Saturday, 21st September 2024

ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್ ಚುನಾವಣೆ ಮತದಾನ ಇಂದು

ಹೈದರಾಬಾದ್‌: ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌ (ಜಿಎಚ್‌ಎಂಸಿ) ಚುನಾವಣೆಯ ಮತದಾನ ಪ್ರಕ್ರಿಯೆ ಮಂಗಳವಾರ ಆರಂಭವಾಗಿದೆ.

150 ವಾರ್ಡ್‌ಗಳ ಜಿಎಚ್‌ಎಂಸಿಗೆ ಬೆಳಗ್ಗೆ ಮತದಾನ ಪ್ರಾರಂಭವಾಗಿದೆ. 6 ಗಂಟೆಗೆ ಮತಚಲಾವಣೆಯು ಪೂರ್ಣಗೊಳ್ಳಲಿದೆ. ಕಾರ್ಪೊರೇಷನ್‌ ವ್ಯಾಪ್ತಿಯಲ್ಲಿ 74,44,260 ಮತದಾರರಿದ್ದಾರೆ. ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸಲಾಗುತ್ತಿದೆ. ಈ ಚುನಾವಣೆಯಲ್ಲಿ ಒಟ್ಟು 1,122 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್‌ ರೆಡ್ಡಿ, ಆಡಳಿತಾರೂಡ ಟಿಆರ್‌ ಪಕ್ಷದ ಕಾರ್ಯಾಧ್ಯಕ್ಷ ಮತ್ತು ತೆಲಂಗಾಣ ಪೌರಾ ಡಳಿತ ಸಚಿವ ಕೆ.ಟಿ ರಾಮಾರಾವ್‌, ನಟ-ರಾಜಕಾರಣಿ ಚಿರಂಜೀವಿ, ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್‌ ಒವೈಸಿ ಬೆಳಗ್ಗೆಯೇ ಮತಗಟ್ಟೆಗಳಿಗೆ ತೆರಳಿ ಮತ ಚಲಾವಣೆ ಮಾಡಿದರು.

ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿರುವ ಚುನಾವಣಾ ಆಯೋಗ 48,000 ಮತಗಟ್ಟೆ ಅಧಿಕಾರಿಗಳನ್ನು ಚುನಾವಣಾ ಕಾರ್ಯಕ್ಕೆ, 52,500 ಪೊಲೀಸರನ್ನು ಭದ್ರತೆಗೆ ನಿಯೋಜಿಸಿದೆ.

ಕೋವಿಡ್‌ ಅನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗವು ಪ್ರಮುಖ ರಾಜಕೀಯ ಪಕ್ಷಗಳು ಮತ್ತು ಆರೋಗ್ಯ ಇಲಾಖೆಯ ಅಭಿಪ್ರಾಯಗಳನ್ನು ಪಡೆದು ಮತಪತ್ರಗಳನ್ನು ಬಳಸಿ ಈ ಚುನಾವಣೆ ನಡೆಸುತ್ತಿದೆ. ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌), ಬಿಜೆಪಿ, ಕಾಂಗ್ರೆಸ್‌ ಚುನಾವಣಾ ಆಖಾಡದಲ್ಲಿವೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ಬಿಜೆಪಿ ಯುವ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಸಚಿವೆ ಸ್ಮೃತಿ ಇರಾನಿ, ಪ್ರಕಾಶ್‌ ಜಾವಡೇಕರ್‌, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡಣವೀಸ್‌ ಅವರ ಪ್ರಚಾರದೊಂದಿಗೆ ಚುನಾವಣೆ ಕಣ ಈ ಬಾರಿ ಹೆಚ್ಚು ರಂಗೇರಿದೆ.

ಹೈದರಾಬಾದ್‌ ಅನ್ನು ಭಾಗ್ಯನಗರವಾಗಿ ಮರುನಾಮಕರಣ ಮಾಡುವ ವಿಚಾರಗಳು ಟಿಆರ್‌ಎಸ್‌, ಎಐಎಂಐಎಂ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.