Saturday, 23rd November 2024

Bus Service: ಕುಪ್ಪೂರಿಗೆ ನಗರ ಸಾರಿಗೆ ಬಸ್ ಸೇವೆ ಆರಂಭ

ತುಮಕೂರು: ನಗರದ ಒಂದನೇ ವಾರ್ಡಿನ ಕುಪ್ಪೂರು ಹಾಗೂ ತುಮಕೂರು ನಗರ ನಡುವೆ ಸಿದ್ಧಗಂಗಾ ನಗರ ಸಾರಿಗೆ ಬಸ್ ಸೇವೆ ಆರಂಭವಾಯಿತು. ಈ ಭಾಗದ ಜನರ ಬಹು ವರ್ಷದ ಬೇಡಿಕೆಯಾಗಿದ್ದ ಬಸ್ ಸೇವೆಗೆ ಶುಕ್ರವಾರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕರು, ಈ ಬಸ್ ಸಂಚಾರ ಆರಂಭವಾಗುವುದರೊಂದಿಗೆ ಈ ಪ್ರದೇಶದ ನಾಗರೀಕರು, ವಿದ್ಯಾರ್ಥಿಗಳು ನಿತ್ಯ ತುಮಕೂರಿಗೆ ಬಂದು ಹೋಗಲು ಅನುಕೂಲವಾಗಲಿದೆ. ಕುಪ್ಪೂರು, ಮರಳೇನಹಳ್ಳಿ, ಡಿ.ಎಂ.ಪಾಳ್ಯ ಮಾರ್ಗದಲ್ಲಿ ಈ ಬಸ್ ಸಂಚಾರ ಆರಂಭವಾಗಿದೆ ಎಂದು ಹೇಳಿದರು.

ತುಮಕೂರು ನಗರ ವಿಸ್ತಾರವಾಗಿ ಬೆಳೆಯುತ್ತಿದೆ. ಪ್ರಯಾಣ ಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮಾಡಬೇಕಾಗಿದೆ. 13 ವರ್ಷಗಳ ಹಿಂದೆ ಕೇವಲ 24 ಬಸ್‌ಗಳೊಂದಿಗೆ ನಗರ ಸಾರಿಗೆ ಸೇವೆ ಆರಂಭವಾಗಿತ್ತು. ಹೊರವಲಯದ ಪ್ರದೇಶಗಳಿಗೆ ಇನ್ನೂ ಸಾರಿಗೆ ಸೌಲಭ್ಯ ದೊರಕಿಲ್ಲ. ನಗರ ಸಾರಿಗೆ ಸೇವೆಗೆ ಇನ್ನೂ 50-60 ಬಸ್‌ಗಳ ಅಗತ್ಯವಿದೆ. ಹೆಚ್ಚುವರಿ ಬಸ್ ಒದಗಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್‌ಆರ್‌ಟಿಸಿ ಅಧ್ಯಕ್ಷ, ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ತಾವು ಮನವಿ ಮಾಡಿದ್ದು, ಹೆಚ್ಚುವರಿ ಬಸ್ ಒದಗಿಸುವ ಭರವಸೆ ನೀಡಿದ್ದಾರೆ ಎಂದು  ಹೇಳಿದರು.

ಈ ಸಂದರ್ಭದಲ್ಲಿ ರೇವಣ್ಣಸಿದ್ದೇಶ್ವರ ಮಠದ ಬಿಂದು ಶೇಖರ ಸ್ವಾಮೀಜಿ, ನಗರಪಾಲಿಕೆ ಮಾಜಿ ಸದಸ್ಯರಾದ ಇಂದ್ರಕುಮಾರ್, ನಳಿನಾ ಇಂದ್ರಕುಮಾರ್ ಅವರು ಈ ವೇಳೆ ಮಾತನಾಡಿ, ಈ ಭಾಗಕ್ಕೆ ನಗರ ಸಾರಿಗೆ ಬಸ್ ಸೇವೆ ಒದಗಿಸಬೇಕು ಎಂಬ ತಮ್ಮ ಐದು ವರ್ಷದ ಪ್ರಯತ್ನ ಇಂದು ಈಡೇರಿದೆ. ಇಲ್ಲಿನ ನಾಗರೀಕರು, ಶಾಲಾ ಕಾಲೇಜಿ ಗೆಂದು ತುಮಕೂರಿಗೆ ಹೋಗಿ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗಿತ್ತು. ಈಗ ಸಮಸ್ಯೆ ನಿವಾರಣೆಯಾದಂತಾಗಿದೆ ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಸ್ಥಳೀಯ ನಾಗರೀಕ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Physical Abuse: ಜನನಿಬಿಡ ರಸ್ತೆ ಸಮೀಪವೇ ಮಹಿಳೆ ಮೇಲೆ ಅತ್ಯಾಚಾರ- ಕಿಡಿಗೇಡಿ ಎಸ್ಕೇಪ್‌; ವಿಡಿಯೋ ರೆಕಾರ್ಡ್‌ ಮಾಡಿದವ ಅರೆಸ್ಟ್‌