Udupi News: ತಂದೆ ಜತೆ ದೇಶ ಸುತ್ತಿದ ಉಡುಪಿ ಯುವಕನಿಗೆ 14 ಲಕ್ಷ ಬೆಲೆಯ ಬೈಕ್ ಗಿಫ್ಟ್ ಕೊಟ್ಟ ಹೀರೋ ಕಂಪನಿ!
Udupi News: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದ ರಾಜೇಂದ್ರ ಶೆಣೈ ಹಾಗೂ ಪುತ್ರ ಪ್ರಜ್ವಲ್ ಶೆಣೈ ಅವರ ಸಾಹಸಗಾಥೆಯ ಮಾಹಿತಿ ಪಡೆದ ಹೀರೋ ಕಂಪನಿ, ಅವರಿಗೆ ತನ್ನ ಮಾಸ್ಟರ್‌ಪೀಸ್ ಎಂದು ಕರೆಯುವ ಸೆಂಟಿನಿಯಲ್ ಸಿಇ- 100 ಬೈಕನ್ನು ನೀಡಿ ಗೌರವಿಸಿದೆ.


ಬೆಂಗಳೂರು: 25 ವರ್ಷದ ಹಳೆಯ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್‌ನಲ್ಲೇ ತಂದೆಯೊಂದಿಗೆ ದೇಶ ಸುತ್ತಿದ ಹಾಗೂ ವಿಶ್ವದ 2ನೇ ಅತೀ ಎತ್ತರದ, ಅತ್ಯಂತ ಕಠಿಣ ಮಾರ್ಗಗಳಲ್ಲಿ ಒಂದಾದ ಕಾಶ್ಮೀರದ ಖರ್ದುಂಗ್ಲಾದಂತಹ ದುರ್ಗಮ ಪ್ರದೇಶಕ್ಕೆ ಬೈಕ್‌ನಲ್ಲಿ ಪ್ರವಾಸ ಮಾಡಿದ್ದ ಉಡುಪಿ ಮೂಲದ ಯುವಕನಿಗೆ ಹೀರೋ ಕಂಪನಿ, ಮರೆಯಲಾಗದ ಉಡುಗೊರೆ ನೀಡಿ ಗೌರವಿಸಿದೆ. ಸುಮಾರು 14 ಲಕ್ಷದ ಮೌಲ್ಯದ ಹೊಚ್ಚ ಹೊಸ ಹೀರೋ ಸೆಂಟೆನಿಯಲ್ (Hero Centennial Bike ) ಸ್ಪೆಷಲ್ ಎಡಿಷನ್ ಬೈಕ್ ಅನ್ನು ಯುವಕನಿಗೆ ಕಂಪನಿ ಹಸ್ತಾಂತರಿಸಿದೆ.
ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದ ರಾಜೇಂದ್ರ ಶೆಣೈ ಹಾಗೂ ಪುತ್ರ ಪ್ರಜ್ವಲ್ ಶೆಣೈ (Prajwal Shenoy) ಅವರ ಸಾಹಸಗಾಥೆಯ ಮಾಹಿತಿ ಪಡೆದ ಹೀರೋ ಕಂಪನಿ, ಅವರಿಗೆ ತನ್ನ ಮಾಸ್ಟರ್‌ಪೀಸ್ ಎಂದು ಕರೆಯುವ ಸೆಂಟಿನಿಯಲ್ ಸಿಇ- 100 ಬೈಕನ್ನು ನೀಡಿ ಗೌರವಿಸಿದೆ. ಶನಿವಾರ ಉಡುಪಿಯ ಹೀರೋ ಶೋರೂಂನಲ್ಲಿ ಅವರಿಗೆ ಈ ಬೈಕನ್ನು ಹಸ್ತಾಂತರಿಸಲಾಗಿದೆ.

ತಂದೆ-ಮಗ 25 ವರ್ಷ ಹಳೆಯ ಈ ಹೀರೋ ಸ್ಪ್ಲೆಂಡರ್ ಬೈಕ್‌ನಲ್ಲಿ ಈವರೆಗೆ 17 ರಾಜ್ಯಗಳನ್ನು ಸಂಚರಿಸಿದ್ದಾರೆ. ತಿರುಪತಿ, ಮಧುರೈ, ಕನ್ಯಾಕುಮಾರಿ, ಪುರಿ, ಶಿರಡಿ, ನಾಸಿಕ್, ಪಂಡರಾಪುರ, ಅಯೋಧ್ಯೆ ಹೀಗೆ ಹತ್ತಾರು ಪುಣ್ಯಕ್ಷೇತ್ರಗಳಿಗೆ ಹೋಗಿ ಬಂದಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರ ಸೇರಿ ಇತ್ತೀಚೆಗೆ ಪ್ರಯಾಗ್ ರಾಜ್‌ನ ಮಹಾಕುಂಭಮೇಳಕ್ಕೂ ಹೋಗಿ ಬಂದಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಪ್ರವಾಸಗಳು ಸೇರಿದಂತೆ ಒಂದೇ ಬೈಕ್‌ನಲ್ಲಿ ಭಾರತದಾದ್ಯಂತ 50,000 ಕಿಲೋಮೀಟರ್‌ಗಳಿಂತ ಹೆಚ್ಚು ದೂರ ಪ್ರಯಾಣಿಸಿ ಗಮನ ಸೆಳೆದಿದ್ದರು.
ಈ ಪ್ರಯಾಣದಲ್ಲಿ ತಂದೆ-ಮಗ ಜೋಡಿ ಕೇವಲ ಒಂಬತ್ತು ದಿನಗಳಲ್ಲಿ 4,000 ಕಿ.ಮೀ.ಗಳಿಗೂ ಹೆಚ್ಚು ದೂರ ಕ್ರಮಿಸಿ ಅಯೋಧ್ಯೆ ತಲುಪುವ ಮುನ್ನ ಮಹಾಕುಂಭಮೇಳಕ್ಕಾಗಿ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದರು. ಪ್ರಜ್ವಲ್ ಅವರ ಕಾಶ್ಮೀರ, ತಿರುಪತಿ, ಮಧುರೈ, ಕನ್ಯಾಕುಮಾರಿ, ಗೋವಾ, ಪುರಿ, ಶಿರಡಿ, ನಾಸಿಕ್ ಮತ್ತು ಪಂಢರಪುರಕ್ಕೆ ಬೈಕ್ ರೈಡ್ ಮಾಡಿರುವುದನ್ನು ಗುರುತಿಸಿದ ಹೀರೋ ಮೋಟೋಕಾರ್ಪ್ (Hero MotoCorp) ಸಂಸ್ಥೆ ಅವರಿಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸ್ಪೆಷಲ್ ಎಡಿಷನ್ ಬೈಕ್ ಅನ್ನು ಉಚಿತವಾಗಿ ನೀಡಿ, ತಮ್ಮ ಅತ್ಯುತ್ತಮ ಗ್ರಾಹಕ ಎಂಬ ಪ್ರಶಸ್ತಿ ನೀಡಿದೆ.
ಈ ಸುದ್ದಿಯನ್ನೂ ಓದಿ | ಚೊಚ್ಚಲ ಬಿಡಬ್ಲ್ಯೂಎಫ್ ಪ್ರಶಸ್ತಿ ಗೆದ್ದ ಆಯುಷ್ ಶೆಟ್ಟಿ; ತನ್ವಿ ರನ್ನರ್ ಅಪ್
ಹೀರೋ ಸೆಂಟೆನಿಯಲ್ ವಿಶೇಷತೆಯೇನು?
ಹೀರೋ ಮೋಟೋಕಾರ್ಪ್ ಸಂಸ್ಥೆಯು ಪ್ರಜ್ವಲ್‌ಗೆ ಹೊಚ್ಚ ಹೊಸ ಹೀರೋ ಸೆಂಟೆನಿಯಲ್ (Hero Centennial) ಸ್ಪೆಷಲ್ ಎಡಿಷನ್ ಬೈಕ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಅವರನ್ನು ಗೌರವಿಸಿದೆ. ಹೀರೋ ಮೋಟೋಕಾರ್ಪ್ ಸಂಸ್ಥಾಪಕ ಡಾ.ಬ್ರಿಜ್‌ಮೋಹನ್ ಲಾಲ್ ಮುಂಜಾಲ್ ಅವರ 101ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಸೆಂಟೆನಿಯಲ್ ಎಡಿಷನ್ ಬೈಕ್ ಹೊರತರಲಾಗಿದೆ. ಭಾರತದಲ್ಲಿ ಕೇವಲ 100 ಬೈಕ್‌ಗಳು ಮಾತ್ರವೇ ಲಭ್ಯವಿದ್ದು, ಇದರಲ್ಲಿ ಒಂದು ಉಚಿತವಾಗಿ ಪ್ರಜ್ವಲ್‌ಗೆ ವಿತರಿಸಲಾಗಿದೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 14 ಲಕ್ಷ ರೂಪಾಯಿ ಎನ್ನಲಾಗಿದೆ. ಹೊಸ ಬೈಕ್ ಅನ್ನು ಕಂಡು ಪ್ರಜ್ವಲ್ ಭಾವುಕರಾಗಿದ್ದು, ಉಡುಪಿಯಲ್ಲಿ ಶಕ್ತಿ ಶೋರೂಂ ಕೇಕ್ ಕಟ್ ಮಾಡಿಸಿ ಬೈಕ್ ಹಸ್ತಾಂತರಿಸಿದೆ.