Valmiki Corporation scam: ವಾಲ್ಮೀಕಿ ನಿಗಮ ಹಗರಣದ ತನಿಖೆ ಸಿಬಿಐಗೆ ವಹಿಸಿ ಹೈಕೋರ್ಟ್ ಆದೇಶ
Valmiki Corporation scam: ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ಕೋರ್ಟ್, ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಸೂಚಿಸಿದೆ.


ಬೆಂಗಳೂರು: ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದ (Valmiki Corporation scam) ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಹೈಕೋರ್ಟ್ ಎಸ್ಐಟಿಗೆ ಸೂಚನೆ ನೀಡಿದೆ. ಸಿಬಿಐ ಈವರೆಗೆ ಬ್ಯಾಂಕ್ ವಿಚಾರಕ್ಕೆ ಸೀಮಿತವಾಗಿ ತನಿಖೆ ನಡೆಸುತ್ತಿತ್ತು. ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಎಲ್ಲಾ ತನಿಖಾ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ವಿಶೇಷ ತನಿಖಾ ತಂಡಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಸಿಬಿಐನಿಂದ ಪ್ರಕರಣದ ಸಮಗ್ರ ತನಿಖೆ ಕೋರಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ಕೋರ್ಟ್, ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಸೂಚಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರನ್ನು 2024ರ ಜುಲೈ 12 ರಂದು ಜಾರಿ ನಿರ್ದೇಶಾನಾಲಯ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಶಾಸಕ ನಾಗೇಂದ್ರಗೆ ಷರತ್ತುಬದ್ಧ ಜಾಮೀನು ಮಂಜೂರು ಆಗಿದ್ದರಿಂದ ಅ.15ರಂದು ಬಿಡುಗಡೆಯಾಗಿದ್ದರು. ಪ್ರಕರಣದಲ್ಲಿ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಬಿ.ನಾಗೇಂದ್ರ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇನ್ನು ಈ ಬಹುಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಸಂಸದ ಇ. ತುಕಾರಾಂ ಹಾಗೂ ಇಬ್ಬರು ಶಾಸಕರ ಮನೆಯ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲಿಸಿದ್ದರು. ಶಾಸಕರಾದ ನಾರಾ ಭರತ್ ರೆಡ್ಡಿ ಮತ್ತು ಕಂಪ್ಲಿ ಗಣೇಶ ಮನೆಯ ಮೇಲೂ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು.
ಈ ಸುದ್ದಿಯನ್ನೂ ಓದಿ | CM Siddaramaiah: ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಮಾರಕ- ಸಿದ್ದರಾಮಯ್ಯ
ಹಗರಣದಲ್ಲಿ ತುಕಾರಾಂ ಅವರ ಪಾತ್ರ ಇದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ತುಕಾರಾಂ ನಿವಾಸದ ಮೇಲೆ ದಾಳಿ ಮಾಡಿದ್ದರು. ಸಂಡೂರಿನಲ್ಲಿರುವ ಸಂಸದ ತುಕಾರಾಂ ಮನೆಯಲ್ಲಿ ಇಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡಿದ್ದರು.
ಏನಿದು ಪ್ರಕರಣ?
ಮಹರ್ಷಿ ವಾಲ್ಮೀಕಿ ವರ್ಗಗಳ ಅಭಿವೃದ್ಧಿ ನಿಗಮದ ಅಧೀಕ್ಷಕರಾಗಿ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಮೂಲದ ಪಿ.ಚಂದ್ರಶೇಖರನ್ 2024ರ ಮೇ 26ರಂದು ಶಿವಮೊಗ್ಗದ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿಗೆ ಮುನ್ನ ಅವರು ಬರೆದಿಟ್ಟಿದ್ದ ಆರು ಪುಟಗಳ ಡೆತ್ ನೋಟ್‌ನಲ್ಲಿ ನಿಗಮದ 2024-25ನೇ ಸಾಲಿನ ಯೋಜನೆಗಳಿಗೆ ಮೀಸಲಿಟ್ಟಿದ್ದ ಒಟ್ಟು 187.33 ಕೋಟಿ ಮೊತ್ತದಲ್ಲಿ 89 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ನಡೆದಿದೆ ಎಂದು ಬರೆದಿದ್ದರು. ಈ ಅಕ್ರಮಕ್ಕೆ ನಿಗಮದ ಹಿರಿಯ ಅಧಿಕಾರಿಗಳು ಮತ್ತು ಯೂನಿಯನ್ ಬ್ಯಾಂಕಿನ ಅಧಿಕಾರಿಗಳು ಕಾರಣ ಎಂದು ಅವರು ಹೆಸರು ಸಹಿತ ಉಲ್ಲೇಖಿಸಿದ್ದರು. ಇನ್ನು ಈ ಪ್ರಕರಣದಲ್ಲಿ ಸಚಿವರಾಗಿದ್ದ ಬಿ. ನಾಗೇಂದ್ರ ಸೇರಿ ವಿವಿಧ ನಾಯಕರ ಹೆಸರು ಕೇಳಿಬಂದಿದ್ದರಿಂದ ಹಗರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿತ್ತು.