Rajasthan Royals: ಮ್ಯಾಚ್ ಫಿಕ್ಸಿಂಗ್ ಆರೋಪ; ರಾಜ್ಯ ಸರ್ಕಾರಕ್ಕೆ ದೂರು ನೀಡಿದ ರಾಜಸ್ಥಾನ್ ರಾಯಲ್ಸ್
IPL 2025: ಮೂಲಗಳ ಮಾಹಿತಿ ಪ್ರಕಾರ, ಆರ್ಸಿಎ ಆಡ್ಹಾಕ್ ಸಮಿತಿ ಸದಸ್ಯರಿಗೆ ಐಪಿಎಲ್ ಪಂದ್ಯಗಳ ವೇಳೆ ಸ್ಟೇಡಿಯಂ ಪ್ರವೇಶಕ್ಕೆ ಮಾನ್ಯತೆ ಕಾರ್ಡ್ಗಳನ್ನು ನೀಡದಿರುವುದು ಜೈದೀಪ್ ಸಿಟ್ಟಿಗೆ ಪ್ರಮುಖ ಕಾರಣವಾಗಿತ್ತು. ಇದರಿಂದ ಅವರು ಫ್ರಾಂಚೈಸಿ ವಿರುದ್ಧ ಫಿಕ್ಸಿಂಗ್ ಆರೋಪ ಮಾಡಿದ್ದಾರೆ ಎನ್ನಲಾಗಿದೆ.


ಜೈಪುರ: ರಾಜಸ್ಥಾನ ರಾಯಲ್ಸ್(Rajasthan Royals) ತಂಡದ ವಿರುದ್ಧ ಮ್ಯಾಚ್ ಫಿಕ್ಸಿಂಗ್(match fixing) ಆರೋಪ ಮಾಡಿರುವ, ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ (ಆರ್ಸಿಎ) ಆಡ್ಹಾಕ್ ಸಮಿತಿಯ ಸಂಚಾಲಕ ಜೈದೀಪ್ ಬಿಹಾನಿ(Jaydeep Bihani) ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜಸ್ಥಾನ್ ರಾಯಲ್ಸ್ ತಂಡದ ಆಡಳಿತ ಮಂಡಳಿಯು ಸರ್ಕಾರಕ್ಕೆ(Government of Rajasthan) ದೂರು ನೀಡಿದೆ.
ಮಂಗಳವಾರ ಬಿಹಾನಿ ಅವರು ರಾಜಸ್ಥಾನ ರಾಯಲ್ಸ್ ತಂಡ ಮ್ಯಾಚ್ ಫಿಕ್ಸಿಂಗ್ ಮಾಡಿ ಪಂದ್ಯಗಳನ್ನು ಸೋಲುತ್ತಿದೆ ಎಂದು ತಂಡದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದೀಗ ಜೈದೀಪ್ ಬಿಹಾನಿ ವಿರುದ್ಧ ರಾಜಸ್ಥಾನ ಫ್ರಾಂಚೈಸಿ ರಾಜಸ್ಥಾನದ, ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಗೆ ದೂರು ಸಲ್ಲಿಸಿದೆ. ಜತೆಗೆ ಇದೊಂದು ಸುಳ್ಳು, ಮತ್ತು ಸಾಕ್ಷ್ಯ ರಹಿತವಾದ ಆರೋಪವಾಗಿದೆ ಎಂದು ತಿಳಿಸಿದೆ. ರಾಜಸ್ಥಾನದ ಕ್ರೀಡಾ ಸಚಿವ ಮತ್ತು ಕ್ರೀಡಾ ಕಾರ್ಯದರ್ಶಿಗೂ ದೂರು ನೀಡಲಾಗಿದ್ದು, ಜೈದೀಪ್ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಕೇಳಿಕೊಳ್ಳಲಾಗಿದೆ.
ಇದನ್ನೂ ಓದಿ IPL 2025: ಅತ್ಯಂತ ವೇಗವಾಗಿ 5000 ಐಪಿಎಲ್ ರನ್ ಪೂರ್ಣಗೊಳಿಸಿದ ಕೆಎಲ್ ರಾಹುಲ್!
ಫ್ರಾಂಚೈಸಿ ವಿರುದ್ಧ ಮಾಡಿರುವ ಸುಳ್ಳು ಆರೋಪದಿಂದ ಸಾರ್ವಜನಿಕ ಖ್ಯಾತಿಗೆ ಹಾನಿಯನ್ನುಂಟುಮಾಡುತ್ತವೆ, ಅನಗತ್ಯ ವಿವಾದಗಳಿಗೆ ಕಾರಣವಾಗುತ್ತವೆ ಎಂದು ದೂರಿನ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮೂಲಗಳ ಮಾಹಿತಿ ಪ್ರಕಾರ, ಆರ್ಸಿಎ ಆಡ್ಹಾಕ್ ಸಮಿತಿ ಸದಸ್ಯರಿಗೆ ಐಪಿಎಲ್ ಪಂದ್ಯಗಳ ವೇಳೆ ಸ್ಟೇಡಿಯಂ ಪ್ರವೇಶಕ್ಕೆ ಮಾನ್ಯತೆ ಕಾರ್ಡ್ಗಳನ್ನು ನೀಡದಿರುವುದು ಜೈದೀಪ್ ಸಿಟ್ಟಿಗೆ ಪ್ರಮುಖ ಕಾರಣವಾಗಿತ್ತು. ಇದರಿಂದ ಅವರು ಫ್ರಾಂಚೈಸಿ ವಿರುದ್ಧ ಫಿಕ್ಸಿಂಗ್ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ಲಕ್ನೋ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ತಂಡ ಸುಲಭವಾಗಿ ಗೆಲ್ಲುವ ಪಂದ್ಯವನ್ನು 2 ರನ್ ಅಂತರದಿಂದ ಸೋತಿತ್ತು. ಈ ಸೋಲಿನ ಬಳಿಕ ಜೈದೀಪ್ ಬಿಹಾನಿ ರಾಜಸ್ಥಾನ್ ತಂಡದ ವಿರುದ್ಧ ಫಿಕ್ಸಿಂಗ್ ಆರೋಪ ಮಾಡಿದ್ದರು. ಈ ಸುದ್ದಿ ಕ್ರಿಕೆಟ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು.