Sunday, 22nd September 2024

Iran blast: ಇರಾನ್‌ ಗಣಿ ಪ್ರದೇಶದಲ್ಲಿ ಭಾರೀ ಸ್ಫೋಟ; 50ಕ್ಕೂ ಹೆಚ್ಚು ಜನ ಬಲಿ

Iran Blast

ಟೆಹ್ರಾನ್‌: ಇರಾನಿನ ಕಲ್ಲಿದ್ದಲು ಗಣಿಯಲ್ಲಿ ಅನಿಲ ಸೋರಿಕೆಯಿಂದ ಉಂಟಾದ ಸ್ಫೋಟ(Iran blast)ದಲ್ಲಿ ಸುಮಾರು 50ಕ್ಕಿಂತ ಹೆಚ್ಚು ಜನ ದಾರುನವಾಗಿ ಬಲಿಯಾಗಿದ್ದಾರೆ. ಈ ಬಗ್ಗೆ ಅಲ್ಲಿನ ಸ್ಥಳೀಯ ಮಾಧ್ಯಮವೊಂದು ಸುದ್ದಿ ಬಿತ್ತರಿಸಿದ್ದು, ಇದು ವರ್ಷಗಳಲ್ಲಿ ನಡೆದ ದೇಶದ ಅತಿ ದೊಡ್ಡ ದುರಂತ ಎನ್ನಲಾಗಿದೆ. ಪೂರ್ವ ಇರಾನ್‌ನ ತಬಾಸ್ ಗಣಿ(Tabas Mining)ಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತ ಕಾರ್ಮಿಕರ ಸಂಖ್ಯೆ 51 ಕ್ಕೆ ಏರಿದೆ ಎಂದು ಅಧಿಕೃತ IRNA ಸುದ್ದಿ ಸಂಸ್ಥೆ ವರದಿ ಮಾಡಿದೆ. ಇನ್ನು ಘಟನೆಯಲ್ಲಿ 20 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

ಶನಿವಾರ ರಾತ್ರಿ ಸುಮಾರು 9:00 ಗಂಟೆಗೆ (1730 GMT) ಸ್ಫೋಟ ಸಂಭವಿಸಿದೆ, ದಕ್ಷಿಣ ಖೊರಾಸನ್ ಪ್ರಾಂತ್ಯದಲ್ಲಿರುವ ಈ ಗಣಿ ಪ್ರದೇಶದಲ್ಲಿ ಸುಮಾರು 70 ಕಾರ್ಮಿಕರು ಇದ್ದರು. ವರದಿಯ ಪ್ರಕಾರ, ಮೀಥೇನ್ ಅನಿಲದ ಸೋರಿಕೆಯು ಗಣಿಯ ಎರಡು ಬ್ಲಾಕ್‌ಗಳಲ್ಲಿ ಸ್ಫೋಟಕ್ಕೆ ಕಾರಣವಾಯಿತು. ಇನ್ನು ಈ ಗಣಿಗಾರಿಕೆ ಪ್ರದೇಶ ಇರಾನಿನ ಖಾಸಗಿ ಕಂಪನಿ ಮದಂಜೂ ಒಡೆತನದಲ್ಲಿದೆ.

ತಬಾಸ್‌ನಲ್ಲಿರುವ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್‌ಗಳು ಮತ್ತು ಹೆಲಿಕಾಪ್ಟರ್‌ಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಇರಾನ್‌ನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಸಂತ್ರಸ್ತ ಕುಟುಂಬ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಈ ಭೀಕರ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ದುರದೃಷ್ಟವಶಾತ್, ತಬಾಸ್‌ನಲ್ಲಿರುವ ಕಲ್ಲಿದ್ದಲು ಗಣಿಗಳಲ್ಲಿ ಅಪಘಾತ ಸಂಭವಿಸಿದೆ ಮತ್ತು ನಮ್ಮ ಹಲವಾರು ದೇಶವಾಸಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಕುಟುಂಬಗಳಿಗೆ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಪೆಜೆಶ್ಕಿಯಾನ್ ಹೇಳಿದರು.

ಮೇ 2021 ರಲ್ಲಿ, ಅದೇ ಸ್ಥಳದಲ್ಲಿ ಇಬ್ಬರು ಗಣಿಗಾರರು ಕುಸಿದು ಸಾವನ್ನಪ್ಪಿದರು ಎಂದು ಸ್ಥಳೀಯ ಮಾಧ್ಯಮಗಳು ಆ ಸಮಯದಲ್ಲಿ ವರದಿ ಮಾಡಿವೆ. ಉತ್ತರ ಇರಾನ್‌ನ ಆಜಾದ್ ಶಹರ್ ನಗರದಲ್ಲಿ 2017 ರಲ್ಲಿ ನಡೆದ ಸ್ಫೋಟದಲ್ಲಿ 43 ಗಣಿಗಾರರು ಸಾವನ್ನಪ್ಪಿದರು,. ರಾಜ್ಯ ಮಾಧ್ಯಮಗಳ ಪ್ರಕಾರ ಖನಿಜ-ಸಮೃದ್ಧ ಇರಾನ್ ಸುಮಾರು 1.5 ಬಿಲಿಯನ್ ಟನ್ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿದೆ. ತಬಾಸ್ ಗಣಿ 30,000 ಚದರ ಕಿಲೋಮೀಟರ್ (ಸುಮಾರು 11,600 ಚದರ ಮೈಲುಗಳು) ಗಿಂತ ಹೆಚ್ಚು ಪ್ರದೇಶವನ್ನು ಆವರಿಸಿದೆ.

ಈ ಸುದ್ದಿಯನ್ನೂ ಓದಿ: Pager Blasts : ಲೆಬನಾನ್‌ನ ಪೇಜರ್ ಸ್ಫೋಟಕ್ಕೂ ಕೇರಳದ ಲಿಂಕ್‌…