ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

D‌r Shashikumar L Column: ಡಿಎನ್‌ಎ ಬೆರಳಚ್ಚು ಎಂಬ ವಿಶಿಷ್ಟ ವರದಾನ

ಡಿಎನ್‌ಎ ಬೆರಳಚ್ಚು ಅಥವಾ ಡಿಎನ್‌ಎ ಫಿಂಗರ್ ಪ್ರಿಂಟಿಂಗ್ ಎಂಬುದು, ವ್ಯಕ್ತಿಯ ‘ಡಿಎನ್‌ಎ’ಯ ವಿಶಿಷ್ಟ ಮಾದರಿಯನ್ನು ಗುರುತಿಸುವ ಒಂದು ತಂತ್ರಜ್ಞಾನವಾಗಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ‘ಡಿಎನ್‌ಎ’ಯ ಭಾಗಗಳನ್ನು ವಿಶ್ಲೇಷಿಸುತ್ತದೆ. ಪ್ರತಿಯೊಬ್ಬರ ‘ಡಿಎನ್ ಎ’ಯ ಒಳಗೆ ಜೀನ್‌ ಗಳ ನಡುವೆ ಪುನರಾವರ್ತಿತ ಸರಣಿಗಳು ಇರುತ್ತವೆ.

ಡಿಎನ್‌ಎ ಬೆರಳಚ್ಚು ಎಂಬ ವಿಶಿಷ್ಟ ವರದಾನ

Profile Ashok Nayak Jul 16, 2025 8:33 AM

ವಿಧಿಕೌಶಲ

ಡಾ.ಶಶಿಕುಮಾರ್‌ ಎಲ್.

ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲು ಡಿಎನ್‌ಎ ಬೆರಳಚ್ಚು ಪರೀಕ್ಷೆಯ ಸಹಾಯ ಪಡೆಯುವುದಲ್ಲದೆ, ಆಸ್ಪತ್ರೆಯಲ್ಲಿ ಮಕ್ಕಳನ್ನು ಬದಲಾಯಿಸಿರುವುದನ್ನು ಕಂಡು ಹಿಡಿಯುವುದಕ್ಕೆ, ಪಿತೃತ್ವ/ಮಾತೃತ್ವ ಪರೀಕ್ಷೆಗೆ, ಸಾಮೂಹಿಕ ಅತ್ಯಾಚಾರ, ಕೊಲೆ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳದಂಥ ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಕಂಡುಹಿಡಿಯಲು ಈ ವಿಧಾನವನ್ನು ಅವಲಂಬಿಸಲಾಗುತ್ತದೆ.

ಅಹಮದಾಬಾದ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಏರ್ ಇಂಡಿಯಾ ವಿಮಾನದ ಅಪಘಾತದಲ್ಲಿ 260 ಮಂದಿ ಅಸುನೀಗಿದ ವಿಷಯ ಎಲ್ಲರಿಗೂ ಗೊತ್ತಿರುವಂಥದ್ದೇ. ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿದ್ದ ಮೃತದೇಹಗಳನ್ನು ಗುರುತಿಸಿ ಸೂಕ್ತ ವಾರಸುದಾರರಿಗೆ ತಲುಪಿಸುವುದಕ್ಕೆ ಸಹಾಯಕವಾಗಿದ್ದು ವಿಧಿವಿಜ್ಞಾನ ಪ್ರಯೋಗಾಲಯವು ನಡೆಸಿದ ಡಿಎನ್‌ಎ ಬೆರಳಚ್ಚು ಪರೀಕ್ಷೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ವಿಧಿವಿಜ್ಞಾನ ಎಂಬುದು ಕಾನೂನು ವ್ಯವಸ್ಥೆಯಲ್ಲಿ ಬಳಸಲಾಗುವ ವಿಜ್ಞಾನದ ಅನ್ವಯಿಕ ಶಾಖೆ ಯಾಗಿದೆ. ಆಧುನಿಕ ವಿಧಿವಿಜ್ಞಾನದ ಪುರಾವೆಗಳ ಒಂದು ಉದಾಹರಣೆ ಎಂದರೆ ಡಿಎನ್‌ಎ ಬೆರಳಚ್ಚು ಬಳಕೆ. ‘ಡಿಆಕ್ಸಿರೈಬೋ ನ್ಯೂಕ್ಲಿಯಿಕ್ ಆಸಿಡ್’ ಎಂಬುದರ ಸಂಕ್ಷಿಪ್ತ ರೂಪವೇ ‘ಡಿಎನ್‌ಎ’. ಜೀವಿಗಳ ವರ್ಣತಂತುಗಳಲ್ಲಿರುವ ಅತ್ಯಂತ ಸಂಕೀರ್ಣವಾದಂಥ, ಅನುವಂಶೀಯ ರಾಸಾಯನಿಕ ಗುಣಗಳನ್ನು ಹೊಂದಿರುವ ಅಣು ಇದು. ವಂಶವಾಹಿಯ ಮುಖ್ಯಭಾಗವಾಗಿರುವ ‘ಡಿಎನ್‌ಎ’ಯು ಏಣಿಯ ರೂಪದಲ್ಲಿ ಜೀವಕೋಶದ ಕೇಂದ್ರ ಭಾಗದಲ್ಲಿರುತ್ತದೆ.

ವ್ಯಕ್ತಿ ಅಥವಾ ಜೀವಿಗಳ ವಂಶಾವಳಿಯ ಮಾಹಿತಿಗಳನ್ನು ಇದು ತಲೆಮಾರಿನಿಂದ ತಲೆಮಾರಿಗೆ ಕೊಂಡೊಯ್ಯುತ್ತದೆ. ಡಿಎನ್‌ಎ ಮೂಲಗಳಲ್ಲಿ ವೀರ್ಯಾಣು, ರಕ್ತ, ಕೂದಲು, ಜೊಲ್ಲು, ಮೂತ್ರ, ಚರ್ಮ, ಮೂಳೆ ಮತ್ತು ಅಂಗಾಂಶಗಳು ಒಳಗೊಂಡಿವೆ.

ಇದನ್ನೂ ಓದಿ: Suresh Balachandran Column: ಉತ್ತರ ಇಲ್ಲದಾದಾಗ ವಿಷಯಾಂತರದ ಕಸರತ್ತು

ಡಿಎನ್‌ಎ ಬೆರಳಚ್ಚು ಅಥವಾ ಡಿಎನ್‌ಎ ಫಿಂಗರ್ ಪ್ರಿಂಟಿಂಗ್ ಎಂಬುದು, ವ್ಯಕ್ತಿಯ ‘ಡಿಎನ್‌ಎ’ಯ ವಿಶಿಷ್ಟ ಮಾದರಿಯನ್ನು ಗುರುತಿಸುವ ಒಂದು ತಂತ್ರಜ್ಞಾನವಾಗಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ‘ಡಿಎನ್‌ಎ’ಯ ಭಾಗಗಳನ್ನು ವಿಶ್ಲೇಷಿಸುತ್ತದೆ. ಪ್ರತಿಯೊಬ್ಬರ ‘ಡಿಎನ್ ಎ’ಯ ಒಳಗೆ ಜೀನ್‌ಗಳ ನಡುವೆ ಪುನರಾವರ್ತಿತ ಸರಣಿಗಳು ಇರುತ್ತವೆ.

ಇದನ್ನು Tandem repeats (ತಾಂಡೆಂ ಪುನರಾವರ್ತನೆಗಳು) ಎನ್ನುತ್ತಾರೆ. ಈ ಪುನರಾವರ್ತನೆಯ ಅನುಕ್ರಮವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಡಿಎನ್‌ಎ ಬೆರಳಚ್ಚು ತಂತ್ರಜ್ಞಾನವನ್ನು ಬಳಸಿಕೊಂಡು, ಪ್ರತಿ ವ್ಯಕ್ತಿಗೆ ಸಂಬಂಧಿಸಿದ ಒಂದು ಅನನ್ಯ ಪುನರಾವರ್ತನೆಯ ಮಾದರಿಯನ್ನು ನಾವು ಕಂಡುಕೊಳ್ಳಬಹುದು. ರಕ್ತಸಂಬಂಧಿಕರ ನಡುವಿನ ಡಿಎನ್‌ಎ ಅನುಕ್ರಮಗಳು, ಪರಸ್ಪರ ಸಂಬಂಧವಿಲ್ಲದ ವ್ಯಕ್ತಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೋಲುತ್ತವೆ.

ಇದು ಹಲವಾರು ಪ್ರಕರಣಗಳಲ್ಲಿ ವ್ಯಕ್ತಿಯ ಗುರುತನ್ನು ಖಚಿತಪಡಿಸಲು ಮತ್ತು ರಕ್ತಸಂಬಂಧ ಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಡಿಎನ್‌ಎ ಬೆರಳಚ್ಚು ವಿಧಾನದಲ್ಲಿ ವ್ಯಕ್ತಿಯಿಂದ ರಕ್ತ, ಕೂದಲು, ಲಾಲಾರಸ ಅಥವಾ ಇತರ ಅಂಗಾಂಶದ ಮಾದರಿ ಗಳನ್ನು ಮೊದಲು ಸಂಗ್ರಹಿಸಲಾಗುತ್ತದೆ. ನಂತರ ಈ ಮಾದರಿಗಳಿಂದ ‘ಡಿಎನ್‌ಎ’ ಅನ್ನು ಹೊರ ತೆಗೆಯಲಾಗುತ್ತದೆ.

