Crime News: ಕಾಡುಹಂದಿ ಬೇಟೆ ವೇಳೆ ಮಿಸ್ ಫೈರ್! ಇಬ್ಬರ ಪ್ರಾಣಕ್ಕೆ ಕುತ್ತು ತಂದ ಬೇಟೆಯ ಹುಚ್ಚು
ಕಾಡು ಹಂದಿ ಸಹಿತ ಉಳಿದ ಪ್ರಾಣಿಗಳ ಬೇಟೆಗೆಂದು ದಟ್ಟ ಕಾಡಿನೊಳಗೆ ತೆರಳಿದ್ದ ಹವ್ಯಾಸಿ ಬೇಟೆಗಾರರು ತಮ್ಮ ತಂಡದಲ್ಲಿದ್ದವರಿಗೆ ಮಿಸ್ ಫೈರ್ ಮಾಡಿಕೊಂಡಿರುವ ಘಟನೆಯೊಂದು ಮಹಾರಾಷ್ಟ್ರದ ಪಾಲ್ಗಾರ್ ನಲ್ಲಿ ವರದಿಯಾಗಿದ್ದು, ಸುದ್ದಿಯ ವಿವರ ಇಲ್ಲಿದೆ.
ಪಾಲ್ಗಾರ್: ಮಹಾರಾಷ್ರದ (Maharashtra) ಪಾಲ್ಗಾರ್ (Palghar) ಜಿಲ್ಲೆಯಲ್ಲಿ ಕಾಡಿನಲ್ಲಿ ಬೇಟೆಗೆ ಹೋದ ಸಂದರ್ಭದಲ್ಲಿ ಜೊತೆಗಾರರ ಗುಂಡಿಗೆ ಓರ್ವ ವ್ಯಕ್ತಿ ಬಲಿಯಾಗಿ, ಇನ್ನೊಬ್ಬಾತ ಗಂಭೀರವಾಗಿ ಗಾಯಗೊಂಡು ಬಳಿಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಇಲ್ಲಿನ ಬೊರ್ಷೆಟಿ ಅರಣ್ಯ ಪ್ರದೇಶದಲ್ಲಿ (Borsheti Forest) ಹವ್ಯಾಸಿ ಬೇಟೆಗಾರರು (Amateur hunter) ಬೇಟೆಗೆಂದು ತೆರಳಿದ್ದ ಸಂದರ್ಭದಲ್ಲಿ ಈ ದಾರುಣ ಘಟನೆ ನಡೆದಿದೆ. ಈ ಘಟನೆ ಜ.28ರಂದು ನಡೆದಿದ್ದರೂ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಈ ಘಟನೆಯ ಬಗ್ಗೆ ಸ್ಥಳೀಯರು ಫೆ.3ರಂದು ಮನೋರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಬಳಿಕವಷ್ಟೇ ಈ ಘಟನೆ ಬೆಳಕಿಗೆ ಬಂದಿದೆ. ಬೇಟೆಗೆ ತೆರಳಿ ತಮ್ಮ ಸಹಚರರ ಗುಂಡಿಗೆ ಬಲಿಯಾದ ಒಬ್ಬ ವ್ಯಕ್ತಿಯ ಶವವನ್ನು ಪೊಲೀಸರು ಘಟನೆ ನಡೆದ ಅರಣ್ಯ ಪ್ರದೇಶದಿಂದ ವಶಪಡಿಸಿಕೊಂಡಿದ್ದಾರೆ. ಇನ್ನೊಬ್ಬ ಗಾಯಾಳು ತನ್ನ ಮನೆಗೆ ಮರಳಿದ ಬಳಿಕ ಅಲ್ಲಿ ಗಾಯ ಉಲ್ಭಣಗೊಂಡು ಮೃತಪಟ್ಟಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಆತನ ಅಂತ್ಯ ಸಂಸ್ಕಾರವೂ ನಡೆದು ಹೋಗಿರುವ ಮಾಹಿತಿ ಲಭಿಸಿದೆ. ಈ ಘಟನೆ ಇದೀಗ ಪಾಲ್ಗಾರ್ ಜಿಲ್ಲೆಯಲ್ಲಿ ದೊಡ್ಡ ಸುದ್ದಿಯಾಗಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬೋರ್ ಶೇಟಿ, ಕಿರಾತ್, ರೌತೆ ಮತ್ತು ಅಕೋಲಿಗಳ ಹವ್ಯಾಸಿ ಬೇಟೆಗಾರರು ಕಾಡು ಹಂದಿಯ ಬೇಟೆಗಾಗಿ ಕಾಡಿಗೆ ಹೋಗಿದ್ದರು. ಈ ಬೇಟೆಗಾರರ ಬಳಿ ಗನ್ ಮತ್ತು ಚೂರಿ ಸಹಿತಿ ಬೇಟೆಗೆ ಅಗತ್ಯವಿರುವ ಹತ್ಯಾರಗಳ ಸಂಗ್ರಹವೂ ಇತ್ತು. ಮಾತ್ರವಲ್ಲದೇ ಕಾಡಿನಲ್ಲಿ ಅಡುಗೆ ಮಾಡಲು ಬೇಕಾದ ಅಗತ್ಯ ವಸ್ತುಗಳನ್ನೂ ಇವರು ತಮ್ಮೊಂದಿಗೆ ಒಯ್ದಿದ್ದರು. ಪಟ್ಟೆ ಹುಲಿಗಳಿಗೆ ಹಾಗೂ ದೊಡ್ಡ ಕಾಡು ಹಂದಿಗಳಿಗೆ ನೀರಿನ ತಾಣವಾಗಿರುವ ಅಲಾನ್ ಡೋಂಗ್ರ ಕಡೆಯಿಂದ ಈ ಬೇಟೆಗಾರರ ತಂಡ ಕಾಡಿಗೆ ಪ್ರವೇಶಿಸಿತ್ತು. ಬಳಿಕ ಈ ತಂಡ ಕಾಡಿನೊಳಗೆ ಬೇರೆ ಬೇರೆಯಾಗಿ ಚದುರಿ ಹೋಗಿತ್ತು. ಕೆಲವರು ಬೆಟ್ಟದ ಕಟಿದಾದ ಭಾಗದಲ್ಲಿದ್ದು ಪ್ರಾಣಿಗಳ ಬರುವಿಕೆಗೆ ಹೊಂಚು ಹಾಕುತ್ತಿದ್ದರೆ, ಇನ್ನು ಕೆಲವರು ಕಾಡಿನೊಳಗೆ ಪ್ರವೇಶಿಸಿ ಪ್ರಾಣಿಗಳ ಬೇಟೆಗೆ ತೊಡಗಿದ್ದರು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ಹೀಗೆ ಕಾಡಿನೊಳಗೆ ಚದುರಿ ಹೋಗಿದ್ದ ಬೇಟೆಗಾರರ ತಂಡ ತಮ್ಮಲ್ಲಿದ್ದ ಫ್ಲ್ಯಾಶ್ ಲೈಟ್ ಗಳನ್ನು ಬಳಸಿ, ನಿಶ್ಯಬ್ದವಾಗಿ ಪ್ರಾಣಿಗಳನ್ನು ಅರಸುತ್ತಾ ಸಾಗುತ್ತಿದ್ದ ಸಂದರ್ಭದಲ್ಲಿ ಸುಮಾರು ಮಧ್ಯರಾತ್ರಿ ಹೊತ್ತಿಗೆ ಬೇಟೆಗಾರರಿಗೆ ಒಂದು ಸದ್ದು ಕೇಳಿಸುತ್ತದೆ. ತಮಗೆ ಕೇಳಿಸುತ್ತಿರುವ ಶಬ್ದ ಯಾವುದೋ ಪ್ರಾಣಿಯದ್ದು ಎಂದು ಅಂದುಕೊಂಡ ಬೆಟ್ಟದ ಮೇಲಿದ್ದ ಬೇಟೆಗಾರರಲ್ಲಿ ಒಬ್ಬ ತನ್ನ ಬಂದೂಕಿನಿಂದ ಗುರಿಯಿರಿಸಿ ಫೈರ್ ಮಾಡುತ್ತಾನೆ. ಆದರೆ ದುರದೃಷ್ಟವಶಾತ್ ಈ ಗನ್ ಫೈರ್ 60 ವರ್ಷ ಪ್ರಾಯದ ರಮೇಶ್ ವಾರ್ತಾ ಎಂಬುವವರಿಗೆ ಬೀಳುತ್ತದೆ. ಈ ವ್ಯಕ್ತಿ ಗುಂಡೇಟಿನಿಂದಾಗಿ ಸ್ಥಳದಲ್ಲೇ ಸಾವನ್ನಪ್ಪುತ್ತಾರೆ. ಇನ್ನೊಂದು ಬುಲೆಟ್ ಇನ್ನೊಬ್ಬ ಬೇಟೆಗಾರನಿಗೆ ತಾಗುತ್ತದೆ. ಆಕಸ್ಮಿಕ ಗುಂಡೇಟಿನಿಂದ ಗಾಯಗೊಂಡ ಈ ಬೇಟೆಗಾರನನ್ನು ಅನ್ಯ ಮಹಾಲೋಡ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: Viral Video: ಇದು ‘ಲವ್ ಇನ್ ಪಾಕಿಸ್ತಾನ್’- ಪಾಕ್ ಯುವಕನನ್ನು ಮದುವೆಯಾಗಲು ಅಮೆರಿಕದಿಂದ ಹಾರಿಬಂದ ಮಹಿಳೆ!
