Sunday, 22nd September 2024

ಡಿಕೆಶಿ- ಸಿದ್ದು ಕಚ್ಚಾಟಕ್ಕೆ ಜಮಿರ‍್ ಜಮೆ

ಮೂರ್ತಿ ಪೂಜೆ

ಆರ‍್.ಟಿ.ವಿಠ್ಠಲಮೂರ್ತಿ

ಅಲ್ಪಸಂಖ್ಯಾತ ನಾಯಕ ಎಂದು ತಾವೇ ಹೊತ್ತು ಮೆರೆಸಿದ ಜಮೀರ್ ಅವರನ್ನು ಬಳಸಿಕೊಂಡು ತಮ್ಮ ಇಮೇಜ್ ಗೆ ಹೊಡೆತ ಕೊಡಲು ಡಿಕೆಶಿ ಮತ್ತಿತರರು ಹೊರಟಿzರೆ ಎಂಬ ಅನುಮಾನ ಸಿದ್ದರಾಮಯ್ಯ ಪಾಳೆಯವನ್ನು ಕಾಡತೊಡಗಿದೆ.

ರಾಜ್ಯ ಕಾಂಗ್ರೆಸ್ ನ ಒಳಜಗಳ ಅಕ್ಷರಶಃ ಬೀದಿಗೆ ಬಂದಿದೆ. ಇತ್ತೀಚೆಗೆ ನಡೆದ ಸಮಾವೇಶವೊಂದರಲ್ಲಿ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿಗೆ ಮಾತನಾ ಡಲು ಅಲ್ಪಸಂಖ್ಯಾತ ನಾಯಕ ಜಮೀರ್ ಅಹ್ಮದ್ ಬೆಂಬಲಿಗರು ಬಿಡಲಿಲ್ಲ ಎಂಬ ಘಟನೆ ಕೈ ಪಾಳೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತು ಪಡಿಸಿದೆ.

ಅಷ್ಟೇ ಅಲ್ಲ, ಭವಿಷ್ಯದ ಸಿಎಂ ಗಾದಿಗಾಗಿ ಪೈಪೋಟಿ ನಡೆಸುತ್ತಿರುವ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಣ ಕದನಕ್ಕೆ ಮತ್ತಷ್ಟು ಇಂಬು ನೀಡಿದೆ. ಮೇಲ್ನೋಟಕ್ಕಂತೂ ಈ ಎಪಿಸೋಡಿಗೂ ಡಿ.ಕೆ.ಶಿವಕುಮಾರ್ ಅವರಿಗೂ ಸಂಬಂಧವಿಲ್ಲ. ಈ ಘಟನೆ ನಡೆದ ಸಂದರ್ಭದಲ್ಲಿ ಖುದ್ದು ಡಿ.ಕೆ.ಶಿವಕುಮಾರ್ ಕೂಡಾ ಜಮೀರ್ ಅಹ್ಮದ್ ಬೆಂಬಲಿಗರ ವಿರುದ್ದ ಕಿಡಿ ಕಾರಿದ್ದಾರೆ. ಸಮಾವೇಶದಲ್ಲಿ ಪ್ರತಿಪಕ್ಷ ನಾಯಕರಿಗೆ ಮಾತನಾಡಲು ಬಿಡದ ನೀವು ಕಾಂಗ್ರೆಸ್ ದ್ರೋಹಿಗಳು ಎಂದು ದೂಷಿಸಿದ್ದಾರೆ. ಆದರೆ ಅವರು ಏನೇ ಮಾಡಿದರೂ ಸಿದ್ದರಾಮಯ್ಯ ಮತ್ತವರ ಗ್ಯಾಂಗು ಇದನ್ನು ನಂಬುವ ಸ್ಥಿತಿಯಲ್ಲಿಲ್ಲ. ಬದಲಿಗೆ ಈ ಎಪಿಸೋಡಿನ ಹಿಂದೆ ಡಿಕೆಶಿ ಕೈವಾಡ ಇದೆ ಎಂದೇ ಅದು ನಂಬುತ್ತಿದೆ.

ಅಂದ ಹಾಗೆ ಇತ್ತೀಚಿನ ದಿನಗಳಲ್ಲಿ ಗಳಸ್ಯ-ಕಂಠಸ್ಯರಾಗಿದ್ದ ಸಿದ್ಧರಾಮಯ್ಯ ಮತ್ತು ಜಮೀರ್ ಅಹ್ಮದ್ ಈಗ ಸ್ವಲ್ಪ ಮಟ್ಟಿಗೆ ದೂರವಾಗಿರುವುದು ನಿಜ. ಹಾಗೆ ನೋಡಿದರೆ ಜಮೀರ್ ಅಹ್ಮದ್ ಅವರನ್ನು ನಂಬರ್ ಒನ್ ಅಲ್ಪಸಂಖ್ಯಾ ನಾಯಕ ಅಂತ ಪ್ರತಿಬಿಂಬಿಸಲು ಸಿದ್ದರಾಮಯ್ಯ ನಡೆಸಿದ ಪ್ರಯತ್ನ ಸಣ್ಣದೇನಲ್ಲ. ಇದಕ್ಕೆ ಮುಖ್ಯ ಕಾರಣ, ಜಮೀರ್ ಅಹ್ಮದ್ ತಮ್ಮ ಕಡು ವೈರಿ ಎಚ್.ಡಿ.ಕುಮಾರಸ್ವಾಮಿ ಕ್ಯಾಂಪಿನಿಂದ ಹೊರಬಿದ್ದವರು ಎಂಬುದು. ಅದೇ ರೀತಿ ತಮಗೆ ನಿಷ್ಠರಾಗಿರುವ ಮುಸ್ಲಿಂ ನಾಯಕ ರೊಬ್ಬರ ಅಗತ್ಯ ಅವರಿಗೂ ಇತ್ತು. ಹೀಗಾಗಿ ಜತೆಗೇ ಇದ್ದ ಸಿ.ಎಂ.ಇಬ್ರಾಹಿಂ ಅವರನ್ನು ದೂರವಿಟ್ಟು, ತನ್ವೀರ್ ಸೇಠ್, ಯು.ಟಿ.ಖಾದರ್ ಅವರನ್ನು ಪಕ್ಕಕ್ಕಿಟ್ಟು ಜಮೀರ್ ಅಹ್ಮದ್ ಅವರನ್ನು ನಿರಂತರವಾಗಿ ಮೇಲೆತ್ತುತ್ತಾ ಹೋಗಿದ್ದರು ಸಿದ್ಧರಾಮಯ್ಯ. ಆದರೆ ಯಾವಾಗ ಆರ್ಥಿಕ ಜಾರಿ ನಿರ್ದೇಶನಾಲಯ ಜಮೀರ್ ಅಹ್ಮದ್ ವಿರುದ್ಧ ಮುರಕೊಂಡು ಬಿತ್ತೋ? ಇದಾದ ನಂತರ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ವಿಷಯದಲ್ಲಿ ಹಿಂದಡಿ ಇಡತೊಡಗಿದರು.

ಇದಕ್ಕೆ ಅವರ ಅಕ್ಕ-ಪಕ್ಕ ಇದ್ದವರು ನೀಡಿದ ಮೆಸೇಜೂ ಕಾರಣವಾಗಿತ್ತು. ಜಮೀರ್ ಅಹ್ಮದ್ ಅವರು ವಕ್ಫ್ ಭೂಮಿ ಯಲ್ಲಿ ಅರಮನೆಯಂತಹ ಮನೆ ನಿರ್ಮಿಸಿ ಕೊಂಡಿದ್ದಾರೆ. ತಮಗಾಗಿ ಮಾತ್ರವಲ್ಲ, ತಮ್ಮ ಸಹೋದರನಿಗೂ ಮನೆ ನಿರ್ಮಿಸಿಕೊಟ್ಟಿದ್ದಾರೆ ಅಂತ ಈ ಬೆಂಬಲಿಗರು ಮಾಹಿತಿ ನೀಡಿದ್ದೇ ತಡ, ಸಿದ್ದರಾಮಯ್ಯ ಅವರ ವರಸೆಯೇ ಬದಲಾಯಿತು. ಇವತ್ತು ಇ.ಡಿ ದಾಳಿಗೆ ಗುರಿಯಾಗಿರುವ ಜಮೀರ್ ಅಹ್ಮದ್ ಅವರನ್ನು ಜತೆಗಿಟ್ಟುಕೊಂಡರೆ, ನಾಳೆ ತಾವು ಇರುಸು ಮುರುಸಿಗೆ ಒಳಗಾಗಬಹುದು ಎಂಬ ಲೆಕ್ಕಾಚಾರಕ್ಕೆ ಬರುವಂತೆ ಮಾಡಿತು.

ಪರಿಣಾಮ, ಇಡಿ ದಾಳಿಗೆ ಗುರಿಯಾದ ಜಮೀರ್ ಅಹ್ಮದ್ ಅವರ ವಿಷಯದಲ್ಲಿ ಅಂತರ ಕಾಪಾಡತೊಡಗಿದರು. ಇದನ್ನರ್ಥ ಮಾಡಿಕೊಳ್ಳಲು ಜಮೀರ್ ಅಹ್ಮದ್ ಅವರಿಗೆ ತುಂಬ ಸಮಯವೇನೂ ಬೇಕಾಗಲಿಲ್ಲ. ವಿಶ್ವಾಸ ತೋರಿದರೆ, ಮರುಕ್ಷಣವೇ ವಿಶ್ವಾಸದ ಮಳೆ ಸುರಿಸುವ, ದ್ವೇಷದ ಸುಳಿವು ಕಂಡರೆ ಶತಾಯ ಗತಾಯ ದ್ವೇಷ ಮಾಡುವುದು ಜಮೀರ್ ಅಹ್ಮದ್ ಗುಣ. ಈ ಹಿಂದೆ ಕುಮಾರಸ್ವಾಮಿ ಅವರ ಜತೆಗಿದ್ದಾಗ ಹಗಲು-ರಾತ್ರಿ ಎನ್ನದೆ ಕುಮಾರಣ್ಣ, ಕುಮಾರಣ್ಣ ಅಂತ ಜಪ
ಮಾಡಿಕೊಂಡಿದ್ದರು. ಯಾವಾಗ ಆ ಸಂಬಂಧ ಹಳಸಿತೋ? ತಿರುಗಿ ಬಿದ್ದು ಕುಮಾರಸ್ವಾಮಿ ವಿರುದ್ಧ ಹಗಲಿರುಳು ಎನ್ನದೇ ಟೀಕಿಸತೊಡಗಿದರು. ಜಮೀರ್ ಅಹ್ಮದ್‌ರ ಈ ನಡವಳಿಕೆಯ ವಿವರ ಬಲ್ಲ ಸಿದ್ಧರಾಮಯ್ಯ ಇ.ಡಿ ಎಪಿಸೋಡಿನ ನಂತರ ಜಮೀರ್ ಅಹ್ಮದ್ ಅವರನ್ನು ಮೆಲ್ಲಗೆ ದೂರವಿಡುತ್ತಾದರೇ ವಿನಃ ಅವರನ್ನು ಟೀಕಿಸಲು ಹೋಗಲಿಲ್ಲ.

ಆದರೆ ಇದನ್ನರ್ಥ ಮಾಡಿಕೊಂಡ ಜಮೀರ್ ಅಹ್ಮದ್ ಕೂಡಾ ಇದ್ದಕ್ಕಿದ್ದಂತೆ ಡಿಕೆಶಿ ಪಾಳೆಯದಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲ, ಮುಂಚೆ ಮಾತೆತ್ತಿದರೆ ಸಿದ್ದರಾಮಯ್ಯ ಭವಿಷ್ಯದ ಸಿಎಂ ಎಂದು ಹೇಳುತ್ತಿದ್ದವರು ಅಂತಹ ಸ್ಲೋಗನ್ನು ಪುನರಾವರ್ತನೆಯಾಗದಂತೆ ನೋಡಿಕೊಂಡರು. ಯಾವಾಗ ಜಮೀರ್ ಅಹ್ಮದ್ ಅವರ ಧ್ವನಿ ಬದಲಾಯಿತೋ? ಇದಾದ ನಂತರ ಡಿಕೆಶಿ ಕೂಡಾ ಜಮೀರ್ ಅಹ್ಮದ್ ಅವರ ಕಿವಿಗೆ ಸಾಂತ್ವನದ ನುಡಿಗಳು ಬೀಳುವಂತೆ ಮಾಡಿದರು. ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿಕೊಂಡಿರುವ ಸುರ್ಜೇವಾಲ ಅವರು ಕೆಲ ದಿನಗಳ ಹಿಂದೆ ಜಮೀರ್ ಅವರನ್ನು ಭೇಟಿ ಮಾಡಿ, ಇವರು ನಮ್ಮ ಹೀರೊ ಎಂದು
ಹೊಗಳಿದರಲ್ಲ? ಈ ಘಟನೆಯ ಹಿಂದಿರುವವರು ಡಿಕೆಶಿ ಎಂಬುದು ಸಿದ್ದರಾಮಯ್ಯ ಗ್ಯಾಂಗಿನ ಅನುಮಾನ. ಇಂತಹ ಅನುಮಾನವೇ ಮೊನ್ನಿನ ಎಪಿಸೋಡಿಗೆ ರೆಕ್ಕೆ ಪುಕ್ಕ ಜೋಡಣೆಯಾಗುವಂತೆ ಮಾಡಿ ಸಿದ್ದರಾಮಯ್ಯ, ಡಿಕೆಶಿ ನಡುವಣ ಕದನಕ್ಕೆ ಮತ್ತಷ್ಟು ತುಪ್ಪ ಸುರಿಯುವಂತೆ ಮಾಡಿದೆ.

ಅಂದ ಹಾಗೆ ದಿನ ಕಳೆದಂತೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಣ ವೈಮನಸು ಬೇರೆ, ಬೇರೆ ತಿರುವು ಪಡೆಯುತ್ತಿರುವುದು ರಹಸ್ಯವಲ್ಲ. ಡಿಸೆಂಬರ್ ಹತ್ತರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಯ ವಿಷಯವನ್ನೇ ತೆಗೆದುಕೊಳ್ಳಿ. ಚುನಾವಣೆಯಲ್ಲಿ ಸ್ಪರ್ಧಿಸ ಬಯಸುವವರು ಕೆಪಿಸಿಸಿ ಕಚೇರಿಗೆ ಹೋಗಿ ಚರ್ಚಿಸಿದ್ದ ಕ್ಕಿಂತ ಸಿದ್ದರಾಮಯ್ಯ ಅವರ ನಿವಾಸಕ್ಕೆ ಹೋಗಿ ಚರ್ಚಿಸಿದ್ದೇ ಹೆಚ್ಚು. ಕಾರಣ? ಕಣಕ್ಕಿಳಿಯಲು ಬಯಸಿದವರು ತಮ್ಮನ್ನು ಭೇಟಿ ಮಾಡುವ ಮುನ್ನ
ಡಿಕೆಶಿ ಯನ್ನು ಭೇಟಿ ಮಾಡಿದರೆ ಅಂತವರಿಗೆ ಸಿದ್ದರಾಮಯ್ಯ ಮನೆಯ ಕಾಂಪೌಂಡಿನೊಳಗೆ ಪ್ರವೇಶವೇ ಇಲ್ಲ.

ಈ ಸ್ಥಿತಿ ಗೊತ್ತಿರುವ ಕಾರಣಕ್ಕೇ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್‌ಗಳಾಗ ಬಯಸಿದವರು ರಿಸ್ಕು ತೆಗೆದುಕೊಳ್ಳಲು ಬಯಸಲಿಲ್ಲ. ಈ ಬೆಳವಣಿಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಗೆ ಅಪಥ್ಯವೆನಿಸಿದ್ದರಲ್ಲಿ ಅಸಹಜವೇನಿಲ್ಲ. ಹೀಗಾಗಿ ಕೊಂಚ ಎಚ್ಚರ ತಪ್ಪಿದರೂ ಈ ಹಿಂದೆ ಪರಮೇಶ್ವರ ಅವರಿಗಾದ ಗತಿಯೇ ತಮಗೂ ಆಗುತ್ತದೆ ಎಂಬ ಎಚ್ಚರದಲ್ಲಿ ಇರುವ ಡಿಕೆಶಿ, ರಾಜ್ಯ ಕಾಂಗ್ರೆಸ್ ನಲ್ಲಿರುವ ಸಿದ್ದರಾಮಯ್ಯ ವಿರೋಧಿ ಪಾಳೆಯ
ಒಂದಾಗಿರುವಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಪಕ್ಷದಲ್ಲಿ ಸಿದ್ದರಾಮಯ್ಯ ವಿರೋಧಿ ಗ್ಯಾಂಗು ಸಕ್ರಿಯವಾಗಿದೆ ಮತ್ತು ಸಿದ್ದರಾಮಯ್ಯ ಅದೇನೇ ವಿರೋಧ
ವ್ಯಕ್ತಪಡಿಸಿದರೂ ಅವರು ರಾಷ್ಟ್ರ ರಾಜಕಾರಣಕ್ಕೆ ಸೂಟಬಲ್ಲು ಅಂತ ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ ಅವರಿಗೆ ಹೇಳುತ್ತಲೇ ಇದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುತ್ತಿರುವ ದ್ದರಾಮಯ್ಯ ಕರ್ನಾಟಕದ ರಾಜಕಾರಣಕ್ಕೆ ಲಿಮಿಟ್ ಆಗಿರುವುದು ಸರಿಯಲ್ಲ, ಅವರು ದಿಲ್ಲಿಯಲ್ಲಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಾಭ ಅಂತ ಹೈಕಮಾಂಡ್ ಕಂಬಗಳಿಗೂ ವಿವರಿಸುತ್ತಲೇ ಇದೆ.

ಇದೇ ಕಾರಣಕ್ಕಾಗಿ ಇತ್ತೀಚೆಗೆ ದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯ ಅವರ ಬಳಿ, ‘ನೀವು ದೆಹಲಿಗೆ ಬರಲು ರೆಡಿ ಇದ್ದೀರಾ?’ ಅಂತ ಸೋನಿಯಾ ಕೇಳಿದರಂತೆ. ಆದರೆ ರಾಷ್ಟ್ರ ರಾಜಕಾರಣದ ಬಗ್ಗೆ ಆಸಕ್ತಿ ತೋರಿಸದ ಸಿದ್ದರಾಮಯ್ಯ, ‘ಕರ್ನಾಟಕದ ಇರುತ್ತೇನೆ ಮೇಡಂ. ೨೦೨೩ ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು, ಮರು ವರ್ಷ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ನೋಡಿಕೊಳ್ಳುವುದು ನನ್ನ ಗುರಿ’ ಎಂದರಂತೆ. ಅದೇನೇ ಇದ್ದರೂ ರಾಜ್ಯ ರಾಜಕಾರಣದಿಂದ ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಪ್ರಮೋಶನ್ ಕೊಡಿಸುವ ವಿಷಯದಲ್ಲಿ ಅವರ ವಿರೋಧಿ ಬಣದ ಆಸಕ್ತಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ.

