ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

GST Collection: ಫೆಬ್ರವರಿಯ ಜಿಎಸ್‌ಟಿ ಕಲೆಕ್ಷನ್‌ ಶೇ. 9.1ರಷ್ಟು ಏರಿಕೆ

ಫೆಬ್ರವರಿಯಲ್ಲಿ ದೇಶದ ಸರಕು ಮತ್ತು ಸೇವಾ ತೆರಿಗೆ ಶೇ. 9.1ರಷ್ಟು ಏರಿಕೆಯಾಗಿ 1.84 ಲಕ್ಷ ಕೋಟಿ ರೂ.ಗೆ ತಲುಪಿದೆ. ದೇಶೀಯ ಮತ್ತು ಆಮದು ಲೆಕ್ಕಾಚಾರವನ್ನು ತೆಗೆದುಕೊಂಡರೆ ಒಟ್ಟಾರೆ ಜಿಎಸ್‌ಟಿ ಆದಾಯವು ಶೇ. 9.1ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ 1,68,337 ಕೋಟಿ ರೂ. ಸಂಗ್ರಹವಾಗಿದ್ದರೆ, 2025ರ ಫೆಬ್ರವರಿಯಲ್ಲಿ ಇದು 1,83,646 ಕೋಟಿ ರೂ.ಗೆ ಹೆಚ್ಚಾಗಿದೆ.

ಫೆಬ್ರವರಿಯ ಜಿಎಸ್‌ಟಿ ಕಲೆಕ್ಷನ್‌ ಶೇ. 9.1ರಷ್ಟು ಏರಿಕೆ

ಸಾಂದರ್ಭಿಕ ಚಿತ್ರ.

Profile Ramesh B Mar 1, 2025 6:35 PM

ಹೊಸದಿಲ್ಲಿ: ಫೆಬ್ರವರಿಯಲ್ಲಿ ದೇಶದ ಸರಕು ಮತ್ತು ಸೇವಾ ತೆರಿಗೆ (Goods and Services tax (GST) ಶೇ. 9.1ರಷ್ಟು ಏರಿಕೆಯಾಗಿ 1.84 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ (GST Collection). ದೇಶೀಯ ಜಿಎಸ್‌ಟಿ ಆದಾಯವು ಸರಿಸುಮಾರು ಶೇ. 10.2ರಷ್ಟು ಏರಿಕೆಯಾಗಿದ್ದು, 1,28,760 ಕೋಟಿ ರೂ.ಗಳಿಂದ 1,41,945 ಕೋಟಿ ರೂ.ಗೆ ಏರಿದೆ. ಜತೆಗೆ ಆಮದು ಆದಾಯವು ಶೇ. 5.4ರಷ್ಟು ಹೆಚ್ಚಾಗಿದೆ. ಇದು ಗಡಿಯಾಚೆಗಿನ ವ್ಯಾಪಾರ ತೆರಿಗೆಯಲ್ಲಿನ ಸ್ಥಿರ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ದೇಶೀಯ ಮತ್ತು ಆಮದು ಲೆಕ್ಕಾಚಾರವನ್ನು ತೆಗೆದುಕೊಂಡರೆ ಒಟ್ಟಾರೆ ಜಿಎಸ್‌ಟಿ ಆದಾಯವು ಶೇ. 9.1ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ 1,68,337 ಕೋಟಿ ರೂ. ಸಂಗ್ರಹವಾಗಿದ್ದರೆ, 2025ರ ಫೆಬ್ರವರಿಯಲ್ಲಿ ಇದು 1,83,646 ಕೋಟಿ ರೂ.ಗೆ ಹೆಚ್ಚಾಗಿದೆ. ಮರುಪಾವತಿಗಳನ್ನು ಲೆಕ್ಕಹಾಕಿದ ನಂತರ ಒಟ್ಟು ಜಿಎಸ್‌ಟಿ ಆದಾಯವು ಶೇ. 8.1ರಷ್ಟು ಹೆಚ್ಚಾಗಿ 1.63 ಲಕ್ಷ ಕೋಟಿ ರೂ.ಗೆ ತಲುಪಿದೆ.



ಕಳೆದ ತಿಂಗಳಲ್ಲಿ ಕೇಂದ್ರ ಜಿಎಸ್‌ಟಿ 35,204 ಕೋಟಿ ರೂ., ರಾಜ್ಯ ಜಿಎಸ್‌ಟಿ 43,704 ಕೋಟಿ ರೂ., ಸಮಗ್ರ ಜಿಎಸ್‌ಟಿ 90,870 ಕೋಟಿ ರೂ., ಪರಿಹಾರ ಸೆಸ್ 13,868 ಕೋಟಿ ರೂ.ಗೆ ತಲುಪಿದೆ. ಫೆಬ್ರವರಿಯಲ್ಲಿ ನೀಡಲಾದ ಒಟ್ಟು ಮರುಪಾವತಿ 20,889 ಕೋಟಿ ರೂ.ಗಳಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 17.3ರಷ್ಟು ಹೆಚ್ಚಾಗಿದೆ.

