Sunday, 22nd September 2024

ಭ್ರಷ್ಟರಿಗೆ ಶಿಕ್ಷೆ ಕೊಡಿಸಲೇಕೆ ಎಸಿಬಿ ಹಿಂದೆ ಬೀಳುತ್ತಿದೆ ?

ACB Raid

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ಈ ಒತ್ತಡ ಮೀರಿ ಶಿಕ್ಷೆ ಪ್ರಕಟವಾದರೆ, ಕಾನೂನಿನಲ್ಲಿರುವ ಅವಕಾಶವನ್ನೇ ಬಳಸಿಕೊಂಡು, ಹೆಚ್ಚುವರಿ ನ್ಯಾಯಾಲಯಕ್ಕೆ ಮೊರೆ, ಅಲ್ಲಿಯೂ ಶಿಕ್ಷೆ ಪ್ರಕಟವಾದರೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಇದ್ದೇ ಇರುತ್ತದೆ. ಈ ಎಲ್ಲ ಪ್ರಕ್ರಿಯೆ ಮುಗಿಯುವ ವೇಳೆಗೆ ಅಧಿಕಾರಿ ನಿವೃತ್ತನಾಗಿರುತ್ತಾನೆ.

‘ಆಧಿಕಾರಿಯ ಮನೆಯಲ್ಲಿ ಮೂರು ಕೆ.ಜಿ ಚಿನ್ನ ವಂತೆ, ಈ ಅಧಿಕಾರಿಯ ಮನೆಯ ಪೈಪ್‌ನಲ್ಲಿ 15 ಲಕ್ಷ ದುಡ್ಡಂತೆ. ಇನ್ನೊಬ್ಬ ಅಧಿಕಾರಿಯ ಸಂಪ್‌ನಲ್ಲಿ ದುಡ್ಡಂತೆ. ಇನ್ನು ಬಿಬಿಎಂಪಿಯ ಗುಮಾಸ್ತನ ಹೆಸರಲ್ಲಿ ಬೆಂಗಳೂರಲ್ಲಿ ಆರು ಮನೆ, 10ಕ್ಕೂ ಹೆಚ್ಚು ನಿವೇಶನವಂತೆ’ ಕಳೆದೊಂದು ವಾರದಿಂದ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕರ ನಡುವೆ ಇದೇ ಮಾತಾಗಿದೆ.

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಾಜ್ಯದ ಹಲವು ಭಾಗದಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ಭ್ರಷ್ಟ ಕುಳಗಳ ಬಳಿ ಸಿಕ್ಕ ಅಕ್ರಮ ಆಸ್ತಿಯ ಬಗ್ಗೆ ಮಾಹಿತಿ ನೀಡು ತ್ತಿದ್ದಂತೆ, ಈ ಚರ್ಚೆಗಳು ಶುರುವಾಗಿದೆ. ಈ ರೀತಿ ಅಕ್ರಮ ಸಂಪತ್ತು ಮಾಡಿಕೊಂಡಿವವರ ಪಟ್ಟಿಯಲ್ಲಿ ಎಂಜಿನಿಯರ್ ಹಂತದ ಅಧಿಕಾರಿಯಿಂದ ಹಿಡಿದು ಡಿ ಗ್ರೂಪ್ ನೌಕರರ ತನಕ ಇದ್ದಾರೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಈ ಬಾರಿ ಸಿಕ್ಕ ಬಿದ್ದ ಒಬ್ಬೊಬ್ಬ ಅಧಿಕಾರಿ ಅಥವಾ ಸಿಬ್ಬಂದಿ ತನ್ನ ಆದಾಯಕ್ಕಿಂತ ಐನೂರು, ಆರು ನೂರು 800 ಪಟ್ಟು ಹೆಚ್ಚು ಆಸ್ತಿ ಮಾಡಿರುವುದು ಸಹ ಸಾಬೀತಾಗಿದೆ. ಇದರಿಂದ ಸ್ಪಷ್ಟವಾಗಿ ತಿಳಿಯುವುದು ಏನೆಂದರೆ, ಇವರೆಲ್ಲ ತಮ್ಮ ಆದಾಯದ ಜತೆ ಕೆಲವು ‘ಮಾಮೂಲಿ’ ವರಮಾನಗಳನ್ನು ಮಾಡಿಕೊಂಡು ಕೋಟಿ ಕೋಟಿ ಕುಳಗಳಾಗಿದ್ದಾರೆ ಎನ್ನುವುದು.

ಆದರೆ ಈ ರೀತಿ ಅಕ್ರಮ ಆಸ್ತಿ ಮಾಡಿದ ಅಧಿಕಾರಿಗಳನ್ನು ಹಿಡಿದಿರುವುದಾಗಲಿ, ಅವರ ಅಕ್ರಮ ಆಸ್ತಿಯನ್ನು ಕಂಡು ಅಧಿಕಾರಿಗಳೇ ಬೆಚ್ಚಿ ಬಿದ್ದಿರುವುದಾಗಲಿ ಹೊಸದೇನಲ್ಲ. ಪ್ರತಿ ವರ್ಷ ಈ ರೀತಿಯ ದಾಳಿಗಳು ನಡೆಯ ತ್ತಲೇ ಇರುತ್ತದೆ. ದಾಳಿಯ ಬಳಿಕ ಆ ಅಧಿಕಾರಿಯನ್ನು ಅಮಾನತು ಮಾಡಲಾಗುತ್ತದೆ. ಅದಾದ ಬಳಿಕ ಯಾವುದಾದರೂ ಒಂದು ಪೋಸ್ಟ್ ತಗೆದುಕೊಂಡು ಹೋಗಿ, ಆ ಅಧಿಕಾರಿ ಅರಾಮಾಗಿ ಇರುತ್ತಾನೆ. ಆತನ ವಿರುದ್ಧ ಕೇಸು ವರ್ಷಗಟ್ಟಲೇ ಕೋರ್ಟ್‌ನಲ್ಲಿ ಇರುವುದರಿಂದ ಆತ ಏನು ಆಗಿಲ್ಲವೆನ್ನುವಂತೆ ತನ್ನ ಕೆಲಸ ಮಾಡಿಕೊಂಡು, ‘ಮಾಮೂಲಿ’ ಎನ್ನುವ ಹಾಗೇ, ಈ ಹಿಂದೆ ಮಾಡುತ್ತಿದ್ದ ಕೆಲಸವನ್ನೇ ಮಾಡಿಕೊಂಡು ಹೋಗು ತ್ತಾನೆ. ಶಿಕ್ಷೆ ಆಗುವ ವೇಳೆಗೆ ಜನರು ಹೋಗಲಿ ಆ ಅಧಿಕಾರಿಯೇ ಮರೆತು ಹೋಗಿರುತ್ತಾನೆ.

ಈ ರೀತಿ ಭ್ರಷ್ಟ ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದರೂ, ಶಿಕ್ಷೆ ಏಕೆ ಆಗುವುದಿಲ್ಲ ಎನ್ನುವುದು ಸೂಕ್ಷ್ಮವಾಗಿ ಗಮನಿಸಿದರೆ, ಪುನಃ ಅಲ್ಲಿ ಕಾಣಿಸುವುದು ಒಂದು ಎಸಿಬಿ ಅಧಿಕಾರಿಗಳು ದಾಳಿ ಮಾಡುವ ವೇಳೆ ಇರುವ ಹುರುಪು, ವರದಿ ಸಲ್ಲಿಸುವಾಗ ಹೊಂದಿರುವುದಿಲ್ಲ ಎನ್ನುವುದು ಅಥವಾ ದೇಶದ ಕಾನೂನಿನಲ್ಲಿ ತಪ್ಪಿಸಿಕೊಳ್ಳಲು ಇರುವ ಕಳ್ಳ ದಾರಿಗಳನ್ನು ಹುಡುಕಿಕೊಂಡು ಅಧಿಕಾರಿ ಅದರ ಸಹಾಯದಿಂದ ಬಚಾವಾಗುವುದು ಕಾಣಿಸುತ್ತದೆ. ಇದೇ ಕಾರಣಕ್ಕಾಗಿ ಎಸಿಬಿ ದಾಳಿ ನಡೆಸಿದ ಕೋಟಿ ಕೋಟಿ ಕುಳಗಳ ಭ್ರಷ್ಟರನ್ನು ಹೊರಗೆಳೆದರೂ, ಸಾರ್ವಜನಿಕ ವಲಯದಲ್ಲಿ, ಈ ಎಲ್ಲವೂ ಕೇವಲ ಹೆಸರಿಗೆ ಸೀಮಿತ. ದಾಳಿಯಾದ ಎರಡು ದಿನಕ್ಕೆ ಆ ಅಧಿಕಾರಿಯೂ ಬಚಾವೂ, ಪ್ರಕರಣವೂ ಕೊಚ್ಚಿ ಹೋಗುತ್ತದೆ ಎಂದು ಅನೇಕರು ಹೇಳಿದ್ದಾರೆ. ಈ ರೀತಿಯ ಟೀಕೆಗಳು ಹೊರಬರುತ್ತಿದ್ದಂತೆ, ಎಸಿಬಿ ಅಽಕಾರಿ ಗಳು ಪ್ರತಿಕಾಪ್ರಕಟಣೆಯನ್ನು ಹೊರಡಿಸಿ, ಕಳೆದ ಐದು ವರ್ಷದಲ್ಲಿ ಸಾವಿರಾರು ದಾಳಿ ನಡೆಸಿರುವುದಾಗಿ ಹೇಳಿತು.

ಸಾವಿರ ಲೆಕ್ಕದಲ್ಲಿ ನಡೆದಿರುವ ದಾಳಿಯನ್ನು ಗಮನಿಸಿದಾಗ, ಕಳೆದ ಐದಾರು ವರ್ಷದಲ್ಲಿ ಎಸಿಬಿ ಉತ್ತಮ ರೀತಿಯಲ್ಲಿಯೇ ಕೆಲಸ ಮಾಡಿದೆ ಎನ್ನಬಹುದು. ಆದರೆ ಈ ಸಾವಿರಾರು ಪ್ರಕರಣದಲ್ಲಿ ಆರೋಪಿಗಳಾಗಿರುವವರ ಪೈಕಿ ಆರೋಪ ಸಾಬೀತಾಗಿರುವುದು ಕೇವಲ 10 ಜನರಿಗೆ. ಇನ್ನುಳಿದ ಬಹುತೇಕ ಪ್ರಕರಣಗಳು, ನ್ಯಾಯಾಲಯದ ಹಂತದಲ್ಲಿದೆ. ಇದನ್ನು ನೋಡಿದರೆ, ಭ್ರಷ್ಟರನ್ನು ಹುಡುಕುವ ಎಸಿಬಿ ಅಧಿಕಾರಿಗಳು, ಅವರಿಗೆ ಶಿಕ್ಷೆ ಕೊಡಿಸುವ ವಿಷಯದಲ್ಲಿ ಹಿಂದೆ ಬೀಳುತ್ತಿದ್ದಾರೆ ಎನ್ನುವುದು ಸ್ಪಷ್ಟ.

ಹೌದು, ದೊಡ್ಡ ಕುಳಗಳ ವಿರುದ್ಧ ದೂರು ಬಂದ ಕೂಡಲೇ ಎಸಿಬಿ ಅಧಿಕಾರಿಗಳು ಸಮರೋಪಾದಿಯಲ್ಲಿ ಯೋಜನೆ ರೂಪಿಸಿಕೊಂಡು, ಅಧಿಕಾರಿ ಮನೆ, ಕಚೇರಿ, ಆಪ್ತರ ನಿವಾಸ ಸೇರಿದಂತೆ ಪ್ರತಿಯೊಂದು ಸ್ಥಳದಲ್ಲಿಯೂ ದಾಳಿ ಮಾಡುತ್ತಾರೆ. ಆ ವೇಳೆ ಅಧಿಕಾರಿಗಳಿಗೆ ಬೇಕಾದ ಎಲ್ಲರನ್ನು ಜತೆಯಲ್ಲಿರಿಸಿಕೊಂಡೇ ಅಖಾಡಕ್ಕೆ ಇಳಿಯುವುದು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಅದಾದ ಬಳಿಕ ಈ ಬಗ್ಗೆ ಮಾಹಿತಿ ನೀಡಲು, ಗಡಿಬಿಡಿಯಲ್ಲಿ ಇಂತಿಷ್ಟು ಸಿಕ್ಕಿದೆ ಎಂದು ಮಾಧ್ಯಮ ಪ್ರಕಟಣೆ ನೀಡಿ, ಒಂದೆರೆಡು ದಿನ ಫಾಲೋಅಪ್ ಅನ್ನು ಅಧಿಕಾರಿಗಳು ಮಾಡುತ್ತಾರೆ. ಆದರೆ ಅದಾದ ಬಳಿಕ ನ್ಯಾಯಾಲಯಕ್ಕೆ ಸಲ್ಲಿಸಬೇಕಿರುವ ವರದಿ ಸಲ್ಲಿಸುವಾಗ, ಸ್ಥಳ
ಮಹಜರ್‌ನಲ್ಲಿ ಲೋಪದೋಷ ಮಾಡಿರುತ್ತಾರೆ. ಈ ಲೋಪ ಹಿಡಿದುಕೊಂಡು, ಭ್ರಷ್ಟ ಅಧಿಕಾರಿ ಗಳು ತಡೆಯಾಜ್ಞೆ ತಂದರೆ, ವರ್ಷಗಳ ಕಾಲ ಆ ಪ್ರಕರಣವನ್ನು ಮುಟ್ಟುವಂತಿಲ್ಲ!

ಇನ್ನೊಂದು ಸಾಧ್ಯತೆ ಎಂದರೆ, ಅಽಕಾರಿಗಳು ಭ್ರಷ್ಟರು ಎನ್ನುವುದಕ್ಕೆ ಕೋರ್ಟ್ ಕೇಳುವುದು ಸಾಕ್ಷ್ಯವನ್ನು. ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆಯಾಗಿ, ಅಲ್ಲಿ ಸಾಕ್ಷಿಗಳನ್ನು ಕರೆದಾಗ, ಬಹುತೇಕ ಸಾಕ್ಷಿಗಳು ನ್ಯಾಯಾಲಯದ ಸಹವಾಸ ಬೇಡವೆಂದು ಸಾಕ್ಷಿ ನೀಡಲು ಹಿಂದೇಟು ಹಾಕುತ್ತಾರೆ. ಅಥವಾ ಅಽಕಾರಿಗಳಿಗೆ ಸಹಾಯವಾಗುವಂತೆ ಹೇಳಿಕೆ ನೀಡಿ ಹೋಗುತ್ತಾರೆ. ಇನ್ನು ಎಸಿಬಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಽಸಿದ ಸಾಕ್ಷ್ಯ, ಅಕ್ರಮ ಆಸ್ತಿ ಮಾಡಿದ್ದಾರೆ ಎನ್ನುವು
ದಕ್ಕೆ ಬೇಕಾಗಿರುವ ಪೂರಕ ದಾಖಲೆಗಳನ್ನು ನೀಡುವಲ್ಲಿ ವಿಫಲರಾಗುತ್ತಾರೆ ಅಥವಾ ವಿಫಲವಾಗುವಂತೆ ವ್ಯವಸ್ಥೆ ನೋಡಿಕೊಳ್ಳುತ್ತದೆ. ಇಲ್ಲವೇ ಯಾವುದೇ ದಾಳಿಯಾದರೂ, ಅದರ ತನಿಖೆಯನ್ನು ಆಯಾ ಇಲಾಖೆಯಿಂದ ಆಂತರಿಕ ತನಿಖೆಯೊಂದನ್ನು ಮಾಡಬೇಕಾಗುತ್ತದೆ.

ಈ ಆಂತರಿಕ ತನಿಖೆಯ ವರದಿ ನೀಡುವುದಕ್ಕೆ ತಡ ಮಾಡಿ ಇಡೀ ಪ್ರಕರಣದ ಹಾದಿಯೇ ತಪ್ಪುವಂತೆ ಮಾಡುವ ಸಾಧ್ಯತೆಯಿದೆ. ಈ ರೀತಿ ವಿಳಂಬವಾಗುವು ದರಿಂದ ಅನೇಕ ಬಾರಿ ಎಫ್ಐಆರ್ ಹಾಕುವಾಗಲೇ, ಅಧಿಕಾರಿಗಳು ತಡ ಮಾಡುತ್ತಾರೆ. ಇದರಿಂದ ಹಲವು ಸಾಕ್ಷ್ಯಗಳು ನಾಶವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರೊಂದಿಗೆ ನ್ಯಾಯಾಲಯಕ್ಕೆ ಹೋದ ಬಳಿಕ, ಅಲ್ಲಿ ವರ್ಷಗಟ್ಟಲೇ ವಾದ-ಪ್ರತಿವಾದ ಆಲಿಸುವುದರಿಂದ, ನ್ಯಾಯಾಲಯದಲ್ಲಿ ಎಸಿಬಿ ವಕೀಲರಿಂದ ಸಮರ್ಥ
ವಾದ ಮಂಡನೆಯಾಗದೇ ಹೋಗುವುದರಿಂದ ಅನೇಕರು ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳನ್ನು ಕಾನೂನು ತಜ್ಞರು ಹೇಳುತ್ತಾರೆ.

ಒಂದು ವೇಳೆ ಆರೋಪ ಸಾಬೀತಾದರೂ, ಸರಕಾರಿ ಅಧಿಕಾರಿಗಳಾಗಿರುವುದರಿಂದ ಸರಕಾರದಿಂದಲೇ ಕ್ರಮವಹಿಸಬೇಕಾಗುತ್ತದೆ. ಸಂಪುಟ ಸಭೆಯಲ್ಲಿ ಚರ್ಚೆ ಆಗಿ, ಬಳಿಕ ಕಡ್ಡಾಯ ನಿವೃತ್ತಿಯಂತಹ ಅಥವಾ ಹಿಂಬಡ್ತಿಯಂತಹ ಕ್ರಮಗಳನ್ನು ವಹಿಸಬೇಕಾಗುತ್ತದೆ. ಆದರೆ ಈ ಎಲ್ಲ ಕ್ರಮಗಳು ಪೂರ್ಣಗೊಳ್ಳುವ ವೇಳೆಗೆ ವರ್ಷಗಳೇ ಕಳೆಯುವುದರಿಂದ ಅಧಿಕಾರಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಎಲ್ಲ ಮೀರಿ ಶಿಕ್ಷೆ ಪ್ರಕಟವಾದರೆ, ಕಾನೂನಿನಲ್ಲಿರುವ ಅವಕಾಶವನ್ನೇ ಬಳಸಿಕೊಂಡು, ಹೆಚ್ಚುವರಿ ನ್ಯಾಯಾಲಯಕ್ಕೆ ಮೊರೆ, ಅಲ್ಲಿಯೂ ಶಿಕ್ಷೆ ಪ್ರಕಟವಾದರೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಇದ್ದೇ ಇರುತ್ತದೆ. ಈ
ಎಲ್ಲವನ್ನು ಮೀರಿ, ಅಽಕಾರಿಗೆ ಶಿಕ್ಷೆ ಖಾತ್ರಿಯಾಗುವ ವೇಳೆ, ಒಂದು ಆತ ನಿವೃತ್ತನಾಗಿರುತ್ತಾನೆ. ಇಲ್ಲವೇ, ಸರಕಾರವೇ ಆ ಪ್ರಕರಣಕ್ಕೆ ಬೇಕಾದಂತಹ ಕಾನೂನು ನೆರವನ್ನು ನಿಲ್ಲಿಸಿರುತ್ತದೆ.

ಭ್ರಷ್ಟಾಚಾರ ಮಾಡಿರುವುದು ಗೊತ್ತಿದ್ದರೂ, ನ್ಯಾಯಾಲಯಗಳು ಕೇಳುವ ‘ದಾಖಲೆ’ಗಳನ್ನು ಒದಗಿಸುವಲ್ಲಿ ವಿಫಲರಾಗಿ, ಅಧಿಕಾರಿಗಳು ತಪ್ಪಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಎಸಿಬಿ ಆರಂಭವಾಗುವ ಮೊದಲು ಲೋಕಾಯುಕ್ತವಿತ್ತು. ಈಗಲೂ ಎಸಿಬಿಯ ಎಲ್ಲ ಪ್ರಕರಣಗಳ ತನಿಖೆ ಯನ್ನು ಲೋಕಾಯುಕ್ತ ನ್ಯಾಯಾಲಯದಲ್ಲಿಯೇ ತನಿಖೆ ಯಾಗುವುದು. ಆದರೆ ಲೋಕಾಯುಕ್ತದಿಂದಲೇ ದಾಳಿ ನಡೆದಾಗ, ಸರಕಾರದಿಂದ ಒತ್ತಡ ಹೇರುವ ಸಾಧ್ಯತೆ ಕಡಿಮೆಯಿತ್ತು. ಏಕೆಂದರೆ ಅದೊಂದು ಸ್ವಾತಂತ್ರ್ಯ ಸಂಸ್ಥೆಯಾಗಿತ್ತು. ಆದರೆ ಎಸಿಬಿ ಸರಕಾರ ಹಾಗೂ ಗೃಹ ಇಲಾಖೆಯ ಅಡಿ ಬರುವುದರಿಂದ, ಅಽಕಾರಿಗಳ ಮೇಲೆ ಸರಕಾರದ ಹಿಡಿತ ಒಂದು ಕೈ ಹೆಚ್ಚಿರುತ್ತದೆ. ಆದ್ದರಿಂದ ಕೆಲವೊಮ್ಮೆ ಪ್ರಭಾವ ದಿಂದಲೂ ಕೆಲ ಪ್ರಕರಣಗಳು ಗಾಳಿಯಿಲ್ಲದ ಬಲೂನ್ ಆಗುವ ಸಾಧ್ಯತೆಯಿರುತ್ತದೆ.

ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಉದ್ದೇಶಕ್ಕಾಗಿ ಸ್ಥಾಪನೆಯಾಗಿರುವ ಎಸಿಬಿಯ ಅಽಕಾರಿಗಳು ದಾಳಿ ಮಾಡಿ, ಅಕ್ರಮವನ್ನು ಹೊರತಗೆದು, ಭ್ರಷ್ಟ ಅಽಕಾರಿಯನ್ನು ಬೀದಿ ಯಲ್ಲಿ ನಿಲ್ಲಿಸಿದರೂ ‘ಕಾನೂನಿನ ಮುಂದೆ’ ಸೋಲುತ್ತಿದ್ದಾರೆ. ದೇಶದ ಕಾನೂನಿನಲ್ಲಿರುವ ಕೆಲವು ಲೂಪ್‌ಹೋಲ್‌ಗಳನ್ನು ಬಳಸಿಕೊಂಡು ಅಽಕಾರಿಗಳು, ತಪ್ಪಿಸಿಕೊಳ್ಳುತ್ತಿರುವುದು ತಡೆ ಯಲು ಎಸಿಬಿಯ ಕಾನೂನು ಘಟಕ ಇನ್ನಷ್ಟು ಸಕ್ರಿಯವಾಗ ಲೇಬೇಕಿದೆ. ಇಲ್ಲದಿದ್ದರೆ, ಈ ಎಲ್ಲ ದಾಳಿಗಳು ‘ಆಪರೇಷನ್ ಸಕ್ಸಸ್, ಪೇಷೆಂಟ್ ಡೆಡ್’ ಎನ್ನುವ ರೀತಿಯಾಗುತ್ತದೆ.