DC vs GT: ಐಪಿಎಲ್ ಟೂರ್ನಿಯಲ್ಲಿ 200 ಸಿಕ್ಸರ್ ಸಿಡಿಸಿ ವಿಶೇಷ ದಾಖಲೆ ಬರೆದ ಕನ್ನಡಿಗ ಕೆಲ್ ರಾಹುಲ್!
KL Rahul Hits Fastest 200 Sixes in IPL: ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವೇಗವಾಗಿ 200 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಶನಿವಾರ ಗುಜರಾತ್ ಟೈಟನ್ಸ್ ವಿರುದ್ದದ ಪಂದ್ಯದಲ್ಲಿ ಅವರು ಈ ಸಾಧನೆಗೆ ಭಾಜನರಾಗಿದ್ದರು.

200 ಐಪಿಎಲ್ ಸಿಕ್ಸರ್ ಪೂರ್ಣಗೊಳಿಸಿದ ಕೆಎಲ್ ರಾಹುಲ್.

ಅಹಮದಾಬಾದ್: ಗುಜರಾತ್ ಟೈಟನ್ಸ್ (Gujarat Titans) ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯದಲ್ಲಿ ಒಂದು ಸಿಕ್ಸರ್ ಸಿಡಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್ ಕೆಎಲ್ ರಾಹುಲ್ (KL Rahul) ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 200 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ವೇಗವಾಗಿ 200 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಶನಿವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಗಣದಲ್ಲಿ ತಮ್ಮ ವೃತ್ತಿ ಜೀವನದ 128ನೇ ಇನಿಂಗ್ಸ್‌ನಲ್ಲಿ ಕನ್ನಡಿಗ ಈ ಮೈಲುಗಲ್ಲು ತಲುಪಿದರು.
ಕೆಎಲ್ ರಾಹುಲ್ ಪಂದ್ಯದ ಮೂರನೇ ಓವರ್‌ನಲ್ಲಿಯೇ ಮೊಹಮ್ಮದ್ ಸಿರಾಜ್ ವಿರುದ್ದ ಆಕ್ರಮಣಕಕಾರಿಯಾಗಿ ಆಡಿದ್ದರು. ಮೊದಲಿಗೆ ಬೌಂಡರಿ ಬಾರಿಸಿದ ಕನ್ನಡಿಗ ಕೆಎಲ್ ರಾಹುಲ್, ನಂತರ ಲಾಂಗ್ ಆನ್ ಮೇಲೆ ಸಿಕ್ಸರ್ ಬಾರಿಸಿದ್ದರು. ಆ ಮೂಲಕ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 200 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ 159 ಇನಿಂಗ್ಸ್‌ಗಳ ಮೂಲಕ ಈ ದಾಖಲೆ ಬರೆದಿದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅವರನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ (165 ಇನಿಂಗ್ಸ್‌ಗಳು), ವಿರಾಟ್ ಕೊಹ್ಲಿ (180), ರೋಹಿತ್ ಶರ್ಮಾ(185 ಇನಿಂಗ್ಸ್‌ಗಳು) ಹಾಗೂ ಸುರೇಶ್ ರೈನಾ (193 ಇನಿಂಗ್ಸ್‌ಗಳು) ಇದ್ದಾರೆ.
IPL 2025: ಪಂದ್ಯದ ವೇಳೆ ದಿಢೀರ್ ಅಭಿಷೇಕ್ ಶರ್ಮಾ ಜೇಬು ಪರೀಕ್ಷಿಸಿದ ಸೂರ್ಯಕುಮಾರ್
ವಿಶ್ವದ ಮೂರನೇ ಬ್ಯಾಟ್ಸ್‌ಮನ್
ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ವೇಗವಾಗಿ 200 ಸಿಕ್ಸರ್‌ಗಳನ್ನು ಸಿಡಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಕೆಎಲ್ ರಾಹುಲ್ ಬರೆದಿದ್ದಾರೆ. ವೆಸ್ಟ್ ಇಂಡಿಸ್ ದಿಗ್ಗಜರಾದ ಕ್ರಿಸ್ ಗೇಲ್ (69 ಇನಿಂಗ್ಸ್‌ಗಳು) ಹಾಗೂ ಆಂಡ್ರೆ ರಸೆಲ್ (97 ಇನಿಂಗ್ಸ್‌ಗಳು) ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಪರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಕೆಎಲ್ ರಾಹುಲ್ 200ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 14 ಎಸೆತಗಳಲ್ಲಿ 28 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು.
MEET THE FASTEST INDIAN TO COMPLETE 200 SIXES IN IPL HISTORY..!!!
— Johns. (@CricCrazyJohns) April 19, 2025
- It's one & only KL Rahul 👌 pic.twitter.com/kfxzAZJwlz
ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಎಲ್ ರಾಹುಲ್ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆರ್‌ಸಿಬಿ ಸೇರಿದಂತೆ ವಿವಿಧ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಈ ಟೂರ್ನಿಯಲ್ಲಿ ಕೆಎಲ್ ರಾಹುಲ್ 158.33ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುತ್ತಿದ್ದಾರೆ. ಕಳೆದ 12 ಆವೃತ್ತಿಗಳಿಗೆ ಹೋಲಿಸಿದರೆ, ಈ ಸೀಸನ್‌ನಲ್ಲಿ ರಾಹುಲ್ ಅವರ ಸ್ಟ್ರೈಕ್ ರೇಟ್‌ನಲ್ಲಿ ಏರಿಕೆಯಾಗಿದೆ. ಹದಿನೆಂಟನೇ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಆಡಿದ 6 ಇನಿಂಗ್ಸ್‌ಗಳಿಂದ 266 ರನ್‌ಗಳನ್ನು ಕಲೆ ಹಾಕಿದ್ದಾರೆ.
ಆರ್‌ಸಿಬಿ ವಿರುದ್ಧ 93 ರನ್ ಗಳಿಸಿದ್ದ ರಾಹುಲ್
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಕೆಎಲ್ ರಾಹುಲ್ ಅಜೇಯ 93 ರನ್ ಗಳನ್ನು ಸಿಡಿಸಿದ್ದರು. ಪ್ರಸಕ್ತ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಪಾಲಿನ ಅತ್ಯಂತ ಶ್ರೇಷ್ಠ ಇನಿಂಗ್ಸ್ ಇದಾಗಿದೆ. ಕೆಎಲ್ ರಾಹುಲ್ ಬ್ಯಾಟಿಂಗ್ ಸಹಾಯದಿಂದ ಆರ್‌ಸಿಬಿ ಎದುರು ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ಗಳ ಗೆಲುವು ಪಡೆದಿತ್ತು. ಇದಕ್ಕೂ ಮುನ್ನ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ 77 ರನ್ ಸಿಡಿಸಿದ್ದರು ಹಾಗೂ ಈ ಪಂದ್ಯದಲ್ಲಿ ಡೆಲ್ಲಿ 25 ರನ್‌ಗಳನ್ನು ಬಾರಿಸಿತ್ತು. ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಟ್ರಿಸ್ಟನ್ ಸ್ಟಬ್ಸ್ ಜತೆ ಕೆಎಲ್ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ ಡೆಲ್ಲಿಯನ್ನು ಗೆಲ್ಲಿಸಿದ್ದರು.