ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗಡಿಭಾಗದ ಅಮಾಯಕ ಮರಾಠಿಗರಿಗೆ, ಕನ್ನಡ ಭಾಷಿಕರಿಗೆ ಕಿರಿಕ್

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆ ಅತ್ಯಂತ ಸೂಕ್ಷ್ಮ ಪ್ರದೇಶ. ಭಾಷೆ ವಿಷಯದಲ್ಲಿ ಹೊತ್ತಿಕೊಳ್ಳುವ ಸಣ್ಣ ಕಿಡಿಯೂ ಇಲ್ಲಿ ಎರಡು ರಾಜ್ಯಗಳ ಸ್ವಾಸ್ಥ್ಯ ಹಾಳು ಮಾಡುತ್ತವೆ. ಅನೇಕ ಬಾರಿ ಎಂಇಎಸ್ ಹಾಗೂ ಶಿವಸೇನೆ ಮಾಡುವ ಅವಾಂತರ ಹಾಗೂ ಪುಂಡಾಟಕ್ಕೆ ಅಮಾಯಕ ಮರಾಠಿ ಹಾಗೂ ಕನ್ನಡ ಭಾಷಿಕರು ತೊಂದರೆಗೆ ಒಳಗಾಗುತ್ತಾರೆ. ಈ ಮಧ್ಯೆ ಅಧಿಕಾರಿಗಳ ದ್ವಂದ್ವ ನಿರ್ಧಾ ರಕ್ಕೆ ಮತ್ತೊಮ್ಮೆ ಬೆಳಗಾವಿ ಹೊತ್ತಿ ಉರಿಯುವಂತಾಗಿದೆ.

ಮರಾಠಿಯಲ್ಲೇ ದಾಖಲೆಗಾಗಿ ಕ್ಯಾತೆ

Profile Ashok Nayak Mar 13, 2025 2:06 PM

ವಿನಾಯಕ ಮಠಪತಿ, ಬೆಳಗಾವಿ

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆ ಅತ್ಯಂತ ಸೂಕ್ಷ್ಮ ಪ್ರದೇಶ. ಭಾಷೆ ವಿಷಯದಲ್ಲಿ ಹೊತ್ತಿಕೊಳ್ಳುವ ಸಣ್ಣ ಕಿಡಿಯೂ ಇಲ್ಲಿ ಎರಡು ರಾಜ್ಯಗಳ ಸ್ವಾಸ್ಥ್ಯ ಹಾಳು ಮಾಡುತ್ತವೆ. ಅನೇಕ ಬಾರಿ ಎಂಇಎಸ್ ಹಾಗೂ ಶಿವಸೇನೆ ಮಾಡುವ ಅವಾಂತರ ಹಾಗೂ ಪುಂಡಾಟಕ್ಕೆ ಅಮಾಯಕ ಮರಾಠಿ ಹಾಗೂ ಕನ್ನಡ ಭಾಷಿಕರು ತೊಂದರೆಗೆ ಒಳಗಾಗುತ್ತಾರೆ. ಈ ಮಧ್ಯೆ ಅಧಿಕಾರಿಗಳ ದ್ವಂದ್ವ ನಿರ್ಧಾ ರಕ್ಕೆ ಮತ್ತೊಮ್ಮೆ ಬೆಳಗಾವಿ ಹೊತ್ತಿ ಉರಿಯುವಂತಾಗಿದೆ.

ಪೊಕ್ಸೋ ಪ್ರಕರಣ ಗದ್ದಲ

ಕಳೆದ ಫೆಬ್ರುವರಿ 27ರಂದು ಸಾರಿಗೆ ಬಸ್ ನಿರ್ವಾಹಕ ತನಗೆ ಮರಾಠಿ ಬರಲ್ಲ ಎಂದಿದ್ದಕ್ಕೆ ಮರಾಠಿ ಭಾಷಿಕ ಯುವಕರು ಪುಂಡಾಟ ಮೆರೆದಿದ್ದಲ್ಲದೆ ಹಲ್ಲೆ ನಡೆಸಿದ್ದರು. ಈ ಪ್ರಕರಣ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಈ ಮಧ್ಯೆ ಪೊಲೀಸ್ ಇಲಾಖೆ ಮಾಡಿಕೊಂಡ ಎಡವಟ್ಟಿನಿಂದ ಕಂಡಕ್ಟರ್ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಿದ ಪರಿಣಾಮ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು.