ಈ ಆಕಸ್ಮಿಕ ಗುಂಡೇಟಿನ ಘಟನೆಯ ಬಳಿಕ ಭೀತಿಗೊಂಡ ಈ ಬೇಟೆಗಾರರು, ರಮೇಶ್ ಅವರ ಮೃತದೇಹವನ್ನು ಕಾಡಿನಲ್ಲಿ ಪೊದೆಗಳ ನಡುವೆ ಅಡಗಿಸಿಡಲು ನಿರ್ಧರಿಸುತ್ತಾರೆ. ಮತ್ತು ಗಾಯಗೊಂಡ ಮಾಲೋಡನನ್ನು ನಾಲ್ಕು ಜನರ ತಂಡ ಶಿಗಾಂವ್ ಪಾಟೀಲ್ ಪಾಡಾಕ್ಕೆ ತರುತ್ತಾರೆ. ಗುಂಡೇಟಿನಿಂದ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದರೂ ಈ ವ್ಯಕ್ತಿಯನ್ನು ಅವರು ಯಾರೂ ಆಸ್ಪತ್ರೆಗೆ ಸೇರಿಸುವ ಗೋಜಿಗೆ ಹೋಗಲಿಲ್ಲ. ಗುಂಡೇಟಿನಿಂದ ಗಾಯಗೊಂಡಿದ್ದ ಮಹಾಲೋಡ ಜ.31ರಂದು ಅಸುನೀಗುತ್ತಾನೆ ಮತ್ತು ಇವನ ಮೃತದೇಹವನ್ನು ಗ್ರಾಮದಲ್ಲೇ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಹಾಗೂ ಈ ಘಟನೆಯ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ.
ಆದರೆ ಫೆ.3ರಂದು ಮನೋರ್ ಪೊಲೀಸ್ ಠಾಣೆಗೆ ಈ ಘಟನೆಯ ಕುರಿತು ಮಾಹಿತಿ ನೀಡಿ, ತನಿಖೆ ನಡೆಸುವಂತ ಸೂಚಿಸಲಾಗುತ್ತದೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಘಟನೆ ನಡೆದ ಅರಣ್ಯ ಪ್ರದೇಶದಲ್ಲಿ ಭಾರೀ ಹುಡುಕಾಟ ನಡೆಸಿದಾಗ, ಕೊಳೆತ ಸ್ಥಿತಿಯಲ್ಲಿದ್ದ ರಮೇಶ್ ಅವರ ಶವ ಪತ್ತೆಯಾಗುತ್ತದೆ. ಈ ಮೃತದೇಹವನ್ನು ಬಳಿಕ ಪೋಸ್ಟ್ ಮಾರ್ಟಂಗೆಂದು ಕಳುಹಿಸಿಕೊಡಲಾಗುತ್ತದೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಒಟ್ಟು ಎಂಟು ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ, ಇವರಲ್ಲಿ ಗುಂಡು ಹೊಡೆದಾತನೂ ಸೇರಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ.