ನುವುದರಲ್ಲಿ ಎರಡನೆಯ ಮಾತೇ ಇಲ್ಲ.

ಒಬ್ಬ ತಾಯಿ ಮನೆಮಂದಿಗೆಲ್ಲ ‘ಹಪ್ಪಳಪೂರ್ಣೇಶ್ವರಿ’ ಆಗುವುದಾದರೆ, ಅಂಥ ಅನೇಕ ತಾಯಂ ದಿರು ಸೇರಿ ಹಪ್ಪಳ ಮಾಡಿದರೆ ಅದಕ್ಕೆ ಏನು ಹೇಳಬಹುದು? ‘ಲಿಜ್ಜತ್’ ಎಂದು ಹೇಳಬಹುದು!

ಆಗಿನ್ನೂ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಹನ್ನೆರಡು ವರ್ಷವಾಗಿತ್ತು. ಶಿಕ್ಷಣ ಬಿಡಿ, ದೇಶದ ಬಹುಭಾಗ ದಲ್ಲಿ ಜನರಿಗೆ ಸಾಕ್ಷರತೆಯೂ ಕೈಯಿಗೆ ಎಟುಕದ ಕನಸಾಗಿದ್ದ ದಿನಗಳು ಅವು ಎಂದರೂ ತಪ್ಪಾಗ ಲಿಕ್ಕಿಲ್ಲ. ಅದರಲ್ಲೂ ಮಹಿಳೆಯರ ಸಾಕ್ಷರತೆಯನ್ನಂತೂ ಕೇಳುವುದೇ ಬೇಡ. ದೇಶದ ಶೇ.8 ಪ್ರತಿಶತ ಮಹಿಳೆಯರು ಮಾತ್ರ ಸಾಕ್ಷರತೆ ಹೊಂದಿದ್ದು, ಉಳಿದ 92 ಪ್ರತಿಶತ ಮಹಿಳೆಯರು ಅ-ಆ-ಇ-ಈ ಯಿಂದ ಇನ್ನೂ ಮೈಲು ದೂರವೇ ಉಳಿದಿದ್ದರು. ಹಾಗಿರುವಾಗ, ಇನ್ನು ಮಹಿಳೆಯರು ಉದ್ಯೋಗ ಮಾಡುವುದು, ಉದ್ದಿಮೆ ಆರಂಭಿಸುವುದನ್ನು ಯೋಚಿಸಲೂ ಧೈರ್ಯ ಬೇಕಿತ್ತು.

ಆದಾಗ್ಯೂ ಆ ದಿನಗಳಲ್ಲಿ ಅಂಥ ಒಂದು ಸಾಹಸಕ್ಕೆ ಕೈ ಹಾಕಿದ್ದು ಗುಜರಾತಿನ ಸಪ್ತ ಸಹೋದರಿ ಯರು. ಗುಜರಾತಿಗಳನ್ನು ಬರೀ ಸುಮ್ಮನೇ ಹೇಳುವುದಲ್ಲ, ವ್ಯಾಪಾರ-ವ್ಯವಹಾರ ಅವರ ರಕ್ತದ ಕಣ ಕಣದಲ್ಲಿಯೂ ಇರುವಂಥದ್ದು ಎನ್ನುವುದಕ್ಕೆ ಇದು ಇನ್ನೊಂದು ಉದಾಹರಣೆ. 1959, ಜಬಲ್ಪುರದ ಗಿರ್ಗಾಂವ್ ಪ್ರದೇಶದಲ್ಲಿರುವ ಲೋಹನಾ ನಿವಾಸ್ ವಸತಿ ಸಮುಚ್ಚಯದಲ್ಲಿ ನೆಲೆಸಿದ್ದ ಜಸ್ವಂತಿ ಬೆನ್ ಪೋಪಟ್, ಪಾರ್ವತಿ ಬೆನ್ ಥೋಡಾನಿ, ಉಜಂಬೆನ್ ಕುಂಡಲಿಯಾ, ಬಾನುಬೆನ್ ತನ್ನಾ, ಲಗುಬೆನ್ ಗೋಕಾನಿ, ಜಯಾಬೆನ್ ವಿಠಲಾನಿ ಮತ್ತು ದಿವಾಲಿಬೆನ್ ಲುಕ್ಕಾ ಎಂಬ ಏಳು ಮಹಿಳೆ ಯರು ಒಂದಾಗಿದ್ದರು.

ಎಲ್ಲರದ್ದೂ ಒಂದೇ ಸಮಸ್ಯೆಯೆಂದರೆ, ಮನೆ ನಡೆಸಲು ಹಣ ಸಾಲುತ್ತಿರಲಿಲ್ಲ. ದಿನದ ಕೆಲಸ ಗಳನ್ನೆಲ್ಲ ಮುಗಿಸಿದ ನಂತರ ಸಮಯ ಸಾಕಷ್ಟು ಉಳಿಯುತ್ತಿತ್ತು. ಉಳಿದ ಸಮಯವನ್ನು ಹಣ ಗಳಿಸಲು ಬಳಸಿಕೊಳ್ಳುವ ವಿಚಾರ ಬಂದಾಗ, ಹಪ್ಪಳ ಮಾಡಿ ಮಾರುವುದು ಎಂದು ನಿರ್ಣಯಿಸಿ ದರು. ಆದರೆ ಅವರ ಬಳಿ ಅದಕ್ಕೆ ಬೇಕಾದಷ್ಟು ವಿನಿಯೋಗಿಸಲು ಹಣ ಇರಲಿಲ್ಲ.

ಹಿಟ್ಟು ನಾದುವು ದಕ್ಕಾಗಲಿ, ಹಪ್ಪಳ ಒರೆಯುವುದಕ್ಕಾಗಲಿ, ಒಣಗಿಸುವುದಕ್ಕಾಗಲಿ, ಆಗಿನ್ನೂ ಯಂತ್ರಗಳು ಬಂದಿರಲಿಲ್ಲ. ಕಂತೆ ಕಟ್ಟುವುದಕ್ಕೆ ಅಂದು ಇಂದು ಯಂತ್ರಗಳಿದ್ದರೂ, ಹಪ್ಪಳ ಕಟ್ಟಿ ಕೊಡುವುದು ಕಷ್ಟವೇ ಆಗಿತ್ತು. ಸ್ವಲ್ಪ ಆಚೀಚೆಯಾದರೂ ಹಪ್ಪಳ ಹುಡಿಯಾಗಿ, ಹಪ್ಪಳವಾಗಿ ಉಳಿಯುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಎಲ್ಲಕ್ಕಿಂತಲೂ ಮೊದಲು, ಹಪ್ಪಳ ತಯಾರಿ ಸಲು ಬೇಕಾದ ಪಾತ್ರೆ ಪಗಡೆ ಮತ್ತು ಧಾನ್ಯ ಖರೀದಿಸಲೂ ಅವರ ಬಳಿ ಹಣವಿರಲಿಲ್ಲ.

ಆ ಕಾಲದಲ್ಲಿ ಅವರ ಊರಿನಲ್ಲಿಯೇ ಲಕ್ಷ್ಮೀ ದಾಸ್ ಎನ್ನುವವರು ಹಪ್ಪಳ ತಯಾರಿಸುವ ಕಾರ್ಯಕ್ಕೆ ಕೈ ಹಾಕಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದರು. ನಷ್ಟದಲ್ಲಿರುವ ಅವರ ಉದ್ಯಮವನ್ನು ತಾವು ನಡೆಸುವುದೆಂದು ಸಹೋದರಿಯರು ತೀರ್ಮಾನಿಸಿದರು. ಅವರ ಬಳಿ ಮಾತುಕತೆಯೂ ಮುಗಿ ಯಿತು. ಆದರೆ ಮೂಲಭೂತ ಸೌಕರ್ಯ, ಹಪ್ಪಳ ತಯಾರಿಸಲು ಬೇಕಾದ ಧಾನ್ಯ ಖರೀದಿಸಲು ಬೇಕಾದ ಎಂಬತ್ತು ರುಪಾಯಿಯು ಆ ಸಹೋದರಿಯರ ಬಳಿ ಇರಲಿಲ್ಲ.

