Yours Sincerely Raam: ರಿಷಬ್ ಶೆಟ್ಟಿ ಬಳಿಕ ಹನುಮಾನ್ ಅವತಾರ ತಾಳಿದ ಗಣೇಶ್
Golden Star Ganesh: ಸ್ಯಾಂಡಲ್‌ವುಡ್‌ನ ನಟ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಮೇಶ್ ಅರವಿಂದ್ ನಟನೆಯ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇದೀಗ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶುಭಾಶಯ ತಿಳಿಸಿದೆ. ಈ ಪೋಸ್ಟರ್‌ನಲ್ಲಿ ಗಣೇಶ್ ಹನುಮಂತನ ಅವತಾರ ತಾಳಿದ್ದಾರೆ.


ಬೆಂಗಳೂರು: ಸ್ಯಾಂಡಲ್‌ವುಡ್‌ನ ಬ್ಯುಸಿ ನಟರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಕೂಡ ಒಬ್ಬರು. ಸದ್ಯ ಅವರು ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಪೈಕಿ ಹಿರಿಯ ನಟ ರಮೇಶ್ ಅರವಿಂದ್ ಹಾಗೂ ಗಣೇಶ್ ಕಾಂಬಿನೇಷನ್‌ನ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ (Yours Sincerely Raam) ಗಮನ ಸೆಳೆದಿದೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಜು. 2ರಂದು ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶುಭಾಶಯ ತಿಳಿಸಿದೆ. ಈ ಪೋಸ್ಟರ್‌ನಲ್ಲಿ ಗಣೇಶ್ ಹನುಮಂತನ ಅವತಾರ ತಾಳಿದ್ದು, ಗಮನ ಸೆಳೆಯುತ್ತಿದೆ.
ಗಣೇಶ್ ಜನ್ಮದಿನಕ್ಕೆ ಅನಾವರಣಗೊಂಡಿರುವ ಪೋಸ್ಟರ್ ಬಹಳ ವಿಶೇಷವಾಗಿದ್ದು, ಅವರು ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹೌದು, ಭಜರಂಗಿ ಅವತಾರದಲ್ಲಿ ಬರ್ತ್‌ಡೇ ಬಾಯ್ ಗಣೇಶ್ ದರ್ಶನ ಕೊಟ್ಟಿದ್ದಾರೆ. ಹಿಮಾಲಯದ ಬ್ಯಾಕ್ ಡ್ರಾಪ್‌ನಲ್ಲಿ ಮೂಡಿ ಬಂದಿರುವ ಪೋಸ್ಟರ್‌ನಲ್ಲಿ ರಾಮನ ಸೈಕಲ್ ಮೇಲೆ ಕುಳಿತಿರುವ ಭಜರಂಗಿ ಭುಜದಲ್ಲಿ ಪೋಸ್ಟ್ ಮ್ಯಾನ್ ಬ್ಯಾಗ್ ಕಾಣಿಸುತ್ತದೆ. ಆ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಸುದ್ದಿಯನ್ನೂ ಓದಿ: Actor Ganesh: ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋಲ್ಡನ್ ಸ್ಟಾರ್; ಯಾರಿಗೂ ಗೊತ್ತಿರದ ಇಂಟ್ರಸ್ಟಿಂಗ್ ವಿಚಾರಗಳು ಇಲ್ಲಿವೆ!
ʼಪುಷ್ಪಕ ವಿಮಾನ’, ‘ಇನ್ಸ್‌ಪೆಕ್ಟರ್ ವಿಕ್ರಮ್’, ‘ಮಾನ್ಸೂನ್ ರಾಗ’ದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ.ಆರ್. ಈ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ಐರಾ ಫಿಲ್ಮ್ಸ್ ಮತ್ತು ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿ ಸತ್ಯ ರಾಯಲ ʼಯುವರ್ಸ್ ಸಿನ್ಸಿಯರ್ಲಿ ರಾಮ್’ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಜೆ.ಅನೂಪ್ ಸೀಳಿನ್ ಸಂಗೀತ, ಗುಣ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಭರದಿಂದ ಚಿತ್ರೀಕರಣ ಸಾಗುತ್ತಿದ್ದು, ಈ ವರ್ಷಾಂತ್ಯಕ್ಕೆ ತೆರೆಗೆ ಬರಲಿದೆ.
ರಮೇಶ್ ಜತೆ ಗಣೇಶ್ 2ನೇ ಚಿತ್ರ
ಹಾಗೆ ನೋಡಿದರೆ ರಮೇಶ್ ಮತ್ತು ಗಣೇಶ್ ಈ ಹಿಂದೆಯೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆದರೆ ಜತೆಯಾಗಿ ನಟಿಸಿಲ್ಲ. 2016ರಲ್ಲಿ ತೆರೆಕಂಡ ಗಣೇಶ್ ಅಭಿನಯದ ʼಸುಂದರಾಂಗ ಜಾಣʼ ಚಿತ್ರಕ್ಕೆ ರಮೇಶ್ ಅರವಿಂದ್ ಆ್ಯಕ್ಷನ್ ಕಟ್ ಹೇಳಿದ್ದರು. ಅದಾಗಿ ಸುಮಾರು 9 ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿರುವುದು ಸಹಜವಾಗಿಯೂ ನಿರೀಕ್ಷೆ ಮೂಡಿಸಿದೆ. ಇಬ್ಬರೂ ʼಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ ಯಾವ ರೀತಿಯ ಪಾತ್ರ, ಕಥೆ ಏನು ಎನ್ನುವ ಗುಟ್ಟನ್ನು ನಿರ್ದೇಶಕರು ಇದುವರೆಗೆ ಬಿಟ್ಟುಕೊಟ್ಟಿಲ್ಲ.