PM Dhan-Dhaanya Krishi Yojana: ಕೋಟ್ಯಂತರ ರೈತರಿಗೆ ನೆರವಾಗುವ ಪಿಎಂ ಧನ-ಧಾನ್ಯ ಕೃಷಿ ಯೋಜನೆಗೆ ಅನುದಾನ ನೀಡಲು ಸಂಪುಟ ಒಪ್ಪಿಗೆ; ಕೃಷಿಕರಿಗೆ ಹೇಗೆ ಪ್ರಯೋಜನ?
Narendra Modi: ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಗುರಿ ಹೊಂದಿರುವ ಧನ್ ಧಾನ್ಯ ಕೃಷಿ ಯೋಜನೆಗೆ ಅನುದಾನ ಬಿಡುಗಡೆ ಮಾಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಈ ವರ್ಷ 24,000 ಕೋಟಿ ರೂ. ವೆಚ್ಚ ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಾಗಿದೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಈ ಸಲದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಕೃಷಿ ಕ್ಷೇತ್ರಕ್ಕೆ ಉತ್ತೇಜನ ಕೊಡಬಲ್ಲ ಧನ್ ಧಾನ್ಯ ಕೃಷಿ ಯೋಜನೆಗೆ (PM Dhan-Dhaanya Krishi Yojana) ಅನುದಾನ ಬಿಡುಗಡೆ ಮಾಡಲು ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಈ ವರ್ಷ 24,000 ಕೋಟಿ ರೂ. ವೆಚ್ಚ ಮಾಡಲಿದೆ. ಈ ರೀತಿ 6 ವರ್ಷ ಯೋಜನೆಗೆ ಪ್ರತ್ಯೇಕವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಎಂದು ಮೂಲಗಳು ತಿಳಿಸಿವೆ. ಬುಧವಾರ (ಜು. 16) ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಾಗಿದೆ.
ಈ ಯೋಜನೆ ದೇಶದ 100 ಜಿಲ್ಲೆಗಳಲ್ಲಿ ಜಾರಿಗೆ ಬರಲಿದ್ದು, ಒಟ್ಟು 1.7 ಕೋಟಿ ರೈತರಿಗೆ ನೆರವಾಗುವ ನಿರೀಕ್ಷೆ ಇದೆ. ಈ ಯೋಜನೆಯು ನೀತಿ ಆಯೋಗದ ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮದಿಂದ ಸ್ಫೂರ್ತಿ ಪಡೆದಿದೆ. ಇದು ಕೃಷಿ ಮತ್ತು ಸಂಬಂಧಿತ ವಲಯಗಳನ್ನು ಮಾತ್ರ ಕೇಂದ್ರೀಕರಿಸುವ ಮೊದಲ ಯೋಜನೆ ಎನಿಸಿಕೊಂಡಿದೆ.
#Cabinet approves the Prime Minister Dhan-Dhaanya Krishi Yojana.
— Ministry of Information and Broadcasting (@MIB_India) July 16, 2025
The objective of the scheme is to ensure the convergence of 36 schemes from 11 ministries across 100 selected districts, at least one from each state, that are lagging behind other districts in three key… pic.twitter.com/HCp0myVDc0
ಈ ಸುದ್ದಿಯನ್ನೂ ಓದಿ: Pahalgam terror attack: ಪಹಲ್ಗಾಮ್ ದಾಳಿ ಬಗ್ಗೆ ಮತ್ತಷ್ಟು ಆಘಾತಕಾರಿ ಸಂಗತಿ ಬಯಲಿಗೆ
ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, ವೈವಿಧ್ಯ ಬೆಳೆಗೆ ಪ್ರೋತ್ಸಾಹ ನೀಡುವುದು, ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆಯನ್ನು ಹೆಚ್ಚಿಸುವುದು, ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಧಾನ್ಯಗಳ ಸಂಗ್ರಹಣೆಯನ್ನು ಹೆಚ್ಚಿಸುವುದು, ನೀರಾವರಿ ಸೌಲಭ್ಯಗಳನ್ನು ಸುಧಾರಿಸುವುದು ಹಾಗೂ ದೀರ್ಘಾವಧಿಯ ಮತ್ತು ಅಲ್ಪಾವಧಿಯ ಸಾಲದ ಲಭ್ಯತೆಯನ್ನು ಸುಗಮಗೊಳಿಸುವುದು-ಇವೇ ಈ ಯೋಜನೆ ಗುರಿ.
11 ಇಲಾಖೆಗಳಲ್ಲಿ ಅಸ್ತಿತ್ವದಲ್ಲಿರುವ 36 ಯೋಜನೆಗಳು, ಇತರ ರಾಜ್ಯ ಯೋಜನೆಗಳು ಮತ್ತು ಖಾಸಗಿ ವಲಯಗಳ ಸ್ಥಳೀಯ ಪಾಲುದಾರಿಕೆಗಳ ಮೂಲಕ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಇದಕ್ಕಾಗಿ ಕೃಷಿಯಲ್ಲಿ ಹಿನ್ನಡೆ ಹೊಂದಿರುವ 100 ಜಿಲ್ಲೆಗಳನ್ನು ಆಯ್ದುಕೊಳ್ಳಲಾಗುತ್ತದೆ.
ಮಾನದಂಡಗಳೇನು?
ಕಡಿಮೆ ಕೃಷಿ ಉತ್ಪಾದನೆ, ಕಡಿಮೆ ಬೆಳೆ ಪ್ರಮಾಣ ಮತ್ತು ಕಡಿಮೆ ಸಾಲ ವಿತರಣೆಯ ಮೂರು ಪ್ರಮುಖ ಮಾನದಂಡಗಳ ಆಧಾರದ ಮೇಲೆ 100 ಜಿಲ್ಲೆಗಳನ್ನು ಗುರುತಿಸಲಾಗುತ್ತದೆ. ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿರುವ ಜಿಲ್ಲೆಗಳ ನಿವ್ವಳ ಬೆಳೆ ಪ್ರದೇಶದ ಆಧಾರದಲ್ಲಿ ಸ್ಥಳವನ್ನು ನಿರ್ಧರಿಸಲಾಗುತ್ತದೆ. ಇದುವರೆಗೆ ಆ ಜಿಲ್ಲೆಗಳನ್ನು ಆಯ್ಕೆ ಮಾಡಿಲ್ಲ. ಅದಾಗ್ಯೂ, ಪ್ರತಿ ರಾಜ್ಯದಿಂದ ಕನಿಷ್ಠ 1 ಜಿಲ್ಲೆಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.ಹೀಗಾಗಿ ಕರ್ನಾಟಕದ ಜಿಲ್ಲೆಯೂ ಈ ಯೋಜನೆಗೆ ಆಯ್ಕೆಯಾಗುವ ಸಾಧ್ಯತೆ ಇದೆ.
ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುತ್ತದೆ. ಜಿಲ್ಲಾ ಧನ್ ಧಾನ್ಯ ಸಮಿತಿಯು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಯೋಜನೆಯನ್ನು ಅಂತಿಮಗೊಳಿಸುತ್ತದೆ. ಇದರಲ್ಲಿ ಪ್ರಗತಿಪರ ರೈತರು ಸಹ ಸದಸ್ಯರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಯು ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೆ, ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಮೌಲ್ಯವರ್ಧನೆಗೆ ನೆರವಗಲಿದೆ. ಸ್ಥಳೀಯ ಜೀವನೋಪಾಯ ಸೃಷ್ಟಿಗೆ ಕಾರಣವಾಗುತ್ತದೆ ಮತ್ತು ಈ ಮೂಲಕ ಸ್ವಾವಲಂಬನೆಯನ್ನು ಸಾಧಿಸದಂತಾಗುತ್ತದೆ ಎಂದು ಸರ್ಕಾರ ಹೇಳಿದೆ.
ಕೃಷಿಕರಿಗೇನು ಪ್ರಯೋಜನ?
ಆಯ್ದ 100 ಜಿಲ್ಲೆಗಳಲ್ಲಿ ಆಧುನಿಕ ಮತ್ತು ಸುಸ್ಥಿರ ಕೃಷಿ ಪದ್ಧತಿಯನ್ನು ಅಳವಡಿಸಲು ಉತ್ತೇಜಿಸಲಾಗುತ್ತದೆ. ಕೃಷಿಕರಿಗೆ ಸುಲಭ ಸಾಲ ಸೌಲಭ್ಯ ವ್ಯವಸ್ಥೆ ಮಾಡಲಾಗುತ್ತದೆ. ಬೆಳೆಗಳ ವೈವಿಧ್ಯತೆ ಹೆಚ್ಚಿಸುವ, ಸುಸ್ಥಿರ ಕೃಷಿ ಪದ್ಧತಿಗೆ ಉತ್ತೇಜಿಸುವ ಕೆಲಸ ಮಾಡಲಾಗುತ್ತದೆ. ಮಾತ್ರವಲ್ಲ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಉಗ್ರಾಣಗಳನ್ನು ಸ್ಥಾಪಿಸಲಾಗುತ್ತದೆ. ನೀರಾವರಿ ಸೌಕರ್ಯವನ್ನೂ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ.