Indian Hostages: ಪ್ಯಾಲೆಸ್ತೀನ್‌ನಲ್ಲಿ ಒತ್ತೆಯಾಳಾಗಿದ್ದ 10 ಭಾರತೀಯ ಕಾರ್ಮಿಕರನ್ನು ರಕ್ಷಿಸಿದ ಇಸ್ರೇಲ್ ಸೇನೆ
ಪಶ್ಚಿಮ ದಂಡೆಯ ಅಲ್-ಜಯೆಮ್ ಗ್ರಾಮದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಒತ್ತೆಯಾಳಾಗಿದ್ದ ಹತ್ತು ಭಾರತೀಯ ಮೂಲದ ಕಾರ್ಮಿಕರನ್ನು ಇಸ್ರೇಲ್ ಸೇನೆ ರಕ್ಷಿಸಿದೆ ಎಂದು ತಿಳಿದು ಬಂದಿದೆ. ಇಸ್ರೇಲ್ ರಕ್ಷಣಾ ಪಡೆಗಳು ಮತ್ತು ನ್ಯಾಯ ಸಚಿವಾಲಯದ ನೆರವಿನೊಂದಿಗೆ ಜನಸಂಖ್ಯಾ ಮತ್ತು ವಲಸೆ ಪ್ರಾಧಿಕಾರವು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದೆ.

ಸಾಂದರ್ಭಿಕ ಚಿತ್ರ

ಟೆಲ್ ಅವಿವಾ: ಪ್ಯಾಲೆಸ್ತೀನ್‌ನ ಪಶ್ಚಿಮ ದಂಡೆಯ ಅಲ್-ಜಯೆಮ್ ಗ್ರಾಮದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಒತ್ತೆಯಾಳಾಗಿದ್ದ ಹತ್ತು ಭಾರತೀಯ (Indian Hostages) ಮೂಲದ ಕಾರ್ಮಿಕರನ್ನು ಇಸ್ರೇಲ್ ಸೇನೆ ರಕ್ಷಿಸಿದೆ ಎಂದು ತಿಳಿದು ಬಂದಿದೆ. ಕಾರ್ಮಿಕರಿಗೆ ಉದ್ಯೋಗದ ಆಮಿಷವೊಡ್ಡಿ ಗ್ರಾಮಕ್ಕೆ ಕರೆತರಲಾಗಿತ್ತು ಆದರೆ ಅವರು ಬಂದ ತಕ್ಷಣ ಅವರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ವರದಿಯಾಗಿದೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ಮತ್ತು ನ್ಯಾಯ ಸಚಿವಾಲಯದ ನೆರವಿನೊಂದಿಗೆ ಜನಸಂಖ್ಯಾ ಮತ್ತು ವಲಸೆ ಪ್ರಾಧಿಕಾರವು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದೆ.
ಕಾರ್ಮಿಕರನ್ನು ರಕ್ಷಿಸಿದ ನಂತರ, ಅವರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಈ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ ಎಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ. ಕೆಲಸಕ್ಕಾಗಿ ಕಾರ್ಮಿಕರನ್ನು ಪಶ್ಚಿಮ ದಂಡೆಯ ಅಲ್-ಜಯೆಮ್ ಗ್ರಾಮಕ್ಕೆ ಕರೆತರಲಾಗಿತ್ತು. ಸದ್ಯ ಕಾರ್ಮಿಕರೆಲ್ಲರೂ ಸುರಕ್ಷಿತರಾಗಿದ್ದು, ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಇಸ್ರೇಲ್ ಅಧಿಕಾರಿಗಳನ್ನು ಒತ್ತಾಯಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
2023 ರ ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಯ ನಂತರ ಪ್ಯಾಲೆಸ್ಟೀನಿಯನ್ ಕಾರ್ಮಿಕರು ಇಸ್ರೇಲ್‌ಗೆ ಪ್ರವೇಶಿಸುವುದನ್ನು ನಿಷೇಧಿಸಿತ್ತು. ಕಳೆದ ಒಂದು ವರ್ಷದಲ್ಲಿ ಭಾರತದಿಂದ ಸುಮಾರು 16,000 ಕಾರ್ಮಿಕರು ಉದ್ಯೋಗಕ್ಕೆಂದು ಇಸ್ರೇಲ್‌ಗೆ ತೆರಳಿದ್ದರು. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಮಾಸ್‌ಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಹಮಾಸ್ ವಶದಲ್ಲಿಟ್ಟುಕೊಂಡಿರುವ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ನಡೆಯುತ್ತಿರುವ ಸಂಘರ್ಷದಲ್ಲಿ ಕೊಲ್ಲಲ್ಪಟ್ಟವರ ಶವಗಳನ್ನು ಹಿಂತಿರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ಯಾಲೆಸ್ಟೀನಿಯನ್ ಎನ್ಕ್ಲೇವ್‌ನಲ್ಲಿ ಬಂಧಿಸಲ್ಪಟ್ಟ ಒತ್ತೆಯಾಳುಗಳ ಕುರಿತು ಅಮೆರಿಕವು ಹಮಾಸ್ ಗುಂಪಿನೊಂದಿಗೆ ನೇರ ಮಾತುಕತೆ ನಡೆಸಿದೆ ಎಂದು ಶ್ವೇತಭವನ ದೃಢಪಡಿಸಿದೆ.
ಈ ಸುದ್ದಿಯನ್ನೂ ಓದಿ: Shot Dead: ಇಸ್ರೇಲ್‌ಗೆ ಅಕ್ರಮವಾಗಿ ಪ್ರವೇಶಿಸಲು ಯತ್ನ; ಜೋರ್ಡನ್ ಸೇನೆ ಗುಂಡೇಟಿಗೆ ಭಾರತೀಯ ಬಲಿ
ಅಮೆರಿಕದ ಅಧಿಕಾರಿಗಳು ಮೊದಲ ಬಾರಿಗೆ ಹಮಾಸ್ ಜೊತೆ ನೇರ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು ಶ್ವೇತಭವನ ದೃಢಪಡಿಸಿದ ಕೆಲವೇ ಗಂಟೆಗಳ ನಂತರ ಟ್ರಂಪ್ ಈ ಹೇಳಿಕೆಯನ್ನು ನೀಡಿದ್ದಾರೆ. ಒತ್ತೆಯಾಳುಗಳ ಬಿಡುಗಡೆಯ ಕುರಿತು ಅಮೆರಿಕದ ವಿಶೇಷ ರಾಯಭಾರಿ ಆಡಮ್ ಬೋಹ್ಲರ್ ಇತ್ತೀಚೆಗೆ ದೋಹಾದಲ್ಲಿ ಹಮಾಸ್ ಜೊತೆ ನೇರ ಮಾತುಕತೆ ನಡೆಸಿದ್ದಾರೆ.