ಇದನ್ನೂ ಓದಿ: Belagavi News: ಹೆಲ್ಮೆಟ್ ಕೇಳಿದ್ದಕ್ಕೆ ಅಟ್ರಾಸಿಟಿ ಕೇಸ್ ಹಾಕುವುದಾಗಿ ಧಮ್ಕಿ; ಸಚಿವ ಸತೀಶ್ ಜಾರಕಿಹೊಳಿ ಹೆಸರಲ್ಲಿ ಪುಂಡಾಟ

ಮರಾಠಿಯ ದಾಖಲೆ

ಈ ಮಧ್ಯೆ ಗಡಿ ಭಾಗದಲ್ಲಿ ಮರಾಠಿ ಭಾಷಿಕರಿಗೆ ಮರಾಠಿಯಲ್ಲಿ ದಾಖಲೆ ನೀಡುವ ಕುರಿತು ಜಿಲ್ಲಾಧಿಕಾರಿ ಭರವಸೆ ಕೊಟ್ಟಿದ್ದಾರೆ ಎಂಬ ಸುದ್ದಿ ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದೆ. ರಾಜ್ಯದ ಎಲ್ಲಾ ಸರಕಾರಿ ಕಚೇರಿಯಲ್ಲಿ ಕಡ್ಡಾಯವಾಗಿ ಕನ್ನಡಲ್ಲೇ ದಾಖಲೇ ನೀಡಬೇಕು ಎಂಬ ಆದೇಶವಿದೆ. ಆದರೆ ಬೆಳಗಾವಿಯ ಮರಾಠಿ ಭಾಷಿಕ ಪ್ರದೇಶಗಳಲ್ಲಿ ಸರಕಾರದ ನಿಯಮ ಗಾಳಿಗೆ ತೂರಿ ಉತಾರ್ (ಪಹಣಿ) ಸೇರಿದಂತೆ ಹಲವು ದಾಖಲೆ ಗಳನ್ನು ಮರಾಠಿ ಯಲ್ಲಿ ನೀಡಲಾಗಿತ್ತಿದೆ. ಜಿಲ್ಲಾಧಿಕಾರಿ ಕೂಡ ಇದಕ್ಕೆ ಅಭಯ ನೀಡಿದ್ದರ ಪರಿಣಾಮ ಗಡಿ ಭಾಗದ ಸರಕಾರಿ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಮರಾಠಿ ದಾಖಲೆಗೆ ಡಿಸಿ ಅಸ್ತು

ಕಳೆದ ಕೆಲ ದಿನಗಳ ಹಿಂದೆ ಎಂಇಎಸ್ ಮುಖಂಡರ ಜೊತೆ ರಾಷ್ಟ್ರೀಯ ಭಾಷಾ ಅಲ್ಪ ಸಂಖ್ಯಾತರ ಆಯೋಗದ ಸದಸ್ಯರು ಜಿಲ್ಲಾಧಿಕಾರಿ ಭೇಟಿಯಾಗಿ ಮರಾಠಿ ಭಾಷೆಯಲ್ಲೇ ದಾಖಲೆ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ ಸಮ್ಮತಿ ಸೂಚಿಸಿದ್ದಾರೆ ಎಂದು ಮರಾಠಿ ದಿನಪತ್ರಿಕೆಗಳಲ್ಲಿ ವರದಿಯಾಗಿತ್ತು. ಹಾಗಾಗಿ ಮರಾಠಿಯಲ್ಲೇ ದಾಖಲೆ ನೀಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಪುಂಡಾಟದ ಘಟನೆ ಹೆಚ್ಚಾಗಿವೆ.

ದಾಖಲೆ ವಿತರಣೆ

ಬೆಳಗಾವಿ ಜಿಲ್ಲೆಯ ಖಾನಾಪುರ, ಬೆಳಗಾವಿ ತಾಲೂಕಿನ ಮರಾಠಿ ಭಾಷಿಕರು ಹೆಚ್ಚಿರುವ ಪ್ರದೇಶ ಸೇರಿದಂತೆ ಹಲವೆಡೆ ಮರಾಠಿ ಭಾಷೆಯಲ್ಲಿ ಪಹಣಿ ಹಾಗೂ ಹಲವಾರು ದಾಖಲೆ ಗಳನ್ನು ನೀಡಲಾಗುತ್ತಿದೆ. ಸರಕಾರದ ನಿಯಮ ಮೀರಿ ಅಧಿಕಾರಿಗಳು ವರ್ತಿಸಿದ್ದು ಇದು ಕನ್ನಡಿಗರನ್ನು ಕೆರಳಿಸಿದೆ. ಕೂಡಲೇ ಕನ್ನಡದಲ್ಲೇ ದಾಖಲೆ ನೀಡುವಂತೆ ಅಧಿಕಾರಿಗಳಿಗೆ ಸರಕಾರ ನಿರ್ದೇಶನ ನೀಡಬೇಕಾಗಿದೆ.

ಸಿಬ್ಬಂದಿಗಿಲ್ಲ ರಕ್ಷಣೆ

ಮರಾಠಿ ದಾಖಲೆ ನೀಡುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಮೇಲೆ ಹಲ್ಲೆ ನಡೆ ಯುತ್ತಿವೆ. ಮೊನ್ನೆಯಷ್ಟೇ ಬೆಳಗಾವಿಯ ಅಂಬೆವಾಡಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಇದಾದ ನಂತರ ಮಂಗಳವಾರ ತಾಲೂ ಕಿನ ಕಿಣಯೆ ಗ್ರಾಪಂ ಪಿಡಿಒ ಅವರನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಅಧಿಕಾರಿ ಗಳಿಗೇ ರಕ್ಷಣೆ ಇಲ್ಲದಂತಾಗಿದೆ.

ಗಡಿ ಕನ್ನಡಿಗರಿಗೆ ಅನ್ಯಾಯ, ಅಧಿಕಾರಿಗಳ ವಿರುದ್ದ ಹಲ್ಲೆ !

ಕರ್ನಾಟಕದ ಗಡಿಯ ಮರಾಠಿ ಭಾಷಿಕರು ಮರಾಠಿಯಲ್ಲಿ ಸರಕಾರಿ ದಾಖಲೆ ನೀಡುವಂತೆ ಆಗ್ರಹಿಸುತ್ತಿದ್ದರೆ, ಅತ್ತ ಮಹಾರಾಷ್ಟ್ರ ಸರಕಾರ ತಮ್ಮ ಗಡಿಯ ಕನ್ನಡ ಭಾಷಿಕರಿಗೆ ಮರಾಠಿ ಭಾಷೆಯಲ್ಲೇ ಕಾಗದಪತ್ರಗಳನ್ನು ನೀಡುತ್ತಾ ಬಂದಿದೆ. ಜತ್ತ, ಅಕ್ಕಲ ಕೋಟೆ, ಮತ್ತಿತರ ಕಡೆಯ ಗಡಿ ಭಾಗದ ಲಕ್ಷಾಂತರ ಕನ್ನಡಿಗರು ಕನ್ನಡಲ್ಲಿ ಸರಕಾರಿ ದಾಖಲೆ ಕೇಳುತ್ತಿದ್ದರೂ ಮಹಾರಾಷ್ಟ್ರ ಸರಕಾರ ಅನ್ಯಾಯ ಎಸಗುತ್ತಿದೆ. ಮರಾಠಿ ದಾಖಲೆಗಾಗಿ ಅಧಿಕಾರಿಗಳ ವಿರು ದ್ಧ ಹಲ್ಲೆ ನಡೆಯುತ್ತಿದ್ದು ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ.

*

ದಶಕಗಳಿಂದ ಮಹಾರಾಷ್ಟ್ರದ ಗಡಿಯಲ್ಲಿರುವ ಕನ್ನಡ ಭಾಷಿಕರಿಗೆ ಅಲ್ಲಿನ ಸರಕಾರ ಅನ್ಯಾಯ ಮಾಡುತ್ತಾ ಬಂದಿದೆ. ನಮ್ಮ ರಾಜ್ಯದಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ಸರಕಾರಿ ದಾಖಲೆ ನೀಡುವ ಕ್ರಮ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು. ಈ ಕುರಿತು ಸಿಎಂ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಭಾಷಾ ಅಲ್ಪಸಂಖ್ಯಾತರ ಆಯೋ ಗದ ಮನವಿಗೆ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಸ್ಪಂದಿಸಬಾರದು.

-ಅಶೋಕ್ ಚಂದರಗಿ, ಕರ್ನಾಟಕ ಗಡಿ ಪ ದೇಶಾಭಿವೃದ್ಧಿ ಸದಸ್ಯರು

ರಾಷ್ಟ್ರೀಯ ಭಾಷಾ ಅಲ್ಪಸಂಖ್ಯಾತರ ಆಯೋಗದ ಮುಂದೆ ಕೆಲ ಘಟನೆಗಳು ಮರಾಠಿ ಭಾಷೆಯಲ್ಲಿ ದಾಖಲಾತಿ ನೀಡುವ ಪ್ರಸ್ತಾಪ ಮಾಡಿದ್ದು, ಕಾನೂನು ಸಲಹೆ ಪಡೆಯುತ್ತೇವೆ ಎಂದು ಹೇಳಿದ್ದೇವೆ. ಜಿಲ್ಲೆಯಲ್ಲಿ ಕನ್ನಡದಲ್ಲೇ ಸರಕಾರಿ ದಾಖಲೆ ನೀಡುವಂತೆ ಆದೇಶ ಮಾಡುತ್ತೇವೆ.

-ಮೊಹಮ್ಮದ್ ರೋಷನ್, ಬೆಳಗಾವಿ ಜಿಲ್ಲಾಧಿಕಾರಿ