ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Udupi Rains: ಉಡುಪಿಯಲ್ಲಿ ಮಳೆ ಆರ್ಭಟ; ಮಣಿಪಾಲ ರಸ್ತೆಯಲ್ಲಿ ಪ್ರವಾಹದಂತೆ ಹರಿದ ಕೆಸರು, ಕಲ್ಲುಗಳ ರಾಶಿ

Uduapi Rains: ಉಡುಪಿಯಲ್ಲಿ ಕಳೆದ ಮೂರು ಗಂಟೆಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದ ಉಡುಪಿ-ಮಣಿಪಾಲ ರಸ್ತೆಯಲ್ಲಿ ಪ್ರವಾಹದಂತೆ ಕೆಸರು, ಕಲ್ಲುಗಳ ರಾಶಿ ಹರಿಯುತ್ತಿದ್ದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ವಾಹನ ಸವಾರರು ಪರ್ಯಾಯ ಮಾರ್ಗ ಬಳಸಿ ಮಣಿಪಾಲಕ್ಕೆ ತೆರಳುತ್ತಿದ್ದಾರೆ.

ಮಣಿಪಾಲ ರಸ್ತೆಯಲ್ಲಿ ಪ್ರವಾಹದಂತೆ ಹರಿದ ಕೆಸರು, ಕಲ್ಲುಗಳ ರಾಶಿ

Profile Prabhakara R May 20, 2025 2:36 PM

ಉಡುಪಿ: ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಬಿರುಸಿನ ಮಳೆಯಿಂದಾಗಿ (Udupi Rains) ಉಡುಪಿ-ಮಣಿಪಾಲ ರಸ್ತೆಯಲ್ಲಿ ಮಂಗಳವಾರ ಕೃತಕ ಪ್ರವಾಹ ಸೃಷ್ಟಿಯಾಗಿದ್ದು, ಕೆಸರು, ಕಲ್ಲುಗಳ ರಾಶಿ ಹರಿದುಬಂದಿದ್ದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಮಣಿಪಾಲದ ಐನಾಕ್ಸ್ ಬಳಿಯ ರಸ್ತೆ ಸಂಪೂರ್ಣವಾಗಿ ಮುಳುಗಿ, ನದಿಯಂತೆ ನೀರು ಹರಿದಿದ್ದು, ಕೆಸರು ನೀರಿನ ಜತೆಗೆ ಕಲ್ಲು ಮಣ್ಣು ರಸ್ತೆ ಮೇಲೆ ಹರಿದಿದೆ. ಉಡುಪಿಯ ಪ್ರಮುಖ ರಸ್ತೆಯಾಗಿರುವ ಇಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆ ಹರಿದಿದೆ ಎಂದು ಹೇಳಲಾಗಿದೆ.

ನಾಲ್ಕು ಚಕ್ರದ ವಾಹನಗಳು ಮತ್ತು ಭಾರೀ ವಾಹನಗಳು ಸಹ ಮುಳುಗಿದ ರಸ್ತೆಯಲ್ಲಿ ಸಂಚರಿಸಲು ತುಂಬಾ ಕಷ್ಟಕರವಾಗಿತ್ತು. ಬೆಳಗ್ಗೆಯಿಂದಲೇ ಇದೇ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದು, ಅಲ್ಲದೆ ಮಣಿಪಾಲಕ್ಕೆ ಪರ್ಯಾಯ ಮಾರ್ಗಗಳ ಮೂಲಕ ತೆರಳುತ್ತಿದ್ದಾರೆ.



ಮಣಿಪಾಲ, ಪರ್ಕಳ ಭಾಗದಲ್ಲಿ ವಿಪರೀತ ಮಳೆಯಾದ ಕಾರಣ ಬೆಟ್ಟದ ಮೇಲಿಂದ ಹರಿದ ಭಾರೀ ಪ್ರಮಾಣದ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದೆ. ಮಣಿಪಾಲ- ಲಕ್ಷ್ಮೀಂದ್ರ ನಗರ ಇಳಿಜಾರು ಪ್ರದೇಶವು ಕೆಸರು ನೀರಿನಿಂದ ಜಲಾವೃತವಾಗಿದೆ. ಉಡುಪಿ ಮಣಿಪಾಲ ರಸ್ತೆಯಲ್ಲಿ ಪೊಲೀಸರು ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದು, ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮತ್ತು ಸುತ್ತಮುತ್ತಲ ಬಹು ಮಹಡಿ ಕಟ್ಟಡಗಳು ನೀರು ಹರಿಯುವ ಕಾಲುವೆಗಳನ್ನು ಒತ್ತುವರಿ ಮಾಡಿದ್ದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿಯಾದ ಎಲ್ಲಾ ಕಟ್ಟಡದ ಪಾರ್ಕಿಂಗ್ ಪ್ರದೇಶಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | ‌Bengaluru Rain: ಬೆಂಗಳೂರಿನಲ್ಲಿ ಮಳೆ ಅನಾಹುತ, ಈ ಮಾರ್ಗಗಳನ್ನು ಬಳಸದಿರಲು ಟ್ರಾಫಿಕ್‌ ಅಲರ್ಟ್

ಇನ್ನೂ 5 ದಿನ ಸುರಿಯಲಿದೆ ಸೈಕ್ಲೋನ್‌ ಮಳೆ!

ಬೆಂಗಳೂರು: ಭಾನುವಾರ ರಾತ್ರಿಯಡೀ ಸುರಿದ ಭಾರೀ ಮಳೆಗೆ ಬೆಂಗಳೂರಿಗ (Bengaluru Rain) ತತ್ತರಿಸಿ ಹೋಗಿದ್ದಾನೆ. ಇಷ್ಟಕ್ಕೇ ಮುಗಿದಿಲ್ಲ, ಇನ್ನೂ 5 ದಿನ ಇದೇ ರೀತಿಯ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರ್ನಾಟಕ ರಾಜ್ಯದಾದ್ಯಂತ ಮುಂಗಾರುಪೂರ್ವ ಮಳೆಯ (Karnataka rain news) ಅಬ್ಬರ ಜೋರಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರಾತ್ರಿಯಿಡಿ ಮಳೆ ಸುರಿದಿದೆ. ಚಂಡಮಾರುತದ (Cyclone) ಪರಿಣಾಮ ಇನ್ನು 5 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ.

ಭಾನುವಾರ ರಾತ್ರಿಯ ಮಳೆಗೆ ಇಡೀ ಬೆಂಗಳೂರೇ ಬೃಹತ್‌ ಕೆರೆಯಾಗಿಬಿಟ್ಟಿದೆ. ಸಿಲಿಕಾನ್​ ಸಿಟಿ ಮಂದಿ ಬೆಚ್ಚಿಬಿದ್ದಿದ್ದಾರೆ. ತಗ್ಗು ಪ್ರದೇಶಗಳಲ್ಲಿರುವ ಮನೆಗಳು ಜಲಾವೃತಗೊಂಡಿವೆ. ರಸ್ತೆಗಳು ನೀರಿನಲ್ಲಿ ಮುಳುಗಿ ವಾಹನ ಸವಾರರು ಕೈಚೆಲ್ಲಿದರು. ವೀಕೆಮಡ್‌ ರಜೆ ಮುಗಿಸಿ ಊರಿನಿಂದ ಬರುತ್ತಿದ್ದ ವಾಹನ ಸವಾರರು ಬೆಳ್ಳಂಬೆಳಗ್ಗೆಯೇ ನೆಲಮಂಗಲ, ಗೊರಗುಂಟೆಪಾಳ್ಯ, ಸಿಲ್ಕ್‌ ಬೋರ್ಡ್‌, ಮೈಸೂರು ರಸ್ತೆ ಜಂಕ್ಷನ್ ಮುಂತಾದ ಕಡೆ ಉಂಟಾದ ಗಂಟೆಗಟ್ಟಲೆ ಟ್ರಾಫಿಕ್​ ಜಾಮ್‌ನಲ್ಲಿ ಸಿಕ್ಕಿಬಿದ್ದು ಪರದಾಡಿದರು.

ಚಂಡಮಾರುತ ವೈಪರೀತ್ಯದಿಂದಾಗಿ ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಬಹುತೇಕ ಒಳನಾಡು ಜಿಲ್ಲೆಗಳ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮುಂಗಾರು ಪೂರ್ವ ಮಳೆಯ ಆರ್ಭಟ ಕೂಡ ಮುಂದುವರಿಯಲಿದೆ. ರಾಜ್ಯದ ವಿವಿಧೆಡೆ ಭಾರೀ ಮಳೆ ದಾಖಲಾಗಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಕಡೆ ಮಳೆ ಹಾನಿ ಉಂಟಾಗಿದೆ. ಮುಂದಿನ 5 ದಿನ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ತಜ್ಞರು ಖಚಿತಪಡಿಸಿದ್ದಾರೆ.

ಬೆಂಗಳೂರಿನಾದ್ಯಂತ ದಾಖಲೆಯ ಮಳೆಯಾಗಿದ್ದು, ರಾತ್ರಿಯಿಂದ ಬೆಳಿಗ್ಗೆ 5:30 ರವರೆಗೆ 104 ಮಿ.ಮೀ. ಮಳೆಯಾದುದು ದಾಖಲಾಗಿದೆ. ಕಳೆದ 10 ವರ್ಷಗಳಲ್ಲಿ ಮೇ ತಿಂಗಳಿನಲ್ಲಿ ದಾಖಲಾಗಿರುವ ಅತಿ ಹೆಚ್ಚು ಮಳೆ ಇದಾಗಿದೆ. ಹವಾಮಾನ ಇಲಾಖೆ ಮುಂದಿನ 5 ದಿನ ಮತ್ತಷ್ಟು ಮಳೆಯಾಗುವ ಎಚ್ಚರಿಕೆ ನೀಡಿದ್ದು, ನಗರದಲ್ಲಿ ರಾತ್ರಿ ಅಥವಾ ಸಂಜೆ ಬಳಿಕ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಇಂದು ಕೂಡ ಬೆಂಗಳೂರಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇನ್ನು ಬೆಳಗಾವಿ, ಧಾರವಾಡ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಈ ಜಿಲ್ಲೆಗಳಿಗೆ ನಾಳೆ ನಾಡಿದ್ದು ಆರೆಂಜ್ ಅಲರ್ಟ್ ನೀಡಲಾಗಿದೆ. ಉಳಿದಂತೆ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೆಲ ಭಾಗದಲ್ಲಿ ಆರೆಂಜ್ ಅಲರ್ಟ್ ನೀಡಿದ್ದು, ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಸಂಭವಿಸುವ ಸಾಧ್ಯತೆ ಇದೆ.