Ragging Case: ವಿಜಯಪುರ ಮೆಡಿಕಲ್ ಕಾಲೇಜಿನಲ್ಲಿ ರ‍್ಯಾಗಿಂಗ್ ; ಜಮ್ಮು ಕಾಶ್ಮೀರ ವಿದ್ಯಾರ್ಥಿ ಮೇಲೆ ಹಲ್ಲೆ
ವಿಜಯಪುರದ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯ ಮೇಲೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕ್ಷುಲಕ ಕಾರಣಕ್ಕೆ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಲಾಗಿದೆ. ಸದ್ಯ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಸಾಂದರ್ಭಿಕ ಚಿತ್ರ

ವಿಜಯಪುರ: ನಗರದ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯ ಮೇಲೆ ಹಿರಿಯ ವಿದ್ಯಾರ್ಥಿಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್-ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಹಮೀಮ್ ಎಂಬಾತ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯವನಾಗಿದ್ದಾನೆ. ಸದ್ಯ ಆತ ಹಲ್ಲೆ ಬಗ್ಗೆ ದೂರು ನೀಡಿದ್ದು, ಮಂಗಳವಾರ ಸಂಜೆ ಕ್ರಿಕೆಟ್ ಪಂದ್ಯದ ಸಮಯದಲ್ಲಿ 2019 ರ ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳು ತನಗೆ ರ‍್ಯಾಗಿಂಗ್ (Ragging Case) ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ.
ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಹಮೀಮ್ ಕಾಲೇಜು ಆವರಣದಲ್ಲಿ 2019 ಮತ್ತು 2022 ರ ಬ್ಯಾಚ್‌ಗಳ ನಡುವಿನ ಪಂದ್ಯ ನಡೆಯುತ್ತಿದ್ದಾಗ, , ಹಿರಿಯ ವಿದ್ಯಾರ್ಥಿಯೊಬ್ಬ ಅವನಿಗೆ ಬೌಂಡರಿ ಗೆರೆಯ ಹೊರಗೆ ಇರುವಂತೆ ಆದೇಶಿಸಿದನು. ಹಮೀಮ್ ಮರು ಮಾತಾಡದೆ ಹಿರಿಯ ವಿದ್ಯಾರ್ಥಿಯ ಆದೇಶವನ್ನು ಪಾಲಿಸಿದ್ದಾನೆ. ಹಿರಿಯ ವಿದ್ಯಾರ್ಥಿಗಳ ಗುಂಪು ವಿನಾಕಾರಣವಾಗಿ ಹಮೀಮ್ ಮೇಲೆ ಜಗಳಕ್ಕೆ ಬಂದಿದೆ. ಅದಕ್ಕೆ ಹಮೀಮ್ ಪ್ರತಿರೋಧ ಒಡ್ಡಿದ್ದಾನೆ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಹಿರಿಯ ವಿದ್ಯಾರ್ಥಿಗಳು ಆತನಿಗೆ ರ‍್ಯಾಗಿಂಗ್ ಮಾಡಿದೆ. ಅವರ ಮನರಂಜನೆಗಾಗಿ, ನೃತ್ಯ ಮಾಡು, ಹಾಡು ಹೇಳು ಎಂದು ಆದೇಶ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಸೀನಿಯರ್ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಆಗ ಹಮೀಮ್ ಪ್ರತಿರೋಧ ಒಡ್ಡಿದ್ದಾನೆ.
ಅದೇ ದಿನ ಸಂಜೆ ಸುಮಾರು ಆರು ಗಂಟೆಯ ಸಮಯಕ್ಕೆ ಎಂಟು ಜನರ ತಂಡವೊಂದು ಹಮೀಮ್ ಇದ್ದ ಹಾಸ್ಟೆಲ್ ಕೋಣೆಗೆ ನುಗ್ಗಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಆತನಿಗೆ ವಿಡಿಯೋ ಮೂಲಕ ಕ್ಷಮೆ ಹಾಕುವಂತೆ ಹೇಳಿದ್ದಾರೆ. ಒಂದು ವೇಳೆ ಹಮೀಮ್ ಹಾಗೆ ಮಾಡದೆ ಹೋದರೆ ಮತ್ತಷ್ಟು ಹಲ್ಲೆ ನಡೆಸುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ. ಹಲ್ಲೆ ನಡೆಸಿದವರು ನೀವು ಇಲ್ಲಿ ಇನ್ನೂ ನಾಲ್ಕು ವರ್ಷ ಇರಬೇಕು, ನಾವು ಸ್ಥಳೀಯರು -ನಿನ್ನ ಜೀವನವನ್ನು ನಾವು ಎಷ್ಟು ಭಯಾನಕಗೊಳಿಸಬಹುದು ಎಂದು ಊಹಿಸಿಕೋ ಎಂದು ಬೆದರಿಸಿದ್ದಾರೆ. ಹೆಚ್ಚುವರಿಯಾಗಿ, ಅವರು ಅವನಿಗೆ ಕಾಲೇಜಿನಲ್ಲಿ ಕ್ರಿಕೆಟ್ ಆಡುವುದನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Kerala Ragging: ಕೇರಳ ರ‍್ಯಾಗಿಂಗ್ ಪ್ರಕರಣ: ಆರೋಪಿ ವಿದ್ಯಾರ್ಥಿಗಳು ಅರೆಸ್ಟ್-ಕಾಲೇಜಿನಿಂದ ಡಿಸ್ಮಿಸ್!
Kashmiri MBBS Student Brutally Ragged and Assaulted in Karnataka’s Al-Ameen Medical College
— Nasir Khuehami (ناصر کہویہامی) (@NasirKhuehami) February 19, 2025
In a deeply disturbing incident, Hamim, a second-year MBBS student from Anantnag, Kashmir, studying at Al-Ameen Medical College, Bijapur, Karnataka, was subjected to brutal ragging and…
ಸದ್ಯ ಘಟನೆಯ ಬಗ್ಗೆ ವರದಿಯಾಗುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘದ ರಾಷ್ಟ್ರೀಯ ಸಂಚಾಲಕ ನಾಸಿರ್ ಖುಯೇಹಾಮಿ ಈ ಘಟನೆಯನ್ನು ಖಂಡಿಸಿದ್ದಾರೆ. ಕರ್ನಾಟಕ ಮುಖ್ಯಮಂತ್ರಿಗಳು ಈ ವಿಷಯದಲ್ಲಿ ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ, ಸಂತ್ರಸ್ತನಿಗೆ ನ್ಯಾಯ ದೊರಕಿಸಿಕೊಡುವಂತೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಹಲ್ಲೆಕೋರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಒತ್ತಾಯಿಸುತ್ತೇವೆ" ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.