Pre Wedding Photoshoot : ಉಡುಪಿ ಕೃಷ್ಣ ಮಠ ರಥ ಬೀದಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೊಶೂಟ್ ನಿಷೇಧ
ರಥೋತ್ಸವ ನಡೆಯುವ ಉಡುಪಿ ರಥಬೀದಿಯಲ್ಲಿ ಪ್ರಿ ವೆಡ್ಡಿಂಗ್, ಮದುವೆ ಬಳಿಕದ ಫೋಟೋ, ವಿಡಿಯೋ ಶೂಟ್ ನಿಷೇಧಿಸಿ ಶ್ರೀಕೃಷ್ಣ ಮಠದ ಆಡಳಿತ ಮಂಡಳಿ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಭಕ್ತರಿಂದ ಬಂದ ದೂರುಗಳ ಆಧಾರದ ಮೇಲೆ ಆಡಳಿತ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.


ಉಡುಪಿ: ಇತ್ತೀಚಿನ ದಿನಗಳಲ್ಲಿ ಫೋಟೋ ಶೂಟ್ ಟ್ರೆಂಡ್ ಹೆಚ್ಚಾಗಿದೆ. ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಶೂಟ್ ಎಂದು ಎಲ್ಲಡೆ ಫೋಟೋ ತೆಗೆಸಿಕೊಳ್ಳುತ್ತಾರೆ. ಈಗಾಗಲೇ ಹಲವು ಧಾರ್ಮಿಕ ಕ್ಷೇತ್ರಗಳಲ್ಲಿ ಇಂತಹ ಫೋಟೋ ಶೂಟ್‌ಗಳಿಗೆ ನಿಷೇಧ ಹೇರಲಾಗಿದೆ. ಇದೀಗ ರಥೋತ್ಸವ ನಡೆಯುವ ಉಡುಪಿ ರಥಬೀದಿಯಲ್ಲಿ ಪ್ರಿ ವೆಡ್ಡಿಂಗ್, ಮದುವೆ ಬಳಿಕದ ಫೋಟೋ, ವಿಡಿಯೋ ಶೂಟ್ ನಿಷೇಧಿಸಿ ಶ್ರೀಕೃಷ್ಣ ಮಠದ ಆಡಳಿತ ಮಂಡಳಿ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಭಕ್ತರಿಂದ ಬಂದ ದೂರುಗಳ ಆಧಾರದ ಮೇಲೆ ಆಡಳಿತ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ನಿಯಮವನ್ನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ವಿಧಸಲಾಗುವುದು ಎಂದು ತಿಳಿಸಲಾಗಿದೆ.
ಶ್ರೀಕೃಷ್ಣ ಮಠ, ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಪುರಾತನ ದೇವಸ್ಥಾನ, ಕನಕಗೋಪುರ, ಅಷ್ಟಮಠಗಳ ಎದುರು, ರಥಬೀದಿಯಲ್ಲಿ ಬೆಳಗ್ಗಿನಿಂದಲೇ ಫೋಟೋ ಶೂಟ್‌ಗಳು ನಡೆಯುತ್ತಿದ್ದವು. ಇದರಿಂದ ಭಕ್ತರಿಗೆ ಅನಾನೂಕೂಲವಾಗುತ್ತಿತ್ತು. ಅನುಚಿತ ಮತ್ತು ಮುಜುಗರದ ವೀಡಿಯೊಗಳ ಚಿತ್ರೀಕರಣವನ್ನು ಅನುಮತಿಸದಿರಲು ಪುತ್ತಿಗೆ ಮಠವು ನಿರ್ಧರಿಸಿದೆ, ಪ್ರಿ ವೆಡ್ಡಿಂಗ್ ಚಿತ್ರೀಕರಣದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದೆ.
ಫೋಟೋ ಶೂಟ್‌ಗೆ ಎಂದು ಬಂದ ಜೋಡಿಗಳು ಅಸಭ್ಯ ವರ್ತನೆಯಲ್ಲಿ ತೊಡಗಿದ್ದಾರೆ. ಕೇರಳ ಬೆಂಗಳೂರು ಸೇರಿದಂತೆ ಹಲವು ಕಡೆಗಳಿಂದ ಬರುವ ಫೋಟೋಗ್ರಾಫರ್‌ಗಳ ಹಾವಳಿ ಎಚ್ಚಗಿದೆ ಎಂದು ಜನರು ದೂರಿದ್ದಾರೆ. ಅಷ್ಟೇ ಅಲ್ಲದೆ ಡ್ರೋನ್‌ಗಳನ್ನು ಹಾರಿಸಲಾಗುತ್ತದೆ, ಇದರಿಂದ ಭಕ್ತರ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ ಎಂಬ ಅಂಶವನ್ನು ಆಡಳಿತ ಮಂಡಳಿ ಗಮನಿಸಿದೆ. ಅಷ್ಟಮಠಗಳು ಇರುವ ರಥಬೀದಿಯಾಗಿದೆ. ಇಲ್ಲಿ ಜೋಡಿಹಕ್ಕಿಗಳು ಸರಸ ಸಲ್ಲಾಪ ನಡೆಸುವುದು ಸರಿಯಲ್ಲ. ಹಾಗೆ ಮಾಡುವುದರಿಂದ ಧಾರ್ಮಿಕ ವಾತಾವರಣಕ್ಕೆ ಅಡ್ಡಿ ಆಗುತ್ತದೆ. ಹೀಗಾಗಿ ಮುಜುಗರದ ಸನ್ನಿವೇಶ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಠ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: ರಸ್ತೆ ಗುಂಡಿಗಳ ನಡುವೆ ನಡೆದು ವಧುವಿನ ಫೋಟೋ ಶೂಟ್...!
ಪುತ್ತಿಗೆ ಮಠದ ಪ್ರತಿನಿಧಿ ಗೋಪಾಲ್ ಆಚಾರ್ಯ ಮಾತನಾಡಿ ರಥಬೀದಿಯ ಆಧ್ಯಾತ್ಮಿಕ ಮಹತ್ವದ ಕುರಿತು ವಿವರಿಸಿದ್ದಾರೆ. ಇಲ್ಲಿ ವಿವಿಧ ಉತ್ಸವಗಳನ್ನು ಆಯೋಜಿಸಲಾಗುತ್ತದೆ ಮತ್ತು ಗೌರವಾನ್ವಿತ ಮಠಾಧೀಶರು ಮತ್ತು ಗಣ್ಯರು ಸಂಚರಿಸುತ್ತಾರೆ ಹಾಗೂ ಕೆಲ ಭಕ್ತರಿಗೆ ಇದರಿಂದ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ ಹಾಗಾಗಿ ರಥಬೀದಿಯಲ್ಲಿ ಯಾವುದೇ ರೀತಿಯ ಫೋಟೋ ಶೂಟ್‌ಗಳನ್ನು ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.