Police station attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಕೇಸ್; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು
Police station attack: ಪ್ರಕರಣದಲ್ಲಿ ಪ್ರತಾಪ್ ಸಿಂಹ ಅವರ ವಿರುದ್ಧ ತನಿಖೆ ಮಾಡುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ. ಆರೋಪಿ ಸುರೇಶ್, ಪ್ರತಾಪ್ ಸಿಂಹನ ಬಂಟನಾಗಿದ್ದಾನೆ. ಮೈಸೂರಿನ ಶಾಂತಿ ಕೆಡಿಸುವುದರಲ್ಲಿ ಪ್ರತಾಪಸಿಂಹ ಕೈವಾಡವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಮೈಸೂರು: ಉದಯಗಿರಿ ಪೊಲೀಸ್ ಠಾಣೆಗೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ದೂರು ದಾಖಲಾಗಿದೆ. ಯುವ ಕಾಂಗ್ರೆಸ್‌ನಿಂದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದ್ದು, ಪ್ರಕರಣದ ಪ್ರಮುಖ ರೂವಾರಿಯೇ ಪ್ರತಾಪ್ ಸಿಂಹ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಲ್ಲು ತೂರಾಟ ಪ್ರಕರಣದಲ್ಲಿ ಪ್ರತಾಪ್ ಸಿಂಹ ಅವರ ವಿರುದ್ಧ ತನಿಖೆ ಮಾಡುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ. ಆರೋಪಿ ಸುರೇಶ್, ಪ್ರತಾಪ್ ಸಿಂಹನ ಬಂಟನಾಗಿದ್ದಾನೆ. ಮೈಸೂರಿನ ಶಾಂತಿ ಕೆಡಿಸುವುದರಲ್ಲಿ ಪ್ರತಾಪಸಿಂಹ ಕೈವಾಡವಿದೆ. ಇಬ್ಬರನ್ನು ತನಿಖೆಗೆ ಒಳಪಡಿಸಿದರೆ ಸತ್ಯಾಂಶ ಹೊರಬರುತ್ತದೆ ಎಂದು ದೂರಿನಲ್ಲಿ ಕೋರಲಾಗಿದೆ.
ಏನಿದು ಪ್ರಕರಣ?
ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಅಣಕ ಮಾಡಿ ಹಾಕಿದ್ದ. ಒಂದು ಸಮುದಾಯಕ್ಕೆ ಅವಮಾನ ಮಾಡುವ ರೀತಿಯ ವಾಕ್ಯಗಳನ್ನು ಬರೆದಿದ್ದ. ಇದು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿತ್ತು.
ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗಿತ್ತು. ಕೂಡಲೇ ಉದಯಗಿರಿ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಆ ಪೋಸ್ಟ್ ಒಂದು ಸಮುದಾಯದ ಯುವಕರನ್ನು ರೊಚ್ಚಿಗೆಬ್ಬಿಸಿದ್ದು, ತಕ್ಷಣ ಅವರು ಉದಯಗಿರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಪೊಲೀಸರು, ಕೆಲ ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ಮುಖಂಡರು ಅಲ್ಲಿದ್ದ ಯುವಕರಿಗೆ ಶಾಂತಿ ಕಾಪಾಡುವಂತೆ ಮನವರಿಕೆ ಮಾಡಲು ಪ್ರಯತ್ನಿಸಿದ್ದರು. ಆದರೆ ಗುಂಪು ಇದನ್ನು ಕೇಳದೆ, ಘೋಷಣೆ ಕೂಗುತ್ತಾ ಪೊಲೀಸರು ಹಾಗೂ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಈ ಸುದ್ದಿಯನ್ನೂ ಓದಿ | Lakshmi Hebbalkar: ಜಿಲ್ಲಾ ಉಪ ನಿರ್ದೇಶಕರ ಮೂಲಕವೇ ಗೃಹಲಕ್ಷ್ಮೀ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಜಮಾ: ಲಕ್ಷ್ಮೀ ಹೆಬ್ಬಾಳಕರ್
ಎಫ್‌ಐಆರ್ ವಿಳಂಬ ಮಾಡಿದ್ದೇ ಘಟನೆಗೆ ಕಾರಣ
ಮೈಸೂರು: ಉದಯಗಿರಿ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಈವರೆಗೂ 15ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಕ್ಕೆ ಸಂಬಂಧಿಸಿ ಕಾಂಗ್ರೆಸ್, ಬಿಜೆಪಿ ನಾಯಕರು ಆರೋಪ ಪ್ರತ್ಯಾರೋಪ ಮುಂದುವರಿಸಿದ್ದಾರೆ. ಈ ನಡುವೆ ಆರೋಪಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ್ದೇ ಗಲಾಟೆಗೆ ಕಾರಣ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಅವಹೇಳನಕಾರಿ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು ಬಹಳ ಖಂಡನೀಯ. ಈ ಪೋಸ್ಟ್ ಸಂಬಂಧಿದ ಆರೋಪಿಯನ್ನು ಬಂಧಿಸಬೇಕು ಎಂದು ಪ್ರತಿಭಟನೆ ನಡೆಯಿತು. ಆದರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುವ ಕೆಲಸವನ್ನು ಹಿಂದಿನಿಂದಲೂ ಈ ಆರ್.ಎಸ್.ಎಸ್ ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಳಗ್ಗೆ 10.30ಕ್ಕೆ ಆರೋಪಿಯನ್ನು ಬಂಧಿಸಿ ತಕ್ಷಣ ಕಾನೂನು ಪ್ರಕ್ರಿಯೆ ಮುಗಿಸಿ ಜೈಲಿಗೆ ಕಳಿಸಬೇಕಿತ್ತು. ಆದರೆ ಪೋಲಿಸರು ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದು ಗಲಭೆಗೆ ಕಾರಣವಾಗಿದೆ. ನಾವು ಅಂದು ಪ್ರಕ್ಷುಬ್ಧ ವಾತಾವರಣ ತಿಳಿ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದೆವು. ತಡರಾತ್ರಿವರೆಗೂ ನಾವು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಮಾಧಾನ ಪಡಿಸಿದ್ದೇವೆ. ಜವಾಬ್ದಾರಿಯುತ ನಾಯಕರಾಗಿ ತಕ್ಷಣಕ್ಕೆ ನಾವು ಶಾಂತಿಯನ್ನು ಕಾಪಾಡುವುದು ನಮ್ಮ ಕರ್ತವ್ಯ, ಅದನ್ನು ನಾವು ಸರಿಯಾಗಿ ನಿರ್ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.