ಅದು ಡಿಕೆಶಿಯೇ ಇರಬಹುದು, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್ ಇರಬಹುದು. ಒಟ್ಟಿನಲ್ಲಿ ಸಿದ್ದರಾಮಯ್ಯ ವಿರೋಧಿ ಪಾಳೆಯ ಮಾತ್ರ ಒಗ್ಗಟ್ಟಾಗಿದೆ. ಪರಿಣಾಮ ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ವರ್ಸಸ್ ವಿರೋಧಿ ಪಾಳೆಯಗಳು ಸೃಷ್ಟಿಯಾಗಿದೆ. ಇಂತಹ ಹೊತ್ತಿನಲ್ಲಿ ಅಲ್ಪಸಂಖ್ಯಾತ ನಾಯಕ ಎಂದು ತಾವೇ ಹೊತ್ತು ಮೆರೆಸಿದ ಜಮೀರ್ ಅವರನ್ನು ಬಳಸಿಕೊಂಡು ತಮ್ಮ ಇಮೇಜ್ ಗೆ ಹೊಡೆತ ಕೊಡಲು ಡಿಕೆಶಿ ಮತ್ತಿತರರು ಹೊರಟಿದ್ದಾರೆ ಎಂಬ ಅನುಮಾನ ಸಿದ್ದರಾಮಯ್ಯ ಪಾಳೆಯವನ್ನು ಕಾಡತೊಡಗಿದೆ. ಯಾಕೆಂದರೆ ಈಗ ಇಷ್ಟವೋ? ಕಷ್ಟವೋ?ತಾವೇ ಮೇಲೆತ್ತಿ ಹೊತ್ತು ಮೆರೆಸಿದ ಜಮೀರ್ ಅಹ್ಮದ್ ಅವರನ್ನು ಸಾರಾಸಗಟಾಗಿ ದೂರ ಮಾಡಿಕೊಳ್ಳುವುದು ಸಿದ್ದರಾಮಯ್ಯ ಅವರಿಗೆ ಕಷ್ಟ.

ಯಾಕೆಂದರೆ ಜಮೀರ್ ಅಹ್ಮದ್ ಅವರನ್ನು ಮುಂದಿಟ್ಟುಕೊಂಡು ಅಲ್ಪಸಂಖ್ಯಾತರ ಮತ ಬ್ಯಾಂಕ್ ಮುಂದೆ ಸಿದ್ದರಾಮಯ್ಯ ಮಾಡಿದ ಪ್ರದರ್ಶನದಿಂದ ಹಲ ಮುಸ್ಲಿಂ ನಾಯಕರು ಸಿಟ್ಟಾಗಿದ್ದಾರೆ. ಮೈಸೂರಿನ ನರಸಿಂಹರಾಜ ಕ್ಷೇತ್ರದ ತನ್ವೀರ್ ಸೇಠ್ ಇದರಲ್ಲಿ ಮುಖ್ಯರಾದವರು. ಎಷ್ಟೇ ಆದರೂ ಅವರು ಟೈಗರ್ ಅಜೀಜ್ ಸೇಠ್ ಅವರ ಪುತ್ರ. ರಾಜಕೀಯವಾಗಿ ಯಾರಿಗೂ ತಲೆಬಾಗದ ತನ್ವೀರ್ ಸೇಠ್ ಮುಸ್ಲಿಂ ನಾಯಕರ ಪೈಕಿ ಸೆನ್ಸಿಟಿವ್ ಆಗಿರುವವರು. ಸಿದ್ದರಾಮಯ್ಯ ಅವರ
ಕ್ಯಾಂಪಿನಲ್ಲಿದ್ದರೆ ಅವರ ಆದೇಶವನ್ನು ಪಾಲಿಸಬೇಕಷ್ಟೇ ಎಂಬುದು ಗೊತ್ತಿರುವುದರಿಂದ ತನ್ವೀರ್ ಸೇಠ್ ಆ ಕ್ಯಾಂಪಿನಿಂದ ದೂರವೇ ಇದ್ದಾರೆ. ಹೀಗೆ ದೂರವೇ ನಿಂತ ತನ್ವೀರ್ ಸೇಠ್ ಅವರನ್ನು ಒಪ್ಪಲು ಸಿದ್ದರಾಮಯ್ಯ ಅವರು ತಯಾರಿಲ್ಲ.

ಮೈಸೂರು ಪಾಳೆಯಪಟ್ಟಿನಲ್ಲಿ ತಮ್ಮ ಇಶಾರೆಯಂತೆ ನಡೆಯದ ಯಾರೂ ಅವರಿಗೆ ಬೇಕಾಗಿಲ್ಲ. ಇದೇ ಕಾರಣಕ್ಕಾಗಿ ತನ್ವೀರ್ ಸೇಠ್ ಅವರು ಸಿದ್ದರಾಮಯ್ಯ ಅವರ ವಿರುದ್ಧ ತಿರುಗಿ ಬಿದ್ದು ಹಲ ಕಾಲವೇ ಆಗಿ ಹೋಗಿದೆ. ಮೈಸೂರು ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಹಿಂದೊಮ್ಮೆ ಅವರು ಸಿದ್ದರಾಮಯ್ಯ ಅವರಿಗೇ ಟಕ್ಕರ್ ಕೊಟ್ಟು ಇರುಸುಮುರುಸುಂಟು ಮಾಡಿದ್ದರು.

