CM Siddaramaiah: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಬಿ ರಿಪೋರ್ಟ್ ನೀಡಲು ಲೋಕಾಯುಕ್ತ ಸಿದ್ಧತೆ
ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಅವರ ಸಹೋದರ ಮಲ್ಲಿಕಾರ್ಜನಯ್ಯ ಸ್ವಾಮಿ ಹಾಗೂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಅವರ ಬಗೆಗಿನ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಹಾಗಾಗಿ, ಅವರಿಗೆ ಬಿ ರಿಪೋರ್ಟ್ ಸಲ್ಲಿಸಲಾಗುತ್ತದೆ ಎಂದು ಲೋಕಾಯುಕ್ತ ತಿಳಿಸಿದೆ.

ಸಿಎಂ ಸಿದ್ದರಾಮಯ್ಯ

ಮೈಸೂರು: ಮುಡಾ ಹಗರಣದಲ್ಲಿ (MUDA Scam, MUDA case) ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಅವರ ಕುಟುಂಬಸ್ಥರಿಗೆ ಲೋಕಾಯುಕ್ತ (Lokayukta) ಕ್ಲೀನ್ ಚಿಟ್ ನೀಡಿದೆ. ಫೆ. 20ರಂದು ತನ್ನ ತನಿಖಾ ವರದಿಯನ್ನು ಬಿ ರಿಪೋರ್ಟ್ (B Report) ಸಮೇತ ನ್ಯಾಯಾಲಯಕ್ಕೆ ಸಲ್ಲಿಸಲು ಲೋಕಾಯುಕ್ತ (Lokayukta) ಸಿದ್ಧವಾಗಿದೆ. ಸಿಎಂ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಕುರಿತು ದೂರುದಾರ ಸ್ನೇಹಮಯಿ ಕೃಷ್ಣಾ ಅವರಿಗೆ ನೋಟಿಸ್ ಜಾರಿಗೊಳಿಸಿರುವ ಲೋಕಾಯುಕ್ತ, ಅದರಲ್ಲಿ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಅವರ ಸಹೋದರ ಮಲ್ಲಿಕಾರ್ಜನಯ್ಯ ಸ್ವಾಮಿ ಹಾಗೂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಅವರ ಬಗೆಗಿನ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಹಾಗಾಗಿ, ಅವರಿಗೆ ಬಿ ರಿಪೋರ್ಟ್ ಸಲ್ಲಿಸಲಾಗುತ್ತದೆ. ನೀವು ಬಿ ರಿಪೋರ್ಟ್ ಅನ್ನು ಪ್ರಶ್ನಿಸಬಹುದು ಎಂದು ಹೇಳಿದ್ದಾರೆ.
ವರದಿಯಲ್ಲಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಸ್ಥರ ಮೇಲಿರುವ ಆರೋಪಗಳು ಸಾಬೀತುಪಡಿಸುವ ಬೇಕಾದ ಸಾಕ್ಷ್ಯಾಧಾರಗಳು ತಮ್ಮ ತನಿಖೆಯಲ್ಲಿ ಸಿಕ್ಕಿಲ್ಲ ಎಂದು ಹೇಳಿ ಈ ನಾಲ್ವರ ಬಗ್ಗೆ ಬಿ ರಿಪೋರ್ಟ್ ಸಲ್ಲಿಸಲು ಲೋಕಾಯುಕ್ತ ನಿರ್ಧರಿಸಿದೆ ಎಂದು ಹೇಳಲಾಗಿದೆ. ಮುಡಾ ದೂರುದಾರ ಸ್ನೇಹಮಯಿ ಕೃಷ್ಣಾ ಅವರಿಗೆ ನೋಟಿಸ್ ಜಾರಿಗೊಳಿಸಿರುವ ಲೋಕಾಯುಕ್ತ, "ನೀವು ಆರೋಪಿಸಿರುವ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಹಾಗೂ ಕುಟುಂಬಸ್ಥರು ಮುಡಾ ನಿಯಮಗಳಂತೆ ಹೊಸ ಬಡಾವಣೆ ನಿರ್ಮಾಣಕ್ಕಾಗಿ ತಮ್ಮ ಭೂಮಿಯನ್ನು ಮುಡಾಕ್ಕೆ ನೀಡಿ ಅದಕ್ಕೆ ಪರಿಹಾರವಾಗಿ ಸೈಟುಗಳನ್ನು ಪಡೆದಿರುತ್ತಾರೆ. ಆದರೆ, ಆ ಸೈಟುಗಳನ್ನು ಅಕ್ರಮವಾಗಿ ಪಡೆದಿರುವುದಾಗಿ ನೀವು ದೂರು ದಾಖಲಿಸಿರುತ್ತೀರಿ. ಆ ದೂರುಗಳನ್ನಾಧರಿಸಿ ತನಿಖೆ ನಡೆಸಿದ್ದು ನೀವು ಮಾಡಿರುವ ಆರೋಪಗಳಿಗೆ ಪೂರಕವಾದ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಹೀಗೆ ದೂರುಗಳ ತನಿಖೆ ವೇಳೆ ಆಧಾರಗಳು, ಸಾಕ್ಷಿಗಳು ಸಿಕ್ಕದಿದ್ದ ಪಕ್ಷದಲ್ಲಿ ಅಂಥ ಪ್ರಕರಣಗಳನ್ನು ಈ ಹಿಂದೆ ಅನೇಕ ಬಾರಿ ವಜಾಗೊಳಿಸಲಾಗಿದೆ'' ಎಂದು ಹೇಳಿದೆ.
ಅಲ್ಲದೆ, 2016ರಂದ 2024ರವರೆಗೆ ಮುಡಾ ಬಡಾವಣೆಗಳಿಗಾಗಿ ಭೂಮಿ ಕೊಟ್ಟವರು 50:50 ಅನುಪಾತದ ಆಧಾರದಲ್ಲಿ ಪರಿಹಾರದ ಸೈಟುಗಳನ್ನು ಪಡೆದಿದ್ದಾರೆ. ಆ ಎಲ್ಲಾ ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ. ಆನಂತರ, ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗುತ್ತದೆ. ಸದ್ಯಕ್ಕೀಗ ನಾಲ್ವರು ಆರೋಪಿಗಳ ಬಗ್ಗೆ ಬಿ ರಿಪೋರ್ಟ್ ಸಲ್ಲಿಸಲು ನಿರ್ಧರಿಸಲಾಗಿದೆ. ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆಯಾದ ಒಂದು ವಾರದೊಳಗೆ ನಿಮಗೆ (ಸ್ನೇಹಮಯಿ ಕೃಷ್ಣ) ಅದನ್ನು ಪ್ರಶ್ನಿಸಲು ಅವಕಾಶವಿದೆ’’ ಎಂದು ಸ್ನೇಹಮಯಿ ಕೃಷ್ಣಾ ಅವರಿಗೆ ನೀಡಲಾಗಿರುವ ನೋಟಿಸ್ ನಲ್ಲಿ ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.
ಸ್ನೇಹಮಯಿ ಕೃಷ್ಣ ಆಕ್ಷೇಪ
ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ಇಂಥದ್ದೇ ವರದಿ ನೀಡಬಹುದು ಎಂದು ನಾನು ನಿರೀಕ್ಷಿಸಿದ್ದೆ. ಲೋಕಾಯುಕ್ತ ಪೊಲೀಸರಿಗೆ ನಾಚಿಕೆಯಾಗಬೇಕು. ಲೋಕಾಯುಕ್ತ ಪೊಲೀಸರು ಸಿಎಂ ಹಾಗೂ ಅವರ ಕುಟುಂಬಸ್ಥರ ಬಗ್ಗೆ ಬಿ ರಿಪೋರ್ಟ್ ಸಲ್ಲಿಸುವ ಮೂಲಕ ತಮ್ಮ ಆತ್ಮಾಭಿಮಾನವನ್ನು ಮಾರಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ‘ಬಿ’ ರಿಪೋರ್ಟ್ ಅನ್ನು ಪ್ರಶ್ನಿಸಲು ಕಾಲಾವಕಾಶವಿದೆ. ನಾನು ಅದನ್ನು ಪ್ರಶ್ನಿಸುತ್ತೇನೆ. ಅದರ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇನೆ. ಸಿಎಂ ಸಿದ್ದರಾಮಯ್ಯನವರಿಗೆ ಈ ಪ್ರಕರಣದಲ್ಲಿ ಶಿಕ್ಷೆ ಕೊಡಿಸುವ ತನಕ ನಾನು ಸುಮ್ಮನಿರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Benami Property: ಸಿಎಂ ಸಿದ್ದರಾಮಯ್ಯ ವಿರುದ್ಧ ಬೇನಾಮಿ ಆಸ್ತಿ ಗಳಿಕೆ ಆರೋಪ; ಲೋಕಾಯುಕ್ತಕ್ಕೆ ದೂರು