Tuesday, 24th September 2024

Ashutosh Gowariker : 10ನೇ ಅಜಂತಾ ಎಲ್ಲೋರಾ ಚಲನಚಿತ್ರೋತ್ಸವದ ಗೌರವ ಅಧ್ಯಕ್ಷರಾಗಿ ಅಶುತೋಷ್ ಗೋವಾರಿಕರ್ ಆಯ್ಕೆ

Ashutosh Gowariker

ಬೆಂಗಳೂರು: ಲಗಾನ್, ಸ್ವದೇಸ್, ಜೋಧಾ ಅಕ್ಬರ್ ಮತ್ತು ಪಾಣಿಪತ್ ರೀತಿಯ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಬಾಲಿವುಡ್ ಸಿನಿಮಾಗಳ ನಿರ್ಮಾಪಕ ಅಶುತೋಷ್ ಗೋವಾರಿಕರ್ (Ashutosh Gowariker) ಅವರು 10 ನೇ ಅಜಂತಾ ಎಲ್ಲೋರಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಎಐಎಫ್ಎಫ್) ಗೌರವ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

2025ರ ಜನವರಿ 15 ರಿಂದ 19 ರವರೆಗೆ ಛತ್ರಪತಿ ಸಂಭಾಜಿನಗರದಲ್ಲಿ ಸ್ಥಾಪಕ ಅಧ್ಯಕ್ಷ ನಂದಕಿಶೋರ್ ಕಗ್ಲಿವಾಲ್ ಮತ್ತು ಮುಖ್ಯ ಮಾರ್ಗದರ್ಶಕ ಅಂಕುಶ್ರಾವ್ ಕದಮ್ ನೇತೃತ್ವದ ಸಂಘಟನಾ ಸಮಿತಿ ತನ್ನ ಗಣ್ಯರ ಪಟ್ಟಿ ಬಿಡುಗಡೆ ಮಾಡಿತು. ಅಲ್ಲಿ ಗೋವಾರಿಕರ್ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ : Dasara Film Festival 2024: ದಸರಾ ಚಲನಚಿತ್ರೋತ್ಸವ 2024- ಅ.3ರಂದು ಕರಾಮುವಿ ಘಟಿಕೋತ್ಸವ ಭವನದಲ್ಲಿ ಉದ್ಘಾಟನೆ

ಎಐಎಫ್ಎಫ್ ಅನ್ನು ಮರಾಠಾವಾಡಾ ಕಲೆ, ಸಂಸ್ಕೃತಿ ಮತ್ತು ಚಲನಚಿತ್ರ ಪ್ರತಿಷ್ಠಾನ ಆಯೋಜಿಸುತ್ತದೆ. ನಾಥ್ ಗ್ರೂಪ್, ಎಂಜಿಎಂ ವಿಶ್ವವಿದ್ಯಾಲಯ ಮತ್ತು ಯಶವಂತರಾವ್ ಚವಾಣ್ ಕೇಂದ್ರವು ಪ್ರಸ್ತುತಪಡಿಸುತ್ತಿದೆ. ಇದು ಫಿಪ್ರೆಸ್ಸಿ ಮತ್ತು ಎಫ್ಎಫ್ಎಸ್ಐನಂತಹ ಪ್ರತಿಷ್ಠಿತ ಸಂಸ್ಥೆಗಳಿಂದ ಮಾನ್ಯತೆಯನ್ನೂ ಪಡೆದಿದೆ. ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಮಹಾರಾಷ್ಟ್ರ ಸರ್ಕಾರದಿಂದ ಬೆಂಬಲ ಪಡೆದುಕೊಂಡಿದೆ.

ಬಹುಮುಖ ಪ್ರತಿಭೆ

ಬರಹಗಾರ, ನಿರ್ದೇಶಕ, ನಿರ್ಮಾಪಕ ಮತ್ತು ನಟನಾಗಿ ಭಾರತೀಯ ಚಿತ್ರರಂಗಕ್ಕೆ ಗಮನಾರ್ಹ ಕೊಡುಗೆ ನೀಡಿದ ಅಶುತೋಷ್ ಗೋವಾರಿಕರ್, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ವಲಯದಲ್ಲೂ ಛಾಪು ಮೂಡಿಸಿದ್ದಾರೆ. ಆಸ್ಕರ್ ಪ್ರಶಸ್ತಿಗಳನ್ನು ನೀಡುವ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ನ ಎಲೆಕ್ಟೆಡ್‌ ಸದಸ್ಯ.

ಆಯ್ಕೆ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ ಅಶುತೋಷ್‌ ಗೋವಾರಿಕರ್, “ಗೌರವ ಅಧ್ಯಕ್ಷರ ಪಾತ್ರ ವಹಿಸಲು ನಾನು ಹೆಮ್ಮೆಪಡುತ್ತೇನೆ, ವಿಶೇಷವಾಗಿ ಎಐಎಫ್ಎಫ್‌ನ 10 ನೇ ವರ್ಷದಲ್ಲಿ. ಚಂದ್ರಕಾಂತ್ ಕುಲಕರ್ಣಿ, ಜಯಪ್ರದ್ ದೇಸಾಯಿ, ಜ್ಞಾನೇಶ್ ಜೋಟಿಂಗ್ ಮತ್ತು ಸುನಿಲ್ ಸುಕ್ತಂಕರ್ ಅವರೊಂದಿಗೆ ಕೆಲಸ ಮಾಡಲು ಹೆಮ್ಮೆ ಎನಿಸುತ್ತಿದೆ. ಸಾಂಸ್ಕೃತಿಕ ಕೇಂದ್ರವಾದ ಛತ್ರಪತಿ ಸಂಭಾಜಿ ನಗರದಲ್ಲಿ (ಔರಂಗಾಬಾದ್) ಉತ್ಸವ ಆಯೋಜಿಸುವುದು ಸ್ಥಳೀಯ ಪ್ರತಿಭೆಗಳನ್ನು ಪೋಷಿಸಲು ಮತ್ತು ಜಗತ್ತಿಗೆ ಪರಿಚಯಿಸಲು ಸಹಾಯ ಮಾಡುತ್ತದೆ. ನನ್ನದೇ ಆದ ರೀತಿಯಲ್ಲಿ ಎಐಎಫ್ಎಫ್‌ಗೆ ಕೊಡುಗೆ ನೀಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:

ಚಲನಚಿತ್ರ ನಿರ್ಮಾಪಕ ಸುನಿಲ್ ಸುಕ್ತಂಕರ್ ಅವರು ಈ ಆವೃತ್ತಿಯ ಉತ್ಸವ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ. ಕಳೆದ 30 ವರ್ಷಗಳಲ್ಲಿ ಸುಕ್ತಂಕರ್ ಮರಾಠಿ ಚಿತ್ರರಂಗಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ದಿ. ಸುಮಿತ್ರಾ ಭಾವೆ ಅವರೊಂದಿಗೆ ಸಹ-ನಿರ್ದೇಶಿಸಿದ ಅವರ ಅನೇಕ ಚಲನಚಿತ್ರಗಳು ರಾಷ್ಟ್ರೀಯ ಮೆಚ್ಚುಗೆ ಗಳಿಸಿವೆ.

ಕಲಾ ನಿರ್ದೇಶಕ ಚಂದ್ರಕಾಂತ್ ಕುಲಕರ್ಣಿ, ನಿಲೇಶ್ ರಾವತ್, ಜಯಪ್ರದ್ ದೇಸಾಯಿ, ಜ್ಞಾನೇಶ್ ಜೋಟಿಂಗ್, ಶಿವ್ ಕದಮ್ ಮತ್ತು ದೀಪಿಕಾ ಸುಶೀಲನ್ ಸೇರಿದಂತೆ ಇಡೀ ಸಂಘಟನಾ ಸಮಿತಿಯು ಹೊಸದಾಗಿ ನೇಮಕಗೊಂಡ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿತು.