Lokayukta Raid: ಅಕ್ರಮ ಆಸ್ತಿ ಗಳಿಕೆ ಆರೋಪ: ತಾವರೆಕೆರೆ ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ಲೋಕಾಯುಕ್ತ ಪೊಲೀಸರು ಕಡತ ಪರಿಶೀಲನೆ ನಡೆಸಿದ್ದಾರೆ. ಈ ಪೈಕಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಗದೀಶ್ ಸೇರಿದ್ದಾರೆ. ಅವರ ಮನೆ ಸೇರಿದಂತೆ ಒಟ್ಟು 6 ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ.

ತುಮಕೂರು: ಆದಾಯಕ್ಕಿಂತ ಹೆಚ್ಚು ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ಶಿರಾ ತಾಲೂಕಿನ ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಗದೀಶ್ ಅವರ ಮನೆ ಸೇರಿದಂತೆ ಒಟ್ಟು 6 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ (Lokayukta Raid). ಡಾ. ಜಗದೀಶ್ ಅವರ ತುಮಕೂರಿನ ಬಟವಾಡಿ ಬಳಿಯ ಮನೆ, ಶಿರಾ ತಾಲೂಕಿನ ಫಾರಂ ಹೌಸ್, ಬರಗೂರಿನಲ್ಲಿರುವ ವಾಣಿಜ್ಯ ಕಟ್ಟಡ, ಮಂಜುನಾಥ್ ನಗರದಲ್ಲಿರುವ ಕಾಂಪ್ಲೆಕ್ಸ್ ಸೇರಿದಂತೆ 6 ಕಡೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿ (Tumkur News) ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ.
ಯಲ್ಪೆನಹಳ್ಳಿ ಗ್ರಾಮದ ವಾಸದ ಮನೆ, ಸಹೋದರ ಕಾಂತರಾಜ್ ಹಾಗೂ ಡಾ. ಜಗದೀಶ್ ಪತ್ನಿ ರೂಪಾ ಹೆಸರಿನಲ್ಲಿರುವ ಮನೆ ಜಮೀನಿನ ಮೇಲೂ ದಾಳಿ ಮಾಡಿ ದಾಖಲಾತಿಗಳ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಶಿರಾ ತಾಲೂಕಿನ ಬರಗೂರಿನಲ್ಲಿ ಅವರ ತಾಯಿ ಹೆಸರಿನಲ್ಲಿ ಆಸ್ತಿ ಪತ್ತೆಯಾಗಿದೆ ಎಂದು ಮೂಲಗಳುಗಳು ತಿಳಿಸಿವೆ.
ಮತ್ತಷ್ಟು ತಪಾಸಣೆ
''ಬರಗೂರಿನಲ್ಲಿ 3 ಕಡೆ, ತುಮಕೂರು ಸೇರಿದಂತೆ ಒಟ್ಟು 6 ಕಡೆ ನಡೆದ ದಾಳಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಮಹತ್ವದ ದಾಖಲೆಗಳನ್ನು ದೊರೆತಿದ್ದು, ಮತ್ತಷ್ಟು ತಪಾಸಣಾ ಕಾರ್ಯ ನಡೆಸಿದ್ದಾರೆʼʼ ಎಂದು ವರದಿ ಹೇಳಿದೆ. ತುಮಕೂರು ಲೋಕಾಯುಕ್ತ ಎಸ್‌ಪಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿ ರಾಮಕೃಷ್ಣ ಕೆ.ಜಿ., ಇನ್ಸ್‌ಪೆಕ್ಟರ್‌ಗಳಾದ ಶಿವರುದ್ರಪ್ಪ ಮೇಟಿ, ಸುರೇಶ್, ಸಲೀಂ ಅಹಮದ್ ಮತ್ತಿತರರು ಪಾಲ್ಗೊಂಡಿದ್ದರು.
ಈ ಸುದ್ದಿಯನ್ನೂ ಓದಿ: Lokayukta Raid: ರಾಜ್ಯದ ಹಲವೆಡೆ ಅಧಿಕಾರಿಗಳ ಮನೆಗೆ ಲೋಕಾಯುಕ್ತ ದಾಳಿ
ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬಿಸಿ
ಬೆಂಗಳೂರು: ರಾಜಧಾನಿ ಬೆಂಗಳೂರು, ಕೋಲಾರ, ತುಮಕೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ಗುರುವಾರ (ಮಾ. 6) ಬೆಳಗ್ಗೆ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರದ ಆರೋಪ ಹೊಂದಿರುವ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ಕಡತ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು, ಕೋಲಾರ, ಕಲಬುರಗಿ, ದಾವಣಗೆರೆ, ತುಮಕೂರು, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಒಟ್ಟು 8 ಅಧಿಕಾರಿಗಳ ನಿವಾಸ, ಕಚೇರಿಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಇವರ ಮೇಲೆ ದಾಖಲೆ ಸಹಿತ ಆರೋಪಗಳು ಸತತವಾಗಿ ಬರುತ್ತಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಾಯುಕ್ತ ದಾಳಿಗೆ ಈಡಾದ ಅಧಿಕಾರಿಗಳು
ಬೆಂಗಳೂರಿನ ಡಿಪಿಎಆರ್ ಚೀಫ್ ಎಂಜಿನಿಯರ್ ಟಿ.ಡಿ.ನಂಜುಂಡಪ್ಪ, ಬಿಬಿಎಂಪಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಎಚ್.ಬಿ.ಕಲ್ಲೇಶಪ್ಪ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಕೋಲಾರದಲ್ಲಿರುವ ಬೆಸ್ಕಾಂ ಎಇಇ ಜಿ.ನಾಗರಾಜ್, ಕಲಬುರಗಿ ಲೋಕೋಪಯೋಗಿ ಚೀಫ್ ಇಂಜಿನಿಯರ್ ಜಗನ್ನಾಥ್, ದಾವಣಗೆರೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಜಿಲ್ಲಾ ಸಂಖ್ಯಾಶಾಸ್ತ್ರೀಯ ಅಧಿಕಾರಿ ಜಿ.ಎಸ್. ನಾಗರಾಜು, ತುಮಕೂರಿನಲ್ಲಿ ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಜಗದೀಶ್ ಅವರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.