62 ಋಋ

ಹೀಗೆ ಹೊರತೆಗೆದ ಡಿಎನ್‌ಎ ಅನ್ನು ನಿರ್ದಿಷ್ಟ ಕಿಣ್ವಗಳನ್ನು ಬಳಸಿ ಸಣ್ಣ ತುಣುಕುಗಳಾಗಿ ವಿಭಜಿಸಲಾಗುತ್ತದೆ. ಈ ತುಣುಕಗಳನ್ನು ‘ಜೆಲ್ ಎಲೆಕ್ಟ್ರೋ ಫೋರೋಸಿಸ್’ ಎಂಬ ವಿಧಾನವನ್ನು ಬಳಸಿ, ಗಾತ್ರದ ಆಧಾರದ ಮೇಲೆ ಪ್ರತ್ಯೇಕಿಸಲಾಗುತ್ತದೆ. ಪ್ರತ್ಯೇಕಗೊಂಡ ಡಿಎನ್‌ಎ ತುಣುಕುಗಳನ್ನು ‘ಪಾಲಿಮರೇಸ್ ಚೈನ್ ರಿಯಾಕ್ಷನ್’ (ಪಿಸಿಆರ್) ತಂತ್ರಜ್ಞಾನವನ್ನು ಬಳಸಿ ವಧಿಸಲಾಗುತ್ತದೆ.

ಇದರಿಂದಾಗಿ ಹೆಚ್ಚು ಡಿಎನ್‌ಎ ಸಿಗುತ್ತದೆ. ವರ್ಧಿತ ಡಿಎನ್‌ಎ ಮಾದರಿಗಳನ್ನು ಎಕ್ಸ್‌ರೇ ಫಿಲಂ ಅಥವಾ ಇತರ ವಿಧಾನಗಳನ್ನು ಬಳಸಿ ದೃಶ್ಯೀಕರಿಸಲಾಗುತ್ತದೆ. ಈ ಮೂಲಕ ವಿಶಿಷ್ಟ ಮಾದರಿ ಯನ್ನು ಪಡೆಯಲಾಗುತ್ತದೆ. ಪಡೆದ ಮಾದರಿಯನ್ನು ಹೋಲಿಸಿ ನೋಡಿ ವ್ಯಕ್ತಿಯ ಗುರುತನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲು ಡಿಎನ್‌ಎ ಬೆರಳಚ್ಚು ಪರೀಕ್ಷೆಯ ಸಹಾಯ ಪಡೆಯುವು ದಲ್ಲದೆ, ಆಸ್ಪತ್ರೆಯಲ್ಲಿ ಮಕ್ಕಳನ್ನು ಬದಲಾಯಿಸಿರುವುದನ್ನು ಕಂಡುಹಿಡಿಯುವುದಕ್ಕೆ, ಪಿತೃತ್ವ/ ಮಾತೃತ್ವ ಪರೀಕ್ಷೆಗೆ ಕೂಡ ಈ ವಿಧಾನವನ್ನು ನೆಚ್ಚಲಾಗುತ್ತದೆ. ಮಾತ್ರವಲ್ಲದೆ, ಸಾಮೂಹಿಕ ಅತ್ಯಾಚಾರ, ಅಪಹರಣ, ಕೊಲೆ, ದರೋಡೆ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳದಂಥ ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಕಂಡುಹಿಡಿಯಲು, ಪ್ರವಾಹ, ಭೂಕಂಪದಂಥ ಪ್ರಕೃತಿ ವಿಕೋಪಗಳು ಘಟಿಸಿದ ಸಂದರ್ಭದಲ್ಲಿ ಸಂತ್ರಸ್ತರ ಪತ್ತೆಗೂ ಈ ವಿಧಾನವನ್ನು ಅವಲಂಬಿಸ ಲಾಗುತ್ತದೆ.

ಪ್ರಾಣಿಗಳ ಬೇಟೆ ಮತ್ತು ಕಳ್ಳಸಾಗಣೆಯನ್ನು ಪತ್ತೆ ಹಚ್ಚುವ ಸಂದರ್ಭದಲ್ಲೂ ಈ ಪರೀಕ್ಷಾ ವಿಧಾನದ ಬಳಕೆಯಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಜ್ಞಾನಭಾರತಿ ಸಾಮೂಹಿಕ ಅತ್ಯಾಚಾರ ಪ್ರಕರಣ, ಭಾಸ್ಕರ್‌ಶೆಟ್ಟಿ ಕೊಲೆ ಪ್ರಕರಣ, ಮೈಸೂರಿನಲ್ಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸೇರಿದಂತೆ ಹಲವು ಅತಿಸೂಕ್ಷ್ಮ ಪ್ರಕರಣಗಳಲ್ಲಿ ಅಪರಾಧಿಗಳ ಹೆಡೆಮುರಿ ಕಟ್ಟುವ ನಿಟ್ಟಿನಲ್ಲಿ ಡಿಎನ್‌ಎ ಬೆರಳಚ್ಚು ಪರೀಕ್ಷೆಯು ಪೊಲೀಸ್ ಮತ್ತು ನ್ಯಾಯಾಂಗ ಇಲಾಖೆಗಳಿಗೆ ಸಹಾಯ ಮಾಡಿದೆ.

ಕೊಲೆ, ದರೋಡೆ, ಅತ್ಯಾಚಾರ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಮುಂತಾದ ಘಟನೆಗಳ ಬಗ್ಗೆಯೇ ಇಂದು ಬಹುತೇಕ ಪ್ರತಿ ನಿತ್ಯವೂ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಸಮಾಜದಲ್ಲಿ ಇಂಥ ಪ್ರಕರಣಗಳು ನಡೆಯಲೇಬಾರದು, ಒಂದೊಮ್ಮೆ ನಡೆದರೆ ನಿಜವಾದ ಅಪರಾಧಿಗೆ ಶಿಕ್ಷೆ ಕೊಡಿಸುವಂತಾಗಬೇಕು. ಆಗ ಮಾತ್ರವೇ ಇಂಥ ಅಪರಾಧಗಳು ಮರುಕಳಿಸದಂತೆ ನೋಡಿಕೊಳ್ಳಲು ಸಾಧ್ಯವಿದೆ. ಮೇಲೆ ಉಲ್ಲೇಖಿಸಿರುವಂಥ ಅಪರಾಧಗಳ ತನಿಖೆಯಲ್ಲಿ ಡಿಎನ್‌ಎ ಬೆರಳಚ್ಚು ತಂತ್ರಜ್ಞಾನವು ಮಹತ್ತರ ಪಾತ್ರವನ್ನು ವಹಿಸುತ್ತದೆ. ಈ ತಂತ್ರಜ್ಞಾನವು ಅತ್ಯಂತ ನಿಖರವಾದದ್ದು ಹಾಗೂ ಯಾರೇ ಎಲ್ಲೇ ಪ್ರಯೋಗ-ಪರೀಕ್ಷೆ ಮಾಡಿದರೂ ಒಂದೇ ಫಲಿತಾಂಶ ಸಿಗುತ್ತದೆ.

2024ರಲ್ಲಿ, ಡಿಎನ್‌ಎ ಬೆರಳಚ್ಚು ತಂತ್ರಜ್ಞಾನವು ಸುಮಾರು 25 ಲಕ್ಷದಷ್ಟು ಸೂಕ್ಷ್ಮ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ದೊರಕಿಸಿ ಕೊಡಲು ಸಹಾಯ ಮಾಡಿದೆ ಎಂದು ಗುಜರಾತಿನ ವಿಧಿವಿಜ್ಞಾನ ಪ್ರಯೋಗಾಲಯದ ನಿರ್ದೇಶನಾಲಯವು ಅತ್ಯಂತ ಹೆಮ್ಮೆಯಿಂದ ಹೇಳಿಕೊಂಡಿದೆ.

ಅಹಮದಾಬಾದ್‌ನ ವಿಮಾನ ದುರಂತದಲ್ಲಿ ಮೃತಪಟ್ಟವರ ಗುರುತಿಸುವಿಕೆಯ ಕಾರ್ಯವನ್ನು ಡಿಎನ್‌ಎ ಬೆರಳಚ್ಚು ತಂತ್ರಜ್ಞಾನ ಮಾಡಿರುವುದಲ್ಲದೆ, ವಾಹನ ಅಪಘಾತ, ರೈಲು ದುರಂತ, ಕಟ್ಟಡ ಕುಸಿತ ಮತ್ತು ಭಾರಿ ಅಗ್ನಿ ಅವಘಡದ ಸಂದರ್ಭದಲ್ಲೂ ಸಂತ್ರಸ್ತರ ಗುರುತಿನ ಪತ್ತೆಗೆ ಅತ್ಯವಶ್ಯಕ ವಾಗಿದೆ. ಒಟ್ಟಿನಲ್ಲಿ ಡಿಎನ್‌ಎ ಬೆರಳಚ್ಚು ತಂತ್ರಜ್ಞಾನವು ಮಾನವನಿಗೆ ದೊರೆತಿರುವ ಒಂದು ಅದ್ಭುತ ಮತ್ತು ಆಪದ್ಬಾಂಧವ ಸ್ವರೂಪಿ ಕೊಡುಗೆಯೇ ಸರಿ!

(ಲೇಖಕರು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಅಧಿಕಾರಿ)