Operation Sindoor: ನುಗ್ಗಿ ಹೊಡೆದರೂ ಬುದ್ಧಿ ಕಲಿಯದ ಪಾಕ್; ಧ್ವಂಸ ಮಾಡಿದ್ದ ಉಗ್ರರ ನೆಲೆ ಮತ್ತೆ ಸ್ಥಾಪನೆ!
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಮೇ ತಿಂಗಳಲ್ಲಿ ಭಾರತೀಯ ಸೇನೆಯು ಆರಂಭಿಸಿದ ಆಪರೇಷನ್ ಸಿಂದೂರ್ ಸಮಯದಲ್ಲಿ ನಾಶಪಡಿಸಿದ ಭಯೋತ್ಪಾದಕ ಲಾಂಚ್ಪ್ಯಾಡ್ಗಳು ಮತ್ತು ತರಬೇತಿ ಶಿಬಿರಗಳನ್ನು ಪುನಃ ಸ್ಥಾಪಿಸಲು ಪಾಕಿಸ್ತಾನ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.


ಇಸ್ಲಾಮಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಮೇ ತಿಂಗಳಲ್ಲಿ ಭಾರತೀಯ ಸೇನೆಯು ಆರಂಭಿಸಿದ ಆಪರೇಷನ್ ಸಿಂದೂರ್ ಸಮಯದಲ್ಲಿ ನಾಶಪಡಿಸಿದ ಭಯೋತ್ಪಾದಕ ಲಾಂಚ್ಪ್ಯಾಡ್ಗಳು ಮತ್ತು ತರಬೇತಿ ಶಿಬಿರಗಳನ್ನು ಪುನಃ ಸ್ಥಾಪಿಸಲು ಪಾಕಿಸ್ತಾನ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಪಕ್ಕದ ಪ್ರದೇಶಗಳಲ್ಲಿ ಈ ಭಯೋತ್ಪಾದಕ ನೆಲೆಗಳನ್ನು ಮತ್ತೆ ನಿರ್ಮಿಸಲು ಪಾಕಿಸ್ತಾನಿ ಸೇನೆ, ಅದರ ಗುಪ್ತಚರ ಸಂಸ್ಥೆ ಐಎಸ್ಐ ಸಹಾಯ ಮಾಡುತ್ತಿದೆ ಎಂದು ಹೇಳಲಾಗಿದೆ.
ಈ ನೆಲೆಗಳನ್ನು ಸ್ಥಾಪಿಸಲು ಪಾಕಿಸ್ತಾನ ಸರ್ಕಾರ ಗಣನೀಯ ಪ್ರಮಾಣದ ಹಣಕಾಸು ಮತ್ತು ಸಂಪೂರ್ಣ ಬೆಂಬಲವನ್ನು ನೀಡುತ್ತಿವೆ ಎಂದು ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಮೇ 7 ರಂದು, ಭಾರತೀಯ ಪಡೆಗಳು ಪಾಕಿಸ್ತಾನ ಮತ್ತು ಪಿಒಕೆಯಾದ್ಯಂತ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದವು. ಮೂರು ಪ್ರಮುಖ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ (ಜೆಇಎಂ), ಲಷ್ಕರ್-ಎ-ತೈಬಾ (ಎಲ್ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ಗೆ ಸಂಬಂಧಿಸಿದ ನೆಲೆಗಳನ್ನು ನಾಶ ಮಾಡಲಾಗಿತ್ತು.
ಬಹಾವಲ್ಪುರದಲ್ಲಿರುವ ಜೆಇಎಂ ಪ್ರಧಾನ ಕಚೇರಿ, ಇದನ್ನು ಸಹ ನಾಶ ಮಾಡಲಾಗಿತ್ತು. ಇದನ್ನು ಜೆಇಎಂ ಕಾರ್ಯಾಚರಣೆಗಳ ಕೇಂದ್ರವೆಂದು ಪರಿಗಣಿಸಲಾಗಿದೆ. ಇದೀಗ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು, ಐಎಸ್ಐ ಸಹಯೋಗದೊಂದಿಗೆ, ನಿಯಂತ್ರಣ ರೇಖೆಯ (ಎಲ್ಒಸಿ) ಬಳಿಯ ದಟ್ಟ ಕಾಡುಗಳಲ್ಲಿ ಹೈಟೆಕ್, ಸಣ್ಣ ಭಯೋತ್ಪಾದಕ ಶಿಬಿರಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ಸೂಚಿಸಿವೆ.
ಈ ಸುದ್ದಿಯನ್ನೂ ಓದಿ: Narendra Modi: ನಾವು ಉಗ್ರರನ್ನು ಮಾತ್ರ ಹೊಡೆದಿದ್ದೇವೆ; ಆಪರೇಷನ್ ಸಿಂದೂರ್ ಕುರಿತು ಟ್ರಂಪ್ಗೆ ಮಾಹಿತಿ ನೀಡಿದ ಮೋದಿ
ಇದೀಗ ಮತ್ತೆ ನಿರ್ಮಿಸಲಾಗುತ್ತಿರುವ ಶಿಬಿರಗಳು ಲುನಿ, ಪುಟ್ವಾಲ್, ತೈಪು ಪೋಸ್ಟ್, ಜಮಿಲಾ ಪೋಸ್ಟ್, ಉಮ್ರಾನ್ವಾಲಿ, ಚಪ್ರಾರ್, ಫಾರ್ವರ್ಡ್ ಕಹುತಾ, ಚೋಟಾ ಚಕ್ ಮತ್ತು ಜಂಗ್ಲೋರಾ ಮುಂತಾದ ಪ್ರದೇಶಗಳಲ್ಲಿವೆ. ಈ ಶಿಬಿರಗಳು ಥರ್ಮಲ್ ಇಮೇಜರ್ಗಳು, ರಾಡಾರ್ ಮತ್ತು ಉಪಗ್ರಹ ಕಣ್ಗಾವಲುಗಳನ್ನು ಎದುರಿಸಲು ವಿನ್ಯಾಸಗೊಳಿಸಲಾದ ಸುಧಾರಿತ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಳ್ಳುತ್ತಿವೆ ಎಂದು ತಿಳಿದು ಬಂದಿದೆ. ಪಾಕಿಸ್ತಾನಿ ಸೇನೆ ಮತ್ತು ಐಎಸ್ಐ ಪಿಒಕೆಯಲ್ಲಿ ಕೆಲ್, ಶಾರ್ಡಿ, ದುಧ್ನಿಯಲ್, ಅಥ್ಮುಖಮ್, ಜುರಾ, ಲೀಪಾ ವ್ಯಾಲಿ, ಪಚಿಬನ್ ಚಮನ್, ತಂಡಪಾನಿ, ನೈಯಾಲಿ, ಜನ್ಕೋಟ್, ಚಕೋಟಿ, ನಿಕೈಲ್ ಮತ್ತು ಫಾರ್ವರ್ಡ್ ಕಹುತಾ ಮುಂತಾದ ಪ್ರದೇಶಗಳನ್ನು ಒಳಗೊಂಡಂತೆ 13 ಲಾಂಚ್ ಪ್ಯಾಡ್ಗಳನ್ನು ಅಭಿವೃದ್ದಿ ಪಡಿಸಲಾಗುತ್ತಿದೆ.