ಆಗ ಸಹಾಯಕ್ಕೆ ಬಂದವರು ಸಮಾಜ ಸೇವಕರಾಗಿದ್ದ ಚಂಗಾಲಾಲ್ ಪಾರೇಖ್. ಅವರು ನೀಡಿದ ಹಣದಿಂದ ಉದ್ಯಮ ಆರಂಭಿಸಿದ ಸಹೋದರಿಯರು, ಮೊದಲಿಗೆ ನಾಲ್ಕು ಪೊಟ್ಟಣ ಹಪ್ಪಳ ತಯಾರಿಸಿದರು. ಅಂದು ಅವರ ಮನೆಯ ಚಾವಣಿಯೇ ಮೊದಲ ಕಾರ್ಖಾನೆಯಾಯಿತು. ವ್ಯಾಪಾರ ದಲ್ಲಿ ನಷ್ಟವಾದರೆ, ಅದನ್ನು ಅಲ್ಲಿಗೇ ಖೈದು ಮಾಡುವುದೆಂದೂ, ಮತ್ತೆ ಯಾರ ಬಳಿಯೂ ಸಹಾಯವನ್ನಾಗಲೀ, ದೇಣಿಗೆಯನ್ನಾಗಲೀ ಕೇಳಬಾರದೆಂದೂ ಒಮ್ಮತದ ನಿರ್ಣಯ ಮಾಡಿದ್ದರು.

ಕೇಳುವುದಿರಲಿ, ಯಾರಾದರೂ ತಾವಾಗಿಯೇ ದೇಣಿಗೆ ನೀಡಿದರೂ ಸ್ವೀಕರಿಸಬಾರದು ಎಂಬ ನಿರ್ಣಯಕ್ಕೆ ಬಂದಿದ್ದರು. ಹಣಕ್ಕಿಂತಲೂ ಮುಖ್ಯವಾಗಿ ಸ್ವಾಭಿಮಾನದ ಬದುಕು ಬಾಳಬೇಕೆಂಬುದು ಅವರ ನಿಲುವಾಗಿತ್ತು. ಮೊದಲ ಪ್ರಯೋಗವಾಗಿ ಅವರು ಎರಡು ಗುಣಮಟ್ಟದ ಹಪ್ಪಳ ತಯಾರಿಸಿ ದರು. ತಾವು ತಯಾರಿಸಿದ ಹಪ್ಪಳವನ್ನು ಸ್ಥಳೀಯ ವ್ಯಾಪಾರಿಯೊಬ್ಬನಿಗೆ ಮಾರಿದರು.

ಅವರ ಹಪ್ಪಳ ಖರೀದಿಸಿದ ಛಗನ್ ಬಾಪಾ ಎಂಬ ವ್ಯಕ್ತಿ ಮಹಿಳೆಯರನ್ನು ಸಂಪರ್ಕಿಸಿ, ಗುಣಮಟ್ಟ ದಲ್ಲಿ ಅದರಲ್ಲೂ ರುಚಿಯಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದಂತೆ ಸಲಹೆ ನೀಡಿದರು. ಮುಂದೆ ಕೆಲವು ವರ್ಷ ಬಾಪಾ ನಿರ್ದೇಶನದಲ್ಲಿ ಸಹೋದರಿಯರು ಮುನ್ನಡೆದರು. ಸಾಹಸಿ ಸಪ್ತ ಸಹೋದರಿಯರ ಸಂಘ ಲಯಬದ್ಧವಾಗಿ ಬೆಳೆಯಿತು. ಮೊದಲ ವರ್ಷದ ಸುಮಾರು ಆರು ಸಾವಿರ ದ ಎರಡುನೂರು ರುಪಾಯಿ ಮೌಲ್ಯದ ಹಪ್ಪಳ ಮಾರಾಟವಾಗಿತ್ತು. ನೆನಪಿರಲಿ, ಇದು ಸುಮಾರು ಅರವತ್ತೆರಡು ವರ್ಷ ಹಿಂದಿನ ಮಾತು ಮತ್ತು ಮೌಲ್ಯ. ಮೂರು ತಿಂಗಳ ಒಳಗೆ ಇಪ್ಪತ್ತೈದು ಮಹಿಳೆಯರು ಇವರೊಂದಿಗೆ ಸೇರಿಕೊಂಡರು.

ಕೇವಲ ಬಾಯಿಂದ ಬಾಯಿಗೆ ಪ್ರಚಾರ ಸಾಕಷ್ಟು ಆಗಿತ್ತು. ಮುಂದಿನ ಮೂರು ವರ್ಷವೂ, ಪ್ರತಿ ವರ್ಷ ನೂರು ಮಹಿಳೆಯರು ಇವರೊಂದಿಗೆ ಸೇರಿಕೊಂಡರು. ಮೂರನೆ ವರ್ಷಾಂತ್ಯದಲ್ಲಿ ಸಹೋ ದರಿಯರು ಸುಮಾರು ಎರಡು ಲಕ್ಷ ರುಪಾಯಿ ಮೌಲ್ಯದ ಹಪ್ಪಳ ಮಾರಿದ್ದರು. ಸಮಾಜ ನೋಂದಣಿ ಕಾಯ್ದೆಯ ಅಡಿಯಲ್ಲಿ ‘ಶ್ರೀ ಮಹಿಳಾ ಗೃಹ ಉದ್ಯೋಗ’ ಎಂದು ನೋಂದಣಿಯಾದ ಸಂಸ್ಥೆ ‘ಲಿಜ್ಜತ್ ಪಾಪಡ್’ ಹೆಸರಿನಲ್ಲಿ ಹಪ್ಪಳ ತಯಾರಿಸಲು ಆರಂಭಿಸಿತು.

ಸಹೋದರಿಯರು ತಾವು ತಯಾರಿಸುವ ಹಪ್ಪಳಕ್ಕೆ ಒಳ್ಳೆಯ ಹೆಸರು ಸೂಚಿಸಲು ಜನರಲ್ಲಿ ಕೇಳಿ ಕೊಂಡಿದ್ದರು. ವಿಜೇತರಾದವರಿಗೆ ಐದು ರುಪಾಯಿ (!) ಬಹುಮಾನ ನೀಡುವುದಾಗಿ ಘೋಷಿಸಿದರು. ಧೀರಜ್ ಬೆನ್ ರೂಪೆಲ್ ಈ ಬಹುಮಾನ ಪಡೆದರು. ‘ಲಿಜ್ಜತ್’ ಅವರೇ ಸೂಚಿಸಿದ ಹೆಸರು. ಗುಜರಾತಿ ಭಾಷೆಯಲ್ಲಿ ಲಿಜ್ಜತ್ ಎಂದರೆ ‘ರುಚಿಕರ’ ಎಂದು ಅರ್ಥ.

ಹಪ್ಪಳಕ್ಕೆ ಬೇಡಿಕೆ ಹೆಚ್ಚಾಗಿ, ಒಂದು ಅಂಗಡಿಯಿಂದ ಶುರುವಾಗಿದ್ದು ಊರಿನ ಉಳಿದ ಅಂಗಡಿ ಗಳಿಂದ ಬೇಡಿಕೆ ಬರಲಾರಂಭಿಸಿತು. ಮೂರನೇ ವರ್ಷಾಂತ್ಯದಲ್ಲಿ ಸಹೋದರಿಯರು ಸುಮಾರು ಎರಡು ಲಕ್ಷ ರುಪಾಯಿ ಮೌಲ್ಯದ ಹಪ್ಪಳ ಮಾರಿದ್ದರು. ಅಲ್ಲಿಂದ ರಾಜ್ಯದ, ದೇಶದ ಇತರ ಭಾಗ ಗಳಲ್ಲೂ ಜನರ ನಾಲಿಗೆಗೆ ಹಪ್ಪಳದ ಲಿಜ್ಜತ್ ಹತ್ತಿತು. ಇಂದು ಅಮೆರಿಕ, ಯುರೋಪ್, ಪೂರ್ವ ಏಷ್ಯಾ, ಕೊಲ್ಲಿ ರಾಷ್ಟ್ರಗಳೂ ಸೇರಿದಂತೆ ವಿಶ್ವದ ಇಪ್ಪತ್ತೈದಕ್ಕೂ ಹೆಚ್ಚು ದೇಶದ ಜನರ ನಾಲಿಗೆ ಯನ್ನು ಅದು ತಲುಪಿದೆ. ಮೂರು ವರ್ಷ ಕಳೆಯುತ್ತಿದ್ದಂತೆ ಏಳು ಸಹೋದರಿಯರ ಮನೆಯ ಚಾವಣಿಗಳೂ ಭರ್ತಿಯಾಗಿ ಸ್ಥಳದ ಅಭಾವ ಉಂಟಾಯಿತು.

ಆಗ ಬಾಡಿಗೆಗೆ ಒಂದು ಸಣ್ಣ ಸ್ಥಳ ಪಡೆದರು. ಅಲ್ಲಿ ಮಹಿಳೆಯರಿಗೆ ಹಿಟ್ಟು ವಿತರಿಸಲಾಗುತ್ತಿತ್ತು. ಮಹಿಳೆಯರು ಮನೆಯಲ್ಲಿ ಹಪ್ಪಳ ತಯಾರಿಸಿ (ವರ್ಕ್ ಫ್ರಮ್ ಹೋಮ!) ತರಬೇಕಾಗಿತ್ತು. ತಂದ ಹಪ್ಪಳವನ್ನು ತೂಗಿ ಅದಕ್ಕೆ ತಕ್ಕಂತೆ ಹಣ ನೀಡಿ ಮಾರನೇ ದಿನಕ್ಕೆ ಹಿಟ್ಟು ನೀಡುವ ವ್ಯವಸ್ಥೆ ಮಾಡಲಾಯಿತು. ಸಂಸ್ಥೆಯ ವತಿಯಿಂದಲೇ ಅವರಿಗೆ ವಾಹನದ ವ್ಯವಸ್ಥೆ ಮಾಡಲಾಯಿತು. ಗುಣಮಟ್ಟ ಕಾಯ್ದುಕೊಳ್ಳಲು ಆಗಾಗ ಮನೆಗಳಿಗೆ ಹೋಗಿ ತಪಾಸಣೆ ನಡೆಸಲಾಯಿತು.

ಪ್ರಮುಖವಾಗಿ ಅವರು ಬಳಸುವ ಎಣ್ಣೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಲಕ್ಷ ವಹಿಸಲಾಯಿತು. ಸಂಸ್ಥೆಯು ಇಂದು ಸುಮಾರು ನಲವತ್ತೈದು ಸಾವಿರ ಜನಕ್ಕೆ ಉದ್ಯೋಗ ನೀಡಿದೆ. ಉದ್ಯೋಗ ಎನ್ನುವ ಪದ ಬಳಕೆಯೂ ತಪ್ಪು. ಏಕೆಂದರೆ ಸಂಸ್ಥೆ ತನ್ನೊಂದಿಗೆ ಕೆಲಸ ಮಾಡುವ ಪ್ರತಿಯೊಬ್ಬರನ್ನೂ ಭಾಗೀ ದಾರರು ಎಂದೇ ಹೇಳುತ್ತದೆ. ಲಾಭಾಂಶವನ್ನು ಎಲ್ಲರಲ್ಲೂ ಹಂಚುತ್ತದೆ. ಅಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಮಹಿಳೆಯನ್ನೂ ‘ಸಹೋದರಿ’ ಎಂದು ಪರಿಗಣಿಸಲಾಗುತ್ತದೆ.

ಬರುವುದು ಸಣ್ಣ ಪಾಲೇ ಆದರೂ, ಎಲ್ಲಾ ಒಂದು ಕಡೆ ಅದು ಆತ್ಮಸಮ್ಮಾನಕ್ಕೆ, ಸ್ವಾಭಿಮಾನದ ಖುಷಿಗೆ ಕಾರಣವಾಗುತ್ತದೆ. ಒಬ್ಬ ಮಹಿಳೆಗೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು? ಎಲ್ಲಕ್ಕಿಂತ ವಿಶೇಷ ವೆಂದರೆ, ಅವರಾಗಿಯೇ ಬಿಟ್ಟು ಹೋಗದಿದ್ದರೆ ಅಥವಾ ಗುಣಮಟ್ಟ ಕಾಯ್ದುಕೊಳ್ಳದ ಹೊರತಾಗಿ, ಸಂಸ್ಥೆ ಇದುವರೆಗೆ ಯಾರನ್ನೂ ಕೆಲಸದಿಂದ ಕಿತ್ತುಹಾಕಿಲ್ಲ.

ಏಕೆಂದರೆ ವರ್ಷದಿಂದ ವರ್ಷಕ್ಕೆ ಹಪ್ಪಳದ ‘ರುಚಿ’ ಹೆಚ್ಚುತ್ತಲೇ ಇದೆ. ದೇಶಾದ್ಯಂತ ಇಂದು ಲಿಜ್ಜತ್‌ ನ ಸುಮಾರು ತೊಂಬತ್ತು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಂಸ್ಥೆ ಇಂದು ಸಾವಿರದ ಆರು ನೂರು ಕೋಟಿ ರುಪಾಯಿಯ ಆದಾಯ ಹೊಂದಿದೆ. ನಿಮಗೆ ‘ಸ್ಟಾರ್‌ಬಕ್ಸ್’ ವಿಷಯ ಗೊತ್ತಿರ ಬಹುದು. ‌

ಸ್ಟಾರ್‌ಬಕ್ಸ್ ಸಂಸ್ಥೆ ತನ್ನ ನೌಕರರಿಗೆ ಲಾಭದಲ್ಲಿ ಪಾಲು ನೀಡುತ್ತದೆ. ನೌಕರರು ಕೂಡ ಸಂಸ್ಥೆಯ ಪಾಲುದಾರರು ಎಂಬ ಭಾವನೆ ಮೂಡಿದರೆ ಅವರು ತಮ್ಮ ಸಾಮರ್ಥ್ಯ ಮೀರಿ ಕೆಲಸಮಾಡುತ್ತಾರೆ ಎಂಬ ನಂಬಿಕೆ ಅದು. ಆದರೆ ಆ ಮಾದರಿ ಜಾರಿಗೆ ತರುವುದಕ್ಕೂ ಮೊದಲು ಸ್ಟಾರ್‌ಬಕ್ಸ್‌ ಕೋಟ್ಯಂ ತರ ರುಪಾಯಿ ಖರ್ಚು ಮಾಡಿದೆ, ಬಂಡವಾಳ ಹೂಡಿದೆ.

ಅದಕ್ಕೆಂದೇ ವ್ಯವಹಾರದಲ್ಲಿ, ವ್ಯಾಪಾರದಲ್ಲಿ, ತಜ್ಞರಾದವರನ್ನು ಸಂಸ್ಥೆಯಲ್ಲಿ ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ. ವಿಶೇಷವೆಂದರೆ ಈ ಮಾದರಿಯನ್ನು ಸಹೋದರಿಯರ ಸಂಸ್ಥೆಯು ಸ್ಟಾರ್‌ಬಕ್ಸ್ ಸಂಸ್ಥೆಗಿಂತಲೂ ಬಹಳ ಮುಂಚೆಯೇ ಅಳವಡಿಸಿಕೊಂಡಿದೆ. ಅದೂ ಯಾವುದೇ ತಜ್ಞರ ಸಹಾಯ‌ ವಿಲ್ಲದೆ! ನಮ್ಮಲ್ಲಿರುವ ‘ಎರಡು ಜಡೆ ಎಂದೂ ಒಟ್ಟಿಗೆ ಸೇರಲಾರವು’ ಎಂಬ ಗಾದೆಮಾತನ್ನು ಹುಸಿಯಾಗಿಸಿದವರು ಸಪ್ತ ಸಹೋದರಿಯರು. ನಿಜ ಅರ್ಥದಲ್ಲಿ ಮಹಿಳಾ ಸಬಲೀಕರಣ ಎಂದರೆ ಇದೇ!