ಅಂತಹ ತನ್ವೀರ್ ಸೇಠ್ ಈಗ ಡಿಕೆಶಿ ಪಾಳೆಯದಲ್ಲಿದ್ದಾರೆ. ಹೀಗಾಗಿ ಅವರು ರಾಜಕೀಯವಾಗಿ ಸಿದ್ದರಾಮಯ್ಯ ಅವರಿಂದ ಬಹುದೂರ. ಇನ್ನು ಹಲವು ಕಾಲ ಸಿದ್ದರಾಮಯ್ಯ ಅವರ ಖಾಯಂ ಮೈಕ್ ಆಗಿದ್ದ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಯಾವತ್ತೋ ಸಿದ್ದರಾಮಯ್ಯ ಅವರಿಂದ ದೂರವಾಗಿದ್ದಾರೆ ಮತ್ತು  ದೇವೇಗೌಡರ ಕ್ಯಾಂಪಿನ ಹೊಸ್ತಿಲಲ್ಲಿದ್ದಾರೆ. ಇನ್ನು ಕಾಂಗ್ರೆಸ್ ಪಾಳೆಯದ ಸಜ್ಜನ ಮುಸ್ಲಿಂ ನಾಯಕ ಯು.ಟಿ.ಖಾದರ್ ಅವರನ್ನು ಸೂಕ್ತ ಕಾಲದಲ್ಲಿ ಮುಸ್ಲಿಂ
ಲೀಡರು ಎಂದು ಪ್ರತಿಬಿಂಬಿಸುವ ಕೆಲಸ ಸಿದ್ದರಾಮಯ್ಯ ಅವರಿಂದಾಗಲಿಲ್ಲ.

ರೋಷನ್ ಬೇಗ್ ಅವರಂತಹ ನಾಯಕ ಕೂಡಾ ಸಿದ್ದರಾಮಯ್ಯ ಹೊಡೆತಕ್ಕೆ ಸಿಕ್ಕು ಮೂಲೆಗುಂಪಾಗಿ, ಅಲ್ಲಿಂದಲೇ ಇನ್ನೆಲ್ಲಿಗೋ ಹೋಗಿ ಅಜ್ಞಾತವಾಸ ಮಾಡುತ್ತಿzರೆ. ಹೀಗೆ ತಾವೇ ಕೈಯ್ಯಾರೆ ಬಹುತೇಕ ಮುಸ್ಲಿಂ ನಾಯಕರನ್ನು ಸೈಡ್ ಲೈನಿಗೆ ಸರಿಸಿ, ಜಮೀರ್ ಅಹ್ಮದ್ ಅವರನ್ನು ಮೆರವಣಿಗೆಯಲ್ಲಿ ನಡೆಸಿಕೊಂಡು ಹೋದ ಸಿದ್ದರಾಮಯ್ಯ ಈಗ ಸಂಪೂರ್ಣವಾಗಿ ಅವರನ್ನು ದೂರವಿಡುವುದು ಕಷ್ಟ ಎಂಬ ಸ್ಥಿತಿಗೆ ತಲುಪಿzರೆ. ಹಾಗೇನಾದರೂ ದೂರವಿರಿಸಿದರೆ ತಮ್ಮ ವಿರೋಽ ಪಾಳೆಯದ ಸೈಜು ದೊಡ್ಡದಾಗಬಹುದು ಎಂಬುದು ಅವರ ಲೆಕ್ಕಾಚಾರ. ಹೀಗಾಗಿ ಅವರ ಬಣ ಡಿಕೆಶಿ ಏಟಿಗೆ ಪ್ರತಿಯೇಟು ನೀಡಲು ಸಜ್ಜಾಗುತ್ತಿದೆ.
ಅದೇ ಸದ್ಯದ ವಿಶೇಷ.