ರಾಜ್ಯವಾರು ಸಂಗ್ರಹ ಹೇಗಿದೆ?

ಹಲವು ರಾಜ್ಯಗಳು ಮತ್ತು ಕೆಲವು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಗಮನಾರ್ಹ ಏರಿಕೆ ಕಂಡು ಬಂದಿದೆ. ಹರಿಯಾಣದ ಸಂಗ್ರಹವು ಶೇ. 20ರಷ್ಟು ಏರಿಕೆಯಾಗಿದ್ದರೆ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಶೇ. 14ರಷ್ಟು ಅಧಿಕವಾಗಿದೆ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 2ರಷ್ಟು ಕುಸಿತವಾಗಿದ್ದರೆ, ಲಡಾಖ್ ಮತ್ತು ಲಕ್ಷದ್ವೀಪದಲ್ಲಿಯೂ ಇಳಿಕೆಯಾಗಿದೆ. ಕೇಂದ್ರ ಬಜೆಟ್‌ನಲ್ಲಿ ಸರ್ಕಾರವು ಈ ವರ್ಷದ ಜಿಎಸ್‌ಟಿ ಆದಾಯದಲ್ಲಿ ಶೇ. 11ರಷ್ಟು ಹೆಚ್ಚಳವನ್ನು ಅಂದಾಜಿಸಿದೆ. ಕೇಂದ್ರ ಜಿಎಸ್‌ಟಿ ಮತ್ತು ಪರಿಹಾರ ಸೆಸ್ ಸೇರಿದಂತೆ 11.78 ಲಕ್ಷ ಕೋಟಿ ರೂ.ಗೆ ತಲುಪುವ ಸಾಧ್ಯತೆ ಇದೆ ಎಂದು ಹೇಳಿದೆ.

ಈ ಸುದ್ದಿಯನ್ನೂ ಓದಿ: GST Council Meeting : ಜಿಎಸ್‌ಟಿ ಕೌನ್ಸಿಲ್‌ ಸಭೆ; ಯಾವೆಲ್ಲ ವಸ್ತುಗಳು ದುಬಾರಿ, ಯಾವುದು ಅಗ್ಗ ?

ಏನಿದು ಜಿಎಸ್‌ಟಿ?

ಉತ್ಪಾದಕ ವಸ್ತುಗಳ ಎಲ್ಲ ತೆರಿಗೆಯನ್ನು ಒಂದೇ ವ್ಯವಸ್ಥೆಯಡಿ ತರುವ ಪದ್ಧತಿಯೇ ಜಿಎಸ್‌ಟಿ. ಜಿಎಸ್‌ಟಿ ಕಾಯ್ದೆಯನ್ನು 2017ರ ಮಾ. 29ರಂದು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು ಮತ್ತು 2017ರ ಜು. 1ರಂದು ಜಾರಿಗೆ ಬಂತು. ಜಿಎಸ್‌ಟಿ ಮಸೂದೆ ಬಗ್ಗೆ ಮೊದಲು ಧ್ವನಿ ಎತ್ತಿದ್ದು 2000ನೇ ಇಸವಿಯಲ್ಲಿ ಯುಪಿಎ ಸರ್ಕಾರ. ಆದರೆ ಆಗ ಮಸೂದೆ ಅಂಗೀಕಾರವಾಗಿರಲಿಲ್ಲ. ಅದಾಗಿ 17 ವರ್ಷಗಳ ಬಳಿಕ ಎನ್‌ಡಿಎ ಸರ್ಕಾರದಲ್ಲಿ ಮಸೂದೆಗೆ ಅಂಗೀಕಾರ ಲಭಿಸಿತ್ತು. ತೆರಿಗೆ ವಂಚನೆಯ ತಡೆ, ವ್ಯವಹಾರ ಸುಗಮಗೊಳಿಸುವುದು, ವ್ಯವಸ್ಥೆಯನ್ನು ಸುಧಾರಿಸುವುದು, ಸ್ಪರ್ಧಾತ್ಮಕ ಬೆಲೆಯನ್ನು ಉತ್ತೇಜಿಸುವುದು ಮುಂತಾದ ಗುರಿ ಜಿಎಸ್‌ಟಿ ಜಾರಿಯ ಹಿಂದಿದೆ.